ಮಿಸ್ಯೂಹ್ ಇಬ್ರಾಹಿಂ ಆಂಡ್ ಹಿಸ್ ಸನ್

ಕೆ ನಲ್ಲ ತಂಬಿ

ಮಿಸ್ಯೂಹ್ ಇಬ್ರಾಹಿಂ (Monsieur Ibrahim) 2003ರಲ್ಲಿ ಬಿಡುಗಡೆಯಾದ 1960ರ ಕಥೆಯನ್ನು ಹೇಳುವ ಫ್ರೆಂಚ್ ಚಿತ್ರ.

ವೆನಿಸ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಸೆಸರ್ ಅವಾರ್ಡ್, ಐದು ವಿದೇಶಿ ಉತ್ತಮ ಚಿತ್ರಗಳಲ್ಲಿ ಒಂದಾಗಿ ಆಯ್ಕೆಯಾದ ಚಿತ್ರ. ಓಮರ್ ಷರೀಫ್ ಮತ್ತು Pierre Boulanger ಮುಖ್ಯ ಪಾತ್ರಗಳಲ್ಲಿ ನಟಿಸಿರುವ, Erric Emmanuel Schmitt ಬರೆದ Monsieur Ibrahim ಕಾದಂಬರಿಯ ಆಧಾರಿತ ಸಿನಿಮಾ. ಎರಡು ತಲೆಮಾರುಗಳ, ಎರಡು ಮತಗಳ, ಅಪರೂಪವಾದ ಸ್ನೇಹದ ಕಥೆ.

ಫ್ರಾನ್ಸಿನಲ್ಲಿ ‘ಅಂತಹ’ ಹೆಣ್ಣುಗಳು ವಾಸವಿರುವ ಬೀದಿಯ ಒಂದು ಅಪಾರ್ಟ್ಮೆಂಟ್ನಲ್ಲಿ ತನ್ನ ತಂದೆಯೊಂದಿಗೆ ವಾಸವಿರುವ ಮೋಸೆಸ್. ಅವನ ಅಮ್ಮನನ್ನು ನೋಡಿದ ನೆನಪು ಸಹ ಅವನಿಗಿರುವುದಿಲ್ಲ. ಹೆಂಡತಿಯನ್ನು ಬಿಟ್ಟು ಮಾನಸಿಕ ಒತ್ತಡದಲ್ಲಿ ಬದುಕುವ ತಂದೆ. ಮೋಸಸಿಗೆ ಇನ್ನೂ ಹದಿನಾರು ವಯಸ್ಸು. ತಂದೆಗೋ ಅವನ ಬಗ್ಗೆ ಅಕ್ಕರೆ ಅಷ್ಟಕ್ಕಷ್ಟೆ. ಇದರಿಂದ ಪೋಕರಿಯಾಗಿ ಅಲೆಯುತ್ತಾನೆ. ಗೋಲಕದಲ್ಲಿ ಕೂಡಿಟ್ಟ ಅಪ್ಪ ಕೊಡುತ್ತಿದ್ದ ಪುಡಿಗಾಸನ್ನು, ಮನೆಯಲ್ಲಿರುವ ಪುಸ್ತಕ ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಹೋಗಿ ಮಾರಿ, ಆ ಬೀದಿಯ ತುಂಬ ಇರುವ ಸೆಕ್ಸ್ ವರ್ಕರ್ಗಳ ಜತೆಯಲ್ಲಿ ಚಕ್ಕಂದವಾಡುತ್ತ ಹಣವನ್ನು ಪೋಲುಮಾಡುತ್ತಾನೆ.

ಅದೇ ಬೀದಿಯಲ್ಲಿ ಎಪ್ಪತ್ತಕ್ಕೂ ಮಿಗಿಲಾದ ವಯಸ್ಸಿನ ಒಬ್ಬ ತುರುಕಿಯ ಇಬ್ರಾಹಿಂ ಎಂಬ ಮುಸಲ್ಮಾನ ಒಂದು ಕಿರಾಣಿ ಅಂಗಡಿಯನ್ನು ನಡೆಸುತ್ತಿರುತ್ತಾನೆ. ಮೋಸಸ್ ಅವನ ಅಂಗಡಿಯಲ್ಲೇ ಏನನ್ನಾದರೂ ಕದಿಯುವನು. ಇದನ್ನು ನೋಡಿಯೂ ನೋಡದಂತೆ ಇರುವ ಇಬ್ರಾಹಿಂ. ಮೋಸಸ್, ಇಬ್ರಾಹಿಂ ಸ್ನೇಹ ಬೆಳೆಯುತ್ತದೆ. ಇಬ್ರಾಹಿಮಿನ ಸ್ನೇಹ ಮೋಸೆಸಿನ ಬದುಕನ್ನು ಪೂರ್ತಿಯಾಗಿ ಪಲ್ಲಟಗೊಳಿಸುತ್ತದೆ.

ಇವನನ್ನು ಒಳ್ಳೆಯ ದಾರಿಗೆ ತರಲು, ಕುರಾನಿನಲ್ಲಿರುವ ಶ್ರೇಷ್ಠ ವಿಚಾರಗಳನ್ನು ಅವನಿಗೆ ತಿಳಿಸಿಕೊಡುತ್ತಾನೆ. ಮೋಸೆಸ್ ಅದೇ ಅಪಾರ್ಟ್ಮೆಂಟಿನ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಾನೆ. ಅವನ ಕಾಮ, ಪ್ರೇಮದ ಎಲ್ಲ ಆಟವನ್ನು ಇಬ್ರಾಹಿಮಿನ ಬಳಿ ಮುಚ್ಚು ಮರೆಯಿಲ್ಲದೆ ಹೇಳಿಕೊಳ್ಳುವನು ಮೋಸೆಸ್. ಅಪ್ಪ ಕೆಲಸ ಕಳೆದುಕೊಳ್ಳುತ್ತಾನೆ. ಈ ಸಮಯದಲ್ಲಿ ಧಿಡೀರೆಂದು ಅಪ್ಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಎಂದೂ ನೋಡಿರದ ಮಗನನ್ನು ಹುಡುಕಿಕೊಂಡು ಅಮ್ಮ ಬರುತ್ತಾಳೆ. ಅವಳಿಗೆ ತನ್ನ ಪರಿಚಯವನ್ನು ಬಿಟ್ಟುಕೊಡದೆ ಅವಳನ್ನು ನಿರಾಶೆಗೊಳಿಸಿ ಕಳುಹಿಸಿಬಿಡುತ್ತಾನೆ. ಇಬ್ರಾಹಿಂ ಮೋಸಸನ್ನು ದತ್ತು ತೆಗೆದುಕೊಳ್ಳುತ್ತಾನೆ.

ಹೊಸ ಕಾರೊಂದನ್ನು ಕೊಂಡುಕೊಳ್ಳುವ ಇಬ್ರಾಹಿಂ, ಮೋಸಸನ್ನು ಕರೆದುಕೊಂಡು ತುರ್ಕಿಯಲ್ಲಿರುವ ತನ್ನ ಹಳ್ಳಿಗೆ ಪ್ಯಾರಿಸಿನಿಂದ ಕಾರಿನಲ್ಲಿಯೇ ಪಯಣಿಸುತ್ತಾರೆ. ಹಳ್ಳಿಯ ಹೊರಗೆ ಮೋಸಸನ್ನು ಇಳಿಸಿ, ತಾನು ಹಳ್ಳಿಯ ಒಳಗೆ ಹೋಗಿ ಬರುತ್ತೇನೆ ನೀನು ಇಲ್ಲೇ ಇರು ಎಂದು ಹೇಳಿ, ಹೋಗುತ್ತಾನೆ. ‘ಬಹಳ ವರ್ಷಗಳ ನಂತರ ಬರುತ್ತಿರುವೆ, ಏನು ಕಾದಿದೆಯೋ’ ಎಂದು ಹೇಳಿ ಹೋಗುತ್ತಾನೆ.

ಆಗ, ವಿಪತ್ತು ಸಂಭವಿಸಿ, ಸಾಯುವ ತರುವಾಯದಲ್ಲಿರುವ ಇಬ್ರಾಹಿಂ ಮೋಸಸನ್ನು ಹಳ್ಳಿಯ ತನ್ನ ಮನೆಗೆ ಕರೆಸಿಕೊಳ್ಳುತ್ತಾನೆ. ಅಲ್ಲಿ ಸಾವಿನ ಹಾಸಿಗೆ ಹಿಡಿದಿರುವ ಇಬ್ರಾಹಿಮನನ್ನು ನೋಡಿ ಮೋಸಸಿಗೆ ದುಃಖ ಉಮ್ಮಳಿಸಿದಾಗ, ‘ಎಲ್ಲ ನದಿಯೂ ಒಂದೇ ಸಾಗರವನ್ನು ಸೇರುತ್ತವೆ. I am not dying, joining the immensity’ ಎನ್ನುವ ಇಬ್ರಾಹಿಂ ಕೊನೆಯ ಉಸಿರೆಳೆಯುತ್ತಾನೆ. ಅವನ ಅಂಗಡಿಯನ್ನು ಮೋಸಸಿಗೆ ಉಯಿಲು ಬರೆದಿರುತ್ತಾನೆ. ಅದರಲ್ಲಿ ‘He has chosen me as his father’ ಎಂದು ಬರೆದಿರುತ್ತಾನೆ.

ಇಬ್ರಾಹಿಮಿನ ಮರಣದನಂತರ ಅವರ ಅಂಗಡಿಯನ್ನು ಅವನು ಬಹಳ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿರುವಾಗ, ಒಬ್ಬ ಸಣ್ಣ ಹುಡುಗ ಅವನ ಅಂಗಡಿಗೆ ಬಂದು ಮೋಸಸ್ ಹಿಂದೆ ಮಾಡಿದಂತೆಯೇ ಗೊತ್ತಿಲ್ಲದೆ ಕದಿಯುತ್ತಾನೆ. ಅದನ್ನು ಕಂಡೂ ಕಾಣದಂತೆ, ಒಂದು ಮುಗುಳ್ನಗುವಿನೊಂದಿಗೆ ಆ ಹುಡುಗನೊಂದಿಗೆ ಸ್ನೇಹ ಬೆಳಸುತ್ತಾನೆ.

ಮೋಸಸ್, ಇಬ್ರಾಹಿಮನಾಗಿ ಬದಲಾದದ್ದನ್ನು, ಬಹಳ ಉತ್ಕಟ ಭಾವದಿಂದ ವ್ಯಕ್ತಪಡಿಸುವ ದೃಶ್ಯ, ಮನ ಕಲಕುವುದು. ಸ್ನೇಹಕ್ಕೆ ವಯಸ್ಸು ಅಡ್ಡಿ ಇಲ್ಲ ಮತ್ತು ಉನ್ನತ ಭಾವನೆಗಳನ್ನು ಯಾರೂ ಕಲಿಸಿ ಬರುವುದಲ್ಲ. ಒಂದು ಬೀಜ ಮೊಳಕೆ ಒಡೆಯುವಂತೆ ಅದು ಸಹಜವಾಗಿ ಹುಟ್ಟಿಕೊಳ್ಳುತ್ತದೆ.

2 comments

  1. Need to watch. Thanks for the good review about the movie Nalla Thambi Sir.

Leave a Reply