ಮುಚ್ಚದಿರಲಿ ಬಾಗಿಲು..

 

 

 

  

ಸಹನಾ ಹೆಗಡೆ

 

 

 

ಕೊನೆಯ ಮೆಟ್ಟಿಲ ಮೇಲಿಟ್ಟಿದ್ದ ಒಂದು ಕಾಲು, ಸಿಕ್ಕ ಜಾಗವನ್ನು ಒತ್ತಿನಿಂತಿದ್ದರೆ ಇನ್ನೊಂದು, ಮುಚ್ಚುತ್ತಿರುವ ಬಾಗಿಲನ್ನು ತಡೆಯಲು ಶತಾಯಗತಾಯ ಒದ್ದಾಡುತ್ತಿತ್ತು. ಕೈಗಳು ಇದ್ದೆಲ್ಲ ಶಕ್ತಿಯನ್ನು ಉಪಯೋಗಿಸಿ ಬಾಗಿಲನ್ನು ದೂಡುತ್ತಿದ್ದವು. ಅಬ್ಬ! ಬಾಗಿಲನ್ನು ಮುಚ್ಚಿಯೇ ತೀರುತ್ತೇನೆಂದು ಪಣತೊಟ್ಟವನಂತೆ ಹೊರಗಿನಿಂದ ಜೋರಾಗಿ ಒತ್ತುತ್ತಿದ್ದ, “ಇಲ್ಲ, ತೆಗೆಯೋಕೆ ಕೊಡಲ್ಲ. ಎಲ್ರನ್ನೂ ಒಳಗೇ ಇಟ್ಟು ಬೆಂಕಿ ಹಚ್ತೀವಿ.” ಎಂದು ಕೂಗುತ್ತಿದ್ದ ಆ ನರಪೇತಲನಿಗಾದರೂ ಅದೆಷ್ಟು ಬಲ. ಅದು ರಟ್ಟೆಯ ಕಸುವಲ್ಲ, ಇನ್ಯಾವುದೋ ಆವೇಶ, ಆಕ್ರೋಶ.

ಹೇಗಾದರೂ ಮಾಡಿ ಬಾಗಿಲನ್ನು ಮುಚ್ಚದಂತೆ ನೋಡಿಕೊಳ್ಳಬೇಕು. ಯಂತ್ರಚಾಲಿತ ಬಾಗಿಲಿನ ನಿಯಂತ್ರಣ ಚಾಲಕ, ನಿರ್ವಾಹಕರ ಬಳಿ ಇರುತ್ತಿದ್ದು ಅವರಿಬ್ಬರನ್ನೂ ಅದಾಗಲೇ ಎಳೆದೊಯ್ದಾಗಿದೆ. ಎಲ್ಲಿಂದಲೋ ತೂರಿ ಬರುತ್ತಿರುವ ಮಾತು.. ಆಗ್ ಲಗಾದೋ.. ನಿಜವಾದರೆ! ಕಿಡಿಗೇಡಿಯೊಬ್ಬ ಕಡ್ಡಿ ಗೀರಿಯೇಬಿಟ್ಟರೆ!  ಹೊರಹೋಗುವ ಮಾರ್ಗವೇ ಇಲ್ಲವಾಗುತ್ತದೆ. ಎಲ್ಲರೂ ಸುಟ್ಟು ಬೂದಿಯಾಗಿಬಿಡುತ್ತೇವೆ. ಇಲ್ಲ, ಹಾಗಾಗಲು ಬಿಡಬಾರದು.

ಸ್ವಲ್ಪವೇ ಸಡಿಲ ಬಿಟ್ಟರೂ ಆತನ ಕೈ ಮೇಲಾಗುತ್ತಿತ್ತು. “ಅವರಿಗೆ ಇಳಿಯೋಕೆ ಬಿಡು,” ಎಂದು ಜೊತೆಯಲ್ಲಿದ್ದವರು ಹೇಳಿದರೂ ‘ಇಲ್ಲ’ ಎನ್ನುತ್ತ ಇನ್ನಷ್ಟು ಬಲವಾಗಿ ಮುಚ್ಚಲು ಪ್ರಯತ್ನಿಸುತ್ತಿದ್ದ. ಬೇರೆ ದಾರಿಯೇ ಇರಲಿಲ್ಲ. ನೇರವಾಗಿ ಆತನ ಕಣ್ಣಲ್ಲಿ ಕಣ್ಣಿಟ್ಟು ಸ್ಪಷ್ಟವಾಗಿ ಹೇಳಿಬಿಟ್ಟೆ, ‘ನೀವು ಬಾಗಿಲು ಮುಚ್ಚಲ್ಲ!!’ ಏನಾಯಿತೋ. ತಟಕ್ಕನೇ ಆತನ ಹಿಡಿತದಲ್ಲಿದ್ದ ಬಿಗಿ ಕಡಿಮೆಯಾಯಿತು. ಗುಂಪು ಸುಮ್ಮನಾಯಿತು.

ಇನ್ನು ಯಾವ ಕಾರಣಕ್ಕೂ ಮುಚ್ಚಿಕೊಳ್ಳಲು ಬಿಡಬಾರದೆಂಬ ದೃಢಸಂಕಲ್ಪದಲ್ಲಿ ಎರಡೂ ಕೈಗಳಿಂದ ಬಾಗಿಲನ್ನು ಒತ್ತಿ ಹಿಡಿದಿದ್ದೆ. ನೆರೆದಿದ್ದವರಲ್ಲಿ ಮುಖಂಡನಂತೆ ಕಾಣುತ್ತಿದ್ದ ಆ ಹಿರಿಯನ ಬಳಿ ಶಾಂತಸ್ವರದಲ್ಲಿ ಕೇಳಿದೆ. “ಭಾಯಿಸಾಬ್‌, ಆಗಿದ್ದೇನು ಅಂತ ಹೇಳಬಹುದಾ?”

“ಮೇಡಂ, ಹೀಗೆ ಮಾಡೋದು ತಪ್ಪಲ್ವಾ? ನಾವು ಇವರನ್ನ ಬಿಡಲ್ಲ. ಅಮಾಯಕರನ್ನ ಹೇಗೆ ಹೊಡೆದಿದಾರೆ ನೋಡಿ.”

“ನಾವೂ ಅಮಾಯಕರೇ ಅಲ್ವಾ? ಊರಿಗೆ ಹೋಗಲು ಬಸ್ಸು ಹತ್ತಿದ ನಮ್ಮಲ್ಲಿ ಹೆಚ್ಚಿನವರು ನಿದ್ದೆಹೋಗಿದ್ದಾರೆ. ಯಾರು ಏನು ಮಾಡಿದ್ದಾರೆ ಅಂತ ನಮಗೇನು ಗೊತ್ತಪ್ಪಾ? ಇದರಲ್ಲಿ ನಮ್ಮ ತಪ್ಪೇನಿದೆ?” ಸಿಟ್ಟು, ಭಯ, ಆತಂಕ, ಹತಾಶೆ, ಅಧಿಕಾರ, ಹಕ್ಕು, ಕರ್ತವ್ಯ, ದೈನ್ಯತೆ,.. ಯಾವುದೂ ಅಲ್ಲದ ಭಾಷೆಯಲ್ಲಿ ಮಾತನಾಡಬೇಕಿದ್ದ ಅನಿವಾರ್ಯತೆ ನನ್ನದು.

“ನೀವೇನೂ ಮಾಡಿಲ್ಲ. ಗಾಡಿ ನೋಡಿ. ಗ್ಲಾಸ್‌ ಪೂರಾ ಒಡೆದಿದಾರೆ. ಮಲಗಿದ್ದವರನ್ನು ಸ್ಕ್ರೂ ಡ್ರೈವರ್‌ನಿಂದ ತಿವಿದು ಗಾಯ ಮಾಡಿ, ಹೊರಗೆಳೆದು ಹೊಡೆದಿದಾರೆ. ಏನಾದ್ರೂ ಸರಿ. ಬಸ್ಸು ಬಿಡಲ್ಲ.”

“ನಾವೇನು ಮಾಡ್ಬೇಕು?”  ದಿಟ್ಟಿಸುತ್ತಲೇ ಪ್ರಶ್ನೆಯಿಟ್ಟೆ.

“ಕೆಳಗಿಳಿದು, ಓ ಅಲ್ಲಿ ಡಾಬಾ ಕಾಣ್ಸತ್ತಲ್ಲ, ಅಲ್ಲಿ ಕೂತ್ಗೊಳ್ಳಿ.”

“ಹೇಗೆ ಇಳಿಯೋದು ಭಯ್ಯಾ? ಹೆಂಗಸರು, ಮಕ್ಕಳು ಇದಾರೆ.”

“ನಿಮಗೇನೂ ಮಾಡಲ್ಲ ಮೇಡಂ. ಬೇಕಿದ್ರೆ ಒಳಗೇ ಕೂತ್ಗೊಳ್ಳಿ.”

ಅಂಗುಲಗಳ ಅಂತರ. ನೇರ ಮುಖಾಮುಖಿ.

“ಬೆಂಕಿ ಹಚ್ತೀವಿ ಅಂತಾರ್ರೀ. ಒಳಗ್ಹ್ಯಾಗೆ ಕೂತ್ಗೋಳೋದು?” ಬಸ್ಸಿನ ಮೂಲೆಯಿಂದೆಲ್ಲೋ ಜೀವವಿದ್ದೂ ಇಲ್ಲದಂತ ಉಲಿತ.

“ಒಳಗಾದ್ರೂ ಕೂತ್ಗೊಳ್ಳಿ, ಕೆಳಗಾದ್ರೂ ಇಳೀರಿ. ನಿಮ್ಮಿಷ್ಟ. ಎಲ್ಲಿದ್ರೂ  ನೀವು ಸುರಕ್ಷಿತವಾಗಿರ್ತೀರಿ.”

“ನಾನೀಗ ಇಳಿದರೆ, ನನ್ನ ಹಿಂದೆ ಎಲ್ರೂ ಇಳೀತಾರೆ. ಒಳಗೆ ಕೂತ್ಗೊಂಡ್ರೂ ನಿಮ್ಮ ಭರವಸೆ ಮೇಲೆ, ಹೊರಗಿಳಿದ್ರೂ ನಿಮ್ಮ ಭರವಸೆ ಮೇಲೆ. ಹೇಳಿ ಈಗ. “

“ನಿಮಗೇನೂ ಆಗಲ್ಲ. ಮಾತು ಕೊಡ್ತೀನಿ” ತುಸುವೇ ಬಾಗಿ, ಕಣ್ಣನ್ನು ಅರೆಮುಚ್ಚಿ ಹೇಳುವಾಗ ಆತನ ಬಲಗೈ ತನ್ನ ಎದೆಯ ಮೇಲಿತ್ತು.

*

ಸ್ವಾಭಾವಿಕವಾಗಿ, ಪ್ರಯಾಣದ ವೇಳೆ ನಿದ್ದೆ ಬಾರದು ನನಗೆ.  ಅಂದಂತೂ ತಂದೆಯ ಅನಾರೋಗ್ಯದ ನಿಮಿತ್ತ,  ತುರ್ತಾಗಿ ಒಬ್ಬಳೇ ಪ್ರಯಾಣಿಸುತ್ತಿದ್ದ ಕಾರಣ ತಲೆತುಂಬ ಏನೇನೋ ಆಲೋಚನೆಗಳು. ಮೂವತ್ತು ವರ್ಷಗಳ ದೀರ್ಘಾವಧಿಯ ನಂತರ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ  ಪಾಲ್ಗೊಳ್ಳುವ  ಕನಸು ಬೇರೆ ಈ ಟ್ರಿಪ್ಪಿನ ಅಂತಿಮ ಹಂತದಲ್ಲಿ ಸಾಕಾರಗೊಳ್ಳಲಿತ್ತು. ಓದು ಮುಗಿಸಿ, ಮದುವೆಯಾಗಿ, ಮಕ್ಕಳನ್ನು ಹೊತ್ತು ಹೆತ್ತು ಅವರ ‘ಗ್ರೋಯಿಂಗ್‌ ಅಪ್‌ ಏಜ್‌’ನಲ್ಲಿ  ನಿರಂತರ ಜೊತೆಗಿದ್ದು, ತಮ್ಮ ಕನಸುಗಳನೆಲ್ಲ ನನಸಾಗಿಸಿಕೊಳ್ಳುವ ಹಾದಿಯಲ್ಲಿ ಅವರು ಬಿಟ್ಟುಹೋದ ಖಾಲಿಖಾಲಿ ಗೂಡಿನೊಳಗೆ ಕೂತು ನನ್ನದೇ ಕನಸುಗಳಿಗೆ ಕಾವು ಕೊಡಬೇಕಿತ್ತು. ಎಚ್ಚರ, ನಿದ್ದೆ ಎರಡೂ ಅಲ್ಲದ ಮಂಪರಿನಲ್ಲಿ ಮನಸ್ಸು ಬದುಕಿನ ಬಿಡಿ ಬಿಡಿ ಹೂಗಳನ್ನಾಯ್ದು  ಮಾಲೆ ಕಟ್ಟುತ್ತಿತ್ತು. ಅಬ್ಬಲಿಗೆ, ಸಂಪಿಗೆ, ಗೆಂಟಿಗೆ, ರಂಜಲು..ಗಳ ವರ್ಣವೈವಿಧ್ಯಕ್ಕೆ ಗುಲಾಬಿ, ಜಾಜಿ, ಸುರಗಿ, ಸುಗಂಧರಾಜ..ಗಳ  ಘಮ ಸೇರಿ ಯಾವುದೋ ಅಮಲು ತಲೆಗೇರಿದಂತೆ… ಮನೋಲೋಕದಲ್ಲಿ ಬಿಚ್ಚಿಕೊಂಡ ಕಲ್ಪನೆಗಳಿಗೆ, ವಿಶಾಲವಾದ ಗಾಜಿನ ಕಿಟಕಿಯಿಂದಾಚೆ ತಡರಾತ್ರಿಯವರೆಗೂ ಸರಿದು ಹೋಗುತ್ತಿದ್ದ ಬೆಂಗಳೂರಿನ ತರಾವರಿ ದೃಶ್ಯಗಳು ಮತ್ತೊಂದೇ ಭಾಷ್ಯವನ್ನು ಬರೆಯುತ್ತಿದ್ದವು.

ಬೆಂಗಳೂರಿನ ಹೊರವಲಯವನ್ನು ದಾಟುವವರೆಗೂ ಸಂಚಾರ ದಟ್ಟಣೆಯ ಕಾರಣ ಬಸ್ಸು ಅದೆಷ್ಟೋ ಬಾರಿ ನಿಂತುನಿಂತು ಸಾಗುವುದು ಹೊಸತೇನಲ್ಲ. ನಿಧಾನವಾಗಿ ಬಸ್‌ ಚಲಾಯಿಸುತ್ತಿದ್ದ ಚಾಲಕನ ಸುತ್ತ ಸರಿರಾತ್ರಿಯವರೆಗೂ ಹರಟುತ್ತ ಕುಳಿತವರಲ್ಲಿ ಬದಲೀ ಚಾಲಕ, ಸಹಾಯಕನಲ್ಲದೇ, ಪರಿಚಯ, ಊರು, ನೆರೆಮನೆಯವರ ನೆಂಟರೆಂಬ ಯಾವುದೋ ಸಂಬಂಧದ ಎಳೆ ಹಿಡಿದು ಜಪ್ಪಿಸಿ  ಕುಳಿತ, ನಿದ್ದೆ ಬಾರದ ಸಂಕಟಕ್ಕೆ ಸಮಯ ಕೊಲ್ಲುತ್ತಿದ್ದ ಒಬ್ಬಿಬ್ಬರು ಪ್ರಯಾಣಿಕರೂ ಇದ್ದರು. ಬಸ್ಸು ಇನ್ನೂ ಪೂರ್ತಿ ನಿಂತಿರಲಿಲ್ಲ, ಚಲಿಸುತ್ತಿದ್ದ ಬಸ್ಸಿಳಿದ ಬದಲೀ ಚಾಲಕ ರಸ್ತೆಯಂಚಿನಿಂದ ಕಲ್ಲುಗಳನ್ನಾರಿಸಿಕೊಂಡು ಓಡಿ ಬಂದ. “ಹೊಡಿ, ಹೊಡಿ, ಓವರ್‌ಟೇಕ್‌ ಮಾಡು. ಛೇ ಕಲ್ಲು ಸರಿ ಸಿಕ್ಲಿಲ್ಲ ಮಾರಾಯ. ..ಮಕ್ಳು ಬಿಡಬಾರ್ದು ನೋಡು.” ಮಾಡಬಾರದ್ದನ್ನು ಮಾಡುತ್ತಿದ್ದಾರೆಂದು ಅನ್ನಿಸಿದರೂ ರಾತ್ರಿ ವೇಳೆ  ಹೆಣ್ಣುಮಕ್ಕಳು ಇಂಥದ್ದರಲ್ಲಿ ತಲೆಹಾಕಲು ಹೋದರೆ ಸಿಗುವ ವಿಚಿತ್ರ ಪ್ರತಿಕ್ರಿಯೆಯನ್ನು ತಿಳಿದೇ ತೆಪ್ಪಗೆ ಕುಳಿತುಬಿಟ್ಟೆ.  ಚಾಲಕ ವೇಗ ಹೆಚ್ಚಿಸಿದ್ದ. ತುಸುದೂರ ಕ್ರಮಿಸುವಷ್ಟರಲ್ಲಿ. “ನಿಲ್ಸು, ನಿಲ್ಸು..” ಅಂದಿದ್ದೇ  ನಿಂತಿರದ ಬಸ್ಸಿಳಿದು ಓಡಿದ್ದರು ಕಲ್ಲು ಹಿಡಿದಿದ್ದ ಮಹಾನುಭಾವರು.

ನಡುರಸ್ತೆಯಲ್ಲಿಯೇ ನಿಂತಿತು ಬಸ್ಸು. ಎಂಜಿನ್‌ ಇನ್ನೂ ಆರಿರಲಿಲ್ಲ. ಚಾಲಕ ಸ್ಟಿಯರಿಂಗ್‌ವ್ಹೀಲ್‌ ಹಿಡಿದು ಕುಳಿತೇ ಇದ್ದ.  ಪಕ್ಕದಲ್ಲಿ ಮರವೊಂದರ ಕೆಳಗೆ ನಿಲ್ಲಿಸಿದ್ದ ಕಾರಿನ ನಾಲ್ಕೂ ಬಾಗಿಲುಗಳು ತೆರೆದಿದ್ದವು. ಅದರಾಚೆ, ವಿಶಾಲವಾದ ಜಾಗದಲ್ಲಿ ಹೈವೇ ಪಕ್ಕದ ಡಾಬಾ. ಅಲ್ಲಿ ನಿಲ್ಲಿಸಿದ್ದ ಹಲವಾರು ಟ್ರಕ್‌ಟ್ಯಾಂಕರ್‌ಗಳಲ್ಲಿ ಒಂದರತ್ತ ಓಡಿದ ಈ ಭೂಪರು ಕಲ್ಲೆಸೆಯುತ್ತಿದ್ದರು. ಫಳ್‌ ..ಫಳ್..‌ ಫಳಾರ್.. ಒಡೆಯುವ ಗಾಜಿನ ಸದ್ದು, ಕೂಗಾಟ, ಕಿರಿಚಾಟ. ಓಡುತ್ತ ಬಂದ ಕೆಲವರು ಬಾಗಿಲು ತೆರೆದೇ ಇದ್ದ ಕಾರನ್ನೇರಿ ಹೋಗಿಬಿಟ್ಟರು. ಇನ್ನೂ ಕಲ್ಲೆಸೆಯುವ ಹುರುಪಿನಲ್ಲೇ ಇದ್ದವರು ಮತ್ತೆ ಕಲ್ಲು ಹುಡುಕಿ ಟ್ರಕ್‌ಗಳತ್ತ ಹೋಗುವಷ್ಟರಲ್ಲಿ ಆರಂಭವಾದ ಗಲಾಟೆಗೆ ಓಡಿ ಬಂದು ಬಸ್ಸನ್ನೇರಿಕೊಂಡಿದ್ದಾಯಿತು.  “ಬಿಡು, ಬಿಡು, ಬಸ್‌ ಬಿಡು.”

ಬಿಡಲು ಆಗಬೇಕಲ್ಲ! ಮುತ್ತಿಕೊಂಡ ಜನ ಸಿಕ್ಕಿದ್ದನ್ನು ಹಿಡಿದು ಬಸ್ಸಿಗೆ, ಕಿಟಕಿಗೆ ಬಡಿಯುತ್ತಿದ್ದರು. ದಢ್‌ ದಢ್‌ ದಢ್‌ .. ಕಲ್ಲು ಹೊಡೆದವರು ಬಂದು ಒಳಸೇರಿಕೊಂಡಿದ್ದಾರೆನ್ನುವುದನ್ನು ಕಂಡಿದ್ದ ಕೆಲವರು ಬಸ್ಸನ್ನೇರಿ ಅಬ್ಬರಿಸತೊಡಗಿದರು, “ಯಾರು ಈ ಕೆಲಸ ಮಾಡಿದ್ದೀರಿ, ಒಳ್ಳೆಯ ಮಾತಿನಿಂದ ಇಳಿದುಬಿಡಿ. ಇಲ್ಲದಿದ್ದರೆ, ಮುಸುಕು ಹೊದ್ದು ಮಲಗಿದವರನ್ನು  ಎಳೆದೊಯ್ಯಬೇಕಾಗುತ್ತದೆ.” ಕ್ಷಣಹೊತ್ತು ಬಸ್ಸಿನಲ್ಲಿ ಸ್ಮಶಾನ ಮೌನ. ಇದೆಲ್ಲವೂ ನಡೆದಿದ್ದು ಕೆಲವೇ ನಿಮಿಷಗಳಲ್ಲಿ. ಏನು, ಎತ್ತ ಒಂದನ್ನೂ ಅರಿಯದ ಜನ, ಕಣ್ಣು ಹೊಸಕಿ ಏಳುವಷ್ಟರಲ್ಲಿ ಲೈಟ್‌ ಹೊತ್ತಿಕೊಂಡಿತು. ಉಸಿರು ಬಿಗಿಹಿಡಿದು ಕುಳಿತ ಹೆಂಗಸರು, ಗಂಡಸರು, ಮಕ್ಕಳು. ಒಂದೊಂದು ಸೀಟನ್ನೂ ಬಿಡದೇ ಪರದೆ ಸರಿಸಿ, ಬಗ್ಗಿ ಹುಡುಕುತ್ತಿದ್ದವರ ಬಾಯಲ್ಲಿ ಅಸಹ್ಯ ಬಯ್ಗುಳ. ಮೇಲಿನ ಸೀಟೊಂದರಿಂದ ಇಣುಕಿ, “ನಾವೇನು ಮಾಡಿದೀವ್ರಿ? ಹೋಗ್ಲಿಕ್ಕೆ ಬಿಡ್ರೀ.” ತುಸು ಕೀರಲು ಸ್ವರದಲ್ಲಿ ಹೇಳಲುದ್ಯುಕ್ತನಾದವನ ಪ್ರಯತ್ನ ರಪ್ಪೆಂದು ಕೆನ್ನೆಗೆ ಬಿದ್ದ ಏಟಿಗೆ ಮುರುಟಿಹೋಯಿತು. ಹಿಂಭಾಗದಲ್ಲಿ ಸೇರಿ ಅಡಗಲು ಹವಣಿಸುತ್ತಿದ್ದ ಕಂಡಕ್ಟರ್‌ ಹುಡುಗ ಅಂಗಲಾಚುತ್ತಿದ್ದ. “ಅಣ್ಣೋ ನಾನು ಹೋಡೀಲಿಲ್ಲ. ಬಿಟ್ಟುಬಿಡಣ್ಣೋ.” ಮೈಮುಖ ನೋಡದೇ ರಪರಪನೇ ಬಿದ್ದವು ಏಟುಗಳು. “ಹೋಡೀಲಿಲ್ಲಾ?. ಹಾಗಾದ್ರೆ ತೋರ್ಸು ಯಾರು ಹೊಡೆದ್ರು ಅಂತ.” ಕತ್ತಿನ ಪಟ್ಟಿ ಹಿಡಿದೇ ಹುಡುಕಾಟ ನಡೆಸಲಾಯಿತು. ಮುಂಭಾಗದಲ್ಲೇ ಕಣ್ಣಿಗೆ ಬಿದ್ದ ಚಾಲಕನನ್ನು ಅದಾಗಲೇ ಎಳೆದೊಯ್ದು ಥಳಿಸಲಾಗುತ್ತಿತ್ತು. ಟಿವಿ, ಸಿನಿಮಾಗಳಲ್ಲಷ್ಟೇ ನೋಡಿದ್ದ, ಕೇಳಿದ್ದ ದೃಶ್ಯ ಕಣ್ಣೆದುರೇ ಅನಾವರಣಗೊಳ್ಳುತ್ತಿತ್ತು.

ಕೇವಲ ಹೆಂಗಸರಿದ್ದ ಸೀಟಾಗಿದ್ದರೆ, ತಟಕ್ಕನೇ ‘ಸ್ಸಾರಿ’ ಎಂದು, ಪರದೆಯನ್ನು ಮೊದಲಿನಂತೆ ಸರಿಸಿ, ಮುಂದುವರೆಯುತ್ತಿದ್ದವರು ಅಪ್ಪಿತಪ್ಪಿಯೂ ಅಶ್ಲೀಲ ಮಾತುಗಳನ್ನಾಡಲಿಲ್ಲ. ನನ್ನಂತೆಯೇ ಒಂಟಿಯಾಗಿ ಪಯಣಿಸುತ್ತಿದ್ದ, ಹಿಂದಿನ ಸೀಟಿನ ಮಹಿಳೆ ಅದಾಗಲೇ ಹತ್ತು ಸಾರಿ ಗಂಡನನ್ನು ಸಂಪರ್ಕಿಸಲು ನೋಡಿ, ಆಗದೇ ಶ್ರೀರಾಮ ಜಯರಾಮ, ಜಯ ಜಯರಾಮ … ಎಂದು ದೊಡ್ಡದಾಗಿಯೇ ಗುಣುಗುಡಲು ಶುರುಮಾಡಿದಾಗ ನನಗೋ ಎಲ್ಲಿಲ್ಲದ ದಿಗಿಲು. ಗಲಾಟೆ ಯಾವ ಕಾರಣಕ್ಕೆ ನಡೆಯುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ.  ಮತ್ತೆ, ಶ್ರೀರಾಮ ಜಪವೇ ಉರಿಯುವ ಬೆಂಕಿಗೆ ತುಪ್ಪವಾಗಿಬಿಟ್ಟರೆ.. ವಾತಾವರಣದಲ್ಲಿ ಬಿಗಿ.  ಬಸ್ಸೋ ಆತಂಕ, ಗೊಂದಲದ ಗೂಡು.

ಅಪರಾತ್ರಿ. ಅಪರಿಚಿತ ಪ್ರದೇಶ. ಅನಿರೀಕ್ಷಿತ, ಅಸುರಕ್ಷಿತ ಸನ್ನಿವೇಶ.

“ಆಗ್‌ ಲಗಾವೋ,” ಎಲ್ಲಿಂದಲೋ ಬಂದ ಕೂಗಿಗೆ ಪೂರ್ತಿ ಎಚ್ಚರಗೊಂಡು ಎದ್ದು ಕುಳಿತಿತು ಪ್ಯಾಸೆಂಜರ್‌ ಸಮೂಹ. ಹಾಯಾಗಿ ಮಲಗಿ ಊರು ಸೇರುವ ಕನಸಲ್ಲಿ ಸುಖನಿದ್ರೆಗೆ ಜಾರಿದ್ದ ಜನರಿಗೋ ಎಲ್ಲವೂ ಅಯೋಮಯ. ಪರಿಸ್ಥಿತಿಯನ್ನು ಇನ್ನೂ ಗ್ರಹಿಸುವುದರಲ್ಲಿಯೇ ಇದ್ದವರನ್ನು ಕರೆದು ಹುಯಿಲೆಬ್ಬಿಸಿದರೆ ಆಗುವ ಅನಾಹುತವೇ ಜಾಸ್ತಿ ಎಂದೆನಿಸಿದ್ದೇ ಎರಡನೇ ಸೀಟಿನಲ್ಲಿ ಕುಳಿತಿದ್ದ ನಾನು ನಿಧಾನಕ್ಕೆ ಪರ್ಸ್‌ ಒಂದನ್ನೇ ಹೆಗಲಿಗೇರಿಸಿಕೊಂಡು ಎದ್ದೆ. ಇಂತಹ ಸನ್ನಿವೇಶದಲ್ಲಿ ಒಳಗಿರುವುದು ಎಷ್ಟು ಮೂರ್ಖತನವೋ ಹೊರಗಿಳಿಯುವುದೂ ಅಷ್ಟೇ ಅಪಾಯಕಾರಿ ಎಂಬ ಅರಿವಿನೊಂದಿಗೆ ಇಳಿಯುವುದೋ ಬೇಡವೋ ಎಂಬ ದ್ವಂದ್ವದಲ್ಲಿಯೇ ಮೆಟ್ಟಿಲವರೆಗೆ ಬಂದು ನಿಂತಿದ್ದ ನಾನು ಬಾಗಿಲನ್ನು ಮುಚ್ಚದಂತೆ ನೋಡಿಕೊಳ್ಳುವ ಹೊಣೆಯನ್ನು ಯಾರೂ ಹೊರಿಸದೇ ಹೊತ್ತು ನಿಂತಿದ್ದೆ, ಮುಚ್ಚದಿರುವಂತೆ ನೋಡಿಕೊಂಡಿದ್ದೆ.

*

ಇದುವರೆಗೂ ಬಾಗಿಲನ್ನು ಮುಚ್ಚದಂತೆ ತಡೆದ ಬಲಗಾಲನ್ನು ಈಗ ನೆಲಕ್ಕಿಟ್ಟೆ.  ಪ್ರಯಾಣಿಕರು ಒಬ್ಬೊಬ್ಬರಾಗಿ ನನ್ನ ಹಿಂದೆಯೇ ಮೌನವಾಗಿ ಇಳಿಯತೊಡಗಿದರು. ಯಾರೋ ಕೈತೋರಿದರೆಂದು ಡಾಬಾದೆಡೆಗೆ ನಡೆಯುವ ಆತುರ ಕೆಲವರಿಗಾದರೆ ಸಿಕ್ಕ ವಾಹನವನ್ನು ಹತ್ತಿ ಊರು ಸೇರುವ ತವಕ ಉಳಿದವರಿಗೆ. ತುಸು ದೊಡ್ಡದಾಗಿಯೇ ಎಲ್ಲರನ್ನೂ ಉದ್ದೇಶಿಸಿ ಹೇಳಿದೆ.

“ಹತ್ತಿದ್ದು ಒಂದೇ ಬಸ್ಸನ್ನು. ಒಟ್ಟಿಗೇ ಇರೋಣ. ಬಂದಿದ್ದನ್ನು ಒಟ್ಟಿಗೇ ಎದುರಿಸೋಣ. ಒಬ್ಬೊಬ್ಬರು ಒಂದೊಂದು ಕಡೆಗೆ ದಯವಿಟ್ಟು ಹೋಗಬೇಡಿ. ನಂಬರ್‌ ಇದ್ದರೆ ಯಾರಾದರೂ ಬಸ್‌ನವರ ಆಫೀಸಿಗೆ ಫೋನ್‌ಮಾಡಿ ವಿಷಯ ತಿಳಿಸಿ. ಬದಲೀ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ. ಒಟ್ಟಾಗಿದ್ದರೆ ನಮ್ಮ ಆಗ್ರಹಕ್ಕೂ ಬೆಲೆ ಬರುತ್ತೆ. ಇದು ಸಂಸ್ಥೆಯ ಜವಾಬ್ದಾರಿಯೂ ಹೌದು. ಸಮಸ್ಯೆ ಬಗೆಹರಿಸಲು ಏನಾದರೂ ರಾಜೀ ನಡೆಯಬಹುದು. ಆದರೆ ಮಾತುಕತೆ ಮುರಿದು ಬಿದ್ದಲ್ಲಿ ಡಾಬಾಕ್ಕೆ ಹೋಗಿ ಕುಳಿತ ಹೆಂಗಸರು, ಮಕ್ಕಳು, ‘ಈಸೀ ಟಾರ್ಗೆಟ್’‌ ಆಗಿಬಿಡಬಹುದು. ಇಲ್ಲಾದರೆ ತೆರೆದ ರಸ್ತೆ. ವಾಹನಗಳು ಓಡಾಡುತ್ತಿವೆ. ಒಟ್ಟಿಗಿರುವುದು ಇದ್ದುದರಲ್ಲಿ ಸುರಕ್ಷಿತ. ಪೋಲೀಸ್‌ ಹೇಗೂ ಬರುತ್ತಿದ್ದಾರಂತಲ್ಲ.”

ಜನ ಗುಂಪಾಗಿ ಒಂದೆಡೆ ನಿಂತರು. ಯಾರೋ ಒಬ್ಬ ತುಸು ಐಟಿಬಿಟಿ ಉದ್ಯೋಗಿಯ ಲಕ್ಷಣ ಹೊಂದಿದ್ದ ಸದ್ಗೃಹಸ್ಥ, ಬಸ್ಸಿನವರ ಆಫೀಸಿಗೆ ಕರೆ ಮಾಡುತ್ತಿದ್ದ. ಎಮ್ಎನ್‌ಸಿಗಳ ಹವಾನಿಯಂತ್ರಿತ ವಾತಾವರಣದಲ್ಲಿ ಕ್ಯೂಬಿಕಲ್‌ನ ಸೀಮಿತ ಚೌಕಟ್ಟಿಗೆ ಒಗ್ಗಿಹೋಗಿದ್ದ ಆತನ ಸ್ವರ, ಮೆಲುದನಿಯ ಸಜ್ಜನಿಕೆಯನ್ನು ಮೀರದೆ ಮುಲುಕಾಡುತ್ತಿತ್ತು. ಕಷ್ಟಪಟ್ಟು ಫೋನ್ ಎತ್ತಿದರೂ ಆಫೀಸಿನಲ್ಲಿ ಈ ಹೊತ್ತಿನಲ್ಲಿ ಯಾವ ಹುಳವೂ ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಏನಾಗಿದೆ ಕೇಳಿದರೆ ಈತನಿಗೇನು, ಯಾರಿಗೂ ಗೊತ್ತಿರಲಿಲ್ಲ. ಎಲ್ಲಿದ್ದೀರಿ  ಕೇಳಿದರೆ ಅದೂ ತಿಳಿಯುತ್ತಿಲ್ಲ. ಜಿಪಿಎಸ್‌ ಕೆಲಸ ಮಾಡಿದರಷ್ಟೇ ನಿಂತ ನೆಲ ಯಾವುದು ಎಂಬುದನ್ನು ತಿಳಿಯಬಲ್ಲ ‘ಗ್ಲೋಬಲ್‌ ಸಿಟಿಜನ್ಸ್’ ನಾವು.

ಊಹಾಪೋಹದಲ್ಲಿ  ಮುಕ್ಕಾಲು ಗಂಟೆ ರಸ್ತೆಯ ಮೇಲೇ ಕಳೆಯಿತು. ಈ ನಡುವೆ ನನ್ನ ಗಮನಕ್ಕೆ ಬಂದಂತೆ, ಭಯಪಡುವಂತಹದೇನೂ ಜರುಗಲಿಲ್ಲ. ನಾವು ನಿಂತಿದ್ದೆಡೆ ಒಬ್ಬ ವ್ಯಕ್ತಿಯೂ ಸುಳಿಯಲಿಲ್ಲ. ಓಡಾಡುವವರೂ ಬಸ್ಸನ್ನು ಸುತ್ತಿಬಳಸಿಯೇ ಹೋಗುತ್ತಿದ್ದರು. ಆ ಹಿರಿಯ, ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳುವಂತೆಯೂ ಕಾಣುತ್ತಿತ್ತು.

ಪೋಲೀಸರು ಬಂದಿದ್ದು ನಿಜ, ಮಾತುಕತೆ- ರಾಜೀಪ್ರಕ್ರಿಯೆ ಆರಂಭಗೊಂಡಿದೆ ಎಂಬಲ್ಲಿಗೆ  ತುಸು ತಡವಾದರೂ ಸರಿ, ಇದೇ ಬಸ್ಸಿನಲ್ಲಿಯೇ ಊರು ತಲುಪಬಹುದು ಎಂಬ ಭರವಸೆಯ ಕುಡಿ ಚಿಗುರೊಡೆಯತೊಡಗಿತು.

ಹೊಟ್ಟೆಗಿಲ್ಲದೆ ಅದೆಷ್ಟು ದಿನಗಳಾದುವೋ ಎಂಬಂತಿದ್ದ ಇಬ್ಬರು ಪೋಲೀಸರು ಬಸ್ಸಿನ ಒಂದೊಂದು ತುದಿಗೆ ಒಬ್ಬೊಬ್ಬರು ಬಂದುನಿಂತರು. “ಕೂತ್ಗೊಳ್ಳಿ ಒಳಗೆ. ಬಸ್‌ ಬಿಡದಕ್ಕೆ ಹೆಂಗಿದ್ರೂ ಲೇಟಾಗತ್ತೆ,” ಎನ್ನುವಾಗ ಪೋಲೀಸಪ್ಪ ಮಾತುಕತೆಯ ಜಾಡನ್ನು ಮೂಸಿಯೇ ಬಂದಿದ್ದೇನೆ ಎನ್ನುವ ಸೂಚನೆಯ ಜೊತೆಜೊತೆಗೇ ಚಪ್ಪಟೆಯಾದ ಬಸ್ಸಿನ ಚಕ್ರಗಳತ್ತ ನಮ್ಮ ಗಮನವನ್ನು ವರ್ಗಾಯಿಸಿದ್ದ.

ಒಬ್ಬೊಬ್ಬರಾಗಿ ಬಸ್ಸನ್ನೇರತೊಡಗಿದೆವು. ಹತ್ತಿಕುಳಿತಿದ್ದೇ ಶುರುವಿಟ್ಟುಕೊಂಡ ಅಂತೆಕಂತೆಗಳ ಸಂತೆಯಲ್ಲಿ ಬರೀ ಹೆಂಗಸರದೇ ಸ್ವರ. ಹಿಂದಿನ ಸೀಟಿನಲ್ಲೆಲ್ಲೋ ಮಲಗಿದ್ದು ಈಗಷ್ಟೇ ಎದ್ದ ಮಹಾಶಯನೊಬ್ಬ ಚಪ್ಪಲಿ ಹುಡುಕಿಕೊಂಡು ಕೆಳಗಿಳಿಯಲು ಹೊರಟಿದ್ದೇ ತಡೆಯಲಾರದೆ, ”ಇಳಿಯಿರಿ, ಪರ್ವಾಗಿಲ್ಲ. ಆದರೆ, ಅಪ್ಪಿತಪ್ಪಿ ಅಧಿಕ ಪ್ರಸಂಗಿತನದ ಮಾತಾಡಿದಿರಿ ಅಂದ್ರೆ ಬಸ್ಸಿಗೆ ಬೆಂಕಿ ಬೀಳುವುದು ಗ್ಯಾರಂಟಿ.”  ಎಂದುಬಿಟ್ಟೆ,  ಬಡಪಾಯಿ. ಹೇಳುತ್ತಿರುವುದು ತನ್ನದೇ ಹೆಂಡತಿಯಾಗಿದ್ದರೆ ಏನು ಮಾಡುತ್ತಿದ್ದನೋ ಏನೋ.  ಯಾರದ್ದೋ ಹೆಂಡತಿ. ಗುಂಡು ಹೊಡೆದಂತೆ ಬೇರೆ ಮಾತನಾಡುತ್ತಿದ್ದಾಳೆ. ಇಳಿದು ಹೋಗುವ ತನಕವೂ ಆತ ನನ್ನತ್ತ ನೋಡುತ್ತಿದ್ದ ರೀತಿಯೋ!

ಗಂಟೆ ೨.೩೦. ಸುತ್ತಲಿನ ಗುಜುಗುಜು ಅಡಗುತ್ತ ಬಂದಿತು. ಇನ್ನೇನು? ತೆರಬೇಕಾದ ಮೊತ್ತವನ್ನು ನಿರ್ಧರಿಸಲು ಇಷ್ಟು ತಡವಾಗುತ್ತಿದೆ ಎಂಬ ಸತ್ಯ ಆಳಕ್ಕಿಳಿದು, ಅದರಲ್ಲಿ ಯಾರ ಪಾಲು ಎಷ್ಟಿರಬಹುದು ಎಂಬ ಆಲೋಚನೆಯೊಂದಿಗೆ ಜನ ತಲೆಯನ್ನು ಸೀಟಿಗಾನಿಸತೊಡಗಿದರು.

ರಾಜಿಯಾಯಿತು ಸರಿ. ಕೊಡಬೇಕಾದ ಹಣ, ಕಲ್ಲುಹೊಡೆದವರ ಬಳಿ ಇರಬೇಕಲ್ಲ! ಅದೇನೂ ರಸ್ತೆಯ ಪಕ್ಕದಲ್ಲಿ ಸಿಗುವುದಿಲ್ಲವಲ್ಲ!. “ಸಾಗರದಲ್ಲಿ ಇಳೀಬೇಕಾರೆ ವ್ಯವಸ್ಥೆ ಮಾಡ್ತೇವೆ,” ಎಂತಲೋ “ಸಿರ್ಸಿಯಲ್ಲಿ ನಮ್ಮ ಆಫೀಸ್‌ ಹತ್ರ ಬಂದ್ರೆ ಕೊಟ್‌ಬಿಡ್ತೇವೆ.” ಎಂತಲೋ ಅಂದಿದ್ದಕ್ಕೆ ಪ್ರಯಾಣಿಕರ ನಡುವೆಯೇ ಇದ್ದ ಸಜ್ಜನರು ಒಪ್ಪಿಕೊಂಡಿದ್ದಾಯಿತು.  ಗಾಳಿ ತುಂಬಿಸಿಕೊಳ್ಳಬೇಕಲ್ಲ. “ಮುಂದೆಲ್ಲಾದ್ರೂ ತುಂಬಿಸಿಕೊಳ್ರಿ, ಮೊದ್ಲು ಈ ಜಾಗ ಬಿಡ್ರಿ” ಪ್ರಯಾಣಿಕರ ಒಕ್ಕೊರಲ ಆಗ್ರಹ. ಕೆಲವೇ ಮೀಟರ್‌ಗಳ ದೂರ ಕ್ರಮಿಸಿದ ಮೇಲೆ (ದೂರ ಹೋಗಲು ಆಗಬೇಕಲ್ಲ!) ಅದೂ ನೆಟ್ಟಗಾಯಿತು. ಊರಿನೆಡೆ ಚಲಿಸತೊಡಗಿದ ಬಸ್ಸಿಗೆ ಈಗ ಮೊದಲಿನ ವೇಗವಿರಲಿಲ್ಲ, ಪಾನು-ಗುಟ್ಕಾ-ಸಿಗರೇಟು- ಊರಮೇಲಿನ ಹರಟೆಗಳಲ್ಲಿ ಚಾಲಕನ ಸುತ್ತಮುತ್ತ ಉಕ್ಕಿ ಹರಿಯುತ್ತಿದ್ದ ಜೀವಂತಿಕೆಯೂ ಇರಲಿಲ್ಲ. ಮಲಗಿದರೆ ನಿದ್ದೆಯ ಸುಳಿವೂ ಇಲ್ಲ.

ಟೀ ಕಾಫಿ, ಶೌಚಾಲಯಕ್ಕೆಂದು ನಿಲ್ಲಿಸಬೇಕಿದ್ದ ಜಾಗ ತಪ್ಪಿಹೋಗಿತ್ತು. ವೇಳೆಯೂ ದಾಟಿಹೋಗಿತ್ತು. “ಎಲ್ಲಿ ನಿಲ್ಲಿಸ್ತೀರಿ?”  ಪದೇ ಪದೇ ಕೆಳಗಿಳಿಯಬೇಕಾಗಿದ್ದ ಮಹಿಳೆ ಕೇಳಿದ್ದೇ ಪೆಟ್ಟು ತಿಂದು ಕಾಲುಮುದುರಿ ಕುಳಿತಿದ್ದ ಹುಡುಗ, “ಬಸ್ಸು ಅಷ್ಟು ಹೊತ್ತು ನಿಲ್ಸಿದ್ವಲ್ಲ, ಹೋಗೋಕಾಗಿಲ್ವ?” ಎಂದಿದ್ದೇ ಅವನೆದುರಿಗೆ ಬಂದು ನಿಂತೆ. “ಏನು ಮಾತಾಡ್ತೀಯಾ?  ನಿಲ್ಲಿದ್ದು ನಮ್ಮ ಅನುಕೂಲಕ್ಕಾಗಿತ್ತಾ? ಬಾಯಿಬಿಟ್ರೆ ನೋಡು. ಏನನ್ನೂ ನೋಡಿಲ್ಲ ಅಂದ್ಕೋಬೇಡ. ಟಾಯ್ಲೆಟ್‌ ಇರೋ ಜಾಗದಲ್ಲಿ ನಿಲ್ಸಿ ಅಂದರೆ ಇಳಿದು ರಸ್ತೆ ಮೇಲೆ ಹೋಗಿ ಅಂತೀಯಾ? ಹದಿನೆಂಟನೇ ಶತಮಾನದಲ್ಲಿ ಇಲ್ಲ ನಾವು. ನಿನ್ನ ತಂಗಿ, ತಾಯಿನ್ನ ಹೀಗೇ ರಸ್ತೆ ಮೇಲೆ ಕೂರಿಸ್ತೀಯಾ?” ಬಗ್ಗಿ ಮುಖದ ಹತ್ತಿರ ಮುಖ ತಂದು ತಗ್ಗಿದ ಸ್ವರದಲ್ಲಿಯೇ ಹೇಳಿದೆ. ತುಸು ದೂರ ಕಳೆದದ್ದೇ.. ಬಸ್ಸೂ ನಿಂತಿತು, ಹೊಟ್ಟೆಯೂ ಹಗುರವಾಯಿತು.

ಇದು, ಹೈವೇಗಳಲ್ಲಿ ಸಾಮಾನ್ಯವಾಗಿ ನಡೆಯುತ್ತದೆ ಎನ್ನಲಾಗುವ “ರೋಡ್‌ರೇಜ್‌” ಆಗಿತ್ತೇ? ಸೈಡ್‌ ಕೇಳಿದರೆ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಲ್ಲನ್ನು ಕೈಗೆತ್ತಿಕೊಂಡ ಪುರುಷ ಅಹಂಕಾರವಾಗಿತ್ತೇ? ಆಗಷ್ಟೇ ಕಾವೇರಿ ವಿವಾದದ ಬಿಸಿ ಆರತೊಡಗಿದ್ದ ಕಾಲ- ತಮಿಳುನಾಡು ರಿಜಿಸ್ಟ್ರೇಶನ್‌ ಹೊಂದಿದ ಟ್ರಕ್‌ ಟ್ಯಾಂಕರ್‌ಗಳನ್ನು ನೋಡಿ ಅವಕಾಶವನ್ನು ಉಪಯೋಗಿಸಿಕೊಂಡ ಸಮಾಜಘಾತುಕ ಶಕ್ತಿ ಇದರ ಹಿಂದಿತ್ತೇ? ಕಲ್ಲೆಸೆದು ಜನ, ವಾಹನಗಳಿಗೆ ಘಾಸಿ ಮಾಡಿ, ಕಾರಿನಲ್ಲಿ ಪರಾರಿಯಾದವರು ಯಾರಾಗಿದ್ದರು? ನಿರ್ದಿಷ್ಟ ಕೋಮಿನವರ ಸಂಖ್ಯೆ ಹೆಚ್ಚಾಗಿದ್ದ ಆ ಸ್ಥಳದಲ್ಲಿ ತುಸು ಹೆಚ್ಚುಕಮ್ಮಿಯಾಗಿದ್ದರೂ ಸನ್ನಿವೇಶ ಯಾವ ಬಣ್ಣವನ್ನು ಬಳಿದುಕೊಳ್ಳಬಹುದಿತ್ತು?

ಈ ಎಲ್ಲದರ ಮಧ್ಯೆ ಅಮಾಯಕನಾದ ಪ್ರಯಾಣಿಕನ ಪಾಡೇನು?

ಅಪರಾತ್ರಿ, ರಸ್ತೆಮಧ್ಯೆ ಬಿಚ್ಚಿಕೊಂಡ ನಾಟಕದ ಮಜಾ ತೆಗೆದುಕೊಳ್ಳಲು  ಕುತೂಹಲಮಾತ್ರದಿಂದ ಬಂದು ನಿಂತ ದಾರಿಹೋಕನೊಬ್ಬ ತನ್ನ ಕಿಡಿಗೇಡಿತನದಿಂದ ಹೊತ್ತಿಸಿಬಿಡಬಹುದಾಗಿದ್ದ ಕಿಡಿಯೊಂದು ನೂರಾರು ಜನರ ಜೀವವನ್ನು ಬಲಿ ತೆಗೆದುಕೊಳ್ಳುವ ಎಲ್ಲ ಸಾಧ್ಯತೆಗಳೂ ಅಲ್ಲಿದ್ದವು. ಅವರ ಕುಟುಂಬಗಳ ಕತೆಯೇನಾಗುತ್ತಿತ್ತು? ಒಂದೊಂದು ಜೀವಕ್ಕೂ ಅಂಟಿಕೊಂಡ ನೂರಾರು ಸಂಬಂಧಗಳು, ಏನೆಂದು ಸಮಾಧಾನ ಪಡಬಹುದಿತ್ತು? ಮರುದಿನ, ಸುದ್ದಿಮಾಧ್ಯಮಗಳಲ್ಲಿ ಏನೆಂದು ವರದಿಯಾಗಬಹುದಿತ್ತು? ಯಾರಿಗೆ ಯಾವ ನ್ಯಾಯ ಯಾವಾಗ ದೊರೆಯಬಹುದಿತ್ತು? ಇದು ಕೇವಲ ಮಹಿಳೆಯೊಬ್ಬಳ ಮನದೊಳಗಣ ತಳಮಳ ಮಾತ್ರವಾಗಿತ್ತೇ?…..

ಅನಗತ್ಯ ಆತಂಕಕ್ಕೀಡುಮಾಡುವುದು ಬೇಡವೆಂದು ಮೂರು ಗಂಟೆಯ ಕಾಲ ರಸ್ತೆಯ ಮೇಲೆ ಕಳೆಯಬೇಕಾಗಿ ಬಂದರೂ ಮನೆಯವರ್ಯಾರನ್ನೂ ಸಂಪರ್ಕಿಸುವ ಗೋಜಿಗೇ ಹೋಗಿರಲಿಲ್ಲ. ಬೆಳಗಾಗುತ್ತಲೇ ಶುರು ದೂರವಾಣಿ ಕರೆ. “ಎಲ್ಲಿದ್ದೇ? ಬಸ್ಸು ಎಲ್ಲೀವರೆಗೆ ಬಂತು? ಬರ್ಲಾ? ಎಲ್ಲಿ ನಿಲ್ಲಿಸ್ತ್ನಡ? ಎಂತಕ್ಕೆ ಲೇಟು?”…

“ಪಂಕ್ಚರ್‌ ಆಗಿತ್ತು. ಬಪ್ದು ಲೇಟಾಗ್ತು.” ಹೇಳುತ್ತಲೇ ಕಳೆದೆ.

ಸಿದ್ದಾಪುರದ ಪ್ರಸಿದ್ಧ ಲ್ಯಾಂಡ್‌ಮಾರ್ಕ್,‌ ‘ಮೀನುಪೇಟೆ’ ಏರನ್ನು ಬಸ್ಸು ಹತ್ತುತ್ತಿದೆ.  “ಅಲಾ, ಅದೆಲ್ಲಿದ್ರು ಮಾರಾಯ? ನೂರುಗಟ್ಲೆ ಜನ. ಅದೆಷ್ಟ್‌ ಬೇಗ ತರುಬ್‌ಬಿಟ್ರಲ!” ನೆಲಮಂಗಲ, ಅಲ್ಲಿನ ಡಾಬ ಏನಿಲ್ಲವೆಂದರೂ ೩೫೦ ಕಿಲೋಮೀಟರ್‌ ಹಿಂದೆಯೇ ಉಳಿಯಿತು ಎಂಬುದು ಗಟ್ಟಿಯಾದ ಮೇಲೆ ಸಿಬ್ಬಂದಿಗಳ ಶರೀರದಲ್ಲಿ ಮತ್ತೆ ಜೀವ ಸಂಚಾರ.

“ತರುಬದೇ ಇನ್ನೇನು ಮಾಡ್ತಾರೆ ನೀವು ಮಾಡಿದ ಘನಂದಾರಿ ಕಾರ್ಯಕ್ಕೆ?” ಬಯ್ದುಕೊಂಡೆ ಮನದಲ್ಲಿ.

ಕರೆದೊಯ್ಯಲು ಬಂದ ನನ್ನ ಅಣ್ಣನ ಮಗ, “ಮೊದಲೇ ಇಷ್ಟು ಲೇಟಾಯ್ದು.  ಡ್ರೈವರ್‌ ಹತ್ರ ಅದೇನು ಮಾತಾಡ್ತಾ ಇದ್ದಪ್ಪ!” ಎಂದು ಅಚ್ಚರಿಪಡುತ್ತಿದ್ದವ, –

“ಮೇಲೆ ಕುಳಿತಿರುವ ಭಗವಂತನಿಗೂ ಈ ಸೀಟಿನಲ್ಲಿ ಕುಳಿತುಕೊಳ್ಳುವ ನಿಮಗೂ ಹೆಚ್ಚು ವ್ಯತ್ಯಾಸವಿಲ್ಲ. ಆತ ಕೋಟ್ಯಾಂತರ ಜನರನ್ನು ಹತ್ತಿಸಿಕೊಂಡು ಹೊರಟಿದ್ದಾನೆ, ನೀವು ೪೦-೫೦ ಜನರನ್ನಷ್ಟೇ. ಈ ಜನರ ಜೀವ ನಿಮ್ಮ ಕೈಲಿದೆ, ಅವರನ್ನು ಸುರಕ್ಷಿತವಾಗಿ ನೆಲೆಮುಟ್ಟಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎನ್ನುವುದನ್ನು ಪ್ರತೀ ಬಾರಿ ಸ್ಟಿಯರಿಂಗ್‌ ವ್ಹೀಲ್‌ ಮುಟ್ಟುವಾಗಲೂ ನೆನಪಿಸಿಕೊಂಡರೆ ಇನ್ನೆಂದೂ ನೀವು ಕಲ್ಲನ್ನು ಕೈಗೆತ್ತಿಕೊಳ್ಳುವುದಿಲ್ಲ.”

-ಹೇಳಿ ತಿರುಗಿದ್ದೇ, “ಮಾತು ಅಂದ್ರೆ ಇದು ನೋಡು ಅತ್ತೇ,” ಎಂದು ತಬ್ಬಿಕೊಂಡ.

ಆಸ್ಪತ್ರೆಯಲ್ಲಿದ್ದ ಅಪ್ಪನಿಗೆ, ನೋಡಿಕೊಳ್ಳುತ್ತಿದ್ದ ಅಮ್ಮನಿಗೆ, ತಿಂಡಿಕಾಫಿ ತಂದ ಅಣ್ಣನಿಗೆ, ನೋಡಲು ಬಂದ ಆಪ್ತೇಷ್ಟರಿಗೆ ಸಾಭಿನಯವಾಗಿ ಅರುಹಲಾದ ಕತೆ ಬೆಂಗಳೂರು ತಲುಪುವಷ್ಟರಲ್ಲಿ ಗಂಟೆ ಹನ್ನೊಂದಾಗಿತ್ತು. ಗಂಡನ ಫೋನು.

“ಗೊತ್ತಾಯ್ತು ಎಲ್ಲ. ಯಾಕೆ ರಾತ್ರೀನೇ ಫೋನ್‌ ಮಾಡ್ಲಿಲ್ಲ? ವಿಚಾರಿಸ್ಕೊಳ್ತಿದ್ನಲ್ಲ.”

“ಪುಣ್ಯಾತ್ಮ, ರಾತ್ರಿ ಫೋನ್‌ ಮಾಡಿ, ನಿನ್ನ ಹತ್ತಿರ ಆತಂಕ ನೀಗಿಸಿಕೊಳ್ಳುವ ಉಪದ್ವಾಪಿತನವನ್ನೇನಾದರೂ ಮಾಡಿದ್ದರೆ, ನೆಲಮಂಗಲದ ಬಳಿ ನಿಂತಿದ್ದ ಬಸ್ಸೊಂದೇ ಅಲ್ಲ, ಕರ್ನಾಟಕದ ಒಳಹೊರಗೆ ಅಂದು ಓಡಾಡಿಕೊಂಡಿದ್ದ ಆ ಸಂಸ್ಥೆಗೆ ಸೇರಿದ ಎಲ್ಲ ಬಸ್ಸುಗಳೂ ಕರುಕಲಾಗಿರುತ್ತಿದ್ದವು. ನಿನ್ನನ್ನು ನೋಡುವುದು ನಾನಿವತ್ತ?”  ಮನದಲ್ಲೇ ಅಂದುಕೊಂಡೆ,

ಎಷ್ಟೆಂದರೂ ಹೆಂಡತಿ ಎಂದರೆ ಪ್ರೀತಿ ನೋಡಿ. ನೊಂದುಕೊಳ್ಳಬಾರದಲ್ಲ! ಬಾಗಿಲು ಮುಚ್ಚಿಕೊಳ್ಳಬಾರದಲ್ಲ!!

5 comments

  1. ಸಹನಕ್ಕ..ನೀವು ಹೇಳಿದ್ ಕೇಳಿದ್ದೆ. ಈಗ ಬರೆದದ್ದು ಓದಿದೆ. ಕಣ್ಣಿಗೆ ಕಟ್ಟುವ ನಿರೂಪಣೆ. ಬರೀತಿರಿ. ಇದು ಕಥೆಯ ರೂಪದಲ್ಲಿ ದ್ದರೆ..ಅಂತ ಯೋಚನೆ ಬಂತು.

  2. ಒಂದಷ್ಟು ಮಾಗುವ ಮೊದಲು ಕೊಯ್ಯುವ ಅವಸರವೇನತ್ತೋ!

Leave a Reply