ಅಂಗ್ಡಿ ರಂಗಿಯ ಆಲಿಂಡಿಯಾ ರೇಡಿಯೋ

ವಿಜಿ

ಅಂಗ್ಡಿ ರಂಗಿಯೆಂದೊಡನೆ ಮೊದಲು ನೆನಪಾಗುವುದು ಅವಳ ಅಂಗಡಿ. ಅನಂತರ ನೆನಪಾಗುವುದು ಅವಳ ಬಾಯಲ್ಲಿನ ಕವಳದ ರಂಗು. ಅಂಗ್ಡಿ ರಂಗಿಯೆನ್ನುವಾಗ ಕಡೆಯಲ್ಲಿ ನೆನಪಾಗುವುದು ಮೌನ. ಕಿವಿನಿಮಿರಿಸುವಂತೆ ಮಾಡುವ ಮೌನ. ಅವಳಿಗೂ ಈ ಮೌನ ನೆನಪಾಗುವುದು ಕಡೆಯಲ್ಲೇ. ಎಲ್ಲಾ ಕಥೆ ಮಾತಾಡಿ ಮುಗಿಸಿದ ನಂತರ, “ಕಂಡೋರ ಸುದ್ದಿ ನಮಗ್ಯಾಕೇ ಅವ್ವ” ಎಂದು ಅವಳೊಂದು ರಾಗವೆಳೆದುಬಿಟ್ಟರೆ, ಬಿತ್ತು ಅಂಕದ ಪರದೆ ಎಂದೇ ಲೆಕ್ಕ. ಆಗೆಲ್ಲ, ಭೋರೆಂದು ಬೀಳುತ್ತಿದ್ದ ಮಳೆ ಅಕಾಲಿಕವಾಗಿ ನಿಂತು ನೆರೆಯುವ ಮೌನವಿರುತ್ತದಲ್ಲ, ಅಂಥದೇ ಮೌನ ಕಾಲು ಮುರಿದುಕೊಂಡುimg_1140.jpg ಬೀಳುತ್ತದೆ. ರಂಗಿಯ ಅಂಗಡಿಯ ಕದ ಮುಚ್ಚಲು ಇನ್ನು ಹೆಚ್ಚೆಂದರೆ ಅರ್ಧ ತಾಸು ಬಾಕಿ.

ನಮಗೆಲ್ಲಾ ರಂಗಿ ಬಹಳ ಇಷ್ಟವಾಗೋದು ಮುಖ್ಯವಾಗಿ ಒಂದು ಕಾರಣಕ್ಕೆ. ಏನಿಲ್ಲ, ಕಳೆದ ಸುಮಾರು ವರ್ಷಗಳಿಂದ ಅವಳ ವಯಸ್ಸು ಮೂವತ್ತರಿಂದ ಮೂವತ್ತೈದರ ಆಸುಪಾಸಲ್ಲೇ ಓಡಾಡಿಕೊಳ್ಳುತ್ತ, “ಕೆಳಗೂ ಇಳೆಯೆ, ಮೇಲೂ ಹತ್ತೆ” ಎಂಬಂತಿದೆ. ಆಗಾಗ ಇವಳು ಯಾರಿಗಾದರೂ ತನ್ನ ವಯಸ್ಸು ಎಷ್ಟೆಂದು ಹೇಳುವಂಥ ಸಂದರ್ಭ ಬರುತ್ತಿರುತ್ತದೆ. ಊರಲ್ಲಿ ಕಳ್ಳನನ್ನೊ ಸುಳ್ಳನನ್ನೊ ಹಿಡಿದು ಕಂಪ್ಲೇಂಟು ಬುಕ್ಕು ಮಾಡಿಕೊಳ್ಳುವ ಪೊಲೀಸು, ಇವಳಿಂದೊಂದು ವಿಐಪಿ ಸ್ಟೇಟ್ ಮೆಂಟು ತಕ್ಕೊಳ್ಳುವುದು ಇದ್ದೇ ಇರುತ್ತದೆ. ಆಗೆಲ್ಲ ವಯಸ್ಸೆಷ್ಟು ಎಂದೇನಾದರೂ ಪ್ರಶ್ನೆ ಬಂದರೆ “ಮೂವತ್ರ ಮ್ಯಾಲೆ ಒಂದ್ ಸೊಲ್ಪ ಬರಕಳ್ರಾ” ಎಂದು ನಾಚುವ ರಂಗಿ ಊರಿಗೇ ಸಂಜೆ ಸೂರ್ಯನ ಬಣ್ಣ ಹೊಡೆಯುತ್ತಾಳೆ. ಕೆಲವರಂತೂ ಅವಳ ಈ ಮಾತಿಗೆ, “ನೀ ಹೀಂಗ್ ಹೇಳೂಕ್ ಸುರು ಮಾಡೇ ಮೂವತ್ ವೊರ್ಸ ಆಗಲಿಲ್ವೇನೆ ರಂಗಿ? ಎಂದು ಪಾರ್ಸು ಮಾಡುವುದೂ ಇದೆ.

ಈ ರಂಗಿ ಜೀವನಕ್ಕೆ ಅಂತಾ ಸಣ್ಣದೊಂದು ಅಂಗಡಿ ಇಟ್ಟು ವ್ಯಾಪಾರ ಶುರು ಮಾಡಿದ್ದು ಯಾವಾಗ ಅಂದ್ರೆ, ಅವಳ ಗಂಡ ಅದ್ಯಾವಳೋ ಮಲಬಾರಿ ಹೆಂಗಸು-ಪೂಲಿನ ಕೆಲಸಕ್ಕೆ ಬಂದವಳನ್ನು ಕಟ್ಟಿಕೊಂಡು ಊರು ಬಿಟ್ನಲ್ಲ, ಆವಾಗ. ಗಂಡ ತನ್ನನ್ನು ದಿಕ್ಕಿಲ್ಲದಂತೆ ಮಾಡಿಟ್ಟು ಓಡಿಹೋದ ಎಂದು ಆಕೆ ಕಣ್ಣೀರು ಹಾಕಿದ್ದೂ ಕರೆಕ್ಟಾಗಿ ಎರಡೇ ದಿನ. ಅದಾದ ಮೇಲೆ ಅವಳು ಕಣ್ಣೀರು ಅಳಿಸಿ ಹಾಕಿದ್ದಳು. ಅಂವಿದ್ದಾಗೂ ದುಡಿಯೂದು ತಪ್ಪಿರ್ಲಿಲ್ಲ, ಈಗೇನ್ ಹೊಸ್ದಾ ಎಂದು ಗಟ್ಟಿ ಮನಸ್ಸು ಮಾಡಿದವಳ ಬಲದಲ್ಲಿ ರೂಪ ಪಡೆದ ಅಂಗಡಿ ಇಂದು ಚಲೋ ಬೆಳೆದಿದೆ. ಮಕ್ಕಳಿಲ್ಲದ ರಂಗಿ ಇಬ್ಬರು ಹೆಣ್ಣುಮಕ್ಕಳನ್ನು ಮನೇಲಿಟ್ಟುಕೊಂಡು ಅನ್ನ ಹಾಕಿ ಶಾಲೆಗೂ ಕಳಿಸ್ತಿದ್ದಾಳೆ.

ರಂಗಿಯ ಅಂಗಡಿಯೆಂದರೆ, “ಅದ್ ಬಂತ್, ಇದ್ ತಕಂತ್, ತಿರ್ಗ್ ಹೋಯ್ತ್” ಎಂಬಂಥ ಬಗೆಯದಲ್ಲ. ಅಲ್ಲಿಗೆ ಬಂದ ಹೆಂಗಸು ಹತ್ತು ನಿಮಿಷವಾದರೂ ಆರಾಮವಾಗಿ ಕೂತು, ದಣಿವಾರಿಸಿಕೊಂಡು, ಒಂದು ಚಾ ಕುಡಿದು ನಾಲ್ಕು ಮಾತಾಡಿ, ಹಳ್ಳದಾಚೆ ಕಡೆಯ ಸುದ್ದಿಯನ್ನು ಇಲ್ಲಿ ಬಿಚ್ಚಿ, ಇಲ್ಲಿಯದನ್ನು “ಹಾಂ ಹೌದೇ” ಎಂದು ಹಿಡಕೊಂಡು ಹೋಗುವುದಕ್ಕೆ ಅನುಕೂಲವಿರುವನ್ತ, ಊರ ಹೆಂಗಸರಿಗೆಲ್ಲಾ ಬಹಳವೇ ಖಾಯಸವಾಗುವ ಜಾಗ ಅದು.

ಊರಲ್ಲಿನ ಯಾವುದೇ ಸುದ್ದಿಯಿದ್ದರೂ ಅದು ಅಧಿಕೃತವಾಗಿ ಅನೌನ್ಸಾಗುವುದು ರಂಗಿಯ ಅಂಗಡಿಯ ಈ ಪುಟ್ಟ ಜಗುಲಿಯಿಂದಲೇ. ಯಾವುದೇ ಒಂದು ಸುದ್ದಿಯನ್ನು ಎಷ್ಟು ಎಳೆಯಬೇಕು ಎಷ್ಟು ಎಡಿಟ್ ಮಾಡಬೇಕು ಎಂಬುದನ್ನು ಇಲ್ಲಿ ಸೇರುವ ಹೆಂಗಸರು ತಮಗರಿವಿಲ್ಲದೆ ತೀರ್ಮಾನಿಸುತ್ತಾರೆ. ಆದರೆ ಅಂತಿಮವಾಗಿ ಅದೆಲ್ಲಕ್ಕೂ ರಂಗಿ ಮುದ್ರೆಯೊತ್ತಲೇಬೇಕು. “ಹೇ ಬಿಡ್ರೆ, ಹಂಗೆಲ್ಲ್ ಹೇಳ್ಬೇಡಿ” ಎಂದು ಯಾವುದಾದರೊಂದು ವಿಷಯದ ಬಗ್ಗೆ ರಂಗಿ ತಕರಾರಿನ ಧಾಟಿಯ ಮಾತು ಹೇಳಿಬಿಟ್ಟರೆ ಅದು ಮತ್ತೆಲ್ಲೂ ಗುಲ್ಲಾಗದೆ, ಹುಟ್ಟಿಯೇ ಇರಲಿಲ್ಲವೆಂಬಂತಾಗುತ್ತದೆ.

ಇದೆಲ್ಲಾ ರಂಗಿಯ ಅಂಗಡಿ ಜಗುಲಿಯಲ್ಲಿ ಯಾವಾಗಿನಿಂದ ಹೇಗೆ ಶುರುವಾಯಿತು ಎಂಬ ಬಗ್ಗೆ ಯಾವುದೇ ಇತಿಹಾಸಕಾರರಾಗಲಿ, ಯಾವುದೇ ವಿದೇಶಿ ಪ್ರವಾಸಿಗರಾಗಲಿ ಬರೆದಂತೆ ಕಾಣಿಸುವುದಿಲ್ಲ. ಇದ್ದರೂ ಅಂಥ ಯಾವ ದಾಖಲೆಗಳೂ ಈಗ ಲಭ್ಯವಿಲ್ಲ.

ಆದರೆ ಒಂದು ಸಂಗತಿ ಮಾತ್ರ ಜನರ ಮನಸ್ಸಲ್ಲಿ ಶಾಸನವಾಗಿರೋದು ನಿಜ.

ಊರಲ್ಲಿ ಗಂಡುಳ್ಳ ಗರತಿ ಮೇಲೇ ಕಣ್ಣು ಹಾಕಿದವನೊಬ್ಬ, ಆಕೆಯ ಗಂಡ ಹೊಲ ಕಾಯಲು ರಾತ್ರಿ ಹೋಗುತ್ತಿದ್ದಂತೆ ಮನೆಯತ್ತ ಬಂದು ಕಿಟಕಿಯಲ್ಲೇ ಅವಳನ್ನು ಕರೆಯತೊಡಗಿದ್ದನಂತೆ. ಯಾರ ಬಳಿಯೂ ಹೇಳಿಕೊಳ್ಳಲಾರದ ಆ ಹೆಂಗಸು ಕಡೆಗೂ ಅದ್ಯಾವ ವಿಶ್ವಾಸದಿಂದಲೋ ಬಂದು ಹೇಳಿಕೊಂಡದ್ದು ಅಂಗ್ಡಿ ರಂಗಿಯ ಬಳಿ. ಅವತ್ತು ಆ ಹೆಂಗಸು ತನ್ನಿದಿರು ಕೂತು ಹಾಕಿದ ಕಣ್ಣೀರಿಗೆ ಕೊನೆ ಹಾಡುವಂಥ ಅಸ್ತ್ರವೊಂದನ್ನು ರಂಗಿ ತಯಾರು ಮಾಡಿದ್ದೂ ಅದೇ ಗಳಿಗೆಯಲ್ಲೇ. “ನಾ ನೋಡ್ಕಂತೆ, ನೀ ಯೋಚ್ನೆ ಬಿಡು” ಎಂದು ಅವಳನ್ನು ಕಳಿಸಿದ ರಂಗಿ, ಅವಳಿಗೆ ಕಾಟ ಕೊಡತೊಡಗಿದ್ದ ಆ ಗಂಡಸೆಂಬವನಿಗೆ ತನ್ನ ಅಂಗಡಿ ತಾವಾ ಬರ ಹೇಳಿ ಕಳಿಸಿದಳು. ಬಂದನಲ್ಲ ಅವನು. ಅಂಗಡಿಯ ಆಚೀಚೆಯೆಲ್ಲಾ ಜನ ಇದ್ದೇ ಇದ್ದರು. ಅವರೆಲ್ಲರ ಎದುರಲ್ಲೇ ರಂಗಿ, “ಬಾರೋ, ಇವ್ನೆ. ಗಂಡ್ಸು ಅಂದ್ರೆ ನಿನ್ನಂಗೆ ಇರ್ಬೇಕು. ಒಂದಲ್ಲ ನಾಕು ಮಂದಿ ಹೆಂಗಸ್ರು ಮನ್ಸು ಮಾಡೂ ಗಂಡ್ಸು ಈ ಊರಲ್ಲಿವ ಅಂದ್ರೆ ಅಂವ ನೀನೇ” ಎಂದಳು ಕಣ್ಣಲ್ಲೇ ವಯ್ಯಾರ ತೋರಿಸುತ್ತ. ಅಲ್ಲಿದ್ದವರೆಲ್ಲಾ “ಅರೆ ಇದೇನಾಗಿದೆ ರಂಗಿಗೆ, ಯಾಕೆ ಇಂತಾ ನಾಚ್ಕೆ ಬಿಟ್ಟಂತಾ ಮಾತು ಆಡ್ತಿದ್ದಾಳೆ” ಎನ್ನಿಸುತ್ತಿದ್ದರೆ, ಅವಳ ಆ ಮಾತುಗಳಿಗೆ ಪಾತ್ರನಾದ ಗಂಡಸೆಂಬುವನು ಮಾತ್ರ ನಾಚಿ ನೀರಾಗುತ್ತ ನಿಂತಿದ್ದ. ಆ ಅಮಲಿನಲ್ಲೇ ಅವನು ತೇಲುತ್ತಿದ್ದಾಗಲೇ ಮೂತಿಯ ಮೇಲೆ ಏನೋ ಬಲವಾದದ್ದೊಂದು ಅಪ್ಪಳಿದಂತಾಗಿ ಅಲ್ಲಾಡಿ ಹೋದವನು ಸಾವರಿಸಿಕೊಂಡು ನಿಲ್ಲಲೂ ಆಗದೆ ನೆಲಕ್ಕೆ ಬಿದ್ದಿದ್ದ. ಸುತ್ತಲಿದ್ದವರಿಗೆ ಮತ್ತೆ ಅಚ್ಚರಿಯಾಗಿತ್ತು. ರಂಗಿ ಮುಷ್ಠಿ ಕಟ್ಟಿ ಅವನ ಮೂತಿಗೆ ಸಮಾ ಗುದ್ದಿದ್ದನ್ನು ಅವರೆಲ್ಲ ಕಂಡಿದ್ದರು. ಇದೆಲ್ಲಾ ಯಾವ ಕಾರಣದಿಂದಾಗಿ ನಡೆಯುತ್ತಿದೆ ಎಂಬುದು ಮಾತ್ರ ಅವರಿಗೆ ಹೊಳೆಯದೇ ಹಾಗೇ ಬಿಟ್ಟ ಕಣ್ಣು ಬಿಟ್ಟುಕೊಂಡು ನಿಂತರು. ಬಿದ್ದಿದ್ದನಲ್ಲ ಅವನು, ಅವನನ್ನೆತ್ತಿಕೊಂಡು ರಂಗಿ ಮತ್ತೆ ಮಾತಿಗೆ ಬಿದ್ದಳು. ಆಗಲೇ ರಕ್ತ ಸೋರುತ್ತಿದ್ದ ಮೂತಿಗೆ ಮತ್ತೆ ಪೆಟ್ಟು ಬಿದ್ದು ಚೀರಾಡಿಬಿಟ್ಟ. ಆದರೂ ಸಿಟ್ಟಿನಿಂದ ಅವನ ಮೊಣಕಾಲಿಗೇ ಒದ್ದು ಮತ್ತೆ ಕೆಡವಿದ್ದಳು. ಅವನ ಅಂಗಿ ಹಿಡಿದೆತ್ತಿ ಮತ್ತೆ ಮುಖಕ್ಕೇ ಗುದ್ದತೊಡಗಿದಳು. ಆ ಪೆಟ್ಟುಗಳ ರಿದಮ್ಮಿಗೆ ಅವನ ಮುಖ ಅನಾನಸಿನಂತಾಗಿ ಹೋದದ್ದನ್ನು ನೋಡಿದ ಜನರೇ ಅವಳ ಕೈಯಿಂದ ಅವನನ್ನು ಬಿಡಿಸಿದ್ದರು. ಅವನಿಂದ ಏನೋ ತಪ್ಪಾಗಿದೆ ಎಂಬುದು ಮಾತ್ರ ಎಲ್ಲರಿಗೂ ಮನವರಿಕೆಯಾಗಿತ್ತು. ತುಂಬಾ ಒತ್ತಾಯ ಮಾಡಿದ ಮೇಲೆ ತಿಳಿದದ್ದು ಅವನಿಂದಾದ ಘನಕಾರ್ಯ. ಆದರೆ ಆ ಹೆಂಗಸು ಯಾರೆಂಬುದನ್ನು ಮಾತ್ರ ಇವತ್ತಿಗೂ ಗುಟ್ಟಾಗಿಯೇ ಇಟ್ಟಿದ್ದಾಳೆ ರಂಗಿ.

ಅವಳು ಹಾಗೆ ಆ ಹೀನ ಗುಣದವನನ್ನು ಮಣಿಸಿದ ದಿನವೇ ಅವಳೆಂತಾ ಗಟ್ಟಿಗಿತ್ತಿ ಎಂಬುದು ಊರಿಗೂ ಗೊತ್ತಾಗಿದ್ದು. ಅವತ್ತು ಅವಳಿಂದ ಮುಖ ಅನಾನಸು ಮಾಡಿಸಿಕೊಂಡವ ಈಗ ಮದುವೆಯಾಗಿ ಎರಡು ಮಕ್ಕಳ ಅಪ್ಪ. ಇವಳನ್ನು ಕಂಡರೆ ಅಷ್ಟು ದೂರದಿಂದಲೇ ತಲೆ ತಗ್ಗಿಸಿಕೊಂಡು ಬರುತ್ತಾನೆ. ಛಾನ್ಸಿದ್ದರೆ ಅಲ್ಲೇ ಎಲ್ಲಿಂದಲಾದರೂ ನುಸುಳಿ ಮರೆಯಾಗಿಬಿಡುತ್ತಾನೆ.

ಇದೆಲ್ಲದರ ನಡುವೆಯೂ ರಂಗಿಯ ಅಂಗಡಿಯ ಜಗುಲಿಯಲ್ಲಿ ಊರ ಹೆಂಗಸರು ದಿನಕ್ಕೆರಡು ಸಲವಾದರೂ ಊರ ಸುದ್ದಿಗಳನ್ನೆಲ್ಲ ಎಳೆದಾಡಿಕೊಳ್ಳುತ್ತ ಪ್ರೀತಿಯಿಂದ, ತುಂಟತನದಿಂದ ಆರೈಸುವುದಿದೆಯಲ್ಲ, ಅದು ರಂಗಿಯ ಬಾಯಲ್ಲಿನ ಕವಳದ ರಂಗಿನಷ್ಟೇ ಚೆಂದ.

‍ಲೇಖಕರು avadhi

June 13, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಪಾಟುಗಳಲ್ಲಿ ಸಿಗುವ 'ಮೇಷ್ಟ್ರು'..

ಪಾಳ್ಯದ ಲಂಕೇಶಪ್ಪ, ‘ಮತ್ತೊಂದು ಮೌನ ಕಣಿವೆ’ ವಿದ್ಯಾರ್ಥಿ ಭವನದ ಮಸಾಲೆ ದೋಸೆ                                                      ...

2 ಪ್ರತಿಕ್ರಿಯೆಗಳು

  1. D S Naghabhushana

    ನೋಡಿದೆ, ಮುಂದೆಯೂ ನೋಡುವೆ, ಮತ್ತೆ ಬರೆಯುವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: