ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ..

 

Distinguished Citizen – ಈ ಸಲದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ ಚಿತ್ರದ ಬಗ್ಗೆ ತಾಂತ್ರಿಕವಾಗಿ ಏನನ್ನೂ ಹೇಳಲಾರೆ.  ಕೈಯಲ್ಲಿ ಹಿಡಿದ ಕ್ಯಾಮೆರಾದಿಂದ ತೆಗೆದ ಚಿತ್ರ ಯಾವುದೇ ತಾಂತ್ರಿಕ ವಿಶೇಷಣಗಳನ್ನೂ ಹೊಂದಿಲ್ಲ.  ಇಡೀ ಚಿತ್ರ ನಿಂತಿರುವುದು ಚಿತ್ರಕಥೆಗಿರುವ ಹಲವಾರು ಆಯಾಮಗಳ ಮೇಲೆ, ಮನಸ್ಸಿಗಿರುವ ಹಲವಾರು ಪದರಗಳ ಮೇಲೆ, ಒಬ್ಬ ಬರಹಗಾರನಿಗಿರುವ ಸ್ವಾತಂತ್ರ್ಯ ಮತ್ತು ಅವನ ಸಾಮಾಜಿಕ ಕರ್ತವ್ಯಗಳ ನಡುವೆ ಉಂಟಾಗುವ ತಿಕ್ಕಾಟದ ನೆಲೆಗಳ ಮೇಲೆ.

ಚಿತ್ರದ ಮುಖ್ಯಪಾತ್ರವನ್ನು ನಿಭಾಯಿಸಿರುವ Óscar Martínez ಇಡೀ ಚಿತ್ರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ನಡೆಸಿದ್ದಾನೆ ಎಂದರೆ ತಪ್ಪಾಗಲಾರದು.  ಪಾತ್ರದ ಸಣ್ಣಸಣ್ಣ ಒಳತೋಟಿಗಳು, ವ್ಯಂಗ್ಯ, ಹತಾಶೆ, ವಿಷಣ್ಣತೆ ಎಲ್ಲವನ್ನೂ ಆತ ನಮ್ಮ ಸ್ಪರ್ಶಕ್ಕೆ ದಾಟಿಸುತ್ತಾನೆ.

ಸ್ಥಳ : ಸ್ಟಾಕ್ ಹೋಮ್

ಸಂದರ್ಭ : ನೋಬೆಲ್ ಪಾರಿತೋಷಕ ಪ್ರದಾನ ಸಮಾರಂಭ.

ಬಾಗಿಲ ಹೊರಗೆ ಒಂದು ಖುರ್ಚಿಯಲ್ಲಿ ಆ ಸಲದ ನೋಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ, ಡೇನಿಯಲ್ ಮಾಂಟೋವನಿ ಕೂತಿದ್ದಾನೆ.  ಅವನ ವ್ಯಕ್ತಿತ್ವದಲ್ಲಿ ಆ ಹೆಮ್ಮೆ ಇಲ್ಲ, ಏನೋ ಚಿಂತೆ.  ಅವನ ಹೆಸರನ್ನು ಕರೆಯಲಾಗುತ್ತದೆ, ಆತ ಒಳಗೆ ಹೋಗುತ್ತಾನೆ, ಪಾರಿತೋಷಕ ಸ್ವೀಕರಿಸಿ ಮಾತನಾಡುತ್ತಾನೆ, ’….ಒಬ್ಬ ಬರಹಗಾರ ಅವಿರೋಧವಾಗಿ ಒಂದು ಪ್ರಶಸ್ತಿಗೆ ಆಯ್ಕೆಯಾದ, ಅನೇಕ ಕ್ಷೇತ್ರಗಳ ವಿಶೇಷಜ್ಞರು, ಶಿಕ್ಷಣ ತಜ್ಞರು, ಅರಸೊತ್ತಿಗೆಯವರು ಅವನ ಬರಹವನ್ನು ಏಕಪ್ರಕಾರವಾಗಿ ’ಇಷ್ಟಪಟ್ಟರು’ ಎಂದರೆ ಅದು ಬರಹಗಾರನ ಸಾವು ಎಂದೇ ಅರ್ಥ….ಬರಹಗಾರನ ಕೃತಿ ಪ್ರಶ್ನಿಸಬೇಕು, ಆಘಾತಗೊಳಿಸಬೇಕು, ಆದರೆ ಈಗ ನನ್ನ ಬರಹ ಅದನ್ನು ಮಾಡುತ್ತಿಲ್ಲ ಎಂದರೆ ಆ ಬಗ್ಗೆ ವಿಷಾದ ಇದೆ ನನಗೆ..’ ಅವನ ದನಿಯಲ್ಲಿ ವಿಷಣ್ಣತೆ, ಪಾರಿತೋಷಕಗಳ ಬಗ್ಗೆ  ನಿರ್ಲಕ್ಷ್ಯ. ಆದರೆ ಅದು ಸಾವಯವವಾದದ್ದೇ ಅಥವಾ ಅವನು ನಿಜ ಎಂದು ಭಾವಿಸಿಕೊಂಡಿರುವುದೆ? Is his awakening the truth or his construction of the truth? ಚಿತ್ರ ಅದನ್ನು ಅನ್ವೇಷಿಸುತ್ತದೆ.  ಏಕೆಂದರೆ ಆ ನಂತರ ನಿಧಾನಕ್ಕೆ ಬರುವ ಚಪ್ಪಾಳೆ ಅವನ ಮುಖದ ಮೇಲೆ ಪ್ರಸನ್ನತೆಯನ್ನು, ಹೆಮ್ಮೆಯನ್ನು ತುಂಬುತ್ತದೆ.

ಅದಾಗಿ ಐದು ವರ್ಷಗಳು ಕಳೆದಿವೆ.  ನಾನಾ ಪ್ರಶಸ್ತಿ, ಪಾರಿತೋಷಕಗಳು ಅವನನ್ನು ಹುಡುಕಿಕೊಂಡು ಜಗತ್ತಿನೆಲ್ಲೆಡೆಯಿಂದ ಬರುತ್ತಿವೆ. ನೋಬೆಲ್ ಬರುವ ವೇಳೆಗೆ ಅವನಲ್ಲಿದ್ದ ಗೊಂದಲ ಈಗ ಇನ್ನೂ ಆಳಕ್ಕಿಳಿದಿದೆ.  ನಿಧಾನವಾಗಿ ಅವನು ಏಕಾಂತದ ಚಿಪ್ಪಿನೊಳಕ್ಕೆ ಸೇರಿಕೊಳ್ಳುತ್ತಿದ್ದಾನೆ. ಪ್ರಶಸ್ತಿಗಳನ್ನು ನಿರಾಕರಿಸುತ್ತಿದ್ದಾನೆ, ಸಭೆ ಸಮಾರಂಭಗಳಿಗೆ ಹೋಗುತ್ತಿಲ್ಲ. ಕೋಟೆಯಂತಹ ಅವನ ಮನೆಯೊಳಕ್ಕೆ ಅವನು ನಡೆದು ಹೋಗುತ್ತಾನೆ, ಕೋಟೆ ಬಾಗಿಲಂತಹ ಗೇಟ್ ಬಾಗಿಲುಗಳು ಅವನ ಬೆನ್ನ ಹಿಂದೆ ನಿಧಾನವಾಗಿ ಮುಚ್ಚಿಕೊಳ್ಳುತ್ತವೆ.

ಮನೆಯಲ್ಲಿ ಆತನ ಸೆಕ್ರೆಟರಿ ಅವನಿಗೆ ಬಂದಿರುವ ಎಲ್ಲಾ ಆಹ್ವಾನಗಳನ್ನೂ ಹೇಳುತ್ತಾ ಹೋಗುತ್ತಾಳೆ, ಅವನು ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಅದರಲ್ಲಿ ಒಂದು ಆಹ್ವಾನ ಪತ್ರಿಕೆ ಅವನ ಊರಿನದು. ’ಸಾಲಸ್’ ಅರ್ಜೆಂಟೈನಾದ ಪುಟ್ಟ ಊರು. ಅಲ್ಲಿ ನಾಲ್ಕು ದಿನಗಳು ನಡೆಯುವ ಊರ ಹಬ್ಬದಲ್ಲಿ ಅವನಿಗೆ ಪ್ರಶಸ್ತಿ ಕೊಟ್ಟು ಗೌರವಿಸಲೆಂದು ಆಹ್ವಾನಿಸಲಾಗಿದೆ.  ’ಇಲ್ಲ ಬಿಡು’ ಎಂದವನು ಮತ್ತೆ ’ಅದು ಯಾವಾಗ’ ಎಂದು ಕೇಳುತ್ತಾನೆ. ಸ್ವಂತ ಊರಿನ ಮೋಹ ಅಂಥಾದ್ದು.  ಅದು ಕೇವಲ ಮೋಹವೂ ಅಲ್ಲ.  ಇಡೀ ಪ್ರಪಂಚ ಹೊಗಳಿದರೂ ನಾವು ಬೆಳೆದ ಊರಿನಲ್ಲಿ ಸಿಗುವ ಗುರುತಿಸುವಿಕೆಗೆ ಬೇರೆಯದೇ ಮಹತ್ವ ಇರುತ್ತದೆ.  ಅಲ್ಲಿ ನಾವು ಎಡವಿದ್ದನ್ನು ಜನ ನೋಡಿದ್ದಾರೆ, ಬಿದ್ದದ್ದನ್ನು ನೋಡಿದ್ದಾರೆ. ಮೊಣಕಾಲ ತರಚು ಗಾಯ, ತೀರಿಸದ ಸಾಲ, ತಿಂದ ಏಟು, ಹರಿದ ಅಂಗಿ, ಮೊದಲ ಸೋಲು ಎಲ್ಲಕ್ಕೂ ಸಾಕ್ಷಿಯಾದ ಊರಿನಲ್ಲಿ ನಮ್ಮ ಸಾಧನೆಗೆ ಸಿಗುವ ಗೌರವ ಎಲ್ಲಕ್ಕಿಂತಲೂ ಮಿಗಿಲು.

ಅವನು ಮತ್ತೆ ಆ ಪತ್ರವನ್ನು ಕೈಗೆತ್ತಿಕೊಳ್ಳುತ್ತಾನೆ.  ನಲ್ವತ್ತು ವರ್ಷಗಳ ಹಿಂದೆ ಊರು ಬಿಟ್ಟು ಬಂದವನು.  ಮತ್ತೆ ತಿರುಗಿ ನೋಡಿಲ್ಲ.  ಈ ನಲ್ವತ್ತು ವರ್ಷಗಳೂ ಅಲ್ಲಿಂದ ತಪ್ಪಿಸಿಕೊಳ್ಳಲೆಂದೇ ನಡೆದಿದ್ದಾನೆ.  ತಮಾಷೆ ಎಂದರೆ ಅವನ ಕಥೆಯ ಯಾವುದೇ ಪಾತ್ರಕ್ಕೆ ಊರನ್ನು ಬಿಡಲು ಆಗುವುದಿಲ್ಲ, ಅವನಿಗೆ ಇಲ್ಲಿಯವರೆಗೆ ಊರಿಗೆ ಹಿಂದಿರುಗಲು ಆಗಿರುವುದಿಲ್ಲ.  ಅವನ ಮೂಡ್ ನೋಡಿ ಸಹಾಯಕಿ, ’ಹಾಗಾದ್ರೆ ಹೋಗ್ತೀರಾ’ ಎಂದು ಕೇಳುತ್ತಾಳೆ.  ’ಇಲ್ಲಪ್ಪ’ ಎಂದು ಧೃಡವಾಗಿ ಹೇಳಲು ಪ್ರಯತ್ನಿಸುತ್ತಾನೆ.  ಅವಳು ಮಿಕ್ಕ ವಿಷಯಗಳ ಬಗ್ಗೆ ಮಾತನಾಡುತ್ತಲೇ ಹೋಗುತ್ತಾಳೆ, ನಿಧಾನವಾಗಿ ಅವಳ ದನಿ ಅವನ ಪಾಲಿಗೆ ಫೇಡ್ ಔಟ್ ಆಗುತ್ತದೆ.  ಅವನು ಅಲ್ಲಿಲ್ಲ….ಮುಂದಿನ ದೃಶ್ಯದಲ್ಲಿ ಅವನು ಅನ್ಯಮನಸ್ಕನಾಗಿ ಮನೆಯ ಬಾಲ್ಕನಿಯಲ್ಲಿ ಓಡಾಡುತ್ತಿರುತ್ತಾನೆ.  ಕೆಳಗೆ ಲೈಬ್ರರಿ, ನೆಲದಿಂದ ಮಾಡಿನವರೆಗೂ ಜೋಡಿಸಿಟ್ಟ ಪುಸ್ತಕಗಳ ಸಾಲು.  ನೆರಳು ಬೆಳಕಿನ ವಿನ್ಯಾಸ.  ಆ ಒಂದು ಶಾಟ್ ನಲ್ಲಿ ಅವನ ಬದುಕು ನಮಗೆ ಅರ್ಥವಾಗಿ ಬಿಡುತ್ತದೆ.  ಕಡೆಗೆ ಸಹಾಯಕಿಗೆ ಫೋನ್ ಮಾಡಿ ಬರಲು ಹೇಳುತ್ತಾನೆ.  ಅವಳಿಗೆ ಅಚ್ಚರಿ ಆಗುವಂತೆ ಸಲಾಸ್ ಗೆ ಹೋಗಲು ಒಪ್ಪಿಗೆ ಕಳಿಸು ಎನ್ನುತ್ತಾನೆ.

ವರ್ತಮಾನದಿಂದ ಗತಕ್ಕೆ ಹಿಂದಿರುಗುವುದು ಸುಲಭವಲ್ಲ.  ಕಳೆದ ದಿನಗಳು ಮತ್ತೆ ಕೈಗೆ ಸಿಕ್ಕರೂ ಕಳೆದ ದಿನಗಳಲ್ಲಿದ್ದ ನಾವು ಈಗ ನಮ್ಮ ಕೈಗೆ ಸಿಗುವುದಿಲ್ಲ.  ಊರಿನ ಬಗ್ಗೆ ಮೋಹ ಅದಮ್ಯ, ಆದರೆ ಬಹಳ ಮಂದಿ ಅರ್ಥ ಮಾಡಿಕೊಳ್ಳದೇ ಇರುವ ವಿಷಯ ಎಂದರೆ ಮನುಷ್ಯನಿಗೆ ಒಂದು ಪಯಣ ಇರುವ ಹಾಗೆ, ಊರಿಗೂ ತನ್ನದೆ ಆದ ಪಯಣ ಇರುತ್ತದೆ.  ನಾವು ’ಇಂದಿನ’ ಊರಿಗೆ ಹೋಗಿ ’ನಿನ್ನೆಯ’ ಊರನ್ನು ಹುಡುಕುತ್ತೇವೆ.  ನಮ್ಮಲ್ಲಿ ಉಳಿಯದ ಮುಗ್ಧತೆಯನ್ನು, ಊರಿನಲ್ಲಿ ಹುಡುಕುವ ತಪ್ಪು ಮಾಡುತ್ತೇವೆ.  ಡೇನಿಯಲ್ ಗೆ ಇನ್ನೊಂದು ತಪ್ಪಂದಾಜಿದೆ.  ಅವನು ಈಗ ದೊಡ್ಡ ಮನುಷ್ಯನಾಗಿರುವುದು ಹೊರಗಿನ ಪ್ರಪಂಚದಲ್ಲಿ.  ಆ ಕಿರೀಟ, ಭುಜಕೀರ್ತಿಗಳನ್ನು ಹೊತ್ತು ಹೋದರೆ ಊರಿನ ತಗ್ಗು ಬಾಗಿಲುಗಳು, ಇಕ್ಕಟ್ಟಾದ ಓಣಿಗಳಲ್ಲಿ ಓಡಾಡಲಾಗುವುದಿಲ್ಲ.  ಸಣ್ಣಸಣ್ಣ ಊರುಗಳ ರಾಜಕೀಯಗಳೇ ಬೇರೆ, ಲೆಕ್ಕಾಚಾರಗಳೆ ಬೇರೆ.  ಯಾರ ಮೇಲೂ ಅವಲಂಬಿಸದೆ, ಯಾರ ಭಾವನೆಗಳನ್ನೂ ಗಣನೆಗೆ ತೆಗೆದುಕೊಳ್ಳದೆ ನಿರ್ವಾತದಲ್ಲಿ ಬದುಕುವುದು ಪಟ್ಟಣದಲ್ಲಿ ಸಾಧ್ಯ ಆದರೆ ಹಳ್ಳಿಯಲ್ಲಲ್ಲ.

ಈ ಕಥೆ ನನಗೆ ಇಷ್ಟವಾಗಲು ಇನ್ನೊಂದು ಕಾರಣ ಇಲ್ಲಿ ಸಾಧಾರಣವಾಗಿ ಹೇಳುವಂತೆ ’ಬಿಟ್ಟು ಹೋದದ್ದೆಲ್ಲಾ ಒಳ್ಳೆಯದು’, ’ಬಿಟ್ಟು ಹೋದವರು ಕೆಟ್ಟವರು’ ಎಂದು ಪ್ರತಿಪಾದಿಸುವುದಿಲ್ಲ.  ಹಳ್ಳಿಯ ಸಂಕೀರ್ಣತೆ ಮತ್ತು ಅಲ್ಲಿರುವ ಅಸೂಯೆ, ಸಣ್ಣತನಗಳನ್ನು ಸಹ ಕಟ್ಟಿಕೊಟ್ಟಿದ್ದಾರೆ, ಹಾಗೆಯೇ ವ್ಯಕ್ತಿಯಾಗಿ ಒಳ್ಳೆಯವನಾಗಿದ್ದರೂ ಒಂದು ಸಮುದಾಯದೊಳಗಿನ ವ್ಯಕ್ತಿಯಾಗಿ ಆ ಬರಹಗಾರ ಸೋಲುವುದನ್ನೂ ಕಟ್ಟಿಕೊಟ್ಟಿದ್ದಾರೆ.  ಎರಡು ಶಕ್ತಿಗಳ ಸಂಘರ್ಷ ಕಟ್ಟಿಕೊಟ್ಟ ನಿರ್ದೇಶಕ ಯಾವುದರ ಬೆನ್ನಿಗೂ ನಿಂತಿಲ್ಲ, ಕತೆ ಗೆಲ್ಲುವುದು ಅಲ್ಲಿ.

ಅಂತೂ ಇಂತೂ ಡೇನಿಯಲ್ ತನ್ನ ಸ್ವಯಂನಿರ್ಮಿತ ದ್ವೀಪ ದಾಟಿ ಸಲಾಸ್ ಗೆ ಬರುತ್ತಾನೆ.  ಅಲ್ಲಿಂದಲೇ ಡೇನಿಯಲ್ ಗೆ ಬದಲಾದ ಪರಿಸ್ಥಿತಿಯ ಅರಿವಾಗಲು ಶುರುವಾಗುತ್ತದೆ. ಐಷಾರಾಮಿ ಅಭ್ಯಾಸವಾಗಿರುವ ಈತ ವೈಭವೋಪೇತ ಕಾರಿನೆಡೆಗೆ ಹೆಜ್ಜೆ ಹಾಕುತ್ತಾನೆ.  ಅದಲ್ಲ ಇದು ಎಂದು ಚಾಲಕ ಒಂದು ಸಾಧಾರಣ ಟ್ಯಾಕ್ಸಿಯೆಡೆಗೆ ಕರೆದೊಯ್ಯುತ್ತಾನೆ.  ದಾರಿಯಲ್ಲಿ ಗಾಡಿ ಕೆಟ್ಟು, ರಾತ್ರಿ ಚಳಿ ತಡೆಯಲು ಈ ನೋಬೆಲ್ ಪ್ರಶಸ್ತಿ ವಿಜೇತನ ಪುಸ್ತಕದ ಹಾಳೆಗಳನ್ನು ಹರಿದು ಬೆಂಕಿ ಮಾಡಬೇಕಾಗುತ್ತದೆ.  ಅದು ಹೋಗಲಿ ಎಂದರೆ ಅದೇ ಪುಸ್ತಕವನ್ನು ಡ್ರೈವರ್ ಬೆಳಗ್ಗೆ ಟಾಯ್ಲೆಟ್ ಪೇಪರ್ ಆಗಿ ಸಹ ಉಪಯೋಗಿಸಿಬಿಡುತ್ತಾನೆ!

ಸಲಾಸ್ ಪುಟ್ಟ ಊರು. ಪುಟ್ಟ ಪುಟ್ಟ ಮನೆಗಳು, ಹಳೆ ಮನೆಗಳಿಗೂ ಬಾಗಿಲುಗಳಿಗೆ ಹೊಸದಾಗಿ ಬಳಿದ ಬಿಳಿ ಬಣ್ಣ, ರಸ್ತೆಗಳಲ್ಲಿ ಸೈಕಲ್ ತುಳಿಯುವ ಸಣ್ಣ ಮಕ್ಕಳು, ಹೆಚ್ಚಿನ ಜನಸಂಚಾರವಿಲ್ಲ.  ಆದರೆ ಅಲ್ಲಿಗೂ ಮೊಬೈಲ್ ಬಂದಿದೆ, ಒಬ್ಬಾತ ಈ ನೋಬಲ್ ವಿಜೇತ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ವಿಡಿಯೋ ಮಾಡುತ್ತಿದ್ದಾನೆ.  ಊರಿನ ಮೇಯರ್ ಇವನ ಗೆಳೆಯ.  ಅಗ್ನಿಶಾಮಕದಳದ ವಾಹನದಲ್ಲಿ, ಆ ಊರಿನ ಬ್ಯೂಟಿ ಕ್ವೀನ್ ಜೊತೆ ಡೇನಿಯಲ್ ಮೆರವಣಿಗೆ!

ಸಭೆಯಲ್ಲಿ ಇವನ ಬದುಕಿನ ಬಗ್ಗೆ ಒಂದು ಸಾಧಾರಣ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮಾಡಿದ್ದಾರೆ.  ಆದರೆ ತೌರೂರ ಬಾವಿಯ ನೀರು ಸದಾ ಸಿಹಿಯಾಗಿಯೇ ಇರುತ್ತದೆ.  ನೋಡುತ್ತಿದ್ದ ಡೇನಿಯಲ್ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತವೆ.  ಸಲಾಸ್ ನ ಅತ್ಯುನ್ನತ ಗೌರವವಾದ ’The Distinguished Citizen’ ಗೌರವವನ್ನು, ಒಂದು ಮೆಡಲ್ ಅನ್ನು ಅವನಿಗೆ ಕೊಡಲಾಗುತ್ತದೆ. ಅಲ್ಲಿ ಒಂದು ಘಟನೆ ನಡೆಯುತ್ತದೆ, ಚಿಕ್ಕ ವಯಸ್ಸಿನ ಹುಡುಗಿಯೊಬ್ಬಳು ಹಿಂದೊಮ್ಮೆ ಡೇನಿಯಲ್ ಹೇಳಿದ್ದ ಎನ್ನಲಾದ ’The most prosperous countries have less interesting artistic production,’ ಮಾತುಗಳ ಬಗ್ಗೆ ಪ್ರಶ್ನೆ ಎತ್ತುತ್ತಾಳೆ.  ತಾನು ಹಾಗೆ ಹೇಳಿಯೇ ಇಲ್ಲ ಎಂದು ಡೇನಿಯಲ್ ನಿರಾಕರಿಸುತ್ತಾನೆ.

ಇಲ್ಲೊಂದು ಸೂಕ್ಷ್ಮ ಇದೆ.  ಸುಮಾರು ೨೫ ವರ್ಷಗಳ ಮೊದಲು ಡೇನಿಯಲ್ ಆ ಮಾತುಗಳನ್ನು ಹೇಳಿರುತ್ತಾನೆ. ಆಗ ಅದು ಅವನ ಪಾಲಿಗೆ ಸತ್ಯವೂ ಹೌದು.  ಈ ಇಪ್ಪತ್ತೈದು ವರ್ಷಗಳ ಪಯಣದಲ್ಲಿ ಅವನೂ ಸಹ ಆ ‘most prosperous’ ಗುಂಪಿಗೆ ಸೇರಿ ಹೋಗಿದ್ದಾನೆ.  ಮತ್ತು ವಿಷಾದವೆಂದರೆ ಈಗ ಅವನಿಂದ ಏನೂ ಬರೆಯಲಾಗುತ್ತಿಲ್ಲ.  ಅವನ ಊರು ಅವನ ಎಲ್ಲಾ ಕಥೆಗಳ ಕಣಜ, ಅದರಾಚೆಗೆ ಅವನು ಏನನ್ನೂ ಭಾವಕೋಶದೊಳಕ್ಕೆ ಸೇರಿಸಿಕೊಂಡಿಲ್ಲ.  ಈಗ ಆ ಮಾತುಗಳನ್ನು ತನ್ನದೆಂದು ಒಪ್ಪಿಕೊಳ್ಳುವುದು ತನ್ನ ಬದುಕಿನ, ಆ ಮೂಲಕ ತನ್ನ ಬರಹದ ಅವನತಿಯನ್ನು ಒಪ್ಪಿಕೊಂಡಂತೆ.  ಹಾಗಾಗಿ ಅದನ್ನು ನಿರಾಕರಿಸುತ್ತಾನೆ.

ಊರಿನಲ್ಲಿ ಅವನಿಗೆ ತನ್ನ ಭೂತಕಾಲದ ಚಿತ್ರಗಳು, ಬರಹದ ಪಾತ್ರಗಳು ಹೆಜ್ಜೆಗೊಬ್ಬೊಬ್ಬರಂತೆ ಎದುರಾಗುತ್ತಲೇ ಇದ್ದಾರೆ. ಹಳೆಯ ಗೆಳೆಯ ಆಂಟೋನಿಯೋ ಬರುತ್ತಾನೆ.  ಅವನೀಗ ಐರಿನ್ ಳನ್ನು ಮದುವೆ ಆಗಿದ್ದಾನೆ.  ಐರಿನ್ ಡೇನಿಯಲ್ ಪ್ರೀತಿಸಿದ್ದ ಹುಡುಗಿ.  ’ನಿನ್ನ ಹುಡುಗಿ ಈಗ ನನ್ನ ಹೆಂಡತಿ ಕಣೋ’ ಅನ್ನುವ ಆಂಟೋನಿಯೊ ದನಿಯಲ್ಲಿ, ನೀನು ನೋಬೆಲ್ ಗೆದ್ದಿರಬಹುದು, ಆದರೆ ನಿನ್ನ ಹುಡುಗಿ ಈಗ ನನ್ನವಳು ಎನ್ನುವ ಹೆಮ್ಮೆ.

ಊರು ಬಿಟ್ಟು ಬಂದು ದೊಡ್ಡ ಮನುಷ್ಯರಾದ ಸುಮಾರು ಜನರಲ್ಲಿ ಒಂದು ಅಹಂ ಇರುತ್ತದೆ.  ಅವರ ಸುತ್ತಲಿನ ’ಪ್ರಭಾವಳಿ’ಯನ್ನು ಅವರು ಜೊತೆಯಲ್ಲೇ ತಂದಿರುತ್ತಾರೆ.  ನಾನು ಎಷ್ಟು ದೊಡ್ಡವನಾಗಿದ್ದರೂ ನೋಡಿ ನಿಮಗೆ ಲಭ್ಯವಿದ್ದೇನೆ ಎನ್ನುವ ಸಾತ್ವಿಕ ಅಹಂಕಾರ ಅವರದು.  ಊರಲ್ಲೇ ಉಳಿದವರಿಗೆ ಆ ವ್ಯಕ್ತಿಯ ಜೊತೆ ಗುರುತಿಸಿಕೊಳ್ಳುವ ಆಸೆ ಮತ್ತು ಅವನೆಡೆಗೆ ಒಂದು ಸಣ್ಣ ಅಸೂಯೆ, ಅಸಹನೆ ಎರಡೂ ಇರುತ್ತದೆ.  ಊರ ಅಗಸಿಬಾಗಿಲನ್ನು ಇವರಿಂದ ದಾಟಲಾಗಿರುವುದಿಲ್ಲ, ಆತ ದಾಟಿದ್ದಾನೆ, ಅಷ್ಟೇ ಅಲ್ಲ, ಆ ಎಲ್ಲಾ ಭುಜಕೀರ್ತಿ ಕಿರೀಟದ ಜೊತೆ ಇವರನ್ನು ನೋಡಲು ಬಂದಿದ್ದಾನೆ.  ಅದು ಊರಲ್ಲೇ ಉಳಿದವರಿಗೆ ಸಂಕಟ.

ಊರಿನ ಟಿವಿಯಲ್ಲಿ ಅವನ ಒಂದು ಸಂದರ್ಶನದ ಅಣುಕವೂ ನಡೆಯುತ್ತದೆ.  ಆದರೆ ಆತ ಅಲ್ಲಿ ಕೊಡುವ ಉತ್ತರಗಳು ನಿಜಕ್ಕೂ ಅದ್ಭುತವಾಗಿವೆ. ’ನೀನು ಯಾಕೆ ಬರಹಗಾರನಾದೆ?’ ಅನ್ನುವ ಪ್ರಶ್ನೆಗೆ ಅವನು ಉತ್ತರಿಸುವುದು, – ’ಬರಹಗಾರರಿಗೆ, ಕಲಾವಿದರಿಗೆ ಜಗತ್ತನ್ನು ಇರುವ ಹಾಗೆ ಒಪ್ಪಿಕೊಳ್ಳಲಾಗುವುದಿಲ್ಲ, ಅವರಿಗೆ ಬೇರೇನೋ ಬೇಕಿರುತ್ತದೆ. ಆ ಬೇರೇನನ್ನೋ ಜಗತ್ತಿಗೆ ಸೇರಿಸಲು ಅವರು ಕಲಾವಿದರಾಗುತ್ತಾರೆ.’, ’ನೀನ್ಯಾಕೆ ಹಿಂದಿರುಗಲಿಲ್ಲ?’ ಎನ್ನುವ ಪ್ರಶ್ನೆಗೆ ಅವನ ಉತ್ತರ, ’ನಾನು ಹಿಂದಿರುಗಬಯಸಿದ್ದೆ, ಆದರೆ ಈ ದೇಹದೊಂದಿಗಲ್ಲ, ಕೇವಲ ಕಣ್ಣುಗಳಾಗಿ…ಕಿವಿಗಳಾಗಿ.  ನನಗೆ ಇಲ್ಲಿ ಕೇವಲ ಪ್ರೇಕ್ಷಕನಾಗಿ ಬರಬೇಕೆಂದಿತ್ತು, ಇಲ್ಲಿನ ನೋವುಗಳಿಗೆ ಅತೀತನಾಗಿ.’ ಈಗಲೂ ಅವನು ಹಾಗೆಂದುಕೊಂಡೇ ಬಂದಿದ್ದಾನೆ.  ಆದರೆ ಯಾವುದೇ ಸ್ಥಳ ಹಾಗೆ ಯಾರನ್ನೂ ಕೇವಲ ಕಣ್ಣು ಕಿವಿ ಮಾತ್ರ ಆಗಿಸಿಕೊಳ್ಳುವುದಿಲ್ಲ.  ತನ್ನೊಳಗೆ ಎಳೆದುಕೊಳ್ಳುತ್ತದೆ, ಒಂದು ಪಾತ್ರವಾಗಿಸಿಕೊಂಡುಬಿಡುತ್ತದೆ.

 

ಅವನ ಕಥೆಯ ಪಾತ್ರಗಳು ಎದುರಾಗಿ ಅವನನ್ನು ಆಟೋಗ್ರಾಫ್ ಕೇಳುತ್ತವೆ, ಅಪ್ಪುಗೆ ಕೇಳುತ್ತವೆ. ಕೊನೆಗೊಬ್ಬ ನಿಮ್ಮ ಕಥೆಯ ’ಆ’ ಪಾತ್ರ ನನ್ನ ತಂದೆಯದು, ನಮ್ಮ ಮನೆಗೆ ಊಟಕ್ಕೆ ಬನ್ನಿ ಎನ್ನುತ್ತಾನೆ. ಡೇನಿಯಲ್ ನಿರಾಕರಿಸುತ್ತಾನೆ. ಅಹಂಕಾರದಿಂದ ಅಲ್ಲ, ಓದುಗರಿಗೆ ಅವನು ತನ್ನ ಬರಹದ ಮೂಲಕ ಅವರಲ್ಲೊಬ್ಬನಾಗಿ ಹತ್ತಿರವಾಗಿದ್ದಾನೆ, ಆದರೆ ಅವನಿಗೆ ಅವರು ಓದುಗರು ಮಾತ್ರ.  ಅವರೊಡನೆ ತನ್ನೊಳಗನ್ನು ಬಿಚ್ಚಿಕೊಳ್ಳುವುದು ಸುಲಭವಲ್ಲ.  ಇನ್ನೊಂದು ವಿಷಯ ಎಂದರೆ ಅವರೆಲ್ಲಾ ತಮ್ಮ ತಮ್ಮ ಪ್ರೀತಿ, ದ್ವೇಷ, ಕೋಪ, ಕಲಹಗಳನ್ನು ಇದ್ದ ಹಾಗೆ ವ್ಯಕ್ತಪಡಿಸುತ್ತಿದ್ದಾರೆ.  ಆದರೆ ನೋಬೆಲ್ ವಿಜೇತ ಸಾಹಿತಿಗೆ ಹಾಗೆ ಇರಲಾಗದ, ಮತ್ತೇನೋ ಆಗಿ ಇರಬೇಕಾದ ಹೊರೆ ಇದೆ.  ಅದು ಅವನನ್ನು ಸುಸ್ತು ಮಾಡಿಸುತ್ತದೆ.

ಎಲ್ಲರನ್ನೂ ಬಿಟ್ಟು ಬಂದಮೇಲೆ ಅವನನ್ನು ಭೇಟಿಯಾಗಲು ಐರಿನ್ ಬರುತ್ತಾಳೆ.  ಇಲ್ಲಿಗೆ ಬಂದ ಮೇಲೆ ಮೊದಲ ಸಲ ಅವನು ಸಹಜವಾಗುತ್ತಾನೆ, ಮುಖದಲ್ಲಿ ಖುಷಿ ಕಾಣುತ್ತದೆ, ಅಪ್ಪುಗೆಯಲ್ಲಿ ಮುಕ್ತತೆ ಇರುತ್ತದೆ.  ಇಬ್ಬರೂ ಮಾತನಾದುತ್ತಾರೆ, ಈಗಲೂ ಅವನ ಮಾತು, ಪದಗಳ ನಡುವಿನ ಮೌನ ಎರಡೂ ಅವಳಿಗೆ ಅರ್ಥವಾಗುತ್ತದೆ. ಅವಳ ಜೊತೆ ಮನಸ್ಸು ಬಿಚ್ಚಿ ಮಾತನಾಡುತ್ತಾನೆ. ಅವನು ಯೂರೋಪಿನಲ್ಲಿ ನಲ್ವತ್ತು ವರ್ಷಗಳನ್ನು ಕಳೆದಿದ್ದಾನೆ, ಆದರೆ ಅಲ್ಲಿನ ಏನನ್ನೂ ಬರವಣಿಗೆ ಆಗಿಸುವುದು ಅವನಿಂದಾಗಿಲ್ಲ.  ಅವನ ಬಾಲ್ಯ. ಕಿಶೋರಾವಸ್ಥೆ, ಯೌವನ, ಇಲ್ಲಿನ ಪರಿಸರ, ಇಲ್ಲಿನ ಪಾತ್ರಗಳು ಮತ್ತು ಅವಳು…..ಅವೇ ಪದೇ ಪದೇ ಅವನ ಕಥೆಗಳಲ್ಲಿ ಬರುತ್ತಿರುತ್ತವೆ. ಎಲ್ಲವನ್ನೂ ಹೇಳಿಕೊಳ್ಳುತ್ತಾನೆ.  ಆನಂತರ ಆತ ಅವಳನ್ನು ಚುಂಬಿಸಲು ಪ್ರಯತ್ನಿಸುತ್ತಾನೆ, ಅರೆ ಕಾಲಕಳೆದಂತೆ ಚುಂಬನ ಸಹ ತಣ್ಣಗಾಗುತ್ತದೆ…

ಅಂದು ರಾತ್ರಿ ಅವನ ಕೋಣೆಗೆ ಸಭೆಯಲ್ಲಿ ಪ್ರಶ್ನೆ ಕೇಳಿದ್ದ ಆ ಹುಡುಗಿ ಬರುತ್ತಾಳೆ, ಅವನು ನಿರಾಕರಿಸಿದ ಅವನ ಮಾತುಗಳನ್ನು ಅವನದೇ ಪುಸ್ತಕದಿಂದ ಓದುತ್ತಾಳೆ, ಅವನನ್ನು ತಳ್ಳಿಕೊಂಡೇ ಕೋಣೆಯೊಳಗೆ ಬರುತ್ತಾಳೆ. ಅವನು ಅವಳನ್ನು ತಡೆಯಲು ಯತ್ನಿಸುತ್ತಾನೆ, ಆದರೆ ಕಡೆಗೆ ತನ್ನ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿ ಅವಳೊಂದಿಗೆ ರಾತ್ರಿ ಕಳೆಯುತ್ತಾನೆ.
ಮರುದಿನ ಇವನೊಂದು ಪೇಂಟಿಂಗ್ ಸ್ಪರ್ಧೆಯ ಜಡ್ಜ್ ಆಗಿ ಹೋಗುತ್ತಾನೆ.  ಇವನ ಉದಾತ್ತ ವಿಚಾರಗಳಿಗೂ, ಸಣ್ಣ ಊರುಗಳ ಒಳಸುಳಿಗಳಿಗೂ ಇರುವ ಅಂತರ ಆಗ ಅವನ ಅರಿವಿಗೆ ಬರುತ್ತದೆ.  ಇವನು ನಿರಾಕರಿಸಿದ ಪೇಂಟಿಂಗ್ ರಚಿಸಿದ ವ್ಯಕ್ತಿ ಇವನ ಶತೃವಾಗುತ್ತಾನೆ.  ಆನಂತರ ಇವನ ವಾಸವನ್ನು ಅಸಹನೀಯಗೊಳಿಸಿಬಿಡುತ್ತಾನೆ.

ಅಂದು ರಾತ್ರಿ ಅವನು ಆಂಟೋನಿಯಾ ಮತ್ತು ಐರೀನ್ ಮನೆಗೆ ಊಟಕ್ಕೆ ಹೋಗುತ್ತಾನೆ.  ಅಲ್ಲಿ ಐರಿನ್ ಅವನನ್ನು ಸರಿಯಾಗಿ ವಿಶ್ಲೇಷಣೆ ಮಾಡುತ್ತಾಳೆ, ’ಒಂದೋ ನೀನು ಅತ್ಯಂತ ಮುಗ್ಧ, ಅಥವಾ ನೀನು ಅತ್ಯಂತ ಸ್ವಮೋಹಿ.  ನಿನ್ನ ನಡವಳಿಕೆ ಇಲ್ಲಿನವರನ್ನು ಘಾಸಿಗೊಳಿಸಬಹುದು ಎನ್ನುವ ಅರಿವೇ ಇಲ್ಲದಂತೆ ವರ್ತಿಸುವೆ’ ಎಂದು ಹೇಳುತ್ತಾಳೆ. ಬಹುಶಃ ನಗರಗಳು ತನ್ನ ವಾಸಿಗಳಲ್ಲಿ ಅಂತಹ ಬದುಕನ್ನು ಉದ್ದೀಪಿಸುತ್ತವೆ, ಹಳ್ಳಿ ಬದುಕು ಹೇಳಿಕೊಡುವ ಕೊಡುಕೊಳ್ಳುವಿಕೆಯನ್ನು, ಸಹಜೀವನವನ್ನು ನಗರ ಜೀವನ ಬಹುಮಟ್ಟಿಗೆ ನಾಶಮಾಡುತ್ತದೆ. ಹಾಗೆ ಯಾವ ಬಂಧವನ್ನೂ ಬೆಳಸಿಕೊಳ್ಳದ್ದರಿಂದಲೇ, ಯಾವ ಮರವನ್ನೂ ಆತುಕೊಳ್ಳದೇ ಇರುವುದರಿಂದಲೇ ಅವನಿಗೆ ಈಗ ಯಾವುದೇ ಆಳದ ಅನುಭವಗಳು ಆಗುತ್ತಿಲ್ಲ, ಅವನ ಯಾವುದೇ ಬರಹ ಹಳ್ಳಿಯನ್ನು ದಾಟುತ್ತಿಲ್ಲ.

ಅಲ್ಲಿ ಡೈನಿಂಗ್ ಟೇಬಲ್ ಟೇಬಲ್ ನಲ್ಲೂ ಒಂದು ಆಟ ನಡೆಯುತ್ತಿದೆ.  ಆಂಟೋನಿಯೋ ತನ್ನ ಅಹಂ ಅನ್ನು ತೋರಿಸಲೆಂದೇ ಡೇನಿಯಲ್ ಎದುರು ಪತ್ನಿಯನ್ನು ಬಲವಂತವಾಗಿ ಚುಂಬಿಸುತ್ತಾನೆ.  ವಾತಾವರಣವನ್ನು ತಿಳಿಗೊಳಿಸಲು, ಇಬ್ಬರು ಗಂಡಸರ ನಡುವಿನ ಮಾತು ಎನ್ನುವಂತೆ ಡೇನಿಯಲ್ ಸ್ನೇಹಿತನಿಗೆ ಹಿಂದಿನ ದಿನ ರೂಮಿಗೆ ಬಂದ ಹುಡುಗಿಯ ಬಗ್ಗೆ ಹೇಳಲು ತೊಡಗುತ್ತಾನೆ.  ಅವಳ ಚಿಕ್ಕ ವಯಸ್ಸು, ಅವಳ ಬಿಡೆ ಇಲ್ಲದ ನಡವಳಿಕೆ, ಅವಳ ಆತುರ ಎಲ್ಲವನ್ನೂ ವಿವರಿಸುತ್ತಿದ್ದಾನೆ.  ಗೆಳೆಯನಿಗೂ ಅದನ್ನು ಕೇಳಲು ಕಾತರ, ಆಮೇಲೆ, ಆಮೇಲೆ ಎನ್ನುತ್ತಿದ್ದಾನೆ.  ಅಷ್ಟರಲ್ಲಿ ಬೈಕ್ ಸದ್ದಾಗುತ್ತದೆ.  ಗೆಳೆಯನ ಮಗಳು ಮನೆಗೆ ಹಿಂದಿರುಗಿದ್ದಾಳೆ.  ಹೆಲ್ಮೆಟ್ ತೆಗೆದವಳನ್ನು ನೋಡಿ ಡೇನಿಯಲ್ ಅವಾಕ್ಕಾಗುತ್ತಾನೆ, ಆಕೆ ಹಿಂದಿನ ರಾತ್ರಿ ಇವನೊಟ್ಟಿಗೆ ಕಳೆದ ಅದೇ ಹುಡುಗಿ.

ಇದೀ ವಾತಾವರಣದಲ್ಲಿ ಜ್ವಾಲಾಮುಖಿಯ ಬಿಸಿ.  ಆ ಹುಡುಗಿಗೆ ಆಟ, ಡೇನಿಯಲ್ ಗೆ ತಪ್ಪಿತಸ್ಥ ಭಾವ.  ಆ ರಾತ್ರಿ ಮತ್ತೆ ಆ ಹುಡುಗಿ ಇವನ ರೂಮಿಗೆ ಬರುತ್ತಾಳೆ, ಇವನು ಬೈದು ವಾಪಸ್ ಕಳಿಸುತ್ತಾನೆ.  ಆ ಹುಡುಗಿಗೆ ಈ ಊರಿಂದ ತಪ್ಪಿಸಿಕೊಳ್ಳಬೇಕಿದೆ, ಅದಕ್ಕೆ ಡೇನಿಯಲ್ ಜೊತೆಗಿನ ಒಡನಾಟ ಸಹಾಯ ಮಾಡಬಹುದು ಎನ್ನುವುದು ಅವಳ ನಿರೀಕ್ಷೆ.  ಅಂದು ಅವನ ಕನಸಿನ ತುಂಬಾ ಬಂದೂಕು ಹಿಡಿದ ಅವನ ಊರಿನ ಜನಗಳು.

ಇಲ್ಲಿಂದ ಎಲ್ಲಾ ಘರ್ಷಣೆ ಒಂದೊಂದಾಗಿ ಸ್ಪೋಟವಾಗುತ್ತಾ ಹೋಗುತ್ತದೆ.  ಮೇಯರ್ ಚಿತ್ರಕಲಾ ಸ್ಪರ್ಧೆಯ ಅವನ ನಿರ್ಧಾರವನ್ನು ಪುನಹ್ ಪರಿಶೀಲಿಸುವಂತೆ ಕೇಳಿಕೊಳ್ಳುತ್ತಾನೆ.  ಅದು ಅಂತಹ ಪ್ರಪಂಚ ತಲೆಕೆಳಗಾಗುವ ವಿಷಯ ಅಲ್ಲ, ಆದರೆ ಡೇನಿಯಲ್ ಅದನ್ನು ಒಪ್ಪುವುದಿಲ್ಲ. ಮನೆಗೆ ಊಟಕ್ಕೆ ಕರೆಯಲು ಬಂದವನಿಗೆ ಅಷ್ಟೇ ಒರಟಾಗಿ ನಾನು ಬರಲ್ಲ ಎನ್ನುತ್ತಾನೆ.  ಊರಿನಲ್ಲಿ ಅವನನ್ನು ಇಷ್ಟ ಪಡದವರ ಸಂಖ್ಯೆ ಬೆಳೆಯುತ್ತಾ ಹೋಗುತ್ತದೆ.  ಅಲ್ಲಿ ಆ ಹುಡುಗಿ ಇವನ ಮೇಲಿನ ಸಿಟ್ಟಿನಿಂದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ.  ಐರಿನ್ ಕೆಂಡಾಮಂಡಲವಾಗಿದ್ದಾಳೆ.  ಅವನಿಗೇ ಗೊತ್ತಾಗದಂತೆ ಅವನು ಹುದುಲಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾ ಹೋಗುತ್ತಾನೆ

ಕಡೆಯ ದಿನ : ಇವನು ನಿರಾಕರಿಸಿದ ಚಿತ್ರಗಳಿಗೆ ಪ್ರಶಸ್ತಿ ಬಂದಿದೆ.  ಅಲ್ಲಿಗೆ ಹೋದರೆ ಇವನೆಡೆಗೆ ಎಲ್ಲರದೂ ಹಗೆ ತುಂಬಿದ ಮೌನ. ಭಾಷಣ ಮಾಡುತ್ತಾ ಡೇನಿಯಲ್ ಇವು ತಾನು ಆರಿಸಿದ ಚಿತ್ರಗಳಲ್ಲ ಎಂದು ಬಿಡುತ್ತಾನೆ.  ಕೆಲವರು ಅವನ ಮೇಲೆ ಮೊಟ್ಟೆಗಳನ್ನೆಸೆಯಲು ಪ್ರಾರಂಭಿಸುತ್ತಾರೆ.  ಆ ಊರಿನ ಹಿಪೋಕ್ರಸಿಯನ್ನು ವಿರೋಧಿಸುತ್ತಾ ತನ್ನ ಮೆಡಲ್ ಅನ್ನು ವಾಪಸ್ ಮಾಡಿ ಸಭೆಯಿಂದ ಏಕಾಂಗಿಯಾಗಿ ನಿರ್ಗಮಿಸುತ್ತಾನೆ.  ಆ ಊರಿನ ‘Distinguished citizen’ ಆಗಿದ್ದವನು ಅಲ್ಲಿಂದ ಹಿಂದಿನ ಬಾಗಿಲಿನಲ್ಲಿ ನಿರ್ಗಮಿಸಬೇಕಾಗುತ್ತದೆ. ಅವನನ್ನು ಊರಿಗೆ ಕರೆದುಕೊಂಡು ಬಂದ ಅದೇ ಡ್ರೈವರ್ ಅವನನ್ನು ಹಿಂದಿನ ಬಾಗಿಲಿನಿಂದ ಕರೆದುಕೊಂಡು ಹೋಗುತ್ತಾನೆ. ಅವನು ಊರು ಬಿಡಲು ಸಿದ್ಧನಾಗುತ್ತಾನೆ.

ಅವನಲ್ಲಿ ಸಿನಿಕತನ ಮಾತ್ರ ಇದೆ ಎಂದಲ್ಲ.  ವೀಲ್ ಚೇರ್ ಬೇಕು ಎಂದು ಬಂದ ತಂದೆಯೊಬ್ಬ ಇವನನ್ನು ಮ್ಯಾನುಪ್ಯುಲೇಟ್ ಮಾಡಲು ಪ್ರಯತ್ನಿಸಿದಾಗ ಮೊದಲು ಕೂಗಾಡಿದರು, ನಂತರ ತನ್ನ ಸೆಕ್ರೆಟರಿಗೆ ಹೇಳಿ ಅದರ ವ್ಯವಸ್ಥೆ ಮಾಡುತ್ತಾನೆ.  ಅವನಿದ್ದ ಲಾಡ್ಜ್ ನ ಮ್ಯಾನೇಜರ್ ತಾನು ಬರೆದ ಕಥೆಗಳನ್ನು ಕೊಟ್ಟಾಗ ಅದನ್ನು ಓದುವುದಲ್ಲದೆ, ತಾನೇ ಅದನ್ನು ಪ್ರಕಟಿಸುವುದಾಗಿ ಹೇಳುತ್ತಾನೆ.

ಏನೇನೋ ಆಗಿ ಆತ ಈಗ ತಾನಿರುವ ಊರಿಗೆ ಹಿಂದಿರುಗುತ್ತಾನೆ.  ಅಷ್ಟೇ ಅಲ್ಲ, ವರ್ಷಗಳ ನಂತರ ಮತ್ತೆ ಬರೆಯುತ್ತಾನೆ, ಪುಸ್ತಕದ ಹೆಸರು Distinguished Citizen!  ಒಬ್ಬ ವರದಿಗಾರ ಕತೆಯಲ್ಲಿ ಸತ್ಯ ಎಷ್ಟು, ಕಲ್ಪನೆ ಎಷ್ಟು ಎಂದು ಕೇಳುತ್ತಾನೆ.  ಆಗ ಅವನ ಉತ್ತರ ಅದ್ಭುತವಾಗಿದೆ, ’ಬದುಕಿನಲ್ಲಿ ವಾಸ್ತವ ಸತ್ಯ ಎಂದಿರುವುದಿಲ್ಲ ಗೆಳೆಯ, ಇರುವುದೆಲ್ಲಾ ಅದರ ವ್ಯಾಖ್ಯಾನ ಮಾತ್ರ!’.
ಇಡೀ ಚಿತ್ರದಲ್ಲಿ ಡೇನಿಯಲ್ ಪಾತ್ರದ ಕಲ್ಪನೆ, ಬೆಳವಣಿಗೆ, ಪೋಷಣೆ ಎಲ್ಲವೂ ಬಹಳ ಚೆನ್ನಾಗಿದೆ.  ಇಲ್ಲಿ ಡೇನಿಯಲ್ ಒಂದು ಪ್ರತಿಮೆ ಮಾತ್ರ.  ಎತ್ತರಕ್ಕೇರಿದಂತೆ ಬಹಳಷ್ಟು ವ್ಯಕ್ತಿಗಳಿಗೆ ಅದರಲ್ಲೂ ಕಲಾವಿದರಿಗೆ ಸಾಧಾರಣ ಜನರಿಗೆ ಅನ್ವಯಿಸುವ ಯಾವ ಬಂಧಗಳು, ಬೇಲಿಗಳು, ನಿಬಂಧನೆಗಳೂ ತಮಗೆ ಅನ್ವಯಿಸುವುದಿಲ್ಲ ಎನ್ನುವ ಮನೋಭಾವ ಇರುತ್ತದೆ. ಆದರೆ ಅವರ ಲೋಕದ, ಅವರ ಕಂಫರ್ಟ್ ಜ಼ೋನಿನ ಆಚೆಗೆ ಅವರು ಎಷ್ಟು ನಿರಾಯುಧರು, ನಿಸ್ಸಹಾಯಕರು ಎನ್ನುವುದನ್ನು ಚಿತ್ರ ತೋರಿಸುತ್ತದೆ.  ತನ್ನ ಮಟ್ಟಿಗೆ ಡೇನಿಯಲ್ ಸೂಪರ್ ಮ್ಯಾನ್, ಆದರೆ ಸಲಾಸ್ ನಲ್ಲಿ ಸೂಪರ್ಮ್ಯಾನ್ ಬೊಂಬೆಗಳನ್ನು ರಸ್ತೆ ಬದಿ ಮಾರಾಟಕ್ಕಿಟ್ಟಿದ್ದಾರೆ!!

ಆದರೆ ಚಿತ್ರದಲ್ಲಿ ಒಂದು ಕೊರತೆ ಇದೆ.  ನೋಬೆಲ್ ಗೆಲ್ಲಬಲ್ಲಂತಹ ಕಥೆಗಳನ್ನು ಕೇವಲ ತನ್ನ ಊರಿನ ನೆನಪುಗಳಿಂದಲೇ ಬರೆದ ಬರಹಗಾರನ ಊರು ಹೇಗಿರಬೇಕು?  ಆದರೆ ಅಂತಹ ಊರನ್ನು ಕಟ್ಟಿಕೊಡುವ ಯಾವುದೇ ಪ್ರಯತ್ನವನ್ನು ನಿರ್ದೇಶಕರಾಗಲಿ, ಕ್ಯಾಮೆರಾ ಆಗಲಿ ಮಾಡಿಲ್ಲ.  ಊರು ಕಡೆಗೂ ಒಂದು ಪಾತ್ರವಾಗಿ ನಮ್ಮನ್ನು ತಾಕುವುದಿಲ್ಲ.

ಊರಿಗೆ ಬಂದ ಡೇನಿಯಲ್ ತನ್ನ ನೆನಪುಗಳಲ್ಲಿ ನಳನಳಿಸುತ್ತಿದ್ದ ತನ್ನೂರಿನ ಸರೋವರವನ್ನು ನೋಡಲು ಹೋಗುತ್ತಾನೆ.  ಅಲ್ಲಿ ಒಂದು ಹನಿ ನೀರಿಲ್ಲ, ಸರೋವರ ಒಣಗಿ ಹೋಗಿದೆ. ಗತಕಾಲಕ್ಕೆ ನೆನಪು ಕೊಡುವ ಮೆರುಗನ್ನು ವಾಸ್ತವ ಕೊಡುವುದಿಲ್ಲ…

Leave a Reply