fbpx

ಇಂದಿನ ನಾಟಕ ‘ಕರ್ಣಾಂತರಂಗ’

‘ಹೊಂಗಿರಣ’ತಂಡ

ಶಿವಮೊಗ್ಗ 1996ರಲ್ಲಿ ‘ಹೊಂಗಿರಣ’ತಂಡವು ಗಾಜನೂರಿನ ಮೊರಾರ್ಜಿ ಶಾಲೆಯಲ್ಲಿ ಮಕ್ಕಳ ರಂಗ ಚಟುವಟಿಕೆಗಳಿಗಾಗಿ ಹುಟ್ಟಿದ್ದು ನಂತರ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ. ಶ್ರೀ ಕೃಷ್ಣ ಸಂಧಾನ, ಇದೇನು ನಡೆದಿದೆ ಇಲ್ಲಿ?, ಮೃತ್ಯು, ದನಕಾಯೋ ಹುಡುಗ್ರ ದೊಡ್ಡಾಟ, ಹೆಬ್ಬೆಟ್ಟು, ಕಲ್ಪವೃಕ್ಷ, ನಾಗನ ಕಥೆ, ಮೈಸೂರು ಮಲ್ಲಿಗೆ, ಕುಣಿ ಕುಣಿ ನವಿಲೆ, ದಾರಾಶಿಕೊ, ಹಂಚಿನಮನೆ ಪರಸಪ್ಪ, ಕನಸಿನವರು, ದೇವರ ಹೆಣ, ಏಕಲವ್ಯ, ಹೇಳಿ ನೀವ್ಯಾರ ಕಡೆ?, ಧರೆ ಹೊತ್ತಿ ಉರಿದೊಡೆ ಪಂಜರ ಶಾಲೆ, ಕರ್ಣಾಂತರಂಗ, ಒಂದು ಬೊಗಸೆ ನೀರು ಮುಂತಾದ 40ಕ್ಕೂ ಹೆಚ್ಚು ನಾಟಕಗಳನ್ನು ನಿರ್ಮಿಸಿದೆ.

ಮದಗದ ಕೆಂಚವ್ವ, ಒಗಟಿನ ರಾಣಿ ಎಂಬ ಅತ್ಯುತ್ತಮ ರೂಪಕಗಳನ್ನು ಕೊಟ್ಟಿರುವ ತಂಡವು ಇತ್ತೀಚೆಗೆ ಕರ್ಣಾಂತರಂಗ ನಾಟಕವನ್ನು ರಾಜಮಟ್ಟದ ಕಲಾಪ್ರತಿಭೋತ್ಸವದಲ್ಲಿ ಪ್ರತಿನಿಧಿಸಿ ಪ್ರಥಮ ಬಹುಮಾನವನ್ನು ಶಿವಮೊಗ್ಗ ಜಿಲ್ಲೆಗೆ ತಂದುಕೊಟ್ಟಿರುತ್ತದೆ. ಜೊತೆಗೆ ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ತಂಡವು ಪ್ರತಿನಿಧಿಸಿರುತ್ತದೆ.

ಅಲೆಗ್ಜಾಂಡರನ ಜೀವನ ಚರಿತ್ರೆಯನ್ನಾಧರಿಸಿದ ಒಂದು ಬೊಗಸೆ ನೀರು ನಾಟಕವನ್ನು ರಂಗಾಯಣದ ನಾಟಕೋತ್ಸವದಲ್ಲಿ ಅಭಿನಯಿಸಿರುತ್ತದೆ.ಅಷ್ಟೆ ಅಲ್ಲದೇ ಹಟ್ಟಿ ಚಿನ್ನದ ಗಣಿಯ ಮೇಲೆ ಸಾಕ್ಷ ಚಿತ್ರವನ್ನು ತಯಾರು ಮಾಡುವಲ್ಲಿ ತಂಡ ಯಶಸ್ವಿಯಾಗಿರುತ್ತದೆ. ‘ಭಾವನೆಗಳು’ ಎಂಬ ಕವನ ಸಂಕಲನವನ್ನು ತಂಡ ಈಗಾಗಲೇ ಹೊರತಂದಿರುತ್ತದೆ.ತಂಡವು ಶಾಲಾ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ರಂಗ ಚಟುವಟಿಕೆಗಳಲ್ಲಿ ಆಸಕ್ತಿ ಬರುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಅತ್ಯಂತ ಉತ್ಸಾಹಿ ಯುವ ರಂಗ ನಟ, ನಟಿಯರನ್ನು ಹಿರಿಯ ರಂಗ ತಜ್ಞರನ್ನು ಒಳಗೊಂಡಿರುವ ತಂಡ 9 ಬಾರಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಗಳಿಸಿದೆ.

ನಾಟಕಗಳ ಬಗೆಗಿನ ಒಂದು ಗ್ರಂಥಾಲಯವನ್ನು ತಂಡ ಈಗಾಗಲೇ ತೆರೆದಿದೆ. 2014ರಲ್ಲಿ ಅಖಿಲ ಭಾರತ ಕುವೆಂಪು ಕನ್ನಡ ನಾಟಕೋತ್ಸವದಲ್ಲಿ ತಂಡವು ಪ್ರಥಮ ಬಹುಮಾನ ಪಡೆದಿದಲ್ಲದೇ 8 ವೈಯಕ್ತಿಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿತು. ಇದರೊಂದಿಗೆ ಸಾಹಿತ್ಯದ ಕಾರ್ಯಕ್ರಮಗಳನ್ನೂ ಮಾಡುತ್ತಾ ಬಂದಿರುವ ತಂಡವು ಪುಸ್ತಕ ಪ್ರಕಾಶನಕ್ಕಿಳಿದಿದೆ. ಹೊಂಗಿರಣ ಪ್ರಕಾಶನದ ಮೊದಲ ಪ್ರಯತ್ನವೆಂಬಂತೆ ಹೆಚ್.ಕೆ.ರಮೇಶ್ ರವರ “ಹಳೇ ಕೂದ್ಲಾ ಪಿನ್ನಾ..!” ಕವನ ಹೊರತಂದಿದೆ. ರಂಗಭೂಮಿಗೆ ಸಂಬಂಧಿಸಿದ ರಂಗ ಗ್ರಂಥಾಲಯ ಈಗಾಗಲೇ ತಂಡವು ಸಿದ್ಧ ಮಾಡಿದೆ. ಇದರೊಂದಿಗೆ ಸಿನಿಮಾ ಕ್ಷೇತ್ರದಲ್ಲಿಯೂ ಹೊಸ ಸಾಧ್ಯೆತೆ ಹುಡುಕುವ ಸಲುವಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ “ಸಂಚಾರಿ ವಿಜಯ್” ಇವರೊಂದಿಗೆ “ಅವ್ಯಕ್ತ” ಎಂಬ ಕಿರು ಚಿತ್ರ ನಿರ್ಮಾಣದಲ್ಲಿ ಹಲವು ವಿಭಾಗಗಳಲ್ಲಿ ತಂಡ ಕಾರ್ಯನಿರ್ವಹಿಸಿದೆ.

ನಾಟಕ : ಕರ್ಣಾಂತರಂಗ

ರಚನೆ, ವಿನ್ಯಾಸ, ನಿರ್ದೇಶನ : ಡಾ.ಸಾಸ್ವೆಹಳ್ಳಿ ಸತೀಶ್ 

ನಾಟಕದ ಅವಧಿ : 1 ಘಂಟೆ 30 ನಿಮಿಷ

ನಾಟಕದ ಕುರಿತು: ಮಹಾಭಾರತದ ಪಾತ್ರಗಳಲ್ಲಿಯೇ ಕರ್ಣನ ಪಾತ್ರವು ಶ್ರೇಷ್ಠವಾದುದು ಎಂಬುದು ‘ಕರ್ಣ ರಸಾಯನಮಲ್ತೆ ಭಾರತಂ’, ‘ನೆನೆವುದಾದರೆ ಕರ್ಣನಂ ನೆನೆ’ ಮುಂತಾದ ಮಾತುಗಳಿಂದ ದೃಢಪಡುತ್ತದೆ. ವೀರಾಧಿವೀರನಾದ ಕರ್ಣ ಹುಟ್ಟಿದಂದಿನಿಂದ ತನ್ನ ಬದುಕಿನ ವಿರುದ್ಧ ತಾನೇ ಹೋರಾಡುತ್ತಾ ಬೆಳೆಯುತ್ತಾನೆ. ತನ್ನದಲ್ಲದ ತಪ್ಪಿಗೆ ಬದುಕಬಾರದ ರೀತಿಯಲ್ಲಿ ಬದುಕಿದ ಬದುಕಿಗೆ ಯಾರು ಹೊಣೆ ಎಂಬುದು ಕರ್ಣನ ಪ್ರಶ್ನೆ.

ಮಹಾಭಾರತದ ಕರ್ಣ ತನ್ನ ಸಾವಿನ ಬಳಿಕ ವಾಸ್ತವದಲ್ಲಿ ನಿಂತು ತನ್ನ ಕುರಿತು ಹಾಗೂ ತನ್ನೊಂದಿಗೆ ಜೀವಿಸಿದ ಪಾತ್ರಗಳ ಕುರಿತು ಅಂತರಂಗವನ್ನು ತೆರದುಕೊಳ್ಳುತ್ತಾ ಸಾಗುತ್ತಾನೆ. ಕರ್ಣನ ಬದುಕಿನ ಕಥಾ ಹಂದರವನ್ನು ಸಮಕಾಲೀನಗೊಳಿಸಿರುವಲ್ಲಿ ನಿರ್ದೇಶಕರ ಜಾಣ್ಮೆ ತೋರುತ್ತದೆ. ಈ ನಾಟಕಕ್ಕೆ ಕುಮಾರವ್ಯಾಸನ ಪದ್ಯಗಳು ಗಮಕ ಶೈಲಿಯಲ್ಲಿ ಬಳಸಿರುವುದು ಹಾಗೂ ಹಿಂದೂಸ್ತಾನಿ ಆಲಾಪ ಮೆರಗು ನೀಡಿದೆ.

ನಿರ್ದೇಶಕ ಡಾ. ಸಾಸ್ವೆಹಳ್ಳಿ ಸತೀಶ್

30 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟನಾಗಿ ರಂಗಭೂಮಿಗೆ ಪ್ರವೇಶಿಸಿದ ಇವರು ಸಂಕ್ರಾಂತಿ, ತಲೆದಂಡ, ಯಯಾತಿ, ಗುಣಮುಖ, ಶಾಲಭಂಜಿಕೆ, ಕಡಿದಾಳು ಶಾಮಣ್ಣ, ಕಟ್ಟೆ ಪುರಾಣ ನಾಟಕಗಳು ಸೇರಿದಂತೆ 30ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ನಿರ್ದೇಶಕರಾಗಿ, ಭಳಾರೆ ವಿಚಿತ್ರಂ, ಏಕಲವ್ಯ, ಕರ್ಣಾಂತರಂಗ, ರಾವಣದರ್ಶನ, ಮಂಥರೆ, ರಾಜಾಶ್ರಯ, ಧನ್ವಂತರಿ ಚಿಕಿತ್ಸೆ, ಮುಂತಾಗಿ 20ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.  ಮಕ್ಕಳ ನಾಟಕಗಳನ್ನು ನಿರ್ದೇಶಿಸುವುದರಲ್ಲಿ ಇವರಿಗೆ ಹೆಚ್ಚಿನ ಸಂತೋಷ. ನಾಗನಕಥೆ, ಹೆಂಚಿನಮನೆ ಪರಸಪ್ಪ, ಧರೆಹತ್ತಿ ಉರಿದೊಡೆ, ಕುಣಿಕುಣಿ ನವಿಲೆ, ಹುಲಿ ಹೊಡ್ದೊರು ಯಾರು ಮುಂತಾದ 50 ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕರ್ಣ, ದಾರಾಶಿಕೋ ಎಂಬ ಎರಡು ಏಕವ್ಯಕ್ತಿ ನಾಟಕಗಳಲ್ಲಿ ಅಭಿನಯಿಸಿರುವ ಇವರು ಸಾಹಿತ್ಯದ ವಿವಿಧ ಪ್ರಕಾರಗಳನ್ನು ರಂಗಕ್ಕೆ ಅಳವಡಿಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ.

ಧಾರಾವಾಹಿಗಳಲ್ಲೂ ನಟಿಸಿರುವ ಸತೀಶ್ ಸಾಕ್ಷ್ಯಚಿತ್ರ ನಿರ್ಮಾಣ, ಚಿತ್ರಕಥೆ ರಚನೆಯನ್ನೂ ಮಾಡಿರುತ್ತಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಅತ್ಯುತ್ತಮ ನಟ – ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ರಂಗಭೂಮಿ ವಿಷಯಗಳ ಮೇಲೆ ಪ್ರಬಂಧ ಮಂಡಿಸಿರುತ್ತಾರೆ.

 

 

1 Response

  1. gundurao desai says:

    congrats sasvihalli satish sir

Leave a Reply

%d bloggers like this: