fbpx

ಸಂಜೆಯ ಸರಕಿಗೆ…!

ಸದಾಶಿವ್ ಸೊರಟೂರು

ಮುರಿದ ಕಿಟಕಿಯಿಂದ ಕದ್ದು ನೋಡಿದ ಮುದಿ ಸೂರ್ಯ ಪೇಣಿ, ಪಾಟಿ, ನೆಗ್ಗಿದ ಊಟದ ತಟ್ಟೆಯನ್ನು ಬ್ಯಾಗ್ ಗೆ ತುಂಬಿಕೊಳ್ಳುವ ಹೈದನ ಅವಸರ ಕಂಡು ತನ್ನ ದಿನದಾಯುಸ್ಸು ನೆನಪಿಸಿಕೊಳ್ಳುತ್ತಾನೆ.

ಬಾನಿನ ಚುಕ್ಕೆಗಳ ಬ್ಯಾಟರಿ ಚಾರ್ಜ್ ಪ್ರತಿಶತ ತೊಂಭತ್ತು ಮುಗಿದಾಗಿದೆ. ಚಂದ್ರ ಅನ್ ಪ್ಲಗ್ ಮಾಡಲಷ್ಟೇ ಕಾದಿವೆ.

ದೊಡ್ಡಿಯಿಂದ ರಸ್ತೆಗೆ ರಸ್ತೆಯಿಂದ ದೊಡ್ಡಿಗೆ ತಣಕು ಪಿಣಕು ಕುಣಿದ ಮೇಕೆ ಮರಿಗಳಿಗೆ ಈಗ ಮೊಲೆಯ ನೆನಪಾಗಿದೆ. ಅಲ್ಲಿ ಅಂಗಳದಲ್ಲಿ ಬರುವ ದನಗಳ ಧೂಳಿನ ಮಧ್ಯೆ ತನ್ನ ಅಮ್ಮನಿಗಾಗಿ ಹುಡುಕುತ್ತಿವೆ. ರಸ್ತೆ ಬದಿ ಡೇರೆ ಹೊಡೆದ ಹಕ್ಕಿಪಿಕ್ಕಿಯವರ ಮಕ್ಕಳು ರಾತ್ರಿಯ ಬೆಳಕಿಗೆ ಪುಟ್ಟ ಪುಟ್ಟ ಪುಳ್ಳೆಗಳನ್ನು ಒಟ್ಟುಗೂಡಿಸಿ ಖುಷಿಪಟ್ಟಿವೆ. ಹೊಕ್ಕಳದ ಕೆಳಗೆ ನೆರಿಗೆ ಸಿಕ್ಕಿಸಿಕೊಂಡ ಆಕೆ ಗಿರಾಕಿಗಳಿಗಾಗಿ ಕೆಂಪು ಬಣ್ಣದ ಲಿಪ್ ಸ್ಟಿಕ್ ಬಳಿದುಕೊಳ್ಳುತ್ತಾಳೆ.

ಸಕ್ಕರೆ ಪುಡಿ ಬಿಸಿಗೆ ಕರಗುತ್ತವೆ. ಗುರುತಿಲ್ಲದ ನೆನಪಿಟ್ಟುಕೊಂಡ ದಾರಿಯಲ್ಲೇ ಗೂಡಿನ ಮೊಟ್ಟೆಗಳನ್ನು ನೆನೆದುಕೊಂಡು ಪಕ್ಷಿಗಳು ಕೆಂಚಾಗಿ ಗೂಡಿನೆಡೆಗೆ ಹಾರುತ್ತವೆ. ರಾತ್ರಿ ರಾಣಿಯ ಸಂತಾನ ಊಟಕ್ಕೆ ಮೈಕೊಡವಿ ಎದ್ದು, ಅಲೆಯುವ ಕಾಲುಗಳಿಗೆ ಮಾಲೀಸು ಮಾಡಿಕೊಳ್ಳುತ್ತದೆ. ಊರು ಬಿಟ್ಟು ಬಂದು ಹೋಟೆಲ್ ಸೇರಿದ ಹುಡುಗರು ರಾತ್ರಿಗೆ ಮಲಗಲು ಒಂದು ಗೋಣಿ ಚೀಲವನ್ನು ಬದಿಗೆ ಬಚ್ಚಿಡುತ್ತಾರೆ. ಬಾರ್ ಗಳು ತುಂಬುತ್ತವೆ. ಕನಸುಗಳು ಅರಳಲು ತಾವು ಹುಡುಕುತ್ತವೆ. ಸೂರ್ಯ ಇನ್ನೊಷ್ಟು ಮುದಿಯಾಗುತ್ತಾನೆ. ಕೆಂಪು ಅವನ ಕತ್ತು ಹಿಸುಕುತ್ತದೆ.

ಬೆಳಕು ಕಡಿಮೆಯಾದಂತೆ ‘ಮಗಾ ಇನ್ನೂ ಮನೆಗೆ ಬಂದಿಲ್ಲ…’ ಅಂತ ಕರುಳು ಕನವರಿಸುತ್ತದೆ. ಅಲ್ಲಿ ಪಾರ್ಕ್ ಆಕೆಯ ಕೆನ್ನೆಯ ಮೇಲೆ ಮೂಡುವ ಕೆಂಪು ಮಾರ್ಕಿಗೆ ಮಬ್ಬಿನೊಳು ಕಾದು ಕೂರುತ್ತದೆ. ಆಫೀಸ್ ಗಳಲ್ಲಿ ಕಿಟಕಿಗಳು ರಪ್ ಅಂತ ಬಾಚಿ ಬೀಳುತ್ತವೆ. ನೈಟ್ ಡ್ಯೂಟಿಯವ ಮೈಮುರಿದು ಏಳುತ್ತಾನೆ. ಕಂದೀಲು ನಗುತ್ತದೆ. ಬೀದಿ ದೀಪಗಳು ಸಡನ್ ಆಗಿ ಮೊಗ್ಗಿಡುತ್ತವೆ. ಒಂಟಿ ನಕ್ಷತ್ರಕ್ಕೆ ಒಂದು ಸಣ್ಣನೆಯ ಕೆಂಪು ಮೋಡ ಜೊತೆಯಾಗುತ್ತದೆ.

ಹರಿದ ಚಪ್ಪಲಿಯಲ್ಲಿ, ಮೀನುಖಂಡದ ನೋವಿನಲ್ಲಿ ಕಾಲು ಎಳೆಯುತ್ತಾ ಆತ ಹೆಜ್ಜೆ ಹಾಕುತ್ತಾನೆ. ದಿನದ ಬೆವರಿನ ಬೆಲೆಯ ಒಂದು ಮಾಸಲು ನೋಟನ್ನು ಆ ಮಾಸಲು ಬೆಳಕು ಕದ್ದು ನೋಡುತ್ತದೆ. ಪೂರಿಗಳು ಪಾನಿ ತುಂಬಿಕೊಂಡು ಕೊಬ್ಬೇರುತ್ತವೆ. ಪೌಡ್ರು ಮೆತ್ತಿಕೊಂಡು ಬಂದ ಆಂಟಿಯರು ಸವಿದು ಹೋಗುತ್ತಾರೆ. ಬಸ್ ಗಳಲ್ಲಿ ಯುನಿಫಾರಂ ತೊಟ್ಟ ಹುಡುಗರ ದಂಡು ಸಹ ಪ್ರಯಾಣಿಕರ ಕಾಲು ತುಳಿಯುತ್ತವೆ. ಅಸಹನೆಯೊಂದು ಸಣ್ಣಗೆ ಅವರ ಮುಖದ ಮೇಲೆ ಮೂಡುತ್ತದೆ. ಮನೆಯಾಕೆ ಮುದ್ದೆಗೆ ಎಸರಿಡಲು ಬರದೆ ಇರುವ ತಲೆಗಳನ್ನು ಲೆಕ್ಕ ಹಾಕಲು ಕೂರುತ್ತಾಳೆ. ಸೀರಿಯಲ್ ಸರಣಿ ಹಾಜರಿ ಪಡೆದುಕೊಳ್ಳುತ್ತದೆ. ಊರ ಹೊರಗಿನ ಹೊಲದ ಮಣ್ಣು ಗಾಳಿಗೆ ಮಾಗುತ್ತದೆ. ಸಂಜೆಗೆಂದೇ ನೆಟ್ಟ ಎರಡು ಮೂರು ಗಿಡಗಳು ಬಣ್ಣ ಮೂಡಿಯುತ್ತವೆ.

ಸ್ಟಿಲ್ ಹುಚ್ಚಿನವ ಕೊರಳಿಗೆ ಕ್ಯಾಮೆರಾ ಸಿಕ್ಕಿಸಿಕೊಂಡು ಅಲೆಯುತ್ತಾನೆ. ಸಂಜೆ ಶೋ ಗೆ ಗಂಧದ ಕಡ್ಡಿಯ ವಾಸನೆಗೆ ಥಿಯೆಟರ್‌ ನಗುತ್ತದೆ.  ಸಂಜೆಯನ್ನು ಚಿತ್ರೀಕರಿಸಲು ಮನಸ್ಸು ಮಾಡಿದ ಆ ಡೈರೆಕ್ಟರ್ ವೃತ್ತಾಕಾರದ ಟೋಪಿಯ ಕೆಳಗೆ ಮುಖದ ಮೇಲೆ ಕೋಪ ಕೂರಿಸಿಕೊಂಡು ಕುಣಿಯುತ್ತಾನೆ. ಮುಳುಗುತ್ತಿರುವ ಮುದಿಯನನ್ನು ಹಿಡಿಯಲೆಂಬಂತೆ ಒದ್ದಾಡುತ್ತಾನೆ. ಕಳ್ಳ ಸ್ಕೆಚ್ ಹಾಕುತ್ತಾನೆ. ರಾತ್ರಿ ವ್ಯವಹಾರಗಳಿಗೆ ಪ್ರಾರ್ಥನೆ ಶುರುವಾಗುತ್ತದೆ. ಭಿಕ್ಷೆ ಸಿಗದ ಜೀವಗಳು ಚೌಟ್ರಿ ಮುಂದಿನ ಕಸದ ಬುಟ್ಟಿಯಲ್ಲಿ ಅನ್ನ ಹುಡುಕುತ್ತಾನೆ. ಎಸಿ ರೂಂನಲ್ಲಿ ಬೆವರುವಂತೆ ಅಲ್ಲೊಬ್ಬ ಬರೀ ಹಣವನ್ನೇ ಕಕ್ಕುತ್ತಾನೆ. ಮನಸ್ಸು ಮಬ್ಬಾಗುತ್ತದೆ. ಕವಿಯೊಬ್ಬ ಕಲ್ಪನೆಯಲ್ಲಿ ಏನೊ ಗೀಚಲು ಪೆನ್ ಹುಡುಕುತ್ತಾನೆ.

ಇಲ್ಲಿ ಹಗಲು ಸೋತು ಕೂರುತ್ತದೆ. ಉರಿದ ಸಮಯ ತಣ್ಣಗಾಗುತ್ತದೆ. ನೀರಿನೊಂದಿಗೆ ಜಗಳವಾಡಿಕೊಂಡಿದ್ದ ಗಾಳಿ ಈಗ ಎರಡ್ಮೂರ್ಹನಿಯ ಸೆಳೆದುಕೊಂಡು ತಣ್ಣಗೆ ಹಾರುತ್ತದೆ. ಕಂದನಿಗೊಂದು ಟೋಪಿ ಬೀಳುತ್ತದೆ. ಸುಕ್ಕು ಬಿದ್ದ ಚರ್ಮ ನಡುಗುತ್ತದೆ. ಈಗ ತಾನೇ ಕೆಂಪು ಬಾನಿಯಲ್ಲಿ ಬಿದ್ದು ಮುದಿಯನಂತೆ ಇವರು ಕೂಡ ಅಷ್ಟೇ! ಹಗಲಿಗೊಂದು ಲಾಂಗ್ ಇನ್ನಿಂಗ್ಸ್ ಸಿಕ್ಕಿದೆ, ರಾತ್ರಿಗೂ ಕೂಡ. ಬೆಳಗು ತನ್ನ ಮುಖವನ್ನು ಬಾನಿನಲ್ಲಿ‌ ನೋಡಿಕೊಂಡಂತೆ ಈ ಸಂಜೆ! ಎರಡೂ ಅಷ್ಟೇ ಅಲ್ಪ!

ಕನ್ನಡಿಯಲ್ಲಿ ಎಲ್ಲವೂ ನೇರವಲ್ಲ. ಎಡವು ಬಲವಾಗುತ್ತದೆ, ಬಲವು ಎಡವಾಗುತ್ತದೆ. ಈ ಕನ್ನಡಿಯ ರೂಪದಲ್ಲಿ ಒಂದು ಆರಂಭ ಮತ್ತೊಂದು ಅಂತ್ಯದ ಸುಳಿವಿನ ಮುನ್ಸೂಚನೆ ಅಷ್ಟೇ. ಮಿಲಿನ ಸುಖದಷ್ಟೇ ಚಂದವಾಗಿ, ಅಲ್ಪಕಾಲದ್ದಾಗಿ ಮುಗಿದು ಹೋಗುತ್ತದೆ, ಕಂದನೊಂದು ಜಗಿದು ನುಂಗುವ ಚಾಕಲೇಟ್ ನಂತೆ ತಟ್ಟನೆ ಮಾಯಾ! ಅಮೇಲೆ ಬರೀ ಖಾಲಿ ಖಾಲಿ, ರೊಟ್ಟಿಯ ಹೆಂಚಿನ ತಳದ ಬರೀ ಕಪ್ಪು.

2 Responses

  1. ಸಂತೋಷ್ .ಬಿ.ಎಸ್ says:

    ಹಗಲಲ್ಲೂ ಸಂಜೆಯ ದರ್ಶನಮಾಡಿಸಿದಕ್ಕೆ ಧನ್ಯವಾದ ಗಳು

  2. ಶ್ರೀ ತಲಗೇರಿ says:

    ತುಂಬಾನೇ ತಾಜಾ ಬರಹ 🙂 🙂 🙂

Leave a Reply

%d bloggers like this: