ಕಥೆ ಹುಟ್ಟಿತು ಹೀಗೆ…ದೇಶ ಕಾಲ ಮೀರಿ…

deshakala.jpgಕಥೆ ಅನ್ನೋದು ಎಲ್ಲಿ, ಹೇಗೆ, ಯಾವಾಗ ಅರಳುತ್ತೆ?. ಕಥೆ ಮೂಲಕ ಬದುಕು ಹುಡುಕೋದು ಹೇಗೆ? ಕಥೇನಲ್ಲಿ ಕಥೆಗಾರ ಅಡಗಿ ಕೂತಿರ್ತಾನಾ? ಹೀಗೆ ಕಥೆಯ ಲೋಕವನ್ನ ಬಿಚ್ಚಿಡೋ ಪ್ರಯತ್ನವನ್ನ ಈ ಬಾರಿಯ ‘ದೇಶಕಾಲ’ ಮಾಡಿದೆ. ವಿವೇಕ ಶಾನಬಾಗರ ಕನಸು ಈ ದೇಶ ಕಾಲ. ಇದರಲ್ಲಿ ಕೆ ವಿ ಅಕ್ಷರ ಸಮಯದ ಪರೀಕ್ಷೆ ನಡೆಸುತ್ತಾರೆ. ಈ ಬಾರಿಯ ‘ಸಮಯ ಪರೀಕ್ಷೆ’ ಕಥೆಗಳ ಬಗ್ಗೆ. ಇದರಲ್ಲಿ ಕಥೆ ಹೇಗೆ ಹುಟ್ಟುತ್ತೆ ಅನ್ನೋದರ ಬಗ್ಗೆ ವೆಂಕಟರಮಣ ಗೌಡ ಬರೆದಿರುವ ಒಂದು ಬರಹ ಇಲ್ಲಿದೆ.

img_1138.jpg

“ಚಂದಮಾಮ”ದ ಕಥೆಗಳು ರುಚಿಸುತ್ತಿದ್ದ ಕಾಲದಲ್ಲಿ ನನ್ನೆದುರು ಇನ್ನೂ ಕೆಲವು ಮಾದರಿಗಳಿದ್ದವು. ಒಂದು, ಅಕ್ಷರಸ್ಥನಲ್ಲದ ಅಜ್ಜ ಹೇಳುತ್ತಿದ್ದ ಕಥೆಗಳು. ಎರಡನೆಯದು, ಅಪ್ಪ ಹೇಳುತ್ತಿದ್ದ – ಕೊಂಚ ಓದಿನ ಪ್ರಭಾವವೂ ಸೇರಿಕೊಂಡಿದ್ದ ಕಥೆಗಳು. ಮತ್ತೂ ಒಂದು ಮಾದರಿಯಿತ್ತು. ಅದು, ದೇವಿ ಎಂಬ ಹೆಂಗಸು ಹೇಳುತ್ತಿದ್ದ ಕಥೆಗಳು.

ಅಜ್ಜ ಮತ್ತು ಅಪ್ಪ ಹೇಳುತ್ತಿದ್ದ ಕಥೆಗಳಿಗೆ ಒಂದು ಬಗೆಯ ಬಲಿತುಕೊಳ್ಳುವ ಶಕ್ತಿಯಿರುತ್ತಿತ್ತು. ತನ್ನ ಒಂದೇ ಒಂದು ಕೂದಲಿಂದ ಇನ್ನೇನು ಬಲವಾದ ಗಾಳಿಗೆ ಬಿದ್ದೇಹೋಯಿತು ಎನ್ನುವಂತಿದ್ದ ಮರವನ್ನು ನಿಲ್ಲಿಸಿದ ಹೆಂಗಸಿನ ಕಥೆಯನ್ನು ಅಜ್ಜ ಹೇಳುತ್ತಿದ್ದುದು ಇವತ್ತಿಗೂ ಕಣ್ಮುಂದಿದೆ. ಮತ್ತು ಅಂಥ ಹೆಂಗಸು ಒಂದು ಫ್ಯಾಂಟಸಿ ಎಂದುಕೊಳ್ಳಬೇಕೆನ್ನಿಸುವುದಿಲ್ಲ. ಅಜ್ಜ ಕಥೆ ಹೇಳುತ್ತಿದ್ದಾಗ ಅಂಥ ಹೆಂಗಸನ್ನು ಸ್ವತಃ ಕಂಡವನಂತೆ ಆತನ ಕಣ್ಣೊಳಗೆ ವಿಶ್ವಾಸ ಪ್ರಜ್ವಲಿಸುತ್ತಿತ್ತು. ಮತ್ತು ಅವನು ಅವಳ ಚಿತ್ರವನ್ನು ಎಂದೂ ನನ್ನ ಕಣ್ಣೊಳಗಿಂದ ಮಾಸಿಹೋಗದ ಹಾಗೆ ಕಟ್ಟಿದ್ದಾನೆ. ಅಜ್ಜನ ಕಥೆಗಳಲ್ಲಿ ಇನ್ನೂ ಒಂದು ವಿಶೇಷವಿತ್ತು. ಏನೆಂದರೆ, ನಿನ್ನೆ ಹೇಳಿದ ಕಥೆಯನ್ನೇ ಅಜ್ಜ ಇವತ್ತೂ ಹೇಳಿದ್ದರೆ ಕಥೆ ಸಾಗುವ ಬಗೆಯಲ್ಲಿ ಇವತ್ತಿನದೇ ಗುಣವಿರುತ್ತಿತ್ತು. ಕಡೆಕಡೆಗೆ ಅದು ಹೇಗೆ ಬೆಳೆದುಬಿಡುತ್ತಿತ್ತೆಂದರೆ, ಅದು ನಿನ್ನೆ ಹೇಳಿದ್ದ ಕಥೆಯಲ್ಲ ಎಂದೇ ನಾವೆಲ್ಲ ಅಂದುಕೊಳ್ಳುತ್ತಿದ್ದೆವು.

deshakala.jpgಅಪ್ಪನ ಕಥೆಗಳೂ ಅಜ್ಜ ಹೇಳುತ್ತಿದ್ದ ಕಥೆಗಳ ಮುಂದುವರಿದ ಭಾಗದಂತೆ ಕಾಣುತ್ತಿದ್ದವಾದರೂ, ಅವುಗಳಲ್ಲಿ ಇದ್ದಕ್ಕಿದ್ದಂತೆ ನಮ್ಮ ಸುತ್ತಲಿನದೇ ಗುಡ್ಡಬೆಟ್ಟ, ಹೊಳೆಹಳ್ಳಗಳಿತ್ಯಾದಿಯಾಗಿ ಪರಿಚಿತ ಸ್ಥಳವಿವರಗಳು ಸೇರಿಬಿಡುತ್ತ “ಅರೆ!” ಎನ್ನಿಸುವಂತೆ ಮಾಡುತ್ತಿದ್ದವು. ಅಜ್ಜನ ಕಥೆಗಳು ಇಲ್ಲಿಯದೇ ಯಾವುದೋ ಹಟ್ಟಿಯಿಂದ ಶುರುವಾದರೂ, ಮುಗಿಯುವ ಹೊತ್ತಿಗೆ ಯಾವುದೋ ಸಮುದ್ರದಾಚೆಗೆ ಅಥವಾ ಆಕಾಶದಷ್ಟು ಎತ್ತರದಲ್ಲಿ ಪ್ರಯಾಣ ಮಾಡುತ್ತಿದ್ದವು. ಅಪ್ಪನ ಕಥೆಗಳು ಇಲ್ಲೇ ಓಡಾಡಿಕೊಳ್ಳುತ್ತ, ನಾವು ಶಾಲೆಗೆ ಹೋಗುತ್ತಿದ್ದ ದಾರಿ, ನಮ್ಮ ಮಾಸ್ತರರು ನುಕ್ಕಿ ಸಳೆ ಹಿಡಿಯುತ್ತಿದ್ದ ಬಗೆ ಎಲ್ಲವೂ ಅಲ್ಲಿ ಕಾಣಿಸಿಕೊಳ್ಳುವುದು ಒಮ್ಮೊಮ್ಮೆ ಖುಷಿ ಕೊಡುತ್ತಿದ್ದರೂ, ಮತ್ತೆ ಅನೇಕ ಸಲ ಇವು ಕಥೆಯಲ್ಲ ಅನ್ನಿಸಿ ನಿರಾಸೆಯಾಗಿಬಿಡುತ್ತಿತ್ತು.

deshakala.jpgದೇವಿ ಇದ್ದಳು. ದಿನಬೆಳಗಾದರೆ ಸೊಸೆಯನ್ನು ಬೈಯುತ್ತ, ಮಗಳು ಮತ್ತು ಅಳಿಯನ ಜೊತೆ ಕಚ್ಚಾಡುವ ಹಾಗೆ ಜಗಳವಾಡುತ್ತ ಇರೋಳು. ಅವಳ ದಿನಚರಿಯೆಲ್ಲ ಹೀಗೆ ಬಾಯಿಹುಯ್ದುಕೊಳ್ಳೋದರಲ್ಲೇ ಕಳೆದುಹೋಗಿರೋದು. ಸಂಜೆ ನಾವು ಮಕ್ಕಳೆಲ್ಲ ಕಥೆಗಾಗಿ ಪೀಡಿಸಿದರೆ ಅವಳ ಬತ್ತಳಿಕೆಯಿಂದ ಕಥೆಗಳು ಒಂದೊಂದಾಗಿ ಹೊರಬರುತ್ತಿದ್ದವು. ಕಥೆಗಳನ್ನು ಹೇಳುತ್ತಿರುವಷ್ಟು ಹೊತ್ತು ದೇವಿಯಂಥ ಹೆಂಗಸೇ ಈ ಭೂಮಿಯ ಮೇಲೆ ಎಲ್ಲೂ ಸಿಗಲಾರಳೇನೋ ಎನ್ನಿಸುವುದು. ಅಷ್ಟು ಶಾಂತವಾಗಿ, ಪ್ರಸನ್ನ ಮನಸ್ಸಿನವಳಾಗಿ ಇರುತ್ತಿದ್ದಳು. ಅವಳ ಕಥೆಗಳಲ್ಲಿ ಎಲ್ಲರೂ ಸುಖವಾಗಿರುತ್ತಿದ್ದರು. ಕಥೆಗಳ ಗುಂಗಿನಿಂದ ಹೊರಬಂದಳು ಅಂದರೆ ಸಾಕು, ಮತ್ತೆ ಅವಳ “ಬಾಯಿ” ಶುರುವಾಗುವುದು. ಎಲ್ಲಾ ಸುಖವಾಗಿದ್ದಾರೆ, ದೇವಿಗೆ ಮಾತ್ರ ಕಷ್ಟ ಅಂತನ್ನಿಸುತ್ತಿತ್ತು ಆಗ ನಮಗೆ.

deshakala.jpgಅಜ್ಜ, ಅಪ್ಪ ಮತ್ತು ದೇವಿಯ ಕಥೆಗಳ ಲೋಕ ಯಾವತ್ತೂ ನನ್ನನ್ನು ಕಾಡುತ್ತದೆ. ಅವರ ಕಥೆಗಳ ಜೊತೆಗೇ ಅವರ ದೈನಂದಿನ ತಳಮಳಗಳನ್ನೂ ಕಾಣುವುದು ಸಾಧ್ಯವಿತ್ತೆಂಬ ಕಾರಣದಿಂದಲೇ ಆ ಕಥೆಗಳು ನನ್ನೊಳಗೆ ಜೀವ ಮಿಡಿಯುತ್ತಿವೆ ಅನ್ನಿಸುತ್ತದೆ. ಕಥೆಯನ್ನು, ಅದನ್ನು ಹೇಳುವವನ ಲೋಕದಿಂದ ಬೇರ್ಪಡಿಸಿ ನೋಡುವುದು ನನಗೆ ಕಷ್ಟವಾಗುತ್ತದೆ. ಈ ಕಾರಣದಿಂದಲೂ, ಮೇಲಿನ ಮೂರೂ ಮಾದರಿಯ ಕಥೆಗಳನ್ನು ನಾನು ಕಾಲಕಾಲಕ್ಕೆ ನನ್ನೊಳಗೆ ಕೇಳಿಸಿಕೊಳ್ಳುತ್ತ, ಅವುಗಳ ಧೂಳು ಒರೆಸುವುದರಲ್ಲಿ ಎಂಥದೋ ತೃಪ್ತಿ ಕಾಣುತ್ತ ಬಂದಿದ್ದೇನೆ.

deshakala.jpgಕೇಳಿಸಿಕೊಳ್ಳುವ ಕಥೆಗಳು ಮತ್ತು ಓದಿಸಿಕೊಳ್ಳುವ ಕಥೆಗಳ ನಡುವಿನ ಅಂತರ ದೊಡ್ಡದು ಎನ್ನಿಸುವ ಹೊತ್ತಿಗೆ ನಾನು ಕಥೆಗಳ ಕಾಡಲ್ಲಿ ಜಿಗ್ಗು ಹೆಕ್ಕಲು ಶುರುಮಾಡಿದ್ದೆ. ಕಥೆಗಳ ಸಹವಾಸದಲ್ಲಿ, ಕಾಲದ ಅರಿವು ಮತ್ತು ಮರೆವು -ಇವೆರಡರ ನಡುವಿನ ಘರ್ಷಣೆ ಕೂಡ ಕಾಣತೊಡಗಿತು. ಮತ್ತಿದು ಸಂಬಂಧದ ಆಂತರ್ಯದಲ್ಲಿ ಹುಟ್ಟಿಸುವ ಸೆಳಕುಗಳು ಕಾಡಿದವು. ನನಗೆ ಈ ಕಾಲದ ಕಥೆಗಳನ್ನು ಕಾಣುವುದೆಂದರೆ ಹಿಂದಿನ ಕಾಲದ ಕಥೆಗಳನ್ನು, ಅದರ ನಡೆಯನ್ನು ಗ್ರಹಿಸುವುದು ಎಂದೇ ಎಷ್ಟೋ ಸಲ ಅನ್ನಿಸುತ್ತದೆ. ನಾನು ಕಥೆ ಬರೆಯಲು ಶುರು ಮಾಡಿದ ಮೇಲೆ ನನ್ನನ್ನು ತುಂಬ ಅಭಿಮಾನದಿಂದ ಕಂಡ ಅಕ್ಷರ ಗೊತ್ತಿಲ್ಲದವಳಾಗಿದ್ದ ಅಮ್ಮ ನೆನಪಾಗುತ್ತಾಳೆ. ಮತ್ತು ನನ್ನನ್ನು ಏನೋ ದೊಡ್ಡ ಮನುಷ್ಯ ಎಂಬಂತೆ ಅಮ್ಮ ನೋಡತೊಡಗಿದಳೆಂಬುದು ಇವತ್ತಿಗೂ ನೋವಿನ ಸಂಗತಿಯಾಗಿದೆ. ಇದೀಗ ನಾನು ಆ ಅವ್ವನ ಮನಃಸ್ಥಿತಿಯನ್ನೂ ಗುರುತಿಸಿಕೊಳ್ಳಬೇಕಿದೆ. ಅವಳ ನೋವೇನಿತ್ತೊ?

deshakala.jpgಓದಿನ ದಿನಗಳಲ್ಲಿ ಗುರುತಾದ ಗೆಳೆಯನೊಬ್ಬ ವಿಚಿತ್ರ ಶಿಸ್ತಿನವನಾಗಿದ್ದ. ಅದೊಂದು ಗೀಳೆಂಬಂಥ ಶಿಸ್ತು. ಆತ ತನ್ನ ಹೊದಿಕೆಯ ಒಂದು ಅಂಚಿನಲ್ಲಿ ಸಣ್ಣದೊಂದು ಗಂಟು ಹಾಕಿಟ್ಟಿದ್ದ. ತಲೆಯ ಕಡೆ ಬರುವ ಅಂಚು ಅದು. ಎಲ್ಲಿಯಾದರೂ ತಪ್ಪಿ ಕಾಲಿನ ಕಡೆಯ ಅಂಚು ತಲೆಯ ಕಡೆ ಬಂದೀತು ಎಂಬುದು ಅವನ ಆತಂಕವಾಗಿತ್ತು. ಅದನ್ನು ತಪ್ಪಿಸಲೆಂದೇ ಆ ಗಂಟಿನ ಮೊರೆಹೋಗಿದ್ದ. ಆದರೆ ಗೆಳೆಯರು ಒಂದಿನ ತಮಾಷೆಗೆ ಆ ಗಂಟನ್ನು ಬಿಚ್ಚಿ ಅದರ ಗುರುತನ್ನೇ ಅಳಿಸಿಬಿಟ್ಟಿದ್ದರು. ಮಲಗುವಾಗ ಹೊದಿಕೆಯ ಗಂಟು ಹುಡುಕಿ ಕಾಣದೆ ಆತ ಕಂಗಾಲಾಗಿದ್ದ. ಆತ ಎಷ್ಟು ಚಡಪಡಿಸಿದನೆಂದರೆ ಅವತ್ತು ನಿದ್ರೆಯನ್ನೇ ಬಿಟ್ಟ. ಮಾರನೇ ದಿನ ಅದನ್ನು ತೊಳೆದು ಮತ್ತೆ ಅದರ ಒಂದು ಕೊನೆಯಲ್ಲಿ ಗಂಟು ಹಾಕುವವರೆಗೂ ಆತ ನಿದ್ರೆ ಮಾಡಲಿಲ್ಲ. ಇಂಥ ಹಲವಾರು ಕದಲಿಕೆಗಳ ಕುರಿತು, ಕಳವಳಗಳ ಕುರಿತು ಹೇಳುವ ತುಡಿತವೇ ನನ್ನ ಕಥೆಗಳ ದಾರಿ. ಇವನ್ನು ಹೇಳದಿದ್ದರೆ ನಾನು ನನಗೆ ಗೊತ್ತಿರುವ ಹಲವು ಗುಟ್ಟುಗಳಿಗೆ ಅಪಚಾರ ಎಸಗಿದಂತಾದೀತೇನೋ ಎಂಬ ಆತಂಕವಷ್ಟೆ ನನ್ನ ಕಥೆಗಳ ಕಾರಣವಾಗಿದೆ.

‍ಲೇಖಕರು avadhi

January 21, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

  1. Vadi Narasimha

    Nice blog. keep writing. Do you know if this book available in USA for buying ?

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Vadi NarasimhaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: