ನಿರಾಕರಿಸಿದ್ದಾನೆ ನನ್ನನ್ನೂ..

ಪರಿಪೂರ್ಣತೆಗಾಗಿ ಹಪಹಪಿಸುವ ಜಗದಲ್ಲಿ ಆ ಸೀಳುತುಟಿಯ ಸಂತನಂತಹ ಮಗು

ಈ ಸಲದ ಫಿಲಂ ಫೆಸ್ಟಿನಲ್ಲಿ ಈ ಚಿತ್ರದ ಕಥಾಹಂದರವನ್ನು ಓದಿದಾಗ ಇದ್ಯಾಕೋ ನಮ್ಮ ಅಬ್ಬಾಯಿನಾಯ್ಡು ಅವರ ಕರುಳಿರಿವ ಚಿತ್ರದಂತೆ ಇರಬಹುದು ಎಂದು ಹೆದರಿ ನೋಡದೆ ತಪ್ಪಿಸಿಕೊಂಡಿದ್ದೆ.

ಆದರೆ ಆ ಚಿತ್ರದಲ್ಲಿನ ಒಂದು ಮಗುವಿನ ಫೋಟೋ ಮನಸ್ಸಿನಲ್ಲೇ ಉಳಿದಿತ್ತು.

ಅದೊಂದು ಸೀಳುತುಟಿಯ ಮಗು, ಪರಿಪೂರ್ಣತೆಗಾಗಿ ಹಪಹಪಿಸುವ ಜಗದಲ್ಲಿ ಆ ಸೀಳುತುಟಿಯ ಸಂತನಂತಹ ಮಗುವಿನ ಮುಖದಲ್ಲಿ ಒಂದು ದಿವ್ಯವಾದ ನಗು ಇತ್ತು. ಆ ನಗು ಮಗುವಿನ ಕಣ್ಣು, ಕೆನ್ನೆ, ಗಲ್ಲ, ಸೀಳುತುಟಿ, ಎತ್ತಿದ ತಲೆ ಎಲ್ಲದರಿಂದ ಸೂಸಿಬರುತ್ತಿದೆ ಎನ್ನುವಂತೆ ಕಾಣುತ್ತಿತ್ತು. ಮೊನ್ನೆ ಮತ್ತೆ ಆ ಚಿತ್ರ ಸಿಕ್ಕಾಗ ನೋಡಿದೆ.

ಅವನು ನುಕು. ಅದು ನುಕುವಿನ ಕಥೆ, ಅವನ ಅಮ್ಮನ ಕಥೆ, ಅಮ್ಮನ ನೆರೆಯವಳ ಕಥೆ, ಅಮ್ಮನ ಗೆಳತಿಯ ಕಥೆ, ಅಂತಹ ಎಷ್ಟೋ ಹೆಣ್ಣುಗಳ ಕಥೆ. ಮೊದಲ ನೋಟಕ್ಕೆ ಮಗುವನ್ನು ಕಟ್ಟಿಕೊಂಡ ಏಕಾಂಗಿ ಮಹಿಳೆಯೊಬ್ಬಳ ಕಥೆ ಇದು ಅನ್ನಿಸಿದರೂ ಇಡಿಯಾಗಿ ನೋಡಿದಾಗ ಇದು ಮಹಿಳೆಯರೆಲ್ಲರ ಹೋರಾಟದ ಕಥೆಯಾಗಿ ಕಾಣುತ್ತದೆ. ’Children of Mountain’ ಬದುಕು ಕೊಟ್ಟಿದ್ದನ್ನು ಪಡೆದು ತಲೆತಗ್ಗಿಸಿ ಕೂರದೆ ಹೋರಾಡಿದವರ ಕಥೆ, ಸೋತಾಗಲೂ ಕುಸಿಯದೆ ಸೋಲನ್ನೊಪ್ಪಿಕೊಂಡು ಬದುಕನ್ನು ಅಪ್ಪಿಕೊಂಡವರ ಕಥೆ.

ಎಸ್ಸುಮನ್ ಈ ಕಥೆಯ ನಾಯಕಿ. ಆದರೆ ಈಕೆ ಸಾಂಪ್ರದಾಯಿಕ ನಾಯಕಿಯ ಹಾಗೆ ಸರ್ವಗುಣ ಸಂಪನ್ನಳಲ್ಲ. ಚಿತ್ರ ಪ್ರಾರಂಭವಾಗುವಾಗ ಇವಳು ಪ್ರೇಮದಲ್ಲಿ ಬಿದ್ದ ಹೆಣ್ಣು. ಆ ಸ್ಥಿತಿಯಲ್ಲಿನ ಎಲ್ಲಾ ಹೆಣ್ಣುಗಳಂತೆ ತನ್ನ ಪ್ರೇಮ ಶಾಶ್ವತ, ಅವನು ಸದಾ ತನ್ನನ್ನು ಹೀಗೆ ಪ್ರೀತಿಸುತ್ತಾನೆ ಮತ್ತು ತನಗೆ ಒಳ್ಳೆಯದು ಮಾತ್ರ ಆಗುತ್ತದೆ ಎಂದು ನಂಬಿರುತ್ತಾಳೆ.

ಇವಳ ಸಂಗಾತಿಯಾದರೂ ಯಾರು? ನೆರೆಮನೆಯವಳ ಪ್ರೇಮಿ, ಅವಳ ಹೆಣ್ಣುಮಗುವಿನ ತಂದೆ. ಅವನನ್ನು ತನ್ನ ಪ್ರೇಮದಲ್ಲಿ ಬೀಳಿಸಿಕೊಂಡಿರುವ ಎಸ್ಸುಮನ್ ಗೆ ಅವನಿಗೊಂದು ಗಂಡು ಮಗುವನ್ನು ಕೊಟ್ಟು ಆ ಮೂಲಕ ಅವನು ತನ್ನನ್ನು ಮದುವೆಯಾಗುವಂತೆ ಮಾಡಿಕೊಳ್ಳುತ್ತೇನೆ ಎನ್ನುವ ಆತ್ಮವಿಶ್ವಾಸ. ಆ ಬಗ್ಗೆ ಅವಳಿಗೆ ಯಾವುದೇ ಪಶ್ಚಾತ್ತಾಪವಾಗಲಿ, ದುಃಖವಾಗಲಿ ಇಲ್ಲ. ನೆರೆಮನೆಯವಳು ತನ್ನ ಮೇಲೆ ಸಿಟ್ಟು ಮಾಡಿಕೊಂಡರೆ, ಅವಳಿಗೆ ತಾನು ಏನು ಅನ್ಯಾಯ ಮಾಡಿದ್ದೇನೆ ಎಂದು ಕೇಳುವಷ್ಟು ಸ್ವಾರ್ಥಿ ಅವಳು. ಪ್ರೇಮಿ ಎಜಾ ನನ್ನು ಬಿಟ್ಟರೆ ಅವಳ ಜಗತ್ತಿನಲ್ಲಿರುವ ಇನ್ನೊಂದು ಜೀವ ಅವಳ ಬಾಲ್ಯದ ಗೆಳತಿ. ಮಕ್ಕಳಿಲ್ಲದವಳು. ಅವಳ ಜೊತೆ ಮಾತನಾಡುವಾಗ ’ಇದರಲ್ಲಿ ನನ್ನದೇನು ತಪ್ಪು? ನಾನು ಒಳ್ಳೆಯವಳು ಅಂತಲೇ ದೇವರು ನನ್ನನ್ನು ತಾಯಿಯಾಗಿಸುತ್ತಿದ್ದಾನೆ’ ಎಂದು ಎಗ್ಗಿಲ್ಲದೆ ಹೇಳುತ್ತಾಳೆ. ತನ್ನ ಮಾತು ಮಕ್ಕಳಿಲ್ಲದವಳನ್ನು ನೋಯಿಸಬಹುದು ಎನ್ನುವಷ್ಟೂ ಸೂಕ್ಷ್ಮತೆ ಇಲ್ಲ ಅವಳಿಗೆ. ಅವಳ ಜಗತ್ತಿನಲ್ಲಿ ಇರುವುದು ಕೇವಲ ಅವಳು. ಅವಳಿಂದ ಮತ್ತು ಅವಳಿಗಾಗಿ ಎಲ್ಲವೂ, ಎಲ್ಲರೂ.

ಇಂತಹ ಹೆಣ್ಣಿಗೆ ಹೆರಿಗೆಯಾಗುತ್ತದೆ. ಅವಳು ಕೇಳುವ ಮೊದಲ ಪ್ರಶ್ನೆ, ’ಮಗು ಗಂಡಾ, ಹೆಣ್ಣಾ?’. ಗಂಡು ಎಂದ ಕೂಡಲೆ ನಿರಾಳವಾಗುವ ಅವಳು ಸೂಲಿಗಿತ್ತಿ ಮತ್ತು ಗೆಳತಿಯ ಮುಖ ಭಾವವನ್ನು ಗಮನಿಸುವುದೇ ಇಲ್ಲ. ಮಗುವನ್ನು ಕೈಗೆತ್ತಿಕೊಂಡು ನೋಡುತ್ತಾಳೆ, ಮಗುವಿಗೆ ಸೀಳುದುಟಿ. ಅವಳ ಬದುಕಿನ ಹಡಗು ಆಗ ಅಲ್ಲಾಡುತ್ತದೆ. ಅದು ಪ್ರಾರಂಭ ಮಾತ್ರ. ಗಂಡು ಮಗು ಎಂದ ಕೂಡಲೆ ಪ್ರೀತಿಯಿಂದ ಎತ್ತಿಕೊಳ್ಳಬರುವ ಎಜಾ ಮಗುವನ್ನು ನೋಡಿದ ಕೂಡಲೆ ಹಿಂಜರಿಯುತ್ತಾನೆ. ಆ ಮಗುವನ್ನು ತನ್ನದು ಎಂದು ಒಪ್ಪಿಕೊಳ್ಳಲೂ ಅವನಿಗೆ ಹಿಂಜರಿಕೆ. ಸರಾಗವಾಗಿ ಅಮ್ಮನ ಬೆನ್ನಹಿಂದೆ ಸರಿದುಕೊಳ್ಳುತ್ತಾನೆ. ಮದುವೆಯಾಗು ಎನ್ನುತ್ತಿದ್ದ ಎಜಾಳ ಅಮ್ಮ ಈಗ ಅದು ಅವಳ ಯಾವುದೋ ಪಾಪಕ್ಕೆ ಫಲ ಅನ್ನುತ್ತಿದ್ದಾಳೆ. ಅಮ್ಮ ಮಗ ಇಬ್ಬರೂ ಕೈತೊಳೆದುಕೊಂಡುಬಿಡುತ್ತಾರೆ.

ಎಸ್ಸುಮನ್ ಮುಖದಲ್ಲಿ ಅಪರಾಧವೇ ಮಾಡದಿದ್ದರೂ ಮೂಡುವ ಅಪರಾಧ ಪ್ರಜ್ಞೆ. ಆ ಮಗು ತನ್ನನ್ನು ಅವನನ್ನು ಮದುವೆಯಲ್ಲಿ ಬೆಸೆಯುತ್ತದೆ ಎಂದುಕೊಂಡಿದ್ದಳು, ಮಗುವನ್ನು ದೇವರ ವರ ಎಂದುಕೊಂಡಿದ್ದಳು, ಈಗ ಇದ್ದಕ್ಕಿದ್ದಂತೆ ಅದು ಶಾಪವಾಗಿದೆ, ದೇವರು ಅವಳ ತಪ್ಪುಗಳಿಗೆ ವಿಧಿಸಿದ ಜುಲ್ಮಾನೆಯಾಗಿದೆ.

ಮಗುವನ್ನು ಕರೆದುಕೊಂಡು ಎಸ್ಸುಮನ್ ವೈದ್ಯರ ಬಳಿಗೆ ಹೋಗುತ್ತಾಳೆ. ಅವರು ಮಗುವಿಗೆ ಆಪರೇಷನ್ ಮಾಡಬಹುದು, ಆದರೆ ಅದಕ್ಕೆ ವಿಪರೀತ ಖರ್ಚಾಗುತ್ತದೆ ಎನ್ನುತ್ತಾರೆ. ತರಕಾರಿ ಮಾರುವ ಅವಳು ಅಷ್ಟು ದುಡ್ಡು ಎಲ್ಲಿಂದ ತಂದಾಳು. ಆ ಡಾಕ್ಟರು ಕಡೆಗೆ ತಾವೇ ಒಂದು ಪರಿಹಾರ ಸೂಚಿಸುತ್ತಾರೆ. ’ಗ್ರಾಫ್ಟ್ ಫೌಂಡೇಶನ್’ ನಿಂದ ವೈದ್ಯರು ಇಂತಹ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂದು ಹೇಳುತ್ತಾರೆ. ಆದರೆ ಅವರು ಬರುವು ವರ್ಷವಾಗಬಹುದು, ಎರಡು ವರ್ಷವಾಗಬಹುದು ಹೇಳಲಾಗುವುದಿಲ್ಲ. ಹೀಗೆ ಎಲ್ಲರ ನಿರಾಕರಣೆಯ ನಡುವೆಯೂ, ಸ್ವಂತ ತಾಯಿಯ ನಿರಾಕರಣೆಯ ನಡುವೆಯೂ ಆ ಮಕ್ಕಳಿಲ್ಲದವಳು ಇವನನ್ನು ಎದೆಗಪ್ಪಿಕೊಳ್ಳುತ್ತಾಳೆ. ಮಗುವನ್ನು ಪಡೆಯಲು ನೀನೆಷ್ಟು ಅದೃಷ್ಟ ಮಾಡಿದ್ದೀಯೆ ಎನ್ನುವುದು ನಿನಗೆ ಗೊತ್ತಿಲ್ಲ ಎಂದು ಮೆಲುದನಿಯಲ್ಲಿ ಹೇಳುವವಳ ನೋವು ನಮ್ಮನ್ನು ತಾಕಿ ಹೋಗುತ್ತದೆ.

ಗುಂಗುರು ಕೂದಲಿನ ದುಂಡು ದುಂಡು ಮಗು ಅದು. ಆದರೆ ಎಸ್ಸುಮನ್ ಗೆ ಅದನ್ನು ತನ್ನದು ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಮಗುವನ್ನು ಬಿಟ್ಟು ಓಡಿಹೋಗೋಣ ಎಂದುಕೊಂಡು ಬಟ್ಟೆಯನ್ನೆಲ್ಲ ಜೋಡಿಸಿಕೊಂಡು ಹೊರಟುಬಿಡುತ್ತಾಳೆ. ಬಸ್ಸಿನಲ್ಲಿ ಕೂತವಳ ಮನಸ್ಸು ತಡೆಯುವುದಿಲ್ಲ. ಹಿಂದಿರುಗಿ ಬರುತ್ತಾಳೆ. ಅಷ್ಟರಲ್ಲೇ ಜನ ಸೇರಿರುತ್ತಾರೆ. ಮಗುವನ್ನು ಬಿಟ್ಟು ಹೋದವಳನ್ನು ಬಾಯಿಗೆ ಬಂದಂತೆ ನಿಂದಿಸುತ್ತಾರೆ. ಆದರೆ ತಾವೇ ಕೆಲವು ಗಂಟೆಗಳ ಹಿಂದಿನವರೆಗೂ ಆ ಮಗು ಅವಳ ಕೆಟ್ಟ ಗರ್ಭದ ಪಲ, ಯಾವುದೋ ಶಕ್ತಿಯ ಶಾಪ ಎಂದು ಬೈದಿದ್ದನ್ನು ಮರೆತೇ ಬಿಡುತ್ತಾರೆ. ತಾನು ಹೇಗಿದ್ದರೂ ಅಮ್ಮನಾದವಳು ’ಹೀಗೇ’ ಇರಬೇಕು ಎನ್ನುವುದು ಎಲ್ಲ ಸಮಾಜದಲ್ಲೂ ಸತ್ಯ…ಮೊದಲ ಸಲ ಎಸ್ಸುಮನ್ ತನ್ನ ಸ್ಥಿತಿ ಒಪ್ಪಿಕೊಳ್ಳುತ್ತಾಳೆ. ’ಇದು ನಾನು ಮಾರುಕಟ್ಟೆಯಿಂದ ’ಆರಿಸಿ’ ತಂದ ಹಣ್ಣಲ್ಲ. ಆರಿಸುವ ಅವಕಾಶ ಇದ್ದಿದ್ದರೆ ತಾನಿದನ್ನು ಆರಿಸುತ್ತಿರಲಿಲ್ಲ ಎಂದು ಹೇಳುವ ಅವಳು ಮಗುವನ್ನು ಎತ್ತಿಕೊಳ್ಳುತ್ತಾಳೆ, ಅದು ತನ್ನ ಜವಾಬ್ದಾರಿ ಎಂದು ಒಪ್ಪಿಕೊಳ್ಳುತ್ತಾಳೆ.

ನಿಧಾನವಾಗಿ ಅವಳಿಗೆ ಎಜಾ ತನ್ನಿಂದ ದೂರಾದ ಎನ್ನುವುದು ಅರ್ಥವಾಗುತ್ತದೆ. ಅವನು ನಿರಾಕರಿಸಿರುವುದು ಮಗುವನ್ನು ಮಾತ್ರ ಅಲ್ಲ, ತನ್ನನ್ನೂ ಎನ್ನುವುದು ಅರಿವಾಗುತ್ತದೆ. ಒಬ್ಬ ’ಶಪಿತೆ’ಗೆ ಮಾತ್ರ ಇನ್ನೊಬ್ಬ ’ಶಪಿತೆ’ಯ ನೋವು ತಿಳಿಯುತ್ತದೆ. ಅವಳ ಒಂಟಿ ಯುದ್ಧದಲ್ಲಿ ಅವಳ ಜೊತೆ ನಿಲ್ಲುವುದು ಆ ಗೆಳತಿ ಮಾತ್ರ.

ಮಗನ ಸೀಳುತುಟಿಯನ್ನೂ, ಊರಿನವರ ಮೂದಲಿಕೆ, ನಿಂದನೆಗಳನ್ನೂ ತಡೆದು ಹೇಗೋ ಬದುಕುತ್ತಿರುವ ಎಸ್ಸುಮನ್ ಗೆ ಇನ್ನೊಂದು ಆಘಾತ ಕಾದಿದೆ. ಇವಳ ಜೊತೆಯಲ್ಲಿ ತರಕಾರಿ ಮಾರುವಾಕೆಯ ಮಗಳಿಗೂ ಇವನದೇ ವಯಸ್ಸು. ಅವಳು ಆಗಲೇ ಎದ್ದು ನಿಲ್ಲುವುದಲ್ಲದೆ, ನಡೆಯುವುದನ್ನೂ ಪ್ರಾರಂಭಿಸಿದ್ದಾಳೆ. ಎಸ್ಸುಮನ್ ಗೆ ಆತಂತ ಶುರುವಾಗುತ್ತದೆ. ಇವಳ ಮಗು ನುಕು ಇನ್ನೂ ನಿಲ್ಲಲೂ ಪ್ರಾರಂಭಿಸಿರುವುದಿಲ್ಲ.

ಜಗತ್ತಿನ ಅಮ್ಮಂದಿರೆಲ್ಲಾ ಒಂದೇ… ಮಗುವನ್ನೆತ್ತಿಕೊಂಡ ಆಕೆ ಡಾಕ್ಟರ ಬಳಿಗೆ ಓಡುತ್ತಾಳೆ. ಮಗುವನ್ನು ಪರಿಶೀಲಿಸಿದ ವೈದ್ಯರು ಅವಳಿಗೆ ಇನ್ನೊಂದು ಸತ್ಯ ಹೇಳುತ್ತಾರೆ. ಮಗುವಿಗೆ cerebral palsy ಮತ್ತು Downs Syndrome ಇರುವುದಾಗಿ ಹೇಳುತ್ತಾರೆ. ಮಗುವಿನ ಮಾನಸಿಕ ಬೆಳವಣಿಗೆ ಮತ್ತು ಮಗುವಿನ ಮೆದುಳು ಮತ್ತು ಸ್ನಾಯು, ನರಗಳ ನಡುವೆ ಹೊಂದಾಣಿಕೆ ಕಷ್ಟವಾಗಿರುವ ಸ್ಥಿತಿ ಅದು. ಇದು ಅವಳ ಬದುಕನ್ನು ಸಂಪೂರ್ಣವಾಗಿ ಕೆಡವಿ ಹಾಕುತ್ತದೆ. ಇದುವರೆವಿಗೂ ತನ್ನ ಮಗುವಿನ ಮುಖ ಚೆಂದವಿಲ್ಲ ಎಂದು ಕೊರಗುತ್ತಿದ್ದವಳು ಈಗ ಪಕ್ಕದ ಮನೆಯ ಮಗು ಓಡುವುದನ್ನು ನಿರಾಸೆಯಿಂದ ನೋಡುತ್ತಾಳೆ.

ಆ ಮಗುವನ್ನು ಊರಿನವರಿರಲಿ, ಮಗುವಿನ ತಂದೆಯೇ ’ಅದು’ ಎಂದು ಕರೆಯುತ್ತಾನೆ. ಅವನು ಈಗಾಗಲೇ ಇನ್ನೊಬ್ಬಳಿಂದ ಎಲ್ಲಾ ಸರಿಯಾಗಿರುವ ಗಂಡು ಮಗುವನ್ನು ಪಡೆದಿದ್ದಾನೆ. ಅವನ ತಾಯಿ ಎಸುಮನ್ ಗೆ ಮಗುವನ್ನು ಕಾಡಿನಲ್ಲಿ ಬಿಟ್ಟು ಬಂದುಬಿಡು, ನಿನ್ನ ಬದುಕು ನೀನು ನೋಡಿಕೊ ಎಂದು ’ಹಿತವಚನ’ ಹೇಳುತ್ತಾಳೆ. ಎಜಾ ಒಂದು ಸಲ ಆ ಮಗುವನ್ನು ತಲೆದಿಂಬಿನಿಂದ ಉಸಿರು ಕಟ್ಟಿಸಿ ಕೊಲ್ಲಲು ಬರುತ್ತಾನೆ. ಎಲ್ಲರೂ ಅವಳನ್ನೇ ತಪ್ಪಿತಸ್ಥಳೆಂಬಂತೆ ನೋಡುತ್ತಿರುತ್ತಾರೆ. ಅವಳು ಮಾತ್ರ ಮಗುವಿನ ಕಾಯಿಲೆಯನ್ನು ತಾನು ವಾಸಿಮಾಡಿಯೇ ಸಿದ್ಧ ಎಂದು ಹೆಜ್ಜೆ ನೆಲಕ್ಕೂರಿ ನಿಂತುಬಿಡುತ್ತಾಳೆ.

ಅದಕ್ಕಾಗಿ ಹೇಗೋ ಹಣ ಹೊಂದಿಸಿ ಒಬ್ಬ ಗಿಡಮೂಲಿಕೆಗಳ ವೈದ್ಯನಿಗೆ ಕೊಡುತ್ತಾಳೆ. ಅವನು ಹಣ ತೆಗೆದುಕೊಂಡು ಓಡಿಹೋಗುತ್ತಾನೆ. ಮಗನನ್ನು ಒಬ್ಬ ಧರ್ಮ ಪ್ರಚಾರಕನ ಬಳಿ ಕರೆದುಕೊಂಡು ಹೋಗುತ್ತಾಳೆ. ಹೆಚ್ಚಿನ ಪೂಜೆ ಮಾಡಬೇಕು ಎಂದು ರಾತ್ರಿ ಅವಳನ್ನು ಕರೆಸಿಕೊಳ್ಳುವ ಆತ ಅವಳ ಮೇಲೆ ಅತ್ಯಾಚಾರ ಮಾಡುತ್ತಾನೆ. ಆದರೆ ಇದ್ಯಾವುದೂ ಅವಳ ಆತ್ಮಶಕ್ತಿಯನ್ನು ಕುಗ್ಗಿಸುವುದಿಲ್ಲ. ಇಷ್ಟೆಲ್ಲದರ ನಡುವೆಯೂ ಅವಳಿಗೆ ತಾನು ನೆರಮನೆಯವಳಿಗೆ ಮಾಡಿದ ಅನ್ಯಾಯಕ್ಕೆ ಇದು ದೇವರು ತನಗಿತ್ತ ಶಾಪವೇನೋ ಅನ್ನಿಸುತ್ತಲೇ ಇರುತ್ತದೆ. ಒಂದು ಬೆಳಗ್ಗೆ ಎದ್ದವಳೇ ನೆರೆಮನೆಯವಳ ಬಾಗಿಲು ತಟ್ಟುತ್ತಾಳೆ.

ಅಂತಹ ಸೆಡವಿನ ಹೆಣ್ಣಾದ ಇವಳು ಅವಳ ಬಳಿ ’ನನ್ನನ್ನು ಕ್ಷಮಿಸು’ ಎಂದು ಕೇಳುತ್ತಾಳೆ. ಬದುಕು ಅವಳನ್ನು ಹಣ್ಣಾಗಿಸಿರುತ್ತದೆ. ಮೊದಲ ಸಲ ನಮಗೆ ಆ ನೆರಮನೆಯವಳ ನೋವೂ ತಟ್ಟುತ್ತದೆ. ಮದುವೆಯಾಗಿಲ್ಲ, ಒಬ್ಬ ಮಗಳಿದ್ದಾಳೆ. ಪಕ್ಕದಲ್ಲಿ ವಾಸಕ್ಕೆ ಬಂದ ಚಿಕ್ಕ ವಯಸ್ಸಿನ ಹುಡುಗಿಯೊಬ್ಬಳು ತನ್ನವನನ್ನು ಮನೆಯಿಂದ ಎಳೆದುಕೊಂಡಿದ್ದಾಳೆ. ಅಷ್ಟೇ ಅಲ್ಲ ತನ್ನ ಹೆಣ್ತನಕ್ಕಾದ ಅಪಮಾನದ ಮೇಲೆ ಉಪ್ಪು ಸುರಿಯುವಂತೆ ಒಂದು ಗೋಡೆಯಾಚೆಗೆ, ತನ್ನವನೊಂದಿಗೆ ಸಂಸಾರವನ್ನೂ ಹೂಡಿದ್ದಾಳೆ. ಅವಳು ಈಗ ಬಾಯ್ದೆರೆಯುತ್ತಾಳೆ, ’ಪ್ರತಿ ದಿನ ನನ್ನ ಸೋಲನ್ನು, ಅವಮಾನವನ್ನು ನೀನು ನನಗೆ ನೆನಪಿಸುತ್ತಲೇ ಇರುವೆ. ಯಾರೆಲ್ಲರ ಮುಂದೆ ನನಗೆ ಅವಮಾನವಾಗಿದೆಯೋ ಆ ಊರಿನವರ ಮುಂದೆಲ್ಲಾ ಕ್ಷಮೆ ಕೇಳು’ ಎಂದು ಹೇಳುತ್ತಾಳೆ.

ಬಹುಶಃ ಸಂಬಂಧದಂತೆ ಕ್ಷಮೆ ಸಹ ಕೇವಲ ಇಬ್ಬರ ನಡುವಿನಲ್ಲಿ ಇದ್ದರೆ ಅಸ್ತಿತ್ವವನ್ನು ಮಾತ್ರ ಪಡೆಯುತ್ತದೆ, ಅಧಿಕೃತತೆಯನ್ನಲ್ಲ. ಅದಕ್ಕೂ ಸಹ ಸಾರ್ವಜನಿಕತೆಯ ಮೊಹರು ಬೇಕು. ಎಸ್ಸುಮನ್ ಅದನ್ನೂ ಮಾಡುತ್ತಾಳೆ, ಊರವರ ಎದುರಿನಲ್ಲಿ ಅವಳ ಮುಂದೆ ಮೊಣಕಾಲೂರಿ ಕ್ಷಮೆ ಕೇಳುತ್ತಾಳೆ. ತನ್ನ ಈ ಎಲ್ಲಾ ಪ್ರಯತ್ನ ತನ್ನ ಮಗುವನ್ನು ಗುಣಪಡೆಸಲು ಎಂದು ಅವಳಂದುಕೊಂಡಿರುತ್ತಾಳೆ, ಆದರೆ ಸತ್ಯದಲ್ಲಿ ಆ ಎಲ್ಲಾ ಪ್ರಯತ್ನಗಳಿಂದ ಅವಳು ’ಗುಣ’ವಾಗುತ್ತಾ ಬರುತ್ತಾಳೆ.

ಅವಳ ಅಹಂ ನ ಪೊರೆಗಳು ಕಳಚುತ್ತಾ ಬರುತ್ತವೆ. ನಮಗೆ ಈ ಚಿತ್ರ ಮುಖ್ಯವಾಗುವುದು ಆ ಕಾರಣಕ್ಕಾಗಿ. ಕಥೆ, ಚಿತ್ರಕಥೆ, ನಿರ್ದೇಶನ, ನಟನೆ ಎಲ್ಲವೂ ಎಷ್ಟು ಸಮರ್ಥವಾಗಿದೆ ಎಂದರೆ, ಎಸುಮನ್ ಳ ಎಲ್ಲಾ ಕುಂದು ಕೊರತೆಗಳ ನಡುವೆಯೂ ನಮಗೆ ಅವಳ ಮೇಲೆ ಅನುಕಂಪ ಮೂಡುತ್ತಾ ಬರುತ್ತದೆ. ಆ ಅನುಕಂಪ ಮೂಡಿಸಲು, ಭಾವಾತಿರೇಕ, ಎದೆ ಕರಗಿಸುವ ಸಂಗೀತ, ಕ್ಲೋಸ್ ಅಪ್ಸ್ ಯಾವುದನ್ನೂ ನಿರ್ದೇಶಕಿ ಬಳಸುವುದಿಲ್ಲ. ಮಗುವಿನ ಸೀಳುತುಟಿ ಸಹ ಒಂದು ಪಾಸಿಂಗ್ ಶಾಟ್ ಆಗಿದೆಯೇ ಹೊರತು ಕ್ಯಾಮೆರಾ ಅಲ್ಲಿ ಜೂಮ್ ಆಗುವುದೇ ಇಲ್ಲ.

ಅವಳ ಎಲ್ಲಾ ಪ್ರಯತ್ನಗಳೂ ಸೋತ ಮೇಲೆ ಎಸುಮನ್ ಕಡೆಯ ಪ್ರಯತ್ನವಾಗಿ ತನ್ನ ಊರಿನತ್ತ ಮುಖ ಮಾಡುತ್ತಾಳೆ. ಗೆಳತಿಯನ್ನು ಕರೆದುಕೊಂಡು ಊರಿಗೆ ಹೊರಡುತ್ತಾಳೆ. ಇದುವರೆವಿಗೂ ಪಟ್ಟಣದ ಒತ್ತೊತ್ತು ಮನೆಗಳ ನಡುವೆ ಇರುಕಿಸಿಕೊಂಡಂತೆ ಕಾಣುವ ಕ್ಯಾಮೆರಾದ ಕಣ್ಣು ಈಗ ವಿಶಾಲವಾದ ಭೂಪ್ರದೇಶ, ಸ್ನೇಹಿತರಂತೆ ಕಾಣುವ ಬೆಟ್ಟ ಗುಡ್ಡಗಳು, ಕಡಲಿನಂತಹ ನದಿಯ ತೀರದಲ್ಲಿ ಪೂರ್ತಿಯಾಗಿ ತೆರೆದುಕೊಳ್ಳುತ್ತದೆ.

ಅಲ್ಲಿ ಅವಳು ತನ್ನ ಹಳ್ಳಿಯ ವೈದ್ಯನ ಬಳಿ ಮಗುವನ್ನು ಕರೆದುಕೊಂಡು ಹೋಗುತ್ತಾಳೆ. ಹಳ್ಳಿಯಲ್ಲಿ ಅವಳಿಗೆ ಮೀನು ಹಿಡಿಯುವವನೊಬ್ಬನ ಪರಿಚಯ ಆಗುತ್ತದೆ. ಅವನು ಅವಳ ಬಗೆಗೆ ಪ್ರೀತಿ ತೋರಿಸುತ್ತಾನೆ. ಅವನಿಗೆ ಮಗು ಅವಳದು ಎಂದು ಗೊತ್ತಿರುವುದಿಲ್ಲ. ಅವನು ನೋಡಿದಾಗೆಲ್ಲಾ ಅವಳ ಗೆಳತಿಯೇ ಮಗುವನ್ನು ಎತ್ತಿಕೊಂಡಿರುತ್ತಾಳೆ. ಹಳ್ಳಿಯ ವೈದ್ಯನ ಔಷದೋಪಚಾರದಿಂದ ಮಗು ಗುಣವಾಗುವ ಬದಲು ಅದರ ಆರೋಗ್ಯ ಮತ್ತಷ್ಟು ಕೆಡುತ್ತಾ ಹೋಗುತ್ತದೆ. ಎಸ್ಸುಮನ್ ಳ ಬದುಕು ಮತ್ತೊಂದು ಅರಿವನ್ನು ಪಡೆದುಕೊಳ್ಳುವುದು ಇಲ್ಲಿ.

ಆ ಮೀನು ಹಿಡಿಯುವವನು ಒಮ್ಮೆ ಮಾತನಾಡುತ್ತಾ, ’ಸಮಸ್ಯೆಗಳು ಎಲ್ಲರಿಗೂ, ಯಾವಕಾಲಕ್ಕೂ ಇದ್ದೇ ಇರುತ್ತವೆ, ಆದರೆ ಅವು ಅಳತೆಗೂ ಮೀರಿ ಆಕಾರ ಪಡೆಯುವುದು ನೀನು ಅವುಗಳ ಬಗ್ಗೆ ಅಳತೆಗೆ ಮೀರಿ ಚಿಂತಿಸಿದಾಗ, ಕೆಲವು ಸಲ ಅದನ್ನು ಒಪ್ಪಿಕೊಂಡು ಬಿಡುವುದು ಸಮಸ್ಯೆಯ ಭೀಕರತೆಯನ್ನು ಕಡಿಮೆ ಮಾಡುತ್ತದೆ. ಬದುಕು ನೀರಿನಂತೆ, ಎಲ್ಲೇ ಸುರಿದರೂ ಅದು ತನ್ನನ್ನು ಅಲ್ಲಿಗೆ ಹೊಂದಿಸಿಕೊಂಡು ಬಿಡುತ್ತದೆ’ ಎಂದು ಹೇಳುತ್ತಾನೆ. ಮಗು ಹುಟ್ಟಿದ ಮೇಲೆ ಮೊದಲ ಸಲ ಅವಳು ನಗುತ್ತಾಳೆ. ಅವಳ ಮುಖದಲ್ಲಿ ಭಾವನೆಗಳು ಕಾಣಿಸಿಕೊಳ್ಳುತ್ತವೆ.

ಅಷ್ಟರಲ್ಲಿ ಅವಳ ಗೆಳತಿಯ ತಾಯಿ ಒಂದು ಮಗುವನ್ನು ಕರೆದುಕೊಂಡು ಬಂದು ಗೆಳತಿಯ ಕೈಲಿ ಇಟ್ಟು ಅದನ್ನು ದತ್ತು ತೆಗೆದುಕೊಳ್ಳಲು ಹೇಳುತ್ತಾಳೆ. ಗೆಳತಿ ಮದುವೆ ಆಗುವುದು, ಆಗದಿರುವುದು ತಾಯಿಗೆ ಮುಖ್ಯವೇ ಅಲ್ಲ. ಆದರೆ ಮಗಳು ತಾಯಿಯಾಗದೇ ಉಳಿಯುವುದು ಅವಳಿಗೆ ಒಪ್ಪಿತವಿಲ್ಲ. ತಾಯಿಯಾಗಲು ಮಗುವನ್ನು ಹೆರಲೇ ಬೇಕಿಲ್ಲ, ತಾಯ್ತನವೆಂದರೆ ಹೆರುವುದಲ್ಲ, ಪೋಷಿಸುವುದು ಎನ್ನುವ ಆ ಹಳ್ಳಿಯ ಹೆಂಗಸರ ಮನೋಭಾವವೇ ಜಗತ್ತಿನ ಆದಿಮ ಸತ್ಯ ಎನ್ನಿಸಿಬಿಡುತ್ತದೆ.

ಮೊದಲು ತನ್ನದೇ ಮಗು ಮಾಡಿಕೊಳ್ಳುತ್ತೇನೆ ಎನ್ನುವ ಗೆಳತಿ ಆಮೇಲೆ ದತ್ತು ತೆಗೆದುಕೊಳ್ಳಲು ಒಪ್ಪುತ್ತಾಳೆ. ಇಲ್ಲಿ ಇನ್ನೊಂದು ವಿಷಯ ಇದೆ, ಅದು ಎಸ್ಸುಮನ್ ಳ ಮನಸ್ಸಿನ ಕಡೆಯ ಕಿಸುರು. ಇದುವರೆವಿಗೂ ಅವಳಿಗೆ ಒಂದು ಸಮಾಧಾನ ಇದೆ, ಏನೆಂದರೂ ತಾನು ಮಕ್ಕಳೇ ಇಲ್ಲದ ತನ್ನ ಗೆಳತಿಗಿಂತ ಮೇಲು ಎಂದು. ಆದರೆ ಈಗ ಅವಳೂ ತಾಯಿಯಾಗುತ್ತಿದ್ದಾಳೆ ಮತ್ತು ಅವಳ ಮಗುವಿಗೆ ಯಾವ ದೋಷವೂ ಇಲ್ಲ! ಹತಾಶೆಯಲ್ಲಿ ಅವಳ ಮೇಲೆ ಕೂಗಾಡಿಬಿಡುತ್ತಾಳೆ.

ಅಷ್ಟರಲ್ಲಿ ಆ ಹಳ್ಳಿಯ ಮೀನುಗಾರನಿಗೆ ನುಕು ಇವಳ ಮಗು ಎಂದು ಗೊತ್ತಾಗಿದೆ. ಆತ ಇದ್ದಕ್ಕಿದ್ದಂತೆ ಇವಳ ಕಡೆ ಶೀತಲವಾಗಿದ್ದಾನೆ. ಎದಿರಾದರೆ ಮಾತನಾಡುತ್ತಿಲ್ಲ. ಎಷ್ಟೆಲ್ಲಾ ಪ್ರಯತ್ನಗಳ ನಂತರವೂ ಅದು ಹುಷಾರಾಗುತ್ತಿಲ್ಲ, ಜೊತೆಗೆ ತನ್ನ ಜೀವನವನ್ನೂ ಜೊತೆಗೇ ಎಳೆದುಕೊಂಡು ಕುಸಿಯುತ್ತಿದೆ. ಅವಳಿಗೆ ಈ ಮಗು ತನ್ನನ್ನು ಹಿಡಿದಿಡುವ ಕಲ್ಲು ಅನ್ನಿಸಿಬಿಡುತ್ತದೆ. ಕಲ್ಲಿನ ಮನಸ್ಸು ಮಾಡಿಕೊಂಡು ಮಗುವನ್ನು ಕರೆದುಕೊಂಡು ಹೊರಡುತ್ತಾಳೆ. ಮಗುವನ್ನು ನದಿಯ ಬಳಿ ಬಿಟ್ಟು ಹಿಂದಿರುಗಿ ನೋಡದೆ ಓಡುತ್ತಾಳೆ.

ಆಗ ಅವಳಿಗೆ ಎದುರಾಗುವುದು ಒಬ್ಬ ಮುದುಕಿ. ಅವಳು ಎಸ್ಸುಮನ್ ಗೆ ’ ಪ್ರತಿ ಅಮ್ಮನಿಗೂ ಒಂದು ಮಗುವಿನ ಹುಡುಕಾಟವಿರುವಂತೆ ಪ್ರತಿ ಮಗುವಿಗೂ ಸಹ ಅಮ್ಮನ ಹುಡುಕಾಟವಿರುತ್ತದೆ. ಆ ಮಗುವನ್ನು ನೀನು ಹುಡುಕಿ ಎತ್ತಿಕೊಂಡಿಲ್ಲದಿದ್ದರೂ ಅದು ನಿನ್ನನ್ನು ಹುಡುಕಿ ಬಂದಿದೆ. ಎಲ್ಲಿ ನಿನ್ನ ಮಗು?’ ಎಂದು ಘಟ್ಟಿಸಿ ಕೇಳುತ್ತಾಳೆ. ತೊಯ್ದಾಡುತ್ತಿದ್ದ ಮನಸ್ಸು ಒಂದು ನೆಲೆ ಕಂಡಂತಾಗಿ ಎಸ್ಸುಮನ್ ಮತ್ತೆ ನದಿಯ ಬಳಿ ಓಡುತ್ತಾಳೆ. ಅಲ್ಲಿ ಮಗುವನ್ನು ಸುತ್ತಿದ್ದ ಬಟ್ಟೆ ಮಾತ್ರ ಇದೆ. ಕಂಗಾಲಾಗಿ ಮನೆಯ ಕಡೆ ಓಡುತ್ತಾಳೆ. ಅಮ್ಮನ ಬಳಿ ಎಲ್ಲವನ್ನೂ ಹೇಳಿಕೊಳ್ಳುತ್ತಾಳೆ.

ಮುಂದೆ ನಿರೀಕ್ಷಿಸಿದಂತೆ ಆ ಮೀನುಗಾರ ಮಗುವನ್ನು ಎತ್ತಿಕೊಂಡು ಬರುತ್ತಾನೆ, ಅದನ್ನು ಎದೆಗಪ್ಪಿಕೊಳ್ಳುತ್ತಾನೆ. ಅವಳನ್ನೂ ಬದುಕಿಗೆಳೆದುಕೊಳ್ಳುತ್ತಾನೆ. ಗ್ರಾಫ್ಟ್ಸ್ ಫೌಂಡೇಶನ್ ನವರು ಬರುತ್ತಾರೆ. ಮಗುವಿನ ಸೀಳುದುಟಿಯ ಶಸ್ತ್ರ ಚಿಕಿತ್ಸೆ ಆಗುತ್ತದೆ. ಇಲ್ಲಿಗೆ ’ಶುಭಂ’ ಆಗಬೇಕು. ಆದರೆ ಕಡೆಯ ದೃಶ್ಯದಲ್ಲಿ ನಿರ್ದೇಶಕಿ Priscilla Anany ಹಾಕುವ ಸಹಿ ನಮ್ಮನ್ನು ಆರ್ದ್ರವಾಗಿಸುತ್ತದೆ. ಎಸ್ಸುಮನ್ ಮತ್ತೆ ಗರ್ಭಿಣಿಯಾಗಿದ್ದಾಳೆ. ದೋಣಿಯಲ್ಲಿ ಮಲಗಿದ್ದಾಳೆ, ನುಕು ಪಕ್ಕದಲ್ಲೇ ಕುಳಿತು ಆಡುತ್ತಿದ್ದಾನೆ, ಮೀನುಗಾರ ಬಲೆ ಸರಿ ಮಾಡುತ್ತಿರುತ್ತಾನೆ. ನಿದ್ದೆಯಲ್ಲಿದ್ದ ಎಸ್ಸುಮನ್ ಬೆಚ್ಚಿಬೀಳುತ್ತಾಲೆ, ಬಳಿ ಹೋದ ಆತ ’ಮತ್ತೆ ಕೆಟ್ಟ ಕನಸು ಕಂಡೆಯಾ?’ ಎಂದು ಸಮಾಧಾನ ಮಾಡುತ್ತದೆ. ಒಂದು ಮಗು ಯಾವುದಾದರೂ ಕಾರಣದಿಂದ ವೈಕಲ್ಯದೊಂದಿಗೆ ಹುಟ್ಟಿದರೆ ಮುಂದಿನ ಸಲ ಗರ್ಭಿಣಿಯಾದಾಗ ಆ ಹೆಣ್ಣು ಪಡುವ ಆತಂಕ ವಿವರಿಸಲಾಗದ್ದು. ಆ ಒಂದು ದೃಶ್ಯ ಆ ಚಿತ್ರವನ್ನು ಎಲ್ಲ ಕಾಲಕ್ಕೂ, ಎಲ್ಲಾ ಪ್ರದೇಶಗಳಿಗೂ ಸಲ್ಲುವಂತೆ ಮಾಡಿಬಿಡುತ್ತದೆ.

ಇಲ್ಲಿ ನಿರ್ದೇಶಕಿ ಆ ಗೆಳತಿಯ ಪಾತ್ರವನ್ನು ಕಟ್ಟಿಕೊಟ್ಟ ರೀತಿಯನ್ನೂ ಗಮನಿಸಬೇಕು. ಆಕೆ ಮಗುವನ್ನು ಹೆರದಿದ್ದರೂ ಮಗುವನ್ನು ಹೆತ್ತ ಎಸ್ಸುಮನ್ ಗಿಂತ ಮೊದಲು ಮತ್ತು ಅವಳಿಗಿಂತ ಹೆಚ್ಚು ಅಮ್ಮನಾಗಿರುತ್ತಾಳೆ. ಹೆಣ್ಣು ತಾಯಿಯಾಗುವುದು ಅವಳ ಹಕ್ಕು ಮತ್ತು ಅಧಿಕಾರ. ಅಲ್ಲಿನ ಸಮಾಜದಲ್ಲಿ ’ಮದುವೆ’ ಸಾಂಧರ್ಭಿಕ ಮಾತ್ರ. ಚಿತ್ರದಲ್ಲಿನ ಪಾತ್ರಗಳ ಕಟ್ಟುವಿಕೆಯನ್ನೂ ಗಮನಿಸಬೇಕು. ಇಲ್ಲಿ ಯಾವ ಪಾತ್ರವೂ ಕಪ್ಪು ಅಥವಾ ಬಿಳಿ ಅಲ್ಲ, ಪಾತ್ರಗಳಿಗಿರುವ ಆಯಾಮ ಮತ್ತು ಅವುಗಳ ಪೋಷಣೆಗೆ ಚಿತ್ರದ ಸ್ಕ್ರೀನ್ ಪ್ಲೇ ಕೊಡುಗೆ ಅಪಾರ. ತಾಯಿಯಾಗುವುದು ಮತ್ತು ತಾಯ್ತನ ಹೊಂದುವುದು ಎರಡೂ ಬೇರೆಬೇರೆ. ಸಮಾಜ ನಿರೀಕ್ಷಿಸುವ ಅಥವಾ ಆಪೇಕ್ಷಿಸುವ ’ತಾಯ್ತನ’ ದ ವಾಸ್ತವವನ್ನೂ ಚಿತ್ರ ವಿಶ್ಲೇಷಿಸುತ್ತದೆ.

ಇಡೀ ಚಿತ್ರದಲ್ಲಿ ನಿಮ್ಮನ್ನು ಅತ್ಯಂತ ದುಃಖತಪ್ತರನ್ನಾಗಿ ಮಾಡುವುದು ಆ ನಿಸ್ಸಾಹಾಯಕ ಮಗು ನುಕು……ಜಗತ್ತಿನ ಎಲ್ಲಾ ಬುದ್ಧಿವಂತರು, ಧರ್ಮೋದ್ಧಾರಕರು ಮೋಸ ಮಾಡುತ್ತಿರುವಾಗ ಆ ಮಗುವಿನ ಸೀಳುತಟಿ ಅದರ ಮುಖದಲ್ಲಿ ಒಂದು ಸಂತನ ನಗುವನ್ನು ನಿರಂತರವಾಗಿ ಇಟ್ಟಿದೆ. ಮತ್ತು ಆ ನಗು ನಮ್ಮನ್ನು ಮರೆಯಲು ಬಿಡುವುದಿಲ್ಲ. ಅಲ್ಲಿನ ಬಡತನ, ಅನಾರೋಗ್ಯ, ರೋಗ ಇವೆಲ್ಲವನ್ನೂ ಇದು ಯಾವುದೋ ಆಫ್ರಿಕನ್ ದೇಶದ ಕಥೆ ಎಂದುಕೊಂಡರೆ ಆಘಾತವಾದೀತು. ಏಕೆಂದರೆ ಇದು ಮಧ್ಯ ಅಮೇರಿಕದ ಕಥೆ. ಅಮೇರಿಕಾದ ಸೋಕಾಲ್ಡ್ ಆತ್ಯಂತಿಕ ಸಮೃದ್ಧಿಯ ನಡುವಿನ ಕಾಣದ ಮುಖದ ಚಿತ್ರಣ ಇದು.

6 comments

  1. ಎಂದಿನಂತೆ..ನಿಮ್ಮ ಬರಹ..ಕಣ್ಣು ಒದ್ದೆ ಮಾಡಿದ್ದಲ್ಲದೆ..ದಾರ್ಶನಿಕತೆಗೆ ಒಡ್ಡಿತು…ತುಂಬಾ ಥ್ಯಾಂಕ್ಸ..ಸಂಧ್ಯಾ ಮೇಡಂ

  2. ನಾನು ಅದೇ ಕಾರಣಕ್ಕಾಗಿ ಆ ಚಿತ್ರವನ್ನು ತಪ್ಪಿಸಿಕೊಂಡಿದ್ದೆ..ನಿಮ್ಮ ಬರಹ ನೋಡಿದಾಗ ನೋಡಬೇಕಿತ್ತು ಎನಿಸುತ್ತಿದೆ…Thank you…

  3. ವಾಹ್, “ನಮಸ್ಕಾರ “_ ಇಡೀ ಸಿನಿಮಾಕ್ಕೆ

Leave a Reply