ಬಿ ಸುರೇಶ ಕಂಡ 'ಮಲ್ಟಿಪ್ಲೆಕ್ಸ್' ಸಂಸ್ಕೃತಿ

 
b-sureshaಬಿ ಸುರೇಶ – ರಂಗಭೂಮಿ, ಸಿನೆಮಾ, ಸಾಹಿತ್ಯ ಮೂರರಲ್ಲೂ ಹೆಸರು ಮಾಡಿ ಗೆದ್ದಿರುವ ಹುಡುಗ. ಇತ್ತೀಚಿಗೆ ತೆರೆ ಕಂಡ ‘ಸ್ಲಂ ಬಾಲ’ ಸಿನೆಮಾದಲ್ಲಿ ಕೊನೆವರೆಗೂ ನೆನಪಲ್ಲಿ ಉಳಿಯುವ ಎರಡು ಪಾತ್ರಗಳಲ್ಲಿ ಸುರೇಶ್ ನದ್ದೂ ಒಂದು. ಖಳಪಾತ್ರಗಳು ಹೇಗಿರಬೇಕು ಎಂಬುದಕ್ಕೆ ಸುರೇಶ್ ಒಂದು ಮಾಡೆಲ್ ಒದಗಿಸಿದ್ದಾರೆ.
ಸುರೇಶ್ ಎಲ್ಲರಿಂದ ‘ಅಮ್ಮ’ ಎಂದೆ ಕರೆಸಿಕೊಳ್ಳುವ ಡಾ. ವಿಜಯಾ ಅವರ ಮಗ. ಹೀಗಾಗಿ ಬೀದಿ ನಾಟಕಕ್ಕೆ ಒಂದು ಹೊಸ ಆಯಾಮ ನೀಡಿದ ಅಮ್ಮನ ಗರಡಿಯಲ್ಲಿ ಪಳಗಿದವ . ಸುರೇಶ ಮಾಧ್ಯಮಗಳ ಪ್ರಭಾವದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಬೆರಳೆಣಿಕೆಯ ವ್ಯಕ್ತಿಗಳಲ್ಲೊಬ್ಬ.
ಈಗ ಆತನದ್ದೇ ವಿಚಾರಗಳ ‘ಬಿ ಸುರೇಶ’ ಬ್ಲಾಗ್ ಆರಂಭವಾಗಿದೆ. ಅಲ್ಲಿನ ಒಂದು ಒಳ್ಳೆ ಬರಹದೊಂದಿಗೆ ಸುರೇಶನಿಗೆ ಬ್ಲಾಗ್ ಮಂಡಲಕ್ಕೆ ಸ್ವಾಗತ-
img_0052
ಸಿನಿಮಾ ಜಗತ್ತಿನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡ ನನ್ನ ಗೆಳೆಯನೊಬ್ಬ ಈಚೆಗೆ ನನ್ನ ಬಳಿ ಬಂದು ಹೇಳಿದ. `ಗುರುವೇ, ನಾನೊಂದು ಕಮ್ಮಿ ಬಜೆಟ್ಟಿನ ಚಿತ್ರವನ್ನ ರಾಷ್ಟ್ರಭಾಷೆಯಲ್ಲಿ ತಯಾರಿಸಲು ಹೊರಟಿದ್ದೇನೆ. ಈ ಚಿತ್ರದಲ್ಲಿ ಇರುವುದು ಕಥೆಯಲ್ಲ. ಜಸ್ಟ್ ಮಜ! ಸಿನೆಮಾ ಒಂದೆರಡು ವಾರ ಓಡಿದರೂ ಸಾಕು. ಛಾನೆಲ್‌ಗಳಿಗೆ ಸಿನೆಮಾ ಮಾರಿ, ಬಂಡವಾಳ ಮಾತ್ರ ಅಲ್ಲ, ಲಾಭವನ್ನು ತೆಗೆಯುತ್ತೇನೆ’ ಎಂದ. ನಾನು ಬೆರಗಾಗಿ ಆ ನನ್ನ ಗೆಳೆಯನನ್ನ ನೋಡುತ್ತಿದೆ. ಯಾವುದೇ ಉದ್ದಿಶ್ಯವಿಲ್ಲದೆ ಸಿನೆಮಾದ ಕಥೆ ಹೆಣೆಯಬಹುದೇ ಎಂಬುದು ನನಗೆ ಅಚ್ಚರಿಯನ್ನು ತಂದಿತ್ತು. ನಿಧಾನವಗಿ ಯೋಚಿಸಿದಾಗ ಹೊಳೆದ ಕೆಲವು ಸತ್ಯಗಳಿವು.
ಈಚೆಗೆ ಆ ನನ್ನ ಸಹೋದ್ಯೋಗಿ ತಿಳಿಸಿದಂತಹ ಕಥೆ ಇಲ್ಲದ ಕಥನಗಳು ಸೃಷ್ಟಿಯಾಗುತ್ತಿವೆ. ಇವುಗಳನ್ನ ಉದ್ಯಮದವರು `ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಯ ಸಿನಿಮಾ ಎನ್ನುತ್ತಾರೆ. ಇದೊಂದು ವಿಶಿಷ್ಟ ಬೆಳವಣಿಗೆ. ಈ ಹಣೆಪಟ್ಟಿಯ ಕೆಳಗೆ ಬರುವ ಸಿನೆಮಾಗಳಲ್ಲಿ ಕಥನ ಮತ್ತು ನಿರೂಪಣಾ ವಿಧಾನವೇ ಪ್ರಧಾನ. ಇಲ್ಲಿ ಕಥಾಹೂರಣ ಎಂಬುದು ತೆಳು ವಿವರವಾಗಿರುತ್ತದೆ. ಇಂತಹ ಸಿನೆಮಾಗೆ ಉದಾಹರಣೆಯಾಗಿ ನೀವು, `ಜಬ್ ವಿ ಮೆಟ್’, `ಗರಂಮಸಾಲ’, `ಹಾಯ್‌ಬೇಬಿ’ ಇತ್ಯಾದಿ ಹಲವು ಚಿತ್ರಗಳನ್ನು ಹೆಸರಿಸಬಹುದು. ಇವು ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶನವಾಗಲೆಂದೇ ತಯಾರಾದ ಚಿತ್ರಗಳು. ಇವುಗಳನ್ನ ನೋಡುವ ನಗರಿಗರ ಸಂಖ್ಯೆಯು ಈಚೆಗೆ ಹೆಚ್ಚಾಗುತ್ತಿದೆ. ಈ ಗುಣ ಕನ್ನಡದ ಸಿನೆಮಾಗಳಿಗೂ ನಿಧಾನವಾಗಿ ಇಳಿಯುತ್ತಿದೆ. ತೆಳು ಕಥಾಹಂದರದೊಡನೆ ಮನರಂಜನೆ ಮತ್ತು ಪ್ರೇಕ್ಷಕನನ್ನು ಸದಾಕಾಲ `ತಿಳಿ’ಯಾದ ಸ್ಥಿತಿಯಲ್ಲಿ ಇರಿಸಲೆಂದೇ ಈ ಸಿನೆಮಾಗಳು ತಯಾರಾಗುತ್ತವೆ. ಅದಕ್ಕೆ ಉದಾಹರಣೆಯಾಗಿ `ಮುಂಗಾರುಮಳೆ’ `ಗಾಳಿಪಟ’, `ರಾಮ ಶಾಮ ಭಾಮ’ ದಂತಹ ಸಿನೆಮಾಗಳನ್ನು ಹೆಸರಿಸಬಹುದು.
 
ಈ ರೀತಿಯ ಚಿತ್ರಗಳು ಜಾಗತೀಕರಣದ ಫಲಶೃತಿ. ಜಗತ್ತನ್ನ ಗ್ರಾಮವಾಗಿಸುವ ನವವಸಾಹತುಶಾಹಿಯ ಯೋಜನೆಯಲ್ಲಿ ದುಬಾರಿ ಐಷಾರಾಮದ ಆಸೆ ಹುಟ್ಟಿಸುವುದೂ ಒಂದು ತಂತ್ರ. `ದುಡ್ಡಿದೆಯೇ! ಹಾಗಾದರೆ ನಿನಗೆ ಎಲ್ಲವೂ ಸಿಗುತ್ತದೆ!’ ಎಂಬ ಗುಣವದು. ಹೀಗಾಗಿಯೇ ನಗರಗಳಲ್ಲಿ ಮಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು ಆರಂಭವಾಗುತ್ತಿವೆ. ಇಂತಹ ವ್ಯಾಪಾರೀ ಮಳಿಗೆಗಳಲ್ಲಿ ಎಲ್ಲವೂ ಕಡಿಮೆ ದುಡ್ಡಿನಲ್ಲಿ ಸಿಗುತ್ತದೆ ಎಂದು ಘೋಷಿತವಾದರೂ ಅದು ದುಬಾರಿಯೇ. ಆದರೂ ಜನ ಅವುಗಳಲ್ಲಿ ಇರುವ ವೈಭವೀಕರಣಕ್ಕಾಗಿ ಮುಗಿಬೀಳುತ್ತಾರೆ. ವಾರಕ್ಕೊಮ್ಮೆಯಾದರೂ ಇಂತಹ ಮಾಲ್‌ಗೆ ಹೋಗಿ ಬರುವ ಗುಣ ನಮ್ಮ ನಗರಿಗರಿಗೆ ಅಭ್ಯಾಸವಾಗುತ್ತಾ ಇದೆ. ಇಲ್ಲಿ ಕೊಳ್ಳುವುದರ ಹೂರಣಕ್ಕಿಂತ ಅವುಗಳ ಥಳಕು ಮುಖ್ಯವಾಗುತ್ತದೆ. ಕೊಳ್ಳಲಾಗದವನು ಎಲ್ಲಾ ಅಂಗಡಿಗಳ ಷೋಕೇಸನ್ನು ನೋಡಿ ಸುಖಿಸುತ್ತಾನೆ. ಅದನ್ನ `ವಿಂಡೋ ಷಾಪಿಂಗ್’ ಎನ್ನುತ್ತಾರೆ. ಹಾಗೆ ಅಂಗಡಿ ಸುತ್ತಿ ಸುಮ್ಮನೆ ಬರಲಾಗುತ್ತದೆಯೇ? ಅಂಗಡಿಯಲ್ಲಿರುವ ಸೇಲ್ಸ್‌ಗರ್ಲ್‌ಗಳನ್ನ ಮಾತಾಡಿಸಬೇಕಲ್ಲ? ಅದಕ್ಕಾಗಿಯೇ ತಾವು ಕಂಡ ಭಾರೀ ಗಾತ್ರದ ಸಾಮಗ್ರಿಗಳ ಬೆಲೆ ವಿಚಾರಣೆಯಾಗುತ್ತದೆ. ಇವರು ಕೊಳ್ಳಯವವರಲ್ಲ ಎಂದು ಗೊತ್ತಿರುವ ಅಂಗಡಿಯವರು ಭಾರೀ ಬೆಲೆಯನ್ನೇ ಹೇಳುತ್ತಾರೆ. ತನಗೆ ಅದನ್ನು ಕೊಂಡು ತಂದು ಮನೆಯಲ್ಲಿಡಲಾಗಲಿಲ್ಲವೇ ಎಂಬ ಕೊರಗಿನೊಂದಿಗೆ ಅಂಗಡಿಗೆ ಹೋದವರು ಅಲ್ಲಿಯೇ ಇರುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ಹೋಗುತ್ತಾರೆ. ಹೀಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನೆಮಾ ನೋಡುವವರಿಗೆ ದೊಡ್ಡ ಆದರ್ಶದ ಚಿಂತೆ ಇಲ್ಲ, ಸಿನೆಮಾ ಅವರಿಗೆ ನೀಡಬೇಕಾದ್ದು ಎರಡು ಗಂಟೆಗಳ ಮನರಂಜನೆ ಮಾತ್ರ. ಸಿನೆಮಾ ಒಂದು ಕಲಾಮಾಧ್ಯಮ ಎಂದೆಲ್ಲಾ ಹೇಳುವವರು ತಯಾರಿಸುವ ಚಿತ್ರಗಳು ಈ ಮಾಲ್‌ಗಳ ಪ್ರೇಕ್ಷಕರಿಗೆ ಬೇಕಾಗಿಲ್ಲ. ಅವರು ಕೈಯಲ್ಲಿ ಗುಂಡಿನ ಬಾಟಲಿ, ಪಾಪ್‌ಕಾರನ್ ಹಿಡಿದು ಪಕ್ಕದಲ್ಲಿರುವ ಗೆಳೆಯ-ಗೆಳತಿಯ ಜೊತೆ ಊರು ತಿರುಗಲು ಬಂದವರಷ್ಟೆ. ಅವರಿಗೆ ಆದರ್ಶವಾದಿ ಅಥವಾ ವಾಸ್ತವವಾದಿ ಸಿನೆಮಾಗಳು ಬೇಕಾಗಿಲ್ಲ. ಅವರಿಗೆ, `ಚಿತ್ರ ಏನು ನೀಡಿತು?’ ಎನ್ನುವುದಕ್ಕಿಂತ, ಮಾರನೆಯ ದಿನ ಮಲ್ಟಿಪ್ಲೆಕ್ಸ್‌ನ ಟಿಕೇಟನ್ನು ಎಲ್ಲರ ಎದುರು ಪ್ರದರ್ಶಿಸಿ, ಅಥವಾ ತಾನು ಆ ಮಾಲ್‌ಗೆ ಹೋಗಿದ್ದೆ ಎಂದು ಹೇಳಿಕೊಳ್ಳುತ್ತಾ ತಾನೂ ಈ ಸಮಾಜದ ಗಣ್ಯಾತಿಗಣ್ಯ, ದೊಡ್ಡ ಮನುಷ್ಯ ಎಂದು ಕರೆಸಿಕೊಳ್ಳುವುದು ಮಾತ್ರ ಮುಖ್ಯವಾಗಿರುತ್ತದೆ. ಹೀಗಾಗಿ ಗಂಭೀರ ಸಿನೆಮಾ ಎಂಬುದು ಈ ಮಲ್ಟಿಪ್ಲೆಕ್ಸ್ ಸಂಸ್ಕೃತಿಯಲ್ಲಿ ಕೆಲಸಕ್ಕೆ ಬಾರದ್ದು.
ಆದರೆ ಈ ಮಲ್ಟಿಪ್ಲೆಕ್ಸ್‌ಗಳಿಗಾಗಿ ಸಿನೆಮಾ ತಯಾರಿಸುವವರು ತಮ್ಮ ಸಿನೆಮಾಗಳಲ್ಲಿ ಅತ್ಯಂತ ಗಂಭೀರ ಕಥೆ ಇದೆ ಎಂದು ಹೇಳಿಕೊಳ್ಳುತ್ತಾರೆ. ಅದೂ ಸಹ ಒಂದು ಪ್ರಚಾರಕ್ರಮವಾಗಿ ಇಂದು ಬಳಕೆಯಾಗುತ್ತಿದೆ. ಹೇಳಿಕೊಳ್ಳಲೆಂದೆ ಪ್ರಚಾರದಲ್ಲಿ ವಿಶಿಷ್ಟ ಕೀಲೈನ್‌ಗಳನ್ನು ಬಳಸಲಾಗುತ್ತದೆ. ಅದು `ವಿಧವಾ ವಿವಾಹ’ ಎಂತಲೋ ಅಥವಾ `ಆಧುನಿಕ ಬದುಕಿನ ವಿಶಿಷ್ಟ ಸಂಕಷ್ಟಗಳು’ ಎಂತಲೋ ಇರಬಹುದು. ಈ ಕೀಲೈನ್‌ಗಳು ಸಿನೆಮಾದಲ್ಲಿ ತೀರಾ ತೆಳುವಾದ ಸಕ್ಕರೆಯ ಲೇಪನದಂತೆ ಇರುತ್ತವೆ. ಹೀಗಾಗಿ ಈ ಸಿನೆಮಾಗಳಲ್ಲಿ ತೋರಿಸುವ ವಿವರಗಳೆಲ್ಲವೂ ಅತ್ಯಂತ ಸುಂದರವಾಗಿ ಇರುವಂತೆ ನೋಡಿಕೊಳ್ಳಲಾಗುತ್ತದೆ. ತೇಪೆ ಹಾಕಿದ ಬಟ್ಟೆಯನ್ನು ತೊಟ್ಟವನು. ಹಸಿದು ಸಾಯುತ್ತಿರುವವನು ಕೂಡ ಸಹ ಅತ್ಯಂತ ಸುಂದರವಾಗಿ ಕಾಣುತ್ತಾನೆಯೇ ಹೊರತು, ಅಲ್ಲಿ ವಾಸ್ತವವನ್ನು ಯಥಾವತ್ತಾಗಿ ತೋರಿಸುವುದೇ ಇಲ್ಲ. ಹೀಗಾಗಿ ಸಿನಿಮಾದ ಪ್ರಚಾರದಲ್ಲಿ ಬಳಕೆಯಾದ ಕೀಲೈನ್‌ಗಳು ಬಹುತೇಕ ಸಿನೆಮಾದ ಪೋಸ್ಟರ್‌ನಲ್ಲಿ ಮಾತ್ರ ಉಳಿದಿರುತ್ತವೆ.
ಈ ನಿಟ್ಟಿನಲ್ಲಿ ಈಚೆಗೆ ಅನೇಕರು ಹೇಳುತ್ತಿರುವ `ಜನಪ್ರಿಯ ಸಿನೆಮಾ ಸಮಾಜಮುಖಿ’ ಆಗುತ್ತಿದೆ ಎಂಬ ಮಾತು ಹಸೀಸುಳ್ಳು. ಅದು `ಹ್ಯಾರಿಪಾಟರ್ ಕಾದಂಬರಿಯೇ ಮಹಾವಾಸ್ತವ’ ಎಂದಂತೆ! ನೋಡುಗನನ್ನ, ಓದುಗನನ್ನ ಭ್ರಮೆ ಮತ್ತು ಸುಳ್ಳುಗಳಲ್ಲಿ ಇರಿಸಿದರೆ ಮಾತ್ರ ಉದರಂಭರಣ ಆಗುತ್ತದೆ ಎಂಬುದನ್ನು ಬಲ್ಲ ಜನಪ್ರಿಯ/ಮಲ್ಟಿಪ್ಲೆಕ್ಸ್ ಚಿತ್ರ ತಯಾರಕರು ಘೋಷಾವಾಕ್ಯವಾಗಿ ಸಮಾಜದ ಬಗೆಗಿನ ಕಾಳಜಿಯನ್ನು ತೋರುತ್ತಾರೆ, ಅಷ್ಟೆ. ಈ ದೃಷ್ಟಿಯಿಂದ ಈಚೆಗೆ ಜನಪ್ರಿಯವಾದ ಎಲ್ಲಾ ಸಿನಿಮಾಗಳನ್ನೂ ನೀವು ಗಮನಿಸಬಹುದು. `ತಾರೆ ಜಮೀನ್ ಪರ್’ನಂತಹ ಸಿನಿಮಾ ಕೂಡ ನಿಮಗೆ ನಗರ ಜೀವನದ ಒಂದು ಮುಖವನ್ನ ಸ್ಥೂಲವಾಗಿ ಪ್ರದರ್ಶಿಸಿ, ನೋಡುಗರ ಕಣ್ಣಲ್ಲಿ ಒಂದೆರಡು ಹನಿ ನೀರು ತುಂಬುವಂತೆ ಮಾಡಬಲ್ಲದಷ್ಟೆ. ಅದು ಪ್ರೇಕ್ಷಕರನ್ನು ಆಲೋಚನೆಗೆ ಹಚ್ಚುವುದಿಲ್ಲ. ಸಿನಿಮಾ ಮಂದಿರದ ಆಚೆಗೆ ಬಂದವರು ಯಾವುದೋ ಬಾಲನಟನ ಅದ್ಭುತ ಪ್ರತಿಭೆಯ ಬಗ್ಗೆ ಮಾತಾಡುವುದಕ್ಕೂ, ನಮ್ಮ ಇಡೀ ಸಮಾಜದ ಬಗ್ಗೆ ಮಾತಾಡುವುದಕ್ಕೂ ದೊಡ್ಡ ವ್ಯತ್ಯಾಸ ಇದೆಯಲ್ಲವೇ? ಅದು `ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಯ ಚಿತ್ರಗಳಲ್ಲಿ ಆಗುವುದಿಲ್ಲ. ಅಲ್ಲಿ ಜನಾಕರ್ಷಣೆಗೆ ಬೇಕಾದ ಸರಕಿದೆ. ಜನರ ಬುದ್ಧಿಮತ್ತೆಗೆ ತಾಗುವ ಸತ್ಯಗಳಿಲ್ಲ.
ಇದು ಅಪಾಯಕಾರಿ. ಈ ಅಪಾಯದಿಂದ ಆಗಬಹುದಾದ ಅನಾಹುತಗಳಲ್ಲಿ ಪ್ರಧಾನವಾದುದು ಇಂತಹ `ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಯು ಜನಮಾನಸದ ಮನಸ್ಸನ್ನ ಆವರಿಸಿಕೊಳ್ಳುವುದು ಒಂದೆಡೆಯಾದರೆ, ಸಮಕಾಲೀನ ಭಾರತದ ಬಹುಸಂಖ್ಯಾತರು ಯಾವ ಕಷ್ಟದಲ್ಲಿದ್ದಾರೆ ಎಂಬುದನ್ನ ಮರೆಮಾಚಿಬಿಡುವುದು ಮತ್ತೊಂದು ದುರಂತ. ಯಾವುದೋ ಹುಡುಗ ಇನ್ನಾವುದೋ ಹುಡುಗನ ಹಿಂದೆ ಪ್ರೀತಿ, ಪ್ರೀತಿ ಎನ್ನುತ್ತಾ ಸುತ್ತಿದರೆ, ಈ ನಾಡಿನ ಕಡುಬಡವ, ಅಥವಾ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇರುವ ರೈತನ ವಿವರ ನೋಡುಗನಿಗೆ ತಲುಪುವುದೇ ಇಲ್ಲ. ಇದನ್ನ ತಪ್ಪಿಸಲು ಸಮಾನಂತರ ಸಿನೆಮಾ ಚಳುವಳಿಗಳು ನಿರಂತರವಾಗಿ ಚಾಲ್ತಿಯಲ್ಲಿದ್ದು, ಅವುಗಳನ್ನ ಇದೇ ಮಲ್ಟಿಪ್ಲೆಕ್ಸ್‌ನಲ್ಲಿ ತೋರಿಸುವಂತಾಗಬೇಕು. ಆ ಮೂಲಕ ಮಾತ್ರ ನಾವು ಈ ಕಲಾಮಾಧ್ಯಮವನ್ನು ಸಮಾಜಮುಖಿಯಾಗಿ ಬಳಸಿಕೊಳ್ಳುವುದು ಸಾಧ್ಯ. ಮತ್ತು ನಮ್ಮ ನೋಡುಗನನ್ನು ಸ್ವಸ್ಥ ಸ್ಥಿತಿಯಲ್ಲಿ ಇಡುವುದು ಸಾಧ್ಯ ಎಂದು ನನಗನಿಸುತ್ತದೆ.

‍ಲೇಖಕರು avadhi

December 18, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

5 ಪ್ರತಿಕ್ರಿಯೆಗಳು

  1. Pramod

    ತು೦ಬಾ ವಿಚಾರ ಹೊತ್ತ ಲೇಖನ, ನೀವು ಹೇಳಿದ್ದು ನೂರಕ್ಕೆ ನೂರು ನಿಜ..ಒಳ್ಳೆದ್ದಕ್ಕಿ೦ತ ಕೆಟ್ಟದ್ದೇ ಜಾಸ್ತಿ.

    ಪ್ರತಿಕ್ರಿಯೆ
  2. ಸಂದೀಪ್ ಕಾಮತ್

    ತುಂಬಾ ಒಳ್ಳೆಯ ಲೇಖನ.
    ಆದ್ರೆ ಮಲ್ಟಿಪ್ಲೆಕ್ಸ್ ಸಿನೆಮಾಗಳ ಬಗ್ಗೆ ನಾವು ಪೂರ್ವಾಗ್ರಹ ಪೀಡಿತರಾಗಿದ್ದೇವೆ ಅನ್ನಿಸುತ್ತೆ.ಮಲ್ಟಿಪ್ಲೆಕ್ಸ್ಗಳಲ್ಲಿ ಎಲ್ಲಾ ಬಗೆಯ ಸಿನೆಮಾಗಳನ್ನೂ ತೋರಿಸ್ತಾರೆ.ಆದ್ರೆ ಅಲ್ಲಿ ಬಹಳಷ್ಟು ಆಯ್ಕೆ ಇರೊದ್ರಿಂದ ಕೆಲವರಿಗೆ ಕಷ್ಟವಾಗೋದೂ ಇದೆ. ಒಂದು ಸಿನೆಮಾವನ್ನು ನೋಡಲು ಬಂದವರು ’ಕೊನೆ’ ಘಳಿಗೆಯಲ್ಲಿ ಮನಸ್ಸು ಬದಲಾಯಿಸಿ ’ಇನ್ನೊಂದು ’ ಸಿನೆಮಾಗೆ ಹೋಗಿದ್ರಿಂದ ’ಒಂದು’ ಸಿನೆಮಾದವನಿಗೆ ಸ್ವಲ್ಪ ನಷ್ಟವಾಗಬಹುದು ಅಷ್ಟೆ.
    ಮೆಜೆಸ್ಟಿಕ್ ಚಿತ್ರಮಂದಿರಕ್ಕೆ ಸಿನೆಮಾ ನೋಡೋದಕ್ಕೆ ಅಂತ ಹೋದ್ರೆ ಒಳ್ಳೆಯ ಸಿನೆಮಾಗಳಿಗೆ ಯಾವಾಗ ನೋಡಿದ್ರೂ ಟಿಕೆಟ್ ಸಿಗೋದೆ ಇಲ್ಲ! ಜನ ಬರೋದಕ್ಕಿಂತ ಮುಂಚೇನೇ ಟಿಕೆಟ್ ಖಾಲಿ.ಆದ್ರೆ ಬ್ಲ್ಯಾಕ್ ನಲ್ಲಿ ಮಾತ್ರ ಎಷ್ಟು ಬೇಕಾದ್ರೂ ಸಿಗುತ್ತೆ.
    ಇನ್ನೊಂದು ವಿಶ್ಯ ಅಂದ್ರೆ ಮಲ್ಟಿಪ್ಲೆಕ್ಸ್ ಗೆ ಹೋಗೋರು ಅಲ್ಲಿನ ಸವಲತ್ತುಗಳನ್ನು ಇಷ್ಟಪಟ್ಟು ಹೋಗಿರ್ತಾರೆ.ಮೆಜೆಸ್ಟಿಕ್ ಚಿತ್ರಮಂದಿರಗಳಿಗೆ ಹೋಗಿ ಘಂಟೆ ಗಟ್ಟಲೆ ಕಾದು ಟಿಕೆಟ್ ತಗೊಂಡು ಒಳಗೆ ಹೋಗಿ ಕೂತಾಗ ಬರುವ ಪಾನ್ ಪರಾಗ್ ಘಾಟು .ಇತ್ಯಾದಿಗಳ ರಗಳೆಯೇ ಬೇಡ ಅಂದುಕೊಂಡು ಮಲ್ಟಿಪ್ಲೆಕ್ಸ್ ಗಳಿಗೆ ಹೋಗುವ ಜನರ ಸಂಖ್ಯೆ ಜಾಸ್ತಿ ಇದೆ.
    ಕಾಸು ಗಿಟ್ಟುತ್ತೆ ಅಂತಿದ್ರೆ ಆರ್ಟ್ ಫಿಲಂ ಏನು ಸಾಕ್ಶ್ಯಚಿತ್ರ ಕೂಡಾ ಹಾಕೋದಿಕ್ಕೆ ಮಲ್ಟಿಪ್ಲೆಕ್ಸ್ ಜನ ಸಿದ್ಧರಿದ್ದಾರೆ.ನಾವು ಅವರನ್ನು ತಪ್ಪು ತಿಳೊಂಡಿದ್ದೀವಿ ಅಂತ ಅನ್ನಿಸುತ್ತೆ ನನಗೆ.

    ಪ್ರತಿಕ್ರಿಯೆ
  3. ಶುಭದಾ

    ಇಲ್ಲ್ಲಿ “ರಾಷ್ಟ್ರಭಾಷೆಯಲ್ಲಿ ತಯಾರಿಸಲು ಹೊರಟಿದ್ದೇನೆ” ಎಂಬ ವಾಕ್ಯವಿದೆ.
    ತಿಳಿಯದವರಿಗೆ ತಪ್ಪುಕಲ್ಪನೆಯಿರುತ್ತದೆ. ಆದರೆ ತಿಳಿದವರೂ ತಪ್ಪು ಕಲ್ಪನೆಗೆ ಜೋತು ಬಿದ್ದಿದ್ದಾರೆ!.
    “ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ”.
    ಈ ತಪ್ಪು ಕಲ್ಪನೆಯನ್ನು ತೊಲಗಿಸಿಕೊಳ್ಳಿ.

    ಪ್ರತಿಕ್ರಿಯೆ
  4. uniquesupri

    ಸರ್,
    ನಿಮ್ಮ ಲೇಖನದಲ್ಲಿ ಒರಸ್ತಾಪಿತವಾಗಿರುವ ಮಲ್ಟಿಪ್ಲೆಕ್ಸ್ ಸಂಸ್ಕೃತಿಯನ್ನು ಮತ್ತಷ್ಟು ಆಳವಾಗಿ ವಿವರಿಸಿದ್ದರೆ ಚೆನ್ನಾಗಿತ್ತು. ನಮ್ಮ ಜನಪ್ರಿಯ ಶೈಲಿಯ ಚಲನ ಚಿತ್ರಗಳು ಯಾವಾಗ ವಾಸ್ತವವನ್ನು ಬಿಂಬಿಸುವ, ವಾಸ್ತವವಕ್ಕೆ ಉತ್ತರಿಸುವ ಕೆಲಸ ಮಾಡುತ್ತಿದ್ದವು?
    ಮಲ್ಟಿಪ್ಲೆಕ್ಸುಗಳಲ್ಲೂ ಸಮಾನಾಂತರ ಸಿನೆಮಾ ಚಳುವಳಿ ಚಾಲ್ತಿಯಲ್ಲಿರಬೇಕು ಎಂದಿರುವಿರಿ, ಮಲ್ಟಿಪ್ಲೆಕ್ಸುಗಳಿಗೆ ಬರುವವರು ಇಂಥವರೇ ಎಂದು ನೀವು ಗೆರೆ ಎಳೆದು ತೋರಿಸಿರುವಾಗ ಅವರು ಸಮಾನಾಂತರ ಸಿನೆಮಾಗಳನ್ನು ನೋಡುತ್ತಾರೆಯೇ? ಏಲ್ಲೋ ಬ್ಯಾಲೆನ್ಸ್ ತಪ್ಪಿದಂತಿದೆ ನಿಮ್ಮ ಲೇಖನ.
    ಸುಪ್ರೀತ್

    ಪ್ರತಿಕ್ರಿಯೆ

Trackbacks/Pingbacks

  1. ಕಾಗದ ಬಂದಿದೆ… « ಅವಧಿ - [...] on December 20, 2008. Filed under: 1 | ಬಿ ಸುರೇಶ ಅವರ ‘ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಗೆ ಬಂದ [...]
  2. ಮಲ್ಟಿಪ್ಲೆಕ್ಸ್‌ಗಳನ್ನ ನಿರ್ಮಿಸುವವರ ಮನಸ್ಸು ಎಂತಹುದು? « ಅವಧಿ - [...] on December 21, 2008. Filed under: 1 | ಬಿ ಸುರೇಶ ಅವರ ‘ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಗೆ ಬಂದ ಪ್ರತಿಕ್ರಿಯೆಗಳಿಗೆ ಬಿ ಸುರೇಶ್ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: