ನ್ಯೂಯಾರ್ಕಿನಿಂದ ಒಂದು ತಾಜಾ ಮಾಲಿನ ರಫ್ತು

burger.jpg

vnew3.jpg“ವೆಂಕಿ ಬರ್ಗರ್”

 

 

ವೆಂಕಿ

ಮ್ಮದೆಲ್ಲವನ್ನೂ ಚಿಕ್ಕ ಊರುಗಳಿಗೆ ರಫ್ತು ಮಾಡುತ್ತಾ ಇರುವುದು ದೊಡ್ಡ ನಗರಗಳ ಪ್ರತಿಷ್ಠೆಗಳಲ್ಲೊಂದು-ಅವರ ಮೌಲ್ಯಗಳು, ಮೌಢ್ಯತೆಗಳು ಎಲ್ಲವನ್ನೂ ಬೇರೆ ಊರುಗಳ ಮೇಲೆ ಹೇರುವುದು. ಜೊತೆಗೆ ಇಡೀ ದೇಶಕ್ಕೇ ಆವರಿಸಿಕೊಳ್ಳುವಂತೆ ಮಾಡುವುದು. ನಮ್ಮಿಂಡಿಯಾದಲ್ಲಿ ಮುಂಬಯಿಯ ಬಾಲಿವುಡ್ ದೇಶದಲ್ಲೆಲ್ಲಾ ಹರಡಿಕೊಂಡು ಎಲ್ಲ ಯುವಕರಲ್ಲಿ ಶಾರುಕ್ ಖಾನ್ ಆಗುವ ಕನಸು, ಎಲ್ಲ ಹುಡುಗಿಯರಿಗೆ ಐಶ್ವರ್ಯಳಾಗುವ ಹುಚ್ಚು ಬಿತ್ತಿಲ್ಲವೆ ಹಾಗೆ. ಬೆಂಗಳೂರು ನೋಡುವ ಊರುಗಳೆಲ್ಲಾ “ಓಹೋ! ನಾವ್ಯಾವಾಗ ಈ ತರಹ ಟೆಕಿ ಸಿಟಿಗಳಾಗೋದು?” ಅಂತ ಹಪಹಪಿಸುವಂತೆ  ಮಾಡುವುದು. ಒಂಥರಾ “ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ” ಅಂತಾರಲ್ಲ ಹಾಗೆ.

ನ್ಯೂಯಾರ್ಕ್ ಗೂ ಕೂಡಾ ತನ್ನ ಕೆಲವನ್ನು ರಫ್ತು ಮಾಡುವುದು ಇದೆ. ಮೊದಲೆತ್ತಿಕೊಳ್ಳುತ್ತಾ, ನಾನು ಹಿಂದೆ ಹೇಳಿರಲಿಲ್ಲವೆ ಹಾಗೆ, ಇಲ್ಲಿ ಬೇಕಾದಷ್ಟು ಹಣಕಾಸು ಸಂಸ್ಥೆಗಳು, ಸೇವೆಗಳು ಗಿಜಿಗುಡುತ್ತಿವೆ-ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ ಮತ್ತೆ ನಾಸ್ಡಾಕ್, ಸಾಕಲ್ಲ, ಹಣಕಾಸಿನ ಜಗತ್ತಿನ ನಿಯಂತ್ರಣವೇ ತಮ್ಮ ಕೈಲಿದೆ ಎಂಬಂತೆ ಇಡೀ ಜಗತ್ತಿನ ಆರ್ಥಿಕ ಏಳುಬೀಳನ್ನು ನಡೆಸುವವರು. ನ್ಯೂಯಾರ್ಕ್ ನ ಈ ದುಡ್ಡಿನ ಮಾಂತ್ರಿಕರು ನಮ್ಮೆಲ್ಲರ ಕಿಸೆಯಲ್ಲಿ ಒಂದು ಕೈ ಇಟ್ಟಿರ್ತಾರೆ!

ಈ ಊರಲ್ಲಿ ಸದಾ ಕಾಲ ಏನಾದರೊಂದು ಹೊಸದು ಆಗ್ತಾನೇ ಇರುತ್ತೆ, ಮತ್ತದು ಬೇರೆಯೆಲ್ಲದರ ಮೇಲೆ ಪ್ರಭಾವ ಬೀರ್ತಾನೇ ಇರುತ್ತೆ – ಹೊಸ ಮಾಧ್ಯಮಗಳು, ಜಾಹೀರಾತುಗಳು, ಫ್ಯಾಷನ್, ವಿನ್ಯಾಸಗಳು ಮತ್ತು ವಾಸ್ತುಶಿಲ್ಪ. ಎಲ್ಲದರಲ್ಲೂ ಕೈಯಾಡಿಸುವುದೇ. ನ್ಯೂಯಾರ್ಕ್ ನಲ್ಲಿ ಮಳೆ ಬಂದರೆ ವಿಶ್ವದ ಹಲವಾರು ಕಡೆ ಜನ ಕೊಡೆ ಹಿಡಿಯುವಂತೆ ಪರಿಸ್ಥಿತಿ ಇನ್ನೂ ಇದೆ.

ಇಲ್ಲಿಂದ ರಫ್ತಾಗುವುದರಲ್ಲಿ ಕೇವಲ ವಸ್ತುಗಳು ಮತ್ತು ಐಡಿಯಾಗಳು ಮಾತ್ರ ಅಂತ ಅಂದುಕೊಳ್ಳಬೇಡಿ. ಜನ ಕೂಡಾ ರಫ್ತಾಗಿ ಬಿಡ್ತಾರೆ-ಅಂದರೆ ಕೆಲವು ಭಾರೀ ಪ್ರಭಾವಿಗಳು ಅಂತ ಅಂದುಕೊಳ್ಳಿ. ಇತ್ತೀಚಿನ ಅಂತಹ ದೊಡ್ಡ ರಫ್ತು ಬೇರೆ ಯಾರೋ ಸಾಮಾನ್ಯರಲ್ಲ. ನ್ಯೂಯಾರ್ಕ್ ನ ಮೇಯರ್ ಆಗಿದ್ದ ರುಡಾಲ್ಫ್ ಜುಲಿಯಾನಿ. ಅವನನ್ನ ಎಲ್ಲ ಕರೆಯುವುದು ರೂಡಿ ಜುಲಾನಿ ಅಂತಾ.

giuliani.jpgಸೆಪ್ಟೆಂಬರ್ ೧೧ರಂದು ಉಗ್ರವಾದಿಗಳು ನ್ಯೂಯಾರ್ಕ್ ನಗರಕ್ಕೆ ವಕ್ಕರಿಸಿಕೊಂಡದ್ದೇ ತಡ ಜುಲಾನಿಯ ರಾಜಕೀಯ ಮರುಹುಟ್ಟು ಆಗಿಬಿಟ್ಟಿತು. ಜುಲಾನೀನ ಈಗ ಜನ ಕರೆಯುವುದೇ “ಅಮೆರಿಕದ ಮೇಯರ್” ಅಂತ. ನ್ಯೂಯಾರ್ಕ್ ನಗರದ ಅವನ ಮೇಯರ್ ಹುದ್ದೆಯ ಕೊನೆಯ ವಾರಗಳಲ್ಲಿ ಅವನ ರಾಜಕೀಯ ಬದುಕೇ ಒಂದು ಮಹತ್ತರವಾದ ತಿರುವು ಪಡೆಯಿತು. ಆಗ ಅವನ ವೈಯಕ್ತಿಕ ಜೀವನದಲ್ಲಿ ಅಲ್ಲೋಲಕಲ್ಲೋಲವೇ ಆಗಿತ್ತು. ಅವನೇನು ಮಾಡಿದ್ದಾನೆ ನ್ಯೂಯಾರ್ಕ್ ನಗರಕ್ಕೆ-ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಅಪರಾಧಗಳನ್ನು ತಡೆಯುವುದರಲ್ಲಿ-ಅಂತ ಜನ ದೊಡ್ಡದಾಗಿ ಕೇಳಲಾರಂಭಿಸಿದ್ದರು. ಒಂದಷ್ಟು ಜನ ಪರವಾಗಿದ್ದರೆ, ವಿರೋಧಿಗಳ ಬಣವೂ ಇತ್ತು. ಜುಲಾನಿ ಕ್ಯಾನ್ಸರ್ ರೋಗದಿಂದ ಆಗ ತಾನೆ ಚೇತರಿಸಿಕೊಳ್ಳುತ್ತಿದ್ದ. ಆಗಲೇ ೯/೧೧ ಆಗಿಹೋಯಿತು. ಏನಾದರೂ ಅವಘಡವಾದಾಗಲೇ ನಿಜವಾದ ನಾಯಕತ್ವದ ಪರೀಕ್ಷೆಯಾಗೋದು ಮತ್ತು ಈ ಪ್ರಸಂಗ ರೂಡಿಯ ಪಾಲಿಗೆ ಮಹತ್ತರವಾಯಿತು. ಅಮೆರಿಕೆಯ ಗಟ್ಟಿ ನಿಲುವು ಮತ್ತು ಧಾರ್ಷ್ಟ್ಯಕ್ಕೆ ಜುಲಾನಿಯೇ ಪ್ರತಿಮೆಯಾಗಿಬಿಟ್ಟ.

ಆ ದೊಡ್ಡದೊಂದು ವಿಪತ್ತು ಈ ನ್ಯೂಯಾರ್ಕ್ ನ ಮಹಾಶಯನಿಗೆ ಒಂದು ವರವೇ ಆಗಿಬಿಟ್ಟಿತು ಅಥವಾ ಈ ದುರಂತವನ್ನ ತನ್ನ ವೈಯಕ್ತಿಕ ಮತ್ತು ರಾಜಕೀಯ ಬೆಳವಣಿಗೆಗೆ ಹೇಗೆ ಬಳಸಿಕೊಳ್ಳಬೇಕೆಂಬ ತಾಕತ್ತು ಅವನಿಗಿತ್ತು ಅಂತ ಅನ್ನಿಸುತ್ತೆ. ಏನು ಗೊತ್ತ, ೨೦೦೮ರ ಅಮೆರಿಕೆಯ ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ರೂಡಿ ಈಗ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ. ಈಗ ರೂಡಿ ಎಲ್ಲಿ? ತನ್ನ ನಾಯಕತ್ವವನ್ನು ಪ್ರತಿಬಿಂಬಿಸಲಿಕ್ಕೆ ಅಮೆರಿಕೆಯ ಉದ್ದಗಲಕ್ಕೂ ರೂಡಿ ಓಡಾಡ್ತಾ ಇದ್ದಾನೆ. ಹೋದೆಡೆಯಲ್ಲೆಲ್ಲಾ ಸೊಗಸಾಗಿ ಭಾಷಣ ಮಾಡ್ತಾ ಇದ್ದಾನೆ. ನ್ಯೂಯಾರ್ಕ್ ನಿಂದ ಹೊರಟವನು ಇಡೀ ಅಮೆರಿಕೆಗೆ ತನ್ನ ನಾಯಕತ್ವದ ಭರವಸೆ ಕೊಡ್ತಿದ್ದಾನೆ, ನ್ಯೂಯಾರ್ಕ್ ಹೊಡೆತಕ್ಕೆ ಸಿಲುಕಿದಾಗ, ಇಡೀ ನಗರವೇ ಹೊಯ್ದಾಡುತ್ತಿದ್ದಾಗ ನಾನು ಹೇಗೆ ಅದನ್ನು ಹಿಡಿದಿಟ್ಟೆ, ಜನರಲ್ಲಿ ಎಂತಹ ಭರವಸೆ ಕೊಟ್ಟೆ, ಇಡೀ ದೇಶಕ್ಕೆ ಧೈರ್ಯ ತುಂಬಿದೆ, ನೀವು ಕಂಡಿರಲ್ಲ, ನೀವು ಕೇಳಿದಿರಲ್ಲ, ಈಗ ನೋಡಿ ಇದನ್ನೇ ಇಡೀ ಅಮೆರಿಕೆಯ ಜನರಿಗೆ ನಾನು ನೀಡಬಲ್ಲೆ, ನೀಡಿ ಎನಗೆ ನಿಮ್ಮ ಮತ ಎಂದು ಓಡಾಡ್ತಾ ಇದ್ದಾನೆ. ಬೂದಿಯಿಂದ ಎದ್ದು ಬಂದ ಫೀನಿಕ್ಸಿನಂತೆ ಅವನ ಗಟ್ಟಿತನ ಮತ್ತು ಸಾಮರ್ಥ್ಯವನ್ನು ಮೆಚ್ಚಲೇಬೇಕು. (ನಮ್ಮಿಂಡಿಯಾದ ಯಾರಾದರೂ ನೆನಪಿಗೆ ಬಂದರೇನು?)

ಈ ನ್ಯೂಯಾರ್ಕ್ ನ ರಫ್ತಾದ ಸರಕನ್ನು ಇಡೀ ಅಮೆರಿಕೆಯ ಜನ ಅಪ್ಪಿಕೊಳ್ತಾರ ಅಂತ ಕಾದು ನೋಡಬೇಕಷ್ಟೆ. giuliani1.jpgನ್ಯೂಯಾರ್ಕ್ ನ ಮೇಯರ್ ಅಮೆರಿಕೆಯ ರಾಷ್ಟ್ರಪತಿ ಆಗ್ತಾನಾ? ಇದಕ್ಕೆಲ್ಲಾ ಕಾಲವೇ ಉತ್ತರಿಸಬೇಕಷ್ಟೆ. ರೂಡಿಯಂತೂ ಈ ಜೀವನ ನಾಟಕದಲ್ಲಿ ಯಶಸ್ವಿಯಾಗಿರುವ ಸೂಚನೆಗಳಂತೂ ಕಂಡಿವೆ. ಅವನೊಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಬೇಕೆಂದರೆ ೪೦ ಲಕ್ಷ ರೂಪಾಯಿ ಕೊಡಬೇಕು! ನ್ಯೂಯಾರ್ಕ್ ನ ವರ್ಣರಂಜಿತ ಮತ್ತು ಸೃಜನಶೀಲ ವಾತಾವರಣ ಈ ಮನುಷ್ಯನಿಗೆ ಒಳ್ಳೆಯ ತರಬೇತಿ ನೀಡಿದೆಯೇನೋ?

‍ಲೇಖಕರು avadhi

August 19, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This