ಹೆಣ್ಣಿಗೆ ಇರುವುದು ಎರಡೇ ಪಾತ್ರ ‘ಉಷೆ’ ಅಥವಾ ‘ಊರ್ವಶಿ’

ಊರ್ವಶಿಯ ಪಾತ್ರದಲ್ಲಿ

ಹೀಗೊಬ್ಬಳು ಉಷೆ – ’ಭೂಮಿಕ’

 

ರಾಜಕುಮಾರ್ ತೀರಿಕೊಂಡಾಗ ದೇವನೂರು ಒಂದು ಮಾತು ಹೇಳಿದ್ದರು, ‘ಡಾ ರಾಜ್ ಕುಮಾರ್ ಪಾತ್ರ ವಹಿಸುತ್ತಿದ್ದ ಮುತ್ತುರಾಜ ಇಂದು ತೀರಿಕೊಂಡರು’ ಎಂದು.  ಈ ಮಾತು ತನ್ನಲ್ಲಿ ಹಲವಾರು ಅರ್ಥಗಳನ್ನು, ಒಳನೋಟಗಳನ್ನು ಬಚ್ಚಿಟ್ಟುಕೊಂಡಿದೆ.

ನಮಗೆ ಕಾಣುವುದು ವ್ಯಕ್ತಿಯೆ ಅಥವಾ ಪಾತ್ರವೆ?  ಕಲಾವಿದ ಸತ್ಯವೆ ಅಥವಾ ವಹಿಸುವ ಪಾತ್ರ ಸತ್ಯವೆ?  ಮೇಕಪ್ ಒರೆಸಿದ ಕೂಡಲೆ ಆ ಪಾತ್ರ ಮರೆಯಾಗುವುದೆ ಅಥವಾ ದಿನಕಳೆದಂತೆ ಮುಖವಾಡ ಮುಖವಾಗಿಬಿಟ್ಟಿರುತ್ತದೆಯೆ?

ಸ್ಮಿತಾ ಪಾಟೀಲ್ ಅಭಿನಯದ ’ಭೂಮಿಕಾ’ ಚಿತ್ರ ನೋಡುವಾಗ ನನ್ನ ಮನಸ್ಸಿನಲ್ಲಿ ಇಂತಹವೇ ಪ್ರಶ್ನೆಗಳು.

ಈ ಚಿತ್ರದಲ್ಲಿ ’ಉಷಾ’ ಸತ್ಯವಾಗಿದ್ದರೆ ’ಊರ್ವಶಿ’ ಪಾತ್ರ, ’ಊರ್ವಶಿ’ ಸತ್ಯವಾಗಿದ್ದರೆ ’ಉಷಾ’ ಪಾತ್ರ.  ಸತ್ಯ ಯಾವುದು, ಪಾತ್ರ ಯಾವುದು? ಅಥವಾ ಅವೆರಡೂ ಆಯಾ ಕಾಲಕ್ಕೆ ಸತ್ಯವೆ?  ’ಉಷೆ’ಯಾಗಿದ್ದಾಗ ’ಊರ್ವಶಿಯ’ ಸ್ವಾತಂತ್ರಕ್ಕೆ ಹಂಬಲಿಸುವ, ’ಊರ್ವಶಿ’ಯಾಗಿದ್ದಾಗ ’ಉಷೆ’ಯ ಹಾಗೆ ಗೃಹಿಣಿಯ ನೆಮ್ಮದಿ, ಸ್ಥಾನ ಮಾನ ಬಯಸುವ ಸ್ಮಿತಾ ವಾಸ್ತವ ಮತ್ತು ಭ್ರಾಮಕದ ಎಲ್ಲೆಗಳನ್ನು ಮೀರಲು ಪ್ರಯತ್ನಿಸುತ್ತಲೇ ಇರುವುದು ಚಿತ್ರದ ಕಥೆ.

1977 ಅಂದರೆ ಸರಿಯಾಗಿ ನಲವತ್ತು ವರ್ಷಗಳ ಹಿಂದೆ ಈ ಚಿತ್ರ ಬಂದಾಗ ಅದೊಂದು ‘Class of talents’ ಆಗಿತ್ತು.  ನಿರ್ದೇಶಕ ಶ್ಯಾಂ ಬೆನಗಲ್, ಚಿತ್ರಕಥೆ ಗಿರೀಶ್ ಕಾರ್ನಾಡ್, ಸತ್ಯದೇವ್ ದುಬೆ, ಶ್ಯಾಂ ಬೆನಗಲ್, ಛಾಯಾಗ್ರಹಣ ಗೋವಿಂದ್ ನಿಹಲಾನಿ, ತಾರಾಗಣದಲ್ಲಿ ಸ್ಮಿತಾ, ನಾಸಿರುದ್ದೀನ್ ಶಾ, ಬಿ ವಿ ಕಾರಂತರು, ಅನಂತ್ ನಾಗ್, ಸುಲಭಾ ದೇಶಪಾಂಡೆ, ಅಮೋಲ್ ಪಾಲೇಕರ್, ಅಮರೀಶ್ ಪುರಿ ಮುಂತಾದ ಘಟಾನುಘಟಿಗಳು.  ಈ ಚಿತ್ರ ಹಂಸಾ ವಾಡ್ಕರ್ ಎನ್ನುವ ಮರಾಠಿ ನಟಿಯ ಆತ್ಮಕಥೆಯನ್ನು ಆಧರಿಸಿದ ಕಥೆ.  ತನ್ನ ಕಾಲದಲ್ಲಿ ದಿಟ್ಟ ಬದುಕು ಬದುಕಿದ, ನಾಸಿರುದ್ದೀನ್ ಶಾ ನೆನಪಿಸಿಕೊಳ್ಳುವ ಹಾಗೆ, ಅನ್ನಿಸಿದ್ದು ಫಟ್ ಎಂದು ಎದುರೆದುರಿಗೇ ಹೇಳಬಲ್ಲ, ದೈವೀಕ ಮುಗುಳ್ನಗುವಿನ ಒಡತಿ ಆಕೆ.

ಈ ಕಥೆಯನ್ನು ಚಿತ್ರವಾಗಿಸುವಲ್ಲಿ ಶ್ಯಾಮ್ ಬೆನಗಲ್ ಬಳಸುವ ವಿನ್ಯಾಸ, ಕಥಾ ತಂತ್ರ, ನಿಹಲಾನಿಯವರ ಕ್ಯಾಮೆರಾ ಹಲವಾರು ಅದ್ಭುತಗಳನ್ನು ಸೃಷ್ಟಿಸುತ್ತದೆ.  ಚಿತ್ರದ ಕಾಲವನ್ನು, ಚಲನೆಯನ್ನು ಸೂಚಿಸಲು ಬೆನಗಲ್ ಇಲ್ಲಿ ರೇಡಿಯೋದ ವಾರ್ತೆಗಳನ್ನು ಬಳಸಿಕೊಳ್ಳುವುದು ಅದಕ್ಕೊಂದು ಉದಾಹರಣೆ.  ಎರಡನೆಯ ಮಹಾಯುದ್ಧದ ಸಮಯ, ಸ್ಟಾಲಿನ್ ಮರಣ, ಅಯೂಬ್ ಖಾನ್ ನ ಪ್ರಸ್ತಾಪ… ಹೀಗೆ ಚಿತ್ರ ನಡೆಯುವ ಕಾಲ ಮತ್ತು ಚಿತ್ರದಲ್ಲಿ ಕ್ರಮಿಸಿದ ಸಮಯ ಎರಡನ್ನೂ ಬೆನಗಲ್ ಕೆಲವೇ ಶಬ್ಧಗಳ ಮೂಲಕ ಕಟ್ಟಿಕೊಡುತ್ತಾರೆ.

ಆ ಕಾಲದಲ್ಲಿ ಬಣ್ಣದ ಚಿತ್ರಕ್ಕೆ ಬೇಕಾದ ಕಚ್ಚಾ ಫಿಲಂ ಕೊರತೆಯಿಂದಾಗಿ ಫ್ಲ್ಯಾಷ್ ಬ್ಯಾಕ್ ದೃಶ್ಯಗಳನ್ನು ಕಪ್ಪು ಬಿಳುಪಿನಲ್ಲಿ ತೆಗೆಯುವ ನಿರ್ಧಾರ ತೆಗೆದುಕೊಳ್ಳುತ್ತಾರೆ.  ಅನುಕೂಲಕ್ಕಾಗಿ ತೆಗೆದುಕೊಂಡ ಈ ನಿರ್ಧಾರ ಚಿತ್ರಕ್ಕೊಂದು ಕಲಾತ್ಮಕ ಆವರಣವನ್ನು ಕಟ್ಟುತ್ತದೆ. ಗೋವಿಂದ್ ನಿಹಲಾನಿ ಕ್ಯಾಮೆರಾವನ್ನು ಇಡುವ ರೀತಿ, ನೆರಳು ಬೆಳಕನ್ನು ಅವರು ಸಂಯೋಜಿಸುವ ರೀತಿ ಕಪ್ಪು ಬಿಳುಪಿನ ದೃಶ್ಯಗಳನ್ನು ಕಾವ್ಯಾತ್ಮಕವಾಗಿಸಿಬಿಡುತ್ತದೆ. ಕಥೆಯಲ್ಲಿ ಆಗಿಂದಾಗೆ ಬರುವ ಫ್ಲ್ಯಾಶ್ ಬ್ಯಾಕ್ ದೃಶ್ಯಗಳು ವಾಸ್ತವ ಮತ್ತು ಗತದ ನಡುವೆ ಗೊಂದಲ ಮೂಡಿಸದೆ ಇರುವುದರಲ್ಲಿ ಇದು ನೆರವಾಗಿದೆ. ಚಿತ್ರದುದ್ದಕ್ಕೂ ಬರುವ ಸಿನಿಮಾದ ಪೋಸ್ಟರ್ ಗಳು ಮತ್ತು ಅವುಗಳ ಮೇಲಿರುವ ಹೆಸರುಗಳು ಸಹ ಚಿತ್ರದ ಕಥೆಗೆ ಸಂವಾದಿಯಾಗಿ ಬಂದಿದೆ.  ಅಷ್ಟೇ ಸೊಗಸಾಗಿರುವುದು ಚಿತ್ರದ ಸಂಗೀತ.

ಚಿತ್ರದಲ್ಲಿ ಕ್ಯಾಮೆರಾ ಗಂಡಿನ ನೋಟವನ್ನು ಕಟ್ಟಿಕೊಟ್ಟರೆ, ಅದಕ್ಕೆ ಎದುರಾಗಿ ನಿಲ್ಲುವ ಕನ್ನಡಿ ಅನೇಕ ದೃಶ್ಯಗಳಲ್ಲಿ ಹೆಣ್ಣಿನ ಮನಸ್ಸನ್ನು ಕಟ್ಟಿಕೊಡುತ್ತದೆ.  ಮೊದಲ ದೃಶ್ಯದಲ್ಲಿ ಊರ್ವಶಿ (ಸ್ಮಿತಾಪಾಟೀಲ್) ಲಾವಣಿ ನೃತ್ಯ ಮಾಡುತ್ತಿರುತ್ತಾಳೆ, ಕ್ಯಾಮೆರಾದ ಕೋನಗಳು, ಕ್ಲೋಸ್ ಅಪ್ ಗಳು ಲಾವಣಿಯನ್ನು ಲಾಲಸೆಯಿಂದ ನೋಡುವ ಗಂಡಿನ ಕಣ್ಣುಗಳಾಗಿ ಕೆಲಸಮಾಡುತ್ತಿರುವುದು ಗೊತ್ತಾಗುವುದು ಹಾಡು ಮುಗಿಯುವಾಗ ದೃಶ್ಯದೊಳಕ್ಕೆ ಬರುವ ಒಂದು ರೆಕಾರ್ಡಿಂಗ್ ಕ್ಯಾಮೆರಾದಿಂದ.

ಅಂದು ಚಿತ್ರೀಕರಣ ಮುಗಿದಿದೆ. ಊರ್ವಶಿಯ ಕಾರ್ ಬಂದಿರುವುದಿಲ್ಲ, ಸಹನಟ ರಾಜನ್(ಅನಂತ್ ನಾಗ್) ಅವಳನ್ನು ಮನೆಗೆ ಬಿಡುವುದಾಗಿ ಕರೆಯುತ್ತಾನೆ.  ಸರಿಯಾಗಿ ಅದೇ ಸಮಯಕ್ಕೆ ಕೆಲವರು ಒಂದು ಪೋಸ್ಟರ್ ತೆಗೆದುಕೊಂಡು ಹೋಗುತ್ತಿರುತ್ತಾರೆ, ಅದರ ಮೇಲೆ ಇರುವ ಹೆಸರು ’ಅಗ್ನಿ ಪರೀಕ್ಷಾ’. ಆಕೆ ಮನೆಗೆ ಬರುತ್ತಾಳೆ.  ರಾಜನ್ ಕಾರಿನಲ್ಲಿ ಬಂದದ್ದನ್ನು ಮನೆಯ ಮಹಡಿಯಿಂದ ಅವಳ ಗಂಡ ಕೇಶವ್ ನೋಡುತ್ತಾನೆ. ಅವಳು ಮನೆಯೊಳಗೆ ಹೆಜ್ಜೆ ಇಟ್ಟ ತಕ್ಷಣ ಅವನ ಕಣ್ಣುಗಳಲ್ಲಿ ಆರೋಪ, ಅದನ್ನು ನೋಡಿ ಕಾರಣವೇ ಇಲ್ಲದೆ ಇವಳ ಮನಸ್ಸಿನಲ್ಲಿ ಗಿಲ್ಟ್ ಹುಟ್ಟಿಸುವ ನೋಟ ಅವನದು.  ಅವನ ಕಣ್ಣುಗಳಲ್ಲಿರುವ ತಣ್ಣನೆಯ ಕ್ರೌರ್ಯ ಚರ್ಮದುದ್ದಕ್ಕೂ ರೇಜಿಗೆ ಹುಟ್ಟಿಸುತ್ತದೆ.

ಅವಳು ಪ್ರತ್ಯೇಕ ಬ್ಯಾಂಕ್ ಅಕೌಂಟ್ ಮಾಡಿದ್ದಾಳೆ, ಅವನ ಸಿಟ್ಟಿಗೆ ಮುಖ್ಯ ಕಾರಣ ಅದು.  ಆ ಒಂದು ದೃಶ್ಯದಲ್ಲೇ ಅವನ ಸ್ವಭಾವ, ಅವರಿಬ್ಬರ ಸಂಬಂಧ ನಮಗೆ ಅರ್ಥವಾಗುತ್ತದೆ.  ಮನೆಯಲ್ಲಿ ಅವಳ ತಾಯಿ(ಸುಲಭಾ ದೇಶಪಾಂಡೆ) ಇದ್ದಾಳೆ, ಅವಳ ಕಣ್ಣುಗಳಲ್ಲಿರುವ ನೋವಿನ ಆಳ ಹೇಳಲಾಗದು.  ಅದೇ ಮನೆಯಲ್ಲಿ ಸ್ಮಿತಾಳ ಮಗಳೂ ಇದ್ದಾಳೆ.  ಆದರೆ ಆ ಮನೆಯ ಸಂಬಂಧಗಳಿಗೆ ಸ್ಮಿತಾ ಸೇರಿದ್ದರೂ ಸೇರಿಲ್ಲದವಳು, ಬೇರು ಒಂದೇ ಆದರೂ ಕವಲೊಡೆದವಳು.  ಆಗ ಒಂದು ಫ್ರೇಮಿನಲ್ಲಿ ಸ್ಮಿತಾ, ಮಗಳು ಇರುತ್ತಾರೆ, ಮೆಲ್ಲಗೆ ತಾಯಿ ಆ ಫ್ರೇಮಿಗೆ ಬರುತ್ತಾಳೆ, ಆ ಮೂವರನ್ನೂ ಕೇಶವ್ ಒಂದಲ್ಲ ಒಂದು ರೀತಿಯಲ್ಲಿ ನಿಯಂತ್ರಿಸುತ್ತಿರುತ್ತಾನೆ.

ಗಂಡನ ಜೊತೆಗೆ ಜಗಳವಾಗಿ ಆಕೆ ಬಿಟ್ಟು ಹೊರದುವಾಗ ಮಗಳನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರೂ, ’ಅವಳನ್ನೂ ನಿನ್ನ ಹಾಗೆಯೇ ಮಾಡು’ ಎಂದು ಗಂಡ ಮೂದಲಿಸಿದಾಗ ಇನ್ನೊಂದು ಮಾತಿಲ್ಲದೆ ಮಗಳನ್ನು, ತಾಯಿಯನ್ನು ಬಿಟ್ಟು ತನ್ನ ಸೂಟ್ ಕೇಸ್ ತೆಗೆದುಕೊಂಡು ಹೊರಟುಬಿಡುತ್ತಾಳೆ.  ಅವರೂ ಸಹ ಅವಳು ಹೊರಟಿದ್ದಕ್ಕೆ ದುಃಖಿತರಾಗುತ್ತಾರೆಯೇ ಹೊರತು ಅವಳನ್ನು ಬಿಟ್ಟು ಇರುವುದಕ್ಕಲ್ಲ.  ಒಂದು ಸ್ಮಿತಾಳ ಬೇರು, ಇನ್ನೊಂದು ಅವಳದೇ ಚಿಗುರು, ಆದರೂ ಆಕೆ ಅವೆರಡಕ್ಕೂ ಅಂಟಿಕೊಂಡಿಲ್ಲ ಯಾಕೆ?  ಅದಕ್ಕೆ ಉತ್ತರ ಅವಳ ಬಾಲ್ಯದಲ್ಲಿದೆ.  ಚಿತ್ರದುದ್ದಕ್ಕೂ ಮೇಲೆ ದಿಟ್ಟವಾಗಿ, ಪ್ರತಿಭಟಿಸುವ ಹೆಣ್ಣಾಗಿ ಕಂಡರೂ ಒಳಗೊಳಗೆ ಸ್ಮಿತಾ ಮನಸ್ಸಿನಲ್ಲಿ ಒಂದು ಆತ್ಮನ್ಯೂನತಾ ಭಾವ ಇದ್ದೇ ಇದೆ.  ಚಿಕ್ಕಂದಿನಲ್ಲಿ ಅಮ್ಮ ಪ್ರೀತಿಸಿದ್ದಕ್ಕಿಂತ ಹೊಡೆದು ಮೂದಲಿಸಿದ್ದೇ ಜಾಸ್ತಿ.  ಪ್ರೀತಿಸುತ್ತಿದ್ದ ಅಪ್ಪ ಬಾಲ್ಯದಲ್ಲೇ ಕಣ್ಣು ಮುಚ್ಚಿದ್ದಾರೆ.  ಸಹಜವಾದ, ಘನತೆಯ ಪ್ರೀತಿಗೆ ತಾನು ’ಅರ್ಹ’ಳೆಂದು ಅವಳು ನಡೆದುಕೊಳ್ಳುವುದೇ ಇಲ್ಲ.  ಪ್ರೀತಿಸುವುದನ್ನು ಅವಳು ಒಂದು ’ಕೊಡುಗೆ’ಯಾಗಿಯೇ ಕಂಡಿದ್ದಾಳೆ.

ಅವಳ ಕಥೆ ಶುರುವಾಗುವುದು ಕೊಂಕಣದ ಹಳ್ಳಿಯೊಂದರಲ್ಲಿ.  ಸದಾ ಓಡುತ್ತಲೇ ಇರುವ ಚಟುವಟಿಕೆಯ ಬುಗ್ಗೆ ಉಷಾ.  ಅವಳ ಅಜ್ಜಿ ಕಲಾವಂತರ ಸಮುದಾಯಕ್ಕೆ ಸೇರಿದ ಗಾಯಕಿ, ಮೊಮ್ಮಗಳ ಪಾಲಿಗೆ ಸಂಗೀತದ ಗುರು.  ಆ ಮನೆತನದ ಹೆಣ್ಣುಮಕ್ಕಳಿಗೆ ಮದುವೆಯ ಯೋಗವಿಲ್ಲ.  ಹೇಗೋ ಉಷೆಯ ಅಮ್ಮ ಆ ಚಕ್ರದಿಂದ ತಪ್ಪಿಸಿಕೊಂಡು ಮದುವೆ ಆಗಿದ್ದಾಳೆ.  ಆದರೆ ಆತ ಸದಾ ಕುಡಿದು ಮನೆಯಲ್ಲೇ ಇರುತ್ತಾನೆ.  ಸಿಟ್ಟಾದರೆ ಹೆಂಡತಿಗೆ ಬಡಿಯುತ್ತಾನೆ. ಆ ಮನೆಗೆ ಸಹಾಯ ಮಾಡುವವನಂತೆ ಬರುವವನು ಕೇಶವ್ ದಳವಿ(ಅಮೋಲ್ ಪಾಲೇಕರ್).  ಮನೆಯಲ್ಲಿ ಅಕ್ಕಿ ಮುಗಿದರೆ ಅಮ್ಮ ಕೇಶವ್ ಗೆ ಹೇಳು ಎಂದು ಮಗಳಿಗೆ ಹೇಳುತ್ತಾಳೆ.  ’ನನ್ನ ಮದುವೆ ಆಗ್ತೀನಿ ಅಂತ ಹೇಳು’ ಎಂದು ಆತ ಉಷಾಳನ್ನು ರೇಗಿಸುತ್ತಿರುತ್ತಾನೆ.  ಅವನ ಸ್ಪರ್ಶ ಅವಳಲ್ಲಿ ಒಂದು ರೇಜಿಗೆ ಹುಟ್ಟಿಸುತ್ತಿರುತ್ತದೆ.  ಇದರಾಚೆಗೂ ಅಲ್ಲಿ ಇನ್ನೊಂದು ಕಥೆ ನಡೆಯುತ್ತಿರುತ್ತದೆ.  ಅವನು ಅವಳ ಅಮ್ಮನಿಗೆ ಹತ್ತಿರದವನಾಗಿರುತ್ತಾನೆ.  ಆ ಬಗ್ಗೆ ಉಷೆಯ ತಂದೆಗೂ ಸಿಟ್ಟಿದೆ.

ಸದಾ ಕುಡಿದು ಬಿದ್ದಿರುವ ಉಷಾಳ ತಂದೆ ತೀರಿಕೊಳ್ಳುತ್ತಾರೆ.  ಹಾಡು ಕಲಿತಿರುವ ಉಷೆಯನ್ನು ಸಿನಿಮಾಗೆ ಸೇರಿಸೋಣ ಎಂದು ಎಲ್ಲರನ್ನೂ ಕೇಶವ್ ಪುಸಲಾಯಿಸುತ್ತಾನೆ.  ಬಾಂಬೆಗೆ ಕರೆದುಕೊಂಡು ಬರುತ್ತಾನೆ.  ಅವನ ಕೈ ಹಿಡಿದುಕೊಂಡು ಉಷಾ ಮೊದಲಸಾರಿ ಸ್ಟುಡಿಯೋದೊಳಕ್ಕೆ ಬರುತ್ತಾಳೆ.  ಅಲ್ಲಿ ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ಪುಟ್ಟ ಉಷೆ ಎರಡೂ ಕೈಜೋಡಿಸಿ ನಮಸ್ಕರಿಸುತ್ತಾಳೆ, ಅವಳ ಮುಖದಲ್ಲಿ ಸಾವಿರ ಪ್ರಾರ್ಥನೆಗಳ ಪವಿತ್ರತೆ ಇರುತ್ತದೆ.  ಹೀಗೆ ಉಷಾ ಹೀರೋಯಿನ್ ಆಗುತ್ತಾಳೆ.  ಕೇಶವ್ ಅವಳ ಮ್ಯಾನೇಜರ್ ಆಗುತ್ತಾನೆ.

ಬಾಲನಟಿಯಾಗಿದ್ದ ಉಷಾ ಈಗ ಹೀರೋಯಿನ್ ಊರ್ವಶಿ ಆಗಿದ್ದಾಳೆ.  ಅವಳ ಸಹನಟ ರಾಜನ್.  ಅವನಿಗೆ ಅವಳ ಮೇಲೆ ಪ್ರೀತಿ.  ಆದರೆ ಅದು ಏನಾದರೂ ಆಗುವ ಮೊದಲೇ ಕೇಶವ್ ಅಡ್ಡವಾಗುತ್ತಾನೆ.  ’ಮದುವೆ ಆಗುತ್ತೇನೆ ಅಂತ ಮಾತು ಕೊಟ್ಟಿದ್ದೆಯಲ್ಲಾ’ ಎಂದು ಅವಳು ಪುಟ್ಟ ಹುಡುಗಿಯಾಗಿದ್ದಾಗ, ’ಮದುವೆ ಆಗ್ತೀನಿ’ ಅಂದಿದ್ದ ಮಾತನ್ನು ತನ್ನ ಅನುಕೂಲಕ್ಕೆ ತಿರುಚಿ ಅವಳನ್ನು ಮಾತಿನಲ್ಲಿ ಸಿಲುಕಿಸಿಕೊಳ್ಳುತ್ತಾನೆ.

ಅವಳೂ ಅದನ್ನೇನೂ ವಿರೋಧಿಸುವುದಿಲ್ಲ.  ಅವನೊಂದಿಗೆ ಸಲಿಗೆಯಲ್ಲೇ ಇರುತ್ತಾಳೆ.  ಅವರಿಬ್ಬರ ಸಲಿಗೆ ಅವಳ ಅಮ್ಮನ ಕಣ್ಣುಗಳನ್ನು ಚುಚ್ಚುತ್ತಿರುತ್ತದೆ.  ಆಕೆ ಅದನ್ನು ವಿರೋಧಿಸುತ್ತಾಳೆ.  ಆದರೆ ಆ ವಿರೋಧದ ನಿಜವಾದ ಕಾರಣವನ್ನು ಹೇಳಲು ಅವಳಿಗೆ ಬಾಯಿಲ್ಲ.  ಆದ್ದರಿಂದ, ಅವನಿಗೆ ಕೆಲಸ ಇಲ್ಲ, ತುಂಬಾ ವಯಸ್ಸಾಗಿದೆ, ಬೇರೆ ಜಾತಿ ಎಂದೇನೇನೋ ನೆಪ ಹೇಳುತ್ತಾಳೆ.  ಇಷ್ಟು ವರ್ಷ ಅವನ ಸಹಾಯ ತೆಗೆದುಕೊಳ್ಳುವಾಗ ಅವನ ಜಾತಿ ಮುಖ್ಯವಾಗಲಿಲ್ಲವೆ ಎನ್ನುವ ಮಗಳ ಪ್ರಶ್ನೆಗೆ ಅವಳ ಬಳಿ ಉತ್ತರ ಇಲ್ಲ.

ಇಲ್ಲಿ ಉಷೆಯದೂ ವಿವರಣೆಗೆ ನಿಲುಕದ ವರ್ತನೆ.  ಅವಳು ಕೇಶವನನ್ನು ಪ್ರೀತಿಸಲು ಯಾವುದೇ ಕಾರಣಗಳಿಲ್ಲ.  ಅವಳು ಬೆಳೆಯುವಾಗ ಅವಳಿಗೆ ಎಂದೂ ಅಮ್ಮನ ಪ್ರೀತಿ ಸಿಕ್ಕಿರುವುದಿಲ್ಲ.  ಅಮ್ಮನಿಗೆ ಸಿಟ್ಟು ತರಿಸಬೇಕೆಂದೇ ಈಗ ಅವನ ಜೊತೆ ಸಲಿಗೆಯಿಂದಿದ್ದಾಳೇನೋ ಅನ್ನಿಸಿಬಿಡುತ್ತದೆ.  ಹೋಗಲಿ ಅವರಿಬ್ಬರ ಸಂಬಂಧ ಉಷೆಗೆ ಗೊತ್ತಿರಲಿಲ್ಲವೇನೋ ಎಂದುಕೊಂಡರೆ, ಮುಂದೆಂದೋ ರಾಜನ್ ಜೊತೆ ಮಾತನಾಡುತ್ತಾ, ಅವನು ನನ್ನ ಅಮ್ಮನ ಮೇಲೆ ಕೆಟ್ಟ ದೃಷ್ಟಿ ಹಾಕಿದ್ದ ಅನ್ನುತ್ತಾಳೆ.  ಹಾಗಿದ್ದೂ ಅವನೊಂದಿಗೆ ಸಲಿಗೆಯಿಂದ ಇರುತ್ತಾಳೆ.  ಅವಳು ಅವನಲ್ಲಿ ತಂದೆಯಂತೆ ಕಾಪಾಡುವ ಗಂಡಸನ್ನು ಕಂಡಿದ್ದಳೆ?

ಅವಳ ಫೋಟೋಗಳನ್ನು ಒಂದು ಆಲ್ಬಂ ಮಾಡಿ ಕೇಶವ್ ಜೋಡಿಸಿಡುತ್ತಿರುತ್ತಾನೆ. ಅವರಿಬ್ಬರ ಮಾತುಕತೆ, ಸಲಿಗೆಯನ್ನು ತಾಯಿ ಮರೆಯಿಂದ ನೋಡುತ್ತಾಳೆ. ಅವರಿಬ್ಬರ ಜಗತ್ತಿನಲ್ಲಿ ಆಕೆ ಹೊರಗಿನವಳು.  ಆಕೆ ಕೇವಲ ದೂರುವ ಕಣ್ಣುಗಳಿಂದ ಕೇಶವನನ್ನು ನೋಡುತ್ತಿರುತ್ತಾಳೆ, ಆತ ಅವಳ ಕಣ್ಣುಗಳನ್ನು ತಪ್ಪಿಸುತ್ತಿರುತ್ತಾನೆ. ಒಂದು ದಿನ ಅಮ್ಮ ಅವರಿಬ್ಬರ ಸಲಿಗೆಯನ್ನು ಪ್ರಬಲವಾಗಿ ವಿರೋಧಿಸಿದಾಗ ಉಷೆ ತಾನಾಗೆ ಅವನ ಮನೆಗೆ ಹೋಗಿ ಅವನನ್ನು ತನ್ನವನನ್ನಾಗಿಸಿಕೊಳ್ಳುತ್ತಾಳೆ.  ಅವನನ್ನು ಮದುವೆ ಆಗುತ್ತೇನೆ ಎಂದಾಗ ಅಮ್ಮ ಕೇಳುವುದು, ’ಅವನು ಒಪ್ಪಿಕೊಂಡನಾ?’. ಮುಂದೆ ಅವಳ ತಾಯಿ ಅವರಿಬ್ಬರ ಮದುವೆಯನ್ನು ವಿರೋಧಿಸಿದಾಗ ಉಷೆ ಹೇಳುವುದು ಒಂದೇ ಮಾತು, ’ಹಾಗಾದರೆ ನನ್ನ ಹೊಟ್ಟೆಯಲ್ಲಿರುವ ಮಗು ತಂದೆ ಇಲ್ಲದೆ ಹುಟ್ಟುತ್ತದೆ’.  ಅವಳ ಅಮ್ಮನ ಆಘಾತ ಶಾಪವಾಗಿ ಮಾತಾಗುತ್ತದೆ, ’ನೀನೆಂದೂ ಸುಖವಾಗಿರುವುದಿಲ್ಲ’ – ಅದು ನಿಜವೂ ಆಗಿಬಿಡುತ್ತದೆ..

ಕೇಶವನೊಡನೆ ಉಷೆಯ ಮದುವೆ ಆಗುತ್ತದೆ.  ಅಜ್ಜಿಯ ಜೊತೆ ಕುಳಿತು ಖುಷಿಯಲ್ಲಿ ಅವಳು ಹಾಡುತ್ತಾಳೆ.  ಆ ದೃಶ್ಯದಿಂದ, ಆ ಫ್ರೇಂನಿಂದ ನಿಧಾನವಾಗಿ ತಾಯಿ ಹೊರಗೆ ಹೋಗಿ ಕೋಣೆಯೊಳಗೆ ಸೇರಿಕೊಳ್ಳುತ್ತಾಳೆ.  ಇಡೀ ಚಿತ್ರದಲ್ಲಿ ಪಾಪ ಅವಳು ಯಾವುದೇ ಫ್ರೇಂಗೂ ಸೇರುವುದೇ ಇಲ್ಲ.  ಅತ್ಯಂತ ಕಡಿಮೆ ಮಾತನಾಡುವ, ಕಣ್ಣುಗಳಲ್ಲಿ, ಮೌನದಲ್ಲಿ ತನ್ನೆಲ್ಲಾ ಅಸಹಾಯಕತೆಯನ್ನು ವ್ಯಕ್ತ ಪಡಿಸುವ ತಾಯಿಯ ಪಾತ್ರದಲ್ಲಿ ಸುಲಭಾ ದೇಶಪಾಂಡೆಯದು ಅತ್ಯಂತ ಭಾವಪೂರಿತವಾದ ನಟನೆ.  ಆ ಮೌನ ಹುಟ್ಟುಹಾಕುವ ವಿಷಾದ ಅಳಿಸಲಾಗುವುದಿಲ್ಲ.  ನನಗೆ ಆ ಕ್ಷಣಕ್ಕೆ ’ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಮಾಧವಿ ನೆನಪಾದಳು.  ಹೆಣ್ಣಿನ ಬದುಕು ಮತ್ತು ಆಯ್ಕೆಯನ್ನು ನಮ್ಮ ಕಣಗಾಲರಿಗಿಂತ ಬೆನಗಲ್ ಹೆಚ್ಚು ಸಹನೆಯಿಂದ ನೋಡಿದ್ದಾರೆ ಅನ್ನಿಸಿತು.

ಉಷೆ ಮದುವೆ ಆದ ಮೇಲೆ ಕೆಲಸ ನಿಲ್ಲಿಸಿಬಿಡುವ ಉಮೇದಿನಲ್ಲಿರುತ್ತಾಳೆ.  ಆದರೆ ಕೇಶವ್ ಗೆ ಆಕೆ ತನಗೆ ಉಷಾ ಆಗುವುದು ಎಷ್ಟು ಬೇಕೋ ಜಗತ್ತಿಗೆ ಊರ್ವಶಿ ಆಗುವುದೂ ಅಷ್ಟೇ ಮುಖ್ಯವಾಗಿರುತ್ತದೆ.  ನಯವಾದ ಮಾತಿನಿಂದ ಅವಳು ಕೆಲಸ ಮುಂದುವರಿಸಬೇಕು ಎಂದು ಒಪ್ಪಿಸುತ್ತಾನೆ.  ಆದರೆ ರಾಜನ್ ಜೊತೆ ಕೆಲಸ ಬೇಡ ಅನ್ನುತ್ತಾನೆ.

ಆದರೆ ರಾಜನ್ ಪ್ರಸಿದ್ಧ ನಟ, ಊರ್ವಶಿ ಮತ್ತು ಅವನ ಜೋಡಿ ಚೆನ್ನಾಗಿ ನಡೆಯುತ್ತದೆ.  ಹಾಗಾಗಿ ಹೆಂಡತಿಗೂ ಗೊತ್ತಿಲ್ಲದಂತೆ ಅವನೊಂದಿಗಿನ ಚಿತ್ರವನ್ನು ಒಪ್ಪಿಕೊಂಡಿರುತ್ತಾನೆ.  ಆ ಚಿತ್ರವನ್ನು ಅನೌನ್ಸ್ ಮಾಡುವ ಪಾರ್ಟಿ.  ಅಲ್ಲಿ ಕೆಲಸ ಮಾಡುವುದು ಪಕ್ಕಾ ಗಂಡಿನ ಈಗೋ.  ಕೇಶವ್ ಗೆ ಇವಳು ನನ್ನ ಆಸ್ತಿ ಎನ್ನುವ ಭಾವ.  ರಾಜನ್ ಗೆ ಈಗ ತನ್ನ ಮೇಲುಗೈ ಪ್ರದರ್ಶಿಸುವ ಅವಕಾಶ.  ಗಂಡನ ಎದುರಿನಲ್ಲೇ ಅವಳನ್ನು ಒಂದು ನೃತ್ಯಕ್ಕೆ ಆಹ್ವಾನಿಸುತ್ತಾನೆ.

ಅವಳಿಗೂ ಗಂಡನ ಮೇಲೆ ಸಿಟ್ಟಿರುತ್ತದೆ.  ರಾಜನ್ ಜೊತೆ ಮೆಲು ದನಿಯಲ್ಲಿ ಮಾತನಾಡುತ್ತಲೇ ನರ್ತಿಸುತ್ತಾಳೆ.  ನಿರ್ಮಾಪಕರ ಮಾತಿನ ಮೇರೆಗೆ ರಾಜನ್ ಜೊತೆಯಲ್ಲೇ ಊಟಕ್ಕೆ ಕೂರುತ್ತಾಳೆ.  ರಾಜನ್ ಮುಖದಲ್ಲಿ ಲೆಕ್ಕಾಚಾರ ಸರಿಯಾದ ತೃಪ್ತಿ.  ಮನೆಗೆ ಹೋದ ತಕ್ಷಣ ಕೇಶವ್ ಅವಳ ಮೇಲೆ ಕೈ ಮಾಡುತ್ತಾನೆ.  ನಡುರಾತ್ರಿಯಲ್ಲಿ ಮನೆಬಿಟ್ಟು ರಾಜನ್ ಮನೆಗೆ ಬರುವ ಉಷಾಳನ್ನು ರಾಜನ್ ಕೇಳುವುದು ’ನಡಿ, ನಾನು ನಿನ್ನ ಮನೆಗೆ ಬಿಟ್ಟು ಬರುತ್ತೇನೆ’.  ಸಿಟ್ಟಿನಲ್ಲಿ ಕೆರಳುವ ಉಷಾ ಅಲ್ಲಿಂದ ಹೊರ ನಡೆಯುತ್ತಾಳೆ.

ಅವಳ ಬದುಕಿನಲ್ಲಿ ಬರುವ ಮತ್ತೊಬ್ಬ ಗಂಡು, ಕವಿತೆ ಕೋಟ್ ಮಾಡುವ, ತತ್ವಜ್ಞಾನ ಮಾತನಾಡುವ ಸುನಿಲ್ (ನಾಸಿರುದ್ದೀನ್ ಶಾ).  ಅವಳ ಮೇಲಿನ ಅಧಿಕಾರಕ್ಕಾಗಿ ಸುನಿಲ್ ಮತ್ತು ರಾಜನ್ ನಡುವೆ ಸದಾ ಸಣ್ಣ ಸ್ಪರ್ಧೆ.  ಬದುಕು ಸಾಕಾಗಿದೆ ಎಂದ ಉಷೆಗೆ ಸುನಿಲ್ ಅದಮ್ಯವಾಗಿ ಪ್ರೀತಿ ಮಾಡಿ ನಂತರ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳೋಣ ಎನ್ನುತ್ತಾನೆ.  ಹೋಟಲಿನ ಕೋಣೆಯಲ್ಲಿ ಅವಳೊಡನೆ ರಾತ್ರಿ ಕಳೆಯುವ ಆತ ಬೆಳಗ್ಗೆ ಅವಳು ಏಳುವ ವೇಳೆಗೆ ತನ್ನ ಪಾಲಿನ ನಿದ್ರೆ ಮಾತ್ರೆಗಳನ್ನು ಅಲ್ಲೇ ಬಿಟ್ಟು, ಪತ್ರ ಬರೆದಿಟ್ಟು ಹೋಗಿರುತ್ತಾನೆ.  ಅವನು ತೋರಿಸಿದ ಉದಾಸೀನ ಮತ್ತು ನಿರಾಕರಣೆಯನ್ನು ಉಷೆ ಎಂದೂ ಮರೆಯುವುದಿಲ್ಲ.

ಹೀಗೆ ಉಷಾ ಒಮ್ಮೆ ಗಂಡನೊಡನೆ ಮುನಿಸಿಕೊಂಡು ಬಂದು ಹೋಟೆಲ್ ನಲ್ಲಿರುತ್ತಾಳೆ.  ಅವಳ ಪಕ್ಕದ ಕೋಣೆಯಲ್ಲಿ  ಶ್ರೀಮಂತ ಜಮೀನ್ದಾರ ಕಾಳೆ ತಂಗಿರುತ್ತಾನೆ.  ಅವನ ಕೋಣೆಯಿಂದ ಅಚಾನಕ್ ಅಜ್ಜಿಯ ಹಾಡಿನ ರೆಕಾರ್ಡ್ ಕೇಳಿ ಬಂದಾಗ ಅಲ್ಲಿಗೆ ಹೋಗುತ್ತಾಳೆ.  ಇಲ್ಲಿಯವರೆಗೆ ಆಕೆ ಕಂಡ ಗಂಡಸರೆಲ್ಲಾ ಇವಳನ್ನು ಕಂಡು ಒಂದಲ್ಲ ಒಂದು ರೀತಿ ಸೋತಿರುತ್ತಾರೆ, ಆದರೆ ಕಾಳೆ ಇವಳನ್ನು ಓಲೈಸದೆ ಮಾಮೂಲಾಗಿರುತ್ತಾನೆ.  ಈಗ ಕಾಳೆ ಅವಳ ಈಗೋಗೆ ಸವಾಲಿನಂತೆ ಕಾಣುತ್ತಾನೆ.

ಮೊದಲು ಜಗಳ ಆಡಿ ಹೋದರೂ ಆಮೇಲೆ ನಡುರಾತ್ರಿ ಬಂದು ಕ್ಷಮಾಪಣೆ ಕೇಳಲು ಬಂದೆ ಎನ್ನುತ್ತಾಳೆ.  ಕಾಳೆ ವಾಪಸ್ಸು ಹೋಗುವಾಗ ಅವನ ಒಂದು ಕರೆಗಾಗಿ ಇಷ್ಟು ದಿನ ಕಾದಿದ್ದಳೋ ಎನ್ನುವಂತೆ ಅವನ ಜೊತೆ ನಡೆದುಬಿಡುತ್ತಾಳೆ.  ಕಾಳೆಗೆ ಮದುವೆ ಆಗಿ ಒಬ್ಬ ಮಗ ಇದ್ದಾನೆ.  ಹೆಂಡತಿಗೆ ಪಾರ್ಶ್ವವಾಯು ಆಗಿ ಹಾಸಿಗೆ ಹಿಡಿದಿರುತ್ತಾಳೆ.  ಮಗ ಕರೆದುಕೊಂಡು ಬಂದ ಈ ಹೆಣ್ಣನ್ನು ಕಾಳೆಯ ತಾಯಿ ಅತ್ಯಂತ ಸಹಜವಾಗಿ ಮನೆಯೊಳಗೆ ಸೇರಿಸಿಕೊಳ್ಳುತ್ತಾಳೆ.  ಅವಳಿಗೆ ಸೀರೆ ಒಡವೆ ಕೊಡುತ್ತಾಳೆ.

ಉಷೆ ಬಯಸಿದ್ದ ಗೃಹಿಣಿಯ ಬದುಕು ಇಲ್ಲಿ ಅವಳಿಗೆ ಸಿಗುತ್ತದೆ.  ಕಾಳೆಯ ಅಘೋಷಿತ ಎರಡನೆಯ ಹೆಂಡತಿಯಾಗೆ, ಆತನ ಹೆಂಡತಿಯನ್ನು ’ಅಕ್ಕಾ’ ಎಂದು ಕರೆದುಕೊಂಡು, ಆತನ ಮಗುವಿಗೆ ಕಾಕಿ ಆಗಿ ಅವಳು ತನ್ನ ತಾಯಿ, ಮಗುವನ್ನು ಮರೆತು ಇಲ್ಲೇ ಉಳಿದುಬಿಡುತ್ತಾಳೆ.  ’ಊರ್ವಶಿ’ ಯಾಗಲು ಅಷ್ಟೇ ಅಲ್ಲ, ’ಉಷೆ’ಯಾಗಿ ಬದುಕಲೂ ಸಹ ಕರ ತೆರಲೇಬೇಕು ಎನ್ನುವುದು ಅವಳಿಗೆ ಗೊತ್ತಾಗುವ ದಿನ ಬರುತ್ತದೆ.  ಗಂಡು ಸೃಷ್ಟಿಸಿದ ಜಗತ್ತಿನಲ್ಲಿ ಹೆಣ್ಣಿಗೆ ಇರುವುದು ಎರಡೇ ಪಾತ್ರ ಉಷೆ ಅಥವಾ ಊರ್ವಶಿ.

ಹೆಣ್ಣು ಆ ಎರಡು ಪಾತ್ರಗಳಲ್ಲಿ ಒಂದನ್ನು ಮಾತ್ರ ಆರಿಸಿಕೊಳ್ಳಬೇಕು.  ಆ ಮನೆಯಿಂದ ಹೊರಗೆ ಹೋಗಿಬರಬೇಕು ಎಂದು ಪ್ರಯತ್ನಿಸಿದಾಗ ತನ್ನ ಕಾಲುಗಳಿಗೆ ಸಂಕೋಲೆ ಬಿಗಿದಿರುವುದು ಅವಳಿಗೆ ಗೊತ್ತಾಗುತ್ತದೆ.  ಅವಳು ಪ್ರತಿಭಟಿಸುತ್ತಾಳೆ.  ಆದರೆ ಕಾಳೆ ಅದು ಆ ಮನೆಯ ಹೆಂಗಸರ ಬದುಕಿನ ದಾರಿ ಎಂದು ಬಿಡುತ್ತಾನೆ.  ಮನೆಯಿಂದ ಹೋಗಬಾರದು ಎಂದ ಮೇಲೆ ಅವಳಿಗೆ ಮನೆಯಲ್ಲಿ ಉಸಿರು ಕಟ್ಟಲಾರಂಭಿಸುತ್ತದೆ.  ಗುಟ್ಟಾಗಿ ಕೇಶವ್ ಗೆ ಪತ್ರ ಬರೆದು, ಬಂದು ಕರೆದೊಯ್ಯಲು ಬೇಡುತ್ತಾಳೆ. ಅವನ ದಾರಿ ಕಾಯುತ್ತಾಳೆ.

ಕೇಶವ್ ಬರುತ್ತಾನೆ, ಅವಳನ್ನು ಕರೆದೊಯ್ಯುತ್ತಾನೆ.  ಬಾಂಬೆಗೆ ವಾಪಸ್ ಬರುವ ಅವಳನ್ನು ಅವಳದೇ ಚಿತ್ರದ ಪೋಸ್ಟರ್ ಗಳು ಸ್ವಾಗತಿಸುತ್ತವೆ.  ಅವಳನ್ನು ಇಲ್ಲಿ ಕಾಯುತ್ತಿರುವ ಬದುಕು ಇದೇ ಎನ್ನುವಂತೆ.  ’ನಾವಿಬ್ಬರೂ ಮತ್ತೆ ಬದುಕನ್ನು ಪ್ರಾರಂಭಿಸೋಣವೇ?’ ಎಂದು ಕೇಶವ್ ಕೇಳುತ್ತಾನೆ.  ಅದು ಅಸಾಧ್ಯ ಎನ್ನುವುದು ಇಬ್ಬರಿಗೂ ಗೊತ್ತು.  ಉಷಾ ಮತ್ತೆ ಹೋಟಲಿನ ಅದೇ ಕೋಣೆಗೆ ಹಿಂದಿರುಗುತ್ತಾಳೆ.  ಮನೆ ಬಿಟ್ಟಾಗ ಸೊಂಟದ ಎತ್ತರಕ್ಕಿದ್ದ ಮಗಳಿಗೆ ಮದುವೆ ಆಗಿದೆ.  ಅವಳು ಉಷೆಯನ್ನು ಮನೆಗೆ ಕರೆಯುತ್ತಾಳೆ, ಉಷಾ ಹೋಗುವುದಿಲ್ಲ.  ರಾಜನ್ ಫೋನ್ ಬರುತ್ತದೆ, ಅವಳಿಗೆ ಹೆಚ್ಚಿಗೆ ಮಾತನಾಡಲಾಗುವುದಿಲ್ಲ. ಅವಳ ಕೈಯಲ್ಲಿ ಫೋನ್ ಇರುವಾಗಲೇ ಚಿತ್ರ ಮುಗಿಯುತ್ತದೆ.  ಅನೇಕ ಪಾತ್ರಗಳನ್ನು ನಿಭಾಯಿಸಿದ ಕಲಾವಿದೆಗೆ ಈಗ ತನ್ನ ’ಪಾತ್ರ’ ಯಾವುದು ಎನ್ನುವುದನ್ನು ನಿರ್ಧರಿಸಲಾಗುತ್ತಿಲ್ಲ.  ಚಿತ್ರ ಮುಗಿಯುತ್ತದೆ.

ಚಿತ್ರದಲ್ಲಿ ಉಷೆಯ ಪಾತ್ರ ಮತ್ತು ಕೇಶವನ ಜೊತೆಯಲ್ಲಿನ ಅವಳ ಸಂಬಂಧ ಎರಡೂ ಸಂಕೀರ್ಣವಾದದ್ದು.  ಸಣ್ಣ ಹುಡುಗಿಯಾಗಿದ್ದಾಗ ಅವನು ಅವಳನ್ನು ಕಾಡಿಸುತ್ತಾನೆ, ಓಡುವ ಹುಡುಗಿ ಬಿದ್ದಾಗ ಧಾವಿಸಿ ಬಂದು ಎತ್ತಿಕೊಂಡು ಸಮಾಧಾನ ಮಾಡುತ್ತಾನೆ.  ದೊಡ್ಡವಳಾದ ಮೇಲೂ ಸಹ ಅವಳನ್ನು ನಿಯಂತ್ರಿಸುತ್ತಾನೆ, ಅವಳ ಹಣಕ್ಕೆ ಕಾಯುತ್ತಾನೆ, ಮಗು ನೋಡಿಕೊಂಡು ಮನೆಯಲ್ಲಿರುತ್ತೇನೆ ಎಂದ ಅವಳನ್ನು ಕೆಲಸಕ್ಕೆ ನೂಕುತ್ತಾನೆ.  ಚಿತ್ರಗಳು ಸಿಗಲಿ ಎನ್ನುವ ಕಾರಣಕ್ಕೆ ಅವಳನ್ನು ಹಳೆಯ ಪ್ರೇಮಿಯ ಜೊತೆ ಕೆಲಸ ಮಾಡಲು ಮಾತಾಡುತ್ತಾನೆ.  ಅವನಿಗೆ ತಾನು ದುಡಿಯಲಾಗುತ್ತಿಲ್ಲ ಎನ್ನುವ ಸಿಟ್ಟಿದೆ, ಯಶಸ್ವಿ ಹೆಂಡತಿಯನ್ನು ಕಂಡರೆ ಅಸೂಯೆ ಇದೆ, ಅವಳು ಗೆಲ್ಲುತ್ತಿದ್ದಾಳೆ ಮತ್ತು ತಾನು ಅವಳ ಮೇಲೆ ಅಧಾರಗೊಂಡಿದ್ದಾನೆ ಎನ್ನುವ ಕಾರಣಕ್ಕೆ ಕೀಳರಿಮೆ ಇದೆ.

ಅದೆಲ್ಲಾ ಇದ್ದರೂ ಅವಳು ಕಷ್ಟದಲ್ಲಿದ್ದಾಗ ಅವನು ತಪ್ಪದೆ ಅವಳ ಕರೆಗೆ ಓಗೊಡುತ್ತಾನೆ.  ಅವಳು ಅವನ ಕ್ರೌರ್ಯಕ್ಕೆ ಸೊಪ್ಪು ಹಾಕುವುದಿಲ್ಲ, ನೇರಾನೇರಾ ನಿಂತು ಜಗಳ ಆದುತ್ತಾಳೆ.  ಸಿಟ್ಟು ಬಂದರೆ ನೆಟ್ಟಗೆ ಬಟ್ಟೆಗಳನ್ನು ಸೂಟ್ ಕೇಸ್ ಗೆ ತುಂಬಿ ಹೋಟೆಲ್ ಗೆ ಹೋಗುತ್ತಾಳೆ, ತನ್ನ ಬದುಕನ್ನು ತನ್ನ ಇಚ್ಛೆಯ ಮೇರೆಗೆ ಬದುಕುತ್ತಾಳೆ, ಆದರೆ ಪ್ರತಿ ಸಲ ತಾನಿಟ್ಟ ಹೆಜ್ಜೆಯಲ್ಲಿ ಅಡ್ಡಿ ಎದುರಾದರೆ ಅವನನ್ನೇ ಕರೆಯುತ್ತಾಳೆ.  ಈ ಸಂಬಂಧವನ್ನು ಅರ್ಥೈಸಿಕೊಳ್ಳಲು ಕಷ್ಟ.

ಇಡೀ ಚಿತ್ರದಲ್ಲಿ ಬೆನಗಲ್ ಹಿಡಿದಿರುವ nuances ಅನ್ನು ನಾವು ಗಮನಿಸಬೇಕು.  ಚಿತ್ರವನ್ನು ಸೊಗಸಿನಿಂದ ಕ್ಲಾಸಿಕ್ ಗೆ ಏರಿಸುವುದು ಇಂತಹ ವಿವರಗಳೇ.  ಒಂದು ದೃಶ್ಯದಲ್ಲಿ ಉಷೆಯ ಮದುವೆ ಸುದ್ದಿ ತಿಳಿದು ರಾಜನ್ ಗೆ ಆಘಾತವಾಗಿದೆ, ಗ್ಲಾಸಿನಲ್ಲಿ ಮದ್ಯ ಹಿಡಿದು ಕುಡಿಯುತ್ತಾ ಬರುತ್ತಾನೆ, ಎದುರಲ್ಲಿ ಕನ್ನಡಿ. ಕನ್ನಡಿ ಮುಂದೆ ಬಂದಾಗ ಅವನು ತನ್ನನ್ನು ತಾನು ಪರೀಕ್ಷಿಸಿಕೊಳ್ಳತೊಡಗುತ್ತಾನೆ.  ಅದು ಯಾವುದೇ ನಟರ ಅಭ್ಯಾಸ. ಅದೇ ರೀತಿ ಕಾಳೆಯ ಬರೆಯುವ ಮೇಜಿನ ಮೇಲೆ ಫ್ರೇಮಿನ ಒಂದು ತುದಿಯಲ್ಲಿರುವ ಮೊದಲನೆಯ ಪತ್ನಿಯ ಫೋಟೋ.  ಚಿತ್ರ ಶುರುವಾಗುವುದು ಒಂದು ಲಾವಣಿಯ ದೃಶ್ಯದಿಂದ.  ಚಿತ್ರದಲ್ಲಿ ಹಲವಾರು ಫ್ಲ್ಯಾಶ್ ಬ್ಯಾಕ್ ಗಳ ನಂತರ ಕಥೆಯನ್ನು ಅದೇ ದೃಶ್ಯಕ್ಕೆ ತಂದು ಜೋಡಿಸುವುದರ ಮೂಲಕ ಶ್ಯಾಮ್ ಬೆನಗಲ್ ನಿರೂಪಣೆಯನ್ನು ಸರಳಗೊಳಿಸುತ್ತಾರೆ.

ಬಂದ ಕಾಲದಿಂದ ಚಿತ್ರ ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡೇ ಬಂದಿದೆ.  ಪತ್ರ ಬರೆದು ಉಷೆ ಕೇಶವ್ ನ ದಾರಿ ಕಾಯುವಾಗ ಕಾಳೆಯ ಹೆಂಡತಿ, ’ಅಡುಗೆ ಮನೆ ಬದಲಾಗುತ್ತದೆ, ಹಾಸಿಗೆ ಬದಲಾಗುತ್ತದೆ, ಗಂಡು ಧರಿಸುವ ಮುಖವಾಡ ಬದಲಾಗುತ್ತದೆ, ಆದರೆ ಎಲ್ಲೇ ಹೋದರೂ ’ಗಂಡು’ ಬದಲಾಗುವುದಿಲ್ಲ’ ಎನ್ನುತ್ತಾಳೆ.  ಆ ಚಿತ್ರ ಬಂದು ನಲ್ವತ್ತು ವರ್ಷಗಳು ಉರುಳಿದರೂ ಕಾಳೆಯ ಹೆಂಡತಿ ಹೇಳುವ ಆ ಮಾತಿನ ಅನುರಣನ ನಿಂತಿಲ್ಲ, ಪ್ರತಿ ಹೆಣ್ಣಿಗೂ ಆ ಸತ್ಯ ಬದುಕಿನ ಒಂದಲ್ಲ ಒಂದು ಸಂದರ್ಭದಲ್ಲಿ ಎದುರಾಗುವುದು ನಿಂತಿಲ್ಲ.

3 comments

  1. ಚೂರಾಗಿ ಬಿದ್ದ ಕನ್ನಡಿಯಲ್ಲಿ ಒಂದೊಂದರಲ್ಲೂ ಒಂದೊಂದು ಬಿಂಬ ಕಂಡು ಬೆಚ್ಚಿದೆ …
    ಬರಹ ಸೆಳೆದು ನನ್ನನ್ನು ಮುಷ್ಟಿಯಲ್ಲಿಟ್ಟುಕೊಂಡು ಬಿಟ್ಟಿತು … ತುಂಬ ಕಾಲ ಬೇಕು ಇನ್ನು ಇದರಿಂದ ಹೊರಬರಲು …

  2. ಚಿತ್ರವನ್ನು ನೋಡಿದ್ದೆ. ಈಗ ನೀನು ಅಕ್ಷರರೂ ಕೊಟ್ಟ ಭೂಮಿಕೆಯನ್ನು ಮತ್ತೊಮ್ಮೆ ನೋಡಬೇಕೆನಿಸತು. ಹೆಣ್ಣಿನ ಬದುಕೇ ಹೀಗೇಯೆನೋ ..ಇನ್ನೂ ಎದೆಯಾಳದಲ್ಲಿನ ಪ್ರಶ್ನೆಗಳನ್ನಿಟ್ಡುಕೊಂಡು ಇದೀನಿ

Leave a Reply