fbpx

ಕುತೂಹಲ ಬೆನ್ನತ್ತಿದ ನಾಗೇಶ ಹೆಗಡೆ ಸರ್..

ಕುತೂಹಲ ಬೆನ್ನತ್ತಿ ನಾಗೇಶ ಹೆಗಡೆ ಸರ್ ಮನೆಗೆ ಬಂದ ದಿನ…..

ರಾಹುಲ ಬೆಳಗಲಿ

2005ರ ಆಸುಪಾಸು. ಪ್ರಜಾವಾಣಿ ಇನ್ನೂ ಸೇರಿರದ ದಿನಗಳು. ಕನ್ನಡ ಮತ್ತು ಇಂಗ್ಲಿಷ್ ಲೇಖನ ಬರೆದು ಪತ್ರಿಕೆಗಳಿಗೆ ಇ-ಮೇಲ್ ಮತ್ತು ಅಂಚೆ ಮೂಲಕ ಕಳುಹಿಸುವ ಭರ್ಜರಿ ಉಮೇದು. ಹೇಗಾದರೂ ಮಾಡಿ, ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ಲೇಖನ ಪ್ರಕಟವಾಗಬೇಕು ಎಂಬ ಬಯಕೆ. ಪುರವಣಿಗೆ ತಕ್ಕಂತೆ ವಿಷಯ ಹಲವು ಇದ್ದವು. ಆದರೆ ಪ್ರಕಟವಾಗುವ ರೀತಿಯಲ್ಲಿ ಸಮಗ್ರ ಅಂಕಿ, ಆಂಶ ಆಧರಿಸಿ ಬರೆಯುವುದೇ ದೊಡ್ಡ ಸವಾಲು.

ಅಂತೂ ಇಂತೂ ವಿಷಯವೊಂದನ್ನು ಆಯ್ಕೆ ಮಾಡಿಕೊಂಡೆ. ಕ್ರಿಕೆಟಿಗರು ಸೇರಿದಂತೆ ಖ್ಯಾತನಾಮರು ಕುಡಿಯಲು ಪ್ರೋತ್ಸಾಹಿಸುವ ತಂಪು ಪಾನೀಯ ಆರೋಗ್ಯದ ಮೇಲೆ ಯಾವುದೆಲ್ಲ‌ ಸ್ವರೂಪದಲ್ಲಿ ಧಕ್ಕೆ ಉಂಟು ಮಾಡುತ್ತೆ ಮತ್ತು ಅದು ಅದರ ಬಳಕೆ ಯಾವುದಕ್ಕೆ ಹೆಚ್ಚು ಸೂಕ್ತ ಎಂಬ ವಿಷಯ ಆಧರಿಸಿ ಲೇಖನವೊಂದು ಸಿದ್ಧಪಡಿಸಿ ಪ್ರಜಾವಾಣಿ ಕಚೇರಿಗೆ ಅಂಚೆ ಮೂಲಕ ಕಳುಹಿಸಿದೆ. ಎರಡು ವಾರವಾದರೂ ಪ್ರಕಟವಾಗಲಿಲ್ಲ. ಲೇಖನ ತಿರಸ್ಕೃತಗೊಂಡ ಬಗ್ಗೆ ಮಾಹಿತಿಯು‌ ಸಿಗಲಿಲ್ಲ.

ಆದರೆ ದಿಢೀರನೇ ಒಂದು ದಿನ‌ ಮುಂಜಾನೆ 8ರ ಸುಮಾರಿಗೆ ಮನೆ ಬಾಗಿಲು ಬಡಿದ ಸದ್ದು. ಬಾಗಿಲು ತೆರೆದರೆ, ಹಿರಿಯ ವ್ಯಕ್ತಿಯೊಬ್ಬರು ನಗುಮೊಗದಲ್ಲಿ ನಮಸ್ಕಾರ ಎಂದರು. ನನಗೋ ಗೊಂದಲ ಮತ್ತು ಅಚ್ಚರಿ ಜೊತೆಜೊತೆಗೆ. ಅವರನ್ನು ಒಳಬನ್ನಿ ಎಂದು ಎರಡು-ಮೂರು ಬಾರಿ ಕರೆದೆ. ಬಾಯಲ್ಲಿ ಹೆಸರು ಇದ್ದರೂ ಮನೆಯವರಿಗೆಲ್ಲ ಕೂಗಿ ಹೇಳಲು ಆಗದ ಸ್ಥಿತಿ. ಯಾರು ಬಂದಿದ್ದಾರೆಂದು ಬಾಗಿಲು ಬಳಿ ಬಂದ ತಂದೆಯವರು, ‘ಬನ್ನಿ ಸರ್ ಬನ್ನಿ’ಎಂದರು.

ನಗುತ್ತ ಮನೆಯೊಳಗೆ ಪ್ರವೇಶಿಸಿದ ಅವರು ಕೇಳಿದ್ದು ಮೊದಲನೇ ಪ್ರಶ್ನೆ: ನಿಮ್ಮಿಬ್ಬರಲ್ಲಿ ರಾಹುಲ ಬೆಳಗಲಿ ಯಾರು?. ತಡ ಮಾಡದೇ ನಾನೇ ಎಂದು‌ ಪರಿಚಯಿಸಿಕೊಂಡೆ. ಎರಡನೇ ಪ್ರಶ್ನೆ: ತಂಪು ಪಾನೀಯ ಕುರಿತು ಮಾಹಿತಿ ಎಲ್ಲಿಂದ ಸಿಕ್ತು? ಇಂಗ್ಲಿಷ್ ಪತ್ರಿಕೆಯೊಂದರ ಲೇಖನ ಮತ್ತು ಅಂತರ್ಜಾಲದಿಂದ ದೊರೆತ ಮಾಹಿತಿ ಆಧರಿಸಿ ಬರೆದಿದ್ದನ್ನು ತಿಳಿಸಿದೆ.

‘ಲೇಖನ ಚೆನ್ನಾಗಿದೆ. ಆದರೆ ಅದಕ್ಕೆ ಇನ್ನೂ ಖಚಿತ ಮಾಹಿತಿ ಸೇರಿಸಿ, ಇನ್ನಷ್ಟು ಉತ್ತಮ ಪಡಿಸಬಹುದು’ ಎಂದು ಸಲಹೆ ನೀಡಿದರು. ತಾವು ಮನೆಗೆ ಬಂದಿದ್ದು ನಮಗೆಲ್ಲ ಖುಷಿ ತಂದಿತೆಂದು ಹೇಳಿದೆವು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಿಮ್ಮನ್ನೆಲ್ಲ ನೋಡಿ ಖುಷಿಯಾಯಿತು. ಮನೆಗೆ ಬರುವ ಉದ್ದೇಶ ಇರಲಿಲ್ಲ. ನಮ್ಮನೆಯೂ ಇಲ್ಲೇ ಸಮೀಪದಲ್ಲಿದೆ. ಆದರೆ ಕಾಗದದಲ್ಲಿ ಲೇಖನದ ಅಕ್ಷರಗಳ ತುಂಬಾ ದುಂಡಾಗಿದ್ದವು ಮತ್ತು ತಪ್ಪುಗಳು ಹೆಚ್ಚಿರಲಿಲ್ಲ. ಬೆಂಗಳೂರಿನಲ್ಲಿ ಸ್ಪಷ್ಟ ಮತ್ತು ಸುಂದರ ರೀತಿಯಲ್ಲಿ ಕನ್ನಡ ಬರೆಯುವವರು ಸಿಗುವುದೇ ಅಪರೂಪ. ಅವರು ಯಾರೆಂದು ನೋಡುವ ಕುತೂಹಲದಿಂದ ಮನೆಗೆ ಬರಬೇಕಾಯಿತು’ ಎಂದರು. ಲೇಖನಕ್ಕೆ ಇನ್ನಷ್ಟು ಮಾಹಿತಿ ನೀಡಲು ಮತ್ತು ಇನ್ನೂ ಸರಳವಾಗಿ ಬರೆಯಲು ತಿಳಿಸಿದರು. ಅವರು ಹೇಳಿದಂತೆಯೇ ಬರೆದೆ. ಕೆಲವೇ ದಿನಗಳಲ್ಲಿ ಕರ್ನಾಟಕ ದರ್ಶನದಲ್ಲಿ ಲೇಖನ ‘ಇದುವೇ ಕೋಲಾ ರಹಸ್ಯ’ ಎಂಬ ತಲೆಬರಹದೊಂದಿತುಂ ಪ್ರಕಟವಾದಾಗ, ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ.

ಬೆಂಗಳೂರಿನ ಬಿಟಿಎಂ ಲೇಔಟನಲ್ಲಿರುವ ಮನೆಗೆ ಕುತೂಹಲದಿಂದ ಬಂದವರು ಹಿರಿಯರಾದ ನಾಗೇಶ ಹೆಗಡೆ ಸರ್. ಪ್ರಜಾವಾಣಿ ಸೇರಿದ ನಂತರವು ಮತ್ತು ಅದಕ್ಕೆ ಮುನ್ನವೂ ಅವರ ನಿರಂತರ ಮಾರ್ಗದರ್ಶನ ದೊರೆಯಿತು. ಪತ್ರಕರ್ತರಿಗೆ ‘ಕುತೂಹಲ’ ಎಂಬುದು ಯಾಕೆ ಅಗತ್ಯ ಮತ್ತು ಅನಿವಾರ್ಯ ಎಂಬುದು ಅವರು ಸ್ವಯಂ ಪ್ರಯೋಗಾತ್ಮಕವಾಗಿ ತೋರಿಸಿಕೊಟ್ಟರು. ಕುತೂಹಲ ಎಂಬುದು ಇರದಿದ್ದರೆ, ಎಷ್ಟೆಲ್ಲ ನಷ್ಟ ಆಗುತ್ತದೆ ಎಂಬುದು ಅವರು ಈಗಲೂ ಅವರು ಬರಹ ಮತ್ತು ಮಾತುಗಳ ಮೂಲಕ‌ ಹೇಳುತ್ತಲೇ ಇದ್ದಾರೆ. ಅವರಿಂದ ಹಲವು ವಿಷಯ ಕಲಿತಿದ್ದೇನೆ. ಇನ್ನಷ್ಟು ಕಲಿಯಬೇಕಿದೆ.

ಸರ್, ತಮಗೆ ಟಿಎಸ್ಆರ್ ಪ್ರಶಸ್ತಿ ಸಂದಿರುವುದು ಅರಿತು ತುಂಬಾ ಖುಷಿ ಆಯಿತು. ಶುಭಾಶಯಗಳು ಸರ್.

Leave a Reply