fbpx

ಬೆಳದಿಂಗಳ ಕವಿತೆಯೆಂದರೆ ಅದು ನನ್ನ ತವರಿನ ಹಾಡು..

ಅಕ್ಟೋಬರ್ ಕಾಲಿಡುತ್ತಿದೆ. ಮತ್ತೆ ಹುಣ್ಣಿಮೆ ಬೆಳಕು..ಹಬ್ಬಗಳ ಸಾಲುದೀಪ…

ಬೆಳದಿಂಗಳ ಕವಿತೆಯೆಂದರೆ ಅದು ನನ್ನ ತವರಿನ ಹಾಡು.

ಬೆಳ್ಳನೆಯ  ಮೊಸರು ಚೆಲ್ಲಿದಂತ ಬೆಳದಿಂಗಳು ಅಂಗಳದಲ್ಲಿ ಹೆಪ್ಪುಗಟ್ಟಿ ಹರಡಿದರೆ ಬೆಳಗಿನವರೆಗೂ ಬಾಚಿ ಮಡಿಲಿಗೆ ತುಂಬಿಕೊಂಡೇನು.  ಹಿತ್ತಲಿಗೆ ಹೋದರೆ ಘಮಘಮಿಸುವ ಸೂಜಿಮಲ್ಲಿಗೆ,  ದುಂಡುಮಲ್ಲಿಗೆ ಕಂಪು…ಅದರೊಂದಿಗೆ ಮೆಲುಸಿರಿನ ಶೀತಲ ಸಮೀರೆ.    ತಲೆ ಎತ್ತಿದರೆ ಶುಭ್ರ ನೀಲಿ ಆಕಾಶ.  ಮೋಡಗಳಿಲ್ಲದ ನೀರವ ಆಗಸವನ್ನು ನಿರುಕಿಸುವುದು ಎಷ್ಟು ಖುಶಿ. ಬೆಳತನಕವೂ ಬೆಳ್ಳಿ ಚುಕ್ಕಿ ಮೂಡುವತನಕವೂ ಇಂಥ ನೀಲ ನೀರವ ಆಕಾಶದ ಮಾಡಿನ ಕೆಳಗೆ ಬದುಕಿನ ಎಲ್ಲ ಗೋಳುಗಳನ್ನು ಮರೆತು  ಅವನ ಅಪುಗೆಯಲ್ಲಿ ಮಲಗುವ ಕನಸು ಮುಗಿಯುವುದೇ ಇಲ್ಲ ಈ ಒಂದು ಜನ್ಮದಲ್ಲಿ ಅನಿಸುತ್ತದೆ.

ಇನ್ನು ತಾನೇನು ಕಡಿಮೆ ಎಂದು ಬಿಳಿಹೂವು ಹೊತ್ತ ಪತ್ತವರೆ ಬಳ್ಳಿ, ಕುಂಬಳ ಬಳ್ಳಿ, ಆಬೂಲಿ, ಬಟ್ಟಲ ಹೂವು, ಗೊರಟಿ ಹೂವು, ದಾಸವಾಳ, ದಾಳಿಂಬೆ ಗಿಡ, ಪೇರಲ ಗಿಡ, ಪಪ್ಪಾಯಿ,  ನಿಂಬೆ ಗಿಡ, ಪುಂಡಿ ಗಿಡ, ಪುದೀನಾ, ಕಾಡಿಗ್ಗರ್ಲು… ಪುಟ್ಟ ಹಿತ್ತಲ ಲೋಕದ ತುಂಬ ಹಾಲು ಬೆಳದಿಂಗಳ ಸಾರೋಟು ನಡೆಯುತ್ತದೆ ನೆನೆದರೆ.  ಅವತ್ತು ಪುಟ್ಟ ಪಾದಗಳು ತೊಟ್ಟ ಪೈಜಣದ ಘಲಿರು ಘಲಿರು ಘುಂಘರು ಮತ್ತೆಂದೂ ಸದ್ದು ಮಾಡಲಿಲ್ಲ…. ಅಜ್ಜಿಯ ಸಂದೂಕಿನ ಭಂಡಾರದ ಸಾಮಾನು ಒಂದೊಂದಾಗಿ ಕರಗಿ ಹೋದವು ಬೆಳದಿಂಗಳು ಕರಗಿದಂತೆ ಎಂಬುದೊಂದು ಕಳಕೊಂಡವರ ಕಥೆಯೇ ಆಗಬಹುದು..

ನಮ್ಮ ಹಿತ್ತಲಿನ ನೈರುತ್ಯದ ಮೂಲೆಗೆ ಪುಟ್ಟ ಗುಡಿಯಿತ್ತು. ಅದರಲ್ಲಿ ಕಲ್ಲಿನ ಪುಟ್ಟ ಆಂಜನೇಯ. ಯಾಕೆ ಅಲ್ಲಿತ್ತು? ಯಾರು ಕಟ್ಟಿದ್ದರು ಯಾಕೆ ಕಟ್ಟಿದರು ಪುಟ್ಟಗುಡಿ  ಗೊತ್ತಿಲ್ಲ! ಅದಕ್ಕೆ ನಮ್ಮ ಮನೆಯಲ್ಲಿ ಕರೆಮ್ಮ ಇದ್ದಾಳೆ ಅಂತಿದ್ದರು.  ಅಲ್ಲಿದ್ದುದು ಹಣಮಪ್ಪ. ಕರೆಮ್ಮ ಎಲ್ಲಿ ಬಂದಳು ? ಗೊತ್ತಿಲ್ಲ.  ಆದರೆ ನಮ್ಮ ಮನೆಗೆ ಯಾರಾದರೂ ಸಣ್ಣ ಕೂಸಿನವರು ಬಂದರೆ ಮಕ್ಕಳು ಅತ್ತಾವೆಂದು ಕರೆಮ್ಮನಿಗೆ ಹಣ್ಣು ಏರಿಸಿ ( ನೈವೈದ್ಯ) ಹೋಗುತ್ತಿದ್ದರು.   ನಾನು ಅಕ್ಕ ಪಕ್ಕದ ಮನೆಯಿಂದ  ಮುದ್ದು ಮೊಲದಂತಹ ನಾಕು ಐದು ತಿಂಗಳ ಕೂಸುಗಳನ್ನು ತಾಯಂದಿರ ಕಣ್ಣುತಪ್ಪಿಸಿಯೋ ಗೋಗರೆದೋ ಹೊತ್ತುಕೊಂಡು ಬಂದು ಆಡಿಸಿದ್ದೇನೆ.  ಅವೆಂದೂ ಅತ್ತಿದ್ದನ್ನು ಕಂಡಿಲ್ಲ.  ಏನೋ ಒಂದು ನಂಬಿಕೆ ಈ  ಅಳುವ ಮಕ್ಕಳ ತಾಯಂದಿರದ್ದು ಎಂದು ನಾವದಕ್ಕೆ ತೆಲೆಕೆಡಿಸಿಕೊಂಡಿದ್ದಿಲ್ಲ.

ಇದಿಷ್ಟೇ ಅಲ್ಲ ಹಾವುಗಳ ಭಯವೂ ಇತ್ತು. ನಮ್ಮ ಹೆಂಚಿನ ಮಾಡಿನಲ್ಲಿ ಹಾವುಗಳು ಹರಿದಾಡಿದ್ದು ಇದೆ.  ನಮ್ಮ ಅವ್ವ ಬಚ್ಚಲಿನಲ್ಲಿ ಬಿದ್ದ ಹಾವನ್ನು ನಮ್ಮ ರಿಬ್ಬನ್ ಇರಬೇಕೆಂದು ಎತ್ತಿ ಬಿಸಾಕಿದ್ದನ್ನು ನಮಗೆಲ್ಲ ಹೇಳುವಾಗೆ ಎಂಥದ್ದೊ ಅಂಜಿಕೆ ಆವರಿಸಿಕೊಳ್ಳುತ್ತಿತ್ತು. ಎಷ್ಟೋ ಕಾಲ ಕತ್ತಲಲ್ಲಿ ಹಿತ್ತಲಿಗೆ ಹೋಗಲೇ ಹೆದರುತ್ತಿದ್ದೆ.  ಆದರೂ ನಮ್ಮ ಆಟವೆಲ್ಲ ಹಿತ್ತಲಲ್ಲೇ,  ನಮ್ಮ ಹನುಮಪ್ಪನ ಎದುರಿಗೆ. ಮಣ್ಣಲ್ಲಿ ಮೂರು ಗುಂಡಿ ತೆಗೆದು ಬಳೆಚೂರಾಟ , ಇಲ್ಲ ಅಡುಗೆಮನೆಯಿಂದ  ಕೊತ್ತಂಬರಿಬೀಜ, ಶೇಂಗಾ, ಕಡಲೆ ಕದ್ದು ಹಿತ್ತಲಲ್ಲಿ ಸಣ್ಣ ಮಡಿಮಾಡಿ..ಅವನ್ನು ಬಿತ್ತಿ..ನೀರು ಹಾಕಿ, ಅವೆಲ್ಲ ಮೊಳೆತು, ಎಲೆಗಳು ಚಿಗುರಿ, ಸಸಿಯಾಗಿ, ಪುಟ್ಟ ಪುಟ್ಟ ಗಿಡವಾಗುವುದನ್ನೇ ನೋಡಿ ಸಂಭ್ರಮಿಸುತ್ತಿದ್ದ ಬಾಲ್ಯ ನೆನೆಪಾಗುತ್ತದೆ.

ಸೂಜಿಮಲ್ಲಿಗೆ , ದುಂಡುಮಲ್ಲಿಗೆ ಹೂ ಸುರಿಯುವಾಗ ಅವ್ವ ಹೂ ಬಿಡಿಸಿ ಮಾಲೆ ಕಟ್ಟಿಟ್ಟರೂ ಮುಡಿಯದ ಸೋಮಾರಿತನ. ತಂಗಿಯರು ತಾ ಮುಂದು, ನೀ ಮುಂದು ಎಂದು ಕಚ್ಚಾಡುವ ಹಠಮಾರಿತನ, ಹಿತ್ತಲಿನ ನೆನೆಹುಗಳು ಎಷ್ಟೊಂದು ಮಧುರವಾಗಿರುತ್ತವೆ.  ಅವ್ವನಿಗೆ ಗೊತ್ತಾಗದಂತೆ ಮಾಡುವ ಕಿತಾಪತಿಗಳಿಗೆಲ್ಲ ಹಿತ್ತಲೇ ಬೇಕು. ಶಾಲೆ ಮುಗಿಸಿ ಮನೆ ಸೇರಿದಾಗ  ಸಂಜೆ ಹಕ್ಕಿಗಳ ಹಿಂಡು ಹಿಂಡು ಪಯಣ ಆಗಸದಲ್ಲಿ.  ಹಿತ್ತಲಿನಲ್ಲಿ ದನದ ಕೊಟ್ಟಿಗೆಯ ತಗಡಿನ ಮಾಡು ಹತ್ತಿ ಕೂತು ಜೋಳದ ಭಕ್ಕರಿ ತಿನ್ನುತ್ತಿದ್ದೇವು. ನಮ್ಮ ಮನೆಯದಕ್ಕಿಂತ ಬೇರೆಯವರ ಮನೆಯ ಕೆಂಪುಖಾರದ ಚಟ್ನಿ, ಉದುರುಗಾಳು, ಪಲ್ಯ  ಕರಿಂಡಿದ್ದರಂತೂ ರುಚಿ ಕೇಳಲೇಬೇಡಿ. ಕತೆಯಲ್ಲಿ ಕೇಳಿದ ಕಾಗಕ್ಕ ಗುಬ್ಬಕ್ಕ ಈಗ  ಜೋಪಡಿ ಸೇರಿ ಅಡುಗೆ ಮಾಡುತ್ತಾರೆ, ಮಕ್ಕಳನ್ನು ನೋಡಿಕೊಳ್ಳುತ್ತಾರೆಂಬ ನಮ್ಮ ಕಲ್ಪನೆಯ ಕತೆಯ ಜಾಡು ಅಲ್ಲಿಂದ ಮುಂದೆ ಹೆಣೆಯುತ್ತಿತ್ತು.

ಅವ್ವ, ಮಂಟಮ್ಮ ಇಬ್ಬರೂ ಕೂತು  ಹರಟುತ್ತ ಬಿದಿರಿನ ಮೊರಕ್ಕೆ ಹಳೆಬಟ್ಟೆ ಸುಟ್ಟು ಕರೀ ಬೂದಿಮಾಡಿ, ಅಗಸೆ ಎಣ್ಣೆ ಕಲಸಿ , ಸುಣ್ಣಗೆ ಕಾಡಿಗೆಯಂತೆ ನುರಿದು ಬಿದಿರಿನ ಬುಟ್ಟಿ, ಕೈಮೊರಕ್ಕೆಲ್ಲ ಮೇಣ ಮಾಡುತ್ತಿದ್ದುದು ನೆನಪಾಗುತ್ತದೆ.  ಒಲೆ ಬೂದಿ, ಸಾರಿಸಿ ಉಳಿದ ಸೆಗಣಿ ನಮ್ಮ  ಗಿಡಗಳಿಗೆ ಗೊಬ್ಬರವಾಗುತ್ತಿತ್ತು. ಸಂಡಿಗೆ ಹಪ್ಪಳಗಳನ್ನು ಹರವಿ ಒಣಗಿಸಲು, ಕೊನೆಗೆ ಮುಟ್ಟಾದಾಗ ದೂರ ಕೂರುವ ಏಕಾಂತಕ್ಕೆ  ಹಿತ್ತಲು ಸಂಗವೇ ಹಿತವಾಗಿರುತ್ತಿತ್ತು. ಎಲೆಬಿಸಿಲು ಎಳೆ ಬೆಳದಿಂಗಳ ಹಿತ್ತಲ ಸಾಂಗತ್ಯದ ಸವಿ ಬಲ್ಲವರೇ ಬಲ್ಲರು.  ಇವೆಲ್ಲದರ ಜತೆ ಅವ್ವನ ಹೇಳಿದ ಕತೆಗಳು.  ಶಂಕರಮ್ಮ ಅಜ್ಜಿಯ ಕತೆಗಳು, ಸರಸಮ್ಮಜ್ಜಿಯ ಕತೆಗಳ ಪಲ್ಲಕಿಯಲ್ಲೆ ಮಲಗಿ ಬೆಳದಿಂಗಳ ಹಾಸಿಗೆಯಲ್ಲಿ ಹರಳುಗಟ್ಟಿದ ಕನಸಿನ ಚಿತ್ತಾರದ ಸಡಗರ.   ಈಗಲೂ ಮನಸಿನ ನವಿಲುಗರಿಯಲ್ಲಿ ನನಗೆ ಅವ್ವ ಹೇಳಿದ ಕತೆಗಳು ಎಲ್ಲೋ ಹೊರಟು ಮತ್ತೆ ನನ್ನಲ್ಲಿಗೆ ಬಂದು ನವಿಲ ಕಣ್ಣು ಸೇರುತ್ತವೆಯೆನಿಸುತ್ತಿದೆ.

ಮೋಡದೊಡಲ ಬಸಿದು ಮಳೆ ಹೊಯ್ಯುವಾಗ ನವಿಲಿನಂತೆ ನರ್ತಿಸುತ್ತವೆ ಅ ಕತೆಗಳೂ.  ಗರಿಯ ಕಡಲನೀಲ ಹಸಿರು ಬಣ್ಣದ ಹರವಿನಲ್ಲಿ ರೆಕ್ಕೆಬಿಚ್ಚಿ ಹಾರುತ್ತವೆ.  ಅಜ್ಜನ ಮನೆಯ ಪೀಟೀಲು, ತಂಬೂರಿ ವಾದ್ಯಗಳು ಯಾವುದೋ ಹಳೆಯ ತಂತಿ ಹರಿದುಹೋಗಿದೆಯೆಂದು ಗುಜರಿ ಸಾಮಾನಿನಲ್ಲಿಟ್ಟಿದ್ದು, ಇನ್ನೆಲ್ಲೋ ನಿಶ್ಯಬ್ದದಲಿ ಮೀಟಿ  ನುಡಿಯುತ್ತಿದೆಯೆನಿಸತೊಡಗಿದ್ದು ಅಜ್ಜನ ಮನೆಯ ಕಥೆಗಳನ್ನು ಕೇಳುವಾಗ.. ಯಾರು ಈ ಪೀಟಿಲು ಕಲಿತಿದ್ದು ? ಅಥವಾ ನುಡಿಸುತ್ತಿದ್ದರು , ಈ ತಂಬೂರಿ ಯಾಕೆ ಬಂದಿದೆ ಇಲ್ಲಿ ಯಾರು ಗಾಯಕರಾಗಿಲ್ಲವಲ್ಲ ಎನ್ನುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.  ಆದರೆ ಯಾರದೋ ಮದುವೆಯಲ್ಲಿ ನಮಮ್ದೇ ಕುಲದ.ಅಜ್ಜನ ಹತ್ತಿರದ ಸಂಬಂಧಿ ಹುಡುಗನೊಬ್ಬ ನನ್ನನ್ನು ಕಂಡು ….ಇವಳನ್ನೇ ಮದುವೆಯಾಗ್ತೀನಿ ಅಂತ ಕನಸು ಕಂಡು ಮನೆಯವರಿಂದ ಬೈಸಿಕೊಂಡನಂತೆ …” ಆಕೀ ನಿನ್ನ ಕಾಕಿ ಆಗುತ್ತಾಳೆ” ಅಂತ.  ಮನೆಯೊಳಗೊಳಗೇ ಅತ್ತೆ ಮಗ, ಮಾವನ ಮಗಳು,  ಸೋದರ ಮಾವನೊಂದಿಗೆ ಮದುವೆ  ಸಂಬಂಧಗಳು ಎಲ್ಲೋ ಹೋಗಿ ಎಲ್ಲಿಗೋ ಸೇರಿ..ಯಾರು ಯಾರಿಗೆ ಕಾಕಿ, ಯಾರು ಯಾರಿಗೋ ಮಾವ…ಆಗುವ ಗೋಜಲು ಸಂಬಂಧಗಳು ನಗೆ ತರಿಸುತ್ತಿದ್ದವು.  ಯಾವ ಬಾದರಾಯಣ ಸಂಬಂಧಗಳು ಬದುಕನ್ನು ಹಸನಾಗಿಸುವುದಿಲ್ಲ…ಕೆಲವು ನೋವನ್ನೇ ಕೊಡುತ್ತವೆ. ಇನ್ನು ಸಂಬಂಧವೇ ಇರದ ಇನ್ಯಾವುದೋ ನಂಟು ಪುರಾತನ ವಾಸನೆಯನ್ನು ಅರಸುತ್ತ ಬಂದು ಜೀವಕ್ಕಂಟಿಕೊಳ್ಳುವುದೂ, ಅದೇ ಬದುಕಾಗುವುದೂ ನಂಬಿದರೆ ಉಂಟು ನಂಬದಿದ್ದರೆ ಇಲ್ಲ…!

ಅಲ್ಲಿ ಹುಟ್ಟಿದ ನದಿಯೊಂದು ಇಲ್ಲಿ ಹರಿಯುವಂತೆ, ಅಲ್ಲಿ ಹರಿದ ತೊರೆಯೊಂದು ಇಲ್ಲಿ ನನ್ನ ಪಾದ ತೊಳೆಯುವ ಈ ವಿಲಕ್ಷಣ ಸಂಬಂಜವೂ ಸಂದಿಗ್ಧತೆಯಲ್ಲಿ ಅರಳತೊಡಗಿದ್ದನ್ನು ನನ್ನ ಶಾಲ್ಮಲಿಗೆ ಕೂತು ಹೇಳಲೇಬೇಕೆನಿಸತೊಡಗಿದ್ದು ಒಂದು ಕತೆಯ ಭಾಗವನ್ನಷ್ಟೇ ಆಗಿ.  ಬೊಗಸೆಯಲ್ಲಿ ಬಿದ್ದ ಕ್ಷಣಗಳನ್ನು  ಎದೆಗವಚಿಕೊಂಡು ಮುತ್ತಿಟ್ಟು  ಬರೀ ಸಮಯದ ಕೈಗೊಂಬೆಯಾಗಿ ಕೂತು ನೋಡತೊಡಗಿದಷ್ಟೇ ಆಗಿರದೇ ಅದರಲ್ಲಿನ  ಪಾತ್ರವೂ ಆಗಿಹೋಗಿದ್ದು ಸೋಜಿಗವೆನಿಸಿತು.

ಬದುಕಿನ ಯೌವನದ ಕಾಲವನ್ನು ಬಸಿರು ಬಾಣಂತನದಲ್ಲೆ ಕಳೆದ ನನ್ನ ಅಜ್ಜಿಯ ಕಾಲದ ಕತೆ ತೊಡರಿಕೊಳ್ಳುತ್ತಿದೆ.  ಆಕೆಗೆ ಹಡೆದ ಮಕ್ಕಳನ್ನು ನೋಡಿಕೊಳ್ಳಲು ಸಮಯವಿರದ ಕಾಲಕ್ಕೆ ನಮ್ಮ ಅವ್ವ ಮತ್ತವಳ ತಂಗಿ, ತಮ್ಮಂದಿರೆಲ್ಲ ಸೋದರತ್ತೆಯ ಮಡಿಲಲ್ಲೇ ಬೆಳೆದರಂತೆ. ಮುದ್ದು ಮಾಡಿ ಬೆಳೆಸಿದವಳು ಇನ್ನೊಬ್ಬ ಅಜ್ಜಿ.  ಆಕೆಯನ್ನು ಅಜ್ಜ ಮನೆಯಲ್ಲೇ ತಂದಿಟ್ಟುಕ್ಜೊಂಡಿದ್ದರಂತೆ. ಆಕೆ ಬೇರೆ ಮತದವಳಾಗಿದ್ದು  ಹಸು ಕಟ್ಟುವ ಕೊಟ್ಟಿಗೆಯಲ್ಲಿ ಅವಳ ಬಿಡಾರವಿತ್ತಂತೆ.  ಯಾವ ಹೆಸರಿಲ್ಲದವಳ ಉಡಿಯಲ್ಲಿ ಕಂದಮ್ಮಗಳ ವಾಸ.  ಮಕ್ಕಳನ್ನು ಸಲುಹಿದ್ದು ಆಕೆ. ಅವಳನ್ನು ಅತ್ಯಂತ ಆರ್ದ್ರವಾಗಿ ನೆನೆಯುವ ನನ್ನವ್ವನ ಪ್ರೀತಿ ಮಮಕಾರಗಳು ಎಂದಿಗೂ ಕಲುಷಿತಗೊಳಲಿಲ್ಲ. ಇಟ್ಟುಕೊಂಡವಳೆಂಬ ಪಟ್ಟಕೊಟ್ಟು ನೋಯಿಸದೇ ಮನೆಯವರೂ ನಡೆದುಕೊಂಡರು ಮತ್ತು ಆಕೆಯೂ ಮನೆಯೊಳಗೊಂದಾಗಿ ಆ ಮನೆಯ ಕಂದಮ್ಮಗಳನ್ನು ಉಡಿಯಲ್ಲಿಟ್ಟು ಜೋಪಾನಮಾಡಿದಳಂತೆ.  ಇದು ಸಂಬಂಧವೋ ಋಣಾನುಬಂಧವೋ ! ನೀತಿ, ನ್ಯಾಯ ಧರ್ಮದ ಪರಿಭಾಷೆಗೂ, ಇಹಪರ, ಪಾರಮಾರ್ಥಕ್ಕೂ ನಿಲುಕದ ಮಾತಿದು. ಹೆಸರಿಲ್ಲದ ಸಂಬಂಜವನ್ನು ಜೀವತೇದು ಹಿರಿದಾಗಿಸಿದ ನಿಸ್ವಾರ್ಥ ಮನುಷ್ಯ ಪ್ರೇಮ!

ಅಣ್ಣತಮ್ಮಂದಿರು ಇಬ್ಬಾಗವಾದಾಗ ಒಂದು ಮೇಲಿನ ಮನೆ ಇನ್ನೊಂದು ಕೆಳಗಿನ ಮನೆಯವರಾಗಿ ಬೆಳೆದವರು.  ಏಳುವಸುಗಳನ್ನು ನೀರಿನಲ್ಲಿ ಪ್ರವಹಿಸಿ ದೇವವೃತನೊಬ್ಬನನ್ನು ಶಂತನುವಿಗೊಪ್ಪಿಸಿ ಹರಿದುಹೋದ ಗಂಗೆಯಂತೆ ನನ್ನೊಳಗೆಲ್ಲೋ ಒಂದು ಕಾಲದ ಒಂದು ತಲೆಮಾರಿನ ಕಥೆ ಹರಿದ ಪಿಟೀಲಿನಲ್ಲಿ…ಮುರಿದ ತಂಬೂರಿಯ ತಂತಿಗಳಲ್ಲಿ ಹುಡಕಿದರೆ ಹೇಗೆ ಸಿಕ್ಕಬೇಕು….ಕೊನೆಗೂ ಸರಿಯಾದ ಎಳೆಗಳು ಸಿಗದೇ ಅಲ್ಲಷ್ಟು ಇಲ್ಲಷ್ಟು ಉಳಿದುಹೋದ ಆಸ್ತಿಯನ್ನು ಯಾರು ಯಾರಿಗೋ ಪಾಲಾಗಿ ಹೋದದ್ದನ್ನು ಅವ್ವ ನೆನೆಯುತ್ತಾಳೆ.

ಹಳೇ ಮರದ ಬೇರುಗಳು ಬೇರೂರಿ ಮತ್ತೆಲ್ಲೋ ಕೊನರುವ ಧ್ಯಾನ. ಹಿತ್ತಲಿನ ಕತೆ ನಮ್ಮ ಹರಟೆಯಲ್ಲಿ ಹಿತ್ತಲವರೆ ಬಳ್ಳಿ , ಬಸಳೆಬಳ್ಳಿಯಂತೆ ಮನಸಿನ ತುಂಬ ಹಬ್ಬಿ ಹೂಬಿಡತೊಡಗಿದ್ದವು. ತುಳಸೀಲಗ್ನದ ಕುಳಿರು ಚುಮುಚುಮು  ಚಳಿಯಲ್ಲಿ ಮಡಿಯುಟ್ಟು ಪೂಜೆಗೆ ಅಣಿಯಾಗಿದ್ದ ಅವನನ್ನು ಕಣ್ಣುತುಂಬಿಕೊಂಡದ್ದೂ, ಕಂಕುಳಲ್ಲಿ ಮಗುವನ್ನು ಹೊತ್ತ ಅವಳ ನೆನಹು.  ಚೆಲುವ ಮುತ್ತಜ್ಜನ ಬಿಟ್ಟುಹೋದ ವಿರಹಿ ಪ್ರೇಮಿಯಂತೆ ನನ್ನ ಹಿತ್ತಲಬಳ್ಳಿಗಳು ಕಂಪಿಸುತ್ತವೆ. ಪುರಾತನ ಪ್ರೇಮಿಗಳಂತೆ ಉನ್ಮತ್ತ ಪ್ರೇಮದಲ್ಲಿ ಒಳಗಿನದೆಲ್ಲ ಕಲಕುವ ಕರುಳುಬಳ್ಳಿಯ ಸೆಳೆತವನ್ನು ಮೌನದಲ್ಲಿ ಬಿಡಿಸಿಕೊಳ್ಳಲಾರದೇ , ಬಿಡಿಸಿಕೊಳ್ಳಬೇಕೆನಿಸದೇ ಒದ್ದಾಡುತ್ತೇನೆ.

ತೊಡೆತುಂಬ ಮಲಗಿದ ಕನಸನ್ನು ಎತ್ತಿ ಮುತ್ತಿಡಬೇಕೆನಿಸುತ್ತದೆ.   ಅವೇ ಮುತ್ತಿನ ಹಾರ, ಬೆಳ್ಳಿ ಕಡಗು, ಬೆಳ್ಳಿ ಪೈಜಣದ ಘಲಿರುಘಲಿರಿನ ಸದ್ದಿನಲ್ಲಿ ಓಡಾಡುವ ಅಜ್ಜನ ತೂಗುಮಂಚ, ದೊಡ್ದ ಮನೆ ನೆನಪಾಗುತ್ತದೆ.  ಈಗ ಒಂದನ್ನೂ ಉಳಿಸಿಕೊಳ್ಳದ ಒಬ್ಬರೂ ಜೀವಂತವಿಲ್ಲ.  ನದಿ ಒಮ್ಮೆ ಹರಿದುಹೋದರೆ ಮರಳಿಬಾರದು. ಅದು ಎತ್ತ ಹರಿದರೂ ಕೊನೆಗೆ ಕಡಲನ್ನೇ ಸೇರಬೇಕು ಇಲ್ಲಾ ಬತ್ತಿಹೋಗಬೇಕು. ಸ್ವಸ್ಥಾನದ ಹಂಗೂ ಇರದು.  ಹಾಗೇ ತನ್ನ ಎದೆಗೆ ಹರಿದು ಬಂದ ಹೆಸರಿಲ್ಲದ ನದಿಯ ಬೆಚ್ಚಗಿನ ಅಪ್ಪುಗೆಯಲ್ಲಿ ಸತ್ತು ಬಿಡಬೇಕೆನಿಸುತ್ತದೆ. ಈ ಬೆಳದಿಂಗಳ ಬಟ್ಟಲಲ್ಲಿ ಹೆಪ್ಪುಗಟ್ಟಿದ ತುಸು ನಲಿವನ್ನೂ, ತುಸು ಹರಳುಗಟ್ಟಿದ ಪ್ರೀತಿಯನ್ನು ಆ ನದಿಗೆ ಚೆಲ್ಲಿ…….

1 Response

  1. K Nalla Thambi says:

    ನೆನಪು…..

Leave a Reply

%d bloggers like this: