fbpx

ಒಂದೂರಲ್ಲಿ..

         

ಊರಿನ ತಲೆಬಾಗ್ಲನಾಗೆ ಇತ್ತು

ಒಂದು ದೇವ್ರ ಗುಡಿ,

ಮುಂದಕ್ಕೊಂದು ಅಳ್ಳೀ ಮರ

 

ಜತೀಗೇ…ಒಂದು ಸಂಪಿಗೆ ಮರ

ಅದರ ತುಂಬ್ಲು ಮೊಗ್ಗೊಡ್ದು

ಘಮ್….ಅಂತ, ಗಾಳಿ ನೆತ್ತಿಗೇರೊ

ಒತ್ನಾಗೆ…..

 

ಎಲೆ ಚಂಚಿ ಬಿಚ್ಕೊಂದು

ಕವ್ಳಿಗೆ ಎಲೆಗಂಟ ವತ್ತರ್ಸಕಾಂಡು

ಎಚ್ಚಾದ ರಸವ ಪಿಚ್ಚಕ್ಕನೆ

ನೆಲಕ್ಕೆಉಕ್ಕೋಂತ….

 

ಚಿಕ್ಕಿ ಕಣ್ಣಲ್ಲಿ ಕಣ್ಣಿಟ್ಟು

ದೀಪ ಹಚ್ಚಿಟ್ಟು ಮಾತಾಡಕ್ಕೆ ಕುಂತವ್ರೇ

ಆ ಕಾಲಕಾಲದಿಂದ್ಲೂ,

ಊರ ಉಳುಸಿ ಕಾಯೋವಂಥ ನಮ್ಮೂ…ರ

ಮಾರೇರು, ಮಸಣೀರು, ಮಾಸ್ತವ್ವದೀರು

 

ಅವರಿವ್ರ, ಊರವ್ರ

ಮನೆಮನೆ ಕಥೆ… ಹೆಳತಲೇ ಕೇಳತಲೇ,

ಬೆಳಕರ್ಸ್ತಾತಾರೆ ಕಣವ್ವಾ ಇವ್ರು.

ಅಗ್ಗ…

ಪುರಾಣ ….ಬಿಚ್ಚಿದ್ರು..

ಇತ್ಲಾಗ್ ವಸಿ ಕಿವಿಚೊಟ್ರೆ ಬಿಟ್ಟು ಕೇಳಿಸ್ಕಳಿ….

 

ಇಲ್ ಕೇಳಕ್ಕೋ,

ಆದಿ ಯಾವುದು, ಕೊನೆ ಯಾವುದು

ಅರಿದೇನೇ ಹೋದ್ಲಲ್ಲಾ ಆ ಸೀತೆ

ಕೊನಗೂವೇ…

ಹಿಡದ ಹುಲ್ಕಡ್ಡೀನ ಬುಡದಲೇ

ಕಥೆಯಾದ್ಲು ಕಣೆ ನನ್ ತಾಯಿ;

ರಾಮ-ರಾವ್ಣ, ರಾವಣಾ-ರಾಮ

ಅಂತವ ಜಪಮಾಡಿ ಮಾಡಿ

ಅವ್ಳು…

ಕಲಸಿ ರಾಡಿ… ಆಗೋದ್ಲು ಬಾ

ಹುಷ್…ನಮ್ಮಪ್ಪ

ಅರ್ಥಾನೇ ಇಲ್ಲ್ದೇ

ಭೂಮಿತೂಕ ಹೊತ್ಕಂಡು,

ವಾರುಸುದಾರ್ರೋ ನಾವು ಅನ್ನೋಂಗೆ

ಕಾದ್ರಲ್ಲೇ ತಾಯಿ ಆ ಶಬರೀ…ರು

ದಣದು,

ಈಗ ಬಂದಾನೇ ರಾಮ!

ಆಗ್ ಬಂದಾನೇ ರಾಮಾ…. ಅಂಥ ನೆಚ್ಕೊಂಡು!

ಜೀವಮಾನಾನೆ ತೇದು ತೇದು

ಕಳತು… ಹಣ್ಣಾಗಿ

ಬಂದಂಥ ಅವ್ನ ತಣುಸುದ್ರಲ್ಲಾ!

ಇದ್ಕೇನಂತಿಯಕ್ಕಾ?…..ನೀನೆ ಯೇಳು

 

ಹೂಂ…ಅದೇ ನಮ್ಮೂರ ಹೊಟ್ಟೆ ರಾಮ

ಕಟ್ಟೆಮೇಲೆ ಕುಂತ್ಗಂಡು, ಸಂದೂ..ಲು

ಕವಡೆ ಬುಟ್ಕಂಡು, ಗಿಚ್ಚಿ ಆಡ್ತಾ…ಇದ್ರೆ

ಅವ್ರವ್ವ ಸಂದೂಬೋಗು

ಮುಕ್ಳ ಹರ್ಯೊ ಗೇಯ್ಮೆ ಮಾಡಿ

ಸಾಕ್ತ ಅವ್ಳಲ್ಲ ಅವನನ್ನ

ತಕ್ಕೊ;

ಅವ್ಳ ಗಂಡಂದು ಅದೇ

ಕಥೆ, ಮಗಂದೂವೆ….ಓಗ್ ಅತ್ಲಾಗೆ

ಸತ್ತು ಮಣ್ಣಿಗಿಡೋವರ್ಗೂ ಅಂಡೂರ್ ಕೂರಂಗಿಲ್ಲ,

ಆ ರಾಮಿ ಅನ್ನೊ ಪಾಯಿ! ಪಾಪ.

ಏ…ತೆಗಿರೆ ಅಮ್ಮೀರ

ಇತ್ಲಾಗ್ ಕೇಳ್ರೇ…

ನಿಂಬೆ ಹಣ್ಣಂಗೆ ಎಳೇ ಮೊಗರು ಶಕುಂತಲೆ,

ಉಂಗ್ರ ನಂಬ್ಕೊಂಡು

ಛೇ…ಪಾಪ, ವಸಿ ಕಷ್ಟ ಬಿದ್ಲಾ…,

ಈ ಊರ ಹಲ್ಲೆಕಟ್ಟೋ

ಸಾಬರ ಮಗಳಂಗೆ

ಎನೂ…

ಆ ಲಾರಿ ಡೇವರು ಲಕ್ಷ್ಮಣಂಗೆ ಬಸುರಾಗಿ,

ಊರನ, ಜಾತಿನ ಬುಟ್ಟು ಹೋದೋಳು,

ತಿರಗಿ ಊರುಗ್ ಬಂದು

ಕೂಲಿ ಮಾಡೀ, ನಾಲಿ ಮಾಡಿ

ಕಾಡು ಅಂದೇಯ…, ಊರು ಅಂದೇಯ…,

ಹೊರೆ ಹೊತ್ತು ಹೊತ್ತು, ಬೆನ್ನೇ ಗೂನಾಗಿಲ್ವೇನೇ?

ಅವ್ಳಿಗೆ ತಕ…

ಆ ಭರತನ್ನ ಕೂಸುಮರಿ ಮಾಡ್ತಿದ್ಲಲ್ಲ…

ಮಂಥರೆ ಅಂಗಾಗೋಗವ್ಳೆ! ಅಂತೀನಿ

ಥೋ…ತುತು……ಥು

ಈ ಎಣ್ಣು ಜನ್ಮಕ್ಕೀಟು ಬೆಂಕಿ ಹಾಕ್ತು! ತಕಳವ್ವ.

ಇದು ಸುಧ್ಹಾರ್ಸಕುಲ್ಲ ಬುಡು

ಯಾವ ಕಾಲಕ್ಕೂವೆ.

ಅಗ್ಗೋ, ನೋಡ್ರವ್ವೋ ನೋಡಿ;

ನಮ್ಮ ನಾಡಿನ ಕಥೆ ಕೇಳ್ಕಂಡು

ಹುಲಿ ಕರಡಿ ಎಲ್ಲಾ ನಗ್ತ ಬಿದ್ದವೆ ಅಂಗೆ ಕಾಡಲೀ…

ಬಿಟ್ಟೋದ ಬಸುರಿ ಹೆಣ್ಮಕ್ಕಳ ಸಾಕೋ,

ಪುಣಾತ್ಮರ ಜತೀಗೆ ಅಕ್ಕರೆ ಮಾಡಕಂಡೂ….

ಅವೂ ನಿಂತವೆ ಅಂತೀನಿ

ಅಯ್ಯೋ! ಅಣೆ ಬರ ಕಣೇ ಅದು, ಹಣೆಬರ

ಇದಿಯಮ್ಮ….

ಹುಟ್ಟಿದ ಮಗಿನ ತೊಟ್ಲು ಹುಡಕ್ಕೊಂದೋಗಿ,

ರಾತ್ರಿ ಹೊತ್ನಾಗೆ

ಎಲ್ರೂವೆ ಮನಿಕಂದು, ಸದ್ದಡಗಿದ  ಮ್ಯಾಕೆ,

ನಡರಾತ್ರಿಲಿ ಕಡ್ಡೀಲಿ ಕೊರ್ದು ಬತ್ತಾಳೆ ಕನೆ ಅಣೆ ಮೇಲೆ

ಆಮ್ಯಾಕೆ! ಬೊಮ್ಮ ಬಂದ್ರು ಅಳಿಸ್ನಾರ ಅದ

ಹಾಂ…ತಿಳಕಾ

 

ದಿಟ, ದಿಟ, ಮಾಯ್ಕಾತಿ ಕನೆ ಅವ್ಳು!

ಊರಾಗೆ ಒಂದು ನೊಣ ಹೊಕ್ಕೂದ್ರು

ನಮ್ಮ ಕಣ್ಣ ತಪ್ಪುಸ್ನಾರ್ದು;

ಅದ್ಯಾವ ಮಾಯ್ದಾಗೆ ಹೋತೊಳೊ, ಬತ್ತಳೊ,

ನೆನ್ನೆ ದಿಸ ಹುಟ್ಟಿದ ಮಗೀಗೂವೆ ಅದರ

ಅಣೆಬರ ಗಟ್ಟಿ ಅಗೋತಂತೆ ಕನವ್ವ ಆಗ್ಲೆ..ಯಾ..

ಅವ್ವಯ್ಯಾ!…

ನಾವಿನ್ನೂ ಏನೇನ ನೋಡಬೇಕೊ ತೆಗಿ ಈ ಕಣ್ಣಲ್ಲಿ

 

ಸರಿಗಿತ್ತಿನೆ ಕಣೆ ನೀನೂವೆ,

ಸುಳೂವ್ನಂಗೆ ಬಂದೋಗೋ

ಆ ದೊಡ್ಡ ಮನ್ಸಿ ಕಥೆಯ ತಿಳ್ಕಂದೀಯಲ್ಲವ್ವ…

ಎಂಗೋವ…..ಹೇಳು ಮತ್ತೆ…

ಏ…ಬಿಸಾಕ್ರೆ ಅತ್ಲಾಗಿ… ನಿಮ್ಮ ಹಳೇ ಪುರಾಣವ.

ಅಲ್ನೋಡ್ರೇ! ಅವ್ವಯ್ಯದಿರಾ…

ಮರದ ಮ್ಯಾಲೆ ಗೂಡೊಳಗೆ ಆಡೊ ಮರಿಯಾ!

ಅಗ, ಅಗಳೇ, ಕೊಂಬೆ ಮೇಲೆ

ಕುಂತು ಆ ಗಿಳಿಮರಿ ಅನ್ನೋವು

ಹ್ಯಾಂಗೆ ತೂಗುತ್ತಾವೆ

ಬದುಕಾ, ಅಚ್ಚು..ಚು..ಚು

 

೧೦

ಏ ತೆಗಿ,

ಎಳೇ ಅನ್ಕು ಅವಿನ್ನೂವೆ

ಅಂಗ ನೋಡ್ಬೇಡ ಕನೆ

ಕಣ್ಣಾಸ್ರಯ್ತದೆ,

ಅವೂ…ನಮ್ಮುಂದಲೆ

ಬಾಳೊ ಬದಕು ಮಾಡವು ಅಂತೀನಿ.

 

೧೧

ಸರ್ಸರಿ, ಬನ್ರೇ ರಂಭೇರಾ…

ಅವ್ರವ್ವಂತಾವ ಅವೂ ಅಂಗೇ ಆಡ್ಕಳ್ಲೀ…

ಹದ್ದು ಕಾಗೆ ದಂಡು ಸದ್ದ ಮಾಡ್ಕೊಂದು

ಗರಿ ಬಿಚ್ಚುತಾವೆ ಆಗ್ಲೇಯಾ…

ಅಲ್ಲೀ.. ಮೂಡ್ಲಾಗೆ…. ಬೆಳಕು….

ಹರೀತಾ ಈತೆ ಅಂತೀನಿ

ಅಲ್ನೋಡು, ಬಾನಂಚಗೆ…. ಬಣ್ಣದ ಗೆರೆಯ

ಇನ್ನೂ ಬೇರು ಬಿಟ್ಕಂದು ಕುಂತಿದಿರಲ್ರಗೀ..

ನೆಲಕ್ಕೆ.

 

೧೨

ನಡಿ ಮತ್ತೆ, ಉಫ಼್ ಅಂತ ಉರುಬಿ

ತುಂಬು ಚಿಕ್ಕಿ ಕಣ್ಣಿನ್ ದೀಪವ ಬಿರಬಿರನೆ.

ಕಂಡಾರು ಕನಗೀ..

ಕೆರೆ ಕಡೀಕೆ ಹೊಂಟೋರು

ಯಾರರೂವೆ! ನಮ್ಮ

 

೧೩

ಹೂಂಕಣ್…ಬನ್ರಡಗ್ಯೋ…

ಕಾಣದೋರಂಗೆ ಊರು ಸುತ್ಕಂದು

ಮನಮನೆ ಕಥೆ ನೋಡ್ಕಂಬರಣ,

ನಡೀರ್ರೆ ಎದ್ದು…..ಓ….

ಚೆನ್ನಾಗ್ ಕಾಯ್ಕಂತಿರ್ ಬುಡು ನೀವು ಊರ.

 

ಹಿಂಗೆ ಮಾತಾಡ್ತ ಕುಂತ

ಬಿಳಿ ತಲೆ ಅವ್ವದೀರು

ನಸುಕು ಹರಿತಿದ್ದಂಗೇಯ

ಅವ್ರ ಚಿಕ್ಕಿ ಕಣ್ಣ ತುಂಬುಸಿ

ಬಿಚ್ಚಿ ವದರಿದ್ದ ಬೆಳ್ಳಿ ಕೂದಲನ್ನ

ಒಂದು ಪಿಡ್ಚೆ ಗಾತ್ರದ ಗಂಟು ಕಟ್ಕೋಂತ

ಬರಬರನೆ ನೆರಳಾಗತಾ

ಹಂಗೇ… ಕರಗೋದ್ರು ಬೆಳಕಾಗೆ

ಒಂದೂರಲ್ಲಿ………..

10 Responses

 1. Shruthi B R says:

  ಹೊಸ ಬಗೆಯ ಕವಿತೆ.. ತುಂಬಾ ಚನ್ನಾಗಿದೆ..

 2. Sarojini Padasalagi says:

  ತುಂಬಾ ಚೆನ್ನಾಗಿದೆ. ಅಲ್ಲಿ ಇಲ್ಲಿ ಸುತ್ತಾಡಿ ,ಆ ಸುದ್ದಿ ಈ ಸುದ್ದಿ ಹೇಳ್ತಾ ಜೀವನಕ್ಕೆ ಕನ್ನಡಿ ಹಿಡಿದಂತಿದೆ. ವಿಶಿಷ್ಟ ಶೈಲಿ.

 3. H.R.sujatha says:

  ಹೊಸ ಬಗೆ ಹಳೆ ತಿರುಳು tnku

 4. Vaanee says:

  ವಾ….!! ಮೂಡ್ಲಲ್ ಬಾನಂಚಿನ್ ಬಣ್ಣದ್ ಗೆರೆ ಕಾಣ್ಸಿ ನಸುಕು ಅರೀತಿದ್ದಂಗೆ ಚಿಕ್ಕಿ ಕಣ್ಣಿನ್ ದೀಪವಾ ಉಫ್ ಅಂತ ಬಿರ್ಬಿರ್ನೆ ಉರುಬಿ ಕರಗ್ಓಗೋ ಆ ಮಾಯಕಾತೀರ್ ಮಾತ್ನ ಈ ಪಾಟಿ ನೆಪ್ಪಿಟ್ಕೊಂಡ್ ಎಸ್ಟ್ ಸೆಂದಾಗ್ಯೇಳಿದ್ದೀಯಲ್ಲಮ್ಮೀ!! ಇಂಗೇ ಮಸ್ತಾಗಿ ಸೆಂದದ್ ಕತೆಗಳ್ನ್ ಏಳ್ತಿರು ನಮ್ಮವ್ವಾ….

  • H.R.sujatha says:

   ಕೇಳೋರು ಬಂದು ಕುಂತ್ ಕಂಡ್ರೆ ಏಳೋದೇನ್
   ಕಷ್ಟವಾ ಬಿಡು ನಮ್ಮವ್ವ

 5. Ramesh says:

  ಕವಿತೆಯೊಳಗಿನ ಆಡುಮಾತಿನ ಭಾಷೆಯ ಪಲಕು ಕವಿತೆಯ ಅಂತಃಸತ್ವವಾದ ಹೆಣ್ಣಿನ ದುಃಖ, ವೇದನೆಗಳನ್ನು ಕಿರಿ ಕಿರಿ ಮಾಡುವ ಸದ್ದನ್ನು ಆಚೆ ತಳ್ಳಿ, ಪುರುಷ ದರ್ಪಕ್ಕೆ ಆತ್ಮ ವಂಚನೆಯ ಕಿಡಿಯನ್ನು ಮಾರ್ಮಿಕವಾಗಿ, ಏಸ್ಥೆಟಿಕ್ ಆಗಿ, ಬಲು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದೆ; ಅಲ್ಲಲ್ಲಲ್ಲಲ್ಲಿ ಕುಸುಮಬಾಲೆಯ ಜೋತಮ್ಮದೀರೂ ವೈದೇಹಿಯವರ ಜಾತ್ರೆ ಸುಳಿದು ಹೋಗುವುದಕೆ ಕವಯತ್ರಿ ತಾನೆ ಏನ್ಮಾಡಕೆ ಆಗ್ತದೆ?! ಹೇಳುವ ವಸ್ತು ಹಳೆಯದಾದರೂ ಅನುಭವಿಸುವ ನೋವೂ ಹಳೆಯದೆಂದು ಸುಮ್ನಿರಕೆ ಆಗ್ತಧಾ? ಹಾ . ಹೊಸ ಬಾಟಲಿಯಲಿ ಹಳೆ ವೈನು ಎಂದು ಹೇಳಿದರೆ ಜರಿದಂಗೇ ಆಗಲ್ಲವಾ?
  -ಎಚ್ ಆರ್ ರಮೇಶ

  • H.R.sujatha says:

   ವೈನು ಹಳೆದಾದಷ್ಟು ಹೃದಯದ ಮಾತು
   ಹೆಚ್ಚು ನಿಜವಾಗಿರುತ್ತೆ ಅನ್ನೋದು ನಂಬಿಕೆ ಆಲ್ವಾ?

 6. Kusumabaale says:

  ಆಹಾ ಏನ್ ಚೆಂದಾಗದೆ. ಸುಖ್ ದುಖಃ ಸುರ್ಕಂಡು ಕುಂತವ್ರೆ ಎಮ್ಕಳು.

 7. H.R.sujatha says:

  ಹೂ ಕಣ್ ಕೂಸೇ ನಿಂಗೂ ಅನ್ಸಿದ್ ನಿಜವೇ ಇರ್ಬೇಕು

Leave a Reply

%d bloggers like this: