fbpx

ನಿನ್ನ ರೂಪು ಎದೆಯ ಕಲಕಿ..

“ಅಂತರಾಳ” ದ ಚೊಚ್ಚಲ ಪ್ರಸ್ತುತಿ

ನಿನ್ನ ರೂಪು ಎದೆಯ ಕಲಕಿ ಡಾ|ದೊಡ್ಡರಂಗೇಗೌಡರ ಜನಪ್ರಿಯ ಚಿತ್ರಗೀತೆಗಳ ಸುಗ್ಗಿ

ಬಂದಿದೆ ಬದುಕಿನ ಬಂಗಾರದ ದಿನ

ಮದುವೆಯೇ ಮನುಜನ ಮೊದಲ ಬಂಧನ”

– ೧೯೭೭ರಲ್ಲಿ ಬಿಡುಗಡೆಯಾದ ಕೆ.ಎಸ್.ಎಲ್. ಸ್ವಾಮೀ ನಿರ್ದೇಶನದ ‘ಮಾಗಿಯ ಕನಸು’ ಚಿತ್ರದ ಈ ಹಾಡಿನ ಮೂಲಕ ಚಿತ್ರಗೀತೆ ಸಾಹಿತ್ಯಕ್ಕೆ ಪಾದಾರ್ಪಣೆ ಮಾಡಿದ ದೊಡ್ಡರಂಗೇಗೌಡರು ಹಿಂದಿರುಗಿ ನೋಡಿದ್ದೆ ಇಲ್ಲ. ಈ ಗೀತೆಯ ವಿಶೇಷತೆ ಎಂದರೆ, ಅವರ ಮದುವೆಯ ವಾರ್ಷಿಕೋತ್ಸವದ ದಿನವೇ ಈ ಗೀತೆಯನ್ನು ರಚಿಸಿದ್ದು. ಮದುವೆಯ ಸಂಭ್ರಮದ ಬಗ್ಗೆ, ಮನದ ತುಡಿತಗಳ, ಹರುಷದ ಆಚರಣೆಯನ್ನು ಸುಂದರವಾಗಿ ಕಟ್ಟಿದ ಈ ಹಾಡು ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿ ಆಯಿತು.

ಜನ್ಮ ನೀಡಿದ ಭೂ ತಾಯಿಯ

ನಾ ಹೇಗೆ ತಾನೆ ತೊರೆಯಲಿ”

– ಹುಟ್ಟಿ ಬೆಳೆದ ಊರನ್ನು, ಆತ್ಮೀಯ ಸ್ನೇಹಿತರನ್ನು, ಸಾಕಿ ಬೆಳಿಸಿದ ಹಸು ಕರುಗಳನ್ನು ತೊರೆಯ ಬೇಕಾದ ಸಂದರ್ಭದಲ್ಲಿ ಯುವಕನೊಬ್ಬನ ಮನದ ತುಮುಲಗಳನ್ನು ಮಣ್ಣಿನ ಪ್ರೇಮವನ್ನು ಅತ್ಯಂತ ಅದ್ಭುತವಾಗಿ ಅಕ್ಷರವಾಗಿಸಿದ್ದಾರೆ ದೊಡ್ಡರಂಗೇಗೌಡರು. ೧೯೭೮ರ ಪಡುವಾರಹಳ್ಳಿ ಪಾಂಡವರು ಚಿತ್ರದ ಹಾಡು ೪೦ ವರ್ಷಗಳ ನಂತರವೂ ಜನರ ನೆಚ್ಚಿನ ಗೀತೆಯಾಗಿ ಉಳಿದಿದೆ.

ನೋಟದಾಗೆ ನಗೆಯ ಮೀಟಿ

ಮೋಜಿನಾಗೆ ಎಲ್ಲೆಯ ದಾಟಿ

ಮೋಡಿಯ ಮಾಡಿದೊಳ ಪರಸಂಗ ಐತೆ ಪರಸಂಗ ಐತೆ”

&

ತೇರ ಏರಿ ಅಂಬರದಾಗೆ ನೇಸರು ನಗುತಾನೆ

ಮರಗಿಡ ತೂಗ್ಯಾವೆ.. ಚಿಲಿ-ಪಿಲಿ.. ಹಕ್ಕಿ ಹಾಡ್ಯಾವೆ”

– ಎಸ್.ಪಿ. ಬಾಲಸುಬ್ರಮಣ್ಯಂ ಅದ್ಭುತ ಕಂಠದಲ್ಲಿ ಮೂಡಿ ಬಂದ ಪರಸಂಗದ ಗೆಂಡೆತಿಮ್ಮ ಚಿತ್ರದ ಮರೆಯಲಾಗದ ಈ ಹಾಡುಗಳು ಜನರನ್ನು ಅಂದಿಗೂ ಇಂದಿಗೂ ಅಡೆತಡೆಯಿಲ್ಲದೆ ರಂಜಿಸುತ್ತಿವೆ. ಈ ಹಾಡುಗಳ ಮೂಲಕ ಹೊಸ ಚಿತ್ರಗೀತೆಯ ಭಾಷೆಗೆ ನಾಂದಿ ಹಾಡಿ, ಜಾನಪದ ಸ್ಪರ್ಶವನ್ನು, ನೆಲದ ಕಂಪನ್ನು ಧಾರಾಳವಾಗಿ ತುಂಬಿ ಇವು ಜಾನಪದ ಗೀತೆಯೇ ಅನ್ನುವಂತಹ ಅಚ್ಚರಿಯನ್ನು ತಂದವರು ದೊಡ್ಡರಂಗೇಗೌಡರು.

ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ

ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ”

– ಕನ್ನಡ ನಾಡು-ನುಡಿಯ ಅಭಿಮಾನದ ಪ್ರತೀಕವಿದು. ಕನ್ನಡ ಹಬ್ಬದಾಚರಣೆಯಲ್ಲಿ ಎಲ್ಲಲ್ಲಿಯೂ ತಪ್ಪದೇ ಕೇಳುವ, ಹಾಡುವ, ಕಾಡುವ ಹಾಡು ಇದು.

ನಮ್ಮೂರ ಮಂದಾರ ಹೂವೇ

ನನ್ನೊಲುಮೆ ಬಾಂದಳದ ಚೆಲುವೇ “

– ಆಲೆಮನೆ ಚಿತ್ರದ ಯಶಸ್ಸಿಗೆ ಈ ಹಾಡೂ ಕೂಡ ಕಾರಣ ಅಂದರೆ ತಪ್ಪಿಲ್ಲ. ಪ್ರೀತಿಯ ಪ್ರತೀಕವಾಗಿ ಪ್ರೇಮಿಗಳು ಮಿಂದೆಳುವ ಮೋಹಕ ಗೀತೆ ಇದು.

ಇಂತಹ ಹಲವಾರು ಮನಸೂರೆಗೊಳ್ಳುವ ಚಿತ್ರಗೀತೆಗಳನ್ನು ದೊಡ್ಡರಂಗೇಗೌಡರು ಕನ್ನಡಕ್ಕೆ ನೀಡಿದ್ದಾರೆ. ಕನ್ನಡ ಚಲನಚಿತ್ರ, ಭಾವಗೀತೆ ಮತ್ತು ಭಕ್ತಿಗೀತೆಗಳ ಲೋಕಕ್ಕೆ ತಮ್ಮದೇ ಆದ ಅಪೂರ್ವ ಕೊಡುಗೆ ನೀಡಿದ ಪ್ರಮುಖ ಸಾಹಿತಿಗಳಲ್ಲಿ ಇವರೂ ಒಬ್ಬರು. ಚಿತ್ರಗೀತೆಗಳಿಗೆ ಗ್ರಾಮೀಣ ಸೊಗಡನ್ನು, ಜಾನಪದ ಶೈಲಿಯನ್ನು ಅಳವಡಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ೧೯೭೦ರ ದಶಕಕ್ಕೂ ೨೦೧೭ರ ಚಿತ್ರಸಂಗೀತಕ್ಕೂ ಸಂಪರ್ಕ ಕೊಂಡಿಯಾಗಿ ಗೌಡರು ನಿಲ್ಲುತ್ತಾರೆ. ಅವರ ಹಾಡುಗಳು ಇಂದಿಗೂ ಪ್ರಸ್ತುತ ಅಷ್ಟೇ ಅಲ್ಲದೆ ಸಾರ್ವಕಾಲಿಕ ಜನಪ್ರೀಯವಾಗಿವೆ ಮತ್ತು ಅವರ ಹಾಡುಗಳು ವಯಸ್ಸಿನ ಹಂಗಿಲ್ಲದೆ ಎಲ್ಲರನ್ನೂ ರಂಜಿಸುತ್ತವೆ. ಇಂತಿಪ್ಪ ದೊಡ್ಡರಂಗೇಗೌಡರ ಹಾಡುಗಳ ಸಂಭ್ರಮವನ್ನು “ಅಂತರಾಳ” ಚೊಚ್ಚಲ ಪ್ರಸ್ತುತಿಯಾಗಿ ನಿಮ್ಮೆಲ್ಲರಿಗೆ ದೀಪಾವಳಿಯ ಹಬ್ಬಕ್ಕೆ ಅರ್ಪಿಸುತ್ತಿದೆ. ಬನ್ನಿ, ಮಿನುಗುವ ಹಾಡುಗಳಿಗೆ ಜೊತೆಯಾಗಿ.

ನಿಮ್ಮ ನೀರಿಕ್ಷೆಯಲ್ಲಿ,

ಅಂತರಾಳ

Leave a Reply