fbpx

ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ..

ಲುವಾಂಡಾ ಏರ್-ಪೋರ್ಟಿನಿಂದ ಹೊರಬಂದ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದು ಅಂಗೋಲಾದ ಬಿಸಿಲು.

ಕಳೆದ ಹತ್ತಕ್ಕೂ ಹೆಚ್ಚು ತಾಸುಗಳಿಂದ ಹವಾನಿಯಂತ್ರಿತ ಕೊಠಡಿಗಳಲ್ಲೇ ಸಮಯವನ್ನು ಕಳೆದಿದ್ದ ನನಗೆ ಲುವಾಂಡಾದ ಬಿಸಿಲು ಮುದವನ್ನು ನೀಡಿದ್ದಂತೂ ಸತ್ಯ. ಅಂಗೋಲಾ ರಾಜಧಾನಿಯಾದ ಲುವಾಂಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇತರ ಖ್ಯಾತ ಏರ್-ಪೋರ್ಟುಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿದ್ದರೂ ದೂರುವಂಥದ್ದೇನೂ ಇರಲಿಲ್ಲ. ಏರ್-ಪೋರ್ಟ್ ಒಂದಕ್ಕೆ ಬೇಕಾಗಿರುವ ಮೂಲಭೂತ ಅವಶ್ಯಕತೆಗಳೆಲ್ಲವನ್ನೂ ಅಲ್ಲಿ ವ್ಯವಸ್ಥಿತವಾಗಿ ಪ್ರಯಾಣಿಕರಿಗೆ ನೀಡಲಾಗಿತ್ತು. ದುಬೈ, ಪೋರ್ಚುಗಲ್, ಫ್ರಾನ್ಸ್, ಚೀನಾ ಸೇರಿದಂತೆ ದಕ್ಷಿಣ ಆಫ್ರಿಕಾ, ಕೀನ್ಯಾ, ಇಥಿಯೋಪಿಯಾ, ನಮೀಬಿಯಾಗಳಂತಹ ಹಲವು ಆಫ್ರಿಕನ್ ದೇಶಗಳೊಂದಿಗೆ ವಾಯುಮಾರ್ಗದ ಸಂಪರ್ಕವು ಲುವಾಂಡಾ ನಗರಕ್ಕಿದೆ.

ಲುವಾಂಡಾದ `ಕ್ವಾತ್ರೋ ದೆ ಫೆವೆರೈರು’ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಗರದ ಹೃದಯಭಾಗದಲ್ಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಜಾಗವು ನಗರದ ಜನನಿಬಿಡ ಪ್ರದೇಶಗಳಲ್ಲೊಂದು. ಅಂಗೋಲಾಕ್ಕೆ ಸುಸ್ವಾಗತ ಎಂಬ ಸುಂದರ ಸ್ವಾಗತ ಫಲಕವನ್ನೂ ಎದುರಿಗಿರುವ ಫ್ಲೈಓವರ್ ಒಂದರಲ್ಲಿ ಕಾಣಬಹುದು. ಪೋರ್ಚುಗೀಸ್ ಭಾಷೆಯಲ್ಲಿ `ಕ್ವಾತ್ರೋ’ ಎಂದರೆ ನಾಲ್ಕು, `ಫೆವೆರೈರು’ ಎಂದರೆ ಫೆಬ್ರವರಿ ಎಂದರ್ಥ. ಇಂಗ್ಲಿಷ್ ವರ್ಣಮಾಲೆಯ ಪ್ರಕಾರ ಓದಲು ಇದು `ಫೆವೆರೈರೋ’ ಎಂದಾದರೂ ಉಚ್ಚಾರಣೆ ಮಾತ್ರ `ಫೆವೆರೈರು’ ಎಂದೇ. `ಒ’ ಇರುವ ಕಡೆಗಳಲ್ಲೆಲ್ಲಾ `ಉ’ ಎಂದು ಉಚ್ಚರಿಸುವುದು ಇಲ್ಲಿಯ ರೂಢಿ.

ಅಂದಹಾಗೆ ಫೆಬ್ರವರಿ 4 ರ ದಿನಾಂಕವು ಅಂಗೋಲಾ ಇತಿಹಾಸದ ಪ್ರಮುಖ ಮೈಲುಗಲ್ಲುಗಳಲ್ಲೊಂದು. 1961 ರ ಈ ದಿನದಂದೇ ಅಂಗೋಲನ್ ಹೋರಾಟಗಾರರು ಚಾಕು, ಮಚ್ಚು, ಕತ್ತಿಗಳನ್ನು ಹಿಡಿದುಕೊಂಡು ಪೋರ್ಚುಗೀಸ್ ಸಾಮ್ರಾಜ್ಯದ ವಿರುದ್ಧ ದಂಗೆಯೆದ್ದಿದ್ದರು. ಫೆಬ್ರವರಿ 4 ಈ ಹೋರಾಟಗಾರರ ನೆನಪಿಗಾಗಿ ಮುಡುಪಾಗಿಟ್ಟಿರುವ ಸರಕಾರಿ ರಜಾದಿನವೂ ಹೌದು. ಹೀಗೆ `ಕ್ವಾತ್ರೋ ದೆ ಫೆವೆರೈರು’ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಹೆಸರಿನ ಹಿಂದಿರುವ ಕಥೆ ಇದು. ಒಂದು ರೀತಿಯಲ್ಲಿ ಇದು ಅಂಗೋಲನ್ ಸಂಸತ್ತು, ನೇಟೋ ಸ್ಮಾರಕ, ಮಾರ್ಜಿನಲ್ ಸ್ಟ್ರೀಟ್ ಇತ್ಯಾದಿ ಲುವಾಂಡಾದ ಆಯಕಟ್ಟಿನ ಸ್ಥಳಗಳಿಗೆ ಹೋಗಲು ಮುಖ್ಯದ್ವಾರದಂತಿರುವ ಭಾಗವೂ ಹೌದು.

ಕಾರು ಚಾಲಕ ಮತ್ತು ದುಭಾಷಿಯೊಂದಿಗೆ ಕಾರಿನಲ್ಲಿ ಕುಳಿತ ನಾವು ವಿಮಾನನಿಲ್ದಾಣದಿಂದ ನಗರದ ಹೊರಭಾಗದಲ್ಲಿದ್ದ ವಸತಿಗೃಹದ ಕಡೆಗೆ ಧಾವಿಸಿದ್ದೆವು. ಕುಳಿತಲ್ಲಿಂದಲೇ ಹೊರಗಿನ ದೃಶ್ಯಗಳನ್ನು ನೋಡುತ್ತಿದ್ದ ನನಗೆ ಈ ಹಿಂದೆ ನಿರೀಕ್ಷಿಸಿದ್ದಂತೆ ಯುದ್ಧಟ್ಯಾಂಕರುಗಳೇನೂ ಕಾಣದೆ ಕೊಂಚ ನಿರಾಳವಾದಂತೆನಿಸಿತು. ಬೆರಳಣಿಕೆಯ ಅಂಶಗಳನ್ನು ಹೊರತುಪಡಿಸಿ ಲುವಾಂಡಾ ನಮ್ಮ ಶಹರಗಳಿಗಿಂತ ಹೆಚ್ಚು ಭಿನ್ನ ಎಂದೆನಿಸಲಿಲ್ಲ. ಅದೇ ಧೂಳು, ಜನಜಂಗುಳಿ, ಜನನಿಬಿಡ ಟ್ರಾಫಿಕ್ಕು, ಹಾರ್ನುಗಳ ಅರಚಾಟ ಮತ್ತು ಕೊಳಚೆಪ್ರದೇಶಗಳು. ಅಸಲಿಗೆ ಆ ದಿನ ನಾವು ಲುವಾಂಡಾ ನಗರದೊಳಕ್ಕೆ ಹೋಗಿರಲೇ ಇಲ್ಲ.

ನಗರದ ಮುಖ್ಯದ್ವಾರದಂತಿದ್ದ ವಿಮಾನನಿಲ್ದಾಣದಿಂದ ನೇರವಾಗಿ ನಗರದ ಹೊರಭಾಗದಲ್ಲಿ ನಮಗಾಗಿ ಕಾಯುತ್ತಿದ್ದ ವಸತಿಗೃಹದತ್ತ ತೆರಳಿದ್ದೆವು. “ಈಗ ನೀವು ನೋಡುತ್ತಿರುವುದು ಲುವಾಂಡಾದ ಒಂದು ಭಾಗವಷ್ಟೇ. ನಗರವು ಇದಕ್ಕಿಂತಲೂ ಬಲುಸುಂದರವಾಗಿದೆ”, ಎಂದು ದುಭಾಷಿಯಾಗಿದ್ದ ಮಿಗೆಲ್ ಎಂಬೋಸೋ ಹೇಳಿದ. ನಾನು ಹೂಂ ಎಂದು ತಲೆಯಾಡಿಸಿದೆ. ಆದಷ್ಟು ಬೇಗ ವಸತಿಗೃಹವನ್ನು ತಲುಪಿ ವಿಶ್ರಾಂತಿ ತೆಗೆದುಕೊಳ್ಳುವುದೇ ಆ ಕ್ಷಣದ ಅಗತ್ಯವಾಗಿದ್ದರಿಂದ ಟ್ರಾಫಿಕ್ಕಿನ ಹಿನ್ನೆಲೆಯಲ್ಲಿ ಈ ಮಾತುಗಳು ಜೋಗುಳ ಹಾಡಿದಂತೆನಿಸಿ ನಾವು ಕೂತಲ್ಲೇ ತೂಕಡಿಸಿದೆವು.

ಅಂತೂ ವಿಮಾನ ನಿಲ್ದಾಣದಿಂದ ಸುಮಾರು ಒಂದು ತಾಸಿನ ಪ್ರಯಾಣದ ನಂತರ ನಾವು ನಮ್ಮ ವಸತಿಗೃಹವನ್ನು ತಲುಪಿದ್ದೆವು. ಹಾಗೆ ನೋಡಿದರೆ ಟ್ರಾಫಿಕ್ ಜಂಜಾಟವಿಲ್ಲದಿದ್ದರೆ ಅದು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷಗಳ ದಾರಿಯಷ್ಟೇ. ಆದರೇನು ಮಾಡುವುದು? ಅಂತೂ ಒಂದು ರೀತಿಯಲ್ಲಿ `ಮಿನಿ’ ಮನೆಯಂತಿದ್ದ ಆ ವಸತಿಗೃಹದಲ್ಲಿ ಸೇರಿಕೊಂಡ ನಾವಿಬ್ಬರು ತಮ್ಮ ತಮ್ಮ ಕೋಣೆಗಳಿಗೆ ಹೋಗಿ ಸುಧಾರಿಸಿಕೊಂಡೆವು. ಸಂಜೆಯ ಏಳಕ್ಕೆ ರಾತ್ರಿಯ ಊಟ ಎಂಬ ಸೂಚನೆಯನ್ನು ಕೊಟ್ಟ ದುಭಾಷಿ ಮಹಾಶಯ ನಮ್ಮನ್ನು ವಸತಿಗೃಹದಲ್ಲಿ ಬೀಳ್ಕೊಟ್ಟು ಹೊರಟುಹೋಗಿದ್ದ. ಸುಮಾರು ನಲವತ್ತು ತಾಸುಗಳ ನಂತರ ನಸೀಬಾದ ವಿಶ್ರಾಂತಿಯನ್ನು ಅಪ್ಪಿಕೊಂಡ ನಾನು ಮರುಮಾತಿಲ್ಲದೆ ಹಾಸಿಗೆಯಲ್ಲಿ ಮೈಚೆಲ್ಲಿದ್ದೆ.

ಪುಟ್ಟ ವಿಶ್ರಾಂತಿಯನ್ನು ಮುಗಿಸಿದ ನಾವು ಸಂಜೆಯ ಏಳರ ನಂತರ ಊಟಕ್ಕೆ ತೆರಳಿದೆವು. ಅಷ್ಟಕ್ಕೂ ಆ ಜಾಗವು ಹೋಟೇಲಿನಂತೆ ಕಾಣುತ್ತಿತ್ತೇ ಹೊರತು ಅದು ಪ್ರವಾಸಿಗಳ ತಂಗುವಿಕೆಗೆಂದು ಮೀಸಲಾಗಿರಿಸಿದ್ದ ಹೋಟೇಲ್ ಆಗಿರಲಿಲ್ಲ. ಅದು ಸಂಸ್ಥೆಯೊಂದರ ವಸತಿಗೃಹವಾಗಿತ್ತು. ಆದರೆ ರೆಸ್ಟೊರೆಂಟ್, ಈಜುಕೊಳದಿಂದ ಟೆನ್ನಿಸ್ ಕೋರ್ಟಿನವರೆಗಿನ ಸೌಲಭ್ಯಗಳನ್ನೂ ಈ ಸಂಸ್ಥೆಯು ತನ್ನ ವಿಶಾಲ ಆವರಣದಲ್ಲಿ ವ್ಯವಸ್ಥಿತವಾಗಿ ಇರಿಸಿಕೊಂಡಿತ್ತು.

ಲುವಾಂಡಾ ಜಗತ್ತಿನ ಅತೀ ದುಬಾರಿ ನಗರಗಳಲ್ಲೊಂದು ಅನ್ನುವುದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲೂ ವಿದೇಶೀಯರಿಗೆ ಲುವಾಂಡಾ ಅನ್ನುವುದು ಮತ್ತಷ್ಟು ದುಬಾರಿ. ಈ ವಿಚಾರದಲ್ಲಿ ಲುವಾಂಡಾ ಮ್ಯೂನಿಚ್, ಹಾಂಗ್ ಕಾಂಗ್ ಗಳನ್ನೂ ಕೂಡ ಹಿಂದಿಕ್ಕಿದೆ. ಬೇರೆ ಯಾವ ಕ್ಷೇತ್ರಗಳಲ್ಲಿ ಅಂಗೋಲಾ ಮುಂದಿದೆ ಎಂಬುದನ್ನು ಹೇಳುವುದು ಕಷ್ಟ. ಆದರೆ ದುಬಾರಿ ನಗರಗಳ ವಿಚಾರದಲ್ಲಿ ಲುವಾಂಡಾ ಹಲವು ವರ್ಷಗಳಿಂದ ತನ್ನನ್ನು ತಾನು ಮುಂಚೂಣಿಯ ಸ್ಥಾನದಲ್ಲಿ ಇರಿಸಿಕೊಂಡಿದೆ. ನಾವು ಉದ್ಯೋಗಿಗಳಾಗಿದ್ದರಿಂದ ಈ ವಸತಿಗೃಹದ ಸೌಲಭ್ಯಗಳು ಉಚಿತವಾಗಿದ್ದವೇ ಹೊರತು ನಗರದ ಇತರ ಹೋಟೇಲುಗಳಿಗೆ ಕಾಲಿರಿಸಿದ್ದರೆ ಮೊದಲ ದಿನವೇ ದಿವಾಳಿಯಾಗಲಿರುವುದು ಖಚಿತವಾಗಿತ್ತು. ಲುವಾಂಡಾದ ಸಂಪೂರ್ಣ ವಿಶ್ವರೂಪದರ್ಶನವನ್ನು ಇನ್ನೂ ಮಾಡಿಲ್ಲದ ನಾವು ಆ ಕ್ಷಣದಲ್ಲಿ ಇಷ್ಟಕ್ಕೇ ಕೈಮುಗಿದದ್ದಂತೂ ಸತ್ಯ.

ಆ ರಾತ್ರಿ ವಸತಿಗೃಹದಲ್ಲೇ ಸುಧಾರಿಸಿಕೊಂಡ ನಮ್ಮಿಬ್ಬರ ತಂಡವು ಮರುದಿನ ಮುಂಜಾನೆಯ ಉಪಾಹಾರದ ಬಳಿಕ ವೀಜ್ ನತ್ತ ತೆರಳಿತ್ತು. ಹಾಗೆ ನೋಡಿದರೆ `ವೀಜ್’ ನಮ್ಮ ನಿಜವಾದ ಕರ್ಮಭೂಮಿ. ಆದರೆ ಆ ವೀಜ್ ರಾಜಧಾನಿಯ ಅಕ್ಕಪಕ್ಕದಲ್ಲೇ ಇದೆ ಎಂಬ ನನ್ನ ಲೆಕ್ಕಾಚಾರವು ತಲೆಕೆಳಗಾದಾಗ ಕೊಂಚ ಬೇಜಾರಾಗಿದ್ದಂತೂ ಸತ್ಯ. ಆ ದಿನ ನಿಜಕ್ಕೂ ನಾವು ತೋರಿಕೆಯ ಥಳುಕುಬಳುಕುಗಳಿಂದ ದೂರವಿರುವ ಅಂಗೋಲಾದ ನಿಜವಾದ ಮುಖವನ್ನು ನೋಡಲಿದ್ದೆವು. ಎಲ್ಲದಕ್ಕಿಂತಲೂ ಮುಖ್ಯವಾಗಿ ನಾವುಗಳು ನೆಲೆಸಬೇಕಾಗಿದ್ದ ಪ್ರದೇಶವೇ ವೀಜ್ ಆಗಿದ್ದುದರಿಂದ ಮುಂದೆ ಇನ್ನೇನು ಕಾದಿದೆ ಎಂಬ ನಿರೀಕ್ಷೆಯಲ್ಲಿ ನಾವಿದ್ದೆವು ಅನ್ನುವುದನ್ನು ಹೇಳಲೇಬೇಕು.

ಹೀಗೆ ಲುವಾಂಡಾವನ್ನು ಬಿಟ್ಟು ಹೊರಬಂದ ನಾವು ವೀಜ್ ಕಡೆಗೆ ಸಾಗುತ್ತಿದ್ದಂತೆ ಬದಲಾವಣೆಗಳೂ ಕಾಣತೊಡಗಿದ್ದವು. ನಿಮಿಷಗಳು ಕಳೆದಂತೆ ನಮ್ಮ ಸವಾರಿ ಮಹಾನಗರಿಯಿಂದ ಗ್ರಾಮೀಣ ಪ್ರದೇಶಗಳತ್ತ ನಿಧಾನವಾಗಿ ಹೊರಳಿಕೊಳ್ಳುತ್ತಿತ್ತು. ಮಾರ್ಗಮಧ್ಯದಲ್ಲಿ ದೂರದಿಂದ ಕಾಣುವ ಹಸಿರು ಗುಡ್ಡವೊಂದರಲ್ಲಿ ದೊಡ್ಡದಾಗಿ `ಕಕ್ಸಿಟೋ’ ಎಂದು ಬರೆದಿದ್ದು ಥೇಟು ಅಮೇರಿಕಾದ ಹಾಲಿವುಡ್ ಅನ್ನು ನೆನಪಿಸುತ್ತಿತ್ತು. ಬರೆದಿದ್ದು `ಕಕ್ಸಿಟೋ’ ಆದರೂ ಅಂಗೋಲನ್ನರಿಗೆ ಅದು `ಕಶೀತು’. ಅಂಗೋಲಾದ ಬೆಂಗು ಪ್ರೊವಿನ್ಸ್ (ಪ್ರಾಂತ್ಯ) ನಲ್ಲಿ ಬರುವ ಪುಟ್ಟ ಪಟ್ಟಣವಿದು. ರಾಜಧಾನಿಯಾದ ಲುವಾಂಡಾಗೆ ಅಂಟಿಕೊಂಡೇ ಇರುವುದರಿಂದ ಕೆಲವೊಮ್ಮೆ ಇದು ಲುವಾಂಡಾದ ಭಾಗವೇ ಎಂದು ಹೊಸಬರು ಬೇಸ್ತುಬೀಳುವುದು ಸಹಜ.

ನಿನ್ನೆ ಮತ್ತು ಇಂದಿನ ಮುಂಜಾನೆಯವರೆಗೆ ಲುವಾಂಡಾದಲ್ಲಿ ಸೂಟುಬೂಟುಧಾರಿಗಳನ್ನು, ಲಗುಬಗೆಯಿಂದ ಓಡಾಡುತ್ತಿದ್ದ ನಗರವಾಸಿಗಳನ್ನು ನೋಡುತ್ತಿದ್ದ ನಾನು ನಗರದಿಂದ ಹೊರಬಿದ್ದಂತೆ ರಸ್ತೆಬದಿಯ ವ್ಯಾಪಾರಸ್ಥರನ್ನು, ದಾರಿಹೋಕರನ್ನು, ರೂಪವಿಲ್ಲದ ಕಟ್ಟಡಗಳನ್ನು, ಗುಡಿಸಲಿನಂತಿದ್ದ ಅಂಗಡಿಗಳನ್ನು ಎವೆಯಿಕ್ಕದೆ ನೋಡುತ್ತಿದ್ದೆ. ಏನೇನೂ ಅರ್ಥವಾಗದಿದ್ದರೂ ಪೋರ್ಚುಗೀಸ್ ನಾಮಫಲಕಗಳನ್ನು ಸುಮ್ಮನೆ ಓದತೊಡಗಿದೆ. ಹೊಸತು ಎಂದರೆ ಉತ್ಸಾಹವೂ ಸಹಜವಲ್ಲವೇ?

ಲುವಾಂಡಾದಿಂದ ವೀಜ್ ಕಡೆಗೆ ಸಾಗುತ್ತಿದ್ದ ಆ ಹೆದ್ದಾರಿಯೇ ನನಗೆ ವಿಚಿತ್ರವಾಗಿ ಕಂಡಿತ್ತು. ದೂರದ ದಿಗಂತಕ್ಕಂಟಿಕೊಂಡಂತೆ ಕಾಣುತ್ತಿದ್ದ ಬೆರಳೆಣಿಕೆಯ ಗುಡ್ಡಗಳು, ಸುತ್ತಲೂ ಬಹುತೇಕ ಖಾಲಿ ಎನ್ನಬಹುದಾದ ವಿಶಾಲವಾದ ಬಯಲುಪ್ರದೇಶ ಮತ್ತು ಈ ಚಪ್ಪಟೆ ಕಾವಲಿಯಂತಿದ್ದ ಸಮತಲವನ್ನು ಸೀಳಿ ಸಾಗುತ್ತಿದ್ದ ಟಾರುರಸ್ತೆ. ಮಟ್ಟಸವಾಗಿ ಬಾಚಿದ ನಂತರ ಉಳಿಯುವ ಬೈತಲೆಯಂತಿನ ಹೆದ್ದಾರಿ. ಆ ರಸ್ತೆ ಅದೆಷ್ಟು ನೇರವಾಗಿತ್ತೆಂದರೆ ನಾವಿದ್ದ ಜಾಗದಿಂದಲೇ ಮುಂದೆ ಬರಲಿದ್ದ ಸುಮಾರು ಒಂದೂವರೆ ಕಿಲೋಮೀಟರುಗಳ ದಾರಿ ನಮಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು.

ನಗರದಿಂದ ಹೊರಬಂದು ಹೆಚ್ಚೇನೂ ಜನಸಂದಣಿಯೂ ಇಲ್ಲದಿದ್ದ ಕಾರಣದಿಂದಾಗಿ ನಮ್ಮ ಮಜ್ದಾ ಕಾರು ಘಂಟೆಗೆ ನೂರರಿಂದ ನೂರಿಪ್ಪತ್ತು ಕಿಲೋಮೀಟರುಗಳ ವೇಗದಲ್ಲಿ ರೊಂಯ್ಯನೆ ಸಾಗುತ್ತಿತ್ತು. ಅತ್ತ ಹಳ್ಳಿಯೂ ಅಲ್ಲದ ಇತ್ತ ನಗರವೂ ಅಲ್ಲದ ಆ ಪ್ರದೇಶದ ದೃಶ್ಯವನ್ನು ನಾನು ಚೆನ್ನಾಗಿಯೇ ಆಸ್ವಾದಿಸುತ್ತಿದ್ದೆ.

ಆದರೆ ನಮ್ಮ ಕಹಾನಿಗೆ `ಟ್ವಿಸ್ಟ್’ ಸಿಗಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಸುತ್ತಲೂ ಕಾಣುತ್ತಿದ್ದ ದೃಶ್ಯವನ್ನು ನಾನು ಅಚ್ಚರಿಯ ಕಣ್ಣುಗಳೊಂದಿಗೆ ನೋಡುತ್ತಿರುವಂತೆಯೇ ಒಂದು ಜಾಗದಲ್ಲಿ ಎಡಕ್ಕೆ ತಿರುಗಿದ ನಮ್ಮ ವಾಹನವು ಹೆದ್ದಾರಿಯನ್ನು ಬಿಟ್ಟು ಹೊಸ ದಾರಿಯನ್ನು ಹಿಡಿದಿತ್ತು. ಈ ತಿರುವಿನೊಂದಿಗೆ ತಕ್ಕಮಟ್ಟಿನ ನಗರವೆಂಬಂತೆ ಕಾಣುತ್ತಿದ್ದ ದೃಶ್ಯಗಳು ಮಾಯವಾಗಿ ಹಟಾತ್ತನೆ ದಟ್ಟಕಾಡುಗಳು ಎದುರಾಗಿದ್ದವು. ಅತ್ತ, ಇತ್ತ, ಎತ್ತ ನೋಡಿದರೂ ಕಾಡೇ. ಗುರುಗ್ರಾಮ-ದೆಹಲಿಯ ಕಾಂಕ್ರೀಟ್ ಕಾಡಿನಿಂದ ಅಕ್ಷರಶಃ ಬೇಸತ್ತಿದ್ದ ನಾನು `ವಾವ್, ಹಸಿರು… ಕಾಡು… ಅಡ್ವೆಂಚರ್’ ಅಂತೆಲ್ಲಾ ಮನದಲ್ಲೇ ಮಂಡಿಗೆ ಮೆಲ್ಲಲಾರಂಭಿಸಿದೆ. ಕಾಡು ಬಂದುಬಿಟ್ಟರೂ ರಸ್ತೆಯು ಚೆನ್ನಾಗಿಯೇ ಇದ್ದದ್ದರಿಂದಾಗಿ ಪ್ರಯಾಣದ ಆರಾಮಕ್ಕೇನೂ ತೊಂದರೆಯಾಗಲಿಲ್ಲ. ಆದರೆ ಮೊದಲಿದ್ದ ನೇರವಾದ ರಸ್ತೆಗಳು ಮಾಯವಾಗಿ ಅಂಕುಡೊಂಕಿನ ರಸ್ತೆಗಳು ಶುರುವಾದ ಪರಿಣಾಮವಾಗಿ ಹೊಟ್ಟೆಯಲ್ಲಿ ಪಚನಕ್ರಿಯೆಯಲ್ಲಿದ್ದ ವ್ಯವಸ್ಥೆಗಳು ಮಾತ್ರ ಕೊಂಚ ಅಲುಗಾಡಿಹೋದವು.

ಕಾಡು… ಕಾಡು… ಕಾಡು… ಅದೆಷ್ಟು ಕಾಡು? ಐದು ಕಿಲೋಮೀಟರ್? ಹತ್ತು ಕಿಲೋಮೀಟರ್? ಇಪ್ಪತ್ತು ಕಿಲೋಮೀಟರ್? ಐವತ್ತಾದರೂ, ಎಪ್ಪತ್ತಾದರೂ, ನೂರಾದರೂ ಈ ಕಾಡುಗಳು ಮುಗಿಯುವಂತೆ ಮಾತ್ರ ಕಾಣಲಿಲ್ಲ. ಸಾಗಿದಷ್ಟೂ ಹಾದಿ, ನೋಡಿದಷ್ಟೂ ಮುಗಿಯದ ಕಾಡು! ಅಷ್ಟೊಂದು ಕಾಡು ಹಾಗಿರಲಿ, ಅಷ್ಟು ಖಾಲಿ ಪ್ರದೇಶವನ್ನೇ ನಾನು ನೋಡಿದವನಲ್ಲ. ಮೇಲಾಗಿ ನಾವು ಇದೆಲ್ಲಿ ಬಂದುಬಿಟ್ಟೆವಪ್ಪಾ ಎಂಬ ಅಚ್ಚರಿಯನ್ನೇ ಈ ಪಯಣವು ನಮ್ಮಲ್ಲಿ ಸೃಷ್ಟಿಸಿತ್ತು. ಹತ್ತು ಕಿಲೋಮೀಟರುಗಳಿಗೊಮ್ಮೆ ಅಲ್ಲೋ ಇಲ್ಲೋ ಸಿಗುವ ನಾಲ್ಕಾರು ಮಂದಿ, ಇಪ್ಪತ್ತೈದು-ಮೂವತ್ತು ಕಿಲೋಮೀಟರುಗಳಿಗೊಮ್ಮೆ ಸಿಗುವ ಬೆಂಕಿಪೊಟ್ಟಣದಂತಿದ್ದ ಇಟ್ಟಿಗೆಯ ಗೂಡಾಗಿದ್ದ ಏಳೆಂಟು ಮನೆಗಳ ಗುಂಪು, ಐದಾರು ನಿಮಿಷಗಳಿಗೊಮ್ಮೆ ಕಣ್ಣೆದುರಿಗೆ ಸಿಗುತ್ತಿದ್ದ, ನಮ್ಮಷ್ಟೇ ವೇಗದಲ್ಲಿ ಸಾಗುತ್ತಿದ್ದ ಬೆರಳೆಣಿಕೆಯ ವಾಹನಗಳು… ಇವಿಷ್ಟನ್ನು ಬಿಟ್ಟರೆ ಅಲ್ಲಿ ಏನೆಂದರೆ ಏನೂ ಇರಲಿಲ್ಲ. ಹಟಾತ್ ಎದೆಹಿಡಿದುಕೊಂಡು ಜೀವಬಿಟ್ಟರೂ ಅಲ್ಲಿ ಏನಾಯಿತೆಂದು ಕೇಳಲು ಒಂದೇ ಒಂದು ನರಪ್ರಾಣಿಯಿಲ್ಲ. ಅದೊಂದು ಅಕ್ಷರಶಃ `ನೋ ಮ್ಯಾನ್ಸ್ ಲ್ಯಾಂಡ್’.

ಲುವಾಂಡಾದಿಂದ ವೀಜ್ ಗಿದ್ದ ಮುನ್ನೂರು ಚಿಲ್ಲರೆ ಕಿಲೋಮೀಟರುಗಳ ಹಾದಿಯಲ್ಲಿ ಬರೋಬ್ಬರಿ ಇನ್ನೂರು ಕಿಲೋಮೀಟರುಗಳು ಕೇವಲ ಕಾಡು ಎಂದರೆ ನೀವು ನಂಬಲೇಬೇಕು. ಈ ನಿರ್ಜನ ಪ್ರದೇಶದುದ್ದಕ್ಕೂ ಅಲ್ಲಲ್ಲಿ ನಮಗೆ ಕಾಣಸಿಗುತ್ತಿದ್ದಿದ್ದು ಎರಡೇ ಎರಡು ಸಂಗತಿಗಳು. ಅದೇನೆಂದರೆ ಪೋಲೀಸ್ ಚೆಕ್-ಪೋಸ್ಟ್ ಗಳು ಮತ್ತು ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದುಕೊಂಡಿದ್ದ ಅಸ್ಥಿಪಂಜರದಂತಿದ್ದ ವಾಹನಗಳು. ಈ ವಾಹನಗಳಲ್ಲಿ ಸಿಂಹಪಾಲು ಅಂಗೋಲಾದಲ್ಲಿ ನಡೆದ ಆಂತರಿಕ ಯುದ್ಧದ ಕಾಲದಲ್ಲಿ ಗುಂಡುಗಳಿಗೆ, ಬೆಂಕಿಗೆ ಆಹುತಿಯಾಗಿ ಕಸದಂತಾದ ಬಸ್ಸುಗಳು ಮತ್ತು ಕಾರುಗಳು. ಹತ್ತುನಿಮಿಷಕ್ಕೊಂದು ವಾಹನ ನೋಡಿದೆವು ಎಂದು ಲೆಕ್ಕ ಹಿಡಿದರೂ ಹೀಗೆ ನೋಡಿದ, ಯಾರಿಗೂ ಬೇಡವಾಗಿ ಅವಶೇಷಗಳಂತೆ ಬಿದ್ದಿದ್ದ ಲೋಹದ ಅಸ್ಥಿಪಂಜರಗಳು ಸುಮಾರಾದಾವು. ಇದನ್ನು ನೋಡುತ್ತಾ `ಗುಜರಿಯವರು ಅಂಗೋಲಾದಲ್ಲಿ ಇಲ್ಲವೋ ಹೇಗೆ!’, ಎಂದು ಒಳಗೊಳಗೇ ಲೆಕ್ಕಹಾಕಿದೆ ನಾನು.

ಇನ್ನು ಈ ಕಾಡಿನ ಹಾದಿಯಲ್ಲಿ ಸಿಕ್ಕ ಐದಾರು ಚೆಕ್-ಪೋಸ್ಟ್ ಗಳ ಪೋಲೀಸರು ಪ್ರತೀಬಾರಿಯೂ ನಮ್ಮ ವಾಹನವನ್ನು ನಿಲ್ಲಿಸಿ ತಪಾಸಣೆಗೊಳಪಡಿಸುವುದೂ ಆಯಿತು. ವಾಹನದ ದಾಖಲಾತಿಗಳಿಂದ ಹಿಡಿದು ನಮ್ಮ ಪಾಸ್-ಪೋರ್ಟುಗಳವರೆಗೆ ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿತ್ತು. ನಮ್ಮ ಪಾಸ್-ಪೋರ್ಟುಗಳನ್ನು ಪೋಲೀಸರ ಕೈಗಿಡುತ್ತಿದ್ದ ನಮ್ಮ ದುಭಾಷಿ ನಮ್ಮನ್ನು ಬೊಟ್ಟು ಮಾಡುತ್ತಾ “ಇಂಡಿಯಾನು… ಇಂಡಿಯಾನು…” ಎನ್ನುತ್ತಿದ್ದ. `ಇಂಡಿಯಾನು’ ಎಂದರೆ `ಭಾರತೀಯ’ ಅನ್ನುವುದನ್ನು ಬಿಟ್ಟರೆ ಸಂಭಾಷಣೆಗಳೆಲ್ಲವೂ ಪೋರ್ಚುಗೀಸ್ ಭಾಷೆಯಲ್ಲಿದ್ದ ಪರಿಣಾಮವಾಗಿಯೂ, ಇವೆಲ್ಲವೂ ಮೊದಲ ಅನುಭವವಾದ ಕಾರಣದಿಂದಲೂ ಇದ್ಯಾವುದೂ ನಮ್ಮ ತಲೆಗೆ ಹೊಕ್ಕಲಿಲ್ಲ. ಇನ್ನು ಅಲ್ಲಿಂದ ಮುಂದುವರಿದರೆ ಮತ್ತದೇ ಏಳೆಂಟು ಇಟ್ಟಿಗೆಯ ಪುಟ್ಟ ಮನೆಗಳು, ಎಲ್ಲೋ ದೈವಾನುಗ್ರಹದಂತೆ ಸಿಗುತ್ತಿದ್ದ ಗೂಡಿನಂತಿದ್ದ ಬೆರಳೆಣಿಕೆಯ ಅಂಗಡಿಗಳು, ಹತ್ತಿಪ್ಪತ್ತು ಜನರು, ತಲೆಯ ಮೇಲೆ ಬಕೆಟ್ಟಿನಲ್ಲಿ ಏನೇನೋ ಹಿಡಿದುಕೊಂಡು ಸಾಗುತ್ತಿದ್ದ ಗ್ರಾಮೀಣ ಮಹಿಳೆಯರು, ಮತ್ತದೇ ಕಾಡು, ಕಾಡು, ಕಾಡು…

ಲುವಾಂಡಾದ ವೈಭವವನ್ನು ಬಿಟ್ಟು ಆಗಲೇ ನೂರಿನ್ನೂರು ಕಿಲೋಮೀಟರುಗಳನ್ನು ನಾವು ದಾಟಿಯಾಗಿತ್ತು. ಈ ನೂರಿನ್ನೂರು ಕಿಲೋಮೀಟರುಗಳಷ್ಟು ಹಬ್ಬಿದ ಕಾಡನ್ನು ನೋಡಿದ ನನಗೆ ಇದೆಂಥಾ ಜಾಗಕ್ಕೆ ಬಂದುಬಿಟ್ಟೆನಪ್ಪಾ ಎಂದನ್ನಿಸತೊಡಗಿತ್ತು. ಆ ಪುಟ್ಟ ಡಬ್ಬದಂತಿದ್ದ ಇಟ್ಟಿಗೆಯ ಮನೆಗಳನ್ನು ನೋಡಿದರೆ ಹೇಗಪ್ಪಾ ಈ ಜನರು ಇಲ್ಲಿ ವಾಸಿಸುತ್ತಿದ್ದಾರೆ ಎಂದು ಅಚ್ಚರಿಪಡುತ್ತಿದ್ದೆ. ಈ ಮನೆಗಳ ಆಸುಪಾಸಿನಲ್ಲಿ ತಪ್ಪಿಯೂ ಕಣ್ಣಿಗೆ ಬೀಳದ ಆಸ್ಪತ್ರೆ, ಮಾರುಕಟ್ಟೆಗಳನ್ನು ಮನದಲ್ಲೇ ಕಲ್ಪಿಸಿಕೊಂಡು ಇಪ್ಪತ್ತೊಂದನೆಯ ಶತಮಾನದಲ್ಲೂ ಹೀಗೆ ಜೀವಿಸುವವರಿದ್ದಾರೆಯೇ ಎಂದು ದಿಗಿಲಾಗುತ್ತಿದ್ದೆ. ರಸ್ತೆಯೊಂದು ಚೆನ್ನಾಗಿತ್ತು ಅನ್ನುವುದನ್ನು ಬಿಟ್ಟರೆ ನಾನು ವಿದ್ಯುದ್ದೀಪದ ಕಂಬಗಳನ್ನಾಗಲೀ, ಆಸ್ಪತ್ರೆಯೊಂದರ ಕಟ್ಟಡವನ್ನಾಗಲೀ ನೋಡದೆ ಎಷ್ಟೆಷ್ಟೋ ಕಿಲೋಮೀಟರುಗಳನ್ನು ದಾಟುತ್ತಿದ್ದೆ. ಇದರೊಂದಿಗೇ ನಾನೀಗ ನಿಜವಾದ ಆಫ್ರಿಕಾವನ್ನು ನೋಡುತ್ತಿದ್ದೇನೆ ಎಂಬ ಭಾವವು ಮನದಲ್ಲಿ ನಿಧಾನವಾಗಿ ಮೂಡಲು ಶುರುವಾಯಿತು. ನಿಮ್ಮ ಜೀವನೋತ್ಸಾಹದ ನಿಜವಾದ ಪರೀಕ್ಷೆಗಳು ಶುರುವಾಗುವುದೇ ಇಂಥಾ ಸಂದರ್ಭಗಳಲ್ಲಿ. “ಲುವಾಂಡಾದ ಶಾಪಿಂಗ್ ಮಾಲ್ ಗಳು ನನಗೆ ಮಂಗಳೂರಿನಲ್ಲೂ ಸಿಗುತ್ತವೆ. ಅದರಲ್ಲೇನು ಮಹಾ? ಈ ಬಾರಿ ಅಂಗೋಲಾದ ಕುಗ್ರಾಮಗಳಲ್ಲೂ ಬೀಡುಬಿಡೋಣ”, ಅನ್ನಿಸಿತು. ಇದೇ ಮೊದಲಬಾರಿಗೆ ನನ್ನ ಪಯಣವು ಸರಿಯಾದ ದಿಕ್ಕಿನತ್ತ ಸಾಗುತ್ತಿದೆ ಎಂದನಿಸಿ ಖುಷಿಯಾಯಿತು.

ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಭಾರತವನ್ನು ಬಿಟ್ಟು ಬಂದ ನಾನು ಪ್ರಸ್ತುತ ಕಾಲಮಾನದಿಂದ ಕಮ್ಮಿಯೆಂದರೂ ಸುಮಾರು ಎಪ್ಪತ್ತೈದು ವರ್ಷ ಹಿಂದೆ ಸಾಗಿಬಿಟ್ಟಿದ್ದೆ ಎಂದನ್ನಿಸಿತ್ತು. ಅಕ್ಷರಶಃ ಟೈಮ್-ಮಷಿನ್ನಿನಲ್ಲಿ ಕುಳಿತು ಕೆಲ ತಾಸುಗಳಲ್ಲೇ ಮುಕ್ಕಾಲು ಶತಮಾನ ಹಿಂದಕ್ಕೆ ಸಾಗಿದಂತೆ!

Leave a Reply