ಈ ಆಸಾಮಿ ನನ್ನೂರ ಅಸಾದಿಯಂತಲ್ಲ 

 

 

 

 

 

 

 

ಸಿ ಜೆ ರಾಜೀವ 

 

ನನ್ನೂರ ದೇವತೆ
ದುರ್ಗಮ್ಮನ ದೊಡ್ಡಕ್ಕ
ಕರಿಯಮ್ಮನಿಗೆ ಪ್ರತಿ ಜಾತ್ರೆಯಲೂ ನಿಂದನೆಯ ಮಜ್ಜನ
ನನ್ನ ಅಸಾದಿಗಳು ಬೈದದ್ದೇ ಬೈದದ್ದು !
ನೀನು ಹಾದರದವಳು, ನಡತೆಗೆಟ್ಟವಳು
ದಾನವೇಂದ್ರ ರಾವನಣನ್ನು ಕೊಂದದ್ದೇಕೆ
ಆತನೇನು ಧರ್ಮ ಭ್ರಷ್ಟನಲ್ಲ..
ಅದೇನು ಬೈಗುಳ, ಅದೆಂಥಾ ಪ್ರಶ್ನೆ
ಅನಕ್ಷರಸ್ಥ ಅಸಾದಿಯ
ನಂಜಿಲ್ಲದ ಗೇಲಿಗೆ
ಕರಿಯಮ್ಮಒಲಿವಳು, ನಲಿವಳು
ನೆರೆದ ಊರ ಭಕುತರು ಬೈಗುಳಕೆ
ಎನುವರು ಉಘೇ ಉಘೇ

ಯಾಕೆ ಹೀಗೆ ?
ಊರ ಕಾಯುವ ದೇವತೆಗೆ
ಬೈಗುಳವೇಕೆ ?
ಎಂದಾದರೂ ಅರಿವು ಬಂದು
ಕರಿಯಮ್ಮ ಕೆರಳಿ ಕೆಂಡವಾದರೆ ?
ಭಕುತರು ಬೀದಿಗಿಳಿದರೆ..
ನನ್ನದೋ ಕಾಳಜಿಯ ಕಕ್ಕುಲಾತಿ !
ನನ್ನವ್ವನ ಮುಂದೆ ಅನುಮಾನ ಹರಡಿದೆ

ಆಕೆ ನಕ್ಕು ಹೇಳಿದಳು-
ಅಯ್ಯೋ ಮಗನೇ,
ಆಸಾದಿಯ ಸತ್ಯದ ಹಾಡಿಗೆ
ಕೋಪವೇಕೆ ತಾಪವೇಕೆ ?
ನರ ಮನುಷ್ಯಳಾದ ಮೇಲಲ್ಲವೇ
ಕರಿಯಮ್ಮ ದೇವರಾಗಿದ್ದು
ಅದಕೂ ಮುನ್ನ ಆಕೆಯೂ
ಎಡವಿರಬಹುದು ಹತ್ತಾರು ಬಾರಿ
ಆಕೆ ತಪ್ಪು ಒಪ್ಪುಗಳ ಅಮ್ಮ !
ಸಂಭ್ರಮದ ಹೊತ್ತಲ್ಲೂ ಕರಿಯಮ್ಮನ
ಕಾಲು ನೆಲದ ಮೇಲೇ ಇರಬೇಕಲ್ಲವೇ ?
ಅದಕಾಗಿ ಆಸಾದಿಯ ನೆನೆಕೆ ಸೇವೆ !
ಇದು ಕರಿಯಮ್ಮನಿಗೂ ಭಕುತರಿಗೂ
ಅರಿವಿಲ್ಲ ಎಂದಲ್ಲ
ತಿಳಿದೇ ನಡೆಯುವ ಜಾತ್ರೆಯಾಟವಿದು !

ಇಲ್ಲೊಬ್ಬ ಅಕ್ಷರಸ್ಥ ಆಸಾಮಿ
ಪ್ರತಿ ದಸರೆಯಲ್ಲೂ
ದುರ್ಗೆಯನ್ನು ತೆಗಳುತ್ತಾನೆ
ಮಹಿಷನನ್ನು ಭಜಿಸುತ್ತಾನೆ
ಆಸಾದಿಯಂತೆ ಸತ್ಯ ಹೇಳುತ್ತಾನೆ
ಆದರೆ, ಭಾಷೆಯಲಿ ಅಂದವಿಲ್ಲ
ಮಾತಿನಲ್ಲಿ ಚೆಂದವಿಲ್ಲ
ಇದೆ- ನಾಲಿಗೆ ತುಂಬಾ ನಂಜು
ಬೌದ್ಧಿಕತೆಯ ಬಡಿವಾರ
ಬೈಗುಳಕೆ ದುರ್ಗೆ ಕನಲಿರಬಹುದು
ಭಕುತರಂತೂ ಬೀದಿಗಿಳಿದಿದ್ದಾರೆ
ಆಸಾಮಿಗೆ ನಡೆದಿದೆ
ದ್ವೇಷಪೂರಿತ ಮಾತಿನ ಮಂಗಳಾರತಿ !

ಮತ್ತೆ ನನ್ನವ್ವನ ಕೇಳಿದೆ
ಹೇಗಿದೆ ಹೊಸ ನಿಂದಾ ಸ್ತುತಿ ?
ಆಕೆ ನಗಲಿಲ್ಲ, ಆತಂಕದಲಿ ಅಂದಳು:
ಭಯವಾಗುತಿದೆ ಮಗನೆ,
ಏನ ಹೇಳಲಿ ?
ತಿಳಿದೇ ನಡೆಯುವ
ಅರಿವುಗೇಡಿನ ಆಟವಿದು
ಕರಿಯಮ್ಮನ ಬೈಯುವ
ನಮ್ಮುರ ಆಸಾದಿಯೇ ಬೇರೆ
ದುರ್ಗೆಯನು ತೆಗಳುವ
ಈ ಊರಿನ ಆಸಾಮಿಯೇ ಬೇರೆ
ಬೈಯುವವರೆಲ್ಲಾ
ಆಸಾದಿಗಳಲ್ಲ
ದ್ವೇಷಿಸುವವರು ಭಕುತರಲ್ಲ !

 

3 comments

  1. ಗದ್ಯಕ್ಕೇ ಅಂತ ಬರೆದುಬಿಟ್ಟು ಕೈ ತೊಳಕೊಂಡಿರುವ ಇಂತಹ ವಸ್ತುವನ್ನು ಕವಿತೆಯಾಗಿಸಲು ಪ್ರಯತ್ನಿಸುವುದೇ ನಿಜವಾದ ಹೊಸಮಾರ್ಗ ಎಂದು ನಾನು ಅಂದುಕೊಳ್ಳುವೆ . ಇಲ್ಲಿ ಇನ್ನಷ್ಟು ಕೊಂಬೆರೆಂಬೆ ಸವರಿದ್ದರೆ ಈ ಕವಿತೆಗಿಡ ಇನ್ನೂ ಚೆನ್ನಾಗಿರುತ್ತಿತ್ತು. ಆದರೂ ಈಗಲೂ ಕವಿತೆ ಅದರ ಹೊಸಮಾರ್ಗದಿಂದಲೆ ತಿರುಗಿ ನೋಡುವಂತಹ ಹೊಸಬೆಳೆಯಾಗಿದೆ. ಅಸಾದಿಗಳ ಬೈಗುಳವನ್ನು ಕೇಳಿದ್ದವರಾದರೆ ಇದು ಥಟ್ಟನೆ ಮನಸ್ಸಿಗಿಳಿಯುತ್ತದೆ.

  2. ಥ್ಯಾಂಕ್ಯೂ ಮೇಡಂ.. ಕಾವ್ಯವಾಗಲು ಯತ್ನಿಸಿರುವ ಸಾಲುಗಳಿವು ಎಂಬ ಭಾವದಲ್ಲಿಯೇ, ಓದಿ ಪ್ರತಿಕ್ರಿಯಿಸಲಿ ಎಂದು ಮೋಹನ್ ಸರ್ ಗೆ ವಾಟ್ಸಾಪ್ ಮಾಡಿದ್ದೆ. ಅವರು ಕಾವ್ಯದ ಚೌಕಟ್ಡಿಗೆ ಎಳೆತಂದು ಪ್ರಕಟಿಸಿದ್ದಾರೆ.ಅವರ ಪ್ರೀತಿ-ಪ್ತೋತ್ಸಾಹಕ್ಕೆ ಋಣಿ.
    ನಿಮ್ಮಪ್ರತಿಕ್ರಿಯೆಗೆ ಮತ್ತೊಮ್ಮೆ ಧನ್ಯವಾದಗಳು.
    ರಾಜೀವ

Leave a Reply