ಯಾರದೋ ಮನೆಯ ಕಿಟಕಿಯ ಒಳ ಇಣುಕಿ ನೋಡಿ.. 

ಆಕರ್ಷ ಕಮಲ

ನೀವು ಯಾವುದಾದರೊಂದು ಬೀದಿಯ
ಯಾರದೋ ಒಂದು ಮನೆಯ
ಕಿಟಕಿಯ ಒಳಗಿನಿಂದ ಇಣುಕಿ ನೋಡಿ.
ಅಲ್ಲಲ್ಲೇ ಹೆಣೆದುಕೊಳ್ಳುವ ಕಥೆಗಳು,
ನಿಮಗೆ ಅಚ್ಚರಿಯನ್ನುಂಟು ಮಾಡಬಹುದು.

ಮನೆ ನಂಬರ್ ೬೭ ರಲ್ಲಿ
ಗಂಡ ಹೆಂಡಿರ ಜಗಳ.
ಅವರ ೧೫ ವರುಷದ ಮದುವೆ
ಇನ್ನೇನು ಕೊನೆಗೊಳ್ಳಬಹುದು.

ಇನ್ನು ಆ ಮೂಲೆಯ
ಮುದುಕನು ಒಬ್ಬಂಟಿ.
ಮನೆಯ ಹೊರಗಡೆ ಕಾಲಿಟ್ಟಿಲ್ಲ.
ಇನ್ನೂ ಬದುಕಿದ್ದಾನೋ? ಸತ್ತಿದ್ದಾನೋ?

೪೫ ಮನೆ ನಂಬರಿನಲ್ಲಿರುವ
ಆ ದಢೂತಿ ವ್ಯಾಪಾರಿ
ಶೋಕಿಲಾಲ
ಮೊನ್ನೆಯಷ್ಟೇ ಹೊಸ car ತಗೊಂಡ.

ಆ ಹೆಂಗಸಿನ ಬಗ್ಗೆ ಹೇಳಲೇಬೇಕಿಲ್ಲ.

ಮರ್ತಿದ್ದೆ
ಆ ೬೦೭ ಮನೆ ನಂಬರಿನ ಹುಡುಗನಿಗೆ
ಕ್ಯಾನ್ಸರ್ ಅಂತೇ ಪಾಪ !

ಪಕ್ಕದ ಮನೆಯ ಮುದುಕಿಗೆ ಯಾರು ದಿಕ್ಕು?
ಅವಳ ಮಕ್ಕಳೇನು ಅವಳ ಕೊನೆಗಾಲದಲ್ಲಿ
ಸಹಾಯಕ್ಕೆ ಬರೋಲ್ಲ .

ಆ ಹಿಂದಿನ ಬೀದಿಯ ಸಾವು
ಕೊಲೆಯಂತೆ.
ಪೋಲಿಸಿನವರು ದಿನ ಬಂದು ಹೋಗ್ತಾರಂತೆ.
ಅವನಿಗೆ ಜೈಲು ಖಂಡಿತ!

ಆ ಮನೆಗೆ ಇನ್ನೂ ಯಾರೂ ಬಾಡಿಗೆಗೆ ಬಂದೇ ಇಲ್ಲ.
ಏನಿದ್ಯೋ ಏನೋ?
ನಮಗ್ಯಾಕೆ ಬಿಡಿ ಮಾಡಿದವರ ಪಾಪ
ಆಡಿದೋರ ಬಾಯಲ್ಲಿ!

ನಿಮಗೆ ಅವಕಾಶ ಸಿಕ್ಕರೆ
ಯಾವ ಬೀದಿಯ ಯಾರ ಮನೆಯ
ಕಿಟಕಿಯೊಳಗಿಂದ ಇಣುಕುತ್ತೀರಿ?
ಯಾರನ್ನು ಮಾತಿನಲ್ಲಿ ಬೀದಿಗೆಳೆಯುತ್ತಿರಿ?
ಅದಕ್ಕಿಂತ ಮುಖ್ಯವಾಗಿ
ನಿಮ್ಮ ಯಾವ ಗುಟ್ಟುಗಳನ್ನು ಬಚ್ಚಿಡುತ್ತೀರಿ?

 

Leave a Reply