ಈ ಚಿತ್ರ ನನಗೇಕೆ ಇಷ್ಟವಾಯಿತು ಎಂದರೆ ಏನನ್ನೂ ಹೇಳಲಾರೆ..

Pursuit of ‘Happy’ness – ಈ ಚಿತ್ರ ನನಗೇಕೆ ಇಷ್ಟವಾಯಿತು ಎಂದರೆ ನಾನು ತಾಂತ್ರಿಕವಾಗಿ ಏನನ್ನೂ ಹೇಳಲಾರೆ.

ಅದರ ವಿನ್ಯಾಸ, ಛಾಯಾಗ್ರಹಣ, ಬೆಳಕಿನ ವಿನ್ಯಾಸ, ಸಂಭಾಷಣೆ, ಚಿತ್ರಕಥೆ, ಸಾಮಾಜಿಕ ಮೌಲ್ಯಗಳ ಹುಡುಕಾಟ…. ಉಹೂ ಇವ್ಯಾವನ್ನೂ ನಾನು ವಿವರಿಸಲಾರೆ.  ಆದರೂ ಆ ಚಿತ್ರ ಇಷ್ಟವಾಯಿತು.

ಚಿತ್ರದಲ್ಲಿ ವಿಲ್ ಸ್ಮಿತ್ ಮತ್ತು ಜೇಡನ್ ಸ್ಮಿತ್ ಅವರ ನಟನೆಯ ಕಾರಣದಿಂದ ಇಷ್ಟವಾಯಿತು.  ಚಿತ್ರದಲ್ಲಿ ಅಪ್ಪ ಮಗನ ಸಂಬಂಧವನ್ನು ಕಟ್ಟಿಕೊಟ್ಟ ರೀತಿಯಿಂದ ಇಷ್ಟವಾಯಿತು.  ಕಷ್ಟಗಳನ್ನು ಅವುಡುಗಚ್ಚಿ ಸಹಿಸುವ ವಿಲ್ ಸ್ಮಿತ್, ಅಮ್ಮನಿಂದ ದೂರಾಗಿ ಅಪ್ಪನ ಬಳಿ ಬೆಳೆಯುವ ಮಗುವಾಗಿ ಜೇಡನ್ ಏಕಕಾಲಕ್ಕೆ ಗೌರವವನ್ನೂ, ಪ್ರೀತಿಯನ್ನೂ ಗಳಿಸುತ್ತಾರೆ.

ಕೇವಲ ಈ ಕಾರಣಕ್ಕೇ ಚಿತ್ರ ಇಷ್ಟವಾಗುತ್ತದೆ.  ಇದರ ಜೊತೆಗೆ ಚಿತ್ರದಲ್ಲಿನ ಬಡತನದ ಸನ್ನಿವೇಶಗಳು ನಮ್ಮನ್ನು ಅವುಗಳೊಂದಿಗೆ ಗುರುತಿಸಿಕೊಳ್ಳುವಂತೆ ಮಾಡುತ್ತವೆ, ಕೈಯಲ್ಲಿ ಕಾಸಿಲ್ಲ ಎನ್ನುವ ಕಾರಣಕ್ಕೆ ಮಗು ಕೇಳಿದ ಯಾವುದನ್ನೋ ಕೊಡಿಸಲಾಗದ ನೋವು ಇನ್ನೂ ನಿಮ್ಮ ಮನಸ್ಸಿನಲ್ಲಿ ಇದೆ ಎಂದರೆ ಈ ಚಿತ್ರ ನಿಮಗೆ ಇಷ್ಟವಾಗುತ್ತದೆ.

ಚಿತ್ರದಲ್ಲಿ ವಿಲ್ ಸ್ಮಿತ್ ನಿಭಾಯಿಸಿರುವುದು ಯಾವುದೇ ನಟ ತಪಸ್ಸು ಮಾಡಬಹುದಾದ ಪಾತ್ರ.  ಸ್ಮಿತ್ ಈ ಪಾತ್ರವನ್ನು ನಿಭಾಯಿಸಿರುವ ರೀತಿ ಆ ಪಾತ್ರಕ್ಕೊಂದು ಘನತೆಯನ್ನು ತಂದುಕೊಡುತ್ತದೆ.  ಇಲ್ಲಿ ಆತ ಹತ್ತು ಜನರನ್ನು ಹೊಡೆದುರುಳಿಸುವುದರಿಂದ ನಾಯಕನಾಗುವುದಿಲ್ಲ.  ಆತ ಸಂಕಟ ಪಡುತ್ತಾನೆ, ಕಣ್ಣೀರಾಗುತ್ತಾನೆ, ಮರ್ಯಾದೆ ಉಳಿಸಿಕೊಳ್ಳಲು ಸುಳ್ಳು ಹೇಳುತ್ತಾನೆ, ಟ್ಯಾಕ್ಸಿಗೆ ಕೊಡಲು ದುಡ್ಡಿಲ್ಲವೆಂದು ಟ್ಯಾಕ್ಸಿ ಇಳಿದವನೇ ಓಡಿ ಹೋಗುತ್ತಾನೆ.  ಮತ್ತು ಈ ಎಲ್ಲವನ್ನೂ ಮಾಡುವುದರಿಂದಲೇ ಆತ ನಮ್ಮಲ್ಲೊಬ್ಬನಾಗುತ್ತಾನೆ.

ಸ್ಮಿತ್ ತನ್ನಲ್ಲಿರುವ ಎಲ್ಲಾ ಹಣವನ್ನೂ ಸುರಿದು ಹೊಸ ವ್ಯಾಪಾರವೊಂದನ್ನು ಪ್ರಾರಂಭಿಸುತ್ತಾನೆ.  ಮೂಳೆಗಳನ್ನು ಸ್ಕ್ಯಾನ್ ಮಾಡುವ, ಕೈಯಲ್ಲಿ ಹೊತ್ತುಕೊಂಡು ಹೋಗಬಹುದಾದ ಯಂತ್ರಗಳ ವ್ಯಾಪಾರ.  ಆದರೆ ಅವುಗಳನ್ನು ಕೊಳ್ಳುವಾಗ ಅವನ ಅಂದಾಜಿಗೆ ಸಿಗದ ವಿಷಯ ಒಂದಿರುತ್ತದೆ.  ಆ ಯಂತ್ರಗಳು ಎಕ್ಸ್ ರೇ ಮೆಷೀನಿನ ಹಾಗೆಯೇ ಕೆಲಸ ಮಾಡುತ್ತವೆ ಮತ್ತು ಅದರ ದುಪ್ಪಟ್ಟು ಬೆಲೆಗೆ ಮಾರಾಟಕ್ಕಿರುತ್ತದೆ.  ಈ ಕಾರಣದಿಂದಾಗಿ ಅವನ ಸ್ಕ್ಯಾನಿಂಗ್ ಮೆಶೀನ್ ಗಳಿಗೆ ಬೇಡಿಕೆ ಇಲ್ಲ.  ಆದರೆ ಹುಟ್ಟಾ ಮಾರಾಟಗಾರನಾದ ಅವನ ಮುಖದಲ್ಲಿ ನಗು ಮಾಸುವುದೇ ಇಲ್ಲ.  ಅವನ ಹೆಂಡತಿ ಮನೆಯ ಖರ್ಚು ತೂಗಿಸಲು ಎರಡೆರಡು ಕೆಲಸಗಳನ್ನು ಮಾದುತ್ತಿರುತ್ತಾಳೆ.  ಅವರಿಗೊಬ್ಬ ಮಗ ಕ್ರಿಸ್ಟೋಫರ್.  ಅಮ್ಮನಿಗಿಂತ ಅಪ್ಪನ ಜೊತೆಯೇ ಅವನ ಸಂಬಧ ಹೆಚ್ಚು.  ಸ್ಮಿತ್ ಸಹ ಮಗನ ಜೊತೆಗೆ ಸದಾ ಒಂದು ಸಂವಹನವನ್ನು ಜಾರಿಯಲ್ಲಿಟ್ಟೇ ಇರುತ್ತಾನೆ.

ಸ್ಮಿತ್ ನ ವ್ಯಾಪಾರದಲ್ಲಿನ ಸೋಲು, ಕಟ್ಟದೆ ಉಳಿದ ಬಾಡಿಗೆ, ಉಳಿಸಿಕೊಂಡ ತೆರಿಗೆ, ದಂಡ ಕಟ್ಟಲಾಗದೆ ಕೈ ಜಾರಿದ ಕಾರು ಎಲ್ಲವೂ ಅವಳ ಸಹನೆಯನ್ನು ಕೊಲ್ಲುತ್ತಿರುತ್ತವೆ.  ಕಡೆಗೊಂದು ದಿನ ಮಗನನ್ನು ಕರೆದುಕೊಂಡು ಮನೆ ಬಿಟ್ಟು ಹೊರಡುತ್ತಾಳೆ.  ಸ್ಮಿತ್ ಅಲ್ಲಾಡಿ ಹೋಗುತ್ತಾನೆ.  ಹೆಂಡತಿಯ ನಿರ್ಗಮನಕ್ಕಿಂತ ಮಗನಿಂದ ದೂರವಾದ ನೋವು ಅವನನ್ನು ವ್ಯಗ್ರನನ್ನಾಗಿಸುತ್ತದೆ.  ನೀನು ಬೇಕಾದರೆ ಹೋಗು, ಮಗನನ್ನು ಕೊಡುವುದಿಲ್ಲ ಎಂದುಬಿಡುತ್ತಾನೆ, ಹೆಂಡತಿ ಹೊರಟುಬಿಡುತ್ತಾಳೆ.  ಅವನ ಕೈಯಲ್ಲಿ ಕೆಲಸವಿಲ್ಲ, ಹೊಸದಾಗಿ ಸ್ಟಾಕ್ ಬ್ರೋಕರ್ ಕಂಪನಿಯೊಂದರಲ್ಲಿ ಇಂಟರ್ನ್ ಆಗಿ ಸೇರಿದ್ದಾನೆ, ಮೊದಲ ಆರು ತಿಂಗಳು ಅಲ್ಲಿ ಸಂಬಳವಿಲ್ಲ.  ನಂತರ ಇಪ್ಪತ್ತು ಜನ ಇಂಟರ್ನಿಗಳಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.  ಆದರೆ ಅವನಿಗೆ ಅದು ಬಿಟ್ಟರೆ ಮತ್ತೊಂದು ದಾರಿಯಿಲ್ಲ.  ಮಗುವನ್ನು ಡೇ ಕೇರ್ ಸೆಂಟರಿನಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಾನೆ.  ಕೆಲಸದ ಅವಧಿ ಮುಗಿದ ಮೇಲೆ ಮಗುವನ್ನೂ ಜೊತೆಗೆ ಕರೆದುಕೊಂಡು ಬೋನ್ ಸ್ಕ್ಯಾನರ್ ಮೆಶೀನ್ ಗಳನ್ನು ಮಾರಲು ಹೊರಡುತ್ತಾನೆ.  ಅದಷ್ಟೇ ಅಲ್ಲ, ಅವನ ಸಮಸ್ಯೆಗಳು ಮುಗಿಯುವುದೇ ಇಲ್ಲ.

ತೆರಿಗೆ ಬಾಕಿ ಹಣವನ್ನು ಅವನ ಬ್ಯಾಂಕ್ ಖಾತೆಯಿಂದ ಅನಾಮತ್ತಾಗಿ ತೆಗೆದುಕೊಳ್ಳಲಾಗುತ್ತದೆ.  ಮನೆಬಾಡಿಗೆ ಎಷ್ಟೋ ತಿಂಗಳುಗಳಿಂದ ಕಟ್ಟಿಲ್ಲ ಎಂದು ಮನೆ ಮಾಲಿಕ ಅವನನ್ನು ಹೊರಹಾಕುತ್ತಾನೆ.  ಜೊತೆಯಲ್ಲಿ ಐದು ವರ್ಷದ ಮಗು, ಇರಲು ಸೂರಿಲ್ಲ.  ರೈಲ್ವೇ ಸ್ಟೇಷನ್ ನ ಟಾಯ್ಲೆಟ್ ನಲ್ಲಿ ಬಾಗಿಲು ಹಾಕಿಕೊಂಡು, ನೆಲದ ಮೇಲೆ ಟಿಷ್ಯೂ ಪೇಪರ್ ಹಾಕಿಕೊಂಡು ಕೂತು, ಮಗನನ್ನು ತೊಡೆಯ ಮೇಲೆ ಮಲಗಿಸಿಕೊಳ್ಳುತ್ತಾನೆ.  ಯಾರೋ ಹೊರಗಿನಿಂದ ಬಾಗಿಲು ಬಡಿಯುತ್ತಲೇ ಇರುತ್ತಾರೆ, ಇವನು ಅಲ್ಲಾಡುವುದಿಲ್ಲ.  ಕಣ್ಣುಗಳಲ್ಲಿ ಸಿಟ್ಟಿನ, ಅಸಹಾಯಕತೆಯ ಕಣ್ಣೀರು.

ಮಗನನ್ನು ಕರೆದುಕೊಂಡೇ ಅವನು ಮಾಡುವ ಸೇಲ್ಸ್ ಕಾಲ್ ಗಳು, ಅಪ್ಪಾ ಸುಸ್ತು ಎಂದು ಆ ಮಗು ಅಳುವುದು, ಬಸ್ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಮಗುವಿನ ಕೈಯಿಂದ ಜಾರುವ ಆ ಬೊಂಬೆ, ಆ ಮಗುವಿನ ಕಣ್ಣೀರು ಇವುಗಳ ನಡುವೆಯೇ ಅವರಿಬ್ಬರ ಪರಿಸ್ಥಿತಿಯನ್ನು ಮರೆಯಲು ಆ ಅಪ್ಪ ಮಕ್ಕಳು ಆಡುವ ಆಟ ಒಂದಿರುತ್ತದೆ.

ಅಪ್ಪನ ಕೈಯಲ್ಲಿರುವ ಮೆಶೀನ್ ಅನ್ನು ಹುಚ್ಚನೊಬ್ಬ ಟೈಮ್ ಮೆಶೀನ್ ಎಂದು ಹೊತ್ತುಕೊಂಡು ಹೋಗಿರುತ್ತಾನೆ.  ಕಡೆಗೊಮ್ಮೆ ಅದು ಸ್ಮಿತ್ ಕೈ ಸೇರುತ್ತದೆ.  ಇರಲು ಮನೆಯಿಲ್ಲದೆ ರೈಲ್ವೇ ಸ್ಟೇಶನ್ನಿನಲ್ಲಿ ಕುಳಿತಾಗ ಮಗು ’ಈಗ ಎಲ್ಲಿ ಹೋಗೋದು ಅಪ್ಪ’ ಎಂದು ಕೇಳುತ್ತದೆ.  ’ಗೊತ್ತಿಲ್ಲ ಮಗನೆ’ ಅಪ್ಪ ನಿಸ್ಸಹಾಯಕ.

ಆ ಕ್ಷಣಕ್ಕೆ ಆ ಮಗು ಹಿರಿಯನಂತೆ ಮಾತು ಬದಲಾಯಿಸಲು, ’ಅದು ಟೈಮ್ ಮೆಶೀನ್ ಅಲ್ಲ’ ಎನ್ನುತ್ತದೆ.  ಅಪ್ಪ, ಅದು ಟೈಮ್ ಮೆಶೀನ್ ಎನ್ನುತ್ತಾನೆ. ಕಡೆಗೆ ಅವರಿಬ್ಬರೂ ಒಂದು ಆಟ ಆಡುತ್ತಾರೆ.  ಆ ಮೆಶೀನಿನ ಗುಂಡಿ ಒತ್ತಿದರೆ ಕಾಲ ಹಿಂದಕ್ಕೋಡುತ್ತದೆ ಎಂದು ಅಪ್ಪ ಹೇಳುತ್ತಾನೆ.  ಗುಂಡಿ ಒತ್ತಿದ ಮಗು ಮತ್ತು ಅಪ್ಪ ಇಬ್ಬರೂ ಅದು ಡೈನೋಸರ್ ಗಳ ಕಾಲ ಎಂದೂ, ಅವುಗಳಿಂದ ತಪ್ಪಿಸಿಕೊಳ್ಳಲು ಗುಹೆಯೊಳಕ್ಕೆ ಹೋಗಬೇಕೆಂದೂ ಓಡಿ ಹೋಗಿ ಟಾಯ್ಲೆಟ್ಟಿನೊಳಗೆ ಸೇರಿಕೊಳ್ಳುತ್ತಾರೆ.

ಆ ದೃಶ್ಯದಲ್ಲಿ ಜೇಡನ್ ಅಪ್ಪ ಸ್ಮಿತ್ ನನ್ನು ಮೀರಿಸಿ ನಟಿಸಿದ್ದಾನೆ. ಆ ದೃಶ್ಯದಲ್ಲಿ, ವಸತಿಹೀನರ ಗೃಹದಲ್ಲಿ ಇರಬೇಕಾದ ದೃಶ್ಯದಲ್ಲಿ ಸ್ಮಿತ್ ಮಗುವಿನ ಆತ್ಮಶಕ್ತಿಗೆ ಕುಂದಾಗದಂತೆ ಅದನ್ನು ನೋಡಿಕೊಳ್ಳುವ ರೀತಿ ಮನಸ್ಸನ್ನು ಒದ್ದೆಯಾಗಿಸುತ್ತದೆ.

ಚಿತ್ರವನ್ನು ನಿರ್ದೇಶಕ ಇನ್ನೂ ಆಳವಾಗಿ, ಹಲವಾರು ಪದರಗಳನ್ನು ಸೇರಿಸಿ ಕಟ್ಟಿಕೊಡಬಹುದಿತ್ತೆ ಎಂದರೆ ನನ್ನ ಉತ್ತರ ಖಂಡಿತಾ ಹೌದು.  ಚಿತ್ರಕ್ಕೆ ಹಲವಾರು ಮಿತಿಗಳಿವೆ.  ಅಮೇರಿಕಾದ ಮನಸ್ಸಿನಲ್ಲಿ ಆಳವಾಗಿರುವ ವರ್ಣಬೇಧದ ಬಗ್ಗೆ ಚಿತ್ರ ಮಾತನಾಡುವುದಿಲ್ಲ.  ಆ ಆಯಾಮವನ್ನೂ ಸೇರಿಸಿದ್ದರೆ ಚಿತ್ರ ತನ್ನ ಸಾಮಾಜಿಕ ಜವಾಬ್ದಾರಿಯನ್ನೂ ನಿರ್ವಹಿಸುತ್ತಿತ್ತು.  ಚಿತ್ರದ ಇನ್ನೊಂದು ಮಿತಿ ಎಂದರೆ ಅದು ದುಃಖ ಮತ್ತು ಸುಖವನ್ನು ಪರಸ್ಪರ ಎದುರಾಗಿ ನಿಲ್ಲಿಸಿ ತುಲನೆ ಮಾಡುವಾಗ ದುಃಖವನ್ನು ಬಡತನಕ್ಕೂ, ಸುಖವನ್ನು ಸಿರಿತನಕ್ಕೂ ಕಟ್ಟಿ ಹಾಕುತ್ತದೆ.

ಮನುಷ್ಯರ ಜೀವನದಲ್ಲಿ ಸುಖ ಮತ್ತು ದುಃಖವನ್ನು ಕೇವಲ ಹಣವೊಂದೇ ನಿರ್ಧರಿಸುತ್ತದೆ ಎನ್ನುವುದನ್ನು ನಾನೆಂದೂ ಒಪ್ಪಲಾರೆ.  ಚಿತ್ರದ ಇನ್ನೊಂದು ಮುಖ್ಯ ದೋಷ ಇರುವುದು ಅದು ’ಅಮೆರಿಕನ್ ಕನಸನ್ನು’ ಪ್ರತಿಪಾದಿಸುವ ರೀತಿಯಲ್ಲಿ.  ಕಷ್ಟಪಟ್ಟರೆ, ಶ್ರಮ ಹಾಕಿದರೆ, ಪ್ರಯತ್ನ ಇದ್ದರೆ ಎಲ್ಲರೂ so called American dream ಅನ್ನು ಸಾಕಾರಗೊಳಿಸಿಕೊಳ್ಳಬಹುದು ಎನ್ನುವುದರಲ್ಲೇ ಒಂದು ಅಹಂಕಾರವಿದೆ, ಗೆದ್ದವರ ಠೇಂಕಾರವಿದೆ..  ಹಣದ ಹಂಚಿಕೆ ಹಾಗು ಹೊಂದುವಿಕೆಯಲ್ಲಿ ಕೇವಲ ಪ್ರಯತ್ನ ಮತ್ತು ಶ್ರಮವೇ ಮುಖ್ಯದ್ರವ್ಯ ಎನ್ನುವ ಮಿಥ್ ಅನ್ನು ಇತಿಹಾಸ ಒಡೆದುಹಾಕಿದೆ.

ಹುಟ್ಟಿನ ಸವಲತ್ತು, ವರ್ಗದ ಸವಲತ್ತು, ಸಾಮಾಜಿಕ ಬಂಡವಾಳದ ಸವಲತ್ತು, ಒಳ್ಳೆ ವಿದ್ಯಾಭ್ಯಾಸದ ಸವಲತ್ತು, ಹಣ ಮತ್ತು ಸ್ಥಾನಮಾನದ ಕಾರಣದಿಂದಲೇ ದೊರೆಯುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಪರ್ಕಗಳ ಸವಲತ್ತುಗಳನ್ನು ಇಂತಹ ಚಿತ್ರಗಳು ಒಂದೇಟಿಗೆ ನಿರಾಕರಿಸಿಬಿಡುತ್ತದೆ.  ಹಾಗಾಗಿ ಈ ಚಿತ್ರದ ಬಗ್ಗೆ ನನಗೆ ಹಲವಾರು ತಕರಾರುಗಳಿವೆ.

ಆದರೂ ಚಿತ್ರದಲ್ಲಿನ ಅನೇಕ ದೃಶ್ಯಗಳು ಮನಸ್ಸನ್ನು ಆರ್ದ್ರಗೊಳಿಸುತ್ತದೆ.  ಅಪ್ಪ ಅಮ್ಮ ಮನೆಯಲ್ಲಿ ಜಗಳವಾಡುತ್ತಿರುತ್ತಾರೆ.  ಅಪ್ಪ ಮಾತನಾಡಿಸಿದರೆ ಮಗು ಕಣ್ಣಿಗೆ ಕಣ್ಣು ಸೇರಿಸುವುದಿಲ್ಲ, ಆ ಜಗಳ ತನಗೆ ಕೇಳಿಸೇ ಇಲ್ಲ ಎನ್ನುವಂತೆ ಎತ್ತಲೋ ನೋಡುತ್ತಿರುತ್ತದೆ.  ಅಪ್ಪ ಅಮ್ಮ ಬೇರಾದಾಗ ಅಷ್ಟು ಪುಟ್ಟ ಮಗು ಅನುಭವಿಸುವ ಅತಂತ್ರ ಮನೋಸ್ಥಿತಿ ಹೇಗಿರಬಹುದು?  ಹಾಗೆ ಬಿಟ್ಟು ಹೋದ ಅಪ್ಪ ಅಥವಾ ಅಮ್ಮನಿಗೆ ನಾನು ನಾನು ಬೇಡವಾಗಿದ್ದೆನೆ ಎನ್ನುವ ಪ್ರಶ್ನೆ ಅದನ್ನು ಕಾಡುತ್ತಲೇ ಇರುತ್ತದೆ.

ಐದು ವರ್ಷಗಳ ಪುಟ್ಟ ಮಗು, ಅಮ್ಮ ಬಿಟ್ಟು ಹೋದ ಎಷ್ಟೋ ದಿನಗಳ ನಂತರ ’ಅಮ್ಮ ಬಿಟ್ಟು ಹೋಗಿದ್ದು ನನ್ನಿಂದಲೇ?’ ಎಂದು ತಂದೆಯನ್ನು ಕೇಳುವಾಗ ಆ ಮಗುವಿನ ಮುಗ್ಧಮುಖ ನಮ್ಮನ್ನು ಅನೇಕ ದಿನಗಳವರೆಗೂ ಬೇಟೆಯಾಡುತ್ತಲೇ ಇರುತ್ತದೆ.
ಪಾರ್ಕಿಂಗ್ ಟಿಕೆಟ್ ಹಣ ಕಟ್ಟಿಲ್ಲ ಎಂದು ಇವನನ್ನು ಒಂದು ದಿನದ ಮಟ್ಟಿಗೆ ಜೈಲಿಗೆ ಹಾಕಲಾಗುತ್ತದೆ.  ಮಗು ಡೇ ಕೇರ್ ಸೆಂಟರಿನಲ್ಲಿ, ಹೆಂಡತಿ ಮನೆಬಿಟ್ಟು ಹೋಗಿದ್ದಾಳೆ.  ಸಂಜೆ ಮಗುವನ್ನು ಕರೆದುಕೊಂಡು ಬರುವವರು ಯಾರು?

ವಿಧಿಯಿಲ್ಲದೆ ಹೆಂಡತಿಗೇ ಫೋನ್ ಮಾಡುತ್ತಾನೆ.  ಮರುದಿನ ಇವನ ಬಿಡುಗಡೆ ಆಗುತ್ತದೆ.  ಅಕಸ್ಮಾತ್ ಹೆಂಡತಿ ಮಗುವನ್ನು ವಾಪಸ್ ಕರೆದುಕೊಂಡು ಬರದಿದ್ದರೆ?? ಪಂಜರದಲ್ಲಿ ಸಿಲುಕಿದ ಪ್ರಾಣಿಯೊಂದು ಒದ್ದಾಡುವಂತೆ ಸ್ಮಿತ್ ಒದ್ದಾಡಿಬಿಡುತ್ತಾನೆ.  ಮಗ ಅವನ ಇರುವಿಕೆಯ ಕಾರಣ, ಆಧಾರ, ಫಲಿತ ಎಲ್ಲವೂ ಹೌದು.

ಚಿತ್ರದ ಕಡೆಯ ದೃಶ್ಯ, ಸ್ಮಿತ್ ನ ಇಂಟರ್ನಿ ಅವಧಿಯಾದ ಆರು ತಿಂಗಳು ಮುಗಿದಿದೆ.  ಅವನ ತಂಡದ ಇಪ್ಪತ್ತು ಜನರಲ್ಲಿ ಒಬ್ಬರು ಮಾತ್ರ ಆಯ್ಕೆಯಾಗುತ್ತಾರೆ.  ಆತ ಆಯ್ಕೆಯಾದರೆ ಗೆದ್ದ, ಆದರೆ ಆಗದಿದ್ದರೆ? ’ಆಗದಿದ್ದರೆ’ ಎಂದು ಯೋಚಿಸಲೂ ಅವನಿಗೆ ಧೈರ್ಯವಿಲ್ಲ, ಅವನನ್ನು ಕೋಣೆಯೊಳಗೆ ಕರೆಯಲಾಗುತ್ತದೆ. ಇವನ ಎದೆಯಲ್ಲಿ ತಲ್ಲಣ, ಆದರೆ ಮುಖವನ್ನು ನಿರ್ಭಾವುಕವಾಗಿಸಿಕೊಂಡು ಕೂತಿದ್ದಾನೆ.

ಕಂಪನಿಯ ಮುಖ್ಯಸ್ಥರು ಆತ ಆಯ್ಕೆಯಾಗಿದ್ದಾನೆ ಎಂದು ಹೇಳುತ್ತಾರೆ.  ಸಾಧಾರಣವಾಗಿ ಆ ಸಂದರ್ಭದಲ್ಲಿ ಜೋರಾದ ಸಂಗೀತ, ಮುಖದ ಭಾವಾವೇಶ, ಅಬ್ಬರದ ಅಭಿನಯ ಎಲ್ಲಕ್ಕೂ ಅವಕಾಶ ಇರುತ್ತದೆ.  ಆದರೆ ಸ್ಮಿತ್ ನ್ ಮುಖದ ಒಂದು ಸ್ನಾಯುವೂ ಕದಲುವುದಿಲ್ಲ.  ಮುಖ ಮತ್ತಷ್ಟು ಗಡಸಾದಂತೆ ಕಾಣುತ್ತದೆ.  ಅವನ ಕಣ್ಣುಗಳು ಮಾತ್ರ ಆಯಾಚಿತವಾಗಿ ತುಂಬಿಕೊಳ್ಳುತ್ತದೆ.  ಅವರಿಗೆಲ್ಲಾ ವಂದಿಸಿ ಅವನು ಏಳುತ್ತಾನೆ.  ಸರ ಸರ ಎಂದು ಆಫೀಸಿನಿಂದ ಹೊರಗೆ ಬರುತ್ತಾನೆ.  ರಸ್ತೆ ತುಂಬಾ ನೂರಾರು ಜನ.  ಆ ಅಪರಿಚಿತರ ನಡುವೆ ಸೇರಿ ನಿಲ್ಲುತ್ತಾನೆ.  ಆಗ ಅವನ ಮುಖ ಭಾವನೆಗಳಿಗೆ ತೆರೆದುಕೊಳ್ಳುತ್ತದೆ, ಅವನ ಕಣ್ಣುಗಳಿಂದ ಕಣ್ಣೀರು ಸುರಿಯುತ್ತದೆ.  ಓಡುತ್ತಾ ಮಗನ ಡೇ ಕೇರ್ ಸೆಂಟರಿಗೆ ಬಂದು ಮಗನನ್ನು ತಬ್ಬಿಕೊಳ್ಳುತ್ತಾನೆ.

ಈ ಇಂತಹ ದೃಶ್ಯಗಳಿಗಾಗಿ, ನಿಯಂತ್ರಿತ ಅಭಿನಯಕ್ಕಿರುವ ತಾಕತ್ತು ತಿಳಿಯುವುದಕ್ಕಾಗಿ ಈ ಚಿತ್ರವನ್ನು ನೋಡಬೇಕು.
ಕೊನೆಯ ಮಾತುಗಳು, ಈ ಚಿತ್ರ ಕ್ರಿಸ್ ಗಾರ್ಡನರ್ ಎನ್ನುವ ವ್ಯಕ್ತಿಯ ಬದುಕಿನ ಕಥೆ.  ಆತ ಸಹ ಮಗನೊಡನೆ ರೈಲ್ವೇನಿಲ್ದಾಣದ ಟಾಯ್ಲೆಟ್ ಒಂದರಲ್ಲಿ ರಾತ್ರಿ ಕಳೆದಿರುತ್ತಾನೆ.  ಚಿತ್ರದಲ್ಲಿ ಅಪ್ಪ ಮಗನ ಪಾತ್ರ ವಹಿಸಿರುವ ಸ್ಮಿತ್ ಮತ್ತು ಜೇಡನ್ ನಿಜ ಜೀವನದಲ್ಲಿಯೂ ತಂದೆ ಮಗ. ಸದಾ ಅಮ್ಮ ಮಕ್ಕಳನ್ನು ಕಾಪಾಡುವ ಚಿತ್ರ, ಕಥೆ, ನಾಟಕಗಳಿಗೆ ಕಣ್ಣಾಗುವ ನಾವು ಅಪ್ಪನೊಬ್ಬ ಮಗುವನ್ನು ಹೇಗೆ ಜೋಪಾನ ಮಾಡಬಹುದು ಎಂದು ನೋಡಲು ಈ ಚಿತ್ರ ನೋಡಬೇಕು