ಗೋಲ್ ಮಾಲ್ ಹೈ ಭಾಯಿ ಸಬ್ ಗೋಲ್ ಮಾಲ್ ಹೈ..

7

ಅಂಗೋಲಾದಲ್ಲಿ ಲಂಚಾವತಾರ`

‘ಗೋಲ್ ಮಾಲ್ ಹೈ ಭಾಯಿ ಸಬ್ ಗೋಲ್ ಮಾಲ್ ಹೈ…’

ಲುವಾಂಡಾ-ವೀಜ್ ರಸ್ತೆಯಲ್ಲಿ ಬರುವ ಐದಾರು ಚೆಕ್-ಪೋಸ್ಟ್ ಗಳಲ್ಲಿ ಪೋಲೀಸಪ್ಪನೊಬ್ಬ ಮೊಟ್ಟಮೊದಲು ನನ್ನಲ್ಲಿ ಹಣ ಕೇಳಿದಾಗ ತಕ್ಷಣಕ್ಕೆ ಹೊಳೆದ ಹಾಡೇ ಇದು.

ಅಂಗೋಲಾಕ್ಕೆ ಕಾಲಿಡುವ ಮೊದಲ ದಿನವೇ ಏರ್-ಪೋರ್ಟಿನಲ್ಲಿ ನಮಗೆ ಸಿಕ್ಕ ಬಿಳಿಯ ಪೋರ್ಚುಗೀಸ್ ವ್ಯಕ್ತಿಯೊಬ್ಬ “ಯಾವುದಕ್ಕೂ ಹುಷಾರಾಗಿರಿ. ಸಿಕ್ಕಸಿಕ್ಕಲ್ಲಿ ಹಣ ಪೀಕುತ್ತಾರೆ ಇಲ್ಲಿಯ ಅಧಿಕಾರಿಗಳು” ಎಂದಿದ್ದ. ಈ ಸಹೃದಯಿಯ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ನಾವುಗಳು ಏರ್-ಪೋರ್ಟಿನ ಇಮಿಗ್ರೇಷನ್ ಅಧಿಕಾರಿಗಳೊಂದಿಗೆ ಯಾವ ಮಹಾಮಾತುಕತೆಗೂ ಇಳಿಯದೆ ಕೋಲೆಬಸವನಂತೆ ತಲೆಯಾಡಿಸಿ ಆರಾಮಾಗಿ ಹೊರಬಂದಿದ್ದೆವು. ವಿಷಯ ಅಲ್ಲಿಗೆ ಮುಗಿದುಹೋಗಿತ್ತು.

ಆದರೆ ಲುವಾಂಡಾದಿಂದ ವೀಜ್ ನತ್ತ ಸಾಗಲು ಮಾರ್ಗಮಧ್ಯದಲ್ಲಿ ಪಾಸಾಗಬೇಕಾದ ಪರೀಕ್ಷೆಗಳ ಬಗ್ಗೆ ನಮಗಾದರೂ ಏನು ಗೊತ್ತಿತ್ತು? ಆದರೆ ಮತ್ತೊಮ್ಮೆ ಅದೃಷ್ಟವೆಂಬಂತೆ ನಮ್ಮ ಮೊದಲ ಪ್ರಯಾಣದಲ್ಲಿ ಅಂಥಾ ಅನುಭವಗಳೇನೂ ಆಗಲಿಲ್ಲ. ಅಥವಾ ನಾವು ಪ್ರವಾಸಿಗಳ ಮೂಡಿನಲ್ಲೇ ಇದ್ದಿದ್ದರಿಂದ ಅಂಥದ್ದೇನಾದರೂ ಆಗಿದ್ದರೂ ನಮಗೆ ತಿಳಿಯಲಿಲ್ಲ. ಅಂದು ಅವರೆಲ್ಲರೂ ನನ್ನನ್ನು ನೋಡುತ್ತಾ “ಓ ಇಂಡಿಯಾನು… ಇಂಡಿಯಾನು…” (ಓ ಭಾರತೀಯ!) ಎಂದಾಗ ನಾನು ಸುಮ್ಮನೆ ಸಮ್ಮತಿಯ ನಗುವನ್ನು ಬೀರಿದ್ದೆ. `ಈ ಬಾರಿ ಈತನನ್ನು ಬಿಟ್ಟುಬಿಡೋಣ. ಹೇಗೂ ಇನ್ನು ಒಂದು ವರ್ಷ ಈ ದಾರಿಯಲ್ಲೇ ಹೋಗಿಬರೋದು ಇರುತ್ತದಲ್ವೇ’, ಎಂದು ಅವರು ಲೆಕ್ಕಹಾಕಿದ್ದರೋ ಏನೋ! (ಪಾಸ್-ಪೋರ್ಟಿನ ತಪಾಸಣೆಯಲ್ಲಿ ಒಂದು ವರ್ಷ ಅವಧಿಯ ವರ್ಕ್ ವೀಸಾವನ್ನು ಗುರುತಿಸಲು ಮಹಾ ಬುದ್ಧಿವಂತಿಕೆಯೇನೂ ಬೇಕಿಲ್ಲ). ಅಂತೂ ಮೊದಲ ಪ್ರಯಾಣವು ಸುಗಮವಾಗಿ ನೆರವೇರಿತ್ತು. ಆದರೆ ಅಸಲಿ ಕತೆಗಳು ಶುರುವಾಗಿದ್ದು ಮುಂದಿನ ಪ್ರಯಾಣಗಳಲ್ಲೇ.

ನಾವಿರುವ ವೀಜ್ ಒಂದು ಪುಟ್ಟ ಪಟ್ಟಣವಷ್ಟೇ. ಮೂಲಭೂತ ಅವಶ್ಯಕತೆಗಳು ವ್ಯವಸ್ಥಿತವಾಗಿ ಇಲ್ಲಿ ಲಭ್ಯವಿದ್ದರೂ ಅದನ್ನು ಬಿಟ್ಟು ಬೇರೇನೂ ಈ ಪ್ರದೇಶದಲ್ಲಿಲ್ಲ. ವೀಜ್ ನಲ್ಲಿ ಸಿಗದ ಸಾಮಾನುಗಳನ್ನು ತರಿಸಬೇಕಾದರೆ ನಾವು ನೇರವಾಗಿ ಲುವಾಂಡಾ ಮಹಾನಗರಿಗೇ ಹೋಗಬೇಕು. ಮೇಲಾಗಿ ಪ್ರಮುಖ ಸರ್ಕಾರಿ ಕಾರ್ಯಾಲಯಗಳು, ರಾಯಭಾರ ಕಛೇರಿಗಳು, ಉದ್ಯಮಗಳೆಲ್ಲಾ ಬೀಡುಬಿಟ್ಟಿರುವುದು ಲುವಾಂಡಾದಲ್ಲೇ.

ಅಂದರೆ ಮುನ್ನೂರು ಚಿಲ್ಲರೆ ಕಿಲೋಮೀಟರುಗಳ ದೂರವಿರುವ ಈ ಎರಡು ಜಾಗಗಳ ಮಧ್ಯೆ ಹೆಸರಿಗಾದರೂ ಒಂದೇ ಒಂದು ನಗರವೂ ಇಲ್ಲ. ವೀಜ್ ನ ನಿವಾಸಿಗಳು ಒಳ್ಳೆಯ ಚಿಕಿತ್ಸೆಯು ಬೇಕೆಂದರೆ ಲುವಾಂಡಾಗೆ ದೌಡಾಯಿಸಬೇಕು. ಒಳ್ಳೆಯ ಶಾಲೆ ಬೇಕೆಂದರೆ ಲುವಾಂಡಾಗೆ ಹೋಗಬೇಕು. ಕೊರಿಯರ್ ವ್ಯವಸ್ಥೆ ಬೇಕೆಂದರೆ ಮತ್ತೆ ಅಲ್ಲಿಗೇ ಹೋಗಬೇಕು. ಕ್ಷೌರ ಮಾಡಿಸಿಕೊಳ್ಳಲು ವೀಜ್ ನ ಕ್ಷೌರಿಕರು ಕತ್ತರಿ ಬಳಸುವುದಿಲ್ಲ ಎಂಬ ಒಂದೇ ಕಾರಣಕ್ಕಾಗಿ ನಾನು ಕೇವಲ ಕ್ಷೌರ ಮಾಡಿಸಿಕೊಳ್ಳಲು ಬರೋಬ್ಬರಿ ಮುನ್ನೂರು ಕಿಲೋಮೀಟರ್ ಪ್ರಯಾಣ ಮಾಡಬೇಕು. ಅಂಗೋಲಾದ ರಾಜಧಾನಿ ಲುವಾಂಡಾವು ವೀಜ್ ಸೇರಿದಂತೆ ದೂರದೂರದ ವಿವಿಧ ಪ್ರೊವಿನ್ಸ್ (ಪ್ರಾಂತ್ಯ)ಗಳಿಗೆ ಏಕೈಕ ಆಪತ್ಬಾಂಧವನಂತಿರುವ ತಾಣ.

ಹೀಗಾಗಿ ನಾವು ವೀಜ್-ಲುವಾಂಡಾ, ಲುವಾಂಡಾ-ವೀಜ್ ಎಂದು ತಿಂಗಳಿಗೆ ಎರಡು ಬಾರಿಯಾದರೂ ಪ್ರಯಾಣಿಸುವುದು ಸಾಮಾನ್ಯ. ತಿಂಗಳಿಗೆ ಎರಡೇ ಬಾರಿಯಾದರೂ ದಿನದ ವೇಳೆಯಲ್ಲಿ ಆರೂವರೆ ಘಂಟೆಗಳ ಕಾಲ ಕಾರಿನಲ್ಲಿ ಕುಳಿತುಕೊಂಡು ಪ್ರಯಾಣಿಸುವುದೆಂದರೆ ಸುಸ್ತಿನ ವಿಚಾರ. ಅಂದರೆ ತಿಂಗಳ ನಾಲ್ಕು ದಿನಗಳು ರಸ್ತೆಯಲ್ಲೇ ಕಳೆದಂತಾಯಿತು. ಮಂಗಳೂರು-ಬೆಂಗಳೂರು ಬಸ್ಸು ಪ್ರಯಾಣದಂತೆ ಡಿಲಕ್ಸ್ ಬಸ್ಸಿನಲ್ಲಿ ರಾತ್ರಿ ಪ್ರಯಾಣ ಮಾಡೋಣವೆಂದರೆ ಅಂಥಾ ವಿಲಾಸಗಳು ಇಲ್ಲಿಲ್ಲವಲ್ಲಾ! ಅದರಲ್ಲೂ ನಮ್ಮಂತಹ ವಿದೇಶೀಯರು ಅಂಗೋಲಾದಲ್ಲಿ ಸೂರ್ಯಾಸ್ತದ ನಂತರ ಪ್ರಯಾಣಿಸುವುದೆಂದರೆ ಸಾವಿನ ಜೊತೆಗೆ ಚೆಲ್ಲಾಟವಾಡಿದಂತೆ. ಇರಲಿ. ಈ ರಸ್ತೆಯಲ್ಲಿ ಪ್ರಯಾಣ ಮಾಡಬೇಕಾಗಿರುವುದು ನಮ್ಮ ಅನಿವಾರ್ಯತೆ ಎಂದೇ ಹೇಳೋಣ. ಅಂದರೆ ನನ್ನ ಪ್ರಯಾಣವೊಂದರಲ್ಲಿ ವೀಜ್ ನಿಂದ ಲುವಾಂಡಾಗೆ ತೆರಳುವಾಗ ಆರು ಬಾರಿ ಮತ್ತು ಲುವಾಂಡಾದಿಂದ ಮರಳಿ ಬರುವಾಗ ಮತ್ತೆ ಆರು ಬಾರಿ ಮಾರ್ಗಮಧ್ಯದಲ್ಲಿ ಚೆಕ್-ಪೋಸ್ಟ್ ನಲ್ಲಿ ತಪಾಸಣೆಗೊಳಪಡಬೇಕಾಗುತ್ತದೆ ಎಂದಾಯಿತು. ಹೀಗಿರುವಾಗ ಪ್ರತೀ ಚೆಕ್-ಪೋಸ್ಟ್ ನಲ್ಲಿರುವ ಪೋಲೀಸಪ್ಪನೂ ನನ್ನಲ್ಲಿ ಲಂಚಕ್ಕಾಗಿ ಕೈಚಾಚಿದರೆ ನನಗೆ ಹೇಗಾಗಬೇಡ?

ಮೊದಲ ಬಾರಿ ಅಚ್ಚರಿಯಿಂದ ಚಿಕ್ಕ ಮೊತ್ತವೊಂದನ್ನು ಪೋಲೀಸಪ್ಪನೊಬ್ಬನ ಕೈಯಲ್ಲಿಟ್ಟ ನಾನು, ಎರಡನೇ ಬಾರಿ ಗೊಂದಲದಲ್ಲಿ ಕೊಟ್ಟಿದ್ದೆ. ಆದರೆ ಮುಂದೆ ಇದೊಂದು ಚಟವಾಗಿ ಬಿಟ್ಟಾಗ ಮಾತ್ರ ನಾನು `ಗೋಲ್ ಮಾಲ್’ ಹಾಡಿನಿಂದ `ಎಡವಟ್ಟಾಯ್ತು… ತಲೆಕೆಟ್ಟೋಯ್ತು’ ಎಂಬ ಹಾಡಿಗೆ ಹೊರಳಬೇಕಾಗಿಬಂದಿತ್ತು. ಅಂಗೋಲಾದಲ್ಲಿ ಕ್ರಮೇಣ ಬೇರುಬಿಡತೊಡಗಿದ್ದ ನಾನು ಅಷ್ಟಕ್ಕೂ ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಿಧಾನವಾಗಿ ಅರ್ಥಮಾಡಿಕೊಳ್ಳತೊಡಗಿದ್ದೆ.

ಇಲ್ಲಿಯ ಸಮವಸ್ತ್ರಧಾರಿ ಪೋಲೀಸರು ಮತ್ತು ಇಮಿಗ್ರೇಷನ್ ಅಧಿಕಾರಿಗಳಿಗೆ ಇದೊಂದು ಗೀಳಾಗಿಬಿಟ್ಟಿತ್ತು. ದಿನನಿತ್ಯ ಈ ದಾರಿಯಲ್ಲಿ ಸಾಗುವ ಹತ್ತು ವಾಹನಗಳಲ್ಲಿ ಏಳರಿಂದಾದರೂ ದೇಣಿಗೆಯನ್ನು ಸ್ವೀಕರಿಸಲೇಬೇಕು ಎಂದು ಇವರುಗಳು ಮೊದಲೇ ಲೆಕ್ಕಹಾಕಿ ನಿಂತಿರುವವರಾಗಿದ್ದರು. ಅದರಲ್ಲೂ ವಿದೇಶೀಯರು ಪ್ರಯಾಣಿಸುತ್ತಿದ್ದಾರೆಂದರೆ ಅವರಿಗಂದು ಹಬ್ಬ. ಅಂತೂ ಲುವಾಂಡಾ ಪ್ರಯಾಣವೆಂದರೆ ಇದು ನನ್ನ ಜೇಬು ತೂತಾಗುವ ಕೇಸು ಎಂದು ನನಗೆ ಕ್ರಮೇಣ ಜ್ಞಾನೋದಯವಾಗತೊಡಗಿತ್ತು.

ಲಂಚವನ್ನೂ ಕೂಡ ಸೃಜನಾತ್ಮಕವಾಗಿ ತೆಗೆದುಕೊಳ್ಳಬಹುದು ಎಂಬ ಜ್ಞಾನವನ್ನು ನನಗೆ ಕರುಣಿಸಿದ ಪುಣ್ಯಾತ್ಮರಿವರು. ಲಂಚದ ಮೆನು ಕಾರ್ಡಿನಲ್ಲಿ ಬರುವ ಮೊದಲ ಐಟಮ್ ಅಂದರೆ ಹಣ. ನಂತರದ ಸ್ಥಾನಗಳು ಕ್ರಮವಾಗಿ ಮೊಬೈಲ್ ರೀಚಾರ್ಜ್ ಕಾರ್ಡುಗಳು, ನೀರಿನ ಬಾಟಲ್ ಮತ್ತು ವೈನ್/ವ್ಹಿಸ್ಕಿಗಳಿಗೆ ಸಲ್ಲುತ್ತದೆ. ಲಂಚವನ್ನು ನನ್ನಲ್ಲಿ ಶಾಲೆಯ ಹೆಡ್ ಮಾಸ್ತರರಂತೆ ಮೆತ್ತಗೆ ಗದರಿಸಿ ಕೇಳಿದವರಿದ್ದಾರೆ. “ಪಾರ್ಟಿ ಕೊಡಿಸೋ… ಪಾರ್ಟಿ ಕೊಡಿಸೋ…”, ಎಂದು ಗೆಳೆಯರು ಕೇಳುವ ಶೈಲಿಯಲ್ಲಿ ಬೆಂಬತ್ತಿ ಕೇಳಿದವರಿದ್ದಾರೆ. ಸ್ವಲ್ಪ ಕೊಟ್ಟರೆ ಚೆನ್ನಾಗಿರುತ್ತಿತ್ತು ಎಂದು ನಾಚುತ್ತಾ ಕೇಳಿದವರಿದ್ದಾರೆ. ಅಂದಹಾಗೆ ನೀವು ಕೊಟ್ಟು ಕೊಟ್ಟು ಇವರನ್ನು ಹಾಳುಮಾಡಿದಿರಿ ಇಂದು ಇಲ್ಲಿ ಯಾರೂ ಯಾರನ್ನೂ ದೂರುವಂತಿಲ್ಲ. ಏಕೆಂದರೆ ಇಂದು ಈ ಬಡಪಾಯಿಯಿಂದ ಲಂಚ ಕೀಳಲೇಬೇಕು ಎಂದು ಪೋಲೀಸಪ್ಪನೊಬ್ಬ ನಿರ್ಧಾರ ಮಾಡಿಕೊಂಡೇ ಚೌಕಾಶಿಗಿಳಿದರೆ ಸಾಕ್ಷಾತ್ ಬ್ರಹ್ಮನೇ ಇಳಿದುಬಂದರೂ ಇದನ್ನು ತಪ್ಪಿಸಲಾರ.

ಆದರೆ ಹಲವು ಬಾರಿ ತಮಾಷೆಯ ಪ್ರಸಂಗಗಳಾಗಿದ್ದೂ ಇದೆ (ನಾನು ನಷ್ಟ ಮಾಡಿಕೊಂಡಿದ್ದು ತಮಾಷೆಯೆಂದು ಪರಿಗಣಿಸಬಾರದಾಗಿ ಓದುಗರಲ್ಲಿ ನನ್ನ ಸವಿನಯ ವಿನಂತಿ). ಉದಾಹರಣೆಗೆ ನೋಡಲು ಗುಂಡುಗುಂಡಾಗಿದ್ದ ಪೋಲೀಸಪ್ಪನೊಬ್ಬ “ನಿನ್ನೆಯಿಂದ ಹೊಟ್ಟೆಗೆ ಏನೂ ತಿಂದಿಲ್ಲ. ಏನಾದರೂ ಕೊಡಿ” ಎಂದು ತನ್ನ ಡೊಳ್ಳುಹೊಟ್ಟೆಯ ಮೇಲೆ ಕೈಯಾಡಿಸುತ್ತಾ ಕೇಳಿದ್ದ. ಅಧಿಕಾರಿಯೊಬ್ಬ ಅಷ್ಟು ದೈನ್ಯದಿಂದ ಕೇಳಿದರೆ ಯಾರಾದರೂ ಏನು ತಾನೇ ಮಾಡಬಲ್ಲ? ತೀರಾ ಹಟಕ್ಕೆ ಬಿದ್ದ ಮಕ್ಕಳು ರಚ್ಚೆ ಹಿಡಿದು ಚಾಕಲೇಟು ಕೇಳುವಂತೆ ಲಂಚವನ್ನು ಕೇಳಿದ ಬೆನ್ನು ಬಿಡದ ಬೇತಾಳಗಳೂ ಇದ್ದಾರೆ.

ಎಂಥೆಂಥದ್ದೋ ಬಾಲಿಶ ನೆಪಗಳನ್ನು ಹುಡುಕಿ ಅದು ಸರಿಯಿಲ್ಲ, ಇದು ಸರಿಯಿಲ್ಲ ಎನ್ನುತ್ತಾ ತಮ್ಮ ಉದ್ದೇಶವೇನೆಂಬುದನ್ನು ಪರೋಕ್ಷವಾಗಿ ಸೂಚಿಸುತ್ತಾ ನಮ್ಮನ್ನು ಮಾರ್ಗಮಧ್ಯದಲ್ಲಿ ಅಕಾರಣವಾಗಿ ನಿಲ್ಲಿಸಿದವರಿದ್ದಾರೆ. ಈ ಕಾಟಗಳಿಂದ ತಪ್ಪಿಸಿಕೊಳ್ಳಲು ಏನೋ ಒಂದು ಕೊಟ್ಟರಾಯ್ತಪ್ಪಾ ಎಂದು ಒಲ್ಲದ ಮನಸ್ಸಿನಿಂದ ಕೊಟ್ಟರೆ `ಇದು ಕಮ್ಮಿಯಾಯಿತು’ ಎಂದು ನೇರವಾಗಿಯೇ ನಿರಾಕರಿಸಿದವರಿದ್ದಾರೆ. ಒಟ್ಟಾರೆಯಾಗಿ ವೀಜ್-ಲುವಾಂಡಾ ರಸ್ತೆಯಲ್ಲಿ ಪ್ರಯಾಣಿಸುವುದೆಂದರೆ ಇಂದಿಗೂ ಅದೊಂದು ಮುಗಿಯದ ತಲೆನೋವು.

ಒಂದೆರಡು ಬಾರಿಯೇನೋ ಸರಿ. ಆದರೆ ನನ್ನ ಜೇಬು ಅಕ್ಷಯಪಾತ್ರೆಯಲ್ಲವಲ್ಲಾ? ದಿನಗಳು ಕಳೆದಂತೆ ನಾನೂ ತಾಳ್ಮೆಯನ್ನು ಕಳೆದುಕೊಳ್ಳುತ್ತಾ ಬಂದಿದ್ದೆ. ಯಾವುದೇ ದಾಖಲೆಗಳಿಲ್ಲದ ಈ ಸಂದಾಯಕ್ಕೆ ಕೊನೆಯೇ ಇರಲಿಲ್ಲ. ಒಂದೆರಡು ಬಾರಿ ಪ್ರಯಾಣಿಸಿದರೆ ಮುಖಪರಿಚಯವಾಗಿ ಇದು ನಿಲ್ಲಬಹುದೆಂಬ ನನ್ನ ಲೆಕ್ಕಾಚಾರಗಳೂ ತಲೆಕೆಳಗಾಗಿದ್ದವು. ಏಕೆಂದರೆ ಪ್ರತೀ ಬಾರಿಯೂ ಹೊಸ ಪೋಲೀಸಪ್ಪ ನನಗೆ ಎದುರಾಗುತ್ತಿದ್ದ. ಏನು, ಎತ್ತ ಅಂತೆಲ್ಲಾ ಮತ್ತದೇ ಪ್ರಶ್ನೆಗಳನ್ನು ಕೇಳುತ್ತಿದ್ದ. “ನನಗೆ ಏನಾದರೂ ಉಡುಗೊರೆ ಕೊಡು” ಅನ್ನುತ್ತಿದ್ದ. ಬರಬರುತ್ತಾ ಇದೊಳ್ಳೆ ಕಥೆಯಾಯಿತು ಅಂದುಕೊಂಡ ನಾನು “ನನ್ನಲ್ಲಿಲ್ಲಪ್ಪಾ” ಎನ್ನುತ್ತಾ ಎದುರಿಗಿದ್ದವನ ದೈನ್ಯ ಮುಖವಾಡವನ್ನೇ ಧರಿಸತೊಡಗಿದೆ.

ಆದರೆ ಮೊದಲೇ ಹೇಳಿದಂತೆ ಇವರು ಸಂಕಲ್ಪವೊಂದನ್ನು ತೆಗೆದುಕೊಂಡರೆ ಸಲ್ಮಾನ್ ಖಾನನಂತೆ ತಮ್ಮ ಮಾತನ್ನೂ ತಾವು ಕೇಳಲಾರರು. ಹೀಗಾಗಿ ನೋಟಿನ ಬದಲಾಗಿ ನೀರಿನ ಬಾಟಲುಗಳನ್ನು ನೀಡಿ ಕೈತೊಳೆದುಕೊಳ್ಳಬೇಕಾಯಿತು. ಇನ್ನು ಈ ನೀರಿನ ಬಾಟಲ್ ಗಳು ಹೊಸದೇ ಆಗಿರಬೇಕು (ಸೀಲ್ಡ್ ಆಗಿರಬೇಕು) ಎಂಬುದು ಇವರ ಅಲಿಖಿತ ನಿಯಮಗಳಲ್ಲೊಂದು. ಮಿನೆರಲ್ ನೀರಿನ ಬಾಟಲಿಯ ಮುಚ್ಚಳವು ಕೊಂಚ ಸಡಿಲವಾಗಿದ್ದರೂ ಅದನ್ನಿವರು ಮುಟ್ಟಲಾರರು. ದಿನವೊಂದಕ್ಕೆ ಹೀಗೆ ನೂರು ನೀರಿನ ಬಾಟಲ್ ಗಳನ್ನು ಇಳಿಸಿಕೊಂಡರೂ ಚೆಕ್-ಪೋಸ್ಟಿನ ಒಂದಿಡೀ ತಂಡವು ಅಷ್ಟು ನೀರನ್ನು ಕುಡಿಯುವ ಸಾಧ್ಯತೆಗಳೇ ಇಲ್ಲ. ಹೀಗಾಗಿ ಇವುಗಳನ್ನು ಬೇರೆಡೆ ಮಾರಲು ಬಳಸುತ್ತಿದ್ದಾರೆ ಎಂಬುದು ಸುಸ್ಪಷ್ಟ.

ಇಂಥಾ ಸಂದರ್ಭಗಳಲ್ಲಿ ಎಷ್ಟು ಬೇಕೋ ಅಷ್ಟೇ ಮಾತಾಡುವುದೂ ಕೂಡ ಕೆಲವೊಮ್ಮೆ ಜಾಣನಡೆಯೆನಿಸುತ್ತದೆ. ಉತ್ತಮ ಮಾತುಗಾರನೊಬ್ಬನಿಗೆ ಯಾವಾಗ ಏನು ಮಾತನಾಡಬೇಕೆಂದು ಎಷ್ಟು ಗೊತ್ತಿರುತ್ತದೋ, ಏನು ಮಾತನಾಡಬಾರದೆಂದೂ ಸ್ಪಷ್ಟವಾಗಿ ತಿಳಿದಿರುತ್ತದೆ. ಹೀಗಾಗಿ ಹಲವು ಬಾರಿ ನನಗೆ ಒಂದಿಷ್ಟು ಪೋರ್ಚುಗೀಸ್ ಅರ್ಥವಾದರೂ ಏನೂ ಅರಿಯದವನಂತೆ ಪಿಳಿಪಿಳಿ ಕಣ್ಣುಬಿಡುತ್ತಾ ಇವರುಗಳ ಕಣ್ಣಿನಲ್ಲಿ ಪೆದ್ದನೆನಿಸಿಕೊಂಡಿದ್ದೇನೆ. ಸುಮಾರಾಗಿ ಪೋರ್ಚುಗೀಸ್ ಪದಗಳನ್ನು ಬಳಸಲು ಬರುತ್ತದಾದರೂ ಇವತ್ತೇ ಅಂಗೋಲಾಕ್ಕೆ ಕಾಲಿಟ್ಟವನಂತೆ ಮುಗ್ಧತೆಯ ಅವತಾರವನ್ನೆತ್ತಿದ್ದೇನೆ. ತಾವು ಏನು ಹೇಳುತ್ತಿದ್ದೀರೆಂದು ನನಗೆ ಅರ್ಥವೇ ಆಗುತ್ತಿಲ್ಲ ಎಂದು ಕೈಸಂಜ್ಞೆ ಮಾಡುತ್ತಾ ಅಡ್ಡಡ್ಡ ತಲೆಯಾಡಿಸಿದ್ದೇನೆ. ಏಕೆಂದರೆ ಈ ಬಗೆಯ ಸಂಪ್ರದಾಯವನ್ನು ಮುಂದುವರಿಸುವುದೆಂದರೆ ಅದು ಅಕ್ಷರಶಃ ಆನೆ ಸಾಕಿದಂತೆ. ಆನೆ ಸಾಕುವುದು ಎಲ್ಲರಿಗೂ ಆಗಿಬರುವಂಥದ್ದಲ್ಲ. ಮೇಲಾಗಿ ದುರಾಸೆಯೆಂಬುದು ತಳವಿಲ್ಲದ ಕೊಡ. ಸುರಿದಷ್ಟೂ ಅದಕ್ಕೆ ಕಮ್ಮಿಯೇ!

ಕಾನೂನಿನ ರಕ್ಷಕರೇ ಈ ಮಟ್ಟಕ್ಕೆ ಲಂಚ ತೆಗೆದುಕೊಳ್ಳುವುದಾದರೆ ಕಾನೂನು ವ್ಯವಸ್ಥೆಯ ತಳಪಾಯವು ಗಡಗಡ ಅಲ್ಲಾಡುವುದರಲ್ಲಿ ಅಚ್ಚರಿಯೇನಿಲ್ಲ. ಅಂಗೋಲಾ ಸೇರಿದಂತೆ ಆಫ್ರಿಕಾದುದ್ದಕ್ಕೂ ಯಾವ ಕಾನೂನುಗಳೂ ಕೂಡ ವ್ಯವಸ್ಥಿತವಾಗಿ ಜಾರಿಯಾಗುತ್ತಿಲ್ಲದರ ಹಿಂದಿನ ಕಾರಣಗಳೇ ಇದು. ಕೈಯಲ್ಲಿದೆಯೆಂದು ಸಿಕ್ಕಸಿಕ್ಕವರಿಗೆ ಬಿಕರಿಗಿಟ್ಟರೆ ಅದರ ಮೌಲ್ಯವೂ ಕುಗ್ಗುತ್ತಾ ಹೋಗುವುದು ಸಹಜ. ಅಂಗೋಲಾದಲ್ಲಿ ಮಿತಿಮೀರಿ ಹೋಗಿರುವ ಭ್ರಷ್ಟಾಚಾರವು ಜಾಗತಿಕ ಮಟ್ಟದಲ್ಲೂ ನಿರಂತರವಾಗಿ ಗಮನ ಸೆಳೆದಿದ್ದು ಮತ್ತು ಈ ಬಗ್ಗೆ ಬಹಿರಂಗವಾಗಿ ಟೀಕೆಗೊಳಗಾಗಿದ್ದೂ ಇದೆ. ಹೀಗಾಗಿ ವೀಜ್-ಲುವಾಂಡಾ ರಸ್ತೆ ಪುರಾಣದ ಬಗ್ಗೆ ಹೇಳುವಾಗ ಈ ಪ್ರಸಂಗಗಳನ್ನು ಉಲ್ಲೇಖಿಸದಿರುವುದು ಸಾಧ್ಯವೇ ಇಲ್ಲ.

ಕಾರಿನೊಳಗೆ ಕುಳಿತುಕೊಂಡೇ ಗಾಜಿನ ಕಿಟಕಿಯಿಂದ ಹೊರಗಿನ ದೃಶ್ಯಗಳನ್ನು ನಾನು ನೋಡುತ್ತಿದ್ದೇನೆ. ವೀಜ್ ನಲ್ಲಿರುವ ಹತ್ತು ಮನೆಗಳಲ್ಲಿ ಎಂಟು ಬಣ್ಣ-ರೂಪಗೆಟ್ಟ ಕಳಪೆ ಮನೆಗಳು ಕಂಡರೆ, ಎರಡು ಗಟ್ಟಿಮುಟ್ಟಾದ, ಸುಣ್ಣಬಣ್ಣ ಬಳಿದ ಮನೆಗಳು ನನಗೆ ಕಾಣಸಿಗುತ್ತವೆ. ತಕ್ಷಣವೇ ಈ ಮನೆಯ ಮಾಲೀಕ ಪೋಲೀಸಪ್ಪನೇ ಇರಬೇಕು ಎಂದು ನಾನು ಮನದಲ್ಲೇ ಲೆಕ್ಕಹಾಕುತ್ತೇನೆ. ಬಹಳಷ್ಟು ಬಾರಿ ನನ್ನ ತರ್ಕವು ಸತ್ಯವೂ ಆಗಿರುತ್ತದೆ.

ಕುರುಡು ಕಾಂಚಾಣ ಕುಣಿಯುತ್ತಲಿತ್ತು… ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು… ಕುರುಡು ಕಾಂಚಾಣ… ಹಾಡು ನೆನಪಾಗುತ್ತದೆ.

Leave a Reply