fbpx

ಅರ್ಧಕ್ಕೆ ಕತೆ ನಿಲ್ಲಿಸಿ ಹೋದ ಕತೆಗಾರ..


 

 

ಡಾ.ಬಸು ಬೇವಿನಗಿಡದ

 

 

ಅಂದು ಮಂಗಳವಾರ, ಸಪ್ಟಂಬರ್ 6, 2016. ನಾನು ಕಾರವಾರದಲ್ಲಿದ್ದೆ. ಸುಮ್ಮನೆ ಫೇಸಬುಕ್ ಮೇಲೆ ಕಣ್ಣಾಡಿಸುತ್ತಿದ್ದೆ. ಆಗ ಒಮ್ಮಿಂದೊಮ್ಮೆಲೆ ಅಪ್‍ಡೇಟ್ ಆದ ಸುದ್ದಿಯೊಂದು ಕಾಣಿಸಿಕೊಂಡಿತು. ಪ್ರಹ್ಲಾದ ಅಗಸನಕಟ್ಟೆ ಅವರ ಫೋಟೋದೊಂದಿಗೆ ಕಾಣಿಸಿಕೊಂಡ ಆ ಸುದ್ದಿಯನ್ನು ನನಗೆ ಇದುವರೆಗೂ ಅರಗಿಸಿಕೊಳ್ಳಲು ಆಗಿಲ್ಲ.

ಸಾವು ಮತ್ತು ಸಾವಿನ ಸುದ್ದಿಯೊಂದು ಇಷ್ಟೊಂದು ಹಠಾತ್ತವೂ ಕಠೋರವೂ ಆಘಾತಕಾರಿಯೂ ಆಗಿರಬಲ್ಲುದು ಎಂಬುದು ನನಗೆ ಮೊದಲ ಬಾರಿಗೆ ಅನುಭವಕ್ಕೆ ಬಂದಿತು.

ದಿಗ್ಭ್ರಮೆ ಹಾಗೂ ದುರಂತವೆಂದರೇನೆಂದು ಮೈಮನಗಳಲ್ಲಿ ಹುಟ್ಟಿಸಬಲ್ಲ ಇಂತಹ ಭಯಾನಕ ಸುದ್ದಿಯನ್ನು ತಂದುಕೊಟ್ಟ ಆ ಸಾಮಾಜಿಕ ಜಾಲತಾಣದಲ್ಲಿಯೆ ಪ್ರಹ್ಲಾದರ ಕಥೆಗಳಿಗೆ ಸಾವಿಲ್ಲ ಎಂಬ ಒಂದರೆಡು ಸಾಲಿನ ಬರಹವನ್ನು ನನ್ನ ಗೋಡೆಗೆ ಅಂಟಿಸಿ ಎಷ್ಟೋ ದಿನಗಳವರೆಗೆ ನಾನು ಫೇಸಬುಕ್ಕನ್ನು ನೋಡಲಿಲ್ಲ. ಎರಡು-ಮೂರು ದಿನಗಳವರೆಗೆ ನನಗೆ ಸುಂದು ಬಡಿದಂತೆ ಆಗಿತ್ತು. ಖಿನ್ನತೆ, ನಿರುತ್ಸಾಹ ತುಂಬಿಕೊಂಡಿತು. ಯಾವುದರಲ್ಲಿಯೂ ಮನಸ್ಸಿರಲಿಲ್ಲ. ಯಾವ ಗೆಳೆಯರ ಹತ್ತಿರ ಮಾತನಾಡಿದರೂ ದುಗುಡ ದೂರವಾಗಲಿಲ್ಲ. ಇದು ಕೇವಲ ನನ್ನೊಬ್ಬನ ಅನುಭವವಾಗಿರಲಿಲ್ಲ. ಪ್ರಹ್ಲಾದರ ನೂರಾರು ಸ್ನೇಹಿತರಿಗೆ ಆ ತರಹದ ನೋವು- ನಿರಾಸೆ ತುಂಬಿಕೊಂಡಿತ್ತು.

ಪ್ರಹ್ಲಾದರ ಹಠಾತ್ ಅಗಲಿಕೆ ವಿದ್ಯುತ್ ಶಾಕ್ ತಗುಲಿದಂತೆ ಇತ್ತು. ನನ್ನ ಎಫ್‍ಬಿ ಪೋಸ್ಟ್ ಗೆ ಎಷ್ಟೋ ಹಿರಿಯರು ಅಯ್ಯೋ ದೇವರೆ, ನಾನೆಂಥ ಕೆಟ್ಟ ಸುದ್ದಿಯನ್ನು ಕೇಳುತ್ತಿದ್ದೇನೆ ಎಂದು ಉದ್ಗರಿಸಿದ್ದರು. ಇನ್ನೂ ಕೆಲವರು ಈ ಸುದ್ದಿ ಹೇಗಾದರೂ ಸುಳ್ಳಾಗಿ ಪರಿಣಮಿಸಲಿ ಎಂದು ತಾವು ನಂಬಿದ ದೈವದಲ್ಲಿ ಬೇಡಿಕೊಂಡರು. ಬಾಳಾಸಾಹೇಬ ಹೇಳಿದ: ’ಅತ್ತು, ಕರಗಿ ಕೂತಿದ್ದೇನೆ. ಗೆಳೆಯ ಇನ್ನಿಲ್ಲ ಎಂದರೆ ನಂಬುವುದು ಹೇಗೆ?’ ದೂರದ ಡೋಣೂರ ದು:ಖದಲ್ಲಿ ಹೇಳಿದ: ’ಇದು ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾರಸ್ವತ ಲೋಕಕ್ಕೆರಗಿದ ದೊಡ್ಡ ಆಘಾತ.’ ಗೆಳೆಯರು, ಸಂಬಂಧಿಕರು ಅಳುತ್ತಿದ್ದರು. ಪ್ರಹ್ಲಾದರು ಮಾತ್ರ ಭೌತಿಕವಾಗಿ ಪಂಚಭೂತಗಳಲ್ಲಿ ಲೀನವಾಗುತ್ತಿದ್ದರು.

ಸಾಗುವ ದಿನಗಳನ್ನು ಹಿಡಿದು ನಿಲ್ಲಿಸಲು ಸಾಧ್ಯವಿಲ್ಲವೆಂದೇ ಅಗಸನಕಟ್ಟೆ ಇಲ್ಲದ ವರ್ಷವೊಂದು ಉರುಳಿದೆ. ಆದರೆ ಅವರ ಅಕಾಲ ನಿಧನದ ನಿರ್ವಾತ ಕನ್ನಡ ಸಾಹಿತ್ಯಲೋಕವನ್ನು ಅದರಲ್ಲೂ ಮುಖ್ಯವಾಗಿ ಕನ್ನಡ ಕಥಾಲೋಕವನ್ನು ಕಾಡಿದೆ. ಯಾಕೆಂದರೆ ಅವರು ಕನ್ನಡ ಕತೆಗಳ ಒಂದು ಅವಿಭಾಜ್ಯ ಅಂಗವಾಗಿದ್ದರು.

ಪ್ರಹ್ಲಾದ ಅಗಸನಕಟ್ಟೆ ಅವರ ವಿಶಿಷ್ಟತೆಯಿರುವುದು ಒಂದೇ ತೆರನಾದ ವಿಷಯ ಹಾಗೂ ತಂತ್ರಗಳಿಗೆ ಜೋತು ಬೀಳದೆ ವೈವಿಧ್ಯಮಯವಾದ ಕತೆಗಳನ್ನು ತಮ್ಮ ಅನುಭವಗಳ ಆಧಾರದ ಮೇಲೆ ಅವರು ಬರೆಯಬಲ್ಲರೆಂಬ ಸಂಗತಿಯಲ್ಲಿ. ಒಂದು ಕತೆಯ ಕೇಂದ್ರದಿಂದ ಮತ್ತೊಂದು ಕತೆಯ ಅಷ್ಟೇ ವಿರುದ್ಧವಾದ ಕೇಂದ್ರಕ್ಕೆ ಅವರು ಜಿಗಿಯಬಲ್ಲರು. ಅಂದರೆ ಚರ್ವಿತ ಚರ್ವಣವನ್ನೆ ಅವರು ತಮ್ಮ ಕತೆಗಳಲ್ಲಿ ಉಣಬಡಿಸಲಿಲ್ಲ. ಜಾಳು ಜಾಳಾಗಿ ಕಥಾನಕ್ಷೆಯನ್ನು ಹೊಂದಿಸಲಿಲ್ಲ. ಕತೆಯ ಜಯಾಪಜಯಗಳನ್ನು ಕತೆಗಾರ ತಳುಕು ಹಾಕಿಕೊಳ್ಳುತ್ತಿರಲಿಲ್ಲ. ಹೀಗಾಗಿಯೇ ಅಂಬೇಡ್ಕರ್ ಅವರೊಂದಿಗೆ ಅನುಸಂಧಾನ ಮಾಡುತ್ತಲೇ ಮನುಷ್ಯನಿಗೆ ತಗುಲಿಹಾಕಿಕೊಳ್ಳುವ ಮಾಯೆಯ ವೈಚಿತ್ರಗಳನ್ನು ನಿರ್ವಹಿಸಬಲ್ಲರಾಗಿದ್ದರು.

ದಲಿತ ಬಂಡಾಯದ ಸೆಳಕುಗಳಲ್ಲಿ ಹಾದು ಬಂದಿದ್ದ ಅವರು ಆ ಉದ್ವೇಗವನ್ನು ಮೀರಿ ತುಂಬ ಮೃದುತ್ವ, ಮಾನವೀಯತೆಯ ತಳಪಾಯದ ಮೇಲೆ ನಿತಾಂತವಾಗಿ ಕಥಾರಚನೆ ಮಾಡಿದರು. ಮೂರು ದಶಕಗಳ ಕಾಲ ಅದರ ಒಡನಾಡಿಯಾಗಿ ಕನ್ನಡ ಕತೆಗಳು ಪಡೆದುಕೊಂಡ ಕೆಲವು ಹೊಸ ಸಂವೇದನೆ, ವಿಸ್ತಾರಗಳಿಗೆ ಅವರು ಕಾರಣರಾಗಿದ್ದರು. ಅವರಲ್ಲಿ ಅಷ್ಟೇ ಅಲ್ಲ, ತಮ್ಮ ಸ್ನೇಹಿತರಲ್ಲಿಯೂ ಅಂತಹ ಹೊಳಹುಗಳನ್ನು ಅವರು ಮೂಡಿಸಬಲ್ಲವರಾಗಿದ್ದರು. ನಾನು ಸೇರಿದಂತೆ ಬಾಳಾಸಾಹೇಬ ಲೋಕಾಪುರ, ಕಂನಾಡಿಗ ನಾರಾಯಣ, ಡಿ.ಎಸ್. ಚೌಗಲೆ, ಸುನಂದಾ ಕಡಮೆ, ಎಸ್.ಬಿ. ಜೋಗುರ, ಚನ್ನಪ್ಪ ಅಂಗಡಿ, ಯಶವಂತ ಹರಗಿ, ಮಹಾಂತೇಶ್ ನವಲಕಲ್, ಬಸವರಾಜ ಡೋಣೂರ, ಗೊರವರ್. ಮಹಾಂತಪ್ಪ ನಂದೂರ, ಸಿ.ಎಮ್.ಮುನಿಸ್ವಾಮಿ, ಕುಮಾರ ಬೇಂದ್ರೆ, ಕಲ್ಲೇಶ್ ಕುಂಬಾರ, ಚಿದಾನಂದ ಮುಂತಾದ ಲೇಖಕರು, ಕತೆಗಾರರು ಅವರೊಡನೆ ಸದಾ ಕಾಲ ಸಂವಾದದಲ್ಲಿರುತ್ತಿದ್ದೆವು.

ಪ್ರಹ್ಲಾದರೊಡನೆ ಚಹಾ ಕುಡಿದ ದಿನಗಳಿಗೆ ಲೆಕ್ಕವಿಲ್ಲ. ಎಷ್ಟೋ ಕಾರ್ಯಕ್ರಮಗಳಿಗಾಗಿ ನಾನು ಕೆಲಸ ಮಾಡುವ ಧಾರವಾಡ ಆಕಾಶವಾಣಿಗೆ ಅವರು ಬಂದರು. ನಮ್ಮ ತುರ್ತು ಪ್ರಸಾರಗಳಿಗೆ ಯುದ್ಧಕ್ಕೆ ಸಿದ್ಧನಾಗಿ ನಿಂತ ಸೈನಿಕನಂತೆ ಅವರು ಸದಾ ಸನ್ನದ್ಧರಾಗಿರುತ್ತಿದ್ದರು. ಅಗಸನಕಟ್ಟೆಗೆ ಕಾರ್ಯಕ್ರಮ ಕೊಟ್ಟಿದ್ದೇನೆ ಎಂದು ನಾನು ಹೇಳಿದರೆ ಸಾಕು, ಅಥವಾ ಅವರು ಹೆಸರಿನ ಫೈಲನ್ನು ಮುಂದು ಮಾಡಿದರೆ ಸಾಕು ಕಾರ್ಯಕ್ರಮ ಕಾಂಟ್ರ್ಯಾಕ್ಟಿಗೆ ನಮ್ಮ ಎಲ್ಲ ಆಕಾಶವಾಣಿ ನಿರ್ದೇಶಕರು ಕಣ್ಣು ಮುಚ್ಚಿ ಸಹಿ ಮಾಡುತ್ತಿದ್ದರು. ಅಂದರೆ ಅಷ್ಟೊಂದು ವಿಶ್ವಾಸವನ್ನು ಪ್ರಹ್ಲಾದರು ಗಳಿಸಿಕೊಂಡಿದ್ದರು. ಬರುತ್ತೇನೆಂದು ಹೇಳಿದ ದಿನಾಂಕ ಹಾಗೂ ಸಮಯಕ್ಕೆ ಹಾಜರಿರುತ್ತಿದ್ದುದು ಅವರ ಮತ್ತೊಂದು ಗುಣವಾಗಿತ್ತು. ಇದು ಕರೆದವನಿಗೂ ಕರೆಯಿಸಿಕೊಂಡವನಿಗೂ ಶೋಭೆಯನ್ನು ತಂದು ಕೊಡುವ ಮಾತು. ಹಾಗೆಯೇ ಇದು ಒಬ್ಬ ಲೇಖಕ ಗಳಿಸಿಕೊಂಡ ಕಾರ್ಯದಕ್ಷತೆ, ಶಿಸ್ತು ಹಾಗೂ ಸಮಯಪ್ರಜ್ಞೆಗೆ ಉದಾಹರಣೆಯಾಗಿತ್ತು.

ಯಾವುದೇ ವಿಷಯದಲ್ಲಿಯೂ ಅವರು ಕರಾರುವಾಕ್ಕಾಗಿ ಮಾತನಾಡಬಲ್ಲವರಾಗಿದ್ದರು. ಕತೆಯಷ್ಟೇ ಅಲ್ಲ, ವಿಮರ್ಶೆಯಲ್ಲಿಯೂ ಅವರು ತುಂಬ ಕೆಲಸ ಮಾಡಿದರು. ‘ಎದುರುಬದರು’, ‘ಕಳಕಳಿ’, ‘ಕುತೂಹಲ’, ‘ಆಸುಪಾಸು’, ‘ಅಂತ:ಕರಣ’- ಇವು ಅವರ ವಿಮರ್ಶಾ ಪುಸ್ತಕಗಳ ಕೆಲ ಹೆಸರುಗಳು. ನಿಜವಾಗಿ ನೋಡಿದರೆ ಅವು ಪ್ರಹ್ಲಾದರ ಅನ್ವರ್ಥಕ ನಾಮಗಳಾಗಿದ್ದವು. ಇದ್ದುದನ್ನು ಇದ್ದಂತೆ ಹೇಳುವುದು, ಅದೂ ಎದುರುಬದರೇ ಹೇಳುವುದು ಅವರ ಒಂದು ಮುಖ್ಯ ಗುಣವಾಗಿತ್ತು.

ಅಗಸನಕಟ್ಟೆ ಕೊನೆಯತನಕವೂ ನಮ್ಮ ಆಸುಪಾಸಿನಲ್ಲಿಯೇ ಇದ್ದರು ಮತ್ತು ಸಹಲೇಖಕರಿಗೆ ಅವರು ಸದಾ ಅಂತ:ಕರಣ ಹರಿಸುತ್ತಿದ್ದರು. ಎಷ್ಟೋ ಲೇಖಕರನ್ನು ಅವರು ಬೆಳೆಸಿದರು. ವ್ಯಾಪಾರಿ ಊರು ಎಂದೇ ಹೆಸರಾಗಿದ್ದ ಹುಬ್ಬಳ್ಳಿಯಲ್ಲಿ ಸಾಹಿತ್ಯದ ಕಲರವ ಹರಡುವಂತೆ ಅವರು ಪರಿಶ್ರಮಪಟ್ಟರು.

ಕತೆ ಬರೆಯದ ದಿನಗಳಲ್ಲಿ ಅವರು ಇತರ ಗೆಳೆಯರ ಪುಸ್ತಕಗಳಿಗೆ ಮುನ್ನುಡಿಯೋ, ಹಿನ್ನುಡಿಯೋ ಬರೆಯುವುದರಲ್ಲಿ ನಿರತರಾಗಿರುತ್ತಿದ್ದರು. ಭಾಗಿಯಾಗಬೇಕಾದ ಸಾಹಿತ್ಯಕ ಕಾರ್ಯಕ್ರಮಗಳಿಗೆ ಟಿಪ್ಪಣಿ ಜೋಡಿಸಿಕೊಳ್ಳುತಿದ್ದರು. ಅವರಿಗೆ ಬೇಸರವಾಯಿತೆಂದಾಗ ‘ಬಸು, ಧಾರವಾಡಕ್ಕ ಬರಾಕಹತ್ತೇನಿ.. ಸಿಗೋಣ್ವ? ಜೋಗುರಗೆ ಹೇಳೇನಿ. ನೀವು ಆಫೀಸಿಂದ ಸೀದಾ ಹೊಯ್ಸಳ ಹೊಟೇಲಿಗೆ ಬರ್ರಿ.’ ಎಂದು ಫೋನ್ ಮಾಡುತ್ತಿದ್ದರು. ಬೃಂದಾವನ ಹೊಟೇಲಿನ ಮಸಾಲೆ ದೋಸೆ, ಪಿಡಬ್ಲುಡಿಯ ಪಡ್ಡ್, ಕಾಮತದ ವಡಾ, ರೋಡಸೈಡಿನ ಚಹಾ-ಸಿಗರೇಟು ಅವರಿಗೆ ತುಂಬ ಇಷ್ಟವಾಗುತ್ತಿದ್ದವು.

ಊಟ-ತಿಂಡಿಗಳಿಗಿಂತ ಸ್ನೇಹಿತರ ಒಡನಾಟ ಅವರಿಗೆ ಬಹಳ ಹಿಡಿಸುತ್ತಿತ್ತು. ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಅವರು ಒಂದು ಸಾಹಿತ್ಯದ ಕೊಂಡಿಯಾಗಿದ್ದರು. ನಮಗೆಲ್ಲ ಹುಬ್ಬಳ್ಳಿ ಎಂದ ಕೂಡಲೆ ಅವರೆ ನೆನಪಾಗುತ್ತಿದ್ದರು. ಹಾಗೆಂದ ಮಾತ್ರಕ್ಕೆ ಹಾಳು ಹರಟೆಯಲ್ಲಿ ಅವರಿಗೆ ಎಂದಿಗೂ ಆಸಕ್ತಿಯಿರಲಿಲ್ಲ. ನಮ್ಮ ಭೇಟಿ ಮತ್ತು ಚರ್ಚೆಗಳು ಯಾವಾಗಲೂ ಹೊಸ ಬರವಣಿಗೆ ಹಾಗು ಓದಿದ ಹೊಸ ಪುಸ್ತಕಗಳ ಮೇಲೆ ಕೇಂದ್ರಿಕೃತವಾಗಿರುತ್ತಿದ್ದವು.

ನಮಗೆ ಹೇಳಿದ ಸಮಯಕ್ಕೆ ಮೊದಲು ಮತ್ತೇನೋ ಕೆಲಸವನ್ನು ಧಾರವಾಡದಲ್ಲಿ ಹಾಕಿಕೊಂಡು ಅದನ್ನು ಮುಗಿಸುತ್ತಿದ್ದರು. ಅಂದರೆ ಒಂದು ತಾಸು ಮೊದಲೇ ಬಂದು ಜಿ.ಎಸ್.ಆಮೂರ್, ಮಲ್ಲಿಕಾರ್ಜುನ ಹಿರೇಮಠ ಮುಂತಾದವರನ್ನು ಭೆಟ್ಟಿಯಾಗಿ ಬರುತ್ತಿದ್ದರು. ಚೆನ್ನವೀರ ಕಣವಿ ಅವರ ಗದ್ಯಕ್ಕೆ ಬರೆದ ವಿಮರ್ಶೆಯನ್ನು ಅವರಿಗೆ ಕೊಟ್ಟು ಬರುವುದಿತ್ತು ಎಂದು ಒಮ್ಮೊಮ್ಮೆ ಅಲ್ಲಿ ಹೋಗಿ ಬಂದಿರುವರು. ತುರ್ತು ಕೆಲಸಗಳಲ್ಲಿ ಅವರು ತಮ್ಮ ಸ್ಕೂಟರಿನಲ್ಲಿಯೇ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರುತ್ತಿದ್ದರು.

‘ಇಷ್ಟೆಲ್ಲ ಟ್ರಾಫಿಕ್ಕನಾಗ ಹೆಂಗ ಬರ್ತೀರಿ’ ಎಂದು ನಾವು ಬೈಯ್ದ ಮೇಲೆ ‘ಈಗ ಮಗ ದುಡಿಯುತ್ತಿದ್ದಾನೆ, ಇನ್ನು ಮುಂದೆ ಚಿಂತೆಯಿಲ್ಲ.’ ಎಂದು ಕಾರು ಕೊಂಡಿದ್ದರು. ನನಗೆ ಕಾರವಾರಕ್ಕೆ ವರ್ಗವಾದಾಗ ‘ಒಳ್ಳೆಯದಾಯಿತು, ಒಂದಷ್ಟು ದಿನ ಈ ಹುಬ್ಬಳ್ಳಿ-ಧಾರವಾಡದ ಗಡಿಬಿಡಿಯಿಂದ ದೂರವಿರಲು ಸಾಧ್ಯವಾಗುತ್ತದೆ. ಅಲ್ಲಿ ಹೋದರೆ ಹೊಸ ಪರಿಸರ, ಹೊಸ ಗೆಳೆಯರು ಸಿಗುತ್ತಾರೆ. ಹೊಸ ಬರವಣಿಗೆ ಆಗುತ್ತದೆ’ ಎಂದು ಹುರುಪು ತುಂಬಿ ಕಳಿಸಿದರು. ನಾನು ಅನೇಕ ಸಲ ಅವರಿಗೆ ಏನನ್ನೋ ತೋರಿಸಲೆಂದೋ ನನ್ನ ಹೊಸ ಪುಸ್ತಕ ಕೊಡಲೆಂದೋ ಕಾರವಾರದಿಂದ ಧಾರವಾಡಕ್ಕೆ ಬರುವ ದಾರಿಯಲ್ಲಿ ಹುಬ್ಬಳ್ಳಿ ಇನ್ನೂ ಇಪ್ಪತ್ತು ನಿಮಿಷ ಇರುವಾಗಲೇ ಫೋನ್ ಮಾಡುತ್ತಿದ್ದೆ.

ನಾನು ಹಳೇ ಬಸ್ಟ್‍ಸ್ಟ್ಯಾಂಡಿನಲ್ಲಿ ಇಳಿಯುವ ವೇಳೆಗೆ ಅವರು ಐದು ನಿಮಿಷ ಮೊದಲೇ ಬಂದು ಎದುರಿನ ಅಯೋಧ್ಯ ಹೊಟೇಲಿನಲ್ಲಿ ಹಾಜರಿರುತ್ತಿದ್ದರು. ‘ನಾನು ರಿಟೈರ್ ಆಗುವ ಹೊತ್ತಿಗೆ ಮರಳಿ ಬಂದಿರುತ್ತೀರಿ. ಆಗ ಕೂಡಿ ಕೆಲಸ ಮಾಡೋಣ’ ಎಂದಿದ್ದರು. ನಾನು ಮರಳಿ ಬಂದಾಗ ಮಾತ್ರ ಅವರು ಮತ್ತೆಂದೂ ಬಾರದಂತೆ ಹೊರಟು ಹೋಗಿದ್ದರು. ಅಕ್ಷರ ಸಾಹಿತ್ಯ ವೇದಿಕೆಯ ಒಂದೆರೆಡು ಕಾರ್ಯಕ್ರಮಕ್ಕೆ ಅವರು ನನ್ನನ್ನು ಕರೆಸಿದ್ದರು ಕೂಡ. ಒಂದು ಸಲ ನಾನು, ಮಲ್ಲಿಕಾರ್ಜುನ ಹಿರೇಮಠ, ರಾಘವೇಂದ್ರ ಪಾಟೀಲ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು “ಈ ಪ್ರಹ್ಲಾದನ ಹಂತೇಲಿ ಎಂಥ ಶಕ್ತಿ ಐತೇನೋ? ದೆವ್ವ ಬರಧಂಗ ಬರದ ಬರೀತಾನು” ಎಂದು ಮೆಚ್ಚಿಕೆಯಿಂದ ನಗೆಯಾಡಿದ್ದವು.

ನನಗೆ ಮತ್ತು ಗೆಳೆಯ ಜೋಗುರಗೆ ಅವರ ಕೊನೆಯ ಭೆಟ್ಟಿಯನ್ನು ಮಾತ್ರ ಮರೆಯಲು ಎಂದಿಗೂ ಸಾಧ್ಯವಾಗಲಾರದು. ಅವರು ನಿವೃತ್ತಿಯಾಗಿ ಹತ್ತು-ಹದಿನೈದು ದಿನಗಳಾಗಿರಬೇಕು. ಮತ್ತೆ ಕೆಲವು ತಿಂಗಳುಗಳ ಕಾಲ ಅವರ ಕರ್ತವ್ಯವನ್ನು ಹುಬ್ಬಳ್ಳಿ ಕಿಮ್ಸ್‍ನವರು ಮುಂದುವರೆಸಿದ್ದರು. ಇನ್ನಷ್ಟು ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಇದ್ದ ಹಾಗಾಗುತ್ತದೆ ಎಂದು ಅವರೂ ಆಫೀಸಿನ ಒತ್ತಾಯಕ್ಕೆ ಒಪ್ಪಿಕೊಂಡಿದ್ದರು.

ವಾರಕ್ಕೊಮ್ಮೆ ನಾನು ಧಾರವಾಡಕ್ಕೆ ಬರುವುದು ಅವರಿಗೆ ಗೊತ್ತಿತ್ತು. ಆ ಶನಿವಾರ ನನ್ನನ್ನು ಮತ್ತು ಜೋಗುರನನ್ನು ಭೆಟ್ಟಿಯಾಗಲೆಂದೇ ಅವರು ಬಂದರು. ನಿಮ್ಮ ಕೆಲಸಗಳು ಏನೇ ಇದ್ದರೂ ಕ್ಯಾನ್ಸಲ್ ಮಾಡ್ರಿ ಎಂದು ಹೇಳಿದರು. ತುಂಬ ಹೊತ್ತು ನಾವು ಮಾತನಾಡಿದೆವು. ನಕ್ಕೆವು. ಡಾವಣಗೆರೆಗೆ ಹೋದ ಮೇಲೆ ಏನೆಲ್ಲ ಮಾಡುವುದಿದೆಯೆಂದು ಚರ್ಚಿಸಿ ನಮ್ಮ ಸಲಹೆ ಕೇಳಿದರು. ಸಾಹಿತ್ಯದ ಗುಂಪುಗಳು, ಪರಸ್ಪರರಲ್ಲಿ ಇರುವ ಅಪನಂಬಿಕೆಯ ಬಗ್ಗೆ ಅವರಲ್ಲಿ ದುಗುಡವಿತ್ತು. ತನಗೆ ದಾವಣಗೆರೆಗಿಂತ ಹುಬ್ಬಳ್ಳಿ-ಧಾರವಾಡವೇ ಹೆಚ್ಚು ಇಷ್ಟವೆಂದೂ ಪದೇಪದೇ ಬರುವುದಾಗಿಯೂ ಹೇಳಿದರು. ಯಾವುದೇ ಸಂದರ್ಭದಲ್ಲಿಯೂ ಬರವಣಿಗೆಯನ್ನು ನಿಲ್ಲಿಸದಿರಿ ಎಂದು ನಮಗೆ ಆ ಅಂತ:ಕರಣದ ಗೆಳೆಯ ಹೇಳುವಾಗ ‘ಪ್ರಹ್ಲಾದ, ಯಾಕಿಷ್ಟು ಇಮೋಷನಲ್ ಆಗಿದ್ದಾನೆ! ಬಹುಶ: ರಿಟೈರ್ ಆಗಿದ್ದಕ್ಕೆ ಇರಬೇಕು’ ಎಂದು ನಾವು ಅಂದುಕೊಂಡೆವು.

ಆವತ್ತಿನ ಹೊಟೇಲಿನ ಬಿಲ್ಲನ್ನು ತಾನೇ ಕೊಡುವುದಾಗಿ ಹಟ ಹಿಡಿದು ಪ್ರಹ್ಲಾದ ಕೊಟ್ಟಿದ್ದು ನಮಗೆ ಇಂದು ಕೂಡ ಬಹಳಷ್ಟು ಕಾಡುತ್ತದೆ. ನಮಗಷ್ಟೇ ಅಲ್ಲ, ಹುಬ್ಬಳ್ಳಿಯ ಅಕ್ಷರ ಸಾಹಿತ್ಯ ವೇದಿಕೆಯ ಪ್ರಹ್ಲಾದ ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮದಲ್ಲಿಯೂ ಅವರೇ ಒತ್ತಾಯದಿಂದ ಎಲ್ಲರಿಗೂ ಊಟ ಮಾಡಿಸಿದರು ಎಂದು ಚಿದಾನಂದ, ಕುಮಾರ ಬೇಂದ್ರೆ ಎಷ್ಟೋ ಸಲ ಹೇಳಿಕೊಂಡು ಕ್ಷಣ ಹೊತ್ತು ಸುಮ್ಮನಾಗುತ್ತಾರೆ. ಈ ಸಂಗತಿಗಳು ಕಾಕತಾಳೀಯ ಖರೆ. ಆದರೆ ನೆನಪುಗಳು ಈ ರೀತಿಯಲ್ಲಿಯೇ ಉಳಿಯುವುದು ಮಾತ್ರ ವಿಚಿತ್ರವಾದದ್ದು.

ಪುಸ್ತಕಗಳನ್ನು ಅರ್ಪಣೆ ಮಾಡುವಲ್ಲಿಯೂ ಅವರು ವಿಶಿಷ್ಟತೆಯನ್ನು ತೋರಿದರು. ತಮ್ಮ ಸಮಕಾಲೀನ ಲೇಖಕರಿಗೆ ಅವರು ಆ ಗೌರವವನ್ನು ಸಲ್ಲಿಸಿದರು. ನಾನು, ಡಿ.ಎಸ್.ಚೌಗಲೆ, ಬಾಳಾಸಾಹೇಬ ಲೋಕಾಪುರ, ಮಹಾಂತಪ್ಪ, ಮುನಿಸ್ವಾಮಿ, ಜೋಗುರ ಮುಂತಾದವರು ಆ ಪ್ರೀತಿಯನ್ನು ಅನುಭವಿಸಿದೆವು. ನನ್ನ ಉಗುಳುಬುಟ್ಟಿ ಕಥಾ ಸಂಕಲನವನ್ನು ಅವರಿಗೆ ಅರ್ಪಣೆ ಮಾಡಿದಾಗ ಅವರ ಮನಸ್ಸು ತುಂಬಿ ಬಂದಿತ್ತು. ಅವರ ಮುಖದಲ್ಲಿ ಅವರ ಸಹಲೇಖಕರಾದ ನಮ್ಮ ಬರವಣಿಗೆ, ಕೆಲಸಗಳ ಬಗ್ಗೆ ಒಂದು ಬಗೆಯ ತೃಪ್ತಿ ಕಂಡಿತು.

ನನ್ನ ಬಗೆ ಚನ್ನಪ್ಪ ಅಂಗಡಿ ಅಥವಾ ಮಹಾಂತೇಶ ನವಲಕಲ್‍ನಲ್ಲಿ, ಇಲ್ಲವೇ ಅವರ ಗುಣಗಳ ಬಗ್ಗೆ ನನ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಒಬ್ಬರ ಬಗ್ಗೆ ಮತ್ತೊಬ್ಬರಲ್ಲಿ ಅಸೂಯೆ ಹುಟ್ಟಿಸುವ ಕಾಲದಲ್ಲಿ ಅವರು ಪ್ರೀತಿ-ವಿಶ್ವಾಸಗಳನ್ನು ಕುದುರಿಸುವ ಕೆಲಸ ಮಾಡುತ್ತಿದ್ದರು. ಗೆಳೆಯರ ಮಿತಿಗಳನ್ನು ಹೇಳುವುದಕ್ಕೆ ಅವರು ಸಂಕೋಚ ಪಟ್ಟಿದ್ದನ್ನು ನಾವೆಂದು ಕಾಣಲಿಲ್ಲ. ಐದು ಕಾವ್ಯ ಸಂಕಲನ, ಹತ್ತು ಕಥಾ ಸಂಕಲನ, ಹತ್ತು ವಿಮರ್ಶಾ ಸಂಕಲನ, ಎರಡು ಕಾದಂಬರಿ- ಹೀಗೆ ಅವರ ಸಾಹಿತ್ಯ ಸೃಷ್ಠಿ ಸಮೃದ್ಧಿಯಿಂದ ಕೂಡಿತ್ತು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಚದುರಂಗ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರಿಗೆ ಸಂದಿದ್ದರೂ ಇನ್ನೂ ಸಲ್ಲಬೇಕಾದ ಕೆಲವು ಗೌರವಗಳಿಂದ ಅವರು ವಂಚಿತರಾಗಿದ್ದರು ಎಂದು ನಾವು ಕೆಲವು ಗೆಳೆಯರು ಮಾತನಾಡಿದ್ದುಂಟು. “ಒಂದೋ ಎರಡೋ ಕೆಟ್ಟ ಸಂಕಲನಗಳನ್ನು ಬರೆದವರಿಗೂ ಕೂಡ ರಾಷ್ಟ್ರೀಯ, ಅಂತರರಾಷ್ಟ್ರೀಯ(?) ಮಟ್ಟದ ಮನ್ನಣೆ” ಸಿಗುತ್ತಿರುವಾಗ ಹಲವು ಕವಿಗಳು, ಲೇಖಕರು ಕಡೆಗಣಿಸಲ್ಪಡುತ್ತಾರೆ ಎಂದು ಖ್ಯಾತ ವಿಮರ್ಶಕರಾದ ಡಾ.ಎಚ್.ಎಸ್.ರಾಘವೇಂದ್ರರಾವ್ ಅವರು ಡಿ.ಬಿ.ಢಂಗ ಅವರ ಕವಿತಾ ಪುಸ್ತಕವೊಂದಕ್ಕೆ ಮುನ್ನುಡಿ ಬರೆಯುತ್ತ ನೂರಾರು ಲೇಖಕರು ಹೇಗೆ ಹಿನ್ನೆಲೆಗೆ ಸರಿಯುತ್ತಾರೆಂದು ಹೇಳುತ್ತಾರೆ. ಅಂತಿಮವಾಗಿ ಓದುಗ ವರ್ಗ ಹಾಗೂ ದೇಶ-ಕಾಲಗಳು ಒಂದು ಪುಸ್ತಕದ ಜೀವಾವಧಿಯನ್ನು ನಿರ್ಧರಿಸುತ್ತವೆ ಎನ್ನುವುದು ನಿಜವಾದರೂ ಅರ್ಹ ಲೇಖಕರನ್ನು ಸಮಾಜ ಹಾಗೂ ಸಂಬಂಧಿಸಿದ ಸಂಸ್ಥೆಗಳು ಗುರುತಿಸುವ ಕೆಲಸವನ್ನು ಮಾಡಬೇಕು ಎನ್ನುವ ಕಳಕಳಿ ಈ ಮಾತುಗಳಲ್ಲಿದೆ. ಪ್ರಭಾವ, ಪಬ್ಲಿಸಿಟಿ, ಪತ್ರಿಕೆಗಳ ವಿಪರೀತ ಪ್ರೋತ್ಸಾಹ ಒಂದು ಪುಸ್ತಕದ ಗುಣಮಟ್ಟಕ್ಕೆ ಮಾನದಂಡವಾಗಬಾರದು ಎಂಬ ಇರಾದೆಯನ್ನು ಅವರು ವ್ಯಕ್ತಪಡಿಸುತ್ತಾರೆ.

ಅಗಸನಕಟ್ಟೆ ಅವರು ನೂರಾರು ಸ್ನೇಹಿತರ ಪುಸ್ತಕಗಳನ್ನು ಓದಿ ಅವುಗಳ ವಿಶಿಷ್ಟತೆ ಹಾಗೂ ಮಿತಿಗಳನ್ನು ಮನದಟ್ಟು ಮಾಡುತ್ತಿದ್ದರು. ಎಂತಹ ಹೊತ್ತಿನಲ್ಲಿಯೇ ಆಗಲಿ, ಅವರು ಒಂದೆರೆಡು ನಿಮಿಷ ಮಾತಾಡದೆ ಫೋನ್ ಇಡುತ್ತಿರಲಿಲ್ಲ. ಒಂದೊಂದು ಸಲ ದೂರವಾಣಿಯಲ್ಲಿ ಇಡೀ ಕತೆಯನ್ನು ಹೇಳಿಬಿಡುತ್ತಿದ್ದರು. ಅವರಲ್ಲಿ ಅನೇಕ ಕನಸುಗಳಿದ್ದವು. ಅವುಗಳನ್ನು ನಿರ್ಮಾಣ ಮಾಡುವ ಇಚ್ಛಾಶಕ್ತಿಯೂ ಕತೃತ್ವಶಕ್ತಿಯೂ ಇತ್ತು. ಆದರೆ ಅವರಿಗೆ ತಿಳಿಯದಂತೆ ಆರೋಗ್ಯ ಏರುಪೇರಾಯಿತು. ಆಘಾತಗಳು, ಅದೂ ಹೃದಯದ ಆಘಾತಗಳು ಮನುಷ್ಯನನ್ನು ಹೇಗೆ ಮುದ್ದೆ ಮಾಡಿ ಒಗೆಯುತ್ತವೆ ಎಂಬುದಕ್ಕೆ ಕಾಲ ಅನೇಕ ಪುರಾವೆಗಳನ್ನು ಒದಗಿಸುತ್ತ ಹೋಗುತ್ತದೆ. ಒಂದು ಉಜ್ವಲ ಕಥಾಬರವಣಿಗೆಯ ನಾಡಿಯನ್ನು ಏಕಾಏಕಿ ನಿಲ್ಲಿಸಿದ ಆ ಹೊತ್ತಿನ ಘಳಿಗೆ ದೈವ ನಿಷ್ಕರುಣೆಯ ಒಂದು ರೂಪವಾಗಿ ನಮ್ಮನ್ನು ಸದಾ ಕಾಡುತ್ತದೆ. ‘ಮನದ ಮುಂದಣ ಮಾಯೆ’, ‘ಕಾಯಕ್ಕೆ ನೆಳಲಾಗಿ’, ‘ಸುಳಿಯೋ ಸುಂಟರಗಾಳಿಯೋ’, ‘ಉಲಿಯ ಉಯ್ಯಾಲೆ’-ಇವು ಪ್ರಹ್ಲಾದರ ಕೆಲವು ಕಥಾ ಸಂಕಲನಗಳ ಹೆಸರುಗಳು. ವಿಚಿತ್ರವೆಂದರೆ ಅವರ ಬದುಕಿನ ಉಯ್ಯಾಲೆ ಅದು ತುಂಬ ಏರುಗತಿಯಲ್ಲಿದ್ದಾಗಲೇ ನಿಲ್ಲಿಸಲ್ಪಟ್ಟಿತು.

ಕಾಲ ಕೆಲವರಿಗೆ ಕ್ರೂರವಾಗಿರುತ್ತದೆ ಎನ್ನುವುದು ಸುಳ್ಳಲ್ಲ. ಅಗಸನಕಟ್ಟೆಯವರ ವಿಷಯದಲ್ಲಿ ಮಾತ್ರ ಅದು ಮತ್ತಷ್ಟು ಕ್ರೂರವಾಯಿತು ಎನ್ನದೆ ವಿಧಿಯಿಲ್ಲ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಲೆ ಕೊನೆಯುಸಿರು ಎಳೆದವರು ಇವರೆ ಮೊದಲಿಗರು ಇರಬೇಕು. ಅಷ್ಟೊಂದು ಡಾಕ್ಟರುಗಳು, ನರ್ಸ್‍ಗಳು, ಎಕ್ಸಪರ್ಟ್‍ಗಳು, ವೈದ್ಯಕೀಯ ಸಲಕರಣೆಗಳು ಇದ್ದೂ ಕತೆಗಾರನೊಬ್ಬನ ಜೀವವನ್ನು ಉಳಿಸಲು ಅವು ವ್ಯರ್ಥವಾದವು ಎನ್ನುವುದು ಅಥವಾ ಡಾಕ್ಟರ್ ಅವರನ್ನು ಪರೀಕ್ಷಿಸುವ ವೇಳೆಗೆ ಅವರು ಕೊನೆಯುಸಿರೆಳೆದಿದ್ದರು ಎನ್ನುವುದು ಪ್ರಹ್ಲಾದರ ಸಾವಿನ ಕತೆಗೆ ನಾವು ಕೊಡುವ ಕಾರಣಗಳಾಗಿರಬಹುದು. ಸತ್ಯವೆಂದರೆ ಸಹೃದಯರು ಲಕ್ಷ್ಯಗೊಟ್ಟು ಕೇಳುತ್ತಿದ್ದ ಕತೆಯೊಂದು ಅರ್ಧಕ್ಕೆ ನಿಂತುಹೋಯಿತು. ಅದು ಮುಕ್ತಾಯವಾಗಬೇಕಿದ್ದ ರೀತಿಯಲ್ಲಿ ಮುಕ್ತಾಯ ಮಾಡಲು ಮಾತ್ರ ಯಾರಿಂದಲೂ ಸಾಧ್ಯವಿಲ್ಲ.

1 Response

  1. Lalitha siddabasavayya says:

    ಸರಳ, ಸಜ್ಜನ , ಅಪಾರ ಪ್ರತಿಭೆಯ ಪ್ರಹ್ಲಾದ್ ಅಗಸನಕಟ್ಟೆ ಹೋದರು ಎನ್ನುವ ಮಾತನ್ನು ಆಗ ನಂಬುವುದೇ ಕಷ್ಟವಾಗಿ ಹೋಗಿತ್ತು. ಈಗಲೂ ಅವರ ನೇರ ಮಾತುಗಳು ನೆನಪಾದರೆ ಇಲ್ಲೆ ಎಲ್ಲೊ ಇರಬಹುದೆನ್ನಿಸುತ್ತದೆ. ಒಳ್ಳೆಯ ಮನುಷ್ಯರು ಎನ್ನುವ ಮಾತನ್ನು ಸೀದಾಸಾದಾ ಬಳಸಬಹುದಾದ್ದೆಂದರೆ ಪ್ರಹ್ಲಾದ ಅಗಸನಕಟ್ಟೆ ಅಂತಹವರನ್ನು ಕುರಿತು ಮಾತನಾಡುವಾಗ !

Leave a Reply

%d bloggers like this: