ಕಿ ರಂ ಪುಸ್ತಕ ಎಡಿಟ್ ಮಾಡುತ್ತಾ..

 

 

ಕಿರಂ ಎನ್ನುವುದೇ ಒಂದು ರೂಪಕ ಶಕ್ತಿ..

ಬೇಲೂರು ರಘುನಂದನ್ 

 

 

 

ಕಾವ್ಯದೊಳಗೆ ಅದ್ದಿಕೊಳ್ಳುವ ಪ್ರತಿಯೊಬ್ಬ ಕವಿಯೂ ಕಿರಂ ಎನ್ನುವ ಕಾವ್ಯ ಧರ್ಮದ ಒಳಗೆ ಹಾದುಹೋಗಲೇ ಬೇಕು. ಕಿರಂ ಎಂದರೆ ಕವಿತೆಗಳ ಕೂಸುಗಳನ್ನು ಹಡೆಯೋ ತಾಯಿ

ನಾನು ಹಾಸನದ ಹೇಮಗಂಗೋತ್ರಿಯಲ್ಲಿ ಎಂ.ಎ ಮಾಡುವಾಗ ಎರಡು ದಿನಗಳು ನಮಗೆ ಕಾವ್ಯ ವಿಮರ್ಶೆಯ ತರಗತಿಗಳನ್ನು ವಿಶೇಷ ಉಪನ್ಯಾಸ ಎಂಬ ಕಾರ್ಯಕ್ರಮದ ಹೆಸರಿನಲ್ಲಿ ಮಾಡಿದ್ದರು. ಬೆಳಗಿನಿಂದ ಸಂಜೆಯ ತನಕ ಎರಡು ದಿನ ಪೂರಾ ಪ್ರಾಚೀನ ಕನ್ನಡ ಕಾವ್ಯದಿಂದ ಹಿಡಿದು ಅಧುನಿಕ ಕನ್ನಡ ಕಾವ್ಯದ ತನಕ ಕಾವ್ಯಪಾಕದಲ್ಲಿ ನಮ್ಮನ್ನು ಮುಳುಗಿಸಿಬಿಟ್ಟರು.

ಕವಿತೆ ಎಂದರೆ ಏನು ಎಂಬ ಸಣ್ಣ ಝರಿ ಹುಟ್ಟಿಕೊಂಡಿದ್ದೇ ಆಗ ನನಗೆ. ಅದುವರೆಗೂ ಸಾರಾಂಶ ಪ್ರಧಾನ ಮತ್ತು ಪರಿಚಯಾತ್ಮಕ ನೆಲೆಯ ಕಾವ್ಯ ಪ್ರವೇಶಿಕೆಗಳು ಇದ್ದ ನನಗೆ ಮತ್ತು ಹಾಸನದ ನನ್ನ ಗೆಳೆಯರಿಗೆ ಕಿರಂ ಬೆರಗು ಹುಟ್ಟಿಸುವ ಬೆಳಕಿನ ಮಡುವಾದರು. ಅದಾದ ಮೇಲೆ ಬೆಂಗಳೂರಿಗೆ ಬಂದ ನಂತರ ಒಂದೆರಡು ಅವರನ್ನು ಸಲ ಭೇಟಿ ಮಾಡಿ ಹಿಂದಿನ ಪ್ರವರ ಹೇಳಿಕೊಂಡು ಪರಿಚಯಿಸಿಕೊಂಡು ಮಾತಾಡಿದ್ದು ಬಿಟ್ಟರೆ, ಮತ್ತೆ ಕಿರಂ ಅವರ ಜೊತೆಗೆ ಒಡನಾಟ ಸಾಧ್ಯವೇ ಆಗಲಿಲ್ಲ. ಅವರಿಗೆ ನನ್ನ ಕವಿತೆಗಳನ್ನು ಕೊಟ್ಟು ಅಭಿಪ್ರಾಯ ಕೇಳು ಎಂದು ನನ್ನ ಸ್ನೇಹಿತರು ತುಂಬಾ ಸಲ ಒತ್ತಾಯಿಸಿದರೂ ಅವರಿಗೆ ಕವಿತೆ ಕೊಡುವ ಧೈರ್ಯ ನನಗಾಗಲಿಲ್ಲ. ಈ ಎಲ್ಲಾ ಅರ್ಹತೆಗಳೊಂದಿಗೆ ‘ಕಿರಂ ಹೊಸಕವಿತೆ’ ಯನ್ನು ಸಂಪಾದಿಸುತ್ತಿರುವುದು ನನ್ನ ಬದುಕಿನ ಮಹತ್ವದ ಸಂಗತಿ.

ಕಾಡುವ ಕಿರಂನ ಭಾಗವಾದ ಕಿರಂ ಹೊಸಕವಿತೆಯ ನೆಪದಲ್ಲಿ ಕರ್ನಾಟಕದ ಬೇರೆ ಬೇರೆ ಭಾಗದ ಕವಿಗಳನ್ನು ಒಂದೆಡೆ ಸೇರಿಸಿ ಅಹೋರಾತ್ರಿ ಕಾವ್ಯ-ವಾಚನ ಮಾಡಿಸಬೇಕು ಎಂದು ಸಂಘಟಕರಾದ ಸಂಸ ಸುರೇಶ್ ಅವರು ಮತ್ತು ಪುಸ್ತಕ ಪ್ರಕಾಶಕರಾದ ಅವಿರತ ಹರೀಶ್‌ರವರು ನನ್ನ ಮುಂದಿಟ್ಟು, ಕಾರ್ಯಕ್ರಮದ ಸ್ವರೂಪವನ್ನು ತಯಾರಿಸಲು ಕವಿಗಳನ್ನು ಆಹ್ವಾನಿಸಲು ನನ್ನ ಸಹಕರಿಸಬೇಕು ಎಂದು ವಿನಂತಿಸಿದರು. ನಾನು ಸಂಪಾದಕನಾಗಿ ಕೆಲಸ ಮಾಡಬೇಕಾದರೆ ಗೋಷ್ಠಿಗಳ ಸ್ವರೂಪವನ್ನು ರಚನಾತ್ಮಕವಾಗಿ ಸಿದ್ಧಪಡಿಸಬೇಕು. ಕವಿತೆಗಳನ್ನು ಕುರಿತು ವಿಮರ್ಶಕರನ್ನು ಗೊತ್ತುಪಡಿಸಿ. ಅನುಸಂಧಾನ ಮಾಡೋಣ ಎಂದೆ. ಅದಕ್ಕವರು ಒಂದು ಪುಸ್ತಕವನ್ನು ತಂದುಬಿಡೋಣ. ಅದಕ್ಕೆ ನೀವು ಸಂಪಾದಕರಾಗಿ ಕೆಲಸ ಮಾಡಬೇಕು ಎಂದರು. ಅದಕ್ಕೆ ನಾನು ಪ್ರೀತಿಯಿಂದ ಪುಸ್ತಕ ತರುವ ಮತ್ತು ಕಾರ್ಯಕ್ರಮದ ಗೋಷ್ಠಿಗಳ ಸ್ವರೂಪವನ್ನು ನಿರ್ಧರಿಸುವ ಜವಾಬ್ದಾರಿಯನ್ನು ನಿರ್ವಹಿಸಲು ಒಪ್ಪಿದೆ.

ಈ ಜವಾಬ್ದಾರಿಯನ್ನು ನಿಭಾಯಿಸಲು ನನಗೆ ಇದ್ದ ಕಾಲಾವಕಾಶ ಕೇವಲ ಒಂದು ತಿಂಗಳು ಮಾತ್ರ. ಇಡೀ ಕಾರ್ಯಕ್ರಮದ ಸ್ವರೂಪದಲ್ಲಿ ನಾಲ್ಕು ಗೋಷ್ಠಿಗಳು ಅದಕ್ಕೆ ಒಬ್ಬರು ಅನುಸಂಧಾನ ಮಾಡುವ ಕವಿಗಳನ್ನು/ವಿಮರ್ಶಕರಿಗೆ ಮೊದಲೇ ಗುರುತಿಸಿ ಅವರಿಗೆ ಸಂಗ್ರಹಿಸಿದ ಕವಿತೆಗಳನ್ನು ಮೊದಲೇ ಕೊಟ್ಟು ಲೇಖನಗಳನ್ನು ತರಿಸಿಕೊಂಡು ಪುಸ್ತಕ ಮುದ್ರಿಸುವ ತನಕ ಎಲ್ಲ ಕೆಲಸಗಳು ಈ ಒಂದು ತಿಂಗಳ ಅವಧಿಯಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ಇದು ನಿಜಕ್ಕೂ ಬಹುದೊಡ್ಡ ಸವಾಲು. ತಿಂಗಳ ಅವಧಿಯೊಳಗೆ ಕವಿಗಳ ಆಯ್ಕೆ ಮತ್ತು ಕವಿತೆಗಳ ಆಯ್ಕೆ ನಡೆಸುವ ಕೆಲಸ ಜವಾಬ್ದಾರಿಯುತವಾಗಿ ನಡೆಸುವುದು ತ್ರಾಸದ ಕೆಲಸ ಎಂಬುದಂತೂ ನಿಜ.

ಕವಿಗಳ ಬಹುದೊಡ್ಡ ಪಡೆ ನಿರ್ಮಾಣವಾಗುತ್ತಿರುವ ಅವಧಿಯಲ್ಲಿ ಈ ಕೃತಿಯ ಸಂಪಾದನೆ ತುಸು ಕಷ್ಟವೇ ಎನಿಸಿತು. ಇಷ್ಟರ ನಡುವೆ ಕವಿಗಳನ್ನು ಗೋಷ್ಠಿಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂಬ ತಾಕೀತಿಗೆ ಒಪ್ಪಿಸುವುದು ಮತ್ತು ಮೊದಲೇ ಸಂಗ್ರಹಿಸಿದ ಕವಿತೆಗಳನ್ನು ಕುರಿತು ನಿಗಧಿಗೊಂಡ ಲೇಖಕರು ಟಿಪ್ಪಣಿಯ ರೂಪದಲ್ಲೋ ಅಥವಾ ವಿಮರ್ಶಾ ಲೇಖನದ ರೂಪದಲ್ಲೋ ತಮ್ಮ ಅಭಿಪ್ರಾಯವನ್ನು ಮಂಡಿಸುವುದಕ್ಕೆ ಸುಮಾರು ಎಪ್ಪತ್ತೈದಕ್ಕೂ ಹೆಚ್ಚು ಕವಿಗಳನ್ನು ಮತ್ತು ನಾಲ್ಕು ಜನ ಅನುಸಂಧಾನ ಮಾಡುವ ಕವಿಗಳನ್ನು/ವಿಮರ್ಶಕರನ್ನು ಪ್ರೀತಿಯಿಂದ ಒಪ್ಪಿಸಲಾಯಿತು. ಅನುಸಂಧಾನ ಮಾಡುವವರು ತಮಗೆ ಕೊಟ್ಟ ಸೀಮಿತ ಅವಧಿಯಲ್ಲಿ ಕವಿತೆಗಳನ್ನು ಓದಿ ಅವುಗಳನ್ನು ಕುರಿತು ಅಭಿಪ್ರಾಯಗಳನ್ನು ಟಿಪ್ಪಣಿ ರೂಪದಲ್ಲಿ ಮಂಡಿಸಿದ್ದು ನಿಜಕ್ಕೂ ಅರ್ಥಪೂರ್ಣವೆನಿಸುತ್ತದೆ.

ಈ ಬಗೆಯ ಪ್ರಯೋಗಾತ್ಮಕ ಗೋಷ್ಠಿಗಳು ಮತ್ತಷ್ಟು ಆದರೆ ಕನ್ನಡ ಕಾವ್ಯಲೋಕದಲ್ಲಿ ಹೊಸಫಸಲು ತನುವಾಗಿ ಖಂಡಿತ ಬೆಳೆಯುತ್ತದೆ. ಹಾಗಾಗಿ ಆಕೃತಿಗಳ ನಡುವೆ ಕಲಾಕೃತಿಗಳನ್ನು ಹುಡುಕುವ ಕಾಯಕ ಕೈಗೆತ್ತಿಕೊಳ್ಳಲು ಇದು ಉಚಿತವಾದ ಸಮಯ ಎಂಬುದಕ್ಕೆ ಸಾಕ್ಷಿ ಎಂಬಂತೆ ಕಾಡುವ ಕಿರಂ-೨೦೧೭ ಕಾರ್ಯಕ್ರಮದ ಸ್ವರೂಪ ಮತ್ತು ಕಿರಂ ಹೊಸ ಕವಿತೆ ಕೃತಿ ರೂಪುಗೊಂಡ ಬಗೆ ಎರಡೂ ಮುಖ್ಯವಾಗುತ್ತದೆ. ಇಲ್ಲಿ ಮೂರು ತಲೆಮಾರುಗಳು ಇದ್ದು ಮುಖ್ಯವಾಗಿ ತೀರ ಇತ್ತೀಚೆಗೆ ಬರೆಯುತ್ತಿರುವ ಹೊಸ ಕವಿಗಳ ಪ್ರಾತಿನಿಧಿಕ ಕವಿತೆಗಳ ಸಂಕಲನ ಕೂಡ ಎಂಬಂತೆ ರೂಪುಗೊಂಡಿದೆ.

ಕವಿಗೋಷ್ಠಿಗಳ ಸ್ವರೂಪ ಮತ್ತು ಅದರ ಪರಿಣಾಮ ಕೇವಲ ಕಾರ್ಯಕ್ರಮ ಸಂಯೋಜನೆಗೊಳ್ಳುವ ಹಂತದಲ್ಲಿ ಮಾತ್ರ ಕೊನೆಗೊಳ್ಳುತ್ತಿರುವುದನ್ನು ಕಾವ್ಯಾಭ್ಯಾಸಿಗಳು ಗಮನಿಸದ್ದೇವೆ. ಕವಿತೆಯನ್ನು ಕುರಿತ ಮಾತುಗಳು ತೀರಾ ಕಡಿಮೆಯಾಗುತ್ತಿರುವ ಈ ದಿನಮಾನಗಳಲ್ಲಿ ಕವಿತೆ ವಾಚನದಷ್ಟೇ ಅದರ ಬಗೆಗಿನ ವಿಮರ್ಶೆ ಅಥವಾ ಅಭಿಪ್ರಾಯ ಮಂಡನೆ ಬಹಳ ಮುಖ್ಯ ಎಂದೆನಿಸಿ ಈ ಬಗೆಯ ಕಾವ್ಯಾನುಸಂಧಾನವನ್ನು ಮಾಡುವುದರ ಫಲವೇ ಕಿರಂ ಹೊಸಕವಿತೆ. ಈ ಕಾವ್ಯ ಕಾರಣದ ಕ್ರಿಯೆ ಮತ್ತು ಪ್ರಕ್ರಿಯೆಯೊಳಗೆ ಬಂದ ಕವಿಗಳು ಕಟ್ಟಿದ ಕವಿತೆ ಮಾತ್ರ ಹೊಸ ಕವಿತೆಯ ಒಂದು ಮಾದರಿ ಎಂಬ ಯಾವ ಭ್ರಮೆಯು ನಮಗಿಲ್ಲ. ಕಾಲ ಮತ್ತು ಅನುಕೂಲದ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಬರಲು ಒಪ್ಪಿ ಕವಿತೆ ಕೊಟ್ಟಂತಹ ಕವಿಗಳನ್ನು ಮಾತ್ರ ಇಲ್ಲಿ ಗಮನಿಸಲಾಗಿದೆ. ಸಂಪರ್ಕ ಸಾಧ್ಯವಾದಷ್ಟು ಮಾತ್ರ ಕಾಲಮಿತಿಯ ಒಳಗೆ ನಾವು ಕೂಡ ಕವಿಗಳನ್ನು ಆರಿಸಿದ್ದೇವೆ.

ಇದೊಂದು ಹೊಸ ಪ್ರಯತ್ನವಾಗಿರುವುದರಿಂದ ಮುಂದಿನ ಪ್ರಯೋಗ ಮತ್ತಷ್ಟು ಸಶಕ್ತವಾಗಿ ನಡೆಯುತ್ತದೆ. ಆರಂಭ ಅಷ್ಟೇ. ಸಂಘಟಕರು ಆದಷ್ಟೂ ಹೊಸ ತಲೆಮಾರನ್ನೇ ಗಮನಿಸಿ ಕವಿಗಳನ್ನು ಆಹ್ವಾನಿಸಿ ಎಂಬ ಆದೇಶವನ್ನು ಪಾಲಿಸಿ ಮೂರು ಗೋಷ್ಠಿಗಳನ್ನು ತೀರಾ ಇತ್ತೀಚೆಗೆ ಬರೆಯುತ್ತಿರುವ ಯುವ ಕವಿಗಳನ್ನು ಮಾತ್ರ ಗಮನಿಸಲಾಗಿದೆ. ಮೊದಲನೆ ಗೋಷ್ಠಿಯಲ್ಲಿ ಈಗಾಗಲೇ ಕಾವ್ಯಲೋಕದಲ್ಲಿ ಗುರುತಿಸಿಕೊಂಡಿರುವ ಕವಿಗಳನ್ನು ಕರೆಯಲಾಗಿದೆ. ಒಟ್ಟು ನಾಲ್ಕು ಗೋಷ್ಠಿಗಳ ಸುಮಾರು ಎಂಭತ್ತು ಕವಿತೆಗಳು ನಾಲ್ಕು ಜನ ಕವಿಗಳಿಂದ ಚರ್ಚೆಗೆ ಒಳಗಾಗಿದ್ದು ನಿಜಕ್ಕೂ ಕಾವ್ಯಲೋಕದಲ್ಲಿ ಒಂದು ಅನನ್ಯವಾದ ಕವಿಗೋಷ್ಠಿ ಎಂಬುದರಲ್ಲಿ ನನಗೆ ನಂಬಿಕೆ ಇದೆ. ಇಷ್ಟರ ನಡುವೆಯೂ ಇಲ್ಲಿನ ಕವಿತೆಗಳಲ್ಲಿ ಶೇ. ಇಪ್ಪತ್ತೈದು ಭಾಗ ಕವಿತೆಗಳು ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಸಂದರೆ ಅದು ನಮ್ಮ ಒಟ್ಟು ಶ್ರಮದ ಯಶಸ್ಸು ಎಂಬದೂ ನನ್ನ ಗಮನದಲ್ಲಿದೆ.

ಯುವ ಕಾವ್ಯವನ್ನು ಗಮನಿಸಿದಾಗ ಘಟನಾತ್ಮಕ ಕಾರಣಗಳಿಗಾಗಿ ತಕ್ಷಣದ ಪ್ರತಿಕ್ರಿಯೆಗಳ ರೂಪದಲ್ಲಿ ಕವಿತೆ ಹುಟ್ಟಿಕೊಳ್ಳುತ್ತಿರುವ ಸಂದರ್ಭದ ಸ್ವರೂಪವನ್ನು ಹೊಸ ಕಾವ್ಯದ ಓದು ನಮಗೆ ಕೊಡುತ್ತಿದೆ. ಹರಡಿಕೊಂಡಿರುವ ಅನುಭವಗಳು, ಹೇರಿಕೊಂಡ ಅನುಭಾವ, ತನ್ನ ಲೋಕದಲ್ಲಿ ಸುಳಿಯದ ವಸ್ತುಗಳು, ಓಲೈಸಲೆಂದೇ ಬರೆಯುವ ಕವಿತೆಗಳು, ಚಿಂತನೆ ಮತ್ತು ದರ್ಶನ ಸಾಧಿಸಿಕೊಳ್ಳಲು ಹೆಣಗುತ್ತಿರುವ ಕವಿತೆಗಳು, ಬರಹ ಒಂದು ಜಾಹೀರಾತಿನ ಬಹಳ ದೊಡ್ಡ ಸಾಧ್ಯತೆ ಎಂದು ಪ್ರತಿಬಿಂಬಿಸುತ್ತಿರುವ ಕವಿತೆಗಳು, ಮೆಚ್ಚಿಸಿಕೊಳ್ಳಲೇಬೇಕು ಎಂದು ಹಠ ಹಿಡಿದು ಕುಳಿತಿರುವ ಕವಿತೆಗಳು, ಪ್ರಶಸ್ತಿ-ಪುರಸ್ಕಾರಗಳ ಆಮೀಶಕ್ಕೆ ಒಳಗಾದ ಪಾಪದ ಕವಿತೆಗಳು ಇವುಗಳ ನಡುವೆ ಕಾವ್ಯ ಧರ್ಮವನ್ನು ನಂಬಿ ತನ್ನನ್ನು ತಾನು ಹುಡುಕಿಕೊಳ್ಳಲು ಮತ್ತು ಸಮಾಜವನ್ನು ಕಾಣಲು, ಕಾಣಿಸಲು ಹಾತೊರೆಯುತ್ತಿರುವ ಕಲಾತ್ಮಕ ಕವಿತೆಗಳು ಕೂಡ ಈ ನಾಲ್ಕು ಗುಚ್ಛಗಳಲ್ಲಿವೆ.

ಈ ಮೊದಲೇ ನಾನು ಹೇಳಿದಂತೆ ಇಲ್ಲಿನ ಕವಿತೆಗಳು ಒಂದು ಕಾಲವನ್ನು ನಿರ್ಧರಿಸುವ ಶ್ರೇಷ್ಠ ಕವಿತೆಗಳೂ ಎಂದು ಎದೆತಟ್ಟಿ ಹೇಳಲಾರೆ. ಆದರೆ, ಒಂದು ಕಾಲಘಟ್ಟದ ಒಳಗೆ ಚರ್ಚೆಯಾಗುತ್ತಿರುವ ಕಾವ್ಯ ಸತ್ವವನ್ನು ಕುರಿತು ಚರ್ಚಿಸಲು ಈ ಕವಿತೆಗಳು ತನ್ನ ಕೊಡುಗೆಯನ್ನು ಕೊಟ್ಟಿವೆ ಎಂಬುದರಲ್ಲಿ ಎರಡು ಮಾತು ಇಲ್ಲ. ಈ ಸಂಕಲನದ ಬಿಡಿ ಕವಿತೆಗಳ ಬಗೆಗೆ ಕವಿಗಳು ವಿಮರ್ಶಕರು ತಮ್ಮ ಲೇಖನದಲ್ಲಿ ಸೂಕ್ಷ್ಮವಾಗಿ ಮತ್ತು ವಿಮರ್ಶಾತ್ಮಕವಾಗಿ ಪ್ರಸ್ತಾಪಿಸಿರುವುದರಿಂದ ನಾನು ಈ ಕೃತಿಯಲ್ಲಿನ ಕವಿತೆಗಳನ್ನು ಕುರಿತ ಮಾತುಗಳನ್ನು ಹೆಚ್ಚು ಆಡದಿರುವುದು ಸೂಕ್ತವೆನಿಸುತ್ತದೆ.

ಈಗಾಗಲೇ ಪ್ರಸ್ತಾಪಿಸಿದಂತೆ ಕವಿತೆ ದರ್ಶನವಾಗಬೇಕು ಮತ್ತು ಕವಿತೆಯನ್ನು ಕುರಿತಾದ ಮಾತುಗಳು ದೊಡ್ಡ ಪಡೆಯ ರೀತಿಯಲ್ಲಿ ಸಾಗುತ್ತಿರುವ ಕವಿಗಳ ಕಿವಿಯ ಮೇಲೆ ಬೀಳಬೇಕು ಎನ್ನುವ ನೆಲೆಯ ಒಳಗೆ ಕಿರಂ ಹೊಸಕವಿತೆ ಒಂದು ಹೊಸ ಮಾದರಿಯನ್ನು ನಿಮ್ಮ ಮುಂದಿಟ್ಟಿದೆ ಎಂಬುದರಲ್ಲಿ ನನಗೆ ಸ್ಪಷ್ಟವಾದ ನಂಬಿಕೆ ಇದೆ. ಈ ನಿಟ್ಟಿನಲ್ಲಿ ಕಾಡುವ ಕಿರಂ-೨೦೧೭ರ ಕಿ.ರಂ.ಹೊಸಕವಿತೆ ಮುಖ್ಯವಾದ ಕೃತಿಯಾಗುತ್ತದೆ. ಕವಿತೆಯ ಬಗೆಗೆ ಅಸ್ಪಷ್ಟವಾದ ಮಾಹಿತಿ ಮತ್ತು ಅಸಂಗತ ವಿಚಾರಗಳು ಇರುವ ಹೊಸತಲೆಮಾರಿನ ಯುವಕವಿಗಳಿಗೆ ಕಾವ್ಯ ಎಂದರೇನು ಹುಡುಕಿಕೊಳ್ಳಲು ಈ ಪುಸ್ತಕ ಒಂದು ಪುಟ್ಟ ಕಿರುತೊರೆ ಆಗಬಹುದು. ಈ ಕಾಲಘಟ್ಟದಲ್ಲಿ ಕಾವ್ಯ ಉದ್ಯಮದ ರೀತಿ ತನ್ನ ಪ್ರಕಟಣೆಯ ಸ್ವರೂಪವನ್ನು ಬದಲಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಕೃತಿ ಮತ್ತು ಅದು ರೂಪುಗೊಂಡ ಸಂದರ್ಭ ಎರಡೂ ಬಹಳ ಮುಖ್ಯವಾಗುತ್ತದೆ.

ಕನ್ನಡದ ಸಂದರ್ಭದಲ್ಲಿ ಇದೇ ಯುವ ತಲೆಮಾರನ್ನು ನಿರ್ಧರಿಸುವ ಹೊಸ ಕಾವ್ಯ ಎಂದು ನಾನು ಆತ್ಮವಂಚನೆಯ ಮಾತುಗಳನ್ನು ಹೇಳುವುದಿಲ್ಲ. ಕನ್ನಡದಲ್ಲಿ ನಮಗೆ ಕಾಣದ ಮತ್ತು ಗಮನಕ್ಕೆ ಬಾರದ ಇನ್ನೂ ಅದೆಷ್ಟೋ ಕವಿ ಪ್ರತಿಭೆಗಳು ನಾಡಿನುದ್ದಕ್ಕೂ ಹರಡಿಕೊಂಡಿದೆ ಎಂಬ ತಿಳುವಳಿಕೆ ನನಗಿದೆ. ಇದರಾಚೆಗೂ ಹೊಸ ಕವಿತೆಗಳು ನಮ್ಮ ಗಮನಕ್ಕೆ ಬಾರದಂತೆ ಇರಬಹುದು. ಅಸಂಖ್ಯ ಸಂಖ್ಯೆಗಳಲ್ಲಿ ಹೊಸ ಕವಿಗಳನ್ನು ಮತ್ತು ಕವಿತೆಗಳನ್ನು ಗುರುತಿಸುವ ಸಂದರ್ಭದಲ್ಲಿ ಕಾಲ ಮತ್ತು ಅವಕಾಶ ಜೊತೆಗೆ ಸಂಪರ್ಕ ಇವೆಲ್ಲವು ಕೈಗೆಟುಕಿದಷ್ಟೂ ಮಾತ್ರ ಸಂಪಾದಕನಾಗಿ ದಕ್ಕಿಸಿಕೊಡಲು ಪ್ರಯತ್ನ ಮಾಡಿದ್ದೇನೆ.

ಈ ಕೆಲಸವನ್ನು ಮಾಡಲು ನನಗೆ ಕಡೆ ಪಕ್ಷ ಮೂರು ತಿಂಗಳು ಅವಧಿ ಇದ್ದಿದ್ದರೆ ಪುಸ್ತಕದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಬಹುದಿತ್ತೇನೋ? ಹಾಗೆಂದ ಮಾತ್ರಕ್ಕೆ ಈ ಕೃತಿ ಕಳಪೆಯದ್ದೂ ಅಂತಲ್ಲ. ಕವಿತೆ ಮತ್ತು ಕವಿಗಳ ಆಯ್ಕೆಗೆ ಇನ್ನಷ್ಟು ಸಮಯ ಒದಗಬೇಕಿತ್ತು ಎನ್ನುವುದಷ್ಟೆ ನನ್ನ ಮಾತಿನ ಅರ್ಥ. ಇಷ್ಟಾದರೂ ಇರುವ ಅವಧಿಯಲ್ಲಿ ಕವಿತೆ ಮತ್ತು ಅದನ್ನು ಕುರಿತಾದ ಚರ್ಚೆ ಉಂಟಾಗುವ ಹಾಗೆ ಒಂದು ಕಾವ್ಯ ಸಂದರ್ಭವನ್ನು ಸೃಷ್ಟಿಸಿದ ಘನತೆ ಕಾಡುವ ಕಿ.ರಂ. ತಂಡಕ್ಕೆ ಹಾಗೂ ಸಂಪಾದಕನಾಗಿ ನನಗೆ ಇದೆ. ಹೊಸ ಕವಿತೆಯನ್ನು ಕುರಿತು ಮಾತನಾಡುವುದಕ್ಕೆ ಆತ್ಮವಿಮರ್ಶೆಯ ನೆಲೆಯಲ್ಲಿ ಇದೊಂದು ಬಹುದೊಡ್ಡ ಸಾಧ್ಯತೆ ಕೂಡ. ಈ ಬರಹದಲ್ಲಿ ಆಡಿರುವ ಪ್ರತಿಯೊಂದು ಮಾತುಗಳು ನನ್ನನ್ನೂ ಕೂಡ ಒಳಗೊಂಡೇ ಆಡಿದ್ದೇನೆ.

ನನಗೆ ಸಂಪಾದಕನ ಜವಾಬ್ದಾರಿಯನ್ನು ವಹಿಸಿದ ಸಂಸ ಸುರೇಶ್ ಮತ್ತು ಪುಸ್ತಕ ಪ್ರಕಟಿಸುತ್ತಿರುವ ಅವಿರತ ಹರೀಶ್‌ಕುಮಾರ್ ಅವರಿಗೆ ಇಂತದ್ದೊಂದು ಸಂದರ್ಭವನ್ನು ಏರ್ಪಾಟು ಮಾಡಿಕೊಟ್ಟಿದ್ದಕ್ಕೆ ಕಾವ್ಯಲೋಕದ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಕೃತಿಗೆ ಕಣ್ಣೋಟದ ಕಾಣ್ಕೆಯಂತೆ ಬೆನ್ನುಡಿಯನ್ನು ಬರೆದುಕೊಟ್ಟ ವಿಮರ್ಶಕರಾದ ಡಾ. ಎಂ.ಎಸ್.ಆಶಾದೇವಿಯವರಿಗೆ ಗೌರವಗಳೊಂದಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಈ ಪುಸ್ತಕದ ಮುಖಪುಟಕ್ಕೆ ಕಿರಂ ಅವರ ರೇಖಾಚಿತ್ರವನ್ನು ರಚಿಸಿಕೊಟ್ಟ ಸಾಹಿತ್ಯ ಮತ್ತು ಚಿತ್ರಕಲೆ ಎರಡರಲ್ಲೂ ಸಂವೇದನೆಯ ರೂಪದಂತಿರುವ ಡಾ. ಎಂ.ಎಸ್.ಮೂರ್ತಿಯವರಿಗೆ ಧನ್ಯವಾದಗಳು. ಹಾಗೆಯೇ ಪ್ರಖ್ಯಾತ ಕಲಾವಿದರಾದ ಹಾದಿಮನಿ ರಚಿಸಿದ ಕಿರಂ ಅವರ ವ್ಯಕ್ತಿಚಿತ್ರವನ್ನು ಬಳಸಿಕೊಂಡಿದ್ದೇವೆ. ಅದಕ್ಕಾಗಿ ನಾನು ಬಹಳ ಪ್ರೀತಿಯಿಂದ ಇವರನ್ನು ನೆನಪಿಸಿಕೊಳ್ಳುತ್ತೇನೆ.

ತಮ್ಮ ಒತ್ತಡದ ಸಮಯದಲ್ಲೂ ಹೊಸ ತಲೆಮಾರಿನ ಕವಿತೆಯನ್ನು ಕುರಿತು ಬರೆದುಕೊಡಬೇಕು ಎಂದು ವಿನಂತಿಸಿದಾಗ ಬಹಳ ಪ್ರೀತಿ ಮತ್ತು ಬದ್ಧತೆಯಿಂದ ಕಡಿಮೆ ಅವಧಿಯಲ್ಲಿ ಕವಿತೆಗಳನ್ನು ಕುರಿತು ವಸ್ತುನಿಷ್ಠವಾಗಿ ಲೇಖನವನ್ನು ಬರೆದುಕೊಟ್ಟು, ಕಾಡುವ ಕಿರಂ ಕಾರ್ಯಕ್ರಮದಲ್ಲಿ ಕಾವ್ಯಾನುಸಂಧಾನವನ್ನು ಮಾಡಲು ಒಪ್ಪಿದ ಡಾ. ಎಚ್.ಎಲ್.ಪುಷ್ಪಾ, ಡಾ. ಟಿ.ಯಲ್ಲಪ್ಪ,

ಡಾ. ರಾಜಶೇಖರಯ್ಯ ಮಠಪತಿ (ರಾಗಂ) ಮತ್ತು ಜಯಶಂಕರ್ ಹಲಗೂರು ಇವರುಗಳಿಗೆ ಅನೇಕ ಧನ್ಯವಾದಗಳನ್ನು ತಿಳಿಸುವೆ. ಕಿರಂ ಹೊಸ ಕವಿತೆ ಕೃತಿಗೆ ತಮ್ಮ ಕವಿತೆಗಳನ್ನು ಕೊಟ್ಟ ಎಲ್ಲ ಹಿರಿಕಿರಿ ಕವಿಗಳಿಗೆ ಒಲುಮೆಯಿಂದ ಕೃತಜ್ಞತೆಗಳನ್ನು ಸಲ್ಲಿಸುವೆ.

ಈ ಪುಸ್ತಕದ ಅಕ್ಷರ ವಿನ್ಯಾಸ ಮತ್ತು ಪುಸ್ತಕ ವಿನ್ಯಾಸವನ್ನು ಮಾಡಿಕೊಟ್ಟ ಸಂವೇದನಾಶೀಲ ಗೆಳೆಯ ಮತ್ತು ಕವಿ ವಿ.ಆರ್.ಕಾರ್ಪೆಂಟರ್ ಅವರಿಗೆ ಧನ್ಯವಾದಗಳನ್ನು ತಿಳಿಸುವೆ. ನನ್ನ ಜೊತೆ ಕರಡು ತಿದ್ದಲು ಮತ್ತು ಕವಿಗಳ ಆಯ್ಕೆಯ ಸಂದರ್ಭದಲ್ಲಿ ಸಂಪರ್ಕ ಸಾಧಿಸಲು ಕೈ ಜೋಡಿಸಿದ ನನ್ನ ವಿದ್ಯಾರ್ಥಿ ಮಿತ್ರರಾದ ಶಿವಪ್ರಸಾದ್ ಪಟ್ಟಣಗೆರೆ, ಮಹಾಂತೇಶ ಆಧುನಿಕ್ ಮತ್ತು ನಮನ ಇವರುಗಳಿಗೆ ಪ್ರೀತಿಯ ಶುಭಾಶಯಗಳನ್ನು ತಿಳಿಸುವೆ. ತಿಂಗಳಿಡೀ ಕಿರಂ ಹೊಸ ಕವಿತೆಯ ಕೆಲಸ ಮಾಡುವಾಗ ಯಾವ ಒತ್ತಡಗಳನ್ನೂ ತಾರದೇ ನನ್ನ ಕೆಲಸಕ್ಕೆ ಬೆನ್ನೆಲುಬಾಗಿ ನಿಂತ ಪ್ರೀತಿಯ ಸಂಗಾತಿ ಲಕ್ಷ್ಮಿ ಹಾಗೂ ನನ್ನ ತಾಯಿ ಸುಬ್ಬಲಕ್ಷ್ಮಿ ಜೊತೆಗೆ ನನ್ನ ಕೂಸು ಸಹೃದಯನನ್ನು ಕೂಡ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವೆ.

ಇದೆಲ್ಲಕ್ಕಿಂತಲೂ ಮಿಗಿಲಾಗಿ ಇಂಥದ್ದೊಂದು ಕಾರ್‍ಯ ಘಟಿಸಬೇಕಾದರೆ ಕಿರಂ ಎನ್ನುವ ಬಹಳ ದೊಡ್ಡ ಕಾವ್ಯಶಕ್ತಿ ಚಿಕ್ಕವನಾದ ನನ್ನ ಜೊತೆಗೆ ಇದ್ದಿದ್ದಕ್ಕೆ, ಕವಿತೆಯ ಪರಿಚಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಕ್ಕೆ ಆ ಗುರುವಿಗೆ ಸ್ನೇಹಪ್ರೇಮಗಳಿಂದ ನಮಸ್ಕಾರಗಳನ್ನು ಮಾಡುವೆ.

ಆಹೋರಾತ್ರಿ ಜರುಗುವ ‘ಕಾಡುವ ಕಿರಂ’ ಕಾರ್ಯಕ್ರಮದ ಅಂಗವಾಗಿ ಈ ಬಾರಿ ‘ಕಿರಂ ಹೊಸ ಕವಿತೆ’ ಕೃತಿ ಬಿಡುಗಡೆಯಾಗುತ್ತಿದೆ. ಕವಿ, ನಾಟಕಕಾರ ಬೇಲೂರು ರಘುನಂದನ್ ಅವರು ಈ ಕೃತಿಯ ಸಂಪಾದಕರು. ಕೃತಿಗೆ ಅವರು ಬರೆದಿರುವ ನುಡಿಯ ಆಯ್ದ ಭಾಗ ಇಲ್ಲಿದೆ..

Leave a Reply