ಜಿ ಎನ್ ಮೋಹನ್ ಅವರ ಎರಡು ಕವಿತೆಗಳು

girls.jpg

ಊರ್ಮಿಳೆಗೆ ಕಾಯುವುದೇ ಕಲಸ…

ಣ್ಣಲ್ಲಿ ಕಡಲು
ಎದೆಯಲ್ಲಿ ಕರಗದ ಯಾತನೆ
ನಿಟ್ಟುಸಿರುಗಳ ಮೆರವಣಿಗೆ.
ಎಂದು ಬರುತ್ತಾನೆ ಆತ
ಎಂದು ನನ್ನ ಕಣ್ಣ ಕೊಳದಲ್ಲಿ
ಇಣುಕುತ್ತಾನೆ; ನೇವರಿಸುತ್ತಾನೆ
ಬಾಡಿಹೋದ ಮುಂಗುರುಳ
ಲಾಲಿಹಾಡು ಹಾಡುತ್ತಾನೆ
ಇಲ್ಲವಾಗಿದ್ದ ರಾತ್ರಿಗಳಿಗೆ.

ಇನ್ನೂ ಕಾಯುವ ಕೆಲಸ ನಿಂತಿಲ್ಲ
ಈಗ ಬರುತ್ತಾನೆ ಆಗ ಬರುತ್ತಾನೆ
ಏರಿ ಬರುತ್ತಾನೆ ಕಡಲ ತಡಿಯಲ್ಲಿ
ಸಾಗುವ ಹಾಯಿದೋಣಿಗಳ
ಕಾಡಿನೊಳಗೆ ಮೂಡುತ್ತಿರುವ
ಸದ್ದಿಲ್ಲದ ಸದ್ದುಗಳ ಆಲಿಸಿ ಕೇಳಿಕೊಳ್ಳುತ್ತಾಳೆ

ಊರ್ಮಿಳೆಗೆ ಕಾಯುವುದೇ ಕೆಲಸ
ಈಗ ಬರುತ್ತೇನೆ ಎಂದು ಹೋದವನು
ಹಾಡು ಹುಡುಕಿ ಬರುತ್ತೇನೆ ಎಂದು
ಕುದುರೆ ಏರಿದವನು
ಚಂದ್ರನ ಒಂದು ತುಣುಕು ನಿನಗಾಗಿ
ತರುತ್ತೇನೆ ಎಂದವನು ಎಲ್ಲಿದ್ದಾನೆ

ದಿನನಿತ್ಯ ಎದೆಯೊಳಗೆ
ಒಂದೇ ಪಲ್ಲವಿ
ನಿಟ್ಟುಸಿರುಗಳ ಒರೆಸುವ
ಆ ಕೈಗಳೆಲ್ಲಿವೆ ಕಾಡುವ ಕಣ್ಣುಗಳೆಲ್ಲಿವೆ
ಮಡಿಕೆ ಮೂಡದ ಹಾಸಿಗೆ ನೂರು
ಕಥೆ ಹೇಳುತ್ತಿದೆ.

ಊರ್ಮಿಳೆ ಕಾಯುತ್ತಿದ್ದಾಳೆ
ಲಕ್ಷ್ಮಣನಿಗಾಗಿ.

*

srujan025.jpg

ಕೋಡಂಗಿಗೆ ಇನ್ನು ಕೆಲಸವಿಲ್ಲ 

ಗ ಕಾಲ ಬದಲಾಗಿದೆ
ಮನಸ್ಸಿಗೆ ಒಂದಿಷ್ಟು ಬೇಸರವಾಯಿತೋ
ಸಿನೆಮಾ ಥಿಯೇಟರ್‌ಗಳಿವೆ
ತಿರುವಿ ಹಾಕಿದರೂ ಮುಗಿಯದಷ್ಟು ಚಾನಲ್‌ಗಳಿವೆ
ನಾಯಕಿಯರು ಬೇಕಾದಷ್ಟು ಹೊತ್ತು ಕುಣಿಯುತ್ತಾರೆ
ಖಳನಾಯಕ ರೇಪ್ ಮಾಡುತ್ತಲೇ ಇರುತ್ತಾನೆ,
ತಂಗಿಗೆ ಅಳುವುದೇ ಕೆಲಸ
ಇನ್ನೂ ಬೇಸರವಾಯಿತೇನು
ನೇರ ಹೊರಗೆ ಜಿಗಿದುಬಿಟ್ಟರೆ ಸಾಕು
ಚಹಾ ಅಂಗಡಿಯಲ್ಲಿ ಸಂತೆ ಮಧ್ಯದಲ್ಲಿ
ಮೀನು ಮಾರುಕಟ್ಟೆಯಲ್ಲಿ ಎಂ ಜಿ ರೋಡಿನಲ್ಲಿ
ಇಲ್ಲಾ ಎಲ್ಲಾ ರಸ್ತೆ ಕೂಡುವ ಸರ್ಕಲ್‌ನಲ್ಲಿ
ಕುಳಿತುಬಿಟ್ಟರೆ ಸಾಕು.

ಈಗ ಕಾಲ ಬದಲಾಗಿದೆ
ಕಡಲೆಕಾಯಿ ಬಿಡಿಸುತ್ತಾ ಗೊತ್ತಿಲ್ಲದವರ
ಜೊತೆಯೂ ಹರಟೆ ಹೊಡೆಯಬಹುದು
ಬಸ್‌ನಲ್ಲಿ ಕೂತು ಗೊರಕೆಗೆ ಸಿದ್ಧವಾಗಬಹುದು
ಟೇಪ್‌ರೆಕಾರ್ಡರ್ ಒತ್ತಿದರೆ
ಹಾಡುಗಳ ಸರಮಾಲೆ
ಪಾರ್ಕ್‌ನಲ್ಲಿ ಕೂತರೆ ಸಂಗೀತ ಕಚೇರಿ
ದನಿ ಏರಿಸಿದರೆ ಸಾಕು ಮನರಂಜನೆ.

ಈಗ ಕಾಲ ಬದಲಾಗಿದೆ
ನಗಿಸಲು ಎಲ್ಲರೂ ಸಿದ್ಧರಿದ್ದಾರೆ
ಒಂದು ಮಾತು ಹೇಳಿದರೂ
ನಗಬೇಕೆಂಬ ನಿಯಮವಿದೆ
ಮನಸ್ಸು ಹೇಗಾದರೂ ಇರಲಿ,
ಸದಾ ಮುಗುಳ್ನಗುವ ಸುಂದರಿಯರಿದ್ದಾರೆ.
ಮುಗುಳ್ನಗು ಉಕ್ಕಲೆಂದೇ ಟೂತ್‌ ಪೇಸ್ಟ್ ಗಳಿವೆ.

ಹಾಗಾದರೆ ಇನ್ನು ನಾನೇಕೆ
ಸ್ವಾಮಿ? ಅದಕ್ಕಾಗಿಯೇ ನಿಂತಿದ್ದೇನೆ
ನಿಮಗೆ ಹೇಳಿ ಹೋಗಲು
ಬಟ್ಟೆ ಬದಲಾಯಿಸಬೇಕು
ಟೋಪಿ ತೆಗೆದಿಡಬೇಕು ಬೇಗ ಬಣ್ಣ ಒರೆಸಬೇಕು
ಮೂಗಿನ ಮೇಲಿದೆಯಲ್ಲ ನಿಂಬೆಹಣ್ಣು
ಅದನ್ನು ಕಳಚಿಡಬೇಕು
ನೀವು ನಗಲೆಂದೇ ಮಾಡುತ್ತಿದ್ದ ಚೇಷ್ಟೆ
ಬದಿಗಿರಿಸಬೇಕು
ಈಗ ಕಾಲ ಬದಲಾಗಿದೆ
ಕೋಡಂಗಿಗೆ ಇನ್ನು ಕೆಲಸವಿಲ್ಲ.

‍ಲೇಖಕರು avadhi

October 9, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವನಿರದ ದಿನಗಳಲ್ಲಿ

ಅವನಿರದ ದಿನಗಳಲ್ಲಿ

ನಂದಿನಿ ಹೆದ್ದುರ್ಗ ಹಾಗೆ ಅಂದುಕೊಂಡಮೊದಲ ದಿನಅದು.ಮಾಮೂಲಿನಂತಿದ್ದೆ ಮೂರನೇ ದಿನಬರೀ ಹುಃಗುಟ್ಟೆಮನಸ್ಸೆಲ್ಲಿದೆ ಎಂದಆರನೇ...

ಸಾಮ್ರಾಜ್ಯಗಳು ಉರುಳಿ ಹೋಗುವುದೆಂದರೆ…

ಸಾಮ್ರಾಜ್ಯಗಳು ಉರುಳಿ ಹೋಗುವುದೆಂದರೆ…

ನೂರುಲ್ಲಾ ತ್ಯಾಮಗೊಂಡ್ಲು ಕೃಷ್ಣದೇವರಾಯನ ದಿಡ್ಡಿ ಬಾಗಿಲ ಮೇಲೆಬಿರುಕಿ ಹೋದ ಗೋಪುರದ ತುದಿಯಂಚಲಿಕಾಗೆಯೊಂದು ಕುಳಿತುಅಕಾಲ ಚರಿತೆಯ ಚರಮಗೀತೆ...

2 ಪ್ರತಿಕ್ರಿಯೆಗಳು

 1. ಅರ್ಚನಾ ಗೊರೂರು

  ಊರ್ಮಿಳೆಗೆ ಕಾಯುವುದೆ ಕೆಲಸ…

  ಅಣ್ಣ- ಅತ್ತಿಗೆಯರ ಒಡನಾಟ ಅದೆಷ್ಟು ಚೆನ್ನ
  ಎಲ್ಲೋ ನೆನಪುಗಳು ಬಣಗುಟ್ಟುತ್ತಿವೆಯೆ
  ಮೋಡ ಕವಿದ ಆಗಸದಲ್ಲಿ ಆದಾರು ಇಣುಕುತ್ತಿದ್ದಾನೆ
  ಹೀಗೆ ಕದ್ದು ನೋಡುವ ಹುಚ್ಚೇಕೆ ನನಗೆ
  ….
  ….
  ….

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಅರ್ಚನಾ ಗೊರೂರುCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: