ಆದರೆ ಕೆಲವು ಚಿತ್ರಗಳಿರುತ್ತವೆ..

ಚಿತ್ರಗಳೆಂದರೆ ಅದೊಂದು ರಮ್ಯಲೋಕ.  ಸುಖವನ್ನಿರಲಿ, ಅಲ್ಲಿ ದುಃಖವನ್ನು ಸಹ ’ಸುಂದರ’ವಾಗಿಯೇ ತೋರಿಸಲಾಗುತ್ತದೆ.  ಕಣ್ಣಿಗೆ ಅಂದವಾಗಿ, ಕಿವಿಗೆ ಇಂಪಾಗಿ, ಮನಸ್ಸಿಗೆ ತಂಪಾಗಿ ಇರಬೇಕು ಎನ್ನುವುದು ಚಿತ್ರಗಳ ಸಾಮಾನ್ಯ ನೀತಿ.

ಆದರೆ ಕೆಲವು ಚಿತ್ರಗಳಿರುತ್ತವೆ..

ಅವು ವಾಸ್ತವವನ್ನು ಕೇವಲ ತೋರಿಸುವುದಿಲ್ಲ, ಕಣ್ಣಿಗೆ ರಾಚುತ್ತವೆ.  ಹಾಗೆ ರಾಚುವಾಗ ಅದು ಮೇಲೆ ಹೇಳಿದ ಯಾವುದೇ ಗುಣವನ್ನೂ ಉಳಿಸಿಕೊಳ್ಳಲಾಗುವುದಿಲ್ಲ.  ಅಂತಹ ಒಂದು ಚಿತ್ರ Flemish Heaven.

ಈ ಚಿತ್ರದಲ್ಲಿ ನಿರ್ದೇಶಕ Peter Monsaert ಲೈಂಗಿಕ ವೃತ್ತಿ, ಲೈಂಗಿಕ ವೃತ್ತಿನಿರತರ ಕುಟುಂಬ ಜೀವನ ಮತ್ತು ಲೈಂಗಿಕ ಕಾರ್ಯಕರ್ತೆಯೊಬ್ಬಳ ಆರು ವರ್ಷದ ಮಗಳ ಮೇಲಾಗುವ ಲೈಂಗಿಕ ದೌರ್ಜನ್ಯದ ಕಥೆ ಹೇಳುತ್ತಾರೆ.  ಆದರೆ ಈ ಕಥೆ ಹೇಳುವಾಗ ಎಲ್ಲೂ ಅವರ ಕ್ಯಾಮೆರಾ ಕಣ್ಣುಗಳಲ್ಲಿ ಲಾಲಸೆ ಕಾಣಿಸುವುದಿಲ್ಲ, ಅದು ನೋಡುಗರ ’ಇಣುಕು ಬುರುಕ’ತನವನ್ನು ಉದ್ದೀಪಿಸುವುದಿಲ್ಲ.  ಅತ್ಯಂತ ಸಂಕೀರ್ಣವಾದ ವಿಷಯವನ್ನು ಅಷ್ಟೇ ಸಂಕೀರ್ಣ ’ಭಾಷೆ’ಯಲ್ಲಿ  ಅವರು ಮಾತನಾಡುತ್ತಾರೆ.

ಚಿತ್ರದಲ್ಲಿ ಹಿನ್ನಲೆ ಸಂಗೀತವಿಲ್ಲ, ನಿರೂಪಣೆ ಲೀನಿಯರ್ ಆಲ್ಲ. ಆಗಾಗ ಕೈ ಕ್ಯಾಮೆರಾದಲ್ಲಿ ಆಗುವ ಶೂಟಿಂಗ್ ಕಣ್ಣಿಗಷ್ಟೇ ಅಲ್ಲ ಮನಸ್ಸಿಗೂ ತ್ರಾಸು ಕೊಡುತ್ತದೆ, ನಿರ್ದೇಶಕ ಮತ್ತು ಕ್ಯಾಮೆರಾ ಮನ್ ಇಬ್ಬರ ಉದ್ದೇಶವೂ ಬಹುಶಃ ಅದೇ ಆಗಿದೆ.  ಅನೇಕ ಸಲ ಅವರ ಕ್ಲೋಸ್ ಅಪ್ ಗಳು ಎಷ್ಟು ಕ್ಲೋಸ್ ಆಗಿರುತ್ತವೆ ಎಂದರೆ ದೃಶ್ಯದ ಎಲ್ಲಾ ಭಾವೋದ್ವೇಗ ನಮ್ಮ ಕೈ ಸ್ಪರ್ಶಕ್ಕೆ ತಾಕುತ್ತಿರುತ್ತದೆ.  ಚಿತ್ರದ ಬಹುಭಾಗದ ಚಿತ್ರೀಕರಣ ಕೆಂಪು ಬೆಳಕಿನಲ್ಲಿ ಆಗಿದೆ, ಕೆಂಪು ಎಂದರೆ ಏನೆಲ್ಲಾ?? ಪ್ಯಾಶನ್, ಹಿಂಸೆ, ರಕ್ತ, ಹೆದರಿಕೆ, ನೋವು??  ಅವರಿಗೆ ಇದನ್ನೊಂದು ’ಸುಂದರ’ ಚಿತ್ರ ಮಾಡುವ ಯಾವ ಉದ್ದೇಶವೂ ಇಲ್ಲ, ಇದರಲ್ಲಿರುವುದು ಒಂದು ಕಟುವಾದ ಅನುಭವ ಮತ್ತು ಅದನ್ನು ಅವರು ಹಾಗೆಯೇ ದಾಟಿಸಲಿದ್ದಾರೆ.

ಆರು ವರ್ಷದ ಮಗುವಿನ ಮೇಲೆ ಪುರುಷನೊಬ್ಬ ಲೈಂಗಿಕ ದೌರ್ಜನ್ಯ ಎಸೆದರೆ ಅದು ಆ ಮಗುವಿನೊಂದಿಗೆ ಮಗುವಿನ ತಂದೆ ತಾಯಿಗೂ ಇನ್ನಿಲ್ಲದ ನೋವು, ಆಘಾತವನ್ನು ತಂದೊಡ್ಡುತ್ತದೆ.  ಅದೊಂದು ನಿತ್ಯನರಕ.  ಆದರೆ ಆ ಸಂದರ್ಭದಲ್ಲಿ ತಾಯಿ ಒಬ್ಬ ಲೈಂಗಿಕ ಕಾರ್ಯಕರ್ತೆಯಾಗಿದ್ದರೆ?  ಅವಳ ಮೇಲೆ ತಪ್ಪು ಹೊರಸಿ, ನಮ್ಮ ಮನಸ್ಸನ್ನು ಅಪರಾಧ ಪ್ರಜ್ಞೆಯಿಂದ ತಪ್ಪಿಸುವುದು ಸುಲಭ.  ಆದರೆ ಲೈಂಗಿಕ ದೌರ್ಜನ್ಯಗಳು ಆಗಬೇಕೆಂದರೆ ತಾಯಿ ಲೈಂಗಿಕ ವೃತ್ತಿಯಲ್ಲಿ ಇರಲೇಬೇಕೆಂದಿಲ್ಲ, ತಾಯಿ ವೈದ್ಯೆಯಾಗಿರಬಹುದು, ಅಕೌಂಟೆಂಟ್ ಆಗಿರಬಹುದು, ಸಾಫ್ಟ್ವೆರ್ ಉದ್ಯೋಗಿ ಆಗಿರಬಹುದು, ಗೃಹಿಣಿ ಆಗಿರಬಹುದು.  ಲೈಂಗಿಕ ದೌರ್ಜನ್ಯಕ್ಕೆ ಅದು ಮುಖ್ಯವಾಗುವುದೇ ಇಲ್ಲ, ತುಂಬಿದ ಮನೆಯಲ್ಲಿ ಸಹ ಇಂತಹುದೊಂದು ಘಟನೆ ಘಟಿಸಿಬಿಡಬಹುದು.

ಆದರೆ ಇಲ್ಲಿ ತಾಯಿ ಒಬ್ಬ ಲೈಂಗಿಕ ಕಾರ್ಯಕರ್ತೆ, ಅಷ್ಟೇ ಅಲ್ಲ ಮನೆತನದ ಕಸುಬಾದ ಲೈಂಗಿಕ ವೃತ್ತಿ ಗೃಹವನ್ನು ನಡೆಸುತ್ತಿದ್ದಾಳೆ.  ಇಲ್ಲಿ ಈ ಘಟನೆ ಮಗುವಿನ ಮೇಲೆ ಉಂಟು ಮಾಡುವ ಆಘಾತದಷ್ಟೇ ಆಳವಾದದ್ದು ಅದು ಅಮ್ಮನಲ್ಲಿ ಉಂಟು ಮಾಡುವ ಅಪರಾಧಿ ಪ್ರಜ್ಞೆ.  ಇದನ್ನು ನಿರ್ದೇಶಕರು ಹಲವಾರು ಪದರಗಳಲ್ಲಿ ಕಟ್ಟಿಕೊಡುತ್ತಾರೆ. ಫ್ಲೆಮಿಶ್ ಎನ್ನುವುದು ಬೆಲ್ಜಿಯಂ ನ ಉತ್ತರದಲ್ಲಿರುವ ಫ್ಲಾಂಡರ್ಸ್ ಪ್ರಾಂತ್ಯದ ಹೆಸರು.  ಎಡವಿ ಬಿದ್ದರೆ ಫ್ರಾನ್ಸ್.  ಫ್ಲೆಮಿಶ್ ಹೆವೆನ್ ಅಲ್ಲಿರುವ ಒಂದು ಲೈಂಗಿಕವೃತ್ತಿ ಗೃಹ.

ಸಿಲ್ವಿ ಇಲ್ಲಿ ಮಗು ಎಲಿನ್ ಳ ತಾಯಿ.  ಸಿಲ್ವಿಯ ತಂದೆ ಸ್ಥಾಪಿಸಿದ ಫ್ಲೆಮಿಸ್ ಹೆವೆನ್ ಸಧ್ಯಕ್ಕೆ ಅವಳ ಕೈಲಿದೆ.  ಅದನ್ನು ಆಕೆಯೇ ನಡೆಸುತ್ತಿರುತ್ತಾಳೆ.  ಆ ಕೆಲಸಕ್ಕೆ ಬೇಕಾದ ಗತ್ತು, ಬಿಗಿ, ಗಟ್ಟಿತನ, ಒರಟುತನ ಎಲ್ಲವನ್ನೂ ಮೈಗೂಡಿಸಿಕೊಂಡಿರುತ್ತಾಳೆ.  ನೇರಗೆರೆಯಂತಾಗಿರುವ ಅವಳ ತುಟಿಗಳಲ್ಲಿ ನಗು ಇಣುಕುವುದು ಅಪರೂಪ.  ಅವಳ ಮಗಳು ಮಾತ್ರ ಅವಳ ವ್ಯಕ್ತಿತ್ವದ ಮೃದು, ಮಿಕ್ಕಂತೆ ಅವಳೊಂದು ಉಕ್ಕಿನ ತುಂಡು.  ತಾಯಿ ಮಗಳ ಪಾತ್ರ ವಹಿಸಿರುವ ಸಿಲ್ವಿ ಮತ್ತು ಎಲಿನ್ ನಿಜ ಜೀವನದಲ್ಲೂ ತಾಯಿ ಮಗಳು.  ಅವರಿಬ್ಬರ ನಡುವೆ ನಿರಂತರವಾಗಿ ಒಂದು ಸಂವಹನ ಹರಿಯುತ್ತಲೇ ಇರುತ್ತದೆ.  ಡಿರ್ಕ್ ಸಿಲ್ವಿಯ ಮಗುವಿನ ತಂದೆ.  ಸಿಲ್ವಿಯ ವೃತ್ತಿಯ ಕಾರಣದಿಂದ ಡಿರ್ಕ್ ನ ತಾಯಿ ಅವರ ಮದುವೆಗೆ ಒಪ್ಪಿರುವುದಿಲ್ಲ.  ಒಂಟಿ ತಾಯಿಯಾಗಿ ಸಿಲ್ವಿ ಮಗಳನ್ನು ಸಾಕುತ್ತಿರುತ್ತಾಳೆ. ಆ ಕಾರಣಕ್ಕೆ ಸಿಲ್ವಿಗೆ ಡಿರ್ಕ್ ನನ್ನು ಕಂಡರೆ ಸಿಟ್ಟಿದೆ.

ಚಿತ್ರದ ಶುರುವಿನಲ್ಲಿ ಪುಟ್ಟ ದೇವತೆಯಂತಹ ಮಗುವೊಂದು ಮೆಲುದನಿಯಲ್ಲಿ ತನ್ನ ಪಾಡಿಗೆ ತಾನು ಮಕ್ಕಳ ಪದ್ಯ ಹೇಳಿಕೊಳ್ಳುತ್ತಿದೆ. ಕ್ಯಾಮೆರಾ ಆ ಮಗುವಿನ ಮುಖದ ಮೇಲೆ ಜೂಮ್ ಆಗುತ್ತದೆ.  ಅದರ ಕಣ್ಣುಗಳಲ್ಲಿ ಪ್ರಾರ್ಥನೆಯ ಶಾಂತತೆ. ಕ್ಯಾಮೆರಾ ಮಗುವಿನ ತಾಯಿಯ ಕಡೆ ತಿರುಗುತ್ತದೆ.  ಆಕೆ ವಿವಿಧ ವಿನ್ಯಾಸದ ಒಳ ಉಡುಪುಗಳನ್ನು ಎತ್ತಿ ಬ್ಯಾಗ್ ಗೆ ತುಂಬುತ್ತಿದ್ದಾಳೆ.  ಅದೊಂದು ದೃಶ್ಯ ಇಬ್ಬರ ಪ್ರಪಂಚಕ್ಕೂ ಇರುವ ವ್ಯತ್ಯಾಸವನ್ನು ಹೇಳುತ್ತದೆ.  ಅದಷ್ಟೇ ವ್ಯತ್ಯಾಸ.  ಅದು ಬಿಟ್ಟರೆ ಆಕೆ ಮಿಕ್ಕೆಲ್ಲಾ ಅಮ್ಮಂದಿರಂತೆಯೇ ಬೆಳಗ್ಗೆ ಮಗುವನ್ನು ಕಿಂಟರ್ ಗಾರ್ಡನ್ ಗೆ ಸಿದ್ಧಮಾಡುತ್ತಿದ್ದಾಳೆ.  ಕಾರಿನಲ್ಲಿ ಮಗುವನ್ನು ಕರೆದುಕೊಂಡು ಹೋಗುವ ಆಕೆ ತನ್ನ ’ಆಫೀಸಿ’ನ ಹೊರಗೆ ಕಾರು ನಿಲ್ಲಿಸುತ್ತಾಳೆ, ಕಾರಿನಲ್ಲಿ ಕೂತ ಪುಟ್ಟಿ’ ಕಣ್ಣಿಗೆ ಪಟ್ಟಿ ಅಂಟಿಸಿಕೊಂಡಿದ್ದಾಳೆ, ’ಯಾಕಮ್ಮ’ ಅಂದರೆ, ’ಇವತ್ತು ನನ್ನ ಕಣ್ಣಿಗೆ ಸುಸ್ತಾಗಿದೆ, ಕೆಲಸ ಮಾಡಲ್ಲವಂತೆ’ ಅನ್ನುತ್ತಾಳೆ, ಥೇಟ್ ನಮ್ಮ ನಿಮ್ಮೆಲ್ಲರ ಮನೆಯ ಮಗುವಿನಂತೆ. ಮಗುವನ್ನು ಕಾರ್ ಒಳಗೆ ಬಿಟ್ಟು, ಹೊರಗೆ ಬರದಂತೆ ತಾಕೀತು ಮಾಡಿ, ಒಳಗೆ ಹೋಗಿ, ಒಂದೆರಡು ಅವಸರದ ಕೆಲಸ ಮುಗಿಸಿ ಬರುತ್ತಾಳೆ.  ಕಾರ್ ನಲ್ಲಿ ಮಗುವನ್ನು ಮುಖ್ಯರಸ್ತೆಯ ಬಳಿ ಕರೆದುಕೊಂಡು ಹೋಗಿ ಕಾಯುತ್ತಾಳೆ.  ಅಲ್ಲಿ ಒಂದು ಬಸ್ ಬರುತ್ತದೆ.  ಆ ಬಸ್ಸಿನ ಡ್ರೈವರ್ ಡಿರ್ಕ್.  ಆತ ಅದರಲ್ಲಿ ಎಲಿನ್ ಳನ್ನು ಅವಳ ಶಾಲೆಗೆ ಕರೆದುಕೊಂಡು ಹೋಗುತ್ತಾನೆ.  ಇದು ಅವರ ದೈನಂದಿನ ದಿನಚರಿ.

ಎಲಿನ್ ಗೆ ಅಮ್ಮ ಕೆಲಸ ಮಾಡುವ ಜಾಗದ ಬಗ್ಗೆ ಕುತೂಹಲ.  ಅಮ್ಮ ನೀವಲ್ಲಿ ಏನು ಕೆಲಸ ಮಾಡ್ತೀರಿ ಎಂದು ಕೇಳುತ್ತಾಳೆ.  ಆರು ವರ್ಷದ ಮಗಳ ಪ್ರಶ್ನೆಗೆ ಸಿಲ್ವಿ ಏನೆಂದು ಉತ್ತರಿಸಿಯಾಳು?  ಜನಕ್ಕೆ ಅಪ್ಪುಗೆ ಬೇಕಾದಾಗ ಅವರು ನಮ್ಮಲ್ಲಿಗೆ ಬರುತ್ತಾರೆ, ನಾವು ಅವರಿಗೆ ಅಪ್ಪುಗೆ ಕೊಡುತ್ತೇವೆ ಎಂದು ಹೇಳುತ್ತಾಳೆ.  ಕಾರಿನಿಂದ ಕೂತು ನೋಡುವ ಎಲಿನ್ ಗೆ ಅಮ್ಮನ ಆಫೀಸಿನ ಬಾಗಿಲುಗಳಲ್ಲಿ ಹೆಣೆದ ಕೆಂಪು ದೀಪಗಳ ಬಗ್ಗೆ ಅದಮ್ಯ ಕುತೂಹಲ.

ಅಂದು ಮಗುವಿಗೆ ಆರನೆಯ ಹುಟ್ಟುಹಬ್ಬ.  ಅಂದು ಕೆಲಸ ಮಾಡುವ ಜಾಗದಲ್ಲಿ ಏನೋ ಗಲಾಟೆ ಆಗಿ ಸಿಲ್ವಿ ಮೊದಲೇ ಬಂದಿದ್ದಾಳೆ.  ಎಲಿನ್ ಳನ್ನು ಅಜ್ಜಿ ಮನೆಯಿಂದ ಕರೆದುಕೊಂಡು ಬಂದಿದ್ದಾಳೆ.  ಕಾರಿನ ಹಿಂದಿನ ಸೀಟಿನಲ್ಲಿ ಎಲಿನ್.  ಅಜ್ಜಿ ಕಾರನ್ನು ಸಿಲ್ವಿಯ ಆಫೀಸಿನ ಮುಂದೆ ನಿಲ್ಲಿಸಿ ಒಳಗೆ ಹೋಗುತ್ತಾಳೆ.  ಕಾರಿನ ಮುಂದಿನ ಸೀಟಿನಲ್ಲಿ ಎಲಿನ್ ಳ ಹುಟ್ಟುಹಬ್ಬದ ಕೇಕ್, ಅಜ್ಜಿ ಕಾರಿನ ಕೀ ಕಾರಿನಲ್ಲೇ ಬಿಟ್ಟು ಇಳಿದಿದ್ದಾಳೆ.  ಅದು ಒಂದು ದುರ್ಘಟನೆಗೆ ಕಾರಣವಾಗುತ್ತದೆ.

ಅಮ್ಮನ ಅಂಗಡಿಯಲ್ಲಿ ಏನೋ ಗಲಾಟೆ ನಡೆಯುತ್ತಿದೆಯಲ್ಲ ಎಂದು ಮಗು ಕಾರಿನಿಂದ ಇಳಿಯುತ್ತದೆ.  ಕೆಂಪುಬಾಗಿಲಿನಾಚೆಯ ತನ್ನ ಪ್ರಪಂಚದಿಂದ ಕೆಂಪು ಬಾಗಿಲಿನೊಳಗಿನ ಅಮ್ಮನ ಪ್ರಪಂಚಕ್ಕೆ ಮಗು ಹೆಜ್ಜೆಯಿಡುತ್ತದೆ.  ಅಲ್ಲೊಂದು ಅಕ್ವೇರಿಯಂ, ಕೆಂಪು ಬೆಳಕಿನಲ್ಲಿ, ಡಬ್ಬಿಯ ಒಳಗೇ ಓಡಾಡುತ್ತಿರುವ ಸುಂದರ ಮೀನುಗಳು.

ಅಚಾನಕ್ಕಾಗಿ ಅಲ್ಲೊಬ್ಬ ಗಂಡು ಬರುತ್ತಾನೆ.  ಕ್ಯಾಮೆರಾ ಆತನ ಮುಖವನ್ನು ತೋರಿಸುವುದಿಲ್ಲ, ನಮಗೆ ಕಾಣುವುದು ಕನ್ನಡಕದ ಹಿಂದಿನ ಆತನ ಕಣ್ಣುಗಳು ಮತ್ತು ಕೇಳಿಸುವುದು ಅವನ ದನಿ.  ಯಾರು ನೀನು ಎಂದು ಆತ ಕೇಳಿದ ಪ್ರಶ್ನೆಗೆ ಅವನತ್ತ ತಿರುಗುತ್ತದೆ ಮಗು.  ಅದಕ್ಕೆ ಅಮ್ಮ ಹೇಳಿದ್ದು ನೆನಪಿಗೆ ಬರುತ್ತದೆ, ಅಮ್ಮ ಇಲ್ಲಿ ’ಅಪ್ಪುಗೆ’ಗಳನ್ನು ಕೊಡುತ್ತಾಳೆ.  ಅಮ್ಮನ ಅಂಗಡಿಯಲ್ಲಿ ತಾನು ಅವಳಿಗೆ ಸಹಾಯ ಮಾಡುತ್ತೇನೆ ಎನ್ನುವ ಉತ್ಸಾಹದಲ್ಲಿ ಆ ಮಗು ಅವನ ಕಾಲುಗಳನ್ನು ಬಳಸಿ ಅಪ್ಪಿಕೊಳ್ಳುತ್ತದೆ.  ಆದರೆ ಮುಂದೆ ಆಗುವುದು ಬೇರೆಯೇ ಘೋರ.

ಸಿಲ್ವಿ ಹೊರಗೆ ಬಂದು ಮಗುವಿಗಾಗಿ ಹುಡುಕುತ್ತಾಳೆ. ಅವಳ ತಲೆಗೆ ಒತ್ತಿ ನಿಂತಂತೆ ಚಲಿಸುವ ಕ್ಯಾಮೆರಾ ನಮ್ಮನ್ನು ಅವಳ ಆತಂಕದಲ್ಲಿ ಪಾಲುದಾರರನ್ನಾಗಿಸುತ್ತದೆ.  ಮಗು ಕಾಣಿಸುತ್ತಿಲ್ಲ, ಕಾರ್ ಸಹ ಇಲ್ಲ.  ಮಗುವಿಗಾಗಿ ಹುಡುಕಾಟ ಆರಂಭವಾಗುತ್ತದೆ.  ಡಿರ್ಕ್ ಸಹ ಹುಡುಕುತ್ತಿದ್ದಾನೆ.  ಕಡೆಗೆ ಒಂದು ಕಡೆ ಕಾರ್ ನಿಂತಿರುವುದು ಕಾಣುತ್ತದೆ.  ಒಳಗೆ ಸೋತಂತೆ, ನಿರ್ಜೀವವಾದಂತೆ ಸ್ಟೇರಿಂಗ್ ಗೆ ಒರಗಿರುವ ಹುಟ್ಟುಹಬ್ಬದ ಕೂಸು ಎಲಿನ್.

ಕಥೆ ಇಲ್ಲಿಂದ ಚಲಿಸುವುದು ಕಡುಗಪ್ಪು ಹಾದಿಯ ದಟ್ಟ ವಿಷಾದದಲ್ಲಿ. 

ಮುಂದಿನ ದೃಶ್ಯದಲ್ಲಿ ಆ ಮಗು ಅಮ್ಮನ ಜೊತೆ ಪೋಲೀಸ್ ಸ್ಟೇಷನ್ನಿನಲ್ಲಿ.  ಆ ಮಗುವಿನ ವೈದ್ಯಕೀಯ ಪರೀಕ್ಷೆ ಆಗಬೇಕು.  ಅ ಮಗುವನ್ನು ಆ ಘಟನೆಯ ಬಗ್ಗೆ ವಿಚಾರಣೆ ಮಾಡಿ, ವಿವರಗಳನ್ನು ಪಡೆಯಬೇಕು.  ಆದರೆ ಇಲ್ಲೊಂದು ತೊಡಕು.  ಮಗುವಿನ ವಿಚಾರಣೆ ಆಗುವಾಗ ಅಮ್ಮ ಮಗುವಿನ ಜೊತೆಗಿರುವಂತಿಲ್ಲ, ಕಾರಣ ಆಕೆಯ ವೃತ್ತಿ.  ಮಗುವನ್ನು ಅಮ್ಮನೇ ವೃತ್ತಿಗಿಳಿಸಿದ್ದರೆ ಎನ್ನುವ ಅಂಶವನ್ನು ಪೋಲೀಸರು ತಳ್ಳಿಹಾಕುತ್ತಿಲ್ಲ.  ಮಹಿಳಾ ಪೋಲೀಸ್ ಮಗುವನ್ನು ವಿಚಾರಣೆಗೆಂದು ಒಳಗೆ ಕರೆದುಕೊಂಡು ಹೋಗುತ್ತಾರೆ.  ಆ ದೃಶ್ಯದಲ್ಲಿ, ಅಷ್ಟೇಕೆ ಮುಂದಿನ ಎಲ್ಲಾ ದೃಶ್ಯಗಳಲ್ಲಿ ತಾಯಿಯ ಪಾತ್ರ ವಹಿಸಿರುವ ಕಲಾವಿದೆಯ ನಿಯಂತ್ರಿತ ಅಭಿನಯ ತನ್ನ ತಣ್ಣನೆಯ ಗುಣದ ಕಾರಣದಿಂದಲೇ ನಮ್ಮನ್ನು ಕಂಗೆಡಿಸುತ್ತದೆ.  ಆಕೆಗೆ ತನ್ನ ವೃತ್ತಿ ಗೊತ್ತು, ಅದನ್ನು ಸಮಾಜ ಹೇಗೆ ನೋಡುತ್ತದೆ ಎಂದು ಗೊತ್ತು.  ಆದರೆ ಅದಕ್ಕಾಗಿ ಅವಳು ಕ್ಷಮೆ ಕೇಳಲಾರಳು, ನಿಮ್ಮ ಅನುಕಂಪವನ್ನು ಬೇಡಲಾರಳು.

ತನಿಖೆಯಲ್ಲಿದ್ದ ಪ್ರತಿ ಒಬ್ಬರೂ ನೇರವಾಗಿ ಅಥವಾ ಸೂಚ್ಯವಾಗಿ ಅವಳಿಗೆ ಅವಳ ಕೆಲಸವನ್ನು ನೆನಪಿಸುತ್ತಿರುತ್ತಾರೆ.  ಅವಳ ಗಾಂಭೀರ್ಯ ಮುರಿಯುವುದಿಲ್ಲ.  ತನಿಖೆಯಲ್ಲಿ ಕಡೆಗೆ ತಿಳಿಯುವುದಿಷ್ಟು ಆ ಗಂಡಸು ಫ್ರ್ಯಾನ್ಸ್ ನಿಂದ ಬಂದಿದ್ದವನು.  ಅವನ ಕಾಲಿನಲ್ಲಿದ್ದದ್ದು ಲೆದರ್ ಶೂ.  ಮಗುವಿನ ಮೈತುಂಬಾ ಆ ವ್ಯಕ್ತಿಯ ಡಿಎನ್ ಎ ಕುರುಹುಗಳಿವೆ, ಆದರೆ ಅದು ಇವರ ಕಂಪ್ಯೂಟರ್ ನಲ್ಲಿರುವ ಯಾವುದೇ ಡಿ ಎನ್ ಎ ಗೆ ಹೊಂದಿಕೆ ಆಗುತ್ತಿಲ್ಲ.  ಆ ತನಿಖಾಧಿಕಾರಿಯ ಕಣ್ಣಿಗೆ ಕಣ್ಣು ಸೇರಿಸಿ ಮಾತನಾಡುವ ಆತ್ಮವಿಶ್ವಾಸ ಸಿಲ್ವಿಗಿಲ್ಲ, ಅವಳಲ್ಲಿ ಒಂದು ಅಪರಾಧಿ ಪ್ರಜ್ಞೆ.  ಹಾಗೆಂದು ಅವಳ ಜೊತೆಗೆ ಅಲ್ಲಿಗೆ ಬರುವವರು ಯಾರೂ ಇಲ್ಲ, ಅವಳು ಒಬ್ಬಂಟಿಯಾಗಿಯೇ ಬಡಿದಾಡಬೇಕು.  ತನಿಖಾಧಿಕಾರಿ ಎಲ್ಲಾ ಗೊತ್ತಿದ್ದೂ ’ಮಗುವಿನ ತಂದೆ?’ ಎಂದು ಕೆಳುತ್ತಾನೆ.  ಅದು ಇಡೀ ವ್ಯವಸ್ಥೆಯ ಕ್ರೌರ್ಯ.  ’ಆರು ವರ್ಷದ ಮಗು ಇರುವ ಜಾಗವೇ ಅದು’ ಎಂದು ಆತ ಕೇಳಿದಾಗ, ಸೆಲ್ವಿ, ಇಲ್ಲ ಅವಳು ಕಾರಿನಲ್ಲಿದ್ದಳು ಎಂದು ಉತ್ತರಿಸುತ್ತಾಳೆ.  ಇಲ್ಲ ಆಕೆ ಒಳಗೆ ಬಂದಿದ್ದಳಂತೆ, ತನಿಖೆಯ ಸಮಯದಲ್ಲಿ ಹೇಳಿದಳು ಎಂದು ಅಧಿಕಾರಿ ಹೇಳಿದಾಗ ಒಳಗಿಂದೊಳಗೆ ಸಿಲ್ವಿ ಪೂರ್ತಿಯಾಗಿ ಕುಸಿಯುತ್ತಾಳೆ.  ಆದರೆ ಆಕೆ ಅಳುವಂತಿಲ್ಲ.  ತನ್ನಂಥವರು ಅತ್ತು ದೌರ್ಬಲ್ಯ ತೋರಿಸಿಕೊಂಡರೆ ಸಮಾಜ ಹೇಗೆ ಪ್ರತಿಕ್ರಯಿಸುತ್ತದೆ ಎನ್ನುವುದರ ಅರಿವಿದೆ ಆಕೆಗೆ.

ವಾಪಸ್ಸು ಹೋಗುವಾಗ ಅವಳ ಕಣ್ಣುಗಳು ತುಂಬಿಕೊಂಡು ಬರುತ್ತಿರುತ್ತದೆ. ಹಠಾತ್ತಾಗಿ ಕಾರಿನ ಸ್ಟೀರಿಂಗ್ ಮೇಲೆ ಎನೋ ಕಲೆಗಳನ್ನು ನೋಡುತ್ತಾಳೆ.  ಅಲ್ಲಿ, ಆ ಘಟನೆ ನಡೆಯುವಾಗ ತನ್ನ ಮಗಳ ಬೆರಳುಗಳಿದ್ದವೆ?  ಇಡೀ ಘಟನೆಯನ್ನು ಒರೆಸಿ ಹಾಕುವವಳಂತೆ ಕಾರಿನ ಸ್ಟೇರಿಂಗ್ ಅನ್ನು ಒತ್ತಿ ಒತ್ತಿ ಒರೆಸುತ್ತಾಳೆ, ಗಾಡಿ ನಿಲ್ಲಿಸಿ ಅತ್ತು ಬಿಡುತ್ತಾಳೆ.

ಮನೆಗೆ ಬಂದರೆ ಜೀವವೇ ಇಲ್ಲದಂತೆ ಮಂಕಾಗಿ ಟಿವಿ ಮುಂದೆ ಕೂತ ಮಗಳು.  ಅವಳೀಗ ಮಾತೇ ಆಡುತ್ತಿಲ್ಲ.  ಮನೆಯಲ್ಲೀಗ ಟಿವಿಯದೇ ಸದ್ದು.  ಒಂದು ದಿನ ಮನೆಗೆ ಬಂದರೆ ಮಗಳು ಬಾತ್ ಟಬ್ಬಿನಲ್ಲಿ ಅಡಗಿ ಕೂತು ಏನೋ ಬರೆಯುತ್ತಿದ್ದಾಳೆ.  ಡಿರ್ಕ್ ಕೊಟ್ಟ ಬೊಂಬೆಯನ್ನು ಎಸೆದಿದ್ದಾಳೆ.  ಸಿಲ್ವಿಯ ಮನಸ್ಸಿನಲ್ಲಿ ಹೊಸ ಸಂಶಯ.  ಅವಳೀಗ ಯಾವ ಸಾಧ್ಯತೆಯನ್ನೂ ನಿರಾಕರಿಸುವ ಸ್ಥಿತಿಯಲ್ಲಿಲ್ಲ.  ಡಿರ್ಕ್ ಸಹ ಯಾವತ್ತಾದರೂ ನಿನಗೆ ಹಾಗೆ ಮಾಡಿದ್ದನಾ ಮಗಳೇ ಎನ್ನುತ್ತಾಳೆ.  ಸಧ್ಯ ಮಗು ’ಉಹೂ’ ಅನ್ನುತ್ತದೆ.  ಮತ್ತೆ ಆ ಗೊಂಬೆಯನ್ನ್ಯಾಕಮ್ಮ ಬಿಸಾಡಿದೆ ಎಂದರೆ ಆ ಗೊಂಬೆ ಮತ್ತು ಡಿರ್ಕ್ ಕುತ್ತಿಗೆಯ ಬಳಿ ಆ ಮನುಷ್ಯನ ವಾಸನೆ ಬರುತ್ತದೆ ಎನ್ನುತ್ತಾಳೆ.  ಹಾಗಾದರೆ ಆ ಮನುಷ್ಯ ಸಹ ಡಿರ್ಕ್ ಬಳಸುತ್ತಿದ್ದ after shave lotion ಬಳಸುತ್ತಿದ್ದ ಎಂದು ಸಿಲ್ವಿಗೆ ಅರ್ಥವಾಗುತ್ತದೆ.  ಆರು ವರ್ಷದ ಕೂಸು ಅದು, ಅದಕ್ಕೆ ಏನೇನೋ ಪ್ರಶ್ನೆ ಕೇಳಿ ಅದರ ಮನಸ್ಸಿನ ಮೇಲೆ ಮಾಸದ ಕಲೆ ಉಳಿಸುವ ಹಾಗಿಲ್ಲ.  ಸಿಲ್ವಿ ತನ್ನ ಅಂಗಡಿಗೆ ಬಂದವರ ಫೋಟೋಗಳನ್ನು ತಂದು ಮಗುವಿಗೆ ತೋರಿಸಿ, ಇವರಲ್ಲಿ ಆ ಮನುಷ್ಯ ಇದ್ದಾನಾ ಎಂದು ಕೇಳಿದರೆ ಒಂದೆರಡು ಫೋಟೋ ನೋಡಿದ ಮಗು ಕಣ್ಣು ಮುಚ್ಚಿ ನಿದ್ದೆ ಬಂದಂತೆ ಮಲಗಿಬಿಡುತ್ತದೆ, ಅದರ ಮೇಲೆ ಒತ್ತಡ ಹಾಕುವಂತಿಲ್ಲ.  ನಿದ್ದೆಯಲ್ಲಿದ್ದ ಮಗು ಇದ್ದಕ್ಕಿದ್ದಂತೆ ’ನಿನ್ನ ಅಂಗಡಿಯಲ್ಲಿನ ಅಪ್ಪುಗೆಗಳು ಚೆನ್ನಾಗಿರಲ್ಲ ಅಮ್ಮ’ ಅಂದಿಬಿಡುತ್ತಾಳೆ.  ಸಿಲ್ವಿ ಹೈರಾಣಾಗುತ್ತಿದ್ದಾಳೆ.  ಆದರೆ ಮಗಳ ಮುಂದೆ ಆಕೆ ಕುಸಿಯುವಂತಿಲ್ಲ,  ಮಗು ಹಾಡುತ್ತಿದ್ದ ಪದ್ಯವನ್ನು ಈಗ ಅಮ್ಮ ಮೆಲುದನಿಯಲ್ಲಿ ಲಾಲಿ ಹಾಡಿನಂತೆ ಹಾಡುತ್ತಾಳೆ, ಹಳೆಯ ಹಾಡಿನೊಂದಿಗೆ ಹಳೆಯ ದಿನಗಳೂ ಮರಳಿ ಬರಲಿ ಎನ್ನುವಂತೆ.

ಒಂದು ದಿನ ಮಗು ಇದ್ದಕ್ಕಿದ್ದಂತೆ, ’ಅಮ್ಮ whore ಅಂದರೇನು?’, ಎಂದು ಕೇಳಿಬಿಡುತ್ತದೆ. ಅಮ್ಮ ತಲ್ಲಣಿಸಿಹೋಗುತ್ತಾಳೆ.  ಆ ಇಡೀ ಸನ್ನಿವೇಶವನ್ನು ಆಕೆ ನಿಭಾಯಿಸುವ ರೀತಿಗೆ ಮನಸ್ಸು ಆರ್ದ್ರವಾಗುತ್ತದೆ.  ಮಗುವಿಗೆ ತನ್ನ ಅಗತ್ಯ ಇದೆ ಆದರೆ ಮಗುವಿನೊಟ್ಟಿಗೇ ಇರುವಂತಿಲ್ಲ, ಅಪರಾಧಿಯನ್ನು ಹುಡುಕಲು ತನ್ನ ಕೈಲಾದ ಪ್ರಯತ್ನ ಮಾಡಲೇಬೇಕು.  ಜೊತೆಗೆ ಅಂಗಡಿಯ ವ್ಯವಹಾರವನ್ನೂ ನೋಡಿಕೊಳ್ಳಬೇಕು, ಅದು ಅವರ ಬದುಕಿಗಿರುವ ಏಕೈಕ ಆಧಾರ.
ಮಗುವನ್ನು ಕುರಿತು ಡಿರ್ಕ್ ಪಡುವ ಆತಂಕ ಮತ್ತು ಮಗುವಿನೆಡೆಗಿನ ಅವನ ತುಡಿತ ಸಿಲ್ವಿಯನ್ನು ಅವನ ವಿಷಯಕ್ಕೆ ಮೃದುವಾಗಿಸುತ್ತದೆ.  ಆಕೆಯ ಏಕಾಂಗಿತನವೂ ಅದಕ್ಕೆ ಪೂರಕವಾಗಿರಬಹುದು.  ಡಿರ್ಕ್ ನ ಆಹ್ವಾನದ ಮೇರೆಗೆ ಫ್ರ್ಯಾನ್ಸ್ ನ ಭಾಗದಲ್ಲಿರುವ ಅವನ ಹಳ್ಳಿ ಮನೆಗೆ ಒಂದು ವಾರಾಂತ್ಯ ಮೂವರೂ ಹೋಗುತ್ತಾರೆ.  ಅಲ್ಲಿ ಮಗಳು ಗೆಲುವಾಗಿರುವುದೇ ಸಿಲ್ವಿಗೆ ಸಂತಸ.  ಮಗು ಡಿರ್ಕ್ ಜೊತೆ ಸಹಜವಾಗಿ ಹೊಂದಿಕೊಂಡಿದೆ. ಅದಕ್ಕೆ ಅಷ್ಟರ ಮಟ್ಟಿಗೆ ಅದೊಂದು ಸುರಕ್ಷಿತ ತಾವು ಅನ್ನಿಸಿದೆ.  ಅವರು ಮೂವರೂ ಹಳ್ಳಿಯಲ್ಲಿ ತಿರುಗಾಡಲು ಹೋಗುವ ಒಂದು ಲಾಂಗ್ ಶಾಟ್ ಅವರೆಲ್ಲರ ಆ ಕ್ಷಣದ ನೆಮ್ಮದಿಯ ಮನೋಸ್ಥಿತಿಯನ್ನು ಹೇಳುತ್ತದೆ.

ಆದರೆ ಅಲ್ಲಿ ಅವರ ನೆಮ್ಮದಿಯನ್ನು ಕದಡುವುದಷ್ಟೇ ಅಲ್ಲ, ಅದುವರೆಗಿನ ಅವರ ತಲ್ಲಣವನ್ನು ಕ್ಲೈಮ್ಯಾಕ್ಸ್ ಗೆ ತಂದು ಬಿಡುವ ಘಟನೆ ನಡೆಯಲಿದೆ.  ಅಲ್ಲಿ ಹಬ್ಬದ ಸಡಗರ.  ನಿಕೋಲಸ್ ವೇಷಧಾರಿಯೊಬ್ಬ ಸಣ್ಣ ಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಬಹುಮಾನ ಕೊಡುತ್ತಿದ್ದಾನೆ.  ಮಗಳನ್ನು ಡಿರ್ಕ್ ಅವನ ತೊಡೆಯ ಮೇಲೆ ಕೂರಿಸುತ್ತಾನೆ.  ಅವನು ಫೋಟೋ ತೆಗೆಯಲು ಹೋದಾಗ ಮಗು ಕೊಸರಾಡುತ್ತದೆ, ಆ ವೇಷಧಾರಿ ಅವಳನ್ನು ಅಪ್ಪಿ ಮೈಮೇಲೆ ಕೈ ಆಡಿಸುತ್ತಿರುತ್ತಾನೆ.  ಮಗು ಮೊದಮೊದಲು ಒದ್ದಾಡುತ್ತದೆ, ಬರಬರುತ್ತಾ ಆ ಮಗುವಿನ ಮುಖದಲ್ಲಿ ದುಗುಡ, ಅದರ ಚೇತನವೆಲ್ಲಾ ಸೋರಿ ಹೋಗುತ್ತದೆ.  ಧಾವಿಸಿ ಬಂದ ಡಿರ್ಕ್ ಅವಳನ್ನು ಎತ್ತಿಕೊಳ್ಳುತ್ತಾನೆ.  ಮಗು ಆತನ ಕಿವಿಯಲ್ಲಿ ’ರಾಬರ್ಟ್, ರಾಬರ್ಟ್’ ಎಂದು ಉಸುರುತ್ತದೆ.
ಸಿಲ್ವಿ ಕೆಂಡಾಮಂಡಲವಾಗಿ ಮಗುವನ್ನು ಎತ್ತಿಕೊಂಡು ಮನೆಗೆ ಹೊರಟು ಬಿಡುತ್ತಾಳೆ.  ಆದರೆ ಡಿರ್ಕ್ ಅಲ್ಲೇ ನಿಲ್ಲುತ್ತಾನೆ.  ಅಲ್ಲಿ ಆ ನಿಕೋಲಸ್ ವೇಷಧಾರಿ ಮಿಕ್ಕ ಮಕ್ಕಳ ಜೊತೆಗೆ, ಕೆಲವು ಸಲ ಅವುಗಳ ಅಮ್ಮಂದಿರ ಜೊತೆಗೆ ಅದೇ ಚಟ ಮುಂದುವರಿಸುತ್ತಿರುತ್ತಾನೆ.  ಸಮಯ ಉರುಳಿದಂತೆ ಡಿರ್ಕ್ ನ ಅನುಮಾನ ಗಟ್ಟಿಯಾಗುತ್ತಾ ಹೋಗುತ್ತದೆ.  ರಾತ್ರಿ ನಿಕೋಲಸ್ ವೇಶ ಕಳಚಿ ಮನೆಗೆ ಹೋಗುವಾಗ ಅವನನ್ನು ನಿಲೆಹಾಕಿ ಅವನ ಮೇಲೆರಗುತ್ತಾನೆ.  ಯಾರು ನೀನು ಎಂದು ಆ ವ್ಯಕ್ತಿ ಕೇಳುವ ಪ್ರಶ್ನೆಗೆ ಡಿರ್ಕ್ ನ ಉತ್ತರ ’ನಾನೊಬ್ಬ ಅಪ್ಪ’.

ಮರುದಿನ ಸಿಲ್ವಿ ವಾಪಸ್ ಹೋಗಲು ಬ್ಯಾಗ್ ಗಳನ್ನು ಕಾರಿನ ಡಿಕ್ಕಿಯಲ್ಲಿ ಇಡುವಾಗ ಡಿರ್ಕ್ ಒಂದು ಕವರ್ ತಂದು ಅಲ್ಲಿಡುತ್ತಾನೆ.  ಆ ಕವರ್ ನಲ್ಲಿ ಎಲಿನ್ ಹೇಳಿದಂತಹುದೇ ಲೆದರ್ ಶೂಗಳು.

ಅವರು ಊರಿಗೆ ಹಿಂದಿರುಗಿದ್ದಾರೆ.  ಕಡೆಯ ಸಲ ಪೋಲೀಸ್ ಸ್ಟೇಷನ್ ಗೆ ಹೋಗುವಾಗ ಸಿಲ್ವಿ ಡಿರ್ಕ್ ನನ್ನೂ ಕರೆದುಕೊಂಡು ಹೋಗುತ್ತಾಳೆ.  ತನಿಖೆಯಲ್ಲಿ ಏನೂ ಮುಂದುವರೆಯಲಾಗುತ್ತಿಲ್ಲ.  ಸುಳಿವುಗಳಿಲ್ಲದೆ ಪೋಲೀಸರು ತನಿಖೆ ನಿಲ್ಲಿಸಬೇಕಾಗಿ ಬಂದಿದೆ.  ಎದ್ದು ಬರುವಾಗ ಅವರು ಮಗುವನ್ನು ವಿಚಾರಣೆ ಮಾಡಿದ್ದರ ರೆಕಾರ್ಡಿಂಗ್ ಕೊಡುತ್ತಾರೆ.  ಅಂದು ನಡೆದದ್ದೇನು ಎನ್ನುವುದನ್ನು ಮಗುವಿನ ಹೇಳಿಕೆಯ ರೂಪದಲ್ಲಿ ತೋರಿಸಲಾಗುತ್ತದೆ.  ಆ ರೆಕಾರ್ಡಿಂಗ್ ನೋಡಿದ ಅಮ್ಮ ಕಣ್ಣೀರಾಗುತ್ತಾಳೆ.
ಮುಂದಿನ ದೃಶ್ಯದಲ್ಲಿ ಅಮ್ಮ, ಮಗಳೊಂದಿಗೆ ಡಿರ್ಕ್ ಊಟ ಮಾಡುತ್ತಿದ್ದಾನೆ.  ಟಿವಿಯಲ್ಲಿ ಒಂದು ವಾರ್ತೆ, ’ಫ್ರ್ಯಾನ್ಸ್ ನ ಭಾಗದ ಊರೊಂದರ ಬಳಿ ನಿಕೋಲಸ್ ವೇಷ ಧರಿಸಿದ್ದ ವ್ಯಕ್ತಿಯ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ, ಸಾವಿಗೆ ಕಾರಣ ತಿಳಿದಿಲ್ಲ.  ಮಗು ಮಾತೇ ಆಡದೆ ಅದನ್ನು ನೋಡುತ್ತಿರುತ್ತದೆ.  ಡಿರ್ಕ್ ನನ್ನು ಅಪ್ಪಿ, ’ಮತ್ತೆ ಅವನೆಂದೂ ವಾಪಸ್ಸು ಬರೋಲ್ಲ ಈಗ ಅಲ್ಲವಾ’ ಎಂದಷ್ಟೇ ಕೇಳುತ್ತಾಳೆ.  ನೆಮ್ಮದಿಯಾಗಿ ಮಲಗುತ್ತಾಳೆ.

ಸಿಲ್ವಿ ತನ್ನ ವ್ಯವಹಾರವನ್ನು ಮಾರುವ ನಿರ್ಧಾರ ತೆಗೆದುಕೊಳ್ಳುತ್ತಾಳೆ.

ಚಿತ್ರ ಮುಗಿಯುತ್ತದೆ….

1 comment

  1. ಈ ಚಿತ್ರ ನೋಡುವಾಗ ಎದೆ ತಲ್ಲಣಗೊಂಡಿದ್ದು ಮರೆಯುವಂತೆಯೇ ಇಲ್ಲ. ನಿನ್ನ ಬರಹ ಮತ್ತೊಮ್ಮೆ ಆ ಚಿತ್ರವನ್ನು revisit ಮಾಡಿಸಿತು …
    ಅದ್ಭುತವಾಗಿದೆ

Leave a Reply