ಆಸ್ಪತ್ರೆಯ ಮುಂಭಾಗದ ‘ಒನ್ ವೇ’..

 

 

 

 

ವೈದ್ಯ ಮತ್ತು ಸಾವು

ಶಿವಕುಮಾರ ಮಾವಲಿ 

 

 

 

 

 

 

 

ದೊಡ್ಡಾಸ್ಪತ್ರೆಯ ದೊಡ್ಡ ಡಾಕ್ಟರಿಗೆ
ರೋಗಿಗಳೆಂದರೆ ಅಷ್ಟಕ್ಕಷ್ಟೆ…
ತಮ್ಮ ಆಸ್ಪತ್ರೆಯ ಮುಂಭಾಗದ ‘ಒನ್ ವೇ’
ಬೋರ್ಡ್ ತೋರಿಸಿ ಆತ ಹೇಳುತ್ತಾನೆ :
‘ ನಮ್ಮದೇನು ತಪ್ಪಿಲ್ಲ ನೋಡಿ! ‘

ಈ ವೈದ್ಯ ಎಂದಿಗೂ ತನ್ನ ವೃತ್ತಿಗೆ
ಎರಡು ಬಗೆದವನಲ್ಲ …
ಖಾಯಿಲೆಗೂ -ಕಾಸಿಗೂ ಮೋಸ ಮಾಡುವಂತಿಲ್ಲ
‘ಅವರ ಕೈಗುಣವೇ ಅಂಥದ್ದು’ ಅಂದವರುಂಟು.

 

ಇಂತಿಪ್ಪ ಇವರಲ್ಲಿಗೆ ಒಮ್ಮೆ ತಮ್ಮದೇ
ಹತ್ತಿರದ ಸಂಬಂಧಿಕ ಬರಲು
ವೈದ್ಯರು ಎಂದಿನಂತೆಯೇ ತಪಾಸಿಸಿದರು.
ಆದರೆ ರೋಗಿ ಬದುಕುಳಿಯಲಿಲ್ಲ.

 

‘ನಮ್ ಡಾಕ್ಟ್ರು ಕೈಮೀರಿ ಪ್ರಯತ್ನಿಸಿದ್ರು
ಅದ್ರೂ ಜೀವ ಹೋಗೇ ಬಿಡ್ತು ‘ ಎಂದನೊಬ್ಬ.
‘ನಮ್ಮವರು ಅಂತ ಇವ್ರ ಹತ್ರ ಬಂದ್ವಿ,
ಏನುಪಯೋಗಾತು ಬಿಡು ‘ ಎಂದ ಮತ್ತೊಬ್ಬ.

 

ಮಧ್ಯಾಹ್ನದ ಊಟಕ್ಕೆಂದು ಮನೆಗೆ ಬಂದ ಡಾಕ್ಟರು
‘ಸಾವಿನ ಸುದ್ದಿ ಕೇಳಿ ಉಂಡರೆಂತು ಒಳಿತು? ‘
ಎಂದು ಹಾಗೇ ಗೋಡೆಗೆ ಒರಗಿದ.
‘ಸಾವು ಸಾಂಕ್ರಾಮಿಕ ಮತ್ತು ಸಾರ್ವತ್ರಿಕ ‘
ಇದನ್ನರಿಯಲು ಡಾಕ್ಟರಿಗೆ ಇಷ್ಟು ದಿನ ಬೇಕಾಯ್ತೆ?

 

ಕಣ್ಮುಚ್ಚಿ ಕಲ್ಪಿಸಿದ ತನ್ನಾಸ್ಪತ್ರೆಗೆ ಮುಂಬರಲಿರುವ
ಸಾವಿನ ಸರತಿ ಸಾಲು …
ತನ್ನಪ್ಪ, ತನ್ನಮ್ಮ …
ಅಣ್ಣ, ತಂಗಿ, ತಮ್ಮ …
ಯಾರು ಬಲ್ಲರು ಯಾರ ಸರತಿ ಯಾವಾಗೆಂದು?

 

ಬೆಚ್ಚಿಬಿದ್ದು ತನ್ನನ್ನು ತಾನೇ
ಸಮಾಧಾನಪಡಿಸುತ್ತ ಹೀಗೆಂದೆಕೊಂಡ :
” ನಾನೇನು ಬರಿ ಸಾವಿಗೆ ಸಾಕ್ಷಿಯಾಗಿಲ್ಲವಿಲ್ಲಿ?
ಹುಟ್ಟುತ್ತಾರೆ ಅಷ್ಟೇ ಮಂದಿ ಸೂತಕದ ಮನೆಯಲ್ಲಿ …”

Leave a Reply