ಅವರು ಮೇಲುಕೋಟೆಯಲ್ಲಿದ್ದ ಗಾಂಧಿ..

 

 

ಹೊಸ ಜೀವನ ಹಾದಿಯ ಹರಿಕಾರ….
ಗಿರಿಜಾ ಶಾಸ್ತ್ರಿ / ಮುಂಬಯಿ

ಚಿತ್ರಗಳು: ಸಂತೋಷ ಕೌಲಗಿ ಸಂಗ್ರಹ /ಅರಿವು /ಹಾರ್ಮೋನಿ

 

ಮೇಲುಕೋಟೆಯ ಗಾಂಧಿ ಎಂದೇ ಹೆಸರಾಗಿದ್ದ ಸುರೇಂದ್ರ ಕೌಲಗಿ ಇನ್ನಿಲ್ಲ.

ಇವರ ನೆನಪಿಗಾಗಿ ಗಿರಿಜಾ ಶಾಸ್ತ್ರಿಯವರು ಈ ಹಿಂದೆ ಬರೆದ ಲೇಖನವನ್ನು ಪ್ರಕಟಿಸುತ್ತಿದ್ದೇವೆ.

ಸುರೇಂದ್ರ ಕೌಲಗಿ ಅವರಿಗೆ 2014 ರಲ್ಲಿ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಬಂದ ಸಂದರ್ಭದಲ್ಲಿ ಬರೆದ ಲೇಖನ ಇದು  

 

ಕಳೆದ ವರುಷ ಮೇಲುಕೋಟೆಗೆ ಭೇಟಿಯಿತ್ತಾಗ, ದೇವಸ್ಥಾನದ ಆವರಣದ ಒಂದು ಮನೆಯ ಮುಂದೆ ಹೆಂಗಸೊಬ್ಬಳು ಒಂದು ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಿದ್ದಳು. ಹೆಂಗಸು ಮಗುವನ್ನು ಮುದ್ದಾಡುವುದರಲ್ಲಿ ವಿಶೇಷವೇನು ಎಂದು ಕೇಳಬಹುದು. ಆದರೆ ಆ ಹೆಂಗಸು ಮುದ್ದಾಡುತ್ತಿದ್ದ ಮಗು ಅವಳದಾಗಿರಲಿಲ್ಲ. ತಾಯಿಯೊಬ್ಬಳು ಯಾವ ಕಾರಣಕ್ಕೋ ತಾನು ಹೆತ್ತ ಕೂಡಲೇ ಬಿಸಾಡಿ ಹೋಗಿದ್ದ ಮಗು ಅದು.

ಇಂತಹ ತ್ಯಜಿಸಲ್ಪಟ್ಟ ಹಲವಾರು ಅನಾಥ ಮಕ್ಕಳು, ಅಂಗವಿಕಲ ಮಕ್ಕಳು ಅಲ್ಲಿನ ‘ಕರುಣಾಗೃಹ’ ದೊಳಗೆ ಬೆಳೆದು, ಮುಂದೆ ಒಳ್ಳೆಯ ಬಾಳನ್ನು ಕಂಡಿವೆ; ಇನ್ನೂ ಬೆಳೆಯುತ್ತಿವೆ. ತಾಯಂದಿರನ್ನೇ ಕಾಣದ ಈ ದುರದೃಷ್ಟ ಮಕ್ಕಳಿಗೆ ತಾಯಂದಿರ ಪ್ರೀತಿಯನ್ನೂ, ಪೋಷಣೆಯನ್ನೂ ನೀಡುತ್ತಿರುವ ಈ ‘ಕರುಣಾಗೃಹ’ದ ಹಿಂದೆ ಇರುವ ತಾಯಿಯೆಂದರೆ ಬೇರೆ ಯಾರೂ ಅಲ್ಲ. ಅವರೇ ಸುರೇಂದ್ರ ಕೌಲಗಿ.

ಸುರೇಂದ್ರ ಕೌಲಗಿಯವರು ಜನಿಸಿದ್ದು 1934ರ ಅಕ್ಟೋಬರ್ 24ರಂದು. ಧಾರವಾಡ ಜಿಲ್ಲೆಯ ಗುಡಿಗೇರಿ ಎಂಬ ಹಳ್ಳಿಯಲ್ಲಿ.

ಅದು ರಾಷ್ಟ್ರೀಯ ಚಳವಳಿಗೆ ತೀವ್ರವಾದ ಕಾವು ಮೂಡಿದ ಸಂದರ್ಭ. ಅದರ ಪ್ರಭಾವ ಕೌಲಗಿಯವರ ಮೇಲೆ ಬೀರದೇ ಹೋಗಲಿಲ್ಲ. ಅವರು ಹತ್ತು ವರುಷದ ಬಾಲಕರಿರುವಾಗಲೇ, ಡಾ. ಎನ್.ಎಸ್. ಹರ್ಡೀಕರ್ ಅವರ ಸೇವಾದಳವನ್ನು ಸೇರಿದರು. ಪ್ರಭಾತ ಫೇರಿಗಳಲ್ಲಿ, ಪ್ರತಿಭಟನಾ ಮೆರವಣಿಗೆಗಳಲ್ಲಿ ಭಾಗವಹಿಸಿದರು. ಎಳೆಯ ವಯಸ್ಸಿನಲ್ಲಿಯೇ ಪೊಲೀಸರ ದೌರ್ಜನ್ಯಗಳಿಗೆ, ಸಾಮಾಜಿಕ ಅನ್ಯಾಯಗಳಿಗೆ ಸಾಕ್ಷಿಯಾದರು. ಕೌಲಗಿಯವರ ಬಾಲ್ಯವನ್ನು ರೂಪಿಸಿದ್ದು ಇಂತಹ ದೇಶಪ್ರೇಮದ ಹಿನ್ನೆಲೆ. ಆದುದರಿಂದ ಮುಂದೆ ಅವರು ದೇಶವನ್ನು ಕಟ್ಟುವುದಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟರು.

ಇಪ್ಪತ್ತು ವರುಷದ ಯುವಕ ಕೌಲಗಿಯವರು, ಎಸ್.ಎಸ್.ಎಲ್.ಸಿ. ಪ್ರಮಾಣಪತ್ರದ ಜೊತೆಗೆ ಇಂಗ್ಲಿಷ್ ಟೈಪಿಂಗ್ ಜ್ಞಾನವನ್ನೂ ಮತ್ತು ಸಾಮ್ಯವಾದ-ಸಮಾಜವಾದಗಳ ಒಂದಿಷ್ಟು ಕನಸುಗಳನ್ನೂ ಹೊತ್ತುಕೊಂಡು ಮುಂಬಯಿಗೆ ಕಾಲಿಟ್ಟರು.

ಗಾಂಧೀಜಿಯವರ ಆಪ್ತವೈದ್ಯರಾಗಿದ್ದ ಡಾ. ದಿನ್‍ಷಾ ಮೆಹ್ತಾರವರು ಅಲ್ಲಿನ ಮಲಬಾರ್ ಹಿಲ್‍ನಲ್ಲಿ ನಡೆಸುತ್ತಿದ್ದ ‘ಪ್ರಕೃತಿ ಚಿಕಿತ್ಸಾಲಯ’ದಲ್ಲಿ ಟೈಪಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿಗೆ ಅನೇಕ ರಾಷ್ಟ್ರೀಯ ಮುಖಂಡರು ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಿದ್ದು, ಒಮ್ಮೆ ಸಮಗ್ರ ಕ್ರಾಂತಿಯ ಹರಿಕಾರರಾದ ಜಯಪ್ರಕಾಶ್ ನಾರಾಯಣ್ ಅವರೂ ವಿಶ್ರಾಂತಿಗೆಂದು ತಂಗಲು ಬಂದಿದ್ದರು.

ಆ ವೇಳೆಗಾಗಲೇ ಕೌಲಗಿಯವರು, ಕ್ಲಿನಿಕ್ಕಿಗೆ ಬರುತ್ತಿದ್ದ ‘ಹರಿಜನ’ ವಾರಪತ್ರಿಕೆಯಲ್ಲಿ ವಿನೋಬಾ ಭಾವೆ ಅವರ ‘ಭೂದಾನ ಚಳವಳಿ’ ಮತ್ತು ಜೆ.ಪಿ.ಯವರು ಅದನ್ನು ಮಾರ್ಪಡಿಸಿ ರೂಪಿಸಿದ್ದ ‘ಜೀವನದಾನ’ ವಿಷಯಗಳನ್ನು ಓದಿ ಬಹಳ ಪ್ರಭಾವಿತರಾಗಿ, ಆ ಚಳವಳಿಗಳಲ್ಲಿ ಸೇರಿಕೊಳ್ಳಲು ಬಯಸಿದ್ದರು. ಆ ಸಮಯಕ್ಕೆ ಸರಿಯಾಗಿ ಜೆ. ಪಿ.ಯವರ ಸ್ಟೆನೋ ಆಗಿದ್ದ ಕೇರಳದ ಪರಶುರಾಮ್ ಎನ್ನುವವರು ಕಾರಣಾಂತರಗಳಿಂದ ತಮ್ಮ ತಾಯ್ನಾಡಿಗೆ ಮರಳಬೇಕಾಗಿ ಬಂದಿತು. ಜೆ.ಪಿ.ಯವರಿಗೆ ತಮ್ಮ ಕಾಗದಪತ್ರಗಳನ್ನು, ಪತ್ರವ್ಯವಹಾರಗಳನ್ನು ನಿರ್ವಹಿಸಲು ಹಾಗೂ ಇತರೆ ಕೆಲಸಗಳಲ್ಲಿ ನೆರವಾಗಲು ಒಬ್ಬ ಯುವಕನ ಅಗತ್ಯವಿತ್ತು.

ಕೌಲಗಿಯವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಿತು.

ಕೌಲಗಿಯವರು, ದಿನ್‍ಷಾ ಮೆಹ್ತಾ ಅವರ ಶಿಫಾರಸಿನ ಮೇರೆಗೆ ಜೆ.ಪಿ.ಯವರ ಬಳಿ ಸ್ಟೆನೋ ಆಗಿ ಸೇರಿಕೊಂಡರು. ಜೆ.ಪಿ.ಯವರು ಕೌಲಗಿಯವರನ್ನು ಸ್ವಾಗತಿಸಿ, ತಮ್ಮ ಸೇವೆಗಾಗಿ ಇರಿಸಿಕೊಂಡ ಕ್ಷಣಗಳು ಕೌಲಗಿಯವರ ಪಾಲಿಗೆ ಅತ್ಯಂತ ಮಹತ್ವದ್ದಾದವು. ಸಹಜ, ಸ್ನೇಹಪೂರ್ಣ ಜೆ.ಪಿ.ಯವರ ಒಡನಾಟದಲ್ಲಿ ಕೌಲಗಿಯವರ ವ್ಯಕ್ತಿತ್ವವು ಅರಳಲು ಪ್ರಾರಂಭಿಸಿತು.

52 ವರುಷದ ಜೆ. ಪಿ., 20 ವರುಷದ ಕೌಲಗಿಯವರನ್ನು ತಮ್ಮ ಸ್ನೇಹಿತನನ್ನಾಗಿ ಸ್ವೀಕರಿಸಿದರು. ಅವರಿಬ್ಬರ ಸ್ನೇಹ ಗಾಢವಾಯಿತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಮುಂಬಯಿನಿಂದ ಕೋಲ್ಕೋತ್ತಾದವರೆಗೆ ಭಾರತದ ಉದ್ದಗಲ ಪ್ರವಾಸ ಮಾಡುತ್ತಾ, ಕೌಲಗಿಯವರು ಜೆ.ಪಿ.ಯವರ ಜೊತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

“ಕ್ರಾಂತಿಯ ಹಂಬಲ ನನ್ನನ್ನು ಮಾರ್ಕ್ಸ್ ವಾದದ ಕಡೆಗೆ ಕೊಂಡೊಯ್ದಿತು. ಅನಂತರ ರಾಷ್ಟ್ರೀಯ ಚಳವಳಿಯ ಮೂಲಕ ಪ್ರಜಾಸತ್ತಾತ್ಮಕ ಸಮಾಜವಾದದ ಕಡೆ ತಿರುಗಿಸಿ, ತದನಂತರ ವಿನೋಬಾಜಿಯವರ ಪ್ರೇಮಮಾರ್ಗದ ಅಹಿಂಸಾತ್ಮಕ ಕ್ರಾಂತಿಗೆ ನನ್ನನ್ನು ಮುಟ್ಟಿಸಿತು. ಅದನ್ನು ನಾನು ಮಾನವೀಯ ಕ್ರಾಂತಿಯ ಮೂಲಕದ ಸಾಮಾಜಿಕ ಕ್ರಾಂತಿ ಎಂದು ವರ್ಣಿಸಿದೆ” ಎಂಬ ಜೆ.ಪಿ.ಯವರ ಮಾತಿನ ಮೂಲಕವೇ, ‘ಜೆ.ಪಿ.ಯವರು ಹೇಗೆ ತಮ್ಮ ಕಾಲಾನುಭವ ಮತ್ತು ಕಾರ್ಯಾನುಭವದ ದೀರ್ಘ ವೈಚಾರಿಕ ಯಾತ್ರೆಯ ಮೂಲಕ ಸರ್ವೋದಯ ಆಂದೋಲನವನ್ನು ತಲಪಿದರು’ ಎಂಬ ವಿಷಯವನ್ನು ಕೌಲಗಿಯವರು ವಿಶದಪಡಿಸುತ್ತಾರೆ. ಜೆ.ಪಿ.ಯವರ ಅಂತಹ ಐತಿಹಾಸಿಕ ಘಟ್ಟದಲ್ಲಿ ಅವರ ಸಹಾಯಕರಾಗಿ ಸೇರಿಕೊಂಡಿದ್ದರಿಂದಾಗಿ ಕೌಲಗಿಯವರ ಬದುಕಿನ ದಿಕ್ಕೇ ಬದಲಾಯಿತು.

ಕೌಲಗಿಯವರು ಜೆ.ಪಿ.ಯವರ ಆಪ್ತಸಹಾಯಕರಾದ ಮೇಲೆ, ಸರ್ವೋದಯ ಸಮ್ಮೇಳನಗಳೇ ಅಲ್ಲದೇ, ಬೇರೆ ಬೇರೆ ಊರುಗಳಲ್ಲಿ ನಡೆಯುತ್ತಿದ್ದ ‘ಸರ್ವ ಸೇವಾ ಸಂಘ’ ಸಮಿತಿಯ ಸಭೆಗಳಿಗೆ, ಜೆ.ಪಿ. ಯವರು ಸಂಪರ್ಕವಿರಿಸಿಕೊಂಡಿದ್ದ ‘ಇಂಡಿಯನ್ ಕಮಿಟಿ ಫಾರ್ ಕಲ್ಚರಲ್ ಫ್ರೀಡಂ’ ಸಂಸ್ಥೆ ಏರ್ಪಡಿಸುತ್ತಿದ್ದ ಸಭೆಗಳಿಗೆ ಅವರ ಜೊತೆಗೆ ಹೋಗಬೇಕಾಗಿ ಬರುತ್ತಿತ್ತು.

ಟಿಬೆಟ್ಟನ್ನು ಚೀನಾ ಆಕ್ರಮಿಸಿಕೊಂಡಾಗ ದಲೈಲಾಮ ಭಾರತಕ್ಕೆ ಓಡಿ ಬಂದು ಹಿಮಾಚಲ ಪ್ರದೇಶದ ಧರ್ಮಸಾಲಾದಲ್ಲಿ ಆಶ್ರಯ ಪಡೆದ ಸಂಗತಿಯ ಕುರಿತು ಜೆ.ಪಿ.ಯವರು “ಟ್ರ್ಯಾಜಿಡಿ ಆಫ್ ಟಿಬೆಟ್” ಎಂಬ ಕಿರುಪುಸ್ತಕವೊಂದನ್ನು ಬರೆದರು. ಆ ಪುಸ್ತಕದ ಬಹುಭಾಗವನ್ನು ಬರೆದುಕೊಂಡು ಟೈಪ್ ಮಾಡುವ ಅದೃಷ್ಟ ತಮ್ಮ ಪಾಲಿಗೆ ದೊರೆಕಿದುದು ತಮ್ಮ ಬದುಕಿನ ಒಂದು ಮುಖ್ಯ ಘಟನೆ ಎಂದು ಕೌಲಗಿಯವರು ಹೇಳುತ್ತಾರೆ. ಅಲ್ಲದೇ ಜೆ.ಪಿ ಮತ್ತು ದಲೈಲಾಮರ ಪರಸ್ಪರ ಭೇಟಿ, ಆಲಿಂಗನ ಮತ್ತು ಮಾತುಕತೆಗೆ ತಾವು ಸಾಕ್ಷಿಯಾಗಿದ್ದ ಮಹತ್ವದ ಸಂಗತಿಯನ್ನೂ ಕೌಲಗಿಯವರು ವ್ಯಕ್ತಪಡಿಸುತ್ತಾರೆ. ಆದರೆ ಆ ಮಾತುಕತೆಯನ್ನು ದಾಖಲಿಸಲು ಆಗಲಿಲ್ಲ ಎನ್ನುವ ವ್ಯಥೆ ಅವರಿಗೆ ಈಗಲೂ ಇದೆ.

ಮದ್ರಾಸಿನಲ್ಲಿ ರಾಜಾಜಿಯವರು ಸ್ವತಂತ್ರ ಪಕ್ಷ ರಚಿಸುವ ಮುನ್ನ ಜೆ.ಪಿ.ಯವರೊಡನೆ ಮಾತನಾಡಿದ ಸ್ವಲ್ಪ ದಿನಗಳಲ್ಲೇ ಆ ಪಕ್ಷವು ರಚನೆಯಾದ ಐತಿಹಾಸಿಕ ಘಟನೆಯನ್ನು ನೋಡಿದ ಭಾಗ್ಯವೂ ತಮ್ಮದಾಯಿತೆಂದು ಕೌಲಗಿಯವರು ಬರೆಯುತ್ತಾರೆ.

ಕೌಲಗಿಯವರು ನೋಡಿದ ಇನ್ನೊಂದು, ಅವಿಸ್ಮರಣೀಯ ಐತಿಹಾಸಿಕ ಘಟನೆಯೆಂದರೆ, ಲೋಹಿಯಾ ಮತ್ತು ಜೆ.ಪಿ. ಮಿಲನ. ಹೈದರಾಬಾದಿನಲ್ಲಿ ಮೂರು ದಿನಗಳ ಕಾಲ ನಡೆದ ಮಾತುಕತೆಯ ಸಂದರ್ಭದಲ್ಲಿ ಲೋಹಿಯಾ ಅವರು ಜೆ.ಪಿ.ಯವರನ್ನು ಸಮಾಜವಾದದ ಕಾರ್ಯಕ್ರಮಗಳೆಡೆಗೆ ಮತ್ತೆ ಸೆಳೆಯಲು ಮಾಡಿದ ಪ್ರಯತ್ನ, ಜೆ.ಪಿ.ಯವರ ಸರ್ವೋದಯ ಪರಿಕಲ್ಪನೆಯ ಬಗೆಗಿನ ಒಲವು, ಈರ್ವರೂ ತಮ್ಮತಮ್ಮ ವಿಚಾರಗಳ ತೀವ್ರ ಪ್ರತಿಪಾದಕರಾಗಿದ್ದರಿಂದ ಸಂಧಾನವು ಮುರಿದುಬಿದ್ದ ಬಗೆ ಮುಂತಾದವುಗಳ ಬಗ್ಗೆ ಅತ್ಯಂತ ಸ್ವಾರಸ್ಯವಾಗಿ ಕೌಲಗಿಯವರು ಬರೆಯುತ್ತಾರೆ.

ಗಯಾ ಜಿಲ್ಲೆಯ ಸೋಖೋದೇವ್ರಾ ಎಂಬ ಗ್ರಾಮದಲ್ಲಿದ್ದ ಜೆ.ಪಿ.ಯವರ ಸರ್ವೋದಯ ಆಶ್ರಮದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿ ಅದನ್ನು ಹತ್ತಿರದಿಂದ ನೋಡಿದ ಭಾಗ್ಯವೂ ಕೌಲಗಿಯವರದ್ದಾಗಿದೆ.

1954 ರಿಂದ ಸತತವಾಗಿ ಐದು ವರುಷಗಳ ಕಾಲ ಅಂದರೆ 1959ರವರೆಗೆ “ಜೆ.ಪಿ. ಎಂಬ ವಿಶ್ವವಿದ್ಯಾಲಯ”ದ ಒಳಗಿದ್ದು ಅವರಿಂದ ಕಲಿತುಕೊಂಡ ಸಂಗತಿಗಳು ಅಪಾರ ಎನ್ನುತ್ತಾರೆ ಕೌಲಗಿಯವರು. ಜೆ.ಪಿ.ಯವರು ಜವಾಹರ್‍ಲಾಲ್ ನೆಹರು ಹಾಗೂ ಬಿಹಾರದ ಪ್ರಥಮ ಮುಖ್ಯ ಮಂತ್ರಿ ಶ್ರೀಕೃಷ್ಣ ಸಿನ್ಹಾರೊಂದಿಗೆ ಮಾಡಿದ ಪತ್ರವ್ಯವಹಾರಗಳೇ ಅಲ್ಲದೇ, ಪತ್ರಿಕೆಗಳಿಗೆ ಬರೆದ ಲೇಖನ ಮತ್ತು ಪತ್ರಿಕಾ ಹೇಳಿಕೆಗಳ ಪ್ರಕಟಣೆಯಲ್ಲಿಯೂ ಕೌಲಗಿಯವರ ಪಾಲು ಬಹಳ ಇದ್ದಿರಬೇಕು. ಆದರೂ “ನನ್ನ ಪಾಲು ಕಿರಿದಾಗಿದ್ದರೂ ತನ್ಮೂಲಕ ತಿಳಿದುಕೊಂಡ ಸಂಗತಿ ಅಪಾರ” ಎನ್ನುವ ವಿನಯ ಅವರದು.

ಜೆ.ಪಿ ಮತ್ತು ಕೌಲಗಿಯವರು ಎಷ್ಟು ನಿಕಟರಾದರೆಂದರೆ, ಕೌಲಗಿಯವರ ಮದುವೆಗೆ ಬರಲಾರದೇ ಹೋದದ್ದಕ್ಕೆ ಜೆ.ಪಿ.ಯವರು ಅವರಿಗೆ ಒಂದು ಪತ್ರವನ್ನೂ ಬರೆದದ್ದನ್ನು ಕೌಲಗಿಯವರು ನೆನಪಿಸಿಕೊಳ್ಳುತ್ತಾರೆ.

ಬಹಳ ಹಿಂದುಳಿದಿದ್ದು, ಕೆಲವು ಬುಡಕಟ್ಟು ಜನಾಂಗಗಳಿಂದಲೂ ಕೂಡಿದ್ದ, ಮಂಡ್ಯ ಜಿಲ್ಲೆಯ ಮೇಲುಕೋಟೆಯನ್ನು ಜನಸೇವೆಗಾಗಿ 1959 ರಲ್ಲಿ ಆಯ್ದುಕೊಂಡು ಅಲ್ಲೇ ಬಂದು ನೆಲೆಸಿದ ಕೌಲಗಿಯವರು, ಮುಂದುವರೆಸಿದ್ದು ಜೆ.ಪಿ.ಯವರ ಕಾರ್ಯಚಟುವಟಿಕೆಗಳನ್ನೇ. ಬಹಳ ವರುಷಗಳ ಅನಂತರ ಜೆ.ಪಿ.ಯವರೂ ಮೇಲುಕೋಟೆಗೆ ಬಂದದ್ದಲ್ಲದೆ, ಅಲ್ಲಿ ಒಂದು ಸಾರ್ವಜನಿಕ ಸಭೆಯನ್ನೂ ನಡೆಸಿದ್ದು ಅವರಿಬ್ಬರ ನಡುವಿನ ಸಂಬಂಧದ ‘ಚಿನ್ನದ ಮೆರುಗಿನ ಸಂಗತಿ’ ಎಂದು ಕೌಲಗಿಯವರು ಹೆಮ್ಮೆಪಡುತ್ತಾರೆ.

ಮೇಲುಕೋಟೆಯಲ್ಲಿ ನೆಲೆನಿಂತ ಕೌಲಗಿಯವರು ಮಹಾತ್ಮಾ ಗಾಂಧಿ, ವಿನೋಬಾ ಮತ್ತು ಜೆ.ಪಿ., ಇವರೆಲ್ಲರ ಆದರ್ಶಗಳನ್ನು ಕಾರ್ಯರೂಪಕ್ಕೆ ತರಲು ತೊಡಗಿದರು. ಅದಕ್ಕೆಂದು 1960ರಲ್ಲಿ ‘ಜನಪದ ಸೇವಾ ಟ್ರಸ್ಟ್’ ಎಂಬ ಸಮಾಜಸೇವಾ ಸಂಸ್ಥೆಯನ್ನು ತೆರೆದರು. ಅಲ್ಲದೆ 1959ರಿಂದ ಸೇವಾದಳ ಕಾರ್ಯವನ್ನು ಪ್ರಾರಂಭಿಸಿ ಅದನ್ನು ಬಹಳ ವರುಷಗಳ ಕಾಲ ನಡೆಸಿದರು. 1963ರಲ್ಲಿ ಅವರು ಕೈಗೊಂಡ ಮಹತ್ವದ ಯೋಜನೆಯೆಂದರೆ, ಅಂಗವಿಕಲ ಮಕ್ಕಳಿಗಾಗಿ ‘ಕರುಣಾಗೃಹ’ ಎಂಬ ವಸತಿ ಶಾಲೆಯ ನಿರ್ಮಾಣ. ಇಲ್ಲಿ ಈವರೆಗೆ 300ಕ್ಕೂ ಹೆಚ್ಚಿನ ಮಕ್ಕಳಿಗೆ ಶಿಕ್ಷಣ ಮತ್ತು ಆಶ್ರಯ ನೀಡಿ, ವೈದ್ಯಕೀಯ ಪುನರ್ವಸತಿಯನ್ನೂ ಕಲ್ಪಿಸಿದ್ದಾರೆ.

‘ಕರುಣಾಗೃಹ’ ಕೇವಲ ಅಂಗವಿಕಲ ಮಕ್ಕಳ ಕೇಂದ್ರವಾಗದೇ, ಅನಾಥ ಮತ್ತು ತೊರೆಯಲ್ಪಟ್ಟ ಶಿಶುಗಳ ಆಶ್ರಯದಾಣವೂ ಆಗಿದ್ದು, ಈ ವರೆಗೆ ಸುಮಾರು 20 ಮಕ್ಕಳಿಗೆ ಇಲ್ಲಿ ಪಾಲನೆ-ಪೋಷಣೆ ನೀಡಲಾಗಿದೆ. ‘ಕರುಣಾಗೃಹ’ ಒಂದು ದತ್ತು ಕೇಂದ್ರವೂ ಆಗಿದ್ದು, ಇಲ್ಲಿ ಯೋಗ್ಯ ದಂಪತಿಗಳಿಗೆ ಅವರ ಸಾಮರ್ಥ್ಯವನ್ನು ಪರೀಕ್ಷಿಸಿ ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ನೀಡಲಾಗುತ್ತದೆ.

ಸ್ಥಳೀಯ ಗ್ರಾಮಸ್ಥರಿಗಾಗಿ, ವಿಶೇಷವಾಗಿ ಹೆಣ್ಣುಮಕ್ಕಳಿಗೆಂದು, ಶಾಲೆ (1982-1998) ಹಾಗೂ ಜೂನಿಯರ್ ಕಾಲೇಜು (1985-2005) ಸ್ಥಾಪಿಸಿದ ಶ್ರೇಯಸ್ಸು ಕೌಲಗಿಯವರಿಗೆ ಸಲ್ಲುತ್ತದೆ. ಸರಕಾರಗಳ ಅಥವಾ ಷರತ್ತುಗಳೊಡನೆ ಬರುವ ಇತರ ಯಾವುದೇ ರೀತಿಯ ಸಹಾಯವನ್ನು ಕೋರದೇ, ಸಾರ್ವಜನಿಕರ ಮತ್ತು ವಿಶೇಷವಾಗಿ ಸ್ಥಳೀಯರ ಬೆಂಬಲದಿಂದಲೇ ಅವರು ಸಾರ್ವಜನಿಕ ಶಿಕ್ಷಣಕ್ಕೆ ಬುನಾದಿಯನ್ನು ಹಾಕಿದರು.

ತಮ್ಮ ಟ್ರಸ್ಟ್ ನ ಸ್ವಯಂಸೇವಾ ಸ್ವಭಾವಕ್ಕಾಗಲೀ ಅಥವಾ ಆದರ್ಶಗಳಾಗಲೀ, ಸರಕಾರ ಅಥವಾ ಇನ್ನಿತರ ನೆರವುನೀಡುವವರು ಹೇರುವ ನಿಯಮಗಳು ಒಗ್ಗುವುದಿಲ್ಲ ಎಂಬ ಕಾರಣಕ್ಕಾಗಿ ಅಂತಹವರಿಂದ ಅವರು ದೂರವೇ ಉಳಿದರು. ಆದುದರಿಂದ ಅನೇಕ ವರುಷಗಳ ಕಾಲ ಸತತವಾಗಿ ನಡೆಸಿದ ಈ ಶಾಲೆ ಮತ್ತು ಕಾಲೇಜನ್ನು, ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ಮುಚ್ಚಬೇಕಾಯಿತು. ಇಂದಿಗೂ ‘ಜನಪದ ಸೇವಾ ಟ್ರಸ್ಟ್’ ಜನರಿಗಾಗಿ ಜನರಿಂದಲೇ ನಡೆಸಲ್ಪಡುತ್ತಿರುವ ಸಂಸ್ಥೆಯಾಗಿದ್ದು, ಸಾರ್ವಜನಿಕರು ನೀಡುವ ದಾನದೇಣಿಗೆಗಳನ್ನು ಸ್ವೀಕರಿಸುತ್ತದೆಯೇ ಹೊರತು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಥವಾ ವಿದೇಶೀ ಸಂಸ್ಥೆಗಳ ಅನುದಾನಗಳನ್ನಲ್ಲ.

ಕೌಲಗಿಯವರು ತಮ್ಮ ಜೀವಕಾರುಣ್ಯದ ತುಡಿತದಿಂದಾಗಿ, ವಿನೋಬಾ ಹಾಕಿಕೊಟ್ಟ ಮಾರ್ಗದಲ್ಲಿ ‘ಸರ್ವೋದಯ ಪಾತ್ರ’ ಎನ್ನುವ ಒಂದು ಅಪೂರ್ವ ಯೋಜನೆಯನ್ನು 20 ವರುಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಮಕ್ಕಳು ‘ಸರ್ವೋದಯ ಪಾತ್ರೆ’ಗಳಲ್ಲಿ ಸಂಗ್ರಹಿಸಿದ ಅಕ್ಕಿಯಿಂದ ನಿರ್ಗತಿಕರಿಗೆ ಅನ್ನದಾನವನ್ನು ಮಾಡುತ್ತಾ ಬಂದಿದ್ದಾರೆ. ಪ್ರತಿ ತಿಂಗಳೂ ಸಮುದಾಯವು ಸಂಗ್ರಹಿಸುವ ದವಸಧಾನ್ಯಗಳನ್ನು ಬಡವರು ಹಾಗೂ ಅನಾಥರಿಗೆ ಹಂಚುತ್ತಿದ್ದಾರೆ.

1970ರ ಮತ್ತು 1980ರ ದಶಕಗಳಲ್ಲಿ ಕೌಲಗಿಯವರ ಸೇವಾಸಂಸ್ಥೆಯು, ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಿದ್ದ ಸುಮಾರು 100 ಮಂದಿ ಗ್ರಾಮೀಣ ಮಹಿಳೆಯರಿಗೆ ವಸತಿಶಾಲೆಯ ಸೌಲಭ್ಯವನ್ನೊದಗಿಸಿ, “ಸಂಕ್ಷಿಪ್ತ ಎಸ್.ಎಸ್.ಎಲ್.ಸಿ. ಕೋರ್ಸ್”ಗಳನ್ನು ನೀಡಿದ ಕಾರಣ, ಇಂದು ಅವರಲ್ಲನೇಕರಿಗೆ ಸಾಮಾಜಿಕ-ಆರ್ಥಿಕ ಪುನರ್ವಸತಿ ಸಿಕ್ಕಿದೆ. 1985 ರಲ್ಲಿ ಅವರು 30 ಹಳ್ಳಿಗಳಲ್ಲಿ ಪ್ರಾರಂಭಿಸಿದ ವಯಸ್ಕರ ಶಿಕ್ಷಣ ತರಗತಿಗಳಿಂದಾಗಿ, ಸುಮಾರು 900 ಅನಕ್ಷರಸ್ಥರು ಇಂದು ಅಕ್ಷರಸ್ಥರಾಗಿದ್ದಾರೆ.
ಮಹಿಳೆಯರ ಪುನರ್ವಸತೀಕರಣಕ್ಕಾಗಿ ಟ್ರಸ್ಟ್‍ನವರು ಒಂದು ಪ್ರ್ರಿಂಟಿಂಗ್ ಪ್ರೆಸ್‍ನ್ನು ತೆರೆದಿದ್ದರಿಂದಾಗಿ, 1980ರ ದಶಕದಲ್ಲಿ 50ಕ್ಕೂ ಹೆಚ್ಚಿನ ಮಹಿಳೆಯರಿಗೆ ತರಬೇತಿ ದೊರೆತು ಪ್ರಯೋಜನವಾಯಿತು.

ಸರ್ವೋದಯ ಮತ್ತು ಗಾಂಧೀಜಿ ತತ್ತ್ವಗಳ ಪ್ರಚಾರಕ್ಕಾಗಿ ಹದಿಮೂರು ವರುಷಗಳಿಂದಲೂ ‘ಜನಪದ ವಿಚಾರ’ ಎಂಬ ಮಾಸಪತ್ರಿಕೆಯನ್ನು ಯಾವುದೇ ಜಾಹೀರಾತುಗಳಿಲ್ಲದೇ ನಡೆಸಿಕೊಂಡು ಬರುತ್ತಿರುವ ಸಾಹಸ ಕೌಲಗಿಯವರದು.
ಸಮಕಾಲೀನ ವಿಷಯಗಳ ಮೇಲೆ ಅನೇಕ ಕನ್ನಡ ಪುಸ್ತಕಗಳನ್ನು ಪ್ರಕಟಿಸಿರುವ ಕೌಲಗಿಯವರು, ಹಲವಾರು ಲೇಖಕರ ವೈಚಾರಿಕ ಲೇಖನಗಳ ಸಂಗ್ರಹವಾದ ‘ವಿಚಾರ ಮಂಥನ’ ಎಂಬ ಕೃತಿಯೊಂದನ್ನು ಸಂಪಾದಿಸಿದ್ದಾರೆ. ವಿನೋಬಾ ಭಾವೆಯವರ ‘ಜೈ ಜಗತ್’ ಮತ್ತು ಸುಂದರ್‍ಲಾಲ್ ಬಹುಗುಣ ಅವರ ‘ಪರ್ಯಾವರಣ್ ಔರ್ ವಿಕಾಸ್’ ಎಂಬ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ನೈಸರ್ಗಿಕ ರಂಗಿನಿಂದ ತಯಾರಿಸಿದ ಬಟ್ಟೆ ಮತ್ತು ಸಿದ್ಧಉಡುಪುಗಳನ್ನು ತಯಾರಿಸುವ ನೇಕಾರರನ್ನು, ವಿಶೇಷವಾಗಿ ಸ್ತ್ರೀಯರನ್ನು, ಸಂಘಟಿಸಿ, ಗ್ರಾಮಸಮುದಾಯವನ್ನು ಖಾದಿ ತಯಾರಿಕೆ ಹಾಗೂ ಮಾರಾಟಗಳಲ್ಲಿ ತೊಡಗಿಸಿದ ಸಾಹಸವೂ ಕೌಲಗಿಯವರದು.

ಅವರ ಮಾರ್ಗದರ್ಶನದಲ್ಲಿ ಸಮುದಾಯವು ಸಿದ್ಧಪಡಿಸಿದ ಖಾದಿಯ ಬಟ್ಟೆ ಮತ್ತು ಸಿದ್ಧಉಡುಪುಗಳಿಗೆ (ಷರ್ಟಿಂಗ್, ಟವೆಲ್, ಲುಂಗಿ, ಇತ್ಯಾದಿ) ಅವುಗಳ ವಿಶಿಷ್ಟ ಗುಣಮಟ್ಟ ಹಾಗೂ ಶೈಲಿಗಳಿಂದಾಗಿ, ಮುಕ್ತ ಮಾರುಕಟ್ಟೆಯಲ್ಲಿ ಈಗ ಬೇಡಿಕೆಯು ಹೆಚ್ಚುತ್ತಿದೆ. ಫ್ಯಾಬ್ ಇಂಡಿಯಾ’ದಂತಹ ಸುಪ್ರಸಿದ್ಧ ಬ್ರ್ಯಾಂಡೊಂದಕ್ಕೆ ‘ಜನಪದ ಸೇವಾ ಟ್ರಸ್ಟ್’ನ ಖಾದಿ ಉತ್ಪನ್ನಗಳು ಆಕರವಾಗಿವೆ. ಮೇಲುಕೋಟೆಯ ಪಾರಂಪರಿಕ ಸಂಪತ್ತಾದ ‘ಮೇಲುಕೋಟೆ ಪಂಚೆ’ಗೆ ಮತ್ತೆ ಖಾದಿಯ ಮೂಲಕ ಜೀವಕೊಡುವ ಬಗ್ಗೆ ಕೌಲಗಿಯವರ ಸೇವಾಸಂಸ್ಥೆಯು ಈಗ ಚಿಂತಿಸುತ್ತಿದೆ. ಖಾದಿಯ ಹಿಂದಿರುವ ಸ್ವಾವಲಂಬನೆ ಮತ್ತು ಸಶಕ್ತೀಕರಣದ ತತ್ತ್ವಗಳನ್ನು ಮೈಗೂಡಿಸಿಕೊಂಡಿರುವ ಇಲ್ಲಿನ ಖಾದಿ ಉದ್ಯಮವು ಮೇಲುಕೋಟೆಯ ಸಮುದಾಯಕ್ಕೆ ಗಮನಾರ್ಹ ಪ್ರಯೋಜನವನ್ನುಂಟುಮಾಡಿದೆ.

ಪರಿಸರ ಸಮತೋಲನ ಮತ್ತು ಸಂರಕ್ಷಣೆ ಬಗ್ಗೆ ತಮಗಿರುವ ಕಾಳಜಿಯಿಂದಾಗಿ ಕೌಲಗಿಯವರು ‘ಹೊಸ ಜೀವನ ದಾರಿ’ ಎಂಬ ಒಂದು ನವೀನ ಉಪಕ್ರಮಕ್ಕೆ ಕಾರಣರಾಗಿದ್ದಾರೆ. ಇದರ ಕಲ್ಪನೆಗಳು ಮೇಲುಕೊಟೆಯ ಸಮೀಪದಲ್ಲೇ ಇರುವ ಇಪ್ಪತ್ತೈದು ಎಕರೆ ಬರಡು ನೆಲದಲ್ಲಿ, ಪರಿಸರಸ್ನೇಹಿ ಮತ್ತು ಜೀವವೈವಿಧ್ಯ ಆಧಾರಿತ ಅಭಿವೃದ್ಧಿ ಮಾದರಿಯಲ್ಲಿ ಸಾಕಾರಗೊಂಡಿವೆ.

ಕರುಣಾಗೃಹದ ದೈಹಿಕ ಮತ್ತು ಮಾನಸಿಕ ಭಿನ್ನಚೇತನ ಮಕ್ಕಳು, ಪ್ರಾರಂಭದಲ್ಲಿ ಈ ಬರಡು ನೆಲವನ್ನು ಕೃಷಿಯೋಗ್ಯವನ್ನಾಗಿಸುವಲ್ಲಿ ನೀಡಿರುವ ಶ್ರಮದಾನದಿಂದಾಗಿ, ಇಂದು ಸಾವಯವ ಕೃಷಿ; ಮರಗಳು ಹಾಗೂ ಪ್ರಾಣಿಗಳ ನಾಟಿತಳಿ ಅಭಿವೃದ್ಧಿ; ಸಸಿಗಳ ಬೆಳವಣಿಗೆ ಹಾಗೂ ವಿತರಣೆಗಾಗಿ ಒಂದು ನರ್ಸರಿ; ಜಲಸಂರಕ್ಷಣೆ ಮೊದಲಾದ ಕಾರ್ಯಗಳನ್ನು ಇಲ್ಲಿ ಕೈಗೊಳ್ಳಲು ಸಾಧ್ಯವಾಗಿದೆ. ಕೃಷಿ ಉತ್ಪನ್ನಗಳಿಗೆ ಮಾರಾಟಸಂಪರ್ಕ, ಶ್ರಮದಾನ, ರಚನಾತ್ಮಕ ಕಾರ್ಯ, ಸರ್ವೋದಯ ಚಿಂತನೆ ಮೊದಲಾದ ವಿವಿಧ ವಿಷಯಗಳಲ್ಲಿ, ಕೃಷಿಕರು, ಪರಿಸರ ಸಂರಕ್ಷಕರು, ಖಾದಿ ವಿನ್ಯಾಸಕಾರರು, ಶಾಲಾ ಬಾಲಕರು ಮತ್ತಿತರ ವಿಭಿನ್ನ ಹಿನ್ನೆಲೆಯ ಆಸಕ್ತರಿಗೆ ಮತ್ತು ಸಾರ್ವಜನಿಕರಿಗೆ ತರಬೇತಿ ಶಿಬಿರಗಳನ್ನು ನಡೆಸುವ ಕೇಂದ್ರವಾಗಿ ಇಂದು ‘ಹೊಸ ಜೀವನ ದಾರಿ’ ಕ್ಷೇತ್ರವು ಬೆಳೆದು ನಿಂತಿದೆ.

ಇಲ್ಲಿನ ಬೆಟ್ಟಗುಡ್ಡ, ಕಣಿವೆ, ಝರಿ, ಮರಗಳ, ಪ್ರಾಣಿಪಕ್ಷಿಗಳ ಕಲರವವು ಚರಖಾ ಸುತ್ತುವ ನಾದವು, ಇಲ್ಲಿಗೆ ಬರುವ ಮಕ್ಕಳು ಮತ್ತು ಯುವಕರನ್ನು ಆಕರ್ಷಿಸುತ್ತವೆ. ಅಲ್ಲದೆ, ಅವರ ಒತ್ತಡ-ಉದ್ವೇಗಗಳನ್ನು ಶಮನಗೊಳಿಸಿ, ಅವರಲ್ಲಿ ಒಂದು ಹೊಸ ಚೇತನವನ್ನು ಮೂಡಿಸುತ್ತದೆ. ಸರಳ ಜೀವನ, ಉನ್ನತಚಿಂತನ ಮತ್ತು ವಿಶ್ವಪ್ರೇಮದ ಆದರ್ಶಗಳಿಂದ ಅರ್ಥಪೂರ್ಣವಾಗಿ ಬಾಳುವ ಪ್ರೇರಣೆಯನ್ನೂ ನೀಡುತ್ತಿದೆ. ‘ಹೊಸ ಜೀವನ ದಾರಿ’ಯು ಗಳಿಕೆ ಮತ್ತು ಕಲಿಕೆಯ ತಾಣವಾಗಿದ್ದು, ಗಾಂಧೀಜಿಯವರ ‘ನಯೀ ತಾಲೀಮ್’ ಪರಿಕಲ್ಪನೆಯ ಆಧಾರದ ಮೇಲೆ, ಅನೌಪಚಾರಿಕ ಶಿಕ್ಷಣವನ್ನೂ ನೀಡುತ್ತಿದೆ. ಈ ಬಗೆಯ ಸಾಮಾಜಿಕ ತಂತ್ರಜ್ಞಾನದ ಅಳವಡಿಕೆಯಿಂದ ಸಮರ್ಥನೀಯ ವಿಕಾಸವು ಸಾಧ್ಯವಾಗುತ್ತದೆ.

1990 ರಿಂದ 2003 ರವರೆಗೆ ಹದಿಮೂರು ವರುಷಗಳ ಕಾಲ, ಬ್ರಿಟನ್‍ನ ಎಡಿನ್‍ಬರೋ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ, ಇಲ್ಲಿ ಪರಿಸರ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳಲ್ಲಿ ಐದುವಾರಾವಧಿಯ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಕೌಲಗಿಯವರು ನಡೆಸಿಕೊಟ್ಟರು. ಇದರಿಂದಾಗಿ, ಸುಮಾರು 200 ಐರೋಪ್ಯ ವಿದ್ಯಾರ್ಥಿಗಳು, ಅಭಿವೃದ್ಧಿ ಹಾಗೂ ಪರಿಸರ ಕುರಿತಾದ ಗಾಂಧೀಜಿ ವಿಚಾರಗಳ ಬಗೆಗೆ ಒಳನೋಟಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು.

ಕೌಲಗಿಯವರು ಕರ್ನಾಟಕ ಸರ್ವೋದಯ ಮಂಡಳಿಯ ಅಧ್ಯಕ್ಷರಾಗಿ 1989ರಲ್ಲಿ ಅಖಿಲ ಭಾರತ ಸರ್ವೋದಯ ಸಮ್ಮೇಳನವನ್ನು ಮೇಲುಕೋಟೆಯಲ್ಲಿ ನಡೆಸಿದ್ದು ಅವರ ಜೀವನದ ಉಜ್ವಲಾಂಶಗಳಲ್ಲಿ ಒಂದಾಗಿದೆ. ಸುಂದರ್‍ಲಾಲ್ ಬಹುಗುಣ ಅವರು ಅಧ್ಯಕ್ಷರಾಗಿದ್ದ ಈ ಸಮ್ಮೇಳನದಲ್ಲಿ ಭಾರತದ ಪ್ರಮುಖ ಸರ್ವೋದಯ ನಾಯಕರಷ್ಟೇ ಅಲ್ಲದೆ, ಸುಮಾರು 4,000 ಪ್ರತಿನಿಧಿಗಳು ಭಾಗವಹಿಸಿದ್ದರು.

ಗಾಂಧೀ, ಜೆ.ಪಿ. ಮತ್ತು ವಿನೋಬಾ ಹಾಕಿದ ದಾರಿಯಲ್ಲಿ ಆರು ದಶಕಗಳಷ್ಟು ದೀರ್ಘಕಾಲ ಸಾಗಿರುವ ಅಪೂರ್ವ ಸೇವಾಯಾತ್ರಿಕ ಕೌಲಗಿಯವರು. ಸತ್ಯ, ಶಾಂತಿ ಮತ್ತು ನಿರ್ಭಯ ಎಂಬುವೇ ಅವರ ಮೂಲಮೌಲ್ಯಗಳು, ಹಾಗೂ ದೃಢಸಂಕಲ್ಪ ಮತ್ತು ಪ್ರಾಮಾಣಿಕ ಶ್ರಮಗಳಿಂದಲೇ ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದು ಅವರ ಗಾಢನಂಬಿಕೆ.

ಕೌಲಗಿಯವರಿಂದ ಪ್ರೇರಿತರಾಗಿ ಅವರ ಪತ್ನಿ ಗಿರಿಜಾ, ಮಕ್ಕಳಾದ ಸಂತೋಷ್ ಮತ್ತು ಸುಘೋಷ್, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ಈಗ ಅವರ ಲೋಕಸೇವಾ ಕಾರ್ಯದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

[ಸಂತೋಷ್ ತಮ್ಮ ಸೇವಾಕ್ಷೇತ್ರವನ್ನು ಕುರಿತ ಪ್ರಸಕ್ತ ಸಮಸ್ಯೆಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುತ್ತಾರೆ. ನೈಸರ್ಗಿಕ ಕೃಷಿಋಷಿ ಮಾಸನೋಬು ಫುಕುವೋಕಾ ಅವರ “ದ ಒನ್-ಸ್ಟ್ರಾ ರೆವಲ್ಯೂಶನ್” ಪುಸ್ತಕಕ್ಕೆ ಅವರು ಮಾಡಿರುವ ಕನ್ನಡ ಅನುವಾದ “ಒಂದು ಹುಲ್ಲಿನ ಕ್ರಾಂತಿ” ಪ್ರಸಿದ್ಧವಾಗಿದೆ. ಗಿರಿಜಾ ಕೌಲಗಿ ತಮ್ಮ ಸಮಾಜಸೇವೆಗಾಗಿ ನ್ಯಾಶನಲ್ ಫೌಂಡೇಶನ್ ಆಫ್ ಇಂಡಿಯಾದ “ದೇಶಸ್ನೇಹಿ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಮತ್ತು ಮಗ ಸುಘೋಷ್ ಮಕ್ಕಳ ಶಿಕ್ಷಣದಲ್ಲಿ ಪರಿಣತಿ ಹೊಂದಿದ್ದಾರೆ. ಸಂತೋಷ್ ಅವರ ಮಗ ಸುಮನಸ್‍ರವರು “ಆಕ್ಸ್ ಫರ್ಡ್ ಇಂದಿರಾಗಾಂಧಿ ವಿದ್ಯಾರ್ಥಿವೇತನ”ಕ್ಕೆ ಆಯ್ಕೆಗೊಂಡು, ಇಂಗ್ಲೆಂಡ್‍ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಜೀವವೈವಿಧ್ಯ-ಸಂರಕ್ಷಣೆ-ನಿರ್ವಹಣೆ ವಿಷಯದಲ್ಲಿ ಇದೀಗ ಎಮ್.ಎಸ್‍ಸಿ. ಮುಗಿಸಿದ್ದಾರೆ.]

ಕೌಲಗಿಯವರ ಸೇವಾಸಂಸ್ಥೆಯ ಫಲಾನುಭವಿಗಳು ಮತ್ತು ಅವರ ಸಹೋದ್ಯೋಗಿಗಳೇ ಅಲ್ಲದೇ, ಸಮಾಜದ ನಾನಾ ಸಾಮಾಜಿಕ-ವೃತ್ತಿ ಕ್ಷೇತ್ರಗಳಲ್ಲಿನ ಕಾರ್ಯಕರ್ತರು, ವಿಶೇಷವಾಗಿ ಯುವಜನರು, ಕೌಲಗಿಯವರ ನಿಚ್ಚಳ ನೋಟ, ಹೊಸ ಅಲೋಚನೆಗಳು ಮತ್ತು ಸೂಕ್ಷ್ಮ ಬದಲಾವಣೆಗಳೆಡೆಗಿರುವ ಮುಕ್ತಮನಸ್ಕತೆ, ಲೋಕಾನುಕಂಪ, ಪರಹಿತಚಿಂತನೆ ಮತ್ತು ಸರಳಜೀವನ ಶೈಲಿಯಿಂದ ಸ್ಫೂರ್ತಿ ಪಡೆದಿದ್ದಾರೆ. ಅಸಹಾಯಕರಿಗೆ-ಸಮಾಜಮುಖಿ ಪ್ರಜೆಗಳಿಗೆ ಅವರಿಂದು ದಾರಿದೀಪವಾಗಿದ್ದಾರೆ.

“ದೇಶ ಕಟ್ಟುವುದೆಂದರೆ ಅದರ ಭೌತಿಕ ಸಂರಚನೆಯೇ ಎಂದು ಭಾವಿಸಲಾಗುತ್ತದೆ. ಆದರೆ, ದೇಶವೆಂಬುದು ಅದರೊಳಗಿರುವ ಬೃಹತ್ ಮಾನವ ಸಮಾಜ. ಎಲ್ಲ ದೃಷ್ಟಿಯಿಂದಲೂ ಸಮಾಜ ಜೀವನವು ಸುಸ್ಥಿರವಾಗಿ ಇರುವಂತೆ ಸರ್ಕಾರಗಳು ಯೋಚನೆ ಮಾಡುತ್ತಿಲ್ಲ” ಎಂಬ ಕೊರಗು 80-ವರುಷಗಳ ಅನುಭವ ಶ್ರೀಮಂತ ಕೌಲಗಿಯವರಲ್ಲಿ ಇನ್ನೂ ಉಳಿದುಕೊಂಡಿದೆ.

ಪ್ರತಿಷ್ಠಿತ ಜಮ್ನಾಲಾಲ್ ಬಜಾಜ್ ಪ್ರಶಸ್ತಿಯು ಈ ವರುಷ (2014) ಸುರೇಂದ್ರ ಕೌಲಗಿಯವರನ್ನು ಅರಸಿಕೊಂಡು ಬಂದಿದೆ. ಸುರೇಂದ್ರ ಕೌಲಗಿಯವರು ಯಾರು? ಜಮ್ನಾಲಾಲ್ ಪ್ರಶಸ್ತಿ ಎಂದರೇನು? ಅದನ್ನು ಕೊಡುವವರು ಯಾರು? ಎಂಬೆಲ್ಲಾ ಪ್ರಶ್ನೆಗಳು ಬಂದು ಎರಗಿದವು. ನಿಜ, ಸುರೇಂದ್ರ ಕೌಲಗಿಯವರು ಕಾನನದ ಮಲ್ಲಿಗೆಯ ಹಾಗೆ, ಸದ್ದಿಲ್ಲದೇ ಸೌರಭವನ್ನು ಸೂಸುತ್ತಾ ತಾವು ಮಾತ್ರ ಎಲೆಯ ಮರೆಯೇ ನಿಂತವರು. ಎಲ್ಲರ ಅಚ್ಚರಿಗೆ ಕಾರಣವಾದವರು.

ಗಾಂಧೀಜಿಯ ನಿಕಟವರ್ತಿಯಾಗಿದ್ದ ಸಮಾಜ ಸೇವಾಸಕ್ತ ಜಮ್ನಾಲಾಲ್ ಬಜಾಜ್ ಅವರ ನೆನಪಿಗಾಗಿ ಅವರ ಹೆಸರಿನಲ್ಲಿ 1977ರಲ್ಲಿ ಜಮ್ನಾಲಾಲ್ ಬಜಾಜ್ ಫೌಂಡೇಷನ್ ಸಂಸ್ಥೆಯನ್ನು ಸ್ಥಾಪಿಸಲಾಯಿತು. ರಚನಾತ್ಮಕ ಸಮಾಜ ಸೇವೆ, ಗ್ರಾಮೀಣ ಕ್ಷೇತ್ರಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಈ ನೆಲೆಗಳಲ್ಲಿ ಅನುಪಮ ಸೇವೆ ಸಲ್ಲಿಸಿದವರಿಗೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಂಧೀಜಿ ಮೌಲ್ಯಗಳನ್ನು ಪ್ರತಿಪಾದಿಸಿರುವವರಿಗೆ ಈ ಪ್ರಶಸ್ತಿಯನ್ನು ಪ್ರತಿ ವರುಷ ನೀಡಲಾಗುತ್ತದೆ. ತಮ್ಮ ರಚನಾತ್ಮಕ ಸಮಾಜ ಸೇವೆಗೆ ಅಂತಹ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿರುವ ಎರಡನೆಯ ಕನ್ನಡಿಗರು ಸುರೇಂದ್ರ ಕೌಲಗಿಯವರು. ಇದು ಎಲ್ಲ ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ.
ಪ್ರಶಸ್ತಿಗಳು:

ಭಿನ್ನಚೇತನ ಮಕ್ಕಳ ಸೇವೆಗಾಗಿ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜ್ಯಪ್ರಶಸ್ತಿ
> ಸಮಾಜಸೇವೆಗಾಗಿ ಕೊಲ್ಲಾಪುರದ ಎಂ. ಐ. ಇ. ಫೌಂಡೇಷನ್‍ನ ವಿಶೇಷ ಪ್ರಶಸ್ತಿ (2007)
> ಖಾದಿ ಕೈಗಾರಿಕೆಗೆ ಸಲ್ಲಿಸಿದ ಸೇವೆಗಾಗಿ ಬೆಂಗಳೂರಿನ “ದೇಸಿ” ಟ್ರಸ್ಟ್ ನಿಂದ “ದಾಸಿಮಯ್ಯ ರಾಷ್ಟೀಯ ಪ್ರಶಸ್ತಿ” (2013)
> ಸಮಾಜ ಸೇವೆಗಾಗಿ ಮೈಸೂರಿನ ವನಮಾಲಿ ಟ್ರಸ್ಟ್ ಅವರ “ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಗೌರವಪ್ರಶಸ್ತಿ” (2014)

[*ರಾಜ್ಯಸರಕಾರದೊಡನಿದ್ದ ಭಿನ್ನಾಭಿಪ್ರಾಯಗಳಿಂದಾಗಿ ಕೌಲಗಿಯವರು 1995ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನಿರಾಕರಿಸಿದರು.]

ಮಾಹಿತಿ ಆಧಾರ: ವಿವಿಧ ಮೂಲಗಳಿಂದ ಹಾಗೂ ‘ಜನಪದ ವಿಚಾರ’, ಸೆಪ್ಟಂಬರ್ ಸಂಚಿಕೆ. 2014.

Leave a Reply