ಚಾಲಾಕಿ ವ್ಯವಹಾರ ಇವರ ಹತ್ತಿರ ಕಲೀಬೇಕು…!

ರಾಷ್ಟ್ರೀಯ ಪ್ರಾಣಿ, ಪಕ್ಷಿ, ಹೂವು ಇರುವ ಹಾಗೇ ರಾಷ್ಟ್ರೀಯ ಕಂಪನಿ ಎಂಬುದೊಂದು ಶುರು ಆಗುವುದಿದ್ದರೆ ಅದಕ್ಕೆ ಪ್ರಥಮ ಉಮೇದುವಾರರಾಗಿರುವ ಅದಾನಿ ಬಳಗ ಆಸ್ಟ್ರೇಲಿಯಾದಲ್ಲಿ ಸಾಲ ಕೇಳಿ ಸಿಕ್ಕಿಹಾಕಿಕೊಂಡಿದೆ. ಅವರ ಹಳೆಯ ಚರಿತ್ರೆಗಳೆಲ್ಲ ಹೊರಬರತೊಡಗಿರುವಂತೆ, ಜಗತ್ತಿನಾದ್ಯಂತ ಪತ್ರಿಕೆಗಳು ಈ ಬಗ್ಗೆ ತನಿಖಾ ವರದಿಗಳನ್ನು ಪ್ರಕಟಿಸುತ್ತಿದ್ದರೆ, ಭಾರತದಲ್ಲಿ ಮಾತ್ರ ಮಾಧ್ಯಮಗಳು ‘ಅಗ್ನಿಮಾಂಧ್ಯತೆ’ಯಿಂದ ಬಳಲುತ್ತಿವೆ.

ನಂದಿಕೂರು ಸಹಿತ ಹಲವೆಡೆ ಭಾರತದಲ್ಲಿ ಉಷ್ಣವಿದ್ಯುತ್ ಸ್ಥಾವರಗಳನ್ನು ಗಾತ್ರ ಮತ್ತು ಪ್ರಮಾಣಗಳಲ್ಲಿ ಹಿಗ್ಗಿಸುತ್ತಾ ನಡೆದಿರುವ ಅದಾನಿ ಬಳಗ ಆ ಸ್ಥಾವರಗಳಿಗೆ ಅಗತ್ಯ ಇರುವ ಕಲ್ಲಿದ್ದಲನ್ನು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡಿನಲ್ಲಿರುವ ಕಾರ್ಮೈಕಲ್ ಕಲ್ಲಿದ್ದಲು ಗಣಿಗಳಿಂದ ಪಡೆಯಲು ಮತ್ತು ಅಲ್ಲಿಂದ ರೈಲು ಹಾದಿಯ ಮೂಲಕ ಸಮೀಪದಲ್ಲಿರುವ ಆಬಟ್ ಪಾಯಿಂಟ್ ಬಂದರಿಗೆ ತಂದು ಹಡಗುಗಳ ಮೂಲಕ ಭಾರತಕ್ಕೆ ತರಲು ಯೋಜಿಸಿದೆ. ಕಾರ್ಮೈಕಲ್ ಕಲ್ಲಿದ್ದಲು ಗಣಿಗಳಲ್ಲಿ ಮುಂದಿನ 60  ವರ್ಷಗಳಲ್ಲಿ2.3 ಬಿಲಿಯ ಟನ್ ಕಲ್ಲಿದ್ದಲು ಸಿಗುವ ನಿರೀಕ್ಷೆ ಅವರಿಗಿದೆ.

ಅದಕ್ಕಾಗಿ ಆಸ್ಟ್ರೇಲಿಯಾ ಸರಕಾರದ  NAIFನಿಂದ ಅದಾನಿ ಬಳಗ 700 ಮಿಲಿಯ ಅಮೆರಿಕನ್ ಡಾಲರ್ ಗಳ ಸಾಲ ಕೇಳಿದ್ದು, ಅದಕ್ಕೆ ಶರತ್ತುಬದ್ಧ ಮಂಜೂರಾತಿ ಸಿಕ್ಕಿದೆ ಎಂಬ ಸುದ್ದಿ, ಆಸ್ಟ್ರೇಲಿಯಾದಲ್ಲಿ ಪರಿಸರ ಪ್ರಿಯರ ಮತ್ತು ನಾಗರಿಕರ ಶಾಂತಿ ಕೆಡಿಸಿರುವುದೇ ಈಗ ಮತ್ತೊಮ್ಮೆ ಅದಾನಿ ಬಳಗ ಜಾಗತಿಕ ಮಟ್ಟದಲ್ಲಿ ಹೊಸದಾಗಿ ಸುದ್ದಿ ಆಗುತ್ತಿರುವುದಕ್ಕೆ ಮೂಲ ಕಾರಣ.

ಈ ಸಾಲ ದೊರೆತು, ಅದಾನಿ ಬಳಗ ಕಾರ್ಮೈಕಲ್ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಆರಂಭಿಸಿದರೆ, ಅದರಿಂದ ಪರಿಸರ ಸೂಕ್ಷ್ಮ ತಾಣವಾಗಿರುವ ಗ್ರೇಟ್ ಬ್ಯಾರಿಯರ್ ರೀಫ್ ಗೆ ಹಾನಿ ಆಗಲಿದೆ, ಈ ಕಲ್ಲಿದ್ದಲು ಹೊರಹೊಮ್ಮಿಸಲಿರುವ ಹೊಗೆ ಆಸ್ಟ್ರೇಲಿಯಾದಲ್ಲಿ ಹಾಲೀ ಇರುವ ಹೊಗೆಯ ಒಟ್ಟು ಪ್ರಮಾಣದ 1.3 ಪಟ್ಟು ಹೆಚ್ಚಿರಲಿದೆ, ಪ್ರತೀ ವರ್ಷ 12 ಬಿಲಿಯ ಲೀಟರ್ ನೀರು ಹೆಚ್ಚುವರಿ ಬಳಕೆ ಆಗಲಿದೆ ಎಂಬೆಲ್ಲ ಲೆಕ್ಕಾಚಾರಗಳು ಆಸ್ಟ್ರೇಲಿಯನ್ನರ ನಿದ್ದೆಕೆಡಿಸಿವೆ. ಹಾಗಾಗಿ ಅದಾನಿ ಬಳಗದ ಹಳೆಯ ಚರಿತ್ರೆಗಳನ್ನೆಲ್ಲ ಒಕ್ಕಿಹೊರತೆಗೆಯುವ ಕೆಲಸ ಆಸ್ಟ್ರೇಲಿಯನ್ ಮಾಧ್ಯಮಗಳಿಂದ ನಡೆಯಲಾರಂಭವಾಗಿದೆ.

ಹೀಗೆ ದೊರೆತ ಹತ್ತಾರು ಸಂಗತಿಗಳ ಪೈಕಿ ಒಂದೇ ಒಂದು ಸಂಗತಿಯನ್ನು ನಿಮ್ಮೆದುರು ಬಿಡಿಸಿಟ್ಟರೆ, ನಮ್ಮ ಸರಕಾರದ ಅತ್ಯಂತ ಪ್ರೀತಿಯ ಕಾರ್ಪೋರೇಟ್ ಗಳಲ್ಲಿ ಒಂದಾದ ಅದಾನಿ ಬಳಗದ ಪೂರ್ಣ ಪರಿಚಯ ಆದೀತು.

2014ರ ಮೇ ತಿಂಗಳಲ್ಲಿ ಅದಾನಿ ಬಳಗಕ್ಕೆ ಕೇಂದ್ರ ಸರಕಾರದ ಕಂದಾಯ ಗುಪ್ತಚರ ನಿರ್ದೇಶನಾಲಯದಿಂದ (Directorate of Revenue Intelligence) ಕಾರಣಕೇಳಿ ನೋಟೀಸ್ ಒಂದು ಹೋಗಿದ್ದು, ಆ ನಿಟ್ಟಿನಲ್ಲಿ ಜಾರಿ ನಿರ್ದೇಶನಾಲಯ (Enforcement Directorate) ಸೇರಿದಂತೆ ಹಲವು ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಬಿರುಸಿನ ತನಿಖೆ ನ….ಡೆ….ಯು….ತ್ತಿ…ದೆ…ಯಂತೆ! ಪ್ರಧಾನಮಂತ್ರಿಗಳು ಸ್ವತಃ ಸ್ವಾತಂತ್ರ್ಯ ದಿನದಂದು ಕಪ್ಪು ಹಣ, ಶೆಲ್ ಕಂಪನಿಗಳ ವಿರುದ್ಧ ಘೋಷಿಸಿರುವ ಸಮರದ ಹಿನ್ನೆಲೆಯಲ್ಲಿ ಈ ಹಳೆಯ ಪ್ರಕರಣ ಕುತೂಹಲ ಕೆರಳಿಸುತ್ತಿದೆ. ಪ್ರಕರಣ ಇನ್ನೂ ತನಿಖೆಯ ಹಂತದಲ್ಲೇ ಇರುವುದು ಗಮನಾರ್ಹ.

ಕಾಸು ಹುಟ್ಟಿಸುವ ಕಥೆ!

ಇದು 2010ರ ಕಥೆ. ಮಹಾರಾಷ್ಟ್ರದ ಈಶಾನ್ಯ ಭಾಗದಲ್ಲಿ ವಿದ್ಯುತ್ ಪ್ರಸರಣ ಜಾಲವನ್ನು ಸ್ಥಾಪಿಸುವ ಕಾಮಗಾರಿಯು ಅದಾನಿ ಒಡೆತನದ Maharashtra Eastern Grid Power Transmission Company Limited (MEGPTCL) ಗೆ ಸಿಗುತ್ತದೆ. ಅದಕ್ಕೆ ಅಗತ್ಯ ಇರುವ ಉಪಕರಣಗಳನ್ನು ಖರೀದಿಸಿದ ಚಾಲಾಕಿತನದಲ್ಲೇ ಕೋಟ್ಯಂತರ ಡಾಲರುಗಳ ಹಗರಣ ಇದೆ ಎಂಬುದು DRI ಶೋಕಾಸ್ ನೋಟೀಸಿನ ಹೂರಣ. ಅದನ್ನು ಬಹಳ ಸರಳವಾಗಿ ಹೀಗೆ ವಿವರಿಸಬಹುದು.

೧. ದುಬಾಯಿ ಮೂಲದ ಕಂಪನಿಯೊಂದು ಚೀನಾದಿಂದ 3,29,586 ಅಮೆರಿಕನ್ ಡಾಲರ್ ಗಳನ್ನು ತೆತ್ತು ವಿದ್ಯುತ್ ಪ್ರಸರಣ ಜಾಲಕ್ಕೆ ಅಗತ್ಯ ಇರುವ ಉಪಕರಣಗಳನ್ನು ಖರೀದಿಸುತ್ತದೆ.

೨. ದುಬಾಯಿ ಕಂಪನಿ ಖರೀದಿಸಿದ ಸರಕು ದುಬಾಯಿಗೆ ಹೋಗುವ ಬದಲು ಭಾರತದಲ್ಲಿ ಅದಾನಿ ಕಂಪನಿಗೆ ಬಂದು ತಲುಪುತ್ತದೆ.

೩. ಅದಾನಿ ಕಂಪನಿ ವಿವಿಧ ಬ್ಯಾಂಕುಗಳಲ್ಲಿ ಸಾಲ ಪಡೆದು, ಸುಮಾರು 42,85,010 ಅಮೆರಿಕನ್ ಡಾಲರ್ ಗಳನ್ನು (ಮೂಲ ದರಕ್ಕಿಂತ 1300% ಹೆಚ್ಚು) ದುಬಾಯಿ ಕಂಪನಿಗೆ ತೆರುತ್ತದೆ.

೪. ಈ ದುಬಾಯಿ ಮೂಲದ ಕಂಪನಿಯು ಮಾರಿಷಸ್ ನಲ್ಲಿರುವ ಅದಾನಿ ನಿಯಂತ್ರಣದ ಟ್ರಸ್ಟ್ ಒಂದರ ಮಾಲಕತ್ವದಲ್ಲಿರುವ ಕಂಪನಿ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಭಾರತದಲ್ಲಿರುವ ಅದಾನಿ ಗುಂಪಿನ ಹಣವನ್ನು ಹಲವು ಶೆಲ್ ಕಂಪನಿಗಳ ಮಾಲಕತ್ವದಲ್ಲಿರುವ ದುಬಾಯಿ ಕಂಪನಿಯೊಂದರ ಮೂಲಕ ಮಾರಿಷಸ್ ಗೆ ಸಾಗಿಸಲಾಗಿದೆ ಎಂಬುದು ನೋಟೀಸಿನ ಆಪಾದನೆ. ಮಾರಿಷಸ್ ಟ್ರಸ್ಟಿನ ಮಾಲಕತ್ವ ಇರುವುದು ಗೌತಮ್ ಅದಾನಿ ಅವರ ಹಿರಿಯಣ್ಣ ವಿನೋದ್ ಅದಾನಿ ಎಂಬ ಉದ್ಯಮಿಯ ಕೈಯಲ್ಲಿ.

ಇದು ಪ್ರಕರಣದ ಒಂದು ಮಗ್ಗುಲಾದರೆ, ಸಾರ್ವಜನಿಕರಿಗೆ ವಿದ್ಯುತ್ ದರಗಳು ನಿಗದಿ ಆಗುವುದು, ಯೋಜನೆಗೆ ಆಗಿರುವ ಖರ್ಚನ್ನು ಆಧರಿಸಿ ಆದುದರಿಂದ, ಅದಾನಿ ಬಳಗ ಉದ್ದೇಶಪೂರ್ವಕವಾಗಿ ಉಪಕರಣಗಳ ಬೆಲೆಯನ್ನು ಹೆಚ್ಚಿಸಿ ಖರೀದಿಸಿರುವುದರಿಂದಾಗಿ ಮಹಾರಾಷ್ಟ್ರದ ಸಾರ್ವಜನಿಕರು ಅನಾವಶ್ಯಕವಾಗಿ ಹೆಚ್ಚು ದರನೀಡಿ ವಿದ್ಯುತ್ ಖರೀದಿಸುವಂತಾಗಿದೆ ಎಂಬ ದೂರು ಕೇಳಿಬಂದಿದೆ.

ಹೆಚ್ಚಿನ ಓದಿಗಾಗಿ:

DRI  ನೋಟೀಸಿನ ಆಯ್ದ ಭಾಗಗಳು ಇಲ್ಲಿವೆ: https://www.scribd. com/document/356317230/Adani- document

Leave a Reply