fbpx

ಎಂಥಾ ಅದ್ಭುತ ದೃಶ್ಯ ಕಣ್ಣಿಗೆ ಬಿತ್ತು ಎಂದರೆ ಸ್ವಾಮಿಯವರನ್ನ ಗಡಬಡಿಸಿ ಜೀಪ್ ನಿಲ್ಲಿಸಿದೆ..

9

ಯಾನದ ಕೊನೆ

ಅವತ್ತು ಜನವರಿ 12. ಚಳಿಯ ತವರುಮನೆಯೆನೋ ಅನ್ನಿಸುವಂತಿದ್ದ ವಿರಾಜಪೇಟೆಯ ಆ ನಸುಕಿನಲ್ಲಿ ಅವತ್ತೂ 6 ಗಂಟೆಗೇ ನಮ್ಮ ಪಯಣ ಆರಂಭಗೊಂಡಿತ್ತು. ಇನ್ನೂ ಕತ್ತಲು,ಕತ್ತಲು. ಹಿಂದಿನ ರಾತ್ರಿ ಬಿಸಿನೀರು ಸ್ನಾನ ಮಾಡಿದ್ದರೂ ಆ ಬೆಳಿಗ್ಗೆ ಮತ್ತೆ ತಣ್ಣೀರು ಸುರುವಿಕೊಂಡಿದ್ದೆವು. ಬೇರೆಲ್ಲ ಕಡೆಗಳಲ್ಲಿ ಲಾಡ್ಜ್ಗಳಲ್ಲಿ ಬೆಳಿಗ್ಗೆ ಬಿಸಿನೀರು ಒದಗಿಸುವುದು ನನಗೆ ಗೊತ್ತಿತ್ತು. ಸ್ವಲ್ಪ ತಡವಾದರೂ ಬಿಸಿ ನೀರ ಬದಲು ತಣ್ಣೀರೇ ಗತಿ. ಆದರೆ ವಿರಾಜಪೇಟೆಯಲ್ಲಿ ನನಗೆ ಗೋಚರಿಸಿದ ವಿಚಿತ್ರವೆಂದರೆ ಆದರೆ ಅಲ್ಲಿ ಮಾತ್ರ ಸಂಜೆ ಬಿಸಿನೀರು! ಉಳಿದೆಲ್ಲ ವೇಳೆ ತಣ್ಣನೆಯ ನೀರು.

ವಿರಾಜಪೇಟೆಯಿಂದ ಹೊರಟ ಹೆದ್ದಾರಿಯಲ್ಲಿ ನಮ್ಮ ಮುಂದಿನ ಮೊದಲ ಹಂತದ ಗುರಿ 59 ಕಿಮೀ ದೂರದ ಹುಣಸೂರು. ‘ ಏನ್ರೀ, ನೆಟ್ಟಗೆ, ಹಾಸಿದಂತೆ ಇದೆಯಲ್ರೀ ಈ ಹೈವೇ. ಹುಡುಗ್ರು ಆರಾಮಾಗಿ ತುಳಿದುಬಿಡ್ತಾರೆ’ ಎಂದರು ಸ್ವಾಮಿ. ರಸ್ತೆಯೂ ಹಾಗೇ ಇತ್ತು. ಯಾರೂ ಸಲೀಸಾಗಿ ಸಾಗಬಹುದಿತ್ತು.

ಸುಮಾರು ದೂರ ಸಾಗಿಬಂದಿದ್ದೆವು. ಸಣ್ಣಗೆ ಇಬ್ಬನಿ ಉದುರುತ್ತಿತ್ತು ಬೇರೆ. ಪ್ರಾಯಷಃ ಕೋಳತ್ತೋಡು ಇರಬೇಕು. ಅಲ್ಲೊಂದು ಪುಟ್ಟ ಗೂಡು ಹೊಟೆಲ್ ಕಾಣಿಸಿ ನಿಂತೆವು. ಸ್ವಲ್ಪ ಹೊತ್ತಿನಲ್ಲೇ ಎಲ್ಲ ಹಾಜರಾದರು. ಯಥಾಪ್ರಕಾರ ಕಟ್ಟಾ ಚಾಯ್ ಗುಟುಕರಿಸಿದೆವು.

ಆ ಅಂಗಡಿಯಾತ ಓರ್ವ ಬ್ಯಾರಿ. ಕಟ್ಟಾ ಚಾಯ್ ಎರಡು ಥರದಲ್ಲಿ ಮಾಡುತ್ತಾರೆ.; ಟೀಪುಡಿಯನ್ನು ಸೋಸದೇ ಹಾಗೇ, ಇನ್ನೊಂದು ಸೋಸಿ. ಎರಡರ ರುಚಿಯೂ ಬೇರೆ, ಬೇರೆ. ಎಲ್ಲರೂ ಚಾ ಕುಡಿದು ರಸ್ತೆ ಪಕ್ಕ ಅದೂ, ಇದೂ ಮಾತನಾಡುತ್ತ ನಿಂತಿದ್ದರು. ನಾನು ಸುಮ್ಮನೆ ಮುಂದಕ್ಕೆ ಹೋದೆ.

ಆ ಹೈವೇ ಪಕ್ಕದಿಂದ ತುಸು ದೂರದಲ್ಲಿ ಒಂದು ಅಷ್ಟೇನೂ ಎತ್ತರವಲ್ಲದ ಮರ. ಆ ಮರದ ಎಲೆಗಳ ಮೇಲೆ ಚಿಕ್ಕ,ಚಿಕ್ಕ ಕಾಯಿಗಳು! ಅರೇ, ಈವರೆಗೆ ಮಾವು ಮುಂತಾದವು ರೆಂಬೆಗಳ ತುದಿಯಲ್ಲಿ, ಹಲಸು ಮುಂತಾದವು ಕಾಂಡಕ್ಕೆ ಕಚ್ಚಿಕೊಂಡು ಕಾಯಿ ಬಿಡುವದು ನೋಡಿದ್ದೆ. ಆಲದಂಥ ಸಸ್ಯ ಕೂಡ ಎಲೆಗಳ ಸಂದಿಯಲ್ಲಿ ಕಾಯಿ-ಹಣ್ಣು ಮೂಡಿಕೊಳ್ಳುತ್ತದೆ. ಅಂಥದ್ದರಲ್ಲಿ ಇದ್ಯಾವುದಪ್ಪಾ, ಎಲೆಯಲ್ಲಿ ಕಾಯಿ ಬಿಡೋದು? ಎಂದು ಹತ್ತಿರ ಹೋಗಿ ನೋಡಿದೆ. ಒಂದೇ ಒಂದು ಪುಟ್ಟ ಕೊಂಬೆ ಕೈಗೆಟಕುವಷ್ಟು ಎತ್ತರದಲ್ಲಿತ್ತು. ಕುಪ್ಪಳಿಸಿ ಅದನ್ನು ಎಳೆದು ಟೊಂಗೆ ಮುರಿದೆ. ನಿಜವಾಗಿಯೂ ಎಲೆಗಳ ಮೇಲೆ ಕಾಯಿಗಳಂತೆ ಕ್ಯಾಪ್ಸೂಲ್ ಗುಳಿಗೆಗಳನ್ನು ಹೋಲುವ, ಒಂಥರಾ ಬಂದರುಗಳಲ್ಲಿ ಎತ್ತರದ ಪೆಟ್ರೋಲಿಯಂ ಬಂಕರ್ ಇರುತ್ತಲ್ಲ ಆ ಥರದಲ್ಲಿ ಪುಟ್ಟ ಆಕೃತಿಗಳು ಎದ್ದು ನಿಂತಿದ್ದವು. ಒಂದನ್ನು ಒಡೆದು ನೋಡಿದೆ; ಒಳಗಡೆ ಖಾಲಿ, ಚೂರೇ ಚೂರು ಬಿಳಿಯ ಸ್ಪಾಂಜಿನಂಥ ತುಣುಕು. ಅಷ್ಟರಲ್ಲಿ ನನ್ನ ಸಂಶೋಧನೆ(?)ಯನ್ನ ಸ್ವಾಮಿ ಗಮನಿಸಿದರೇನೋ? ಅಲ್ಲಿಗೆ ಬಂದು ನೋಡಿದ ಅವರು ಬೆರಗಾದರು.

ನಮಗೆಲ್ಲರಿಗೂ ಮಧ್ಯಾಹ್ನದ ನಂತರ ನಾವು ಪ್ರವೇಶಿಸಲಿರುವ ನಾಗರಹೊಳೆ ಕಾಡು ಹುರುಪು ಕೊಡುತ್ತಿತ್ತು. ತಂಡದ ಎಲ್ಲರೂ ಎಷ್ಟು ಬೇಗ ಅಲ್ಲಿ ಹೋಗುತ್ತೇವೋ ಎಂದು ಕಾತರರಾಗಿದ್ದವರೇ. ರಸ್ತೆ ನೇರವಾಗಿದ್ದರ ಜೊತೆಗೆ ಎಲ್ಲರೂ ವೇಗವಾಗಿ ಸಾಗುತ್ತಿದ್ದುದು ಅದೇ ಕಾರಣಕ್ಕಾಗಿತ್ತು. ಅಷ್ಟರಲ್ಲಿ ದೇವರಪುರ ಎನ್ನುವ ಊರು ಸಿಕಿತು. ಮಲೆನಾಡು ಕಳೆದು ಬಯಲುಸೀಮೆ ಆರಂಭಗೊಳ್ಳುವ ಎಲ್ಲ ಲಕ್ಷಣಗಳೂ ಅಲ್ಲಿದ್ದವು. ಅಲ್ಲೊಂದು ಕಡೆ ರಸ್ತೆ ಪಕ್ಕ ನಿಂತು ಎಲ್ಲ ಸವಾರರೂ ನಮ್ಮನ್ನು ದಾಟಿಹೋಗುವದನ್ನು ಕಾದೆವು. ಯಾಕೆಂದರೆ ಮುಂದೆ ತಿತಿಮತಿ ಕಾಡಿನ ವ್ಯಾಪ್ತಿ ಆರಂಭವಾಗುತ್ತದೆಯೆಂತಲೂ, ಆನೆ, ಕರಡಿ ಮುಂತಾದ ಪ್ರಾಣಿಗಳು ರಸ್ತೆ ದಾಟುವ ಸಂದರ್ಭ ಇರುವ ಕಾರಣಕ್ಕೆ ಹೆಚ್ಚು ಅಂತರವಿಲ್ಲದೇ ಒಟ್ಟಿಗೆ ಸಾಗಬೇಕಾಗಿದೆ ಎಂತಲೂ ಹೇಳಿದರು.

ನುಣುಪಾದ ರಸ್ತೆಯಲ್ಲಿ ಆ ಬೆಳಗಿನ ಎಂಟುಗಂಟೆಯ ವೇಳೆಗೆ ಸಾಕಷ್ಟು ವೇಗವಾಗಿಯೇ ಅವರೆಲ್ಲ ಸೈಕಲ್ ತುಳಿಯುತ್ತಿದ್ದರು. ತಿತಿಮತಿ ಕಾಡು ರಸ್ತೆಯ ಎರಡೂ ಭಾಗಗಳಲ್ಲಿ ಹರಡಿಕೊಂಡಿದ್ದು ಹೆದ್ದಾರಿ ಅದನ್ನು ಸೀಳಿಕೊಂಡು ಸಾಗುತ್ತಿತ್ತು. ರಸ್ತೆಯ ಎರಡೂ ಭಾಗದಲ್ಲಿ ವಿವಿಧ ಎಚ್ಚರಿಕೆಯ ಫಲಕಗಳು; ಆನೆಗಳು ಎದುರಾಗುತ್ತವೆ. ಎಚ್ಚರದಿಂದಿರಿ,ಕರಡಿಗಳಿವೆ ಹುಷಾರಾಗಿರಿ ಎನ್ನುವಂಥ ಅರಣ್ಯ ಇಲಾಖೆ ನಿಲ್ಲಿಸಿದ ಫಲಕಗಳು ಎಚ್ಚರಿಕೆಗಿಂತ ಭೀತಿಯನ್ನ ಹೆಚ್ಚಿಸುತ್ತವೆಯೇ? ಎಂದು ಅನುಮಾನವಾಯಿತು. ಅಲ್ಲಿನ ಕಾಡು ನಾವು ಸಾಗಿಬಂದ ಪಶ್ಚಿಮಘಟ್ಟದ ಕಾಡಿನಂತಿರಲಿಲ್ಲ. ಬಹುತೇಕ ಮರಗಳೆಲ್ಲ ಎಲೆ ಉದುರಿ ಬೋಳಾಗಿದ್ದವು. ಮತ್ತು ಸಾಕಷ್ಟು ಮರಗಳು ಒಣಗಿಕೊಂಡಿದ್ದವು. ಲಂಟಾನ, ಮುಳ್ಳುಪೊದೆಯಿಂದ ಕುರುಚಲುಗಳೇ ತುಂಬಿಕೊಂಡಿದ್ದವು.

ನಮ್ಮ ಮುಂದೆ ಸುಮಾರು ದೂರದಲ್ಲಿದ್ದ ಅಜಯ್‍ಗೋಪಿ ಸೈಕಲ್ ತುಳಿಯುತ್ತಲೇ ಎಡಭಾಗದ ಕಾಡಿನತ್ತ ಕೈ ತೋರಿಸುತ್ತಿದ್ದುದು ಕಾಣಿಸಿತು. ಎಲ್ಲಾದರೂ ಆನೆ ಹಿಂಡನ್ನು ಕಂಡನಾ? ಎಂದು ನಮಗಿಬ್ಬರಿಗೂ ಒಂದುಕ್ಷಣ ಅನ್ನಿಸಿತು. ಆತ ಕೈ ತೋರಿಸಿದ ಭಾಗದತ್ತ ನೋಡುತ್ತ ಬಂದೆ. ಎಂಥಾ ಅದ್ಭುತ ದೃಶ್ಯ ಕಣ್ಣಿಗೆ ಬಿತ್ತು ಎಂದರೆ ಸ್ವಾಮಿಯವರನ್ನ ಗಡಬಡಿಸಿ ಜೀಪ್ ನಿಲ್ಲಿಸಿದೆ. ನನ್ನ ಗಡಿಬಿಡಿ ಕಂಡ ಸ್ವಾಮಿ ಅಲ್ಲಿಂದಲೇ ಹಣಿಕಿದರು.

ರಸ್ತೆಯಂಚಿನ ಅಗಲವಾದ ತೋಡಿನ ಆಚೆ ಕಡೆ ಇದ್ದ ಮರವೊಂದರಲ್ಲಿ ಅಳಿಲನ್ನು ಹೋಲುವ, ಆದರೆ ಅದಕ್ಕಿಂತ ಗ್ರಾತದಲ್ಲಿ ಬೆಕ್ಕಿನಂತಿರುವ ಜೀವಿಯೊಂದು ಕಂಡಿತು. ನೀಳವಾದ ಶರೀರದ ತುಂಬ ಕಂದು, ಕೆಂಪು ಮಿಶ್ರಿತ( ಮೆರೂನ್ ಬಣ್ಣ ಹೋಲುವ) ರೋಮಗಳಿದ್ದು ಹೊಟ್ಟೆ, ಕತ್ತಿನ ಕೆಳಭಾಗದಲ್ಲಿ ಬಿಳಿಯಾಗಿತ್ತು. ಮೈರೋಮದ ಬಣ್ಣದ ದಪ್ಪನೆಯ ಬಾಲ ಶರೀರದಷ್ಟೇ ನೀಳವಾಗಿ ತುದಿಯಲ್ಲಿ ಬೂದು ಬಣ್ಣದ ರೋಮಗಳಿಂದ ಗೊಂಡೆಯಂತಿತ್ತು. ಮುಖ, ಕಣ್ಣುಗಳೆಲ್ಲ ಥೇಟ್ ಅಳಿಲಿನ ಥರವೇ.

ಹೆಸರು ಗೊತ್ತಿಲ್ಲದ ಸಂಪಿಗೆಯನ್ನು ಹೋಲುವ ಆ ಮರದಲ್ಲಿನ ಹಣ್ಣುಗಳನ್ನು ಮುಂಗಾಲು (ಅಥವಾ ಕೈ)ಗಳಿಂದ ಹರಿದು ತಿನ್ನುತ್ತಿತ್ತು. ಕೊಂಬೆಯ ಮೇಲಿನಿಂದ, ಅದಕ್ಕೆ ಜೋತುಬಿದ್ದು ನಾನಾ ರೀತಿಯಲ್ಲಿ ಹಣ್ಣುಗಳನ್ನು ಭಕ್ಷಿಸುತ್ತಿದ್ದ ಅದಕ್ಕೆ ನಾವು ನೋಡುತ್ತ ನಿಂತದ್ದು ಲಕ್ಷಕ್ಕೆ ಬರಲಿಲ್ಲವೇನೋ? ಲಕ್ಷಕ್ಕೆ ಬಂದರೂ ನಿರ್ಲಕ್ಷ ಮಾಡಿತ್ತೇನೋ? ಬೆಳಗಿನ ಬಿಸಿಲಿನಲ್ಲಿ ಥಳಥಳಿಸುತ್ತಿದ್ದ ಅದನ್ನು ನೋಡುವದೇ ಖುಷಿಯೆನ್ನಿಸುತ್ತಿತ್ತು.

ನಮ್ಮ ಕಡೆ ಅದಕ್ಕೆ ‘ಕ್ಯಾಸಣಗ’ ಎಂತಲೂ, ಕೆಲವರು ‘ಕ್ಯಾಸಣಿಲು’ ಎಂದೂ ಕರೆಯುವದು ಗೊತ್ತಿತ್ತು. ನಮ್ಮ ಮನೆಯ ಹಿಂದುಗಡೆ ಇದ್ದ ದಟ್ಟವಾದ ಬೆಟ್ಟದಲ್ಲಿ ಚಿಕ್ಕವನಿದ್ದಾಗ ಅವುಗಳನ್ನು ದಿನವೂ ನೋಡುತ್ತಿದ್ದೆ. ಹೆಚ್ಚಾಗಿ ಬೆಳಗಿನ ಎಳೆ ಬಿಸಲಲ್ಲಿ, ಇಲ್ಲವೇ ಸಂಜೆಯ ವೇಳೆಯಲ್ಲಿ ಅವು ಮನೆಯ ಹಿಂದಿನ ಎತ್ತರದ ಮರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಆಗೆಲ್ಲ ಅವನ್ನು ಕಂಡು ಸಂತೋಷಗೊಳ್ಳುತ್ತಿದ್ದೇವೆ ಹೊರತು ಅವುಗಳ ಬಗ್ಗೆ ಅರಿತುಕೊಳ್ಳುವ ಮನಸ್ಥಿತಿ ಬಂದಿರಲಿಲ್ಲ. ನಂತರದಲ್ಲಿ ಅವು ಕಾಣುತ್ತಲೇ ಇರಲಿಲ್ಲ. ವರ್ಷದಲ್ಲಿ ಒಂದೆರಡು ಬಾರಿ ಕಾಣಿಸಿದರೆ ಹೆಚ್ಚು ಅನ್ನುವಂತಾಗಿತ್ತು.

ನಮ್ಮೂರಿನ ಸುತ್ತಮುತ್ತ ಶಿಕಾರಿ ಮಾಡುವವರ ಸಂಖ್ಯೆ ಜಾಸ್ತಿ. ರಾತ್ರಿ ಇಡೀ ಅಲ್ಲಲ್ಲಿ ಈಡೀನ ಸದ್ದು ಕೇಳಿಸುತ್ತಲೇ ಇರುತ್ತಿತ್ತು. ಅವರದ್ದೇ ಕರಾಮತ್ತು ಎಂದುಕೊಂಡಿದ್ದೆ.  ಕೆಲವು ವರ್ಷಗಳ ಹಿಂದೆ ನಮ್ಮೂರಿನ ರಾಮಚಂದ್ರ ಎನ್ನುವ ಶಿಕಾರಿದಾರ ಯಾತಕ್ಕೋ ಮಾತಿಗೆ ಕುಳಿತಾಗ ನಮ್ಮ ಮನೆಯ ಹಿಂದುಗಡೆ ತಾನು ಸುಮಾರು ಹತ್ತಾರು ಕ್ಯಾಸಣಿಲನ್ನು ಈಡಿನಿಂದ ಹೊಡೆದಿದ್ದಾಗಿ ಕೊಚ್ಚಿಕೊಂಡಾಗ ಅವುಗಳ ಕಣ್ಮರೆಗೆ ಈ ಪುಣ್ಯಾತ್ಮನ ಕೊಡುಗೆಯೂ ಇದೆ ಅನ್ನುವದು ಮನದಟ್ಟಾಗಿತ್ತು.

ಒಂದು ಅಪೂರ್ವವಾದ ಜೀವಸಂತತಿಯನ್ನು ತಮ್ಮ ಜಿಹ್ವಾಚಾಪಲ್ಯಕ್ಕೆ ಬಲಿಕೊಟ್ಟ ಬಗ್ಗೆ ರಾಮಚಂದ್ರನಿಗಿರಲಿ, ಯಾವ ಶಿಕಾರಿಯವರಿಗೂ ಒಂದಿಷ್ಟು ಬೇಸರವಾಗಿರುವದನ್ನ ನಾನಂತೂ ಈವರೆಗೆ ನೋಡಿಲ್ಲ. ಊರಿಗೆ ಬಂದ ನಂತರದಲ್ಲಿ ‘ಶಿವರಾಮ ಕಾರಂತರ ಪ್ರಾಣಿ ಪ್ರಪಂಚ, ತೇಜಸ್ವಿಯವರ ಪುಸ್ತಕಗಳಲ್ಲಿ ಈ ಜೀವಿಯ ಬಗ್ಗೆ ಅರಸಿದೆನಾದರೂ ಸಮರ್ಪಕ ಮಾಹಿತಿ ದೊರಕಲಿಲ್ಲ. ನನ್ನ ಪುಸ್ತಕ ಸಂಗ್ರಹದ ಮಿತಿಯಿಂದಾಗಿ ಅದರ ಬಗ್ಗೆ ಹೆಚ್ಚಿಗೆ ತಿಳಿಯಲು ಸಾಧ್ಯವಾಗದ್ದು ಖೇದವನ್ನೇ ಹುಟ್ಟಿಸಿದೆ.

ಆ ಒಂದು ಅಳಿಲನ್ನು ದೃಷ್ಟಿಸುತ್ತಿದ್ದ ನಮಗೆ ಆ ಮರದಲ್ಲಿ ಇನ್ನೂ ನಾಲ್ಕಾರು ಅದೇ ಥರದ ಅಳಿಲುಗಳಿರುವದು ಗಮನಕ್ಕೆ ಬಂತು. ನನ್ನ ಡಿಜಿಟಲ್ ಚಿಕ್ಕ ಕ್ಯಾಮೆರಾ ತೆಗೆದು ಸಾಕಷ್ಟು ಫೋಟೊ ಕ್ಲಿಕ್ಕಿಸಿದೆ. ಅಜಯ್ ಗೋಪಿ ತನ್ನ ಅತ್ಯಾಧುನಿಕ ಕ್ಯಾಮೆರಾದಲ್ಲೂ ಫೋಟೋ ತೆಗೆದುಕೊಂಡ. ನಾವು ಫೋಟೊ ತೆಗೆಯುವಾಗೆಲ್ಲ ಅದಕ್ಕೆ ಸರಿಯಾದ ಫೋಸ್ ಕೊಡುವಂತೆ ಆ ಅಳಿಲು ವರ್ತಿಸುತ್ತಿತ್ತು. ‘ ಇಲ್ಲೇ ಯಾವ್ದಾದ್ರೂ ಮರದ ಪೊಟರೆಯಲ್ಲಿ ಗೂಡು ಮಾಡಿರತ್ತೇ ನೋಡಿ’ ಎಂದು ಸ್ವಾಮಿ ಹೇಳಿದರು. ಆದರೆ ಅದನ್ನು ಹುಡುಕಲು ಅಲ್ಲಿ ಸಾಧ್ಯವಿರಲಿಲ್ಲ. ಯಾಕೆಂದರೆ ಅದು ಸಂರಕ್ಷಿತ ಪ್ರದೇಶವಾದ್ದರಿಂದ ಮತ್ತು ಅಪಾಯಕಾರಿ ಸ್ಥಳವಾಗಿರುವದರಿಂದ ಅಲ್ಲಿ ನಿಲ್ಲಲಾಗಲೀ, ಫೋಟೊ ತೆಗೆಯಲಾಗಲೀ ಅವಕಾಶವಿಲ್ಲ ಎನ್ನುವದು.

ನಾವು ನಿಂತು ನೋಡುತ್ತಿದ್ದುದನ್ನು ನೋಡಿ ಹೆದ್ದಾರಿಯಲ್ಲಿ ಹೋಗುತ್ತಿದ್ದ ಒಂದೆರಡು ಬೈಕಿನವರು, ಕಾರಿನವರು ಇಳಿದು ನೋಡತೊಡಗಿದ್ದರಿಂದ ಅಲ್ಲೊಂದು ಸಂತೆ ಸೇರುವ ಸಂಭವನೀಯತೆ ಅರಿತು ಹೊರಟುಬಿಟ್ಟೆವು. ಅಷ್ಟರಲ್ಲಿ ಜೀಪ್‍ನಲ್ಲಿ ಸಂಚರಿಸುತ್ತ ಕಾವಲು ನಡೆಸುವ ಅರಣ್ಯ ಇಲಾಖೆಯ ಜೀಪೊಂದು ನಮ್ಮನ್ನು ದಾಟಿ ಮುಂದೆ ಹೋಗಿ ಪುನ: ವಾಪಸ್ಸು ತಿರುಗಿತು. ಇಲ್ಲದ ಉಸಾಬರಿ ಯಾಕೆ ಎಂದು ನಾವು ಅಲ್ಲಿಂದ ಫೇರಿ ಕಿತ್ತೆವು. ಹಲವು ಕಾಲದ ನಂತರ ನೋಡಿದ ಆ ಕೆಂಜಳಿಲುಗಳು ಮನಸ್ಸನ್ನು ಉಲ್ಲಸಿತಗೊಳಿಸಿದ್ದವು.

ಮುಂದೆ ಬರುತ್ತಿದ್ದಂತೆ ರಸ್ತೆಯಿಂದ ನಾಲ್ಕಾರು ಮಾರಿನಾಚೆ ಆನೆಯೊಂದು ನಿಂತದ್ದು ಕಂಡಿತು. ಅದು ಕಿವಿ ಅಲ್ಲಾಡಿಸದಿದ್ದರೆ ಕಲ್ಲಿನದೋ, ಕಟ್ಟಿಗೆಯದೋ ಶಿಲ್ಪ ಎನ್ನಬೇಕು ಹಾಗಿತ್ತು ಅದರ ನಿಲುವು. ಕೆಳಕ್ಕೆ ಇಳಿಯದೇ ಜೀಪಲ್ಲಿ ಕುಳಿತಂತೆ ಫೋಟೊ ತೆಗೆದು ಅಲ್ಲಿಂದ ಕಂಬಿ ಕಿತ್ತೆವು.

ಮುಂದೆ ಬರುತ್ತಿರುವಾಗ ಅಲ್ಲಲ್ಲಿ ‘ಆನೆ ಓಡಾಡುವ ದಾರಿ’ ಎಂದೆಲ್ಲ ಬರೆದಿದ್ದ ಫಲಕಗಳನ್ನು ಕಂಡು ಕುತೂಹಲದಿಂದ ಸ್ವಾಮಿಯವರನ್ನು ವಿಚಾರಿಸಿದೆ. ‘ ಅವು ಅತ್ತಕಡೆಯ ಕಾಡಿನಿಂದ ಇತ್ತ ದಾಟಲು ಬಳಸುವ ಸ್ಥಳ ಇವುಗಳೆಂದು ವಿವರಿಸಿದರು. ಅದನ್ನೇ ಮಾತನಾಡಿಕೊಳ್ಳುತ್ತ ಬರುತ್ತಿದ್ದಾಗ ರಸ್ತೆ ಪಕ್ಕದಲ್ಲಿ ಸೈಕಲ್  ನಿಂತದ್ದು ಕಾಣಿಸಿತು. ಹಿಂದುಗಡೆ ಕ್ಯಾರಿಯರ್‍ಗೆ ಬಿಗಿದ ಲಗೇಜ್ ನೋಡಿದರೆ ನಮ್ಮ ತಂಡದ್ದೇ ಯಾರದ್ದೋ ಸೈಕಲ್ ಎನ್ನುವದು ಖಾತ್ರಿಯಾಗಿತ್ತು. ಯಾರಪ್ಪಾ ಇದು, ಸೈಕಲ್ ನಿಲ್ಲಿಸಿ ಎಲ್ಲಿ ಹೋದರು? ಎಂದು ಅತ್ತಿತ್ತ ನೋಡಿದೆವು. ಸ್ವಲ್ಪ ಹಿಂದೆ ಬಲಭಾಗದ ಕಾಡಿನ ನಡುವೆ ಕೇರಿಯಂತಿದ್ದ ಮನೆಗಳ ಸಾಲು ಕಂಡಿತು.

ಮುಂದೆ ಬಂದ ನಮ್ಮ ಜೀಪನ್ನು ಹಿಂದಕ್ಕೆ ತೆಗೆದುಕೊಂಡು ನೋಡಿದರೆ ಸ್ವಾಮಿಯವರಿಂದ  ತಮಾಷೆಯಾಗಿ ‘ಫ್ರೊಪೆಸರ್’ ಎಂದು ಕರೆಯಿಸಿಕೊಳ್ಳುವ ವಿಜಯಕುಮಾರ್ ಆ ಕೇರಿಯ ನಡುವೆ ದೊಡ್ಡವರು, ಮಕ್ಕಳು,ಹೆಂಗಸರ ನಡುವೆ ಮಾತನಾಡುತ್ತ, ಅವರ ಫೋಟೊ ತೆಗೆಯುತ್ತಿದ್ದರು. ‘ಎಲಾ ಇವರಾ’ ಎಂದು ಸ್ವಾಮಿ ಸಣ್ಣಗೆ ಅಂದುಕೊಂಡರು. ‘ಆನೆ ಚೌಕುರ’ ಎನ್ನುವ ಹೆಸರಿನ ಆ ಪ್ರದೇಶದಲ್ಲಿ ಸರಕಾರದ ಆನೆಗಳನ್ನು ನೋಡಿಕೊಳ್ಳುವ ಮಾವುತರ ಮನೆಗಳಿದ್ದವು. ವಿಜಯಕುಮಾರ ಆ ಮಾವುತರ ಕೇರಿಗೆ ನುಗ್ಗಿ ಅವರೊಂದಿಗೆ ವಿಷಯ ಸಂಗ್ರಹಕ್ಕೆ ತೊಡಗಿದ್ದರು. ನಮ್ಮನ್ನು ಕಂಡದ್ದೇ ಅವರಿಗೆಲ್ಲ ಟಾಟಾ ಹೇಳಿ ಸೀದಾ ಬಂದು ಸೈಕಲ್ ಹತ್ತಿದರು. ‘ ನೀವು ಹೀಗೇ ದಿಢೀರಾಗಿ ಎಲ್ಲಾದ್ರೂ ಹೋದ್ರೆ ಹೇಗೆ? ನೀವೇ ಕೊನೆಯಲ್ಲಿದ್ದವರು. ಉಳಿದೋರೆಲ್ಲ ಮುಂದಕ್ಕೆ ಹೋಗಿದಾರೆ. ಇಂಥಲ್ಲಿ ಒಬ್ಬೊಬ್ರೇ ನಿಲ್ಲಬಾರದು’ ಸ್ವಲ್ಪ ಕಟುವಾಗಿಯೇ ಹೇಳಿದರು.

‘ಪಾಪ, ಅವರಿಗೆ ಆಸಕ್ತಿ. ಅದಕ್ಕೆ ನಿಂತಿರಬಹುದು’ ಎಂದೆ. ‘ಅವರಿಗೆ ಆಸಕ್ತಿ ಇರೋದು ಹೌದು. ಅಲ್ಲದೇ ಬುದ್ದಿವಂತಿಕೆನೂ ಇದೆ’ ಎಂದ ಸ್ವಾಮಿ ‘ಅಲ್ಲಲ್ಲಿ ಇದ್ದಕ್ಕಿದ್ದಂತೇ ಫೋಟೋ ತೆಗೀತಾ, ಮತ್ತೇನೋ ಮಾಡ್ತಾ ನಿಂತ್ಕೋತಾರಲ್ಲಾ, ಯಾಕೆ ಗೊತ್ತಾ?’ ಎಂದು ಪ್ರಶ್ನಿಸಿದರು. ‘ ಅವರಿಗೆ ಇಷ್ಟೆಲ್ಲ ದೂರ ಸೈಕಲ್ ತುಳಿದು ಅಭ್ಯಾಸ ಇಲ್ಲ. ಹಾಗಾಗಿ ಆಯಾಸವಾಗುತ್ತೆ. ಅದನ್ನ ತೋರಿಸ್ಕೋಳ್ಳಕೆ ಆಗಲ್ಲ. ಹಾಗಾಗಿ ಸುಸ್ತಾದಾಗೆಲ್ಲ ಫೋಟೋ ತೆಗಿಯೋದೋ, ಹೀಗೇ ಜನಗಳನ್ನ ಮಾತಾಡಿಸೋದೋ ಮಾಡ್ತಾರೆ’ ಎಂದು ನಕ್ಕರು. ನನಗೂ ಪ್ರೊಪೆಸರ್ ಚಾಲಾಕಿತನಕ್ಕೆ ಗಟ್ಟಿಯಾದ ನಗು ಬಂತು.

Leave a Reply