fbpx

ಹೋಳಿ ಹುಣ್ಣಿಮಿ ಚಹಾ..

 

 

 

 

ಗೀತಾ ಹೆಗ್ಡೆ ಕಲ್ಮನೆ 

 

 

 

 

ಇದೇನಿದು ಈ ಚಹಾಕ್ಕೂ ಹೋಳಿ ಹುಣ್ಣಿಮೆಗೂ ಏನು ನಂಟು ಅಂದುಕೊಂಡ್ರಾ?

ನನಗೂ ಇಷ್ಟು ದಿನ ನೆನಪೇ ಆಗಿರಲಿಲ್ಲ. ಬೆಳಿಗ್ಗೆ ಮಾಮೂಲಿ ‘ಅವಧಿ’ಯ ಪರದೆ ಸರಿಸಿದಾಗ ಮತ್ತೆ ಕಂಡೆ ಚಹಾದ ಬರಹ. ಅಯ್ಯೋ! ಇನ್ನೂ ಮುಗಿದಿಲ್ಲ ಈ ಚಹಾದ ಗಲಾಟೆ ; ಪರವಾಗಿಲ್ವೆ! ಎಲ್ಲರ ಮನವನ್ನೂ ತಟ್ಟಿ ತಟ್ಟಿ ಎಬ್ಬಿಸ್ತಾ ಇದೆ. ಜೇನು ಗೂಡಿಗೆ ಕಲ್ಲು ಒಗೆದಂತೆ! ಹಾಗೆ ನನಗೂ ಆಯ್ತು ಇವತ್ತು.

1982ರ ಆಸುಪಾಸು. ನಾನು ಸಿರ್ಸಿಯಲ್ಲಿ ಕೆಲಸ ಮಾಡುತ್ತಿರುವ ಸಮಯ. ಬ್ಯಾಂಕಿನಲ್ಲಿ ಇರುವವರೆಲ್ಲ ಗಂಡಸರು. ನಾನೊಬ್ಬಳೆ ಹೊಸದಾಗಿ ಸೇರಿರೊ ಹೆಣ್ಣು. ಅಲ್ಲಿ ಈ ಹೋಳಿ ಹುಣ್ಣಿಮೆ ಬಂತೆಂದರೆ ಗಂಡಸರು ಮಕ್ಕಳು ಬೀದಿಗೆ ಬರುವಂತಿಲ್ಲ. ಗ್ಯಾರಂಟಿ ಮುಖಕ್ಕೆ ಬಣ್ಣ ಹಚ್ಚೋದು, ಓಡಿದರೆ ರಪ್ ಅಂತ ಹಿಂದಿನಿಂದ ಬಣ್ಣ ಎರಚೋದು. ಏನಂದರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಅದೂ ಆ ದಿನ ಬೆಳಗಿನ ಆರು ಗಂಟೆಯಿಂದ ಸಾಯಂಕಾಲ ಆರು ಗಂಟೆಯವರೆಗೆ ಬಣ್ಣ ಎರಚುವ ಆಟ ಶುರು. ಇದು ಶುರುವಾಗುವುದು ಮೊದಲು ಅಲ್ಲಿಯ ಮಾರಿಗುಡಿ ಗಲ್ಲಿ, ಸಿಂಪಿಗರ ಗಲ್ಲಿ, ಸಿಪಿ ಬಜಾರ್, ಐದು ರಸ್ತೆ ಸರ್ಕಲ್, ಚಮಗಾರ್ ಗಲ್ಲಿ ಇಂತಹ ಹೆಚ್ಚಿನ ಜನ ಸಂಚಾರವಿರುವ ಪೇಟೆಯ ಮಧ್ಯದಲ್ಲಿ. ಅದರಲ್ಲೂ ಮಾರಿಗುಡಿ ಗಲ್ಲಿಯಲ್ಲಿ ಇನ್ನೂ ಜಾಸ್ತಿ.

ನಮ್ಮ ಬ್ಯಾಂಕಿರುವುದು ಸಿಪಿ ಬಜಾರಿನ ಕೊನೆಯಲ್ಲಿ. ಬ್ಯಾಂಕಿಗೆ ಬರುವ ಸಿಬ್ಬಂದಿ ಎಲ್ಲರೂ ಈ ರಸ್ತೆಯಲ್ಲಿ ಬರಲೇ ಬೇಕು. ಬರುವಾಗ ಸುತ್ತಿ ಬಳಸಿ ಯಾವುದೊ ಹಳೆ ಡ್ರೆಸ್ ಹಾಕಿಕೊಂಡು ಬರುತ್ತಿದ್ದರು. ಆದರೆ ಊಟ ತಿಂಡಿಗೆ ಚಾ ಕುಡಿಯೋದು ಎಲ್ಲ ಹೇಗೆ?, ಮನೆಯಿಂದ ಹೊರಡುವಾಗ ಕುಡಿದಿದ್ದರೂ ದಿನದಲ್ಲಿ ಯಾವಾಗ ಬೇಕು ಅಂದರೆ ಆಗ ಚಾ ಕುಡಿಯುವ ಅಭ್ಯಾಸ ಎಲ್ಲಿ ಕೇಳುತ್ತೆ? ಅದರಲ್ಲೂ ಈ ಚಾ ಚಟ ಹತ್ತಿಸಿಕೊಂಡವರಿಗೆ ಗೊತ್ತು. ನಾನೂ ಕೂಡ ಈ ಚಹಾದ ಮಹಿಮೆಗೆ ಆಗಲೇ ಮರುಳಾಗಿದ್ದೆ.

ತಿಂಡಿಗೆ ಲಂಗಣ ಆ ದಿನ ಮನೆಯಲ್ಲಿ. ಅವರಿಗೆಲ್ಲ. ಅಷ್ಟು ಬೆಳಿಗ್ಗೆ ಮಾಡೋಕೂ ಆಗೋಲ್ಲ, ತಿನ್ನೋದಕ್ಕೂ ಆಗೋಲ್ಲ. ಆಮೇಲೆ ಬ್ಯಾಂಕಲ್ಲಿ ಹೊಟ್ಟೆ ತಾಳ ಹಾಕಲು ಶುರು. ಪಾಪ! ಅವರ ಅವಸ್ಥೆ.

ನಾನೋ ಹೊಸದಾಗಿ ಕೆಲಸಕ್ಕೆ ಸೇರಿದವಳು. ಮೂರು ನಾಲ್ಕು ತಿಂಗಳಾಗಿರಬಹುದು. ಯಾರೊಂದಿಗೂ ಅಷ್ಟು ಆತ್ಮೀಯತೆ ಬೆಳೆದಿರಲಿಲ್ಲ. ಯಾರೊಂದಿಗೂ ಅಷ್ಟೊಂದು ಮಾತನಾಡದೆ ಕೆಲಸ ಕಲಿಯುವತ್ತ ನನ್ನ ಗಮನ.

ಈ ಹೋಳಿ ಹುಣ್ಣಿಮೆ ದಿನ ಬ್ಯಾಂಕಿಗೆ ಹೋದಾಗ ಇವರೆಲ್ಲ ಒಳಗೊಳಗೆ ಪಿಸು ಪಿಸು ಮಾತಾಡೋದು, ನನ್ನ ಕಡೆ ನೋಡೋದು. ನಾನು ಆರಾಮಾಗಿ ಬ್ಯಾಂಕ್ ಟೈಮಿಗೆ ಸರಿಯಾಗಿ ಹಾಜರಾಗಿದ್ದೆ. ನನಗೆ ಏನು ಎತ್ತ ಏನೂ ಗೊತ್ತಿಲ್ಲ. ಒಂಥರಾ ಇರುಸು ಮುರುಸು. ಏನಾಗಿದೆ ನನಗೆ? ಯಾಕೆ ಎಲ್ಲರೂ ನನ್ನ ಕಡೆ ನೋಡ್ತಾರೆ? ನನ್ನ ಡ್ರೆಸ್ ಸರಿಗಿಲ್ಲವೆ? (ಆಗಷ್ಟೆ ಸೀರೆ ಉಡೋದು ಕಲಿತಿದ್ದೆ. ಸೀರೆಯಲ್ಲೆ ಬ್ಯಾಂಕಿಗೆ ಹೋಗಬೇಕಂತ ಆಗಿನ ನನ್ನ ಅನಿಸಿಕೆ) ಕೆಲಸದ ಕಡೆ ಗಮನ ಇಡೋಕೆ ಆಗ್ತಿಲ್ಲ.

ಒಬ್ಬರು ಹೇಳಿದರು ನಿಧಾನವಾಗಿ “ಬಾಯೋರೆ ನಿಮ್ಮದೆ ಚಾನ್ಸ”

“ಅರೆ! ಯಾಕ್ರೀ.. ಹೀಗಂತೀರಾ?”

ಇನ್ನೊಬ್ಬರು “ಏನಿಲ್ಲಾ ಇವತ್ತು ಹೋಳಿ ಹುಣ್ಣಿಮೆ ಅಲ್ವಾ? ಅದಕ್ಕೆ ಹೇಳಿದ್ದು.”

ಆಗ ನನಗೆ ಫ್ಲ್ಯಾಷ್ ಆಯಿತು. “ಸರಿ ಹೇಳಿ ಏನಾದರೂ ಹೊರಗಡೆಯಿಂದ ತಂದುಕೊಡಬೇಕಾ? ” ಏಕೆಂದರೆ ಅಲ್ಲಿ ಹೆಣ್ಣಿಗೆ ಯಾರೂ ಬಣ್ಣ ಹಚ್ಚುತ್ತಿರಲಿಲ್ಲ. ಅಟ್ಟಿಸಿಕೊಂಡು ಬರುತ್ತಿರಲಿಲ್ಲ.

ಆಗ ಎಲ್ಲರ ಮುಖದಲ್ಲಿ ಸ್ವಲ್ಪ ಕಳೆ ಕಟ್ಟೋಕೆ ಶುರುವಾಯಿತು. ನಿಸ್ಸಂಕೋಶವಾಗಿ ತಮಗೆ ಏನೇನು ತಿಂಡಿ ಬೇಕು ಎಲ್ಲ ವರದಿ ಒಪ್ಪಿಸಿದರು. ಅಷ್ಟರಲ್ಲಿ ನಾಲ್ಕನೇ ದರ್ಜೆ ಗುಮಾಸ್ತರೊಬ್ಬರು ದೊಡ್ಡದಾದ ಫ್ಲಾಸ್ಕ ಹಿಡಕೊಂಡು ಬಂದು “ಬಾಯೋರೆ ನಾನು ಇವತ್ತು ಚಾ ಕುಡದೆ ಇಲ್ಲ. ದಯವಿಟ್ಟು ತರೋಕಾಗುತ್ತಾ, ನನಗೆ ತಿಂಡಿ ಏನು ಬೇಡ ಆಯ್ತಾ? ಅದೊಂದಿದ್ದರೆ ಸಾಕು”

ನಿಜಕ್ಕೂ ಆ ದಿನ ಅವರ ಮಾತು ಕೇಳಿ ಪಾಪ ಅನಿಸಿತ್ತು. ನಿತ್ಯ ಮೂರೊತ್ತೂ ಚಾ ತರುವವರು ಅವರೆ ಆಗಿದ್ದು, ನಮಗೆಲ್ಲ ಚಹಾದ ದಾಹ ತೀರಿಸುತ್ತಿದ್ದದ್ದು.!! ಉಳಿದವರೂ ಅವರೊಂದಿಗೆ ಧ್ವನಿ ಗೂಡಿಸಿದರು “ಹೌದು ಮಾರಾಯಾ, ಚಾ ಇಲ್ಲ ಅಂದರೆ ತಲೆನೆ ಓಡೋದಿಲ್ಲ. ಬಾಯೋರೆ ಬಿಸಿ ಬಿಸಿ ಕೇಟಿ ಹಾಕಿಸಿಕೊಂಡು ಬನ್ನಿ ಆಯ್ತಾ?”

ಇಷ್ಟೊಂದು ಜನರಿಗೆ ನಾನೊಬ್ಬಳೆ ಹೇಗೆ ತರೋದು ಮನಸಲ್ಲಿ ಗುಣಾಕಾರ, ಭಾಗಾಕಾರ ಆಗಲೆ ಶುರುವಾಯಿತು. ಅದಕ್ಕೆ ನಮ್ಮ ಮ್ಯಾನೇಜರ್ “ನೀವೇನೊ ಯೋಚಿಸಿರುವಂತಿದೆ. ಒಂದು ಕೆಲಸ ಮಾಡಿ ಬ್ಯಾಂಕಿನ ಬಾಗಿಲವರೆಗೆ ಒಂದೊಂದೆ ಕಟ್ಟಿಸಿಕೊಂಡು ಬನ್ನಿ, ಮೇಲ್ಗಡೆ ನಾವು ತಂದುಕೊಳ್ಳುತ್ತೇವೆ. ಮತ್ತೆ ಈ ದಿನ ಆರಾಮಾಗಿರಿ ಆಯ್ತಾ? ಕೆಲಸ ಮಾಡಬೇಡಿ.” ನನಗೆ ಫುಲ್ ಡಿಮಾಂಡು,ಕನ್ಸೀಷನ್. ಕೇಳಬೇಕಾ?

ಹತ್ತಿರದಲ್ಲೆ ಇರುವ ಹೊಟೆಲ್ ನಿಂದ ಅವರಿಗೆ ಬೇಕಾಗಿದ್ದು ತಂದುಕೊಡುತ್ತಿದ್ದೆ. ಜೊತೆಗೆ ಪಾನ್ಬೀಡಾ ಬೇರೆ ಕಟ್ಟಿಸಿಕೊಂಡು ಬಂದಿದ್ದೆ. ಅವರೆಲ್ಲ ಇದರ ಚಟ ಕೂಡಾ ಬೆಳೆಸಿಕೊಂಡವರಾಗಿದ್ದರು. ಅದೂ ಜರದಾ ಹಾಕಿದ್ದು.

ಹೀಗೆ ಬೆಳೆದ ಆತ್ಮೀಯತೆಗೆ ಮೂಲ ಕಾರಣ ಈ ಚಹಾ. ಮುಂದಿನ ದಿನಗಳಲ್ಲಿ ಅದು ಆಫೀಸಲ್ಲ, ನನ್ನ ಮನೆ, ಅವರೆಲ್ಲ ನನ್ನ ಒಡ ಹುಟ್ಟಿದವರು ಅನ್ನುವ ಭಾವನೆ ಅಲ್ಲಿ ಇರುವಷ್ಟೂ ದಿನ. ನಾನು ಅಲ್ಲಿರುವ ಮೂರು ವರ್ಷವೂ ಈ ಹೋಳಿ ಹುಣ್ಣಿಮೆ ದಿನ ಚಾಯ್ ವಾಲಾ ಆಗಿದ್ದೆ. ಅವರೆಲ್ಲರ ಅಭಿಮಾನಿ ನೌಕರಳಾಗಿದ್ದೆ. ಆಗಿನ ದಿನಮಾನದಲ್ಲಿ ಈಗಿನಂತೆ ಕೆಲವು ಅಗತ್ಯಗಳು ದೊರೆಯುತ್ತಿರಲಿಲ್ಲ. ಅನಿವಾರ್ಯತೆಯನರಿತು ನಾನಂದು ಮಾಡಿದ ಕೆಲಸ ಇಂದಿಗೂ ನೆನಪಿಸಿಕೊಂಡು ಖುಷಿ ಪಡುತ್ತೇನೆ.

ನಂತರ ಅಲ್ಲಿಂದ ವರ್ಗಾವಣೆ ಆದಾಗ ಅಳುತ್ತ ಹೊರಟಿದ್ದೆ. ಎಲ್ಲರ ಕಣ್ಣಲ್ಲೂ ನೀರು ತುಂಬಿತ್ತು. ಒಂದು ಊಟದ ತಟ್ಟೆಯಲ್ಲಿ ಒಂದಷ್ಟು ಹಣವಿಟ್ಟು ಚಹಾ ಪಾರ್ಟಿ ಮಾಡಿ ನನ್ನನ್ನು ಪ್ರೀತಿಯಿಂದ ಬೀಳ್ಕೊಟ್ಟಿದ್ದರು. ನನ್ನ ಕೆಲಸ ಖಾಯಂ ಆದ ಖುಷಿ ನನಗೆ, ಈ ಶಾಖೆಯನ್ನು ಬಿಟ್ಟು ಹೋಗುವ ದುಃಖದೊಂದಿಗೆ.

ಹೋಗುವಾಗ ಒಬ್ಬರಂದರು “ಬಾಯೋರೆ ತಿಂಗಳು ತಿಂಗಳು ಸಂಬಳ ಬಂದ ಮೇಲೆ ನನ್ನ ಖಾತೆಗೆ ಚಹಾ ಕುಡಿಲಿಕ್ಕೆ ಹಣ ಕಳಿಸಿ, ನಿಮ್ಮ ಹೆಸರಲ್ಲಿ ಕೇಟಿ ಕುಡಿತೀವಿ.” ನಗುತ್ತ ಹೊರಟಿದ್ದೆ ಅವರ ಮಾತು ಕೇಳಿ.

3 Responses

  1. Eshtu chennagi baredididdeerall? Ishtawaytu.

  2. ಬರಹ ಓದಿ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ಧನ್ಯವಾದಗಳು ಸರ್

Leave a Reply

%d bloggers like this: