ಆಹಾ ಬಸ್ಸೇ..!!

ವಿಜಯ್ ಹೂಗಾರ್ 

ಒಂದು ನಗರದ ಜೀವನಾಡಿ ಯಾವುದು ಅಂತ ಕೇಳಿದರೆ, ಆ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಂತ ಹೇಳಬಹುದು. ಅದು ಎಷ್ಟು ಸುಗಮವಾಗಿ ಮತ್ತು ಸುಲಲಿತವಾಗಿರುತ್ತದೆಯೋ ಅಷ್ಟೇ ನಗರವೂ ಸ್ವಾಸ್ಥವಾಗಿರುತ್ತದೆ.

ಬೆಂಗಳೂರಿನ ಜೀವನಾಡಿಯಾಗಿರುವ ಬಿಎಂಟಿಸಿಯು, ಜನಸಾಗರದಲ್ಲಿ ಹರಿಯುವ ಹಾಯುದೋಣಿಗಳಂತೆ ನಗರದ ಆತ್ಮದಲ್ಲಿ ಅನುರುಕ್ತಗೊಂಡಿದೆ. ಆದರೇ ಓಲಾ ಮತ್ತು ಉಬರ್ ನ ಸಾರಿಗೆ ಕ್ರಾಂತಿಯಿಂದಾಗಿ, ಒಂದಷ್ಟು ಅನುಕೂಲಕರ ಜನ ಬಿಎಂಟಿಸಿ ತ್ಯಜಿಸಿದರೂ ಮಧ್ಯಮ ಮತ್ತು ಕೆಳಮಧ್ಯಮ ಜನರ ಏಕೈಕ ಆಯ್ಕೆ ಬಿಎಂಟಿಸಿಯೇ ಆಗಿದೆ.

ದಿನಕ್ಕೆ ಸರಾಸರಿ ಐವತ್ತು ಲಕ್ಷ ಜನರ ಪಯಣದ, ಆದಿ ಮತ್ತು ಅಂತ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಬೆಂಗಳೂರಿನ ೯೦ ಲಕ್ಷ ಜನರಲ್ಲಿ ಸರಾಸರಿ ಐವತ್ತು ಲಕ್ಷ ಜನ, ಅಂದರೇ ಐವತ್ತು ಪ್ರತಿಶತಕಿಂತಲೂ ಹೆಚ್ಚು ಜನ ಸಾರ್ವಜನಿಕ ಸಾರಿಗೆ ಬಳಸುವದು ಒಂದರ್ಥದಲ್ಲಿ ಒಳ್ಳೆಯದೇ.

ಸಾಮಾನ್ಯವಾಗಿ ಬಸ್ಸು ಅಂದಾಕ್ಷಣ ನನಗೆ ಮೊದಲಿಗೆ ನೆನಪಾಗುವದು, ಒಂದನೇಯ ತರಗತಿಯಲ್ಲಿದ್ದಾಗ ಅಂಕಲಿಪಿಯಲ್ಲಿ ಬರುವ ‘ಬ ಅಂದ್ರೆ ಬಸ್ಸು’ ಅನ್ನುವ ಕೆಂಪು ಬಣ್ಣದ ಬಸ್ಸು.

ಆ ಬಸ್ಸಿನ ಜೊತೆ ತುಂಬಾ ಭಾವನಾತ್ಮಕ ನಂಟಿದೆ. ನಮ್ಮೂರಿನ ಲಕ್ಷ್ಮಿ ಗುಡ್ಡದ ಮೇಲೆ ನಿಂತು ಕೆಂಪು ಬಣ್ಣದ ಬಸ್ಸು ನೋಡಿ ಪುಳಕಗೊಳ್ಳುವದು ಈಗಲೂ ನನಗೆ ಇಷ್ಟದ ಕೆಲಸ.

ಅದರಲ್ಲೂ ಕೊನೆಯ ಬಸ್ಸು ನಮ್ಮ ಲೌಕಿಕ ಜಗತ್ತಿನಲ್ಲಿ ತುಂಬಾ ದೊಡ್ಡ ಪಾತ್ರವೇ ವಹಿಸಿದೆ. ಕೊನೆಯ ಬಸ್ಸು ಇಡೀ ಊರ ಜನರ ಅಂತರಾಳಕ್ಕೆ ಬೆಸೆದುಕೊಂಡಿದೆ.

ಕೊನೆಯ ಬಸ್ಸು ಬಂದರೇ ಮುಗೀತು. ಊರಿನ ತುಂಬಾ ‘ಝಣ್’ ಅಂತ ತನ್ನದೇ ಆದ ಸ್ವರ ಮೀಟಿ ಬಿಡುತ್ತದೆ. ‘ಅರೇ….ಇವತ್ತು ಲಾಸ್ಟ ಬಸ್ಸಿಗ್ ಹಣಮಂತ ಬರಾವಿದ್ದ’. ‘ಇವತ್ ಲಾಸ್ಟ ಬಸ್ಸಿಗ್ ಸ್ವಾಮಿಯ ಕಿರಾಣಿದು ಮಾಲ್ ಇಳಿಸ್ಬೇಕು’ ‘ಹುಸಗೆ ಸುಬ್ಬಣ್ಣ ಇವತ್ ಲಾಸ್ಟ ಬಸ್ಸಿಗ್ ಬರಾವಿದ್ದ, ಬಂದ್ನಾ? ಏನಂದ್ರು ಮಂಠಾಳ ಡಾಕ್ಟ್ರು?’ ‘ನಮ್ ಸಿದ್ದು ಪೆಟ್ರೋಲ್ ತರಕ್ ಹೋಗಿದ್ದ, ಲಾಸ್ಟ ಬಸ್ಸಿಗ್ ಬರ್ತಾ ಅಂದಿದ್ದ. ಬಂದಂಗ ಕಾಣಲ್ಲ’ ಅಂತ ತಮ್ಮದೇ ರೀತಿಯಲ್ಲಿ ಮೀಟುವ ಧ್ವನಿ ಆಪ್ತವಾಗಿ ನಮ್ಮನ್ನ ಆವರಿಸುತ್ತದೆ.

ಊಟ ಮುಗಿಸಿ ಕಟ್ಟೆಯ ಮೇಲೆ ಮಾತಾಡುತ್ತ ಬಸ್ಸಿನ ಬಗ್ಗೆ ಚರ್ಚಿಸಿಯೇ ಮಲಗಲು ಅಣಿಯಾಗುವರು. ಬಸ್ಸು ಬರದೇ ಹೋದರೆ ಏನೋ ಒಂದು ಕಳೆದುಕೊಂಡ ಹಾಗೆಯೇ ವರ್ತಿಸುತ್ತಾ, ಅಸಮಾಧಾನಕಾರವಾಗಿ, ಅತೃಪ್ತರಾಗಿ ಊರು ತುಂಬಾ ಓಡಾಡುವರು. ಕೊನೆ ಬಸ್ಸು ಊರಿಗೆ ತಲುಪಿದರೆ ಮಾತ್ರ ಊರಿನ ಜನ ನೆಮ್ಮದಿಯಿಂದ ಮಲಗುತ್ತಿದ್ದರು. ಆದರೇ ಇದೇ ಭಾವ ಬೆಂಗಳೂರಿನ ಬಿಎಂಟಿಸಿ ಬಸ್ಸು ಯಾವತ್ತೂ ಉದ್ದೀಪಿಸಿಲ್ಲ. ಉದ್ದೀಪಿಸಲೂಬಾರದು. ಯಾಕೆಂದರೆ ಅದಕ್ಕೆ ತನ್ನದೇ ಆದ ಸ್ವಂತಿಕೆ ಮತ್ತು ತನ್ನದೇ ಆದ ವಿಶೇಷ ಗುಣಗಳು ಇರುತ್ತವೆ. ಅದನ್ನು ಸ್ವೀಕರಿಸಬೇಕಷ್ಟೆ.

ನನ್ನ ಮತ್ತು ಬಿಎಂಟಿಸಿಯ ಜೊತೆಗಿನ ಒಡನಾಟ ಒಂದು ದಶಕದಿಂದಿದೆ. ಬಸ್ ಪಾಸು ಇಪ್ಪತ್ತು ರೂಪಾಯಿ ಇದ್ದಾಗ ಅಪ್ಪನ ಜೊತೆ ಸಿಇಟಿ ಕೌನ್ಸೆಲ್ಲಿಂಗ್ ಗೆ ಬಂದದ್ದು ನೆನಪು. ಈಗ ಎಪ್ಪತೈದು ರೂಪಾಯಿ ಯಾಗಿದೆ. ಬೆಲೆ ಎಷ್ಟೇ ಇದ್ದರು ಜನ ಜಂಗುಳಿ ಮಾತ್ರ ಇನ್ನು ನಿಂತಿಲ್ಲ. ಒಂದು ವೇಳೆ ಬಿಎಂಟಿಸಿ ಬಸ್ಸಲ್ಲಿ ಯಶಸ್ವಿಯಾಗಿ ಸೀಟು ದಕ್ಕಿಸಿಕೊಂಡರೆ, ಅದು ನಮ್ಮ ಆದಿನದ ಸಾಧನೆಯೇ ಸರಿ. ಈ ಬಸ್ಸು ಒಂಥರಾ ಬಯಲು ಹೆರಿಗೆ ಮಂದಿರದಂತೆ, ಆಯಾ ಸ್ಟಾಪಿಗೆ ಕಿಕ್ಕಿರಿದ ಜನರನ್ನು ಪ್ರಸವಿಸಿ ಮುಂದೆ ಹೋಗುತ್ತಲೇ ಇರುತ್ತದೆ.

ಆಗಿನ್ನೂ ನಾನು ಆರ್ವಿ ಕಾಲೇಜಿನಲ್ಲಿ ಓದುತ್ತಿದ್ದೆ. ಮೆಜೆಸ್ಟಿಕ್ ಗೆ ಮತ್ತು ಮಾರ್ಕೆಟ್ಟಿಗೆ ಹೋಗುವ ಬಸ್ಸುಗಳು ನಮ್ಮ ಕಾಲೇಜಿನ ಮುಂದಿಂದ ಹೋಗುತ್ತಿದ್ದವು. ಕಾಲೇಜಿನ ಜಾಸ್ತಿ ಹುಡುಗರು ಕನ್ನಡೇತರರು ಇದ್ದುದ್ದರಿಂದ ಕನ್ನಡ ಭಾಷೆ ಅವರಿಗೆ ತುಂಬಾ ಹಿಂಸೆ ಆಗುತ್ತಿತ್ತು. ಕಾಲೇಜಿನಲ್ಲಿ ಅದು ಹೇಗೋ ನಿಭಾಯಿಸುತ್ತಿದ್ದರು. ಅದರ ಹೊರಗಡೆ ಬಂದರೆ ಸಾಕು, ಅವರಿಗೆ ಸಮಸ್ಯೆಯ ಮಹಾಪುರ ಎದುರಾಗುತ್ತಿತ್ತು.

ಒಮ್ಮೆ ಕಾಲೇಜು ಮುಗಿಸಿ ಊರಿಗೆ ಹೋಗಲು ಬಸ್ಸು ಕಾಯುತ್ತ ನಿಂತಿದ್ದೆ. ಬಸ್ಸು ಬಂದ ತಕ್ಷಣ ಹಿಂದಿನ ಬಾಗಿಲಿಂದ ನಾನು ಹತ್ತಿದೆ. ಒಬ್ಬ ನಾರ್ಥಿಯವನು ಬಸ್ಸಿನ ಮುಂಬಾಗಿಲಿಂದ ಹತ್ತುತ್ತಿದ್ದ. ಡ್ರೈವರ್ ಪಟ್ಟನೆ ‘ಏನ್ ಗುರು, ಮುಂದಿನಿಂದ ಹತ್ತಿಯಲ್ಲ. ನೀನು ಗಂಡ್ಸಾ? ಹೆಂಗ್ಸಾ?’ ಅಂತ ಕೇಳಿದ. ಕನ್ನಡ ಬಾರದವನು ‘ಗೊತ್ತಿಲ್ಲ’ ಅಂದು ಬಿಟ್ಟ. ಬಸ್ಸಿನೆಲ್ಲರೂ ಘೊಳ್ ಅಂತ ನಗತೊಡಗಿದರು. ವಿಷಯ ತಿಳಿದ ನಂತರ ಎದ್ದು ಡ್ರೈವರ್ ಹತ್ತಿರ ಹೋಗಿ ಸಿಟ್ಟಿನಿಂದ ‘ನನಗೆ ಕನ್ನಡ ಗೊತ್ತಿಲ್ಲ’ ಅಂತ ವಿಚಿತ್ರ ಟೋನಿನಲ್ಲಿ ತಿದ್ದಲು ಪ್ರಯತ್ನಿಸಿದ್ದ. ತುಂಬಾ ಲಹರಿಯಲ್ಲಿದ್ದ ಡ್ರೈವರ್ ಅದೇ ಟೋನಿನಲ್ಲಿ ‘ಮುಝೆ ಭೀ ಹಿಂದಿ ನಹಿ ಆತ’ ಅಂದು ಬಿಟ್ಟ. ತುಸು ಬಿಸಿ ಮೌನದ ನಂತರ, ತಡೆ ಹಿಡಿದ ಉತ್ಕಟ ನಗು ಬಸ್ಸಿನುದ್ದಕ್ಕೂ ಹಬ್ಬಿತು.

ಕಾಲೇಜಿನ ಕೊನೆಯ ಸೆಮಿಸ್ಟರ್ ನಲ್ಲಿದ್ದಾಗ ದೂರದ ವೈಟ್ ಫೀಲ್ಡ್ ನ ಒಂದು ಕಂಪನಿಯಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದೆ. ಅದಕ್ಕಾಗಿ ಪ್ರತಿ ಶನಿವಾರ ಕಾಲೇಜಿಗೆ ಬಂದು, ವಾರದಲ್ಲಾದ ಪ್ರಗತಿ ತೋರಿಸಬೇಕಿತ್ತು. ಆರ್ವಿಯಿಂದ ಸುಮಾರು ಮೂವತ್ತು ಕಿಲೋಮೀಟರು ದೂರ ಇರುವ ಕಂಪನಿಯಿಂದ ಅಂಬೋ ಅಂತ ಬರೋದು ತುಂಬಾ ಹಿಂಸೆಯಾಗುತ್ತಿತ್ತು. ಕಾಡುಗೋಡಿಯಿಂದ ಕೆಂಗೇರಿಗೆ ಡೈರೆಕ್ಟ್ ಬಸ್ಸೊಂದು ಬರುತ್ತಿತ್ತು. ಆ6 ಬಸ್ಸು. ಅದರಲ್ಲಿ ಕುಳಿತರೆ ಮೂರುಗಂಟೆ ನಿಷ್ಚಿಂತೆ. ಬೆಳಿಗ್ಗೆಯ ಟ್ರಾಫಿಕು ಸುಮಾರಾಗಿದ್ದರೂ ನಾಯಂಡನಹಳ್ಳಿಯ ಟ್ರಾಫಿಕ್ಕು ಪ್ರಾಣ ಹಿಂಡುತ್ತಿತ್ತು. ಆಗಿನ್ನೂ ನಾಯಂಡನಹಳ್ಳಿಯಲ್ಲಿ ಫ್ಲೈಓವರ್ ಆಗಿರಲಿಲ್ಲ. ಬೆಳಿಗ್ಗೆ ಸುಮಾರು ಆರು ಗಂಟೆಗೆ ಬಿಟ್ಟರೆ, ಒಂಬತ್ತೂವರೆ ಹತ್ತು ಗಂಟೆಗೆ ತಲುಪುತ್ತಿದ್ದೆವು. ಟ್ರಾಫಿಕ್ಕಿನ ಸರಿಯಾದ ಲಾಭ ಪಡೆಯಲು ಒಂದಿಷ್ಟು ಟೀ ಅಂಗಡಿಗಳೂ ತೆರೆದುಕೊಂಡಿದ್ದವು.

ನಾಯಂಡನಹಳ್ಳಿಯ ಟ್ರಾಫಿಕ್ಕು ಬರು ಬರುತ್ತಾ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಾಡಾಗುತ್ತಿತ್ತು. ಒಟ್ಟಾರೆ ನಲವತ್ತೈದು ನಿಮಷಗಳ ಏಕಾಂತ ನಮಗೆ ಕೊಡುತ್ತಿತ್ತು. ಮೊದಲು ಜನ ಅವರಷ್ಟಕ್ಕೆ ಅವರು ಸುಮ್ಮನೆ ಏಕಾಂತ ಎದುರಿಸುತ್ತಿದ್ದರು. ನಂತರದ ದಿನಗಳಲ್ಲಿ ಜನ ಒಬ್ಬರಿಗೊಬ್ಬರು ಮಾತಾಡುತ್ತ, ಪರಿಚಯ ಮಾಡಿಕೊಳ್ಳುತ್ತಿದ್ದರು.

ಈಗ ಬರುತ್ತಿರುವ ಮೆಮೇಗಳು ಆಗಲೇ ಜನರ ಬಾಯಿಯಿಂದ ಯಾವುದೇ ಶ್ರಮವಿಲ್ಲದೆ ಹೊರಬರುತ್ತಿದ್ದವು. ವರ್ಚುಯಲ್ ರಿಯಾಲಿಸಂ ಅಂತ ಫೇಸ್ಬುಕ್ ಕಡೆ ಮುಖ ಮಾಡಿ ನಿಂತ ನಮಗೆ ನಿಜವಾದ ಸಾಮಾಜಿಕ ಜಾಲತಾಣದ ನೇರ ಪ್ರಸಾರದಂತೆ ಕಾಣುತ್ತಿತ್ತು. ಸುಮಾರು ಆರು ತಿಂಗಳ ಹೀಗೆ ನಡೆಯಿತು. ನಂತರ ನಾನು ವೈಟ್ ಫೀಲ್ಡ್ ಕಡೆಗೆ ಮನೆ ಮಾಡಿದ್ದರಿಂದ ಆ ಕಡೆ ಹೋಗಲಾಗಲಿಲ್ಲ. ಈಗ ಅಲ್ಲಿ ಟ್ರಾಫಿಕ್ಕೇ ಕಾಣುವದಿಲ್ಲ. ಯಾವಾಗಲಾದರೂ ಅಲ್ಲಿಂದ ಹಾದು ಹೋಗಬೇಕಾದರೆ ಅಲ್ಲಿ ನನಗೆ ಪರಿಚಯವಾದ ವ್ಯಕ್ತಿಗಳನ್ನ ನೆನಸಿಕೊಳ್ಳಲು ಪ್ರಯತ್ನಿಸುತ್ತೇನೆ.

ನಾನು ಕಂಪನಿ ಬದಲಿಸಿದ್ದರಿಂದ ವೈಟ್ ಫೀಲ್ಡ್ ಬದಲಾಗಿ ಇಕೋ ಸ್ಪೇಸ್ ಗೆ ವರ್ಗವಾಗಿತ್ತು. ಕಂಪನಿಯ ಬಸ್ಸು ತಪ್ಪಿದರೆ ಬಿಎಂಟಿಸಿಯ ಬಸ್ಸು ಹತ್ತಬೇಕಾಗುತ್ತಿತ್ತು. ವಿಜಯನಗರದಿಂದ ಹೊರಡುವ ಬಸ್ಸು ಕಾರ್ಪೋರೇಶನ್, ಲಾಲ್ಭಾಗ್ ದಾಟಿ ಹೋಗುತ್ತಿತ್ತು. ನಿಮ್ಹಾನ್ಸ್ ಆಸ್ಪತ್ರೆಯ ಸ್ಟಾಪ್ ಬಂದಾಗ “ಹುಚ್ಚಾಸ್ಪತ್ರೆ, ಯಾರಾದ್ರೂ ಇಳೀತೀರಾ?” ಅಂತ ಕಂಡಕ್ಟರ್ ಕಿರುಚುತ್ತಿದ್ದ. ಎಷ್ಟೋ ಜನ ಅವ ಹೇಳಿದ ರೀತಿ ನೋಡಿ ಅಲ್ಲಿ ಇಳಿಯುತ್ತಿರಲೇ ಇಲ್ಲ. ಈ ಘಟನೆ ಸುಮಾರು ಸಲ ಆಗಿದ್ದರು, ಪ್ರತಿ ಸಲ ಮುಖದ ಮೇಲೆ ಮುಗುಳುನಗೆ ತಂದಿದೆ.

ಸಿನಿಮಾದಲ್ಲಿ ಹೇಗೆ ಹಿನ್ನಲೆ ಗಾಯಕರಿರುತ್ತಾರೋ ಹಾಗೆಯೇ ಬಿಎಂಟಿಸಿ ಬಸ್ಸಲ್ಲೂ ಹಿನ್ನಲೆ ಮಾತು ಸ್ಪೋಟಕರು ಇರುತ್ತಾರೆ. ಕಂಡಕ್ಟರ್ ಎಷ್ಟೇ ಜಾಣನಿದ್ದರೂ ಬಸ್ಸಿನ ಹಿಂದಿನ ಸೀಟಿನಿಂದ ಬರುವ ಅಶರೀರವಾಣಿ ಪತ್ತೆ ಹಚ್ಚಲು ಸಾಧ್ಯವೇ ಇಲ್ಲ. ಒಮ್ಮೆ ಬನಶಂಕರಿಯಿಂದ ಹೊರಟ ಬಸ್ಸಿನ ಕಂಡಕ್ಟರ್ ಒಬ್ಬರು ‘ಹಿಂದೆ ಹೋಗಿ ಹಿಂದೆ ಹೋಗಿ’ ಅಂತ ಹೇಳುತ್ತಿದ್ದರು. ಯಾರೋ ಒಬ್ಬರು ‘ ಸಾರ್ ಹಿಂದೆ ಯಾರು ಇದಾರೆ ಅಂತ?’ ಪ್ರಶ್ನೆ ಹಾಕಿದ್ದ. ಜನ ಗಾಜು ಒಡೆದ ಹಾಗೆ ನಕ್ಕರು. ಕೆಂಗೇರಿ ಬರೋವರೆಗೂ ಯಾರು ಹಾಗೆ ಹೇಳಿದ್ದು ಅಂತ ಕಂಡಕ್ಟರ್ ಗೆ ಕಂಡು ಹಿಡಿಯಲು ಆಗಲೇ ಇಲ್ಲ.

ಇನ್ನೊಮ್ಮೆ ‘ಪಾಸು ಕೈಯಲ್ಲಿ ಹಿಡ್ಕೊಳ್ಳಿ, ಪಾಸು ಪಾಸು, ಪಾಸು ಕೈಯಲ್ಲಿ ಹಿಡ್ಕೊಳ್ಳಿ’ ಅಂತ ಹೇಳುತ್ತಾ ಲೇಡಿ ಕಂಡಕ್ಟರ್ ಬರುತ್ತಿದ್ದಳು. ಮತ್ತೆ ಯಾರೋ ಹಿಂದಿಂದ ‘ನಮ್ ಜೀವನಾ ನೇ ಕೈಯಲ್ಲಿ ಹಿಡಿದಿದ್ದೀವಿ ಬನ್ನಿ ಮೇಡಂ’. ಅಂತ ಅಶರೀರವಾಣಿ ಹೊರಬಿದ್ದಿತು.

ಹೀಗೆ ಟಿನ್ ಫ್ಯಾಕ್ಟರಿಯಿಂದ ಮಾರ್ಕೆಟಿಗೆ ಹೊರಡುವ ಬಸ್ಸು ಸಿದ್ಧವಾಗಿತ್ತು. ಮಸೆದು ತಿನ್ನುವ ಜನದಟ್ಟಣೆಯಿತ್ತು. ಹೊಟ್ಟೆ ಬಂದ ವ್ಯಕ್ತಿಯ ಥರ ಬಸ್ಸು ನಿಧಾನಕ್ಕೆ ಚಲಿಸುತ್ತಿತ್ತು. ಜನದಟ್ಟಣೆಯಲ್ಲಿ ಕಂಡಕ್ಟರ್ ಗೆ ಟಿಕೆಟ್ ಹರಿಯುವದೂ ಕಷ್ಟವಾಗಿತ್ತು. ಬಾಗಿಲ ಬಳಿ ನಿಂತವರಿಗೆ ಹಿಂದೆ ಕಳಿಸಿ, ಒಳಬರುವವರಿಗೆ ಜಾಗ ಮಾಡಿಕೊಡುವದಕ್ಕೂ ಆಗುತ್ತಿರಲಿಲ್ಲ.

ಆಗ ಹಿಂದಗಡೆ ಸೀಟಿನಲ್ಲಿರುವನು ಒಬ್ಬ ಎದ್ದು, ಕಿಟಕಿಯಿಂದ ಮುಖ ಹೊರಗಡೆ ಹಾಕಿ ಮಾರ್ಕೆಟ್ ಮಾರ್ಕೆಟ್ ಮಾರ್ಕೆಟ್ ಅಂತ ಕಿರುಚತೊಡಗಿದ. ಬಾಗಿಲ ಬಳಿ ನಿಂತವರನ್ನು ಹಿಂದೆ ಕಳಿಸಿ, ಒಂದಿಷ್ಟು ಉಸಿರಾಡಲು ಜಾಗ ಮಾಡಿಕೊಟ್ಟಿದ್ದ. ಊರಲ್ಲಿನ ಖಾಸಗಿ ವಾಹನಗಳ ಟಿಪಿಕಲ್ ಕಿನ್ನರ್ ಕೆಲಸ ಆತ ಮಾಡಿದ್ದ. ನಾಲ್ಕೈದು ನಿಲ್ದಾಣ ಆದಮೇಲೆ ಜಾಗ ಸ್ವಲ್ಪ ಸಡೀಲವಾಯಿತು. ಕಂಡಕ್ಟರ್ ಯಾರಪ್ಪ ಅದು ಅಂತ ತುಂಬಾ ಖುಷಿಪಟ್ಟ. ಅವನಿಗೊಂದು ಥ್ಯಾಂಕ್ಸ್ ಹೇಳಬೇಕು ಅಂತ ಅನ್ಕೊಂಡ. ಆದರೇ ಆತ ಆವಾಗಲೇ ಇಳಿದು ಹೋಗಿದ್ದ. ಆತ ಇಳಿದು ಹೋಗುತ್ತಿದ್ದದ್ದು ನಾನು ನೋಡಿದ್ದೇ. ಒಂಚೂರು ಮೆಚ್ಚುಗೆ ಆಪೇಕ್ಷಿಸದೇ ತನ್ನ ಕೆಲಸ ಮಾಡಿ, ಅಲ್ಲಿಂದ ಹೊರಟು ಹೋಗಿದ್ದು ನೋಡಿ ವಿಶೇಷವೆನಿಸಿತ್ತು. ಅಶರೀರವಾಣಿ ಹೀಗೂ ಕೆಲಸ ಮಾಡಿದ್ದು ಮನಸ್ಸಿಗೆ ತುಂಬಾ ಮುದನೀಡಿತ್ತು.

ಸಾಮಾನ್ಯವಾಗಿ ಮಧ್ಯಾಹ್ನದ ಮಾರ್ಕೆಟ್ಟಿನ ಸ್ಟಾಪಿನಲ್ಲಿ ಕಂಡಕ್ಟರ್, ಒಂದಿಷ್ಟು ವಿಶ್ರಾಂತಿ ತೆಗೆದುಕುಂಡು, ಊಟ ಮಾಡಿ ನಿಧಾನಕ್ಕೆ ಸುಸ್ತು ಹೊಡೆದವರಂತೆ ಇರುತ್ತಾರೆ. ಯಾವುದೊ ಕೆಲಸದ ಮೇರೆಗೆ ಅಲ್ಲಿ ಹೋಗಿದ್ದರಿಂದ ಕಂಡಕ್ಟರ್ ನ ಮಹಾ ವಿಶ್ರಾಮ ಮುಗಿಯುವವರೆಗೂ ಬಸ್ಸಿನಲ್ಲೇ ಕಾದು ಕುಳಿತೆ. ಇನ್ನೇನು ಕಂಡಕ್ಟರ್ ಮುಂಬಾಗಿಲಿನಂದ ಹತ್ತಿದ. ಹಿಂಬಾಗಿಲಿನಿಂದ ನಾಯಿಯೊಂದು ಬಸ್ಸಿನೊಳಗೆ ಹತ್ತಿತು. ಕಂಡಕ್ಟರ್ ಟಿಕೆಟ್ ಟಿಕೆಟ್ ಅಂತ ಬರುತ್ತಿದ್ದ. ಅತ್ತ ನಾಯಿ ಅತ್ತಿಂದಿತ್ತ ಓಡಾಡಿ ಜನರನ್ನ ಗಾಬರಿಗೊಳಿಸುತ್ತಿತ್ತು. ಜನ ಕಾಲು ಎತ್ತಿ ಹಚಾ ಹಚಾ ಅಂತ ಓಡಿಸಲು ಯತ್ನಿಸುತ್ತಿದ್ದರು. ಕಂಡಕ್ಟರ್ ಬಂದವನೇ. “ಯಾರದಮ್ಮ ನಾಯಿ ಇದು? ಎತ್ಕೊಂಡ್ ಹೋಗಮ್ಮ….” ಅಂತ ಗದರಿಸಿದ. ಎಲ್ಲರೂ ಒಬ್ಬರು ಮುಖ ಒಬ್ಬರು ನೋಡಿ ನಗತೊಡಗಿದರು. ಯಾರೋ ಒಬ್ಬರ ಕೈಯಲ್ಲಿ ತಿನಿಸು ನೋಡಿ ನಾಯಿ ಬಸ್ಸಿನವರೆಗೂ ಬಂದಿತ್ತು. ಯಾವುದೊ ಸಾಕಿದ ನಾಯಿ ಇರಬೇಕೆಂದು ಡ್ರೈವರ್ ಕೂಡ ಜೋರು ಮಾಡಿದ್ದ.

ಒಬ್ಬ ಪಾನಮತ್ತ ವ್ಯಕ್ತಿ ಎಸಿ ಬಸ್ಸಿಗೆ ಹತ್ತುತ್ತಿದ್ದ. ನಾನು ಅದೇ ಬಸ್ಸಿನಿಂದ ಕೆಳಗಡೆ ಇಳಿಯುತ್ತಿದ್ದೆ. ಕುಡಿದ ವಾಸನೆ ಬಲು ಬೇಗ ಗ್ರಹಿಸಿದ ಕಂಡಕ್ಟರ್ ‘ಇಳಿಯಲೇ ಬೋಳಿಮಗನೇ’ ಅಂತ ಆತನನ್ನು ನೂಕಿ ಬಾಗಿಲು ಹಾಕಿಕೊಂಡ. ಇಳಿಯುವಾಗ ಆಯತಪ್ಪಿ ರಸ್ತೆಗೆ ಮುಖಮಾಡಿ ಬಿದ್ದುಬಿಟ್ಟ. ನಾನು ಅಯ್ಯೋ ಅನ್ನುವಷ್ಟರಲ್ಲಿ, ಆತ “ರೋಡ್ ಅವರೇ….ಸಾರೀ” ಅಂತ ರಸ್ತೆಗೆ ಕ್ಷಮೆಯಾಚಿಸುತ್ತಿದ್ದ. ಅವನು ಹೇಳಿದ ರೀತಿ ನೋಡಿ ನಗು ತಡೆಯಲಾಗಲಿಲ್ಲ. ಬಸ್ಸಿನ ಒಳಗಿದ್ದವರು ನಾನು ನಕ್ಕ ಕಾರಣ ರಸ್ತೆಯಲ್ಲೆಲ್ಲ ಹುಡುಕಾಡುತ್ತಿದ್ದರು. ಅವನನ್ನು ನೋಡಿ, ಸಹಾನುಭೂತಿ ಅನ್ನೋದು ಎಲ್ಲಿ ಬೇಕಾದರೂ, ಯಾರಿಂದ ಬೇಕಾದರೂ ಹುಟ್ಟಬಹುದು ಅನಿಸಿತು.

ಒಬ್ಬ ಬಿಹಾರದಿಂದಲೋ ಅಥವಾ ರಾಜಸ್ಥಾನದಿಂದಲೋ ಬಂದವನು ಬಸ್ಸು ಹತ್ತಿದ. ಬಿಲ್ಡಿಂಗ್ ಕಟ್ಟುವ ಕೆಲಸದವನು ಅಂತ ಅನಿಸುತ್ತೆ. ಅವನಿಗೂ ಕನ್ನಡ ಬರುತ್ತಿರಲಿಲ್ಲ. ಟ್ರಾಫಿಕ್ಕು ಚಿಲ್ಲರೆ ಗೊಂದಲದಿಂದ ತಲೆಕೆಟ್ಟು ಹೋಗಿರುವ ಲೇಡಿ ಕಂಡಕ್ಟರ್ ಎಲ್ಲಿಗೆ ಅಂತ ಕೇಳಿದಳು. ಆತ ಗಡಸು ಧನಿಯಲ್ಲಿ ‘ಏಹ್’ ಅಂದ. ಕಂಡಕ್ಟರ್ ಮತ್ತೆ ಎಲ್ಲಿಗೆ ಅಂತ ಕೇಳಿದಳು. ಇವನು ಮತ್ತೆ ‘ಏಹ್’ ಅಂದ. ಮತ್ತೆ ಕಂಡಕ್ಟರ್ ಎಲ್ಲಿಗೋ ಅಂತ ಕಿರುಚಿದಳು. ಇವನು ‘ಏಹ್’ ಬಿಟ್ಟರೆ ಏನು ಉಸಿರಲೇ ಇಲ್ಲ. ಕೊನೆಗೆ ಎಲ್ಲಿಗೋ ವೇರ್? ಅಂತ ಇಂಗ್ಲಿಷ್ ಸೇರಿಸಿ ತನ್ನ ಸೀಮೆ ಮೀರಿ ಕೇಳಿದಳು. ಮತ್ತೆ ಅವನು ಆಶ್ಚರ್ಯದಿಂದ ‘ಏಹ್’ ಅಂದನು. ಕೊನೆಗೆ ಆ ಲೇಡಿ ಕಂಡಕ್ಟರ್ ಕೊಡು ಹನ್ನೆರೆಡು ರೂಪಾಯಿ. ತಗೋ ಟಿಕೆಟ್. ಬೇವರ್ಸಿ ಅಂತ ಉಗಿದು ಹೋದಳು.

ಒಮ್ಮೆ ಕಾಲೇಜಿನ ಹುಡುಗರಿಬ್ಬರು ಬಸ್ಸು ಹತ್ತಿದರು. ವಿಜಯನಗರದ ಹತ್ತಿರ ಒಬ್ಬ “ಲೋ ಸತ್ಯ, ಯಾರೋ ನನ್ ಮೊಬೈಲ್ ಎತ್ಕೊಂಡ್ ಬಿಟ್ರು ಮಗ” ಅಂತಂದ. ಸತ್ಯ ಅನ್ನುವ ಅವನ ಗೆಳೆಯ “ಲೇ ನನ್ ಹತ್ರಾನೇ ಕಾಗೆ ಹಾರಿಸ್ತಿಯ?” ಅಂತಂದ. ಅದಕ್ಕವನು “ಸುಮ್ನೆ ಹೇಳ್ದೆ. ನಿನ್ ರಿಯಾಕ್ಷನ್ ನೋಡಣ ಅಂತ, ನನ್ ಮೊಬೈಲ್ ಯಾವನೋ ಎತ್ತಕೋತಾನೆ?” ಇದು ಹೀಗೆ ನಡೀತು. ಮಾಗಡಿ ರೋಡಿಗೆ ಕಳ್ಳನ ಕೈಚಳಕ ಕೈಗೂಡಿತು. “ಸತ್ಯ, ಯಾವನೋ ಲೋಫರ್ ನಿಜವಾಗ್ಲೂ ಮೊಬೈಲ್ ಎತ್ಕೊಂಡ್ ಬಿಟ್ಟ ಕಣೋ, ಸೂಳೆ ಮಗ” ಅಂತಂದ. ಬಸ್ಸಿನ ಎಲ್ಲರು ಅವನ ನೋಡಿ ನಗೆಯ ಕಡಲಲ್ಲಿ ತೇಲತೊಡಗಿದರು.

ಕೆಲವು ವರ್ಷಗಳ ಹಿಂದೆ ಬಿಎಂಟಿಸಿಯಲ್ಲಿ ಕಳ್ಳರ ಕಾಟ ಅತಿರೇಕಕ್ಕೆ ಹೋಗಿತ್ತು. ಈಗಲೂ ಇದೆ. ಆದರೆ ಕಮ್ಮಿ. ಮುಖ್ಯವಾಗಿ ಕಾಲೇಜಿನ ರೂಟು ತುಂಬಾ ಜಾಗ್ರತವಾಗಿರಲೇಬೇಕಾದ ಪ್ರದೇಶ. ಕದಿಯುವದಕ್ಕೆ ಕಳ್ಳರಿಗೆ ಹೇಳಿ ಮಾಡಿಸಿದ ಜಾಗ. ಕಾರಣ ಇಷ್ಟೇ. ಮೊದಲನೆಯದು ಜನಜಂಗುಳಿ. ಕಾಲೇಜಿನ ರೂಟಿನ ಬಸ್ಸುಗಳು ಯಾವಾಗಲು ತುಂಬಿ ತುಳುಕುತ್ತವೆ. ಈ ಗರ್ದಿಯಲ್ಲೇ ಅವರ ಚಳಕ ಫಲಿಸುತ್ತಿತ್ತು. ಎರೆಡನೇಯದು, ಕಾಲೇಜು ಹುಡುಗರ ಮೊಬೈಲು ಅಥವಾ ಪರ್ಸು ಕದ್ದರೆ ಅಥವಾ ಕದಿಯುವಾಗ ಸಿಕ್ಕಿಬಿದ್ದರೆ. ಸಲೀಸಾಗಿ ಜಗಳಮಾಡಿ ಹೊರಬರಬಹುದು. ದೊಡ್ಡ ಮಟ್ಟದ ರಿಸ್ಕು ತೆಗೆದುಕೊಳ್ಳುವ ಗೋಜಿಗೆ ಕಾಲೇಜು ಹುಡುಗರು ಹೋಗುವದಿಲ್ಲ. ನನ್ನ ಗೆಳೆಯರ ಮೊಬೈಲ್ ಕೂಡ ತುಂಬಾ ಸಲ ಎಗರಿಸಿದ್ದೂ ಇದೆ. ಹಾಗಾಗಿ ಇಲ್ಲಿ ಪಡೆದುಕೊಳ್ಳುವವರ ಸಂಖ್ಯೆಗಿಂತ, ಕಳೆದುಕೊಳ್ಳುವವರ ಸಂಖ್ಯೆಯೇ ತುಂಬಾ ದೊಡ್ಡದು.

ಕಾಲೇಜು ಅಂತಲೇ ಅಲ್ಲ, ಇಲ್ಲಿ ದಿನಂಪ್ರತಿ ಜನ ಏನಾದರೊಂದು ಕಳೆದುಕೊಳ್ಳುತ್ತಲೇ ಇರುತ್ತಾರೆ. ನಿದ್ದೆಯಲ್ಲಿ ಬಿಟ್ಟು ಹೋದ ಬ್ಯಾಗು, ಕಿಸೆಯಿಂದ ಮೆಲ್ಲನೆ ಜಾರಿದ ಮೊಬೈಲು, ಒಂಟಿ ಚಪ್ಪಲಿ, ಪರ್ಸು, ಕಂಪನಿಯ ಐಡಿ ಕಾರ್ಡು, ಹಳೇ ಬಟ್ಟೆಗಳ ಪ್ಲಾಸ್ಟಿಕ್ ಚೀಲ, ಕರ್ಚಿಫು – ಈ ಬಸ್ಸಿನಲ್ಲಿ ಕರ್ಚಿಫಿನ ಹಾವಳಿ ತುಂಬಾ ದೊಡ್ಡದು. ಪ್ರತಿದಿನದ ಕರ್ಚಿಫು ಕೂಡಿಸುತ್ತ ಹೋದರೆ ದೊಡ್ಡ ರಾಶಿಯೇ ಆದೀತು. ಕಳೆದುಕೊಂಡವರು ಯಾರೂ ಹುಡುಕುತ್ತ ಬಂದಿದ್ದು ಇಲ್ಲಿಯವರೆಗೆ ನೋಡೇ ಇಲ್ಲ. ಅವೂ ಕೂಡ ಯಾವತ್ತೂ ಕಳೆದುಕೊಂಡವರ ಕೈ ಸೇರುವದೂ ಇಲ್ಲ. ಆಸ್ಪತ್ರೆಯ ಪಕ್ಕದ ತಿಪ್ಪೆಗೆ ನವಜಾತ ಶಿಶು ಎಸೆದ ಹಾಗೆ. ಕಳೆದುಕೊಳ್ಳುವವರು ಶತಮಾನದ ಭಾರ ಕಳೆದುಕೊಂಡಹಾಗೆ.

ಒಮ್ಮೆ ಇಂಟರ್ವ್ಯೂ ಗೆ ಅಂತ ಐಟಿಪಿಎಲ್ ಗೆ ಹೋಗುತ್ತಿದ್ದೆ. ತುಂಬಾ ಗಡಿಬಿಡಿಯಲ್ಲಿ ಬಸ್ಸು ಹತ್ತಿದೆ. ವಿಜಯನಗರದಿಂದ ಮೆಜೆಸ್ಟಿಕ್ ಹೋಗಿ ಅಲ್ಲಿಂದ ಐಟಿಪಿಎಲ್ ಗೆ ಹೋಗಬೇಕು. ಮೆಜೆಸ್ಟಿಕ್ ಬಸ್ಸು ಹತ್ತಿ ಕುಳಿತುಕೊಂಡೆ. ಸ್ಟಾಪ್ ಹತ್ತಿರ ಬರುತ್ತಿದ್ದಂತೆ, ಮೆಜೆಸ್ಟಿಕ್ ಹತ್ತಿರದ ತಿರುವಿನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಅಚಾನಕ್ಕಾಗಿ ಬಸ್ಸಿನೆದುರು ಬಂದು ಚಕ್ರದಡಿಗೆ ಸಿಕ್ಕಿ ಬಿದ್ದರು. ನೋವಿನ ಸದ್ದಾಗಲಿ ಅಥವಾ ಕಿರುಚುವ ಸದ್ದಾಗಲಿ ಬರಲಿಲ್ಲ. ಏನಾಯಿತು ಅಂತ ಗಾಬರಿಯಲ್ಲಿ ಜನ ಬಸ್ಸಿನಿಂದ ಇಳಿದು ನೋಡಿದರು. ಮೌನದಲ್ಲೇ ಪ್ರಾಣ ಹೋಗಿತ್ತು. ದೃಶ್ಯ ಭೀಕರವಾಗಿತ್ತು. ಜನ ಸಿಟ್ಟಿಗೆದ್ದರು. ದಂಗೆಯ ವಾತಾವರಣವೇ ಸೃಷ್ಟಿಯಾಗಿತ್ತು. ನನಗೆ ಅದನ್ನು ನೋಡಲಾಗಲಿಲ್ಲ. ಮನಸ್ಸಿಗೆ ತುಂಬಾ ಬೇಜಾರಾಗಿತ್ತು. ಇಂಟರ್ವ್ಯೂ ಗೆ ಹೋಗಲು ಮನಸ್ಸೇ ಆಗಲಿಲ್ಲ. ಮನೆಯ ಹಾದಿ ಹಿಡಿದು ಅಮ್ಮನ ಮಡಿಲು ಸೇರಿದೆ.

Leave a Reply