fbpx

ಚಿಟ್ಟಾಣಿ ಅಜ್ಜನೊಂದಿಗೆ..

 

 

 

 

 

ಡಾ. ವಿಠ್ಠಲ ಭಂಡಾರಿ/ ಕೆರೆಕೋಣ   

 

(ಮಿಂಚಿನ ಸೆಳಕಿನಂತಿರುವ ತಮ್ಮ ರಂಗಪ್ರವೇಶ, ನೃತ್ಯವಿನ್ಯಾಸ, ಭಾವಾಭಿವ್ಯಕ್ತಿ, ಪಾತ್ರನಿರ್ವಹಣೆ, ರಂಗ ಚಲನೆ ಅಪೂರ್ವ. ಅದ್ಭುತ ತಾಳಲಯಗಳ ಖಚಿತ ಹಿಡಿತ. ಭಾವಸೆಲೆ ಸೂಸುವ ಕಣ್ಣುಗಳು, ಹಿತಮಿತವಾದ ಮಾತು. ಆಂiÀi ಆಳÀ್ತನಗಳಿಂದ ಪ್ರೇಕ್ಷಕರ ಹೃದಯ ಗೆದ್ದ ಪಾತ್ರಗಳು ಒಂದೆರಡಲ್ಲ. ಕೀಚಕ, ಭಸ್ಮಾಸುರ, ಕಾರ್ತಿವೀರ್ಯ, ಕಲಾಧರ, ಕಂಸ, ಕೌರವ, ರುದ್ರಕೋಪ, ಸಾಲ್ವ, ಸುಧನ್ವ, ವಾಲಿ. . . . . ಹೀಗೆ ಪೌರಾಣಿಕ ಪಾತ್ರಗಳು ಇವರ ಅಭಿನಯದಲ್ಲಿ ಹೊಸ ವಿಸ್ತಾರ ಪಡೆದವು; ಹೊಸ ಹುಟ್ಟು ಪಡೆದವು. ಉಳಿದ ಯಾರೇ ಈ ಪಾತ್ರ ನಿರ್ವಹಿಸಿದರೂ ಚಿಟ್ಟಾಣಿಯವರ ಛಾಪಿನಿಂದ ತಪ್ಪಿಸಿಕೊಳ್ಳಲಾರದಂತ ಪ್ರತಿಭೆ ಅವರದು. ಇಂತಹ ಮೇರು ನಟ ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ. ಅವರ ನೆನಪಿಗಾಗಿ…ಈ ಸಂದರ್ಶನ. ಪದ್ಮಶ್ರೀ ಗೌರವಕ್ಕೆ ಪಾತ್ರರಾದಾಗ ಮಾಡಿದ ಸಂದರ್ಶನ)


ನಾನು : ನಮ್ಮ ನಡುವಿನ ಪ್ರೀತಿಯ ಕಲಾವಿದರು ನೀವು. ನಿರಹಂಕಾರ, ಸಜ್ಜನಿಕೆ, ಪ್ರಯೋಗಶಿಲತೆ, ಎಲ್ಲಾ ವರ್ಗದ ಪ್ರೇಕ್ಷಕರನ್ನು ಪ್ರೀತಿಸುವ ಮನಸ್ಸು, ಕಲೆಯ ಕುರಿತಾದ ಬದ್ಧತೆ – ಇತ್ಯಾದಿಗಳಿಂದಾಗಿ ತಾವು ಈಗಾಗಲೆ ಜನ ಮಾನಸದಲ್ಲಿ ನೆಲೆನಿಂತಿದ್ದೀರಿ. ಈಗ  ‘ಪದ್ಮಶ್ರೀ’ ಪ್ರಶಸ್ತಿ ನಿಮ್ಮನ್ನರಸಿ ಬಂದಿರುವುದಕ್ಕೆ ತಮಗೆ ಅಭಿನಂದನೆಗಳು. ಪ್ರಶಸ್ತಿ ಬಂದಾಗ ನಿಮಗೆ ಏನೆನ್ನಿಸಿತು ?

ಚಿ.ರಾ.ಹೆ : ನಾನು ಬಹಳ ಖುಶಿ ಪಟ್ಟಿದ್ದೇನೆ. ಯಾಕೆಂದರೆ ಈ ಪ್ರಸಸ್ತಿ ಯಕ್ಷಗಾನಕ್ಕೇ ಸಿಕ್ತಲ್ಲಾ. ನಮ್ಮ ಯಕ್ಷಗಾನ  ಏನೆಂಬುದು ದೇಶಕ್ಕೆ ಗೊತ್ತಾಯ್ತಲ್ಲಾ, ಅದಕ್ಕೇ ಖುಶಿಯಾಯ್ತು. ಇದು ನನಗೆ ಬಂದ ಪ್ರಶಸ್ತಿ ಮಾತ್ರ ಅಲ್ಲ. ಯಕ್ಷಗಾನದ ಕಿರೀಟಕ್ಕೆ ಇನ್ನೊಂದು ಗರಿ ಮೂಡಿತು ಎಂದುಕೊಂಡಿದ್ದೇನೆ. ಯಕ್ಷಗಾನ ಕ್ಷೇತ್ರದಲ್ಲಿ ನಾನು ಈವರೆಗೆ ನಡೆಸಿದ ದುಡಿತಕ್ಕೆ ದೇವರು ಈ ರೀತಿಯಲ್ಲಿ ಪ್ರತಿಫಲ ಕೊಟ್ಟ. ಸಾವಿರಸಾವಿರ ಪ್ರೇಕ್ಷಕರ  ಮನದಲ್ಲಿ ಇರಬೇಕೆಂಬ ಆಸೆ ಇತ್ತು. ಆ ಆಸೆ ಕೂಡ ಈಡೇರಿದೆ.

ನಾನು  : ತಮ್ಮ ಕುಟುಂಬದ ಹಿನ್ನೆಲೆ ಹೇಗಿತ್ತು ? ಯಕ್ಷಗಾನ ಕಲಿಕೆಗೆ ಪೂರಕ ವಾತಾವರಣ ಇತ್ತೆ?

ಚಿ.ರಾ.ಹೆ : ಮನೆಯಲ್ಲಿ ತಿರಾ ಬಡತನ. ವ್ಯವಸಾಯ ಮಾಡ್ತಾ ಇದ್ರು. ನಾನು ಹೆಚ್ಚು ಕಲೀಲಿಲ್ಲ. ಎರಡನೆ  ತರಗತಿ. ನನ್ನ ಅಕ್ಕ ಪಾಟಿ ಮೇಲೆ ಬರೆದು ಕೊಡ್ತಿದ್ಳು. ನಾನು ಅದನ್ನೇ ಬರೆದು ಮಾಸ್ತರರಿಗೆ ತೋರಿಸ್ತಿದ್ದೆ. ಹಾಗಾಗಿ ಅಕ್ಷರ ಕಲಿಲಿಲ್ಲ. ರಾತ್ರಿ ಆಟ ನೋಡ್ತಿದ್ದೆ. ಮರುದಿನ  ಮನೆ ಹಿಂದಿನ ಗುಡ್ಡ ಹತ್ತಿ ಗೇರು ಮರದ ಅಡಿಯಲ್ಲಿ ನಾನು ಕುಣಿಯುತ್ತಿದ್ದೆ. ನನಗೆ ಮೊದಲಿನಿಂದ ಭಜನೆಯ ತಾಳ ಗೊತ್ತಿತ್ತು. ಹಾಗಾಗಿ ಬಾಯಲ್ಲಿ ತಾಳ ಹೇಳ್ತಾ ಕುಣಿತಿದ್ದೆ. ನಂತರ ಶಿವರಾಮ ಹೆಗಡೆಯವರ ಪ್ರಭಾವ ಹೆಚ್ಚಾಯಿತು. ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ, ಮೂರುರು ದೇವರು ಹೆಗಡೆ. . . .ಮುಂತಾದವರ ಪ್ರಭಾವ ನನ್ನ ಏಳ್ಗೆಗೆ ಕಾರಣ ಆಯ್ತು. ನಾನು ಒಬ್ಬ ಕಲಾವಿದ ಆಗ್ಬೇಕು ಎಂಬ ಛಲ ಬಂತು. ಆ ಸಮಯಕ್ಕೆ ಬಾಳೆಗದ್ದೆ ರಾಮಕೃಷ್ಣ ಭಟ್ಟರು ಗುರುಗಳಾಗಿ ಸಿಕ್ಕಿದ್ರು. ನಾನು ಅವರಲ್ಲಿ ಒಂದುವರೆ ಟ್ರಾಯಲ್ಲಿಗೆ ಮಾತ್ರ ಹೋಗಿದ್ದು. ನೋಡಿ, ಕೇಳಿ ಕಲ್ತಿದ್ದೇ ಹೆಚ್ಚು.ನಾನು : ಮೊದಲ ವೇಷ ಯಾವ್ದು?ಚಿ.ರಾ.ಹೆ : ಪಾರಿಜಾತ ಪರಿಣಯದಲ್ಲಿ ಅಗ್ನಿ. ಮೂರೆ ಪದ್ಯ. ಆಮೇಲೆ ಗುಂಡಬಾಳದಲ್ಲಿ ಆಂಜನೇಯ.

ನಾನು : ಮಂಜ ಭಾಗ್ವತರು ನಿಮ್ಗೆ ಕಲಾದರನ ಪಾತ್ರ ಕೊಟ್ಟ ಬಗ್ಗೆ ಕೇಳಿದ್ದೆ ?

ಚಿ.ರಾ.ಹೆ : ಹೌದು. ಆಗ ನಾನು ದೇವರಹೆಗಡೆಯವರ ಮನೆಲಿದ್ದೆ. ಅವರು ನನಗೆ ಪದ್ಯ ಇದ್ದ ಪಾತ್ರ ಕೊಡ್ತಿರಲಿಲ್ಲ. ದ್ವೇಷ ಅಲ್ಲ. ಆಟ ಹಾಳಾಗಬಾರ್ದು ಅಂತ. ಆದರೆ ಕೊಳಗಿಬೀಸ್ ಮೇಳದಲ್ಲಿ ‘ಭೋಜ ಕಾಳಿದಾಸ’ ಪ್ರಸಂಗದಲ್ಲಿ 5 ಪದ್ಯ ಇರುವ ಕಲಾದರನ ಪಾತ್ರ ಮಾಡುವವರಿರಲಿಲ್ಲ. ಮಂಜ ಭಾಗ್ವತ್ರು ಈ ಹೊಸಾಕುಳಿ ಮಾಣಿ ಮಾಡಲಿ ಎಂದು ನನ್ನ ತೋರಿಸಿದರು. ಆಗ ದೇವರ ಹೆಗ್ಡೆರು “ ಆಗ್ತಿಲ್ಲೆ .. ..  ಮಂಜ ಆಗ್ತಿಲ್ಲೆ. ಒಳ್ಳೆ ಶೃಂಗಾರದ ಪದ್ಯ ಅದು. ಪ್ರಸಂಗ ಹಾಳಾಗೋಗ್ತು” ಅಂದರು. ಆದ್ರೆ ಬಿಟ್ಟು ಬಿಡದ ಮಂಜ ಭಾಗ್ವತರು ನನ್ನಿಂದ ಸರಿಯಾಗೇ ಮಾಡಿಸುವ ಜವಾಬ್ದಾರಿ ಹೊತ್ತರು. ನಾನು ಚೆನ್ನಾಗಿಯೇ ಮಾಡ್ದೆ. ಇದನ್ನು ನೋಡಿದ ತುಡುಗುಣಿ ಮಾಬ್ಲೇಶ್ವರ ಭಟ್ಟರು ಇನ್ನು ಮುಂದೆ ಕಲಾಧರನ ಪಾತ್ರವನ್ನು ಹೊಸಾಕುಳಿ ಮಾಣಿಗೆ ಕೊಡಬೇಕೆಂದು ತಾಕೀತು ಮಾಡಿದರು. ಊರ ಹೆಗ್ಡೆರು, ಗೌಡ್ರ ಮಾತನ್ನು ಯಾರೂ ವಿರೋಧಿಸ್ತಿರಲಿಲ್ಲ. ಯಾಕೆಂದ್ರೆ ಅವರಿಲ್ಲದಿದ್ರೆ ಊರಲ್ಲಿ ಆಟನೇ ಆಗ್ತಿರಲಿಲ್ಲ. ಆಗ ಒಂದೊಂದೂರಲ್ಲಿ 8-9 ಆಟ ದಿನಬಿಟ್ಟು ದಿನ ಆಗೋದು.

ನಾನು : ಕುಣಿಯಲು ಪ್ರಾರಂಭ ಮಾಡಿದ ಕಾಲ ಹೇಗಿತ್ತು?

ಚಿ.ರಾ.ಹೆ : ಯಾರೂ ಸರಿಯಾಗಿ ಮಾತಾಡಿಸ್ತಿರಲಿಲ್ಲ. ನಮ್ಮ ಸಾಮಾನನ್ನು ನಾವೇ ತಲೆಮೇಲೆ ಹೊತ್ಗೊಂಡು 9-10 ಮೈಲು ನಡೆಬೇಕು. ಕುಣಿಯಲು ಹೋದದ್ದು ಗೊತ್ತಾದ್ರೆ ಅಪ್ಪ ಬೈತಿದ್ದ. ಹಾಗಾಗಿ ರಾತ್ರಿ ಎಲ್ಲಾ ಕುಣಿದು ಬೆಳಿಗ್ಗೆ ಒಂದು ದರ್ಕಿನ ಕಲ್ಲಿ  ತಲೆಮೇಲೆ ಹೊತ್ಗೊಂಡು ಮನೆಗೆ ಬರಬೇಕಾಗಿತ್ತು. ಅಪ್ಪ ತೀರಿಕೊಂಡ ನಂತರ ಸಂಸಾರದ ಜವಾಬ್ದಾರಿ ನನ್ನ ತಲೆಮೇಲೆ ಬಂತು. ಸುಮಾರು 14 ವರ್ಷ ಹೊಸಾಕುಳಿ, ಹರಿಕೆರೆ, ಸಾಲ್ಕೊಡು. . . ಗಳಲ್ಲಿ ಅಡಿಕೆ ಮರಕ್ಕೆ ಮದ್ದು ಹೊಡೆಯೋದು, ಕೊಟ್ಟಕೊನೆ ಮಾಡೋದು ಮಾಡ್ತಿದ್ದೆ. ಆದರೂ ಯಕ್ಷಗಾನದ ಆಕರ್ಷಣೆ ಕಡಿಮೆ ಆಗಲಿಲ್ಲ.

ನಾನು : ತಮ್ಮ ಮೊದಲ ಸಂಪಾದನೆ ಎಷ್ಟಿತ್ತು ಅಂಥ ನೆನಪಿದೆಯಾ? ಇತ್ತೀಚೆಗೆ ?

ಚಿ.ರಾ.ಹೆ : ಮೊದಲು ಎಂಟಾಣೆ ಇತ್ತು. ದೇವರ ಹೆಗ್ಡೆರು ಎರಡು ರೂಪಾಯಿ ಕೊಡ್ತಿದ್ದರು. ನಾರಾಯಣ ಭಟ್ಟರಯ 50 ರೂಪಾಯಿ  ಕೊಟ್ಟರು. ನಂತರ 75 ರೂ, 200, 300. ಕೊನೆಗೆ ನನ್ನಷ್ಟು ಯಾರೂ ತೆಗೆದು ಕೊಳ್ತಿರಲಿಲ್ಲ. ಈಗೆಲ್ಲಾ 7-8 ಸಾವಿರ  ಕೊಡೊದೂ ಇದೆ.

ನಾನು : ಪ್ರತಿ ದಿನ ರಂಗದ ಮೇಲೆ ಹೋದಾಗ ಏನೆನ್ನಿಸ್ತದೆ?

ಚಿ.ರಾ.ಹೆ : ನನ್ನ ಎಲ್ಲಾ ನೋವು ಜಂಜಾಟಗಳನ್ನು ಮರೆತೇನೆ. ಹಣ ಕೊಟ್ಟು ಬಂದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗದಂತೆ ಪಾತ್ರ ಮಾಡೋದು ನನ್ನ ಕರ್ತವ್ಯ ಅಂದ್ಕೋತೆನೆ. ಒಬ್ಬನೇಒಬ್ಬ ನನ್ನ ಅಭಿಮಾನಿ ಎದುರಿಗೆ ಇದ್ದರೂ ನಾನು ಅವನಿಗೆ ಮೋಸ ಆಗದಂತೆ ನಿಷ್ಠೆಯಿಂದ ನಟಿಸ್ತೇನೆ. ಚಿಟ್ಟಾಣಿಯವರಿಗೆ ವಯಸ್ಸಾಯ್ತು. ಮೊದಲಿನ ಹಾಗೆ ಮಾಡ್ತಿಲ್ಲ ಅಂತ ಬೇಸರ ಪಡ್ತಾರೊ ಅಂತ ಭಯ; ಪ್ರತಿ ಸಲವೂ ಭಯ ಆಗ್ತದೆ. ಜೀವನದ ಕೊನೆವರೆಗೂ ನನ್ನ ಕೈಲಾದಷ್ಟು ಕೊಡ್ಬೇಕು ಅಂಥ ಅಂದ್ಕೊಂಡಿದ್ದೆ. ಕೊಟ್ಟ ತೃಪ್ತಿ ಇದೆ.

ನಾನು : ನಿಮ್ಮ ಮಾತಿನಲ್ಲಿ ಸ್ವಲ್ಪ ತೊಡಕಿದೆ ಎಂಬ ಮಾತಿದೆ. ಅದನ್ನು ಮೀರುವುದಕ್ಕಾಗಿ ಕುಣಿತ, ಭಾವಾಭಿನಯಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಕಾಣುತ್ತದೆ.?

ಚಿ.ರಾ.ಹೆ : ಖಂಡಿತವಾಗಿಯೂ ಹೌದು. ಮೊದಲು ನನಗೆ ಈ ತೊಡಕಿತ್ತು. ರಂಗದ ಮೇಲೆ ಹೋದಾಗ ಏನು ತೋಚುತ್ತದೋ ಅದನ್ನು ಹೇಳುತ್ತಿದ್ದೆ. ಆನಂತರ ಯೋಚಿಸಿ ಹೇಳುವುದನ್ನು ರೂಢಿಸಿಕೊಂಡೆ. ಅಭಿನಯ , ಕುಣಿತದಲ್ಲಿ ಹೆಚ್ಚೆಚ್ಚು ಸಾಧನೆಗೆ ತೊಡಗಿದೆ. ಪ್ರತಿ ಪಾತ್ರವನ್ನು ಹೊಸದಾಗಿಯೆ ಕಟ್ಟಲು ಪ್ರಾರಂಭಿಸಿದೆ. ಪಾತ್ರ ಗುಣಕ್ಕೆ ಅನುಗುಣವಾಗಿ ಅಭಿನಯದಲ್ಲಿ ಭಿನ್ನತೆ ಬೇಕು. ಉದಾಹರಣೆಗೆ ಕೃಷ್ಣನ ಶೃಂಗಾರಾಭಿನಯದಲ್ಲಿ . ಭಸ್ಮಾಸುರನ ಶೃಂಗಾರಾಭಿನಯದಲ್ಲಿ ವ್ಯತ್ಯಾಸ ಇದೆ. ಎರಡೂ ಒಂದೇ ಅಲ್ಲ. ಹಾಗೆ ಯಕ್ಷಗಾನದಲ್ಲಿ  ಬರೀ ಮಾತೆ ಮುಖ್ಯವಲ್ಲ. ಹರಿದಾಸರು ಇಲ್ಲಿ ಪ್ರವೇಶಿಸಿದ ಮೆಲೆ ಮಾತೇ ಮುಖ್ಯವಾಯಿತು.

ನಾನು : ನಿಮಗೆ ತೀರಾ ಖುಶಿ ಕೊಟ್ಟ ಜೋಡಿ ಪಾತ್ರಧಾರಿಗಳು ಯಾರು ?

ಚಿ.ರಾ.ಹೆ : ಕೆರೆಮನೆ ಶಿವರಾಮ ಹೆಗಡೆಯವರು. ಆನಂತರ ಜಲವಳ್ಳಿ ವೆಂಕಟೇಶ್. ಆತ ಅದ್ಭುತ. ಅವನ ಈಶ್ವರ ನನ್ನ ಭಸ್ಮಾಸುರ; ನನ್ನ ಈಶ್ವರ ಅವನ ಯಮ; ಅವನ ರಕ್ತಜಂಗಾಸುರ ನನ್ನ ರುದ್ರಕೋಪ; ಅವನ ಭೀಮ ನನ್ನ ಕೌರವ. ಕೆಲವು ಪಾತ್ರಗಳು ಅವನದೇ. ಅವನು ಈಶ್ವರನಾಗಿ ಇರುವವರೆಗೆ ರಂಗ ಅವನದೇ. ನಂತರ ಮೋಹಿನಿಯೊಂದಿಗೆ ಚಿಟ್ಟಾಣಿ ಬೆಳಗಬೇಕು.

ನಾನು : ಅವರ ಮತ್ತು ನಿಮ್ಮ ಹಿನ್ನೆಲೆ ಒಂದೇ ರೀತಿ ಇತ್ತು. ಸ್ವಯಂ ಕಲಿಕೆಯಿಂದ ನೀವಿಬ್ಬರು ಮೇಲೆ ಬಂದವರು.

ಚಿ.ರಾ.ಹೆ : ಹೌದು. ಅವನೂ ಹೆಚ್ಚು ಅಕ್ಷರ ಕಲಿಯಲಿಲ್ಲ. ರಂಗದ ಮೇಲೋ.. .. .. ಮೂರು ಸುತ್ತು ಒಂದು ಗತ್ತು. ಆ ಲಯ          ಎಂಥದ್ದು ಅದು. ಆದರೆ ಜಂಪೆಗೂ ಅದೇ ಗತ್ತು. ತ್ರಿವುಡೆಗೂ ಅದೇ ಗತ್ತು. ಆದರೆ ಲಯ ಆಚೀಚೆ ಆಗೋದಿಲ್ಲ. ಮೊದ್ಲು          ಅವನು ಕುಣಿತಿದ್ದ. ಹೆಣ್ಣವೇಷ ಮಾಡ್ತಿದ್ದ. ಯಾವಾಗ ತೆಂಕಿಗೆ ಹೋದ್ನೊ. ಕುಣಿತ ಗೋವಿಂದ. (ಏಕ ವಚನದ ಆತ್ಮೀಯತೆ         ಖುಶಿಕೊಡುವಂತಿತ್ತು)

ನಾನು : ಹೊಸ ಪ್ರಸಂಗಗಳಿಗೆ ಹೇಗೆ ಒಗ್ಗಿಕೊಂಡಿರಿ?

ಚಿ.ರಾ.ಹೆ : ಅನಿವಾರ್ಯ ಆಯ್ತು. ನನಗೆ ಅದು ಎಂದೂ ಮಾನಸಿಕ ಖುಶಿ ಕೊಟ್ಟಿಲ್ಲ. ಯಕ್ಷಗಾನದ ಒಟ್ಟಾರೆ ಬೆಳವಣಿಗೆಗೆ ಅದು ಪೂರಕವಲ್ಲ. ಅದು ಒಬ್ಬ ನಟನನ್ನು ಬೆಳೆಸುವುದಿಲ್ಲ. ಜನ ನೋಡಿ ಚಪ್ಪಾಳೆ ಹೊಡೆಯಬಹುದು ಅಷ್ಟೆ. ಆದರೆ ನನಗೆ ತೃಪ್ತಿ ಇಲ್ಲ. ಆದರೆ ಮೇಳದ ಯಜಮಾನರ ದೃಷ್ಟಿಯಿಂದ, ಕಲಾವಿದರ ಬದುಕಿ ದೃಷ್ಟಿಯಿಂದ ಹಲವು ಬಾರಿ ಒಪ್ಪಿಕೊಳ್ಳಬೇಕಾಗುತ್ತದೆ.

ನಾನು : ಮೇಳ ಕಟ್ಟಿ ಯಜಮಾನರಾಗಿದ್ರಿ ?

ಚಿ.ರಾ.ಹೆ :  ಲಾಸ್ ಆಯ್ತು. ಐದು ವರ್ಷ ನಡೆಸಿದೆ. ನಟನೆಯ ಕಡೆ, ಮೇಳದ ಕಡೆ ಏಕಕಾಲದಲ್ಲಿ ಗಮನ ಹರಿಸಲು ಸಾಧ್ಯ ಆಗಲಿಲ್ಲ. ಕೆಲವು ಕಲಾವಿದರನ್ನು ಸಂಬಾಳಿಸುವುದು ಕಷ್ಟವಾಯಿತು. ಮಹಾಬಲ ಹೆಗಡೆಯವರಂತ ಒಳ್ಳೆಯ ಕಲಾವಿದರು ನಮ್ಮ ಮೇಳದಲ್ಲಿದ್ದರು. ಹಲವು ಸಂದರ್ಭದಲ್ಲಿ ಅವರು ಹೇಳಿದಂತೆ ಆಗಬೇಕು ಎನ್ನುವವರು ಅವರು.ನಡೆಸಿದಷ್ಟು ದಿನ ಚೆನ್ನಾಗಿಯೇ ನಡೆಸಿದೆ. ಮೇಳ ನಿಲ್ಲಿಸಲು ಪ್ರೇಕ್ಷಕರ ಕೊರತೆಯಾಗಲಿಲ್ಲ ಅಸಹಕಾರವಾಗಲಿ ಕಾರಣ ಆಗಿರಲಿಲ್ಲ. ನನಗೆ ವ್ಯವಹಾರ ಬರ್ತಿರಲಿಲ್ಲ.

ನಾನು ; ನೀವು ಸಿರ್ಸಿಯಲ್ಲಿ, ಕುಮಟಾದಲ್ಲಿ ಯಕ್ಷಗಾನದ ಸ್ಪರ್ಧೆಗೆ ಇಳಿದದ್ದು ನಮಗೆಲ್ಲಾ ಸರಿಕಂಡಿರಲಿಲ್ಲ. ನೀವು ನಿರ್ಣಾಯಕ ಸ್ಥಾನದಲ್ಲಿದ್ದವರು…….ಯಕ್ಷಗಾನದಲ್ಲಿ ನಿಮ್ಮ ಸ್ಥಾನ ಪಿಕ್ಸ ಆಗಿದೆ ಎಂದು ಸಂಘಟಕರಿಗೆ ಅನಿಸಲೇ ಇಲ್ವಾ?

ಚಿ.ರಾ.ಹೆ : ಬಂದು ಕರೆದಾಗ ಇಲ್ಲಾ ಅಂತ ಹೇಳಲು ಆಗುವುದಿಲ್ಲ. ನನ್ನನ್ನ ಕರೆಯಬೇಕೊ ಬೇಡ್ವೊ ಎಂದು ಸಂಘಟಕರು ತೀರ್ಮಾನಿಸಬೇಕಾಗಿತ್ತು.

ನಾನು : ಯುವ ಕಲಾವಿದರ ಬಗ್ಗೆ ಏನೆನ್ನಿಸ್ತಿದೆ?

ಚಿ.ರಾ.ಹೆ :  ಯಕ್ಷಗಾನಕ್ಕಂತೂ ಅಳಿವಿಲ್ಲ. ಅದು ಮುಂದರಿಯುತ್ತದೆ. ಹೇಗೆ ತಯಾರಾಗ್ಬೇಕು ಅಂತ ಯೋಚಿಸಬೇಕು. ಹೊಸ           ಕಲಾವಿದರು ಅಧ್ಯಯನ ಮಾಡ್ಬೇಕು. ನಮ್ಮದು ಹೇಗೋ ಆಯ್ತು. ನೋಡಿ ಕೇಳಿ, ಕಲ್ತಿದ್ದಾಯ್ತು. ಆಂಗಿಕಾಭಿನಯ,        ಭಾವಾಭಿನಯಕ್ಕೆ ಸಂಬಂಧ ಇರಬೇಕು. ಪಾತ್ರದಲ್ಲಿ ಪೂರ್ಣ ತಲ್ಲೀನ ಆಗ್ಬೇಕು. ಹೊಸ ಪ್ರಸಂಗಗಳು ಅವರ ಬೆಳವಣಿಗೆಗೆ        ಅಡ್ಡಿ ಆಗಿದೆ. ಅದನ್ನು ಮೀರಿಬೆಳೆಯಬೇಕು. ಇದಕ್ಕೆ ಕಲೆಯ  ಮೇಲೆ ಪ್ರೀತಿ,ನಿಷ್ಠೆ ಬೆಳೆಸಿಕೊಳ್ಳಬೇಕು.

ಹೀಗೆ ಮಾತುಕತೆ ಮುಂದುವರಿಯುತ್ತಲೇ ಇತ್ತು. ತನ್ನ ಬೆಳವಣಿಗೆಯಲ್ಲಿ ಹೆಂಡತಿ ಸುಶೀಲಾರ ಪಾತ್ರ ಮಹತ್ವದ್ದೆಂದು ಅಭಿಮಾನದಿಂದ ಹೇಳಿದರು. ಅವರೂ ಮಾತಿಗೆ ಬಂದು ನಿಂತರು. ಗಂಡನ ಬಗ್ಗೆ ಅಭಿಮಾನ ವ್ಯಕ್ತ ಪಡಿಸಿದರು ಮಾತ್ರವಲ್ಲ ತಾನು ಚಿಟ್ಟಾಣಿಯವರನ್ನು ಮೊದಲು ನೋಡಿದ ದಿನಗಳನ್ನು,ಅವರ ಪಾತ್ರನೋಡಿ ಮೆಚ್ಚಿದ ದಿನಗಳನ್ನು ನೆನಪಿಸಿಕೊಂಡು ಹೇಳಿದಾಗ ಚಿಟ್ಟಾಣಿಯವರೂ ಸೇರಿ ನಾವೆಲ್ಲಾ ಹೊಟ್ಟೆ ತುಂಬ ನಕ್ಕೆವು. ಮುಕ್ತಾಯದ ಹಂತದಲ್ಲಿರುವ ಹೊಸ ಮನೆ ತೋರಿಸಿದರು. ಈ ವರೆಗೆ ಬಂದ ಪ್ರಶಸ್ತಿ, ನೆನಪಿನ ಕಾಣಿಕೆಗಳನ್ನೆಲ್ಲಾ ತೋರಿಸಿದರು. ನಾಲ್ಕಾರು ಫೋಟೊ ಕ್ಲಿಕ್ಕಿಸಿಕೊಂಡು ಮತ್ತೊಮ್ಮೆ ಶುಭಾಶಯ ಹೇಳಿ ಮನೆಯ ಕಡೆ ಹೊರಟಾಗ ಚಿಟ್ಟಾಣಿಯವರ ‘ನೀಲ ಗಗನದೊಳು ನವಿಲು ಕುಣಿಯುತಿದೆ ನೋಡು’ ಪದ್ಯದ ನವಿಲ ಕುಣಿತ ಕಣ್ಮುಂದೆ ಬರುತ್ತಿತ್ತು.

 

Leave a Reply