fbpx

ಬಾರೋ ಸಾಧನಕೇರಿಗೆ..ಮರಳಿ ನಿನ್ನೀ ಊರಿಗೆ..!

ನಿನ್ನೆ ರಾತ್ರಿ ನನ್ನ ಮತ್ತು ಮಂಗಲಿಯ ನಿದ್ರೆ ಹಾರಿಹೋಗಿತ್ತು. ಮಂಗಲಾ ಶಿರಾಲಿ ನನ್ನ ಬಾಲ್ಯದ ಒಡನಾಡಿ. ನಮ್ಮ ಬಾಲ್ಯದ ಸಾಧನಕೇರಿಯ ಸವಿನೆನಪುಗಳು ನಿದ್ದೆಗೆಡಿಸಿದ್ದವು.  ಹುಲ್ಲುಗರಿಕೆಯ ಎಸಳಿನ ತುತ್ತ ತುದಿಗಂಟಿಕೊಂಡು ಉರುಳಿ ನೆಲಸೇರಿ ಇಂಗಿಹೋಗಲೋ    ಇಲ್ಲ ಕರಗಿಹೋಗಲೋ ಎಂದು ಹೊಯ್ದಾಡುತ್ತಿರುವ ಮಂಜಿನ ಹನಿಯಂತಾಗಿತ್ತು ನಮ್ಮ ಮನಸ್ಸು.  ಕಿವಿಯಲ್ಲಿ ಯಾರೋ ಹಾಡಿದಂತೆ ಸಿಹಿಯಾದ ದನಿ ಅನುರಣಿಸುತ್ತಿತ್ತು..

“ ಎಲೆಗಳ ಮೇಲೆ ಹೂಗಳ ಒಳಗೆ ಅಮೃತದ ಬಿಂದು / ಕಂಡವು-ಅಮೃತದ ಬಿಂದು
ಯಾರಿರಿಸಿಹರುರು ಮುಗಿಲಿನ ಮೇಲಿಂದ / ಇಲ್ಲಿಗೆ ಇದ ತಂದು / ಈಗ ಇಲ್ಲಿಗೆ ಇದ ತಂದು ”

ಮುಗಿಲಿನಿಂದ ಯಾರಿಳಿಸಿದರೋ ಕಣ್ಣೆವೆಗೆ !  ನಿದ್ದೆ ಹಾರಿದ ಇರುಳಿನಲ್ಲಿ ಮುಂಬಾಯಿಯಲ್ಲಿನ ಅವಳು ಮತ್ತು ದೆಹಲಿಯಲ್ಲಿನ ನಾನು ಇನ್ನಿಲ್ಲದ ತಹತಹಿಕೆಯಲ್ಲಿ ಕಾಮಿ ಬೆಕ್ಕಿನಂಗ ಕೈ ಕೈಹಿಡಿದುಕೊಂಡು ಮತ್ತೆ ಸಾಧನಕೇರಿಯ ನಾಲಕನೇ ಕ್ರಾಸಿನ ಓಣಿಯಲ್ಲಿ ಅಲೆದಾಡುತ್ತಿದ್ದೆವು.  ಕಳೆದ ಬಾಲ್ಯದ ಹಾದಿ ಕಾಲಾಗನುಸುಳಿತಿತ್ತss ಎರಗಿ ಹಿಂದಕ್ಕುಳಿತಿತ್ತss…”

ನನ್ನ ಮಾವ ಬಾಡಿಗೆಗಿದ್ದ ಕುಸನೂರರ ಮನೆ, ಕುಮಟಾ ಅಜ್ಜಿಯ ಮನೆ, ಕುಮಟಾ ಅಜ್ಜಿಯ ಸೊಸೆ ಯೋಗಿತಾ, ಅವಳ ಕಾಟ, ಜಗಳ ತಾಳಲಾರದೇ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದ ಕುಮಟಾ ಅಜ್ಜಿಯ ಮಗ, ಆ ಕಾಲಕ್ಕೇ  ಅಂತರಜಾತೀಯ ವಿವಾಹವಾಗಿ ಸಾಧನಕೇರಿಯ ಮನೆಮನೆಯ ಕುತೂಹಲ ಮತ್ತು ಅನುಕಂಪದ ಕೇಂದ್ರವಾಗಿದ್ದ ವೀಣೂ, ನಮ್ಮ ಬಳೆಚೂರಿನಾಟ,  ಗಿಡಮಂಗನಾಟ, ಜಗಳಾಡಿ ಮುನಿಸಿಕೊಂಡು ಆಟ ಬಿಟ್ಟು ಮನೆಗೋಡುತ್ತಿದ್ದ ತುಳಸಿ, ಸೆಗಣಿಯಲ್ಲಿ ಗಣೇಶನನ್ನು ಮಾಡುತ್ತಿದ್ದ  ಕೃಷ್ಣ,  ಜಗಳಾಟದಲ್ಲಿ ’ನಾರಾಯಣ ಬುಡ್ಡಿ, ಸೈಕಲ್ ಕಡ್ಡಿ” ಎಂದು ಸಣಕಲು ನಾರಾಯಣನಿಗೆ  ಛೇಡಿಸಿ ಗೋಳಾಡಿಸುತ್ತಿದ್ದ ಮಂಗಲಿ, ಮಂಗಲಿಯ ವಿಶಾಲವಾದ ಮನೆ, ಮನೆತುಂಬಿ ತುಳುಕುತ್ತಿದ್ದ ಅವಳ ಅಕ್ಕಂದಿರು ಮತ್ತು ಅಣ್ಣ ತಮ್ಮ.  ನಮ್ಮನ್ನೆಲ್ಲ ಬೈದು ಕೂರಿಸುತ್ತಿದ್ದ ದುರ್ಗಮ್ಮಜ್ಜಿ,  ಎಲ್ಲ ರಂಪಮಾಡಿ  ಗದ್ದಲ ಹಾಕುತ್ತಿದ್ದ ನಮ್ಮನೆಲ್ಲ ಮೆಲುದನಿಯಲ್ಲಿಯೇ ಗದರಿಸಿ  ಸಾಲಾಗಿ ಕೂರಿಸಿ ಪಂಕ್ತಿಯೂಟ ಹಾಕುತ್ತಿದ್ದ ’ಆಯೀ’, ಮನೆಯಲ್ಲಿ ಹನ್ನೊಂದು ಜನ ಮಕ್ಕಳಿದ್ದರೂ ಯಾವತ್ತೂ ಗದರಿಸಿ ಬೈಯದ ಅವಳ ಅಪ್ಪಾಜಿ. ಸದಾ ನಗುನಗುತ್ತಾ, ಲಕ್ಷಣವಾಗಿ ತುರುಬುಹಾಕಿ, ಹೂಮುಡಿದಿರುತ್ತಿದ್ದ ದೊಡ್ದ ಕುಂಕುಮ ದೊಡ್ದ ಹೃದಯ, ದೊಡ್ದ ಕೈಯಿನ  ’ಆಯಿ’!

ಆ ಮನೆಯಲ್ಲಿನ ದೊಡ್ದ ರುಬ್ಬುಕಲ್ಲು, ದೊಡ್ದ ಅಡುಗೆಮನೆ, ಆಕಳ ಕೊಟ್ಟಿಗೆ, ನೆಗೆದಾಡುವ ಎಳೆಗರು, ಸಾಧನಕೇರಿಯ ವಿಶಾಲ ಹಳೆಕಾಲದ ಮನೆಗಳು ,ಹೊಸ  ಬಂಗಲೆಗಳು, ವಿಶಾಲವಾದ ತೋಟ, ಹಿತ್ತಲುಗಳು, ಎಲ್ಲೆಲ್ಲೂ ಹಸಿರು ತುಂಬಿಕೊಂಡಿದ್ದ ತೋಟದ ನಡುವೆ ಮನೆಗಳು,  ಚಿಕ್ಕು, ಪೇರಲ, ನಿಂಬೆ,  ಮಾವಿನ ಗಿಡ, ಅಬೂಲಿ ಮತ್ತು ಮಲ್ಲಿಗೆ ತರಹಾವರಿ ಪರಿಮಳ ಸೂಸುವ ಹೂವಿನ ಗಿಡಗಳು,  ಗಿಡಮರಗಳಿಂದ ಹಣಿಕಿ ಹಾಕುವ ತುಂಟ ಬಿಸಿಲು, ಮುಗಿಲ ಮಾರಿಗೆ ರಾಗರತಿಯ ನಂಜೇರಿದ  ಮೋಹಕ ಸಂಜೆ,, ಸುರಿಯುವ ಮಳೆ, ನಲಿಯುವ ಮಂಜು ಎಷ್ಟು ನೆನೆಸಿಕೊಂಡರು ಮನಸ್ಸು ಮತ್ತೆ ಮತ್ತೆ ಅಲ್ಲಿಗೇ ಓಡುತ್ತದೆ.

’ನಾಳೆ ಆಫೀಸಿಗೆ ಹೋಗಬೇಕಲ್ಲ ರೇಣೂ ಮಲಕೋ..ನಾಳೆ ಮಾತಾಡೋಣ “ ಅಂತ ಮಾತಿಗೆ ಪೂರ್ಣವಿರಾಮ  ಹಾಕಿದರೂ ಮಂಗಲಿಯೂ ಮಲಗಿರಲಿಲ್ಲ್ಲವೆನಿಸುತ್ತದೆ. ಬೆಳಿಗ್ಗೆ ನೋಡಿದಾಗ ನಾಕಾರು ಫೋಟೋ ಕಳಿಸಿದ್ದಳು. ನಾವು ಓಡಿಯಾಡಿದ ಜಾಗದ್ದು.  ತುಳಸಿಯ ಮನೆ ಹತ್ತಿರದ್ದು.  ನನಗಂತೂ ಯಾವುದರ ಗುರುತೂ ಸಿಕ್ಕಲಿಲ್ಲ.

ನಾನಾಗ ಇನ್ನೂ ಫ್ರಾಕ್ ತೊಡುತ್ತಿದ್ದ ಹುಡುಗಿ. ಐದೋ ಆರನೆಯ ಕ್ಲಾಸೋ ಇರಬೇಕು.  ಹಿಂದೆ ನನ್ನಜ್ಜಿ ತೊಡಸಿದ ಘಲಿರು ಘಲಿರೆನ್ನುವ ಪೈಜಣದ ಬಗ್ಗೆ, ತೂಗುಮಣೆಯ ಬಗ್ಗೆ ಬರೆದೆನಲ್ಲ ಆ ಹಳೇ ಮನೆಯಲ್ಲಿ ಒಮ್ಮೆ ದೊಡ್ದ ಜಗಳವಾಯ್ತು.  ಅಂಥ ಜಗಳ ನಾನವತ್ತೇ ನೋಡಿದ್ದು.  ಆ ದೃಶ್ಯ ಇವತ್ತಿಗೂ ಕಣ್ಮುಂದೆಯೇ ಇದೆ.  ಎಲ್ಲ ಕೂಡು  ಕುಟುಂಬಗಳಲ್ಲಿ ಬರುವಂಥ  ಯಾವುದೋ ಸಣ್ಣ ಕಾರಣವನ್ನೇ ನೆಪ ಮಾಡಿಕೊಂಡು ನನ್ನ ದೊಡ್ದ ಮಾವ ಜಗಳಾಡುತ್ತಿದ್ದ. ಮನೆಬಿಟ್ಟು ಹೋಗ್ತೀನಿ ಅಂತೇನೋ  ಅನ್ನುತ್ತಿದ್ದ.  ಮಾಮನ ಹೆಂಡತಿಗೆ ನಾನು ’ಅಕ್ಕ’ ಅಂತ ಕರೆಯುತ್ತಿದ್ದೆ.  ಪಾರಕ್ಕ ಮತ್ತು ಮೂವರು ಮಕ್ಕಳು ನನ್ನಂತೆಯೆ ಹೆದರಿಕೆಯಲ್ಲಿ ಗಪ್ ಚುಪ್ ನಿಂತಿದ್ದರು. ಏನೇನು ಮಾತುಗಳು ಕತ್ತಿ ಮಸೆದವೋ, ಮಾತಿನ ಮೊನೆ ಎಲ್ಲಿ ನಾಟಿತೋ, ಮುಳ್ಳು ಎಲ್ಲಿ  ಮುರಿಯಿತೋ ಕಾಣೆ !   ಸ್ವಲ್ಪ ಹೊತ್ತಿನಲ್ಲಿ ಮಾಮ ಸೈಕಲ್ಲಿನಲ್ಲಿ ಮೊದಲೇ ಕಟ್ಟಿಟ್ಟ ಗಂಟುಮೂಟೆ ಹೇರಿಕೊಂಡು ಹೆಂಡತಿ ಮಕ್ಕಳೊಡನೆ ಮನೆಬಿಟ್ಟು ಹೋಗೇಬಿಟ್ಟ.

ಅವ್ವ. ಅಜ್ಜ, ವಾಸುಮಾಮ, ಕಾಕು, ಎಲ್ಲರೂ ಮಾತೇ ಮರೆತವರಂತೆ ಸೈಕಲ್ ಕಣ್ಮರೆಯಾಗುವವರೆಗೂ ನೋಡುತ್ತಲೇ ಉಳಿದರು. ಯಾರ ಉಪದೇಶದ ಮಾತನ್ನೂ ಮಾವ ಕೇಳಲಿಲ್ಲ.  ಕತ್ತು ಹಿಸುಕಿಕೊಂಡು ಸಾಯುತ್ತೇನೆ ಅನ್ನುವಂತೆ ಕತ್ತಿನಲ್ಲಿ ತನ್ನೆರಡೂ ಕೈಯಿಟ್ಟುಕೊಂಡ ನನ್ನಜಿಯ ರೂಪು, ಹೊಸಿಲುದಾಟಿ ಹೋದ ಅವರ ನೆನಪು ಮನದಿಂದ ಇನ್ನು ಮಾಸಿಲ್ಲ. ಈಗಲೂ ಹಸಿಯಾಗಿದೆ.   ನನಗಿಂತ ದೊಡ್ಡವ ಕೃಷ್ಣ, ನನ್ನದೇ ವಯಸ್ಸಿನ ತುಳಸಾ, ನನ್ನ ತಂಗಿಯ ವಯಸ್ಸಿನ ಲೀಲಾ, ಪಾರಕ್ಕ  ಎಲ್ಲರೂ ಹೊರಟುಹೋದರು.  ನಾವೆಲ್ಲ ಕೂಡಿಯೇ ಆಡುತ್ತಿದ್ದೆವು. ಕೂಡಿಯೇ ಬೈಸಿಕೊಳ್ಳುತ್ತಿದ್ದೆವು  ದೊಡ್ಡವರಿಂದ. ಅವರೆಲ್ಲ ಹೋಗಿ ನನಗೆ ಆಡುವವರಿಲ್ಲವೆಂದು ಬಹಳ ಬೇಸರವಾಗಿತ್ತಷ್ಟೇ ಆಗ.

ಸುಮಾರು ತಿಂಗಳುಗಳ ಕಾಲ ಅವರೆತ್ತ ಹೋದರೆಂದು ಯಾರಿಗೂ ತಿಳಿದಿರಲಿಲ್ಲ. ಕೆರೆ ಭಾವಿ ಪಾಲಾದರೇನು  ಗತಿ ?’ ಎಂದು ಹಲಬುತ್ತಿದ್ದ ಅಜ್ಜಿಯನ್ನು – ಎಲ್ಲೋ ನೆಮ್ಮದಿಯನ್ನರಸಿ ಹೋಗಿರಬೇಕೆಂದು ಅಕ್ಕಪಕ್ಕದ ಬಂಧುಗಳು ಹಿರಿಯರೆಲ್ಲ ಸಮಾಧಾನಪಡಿಸಿದ್ದರು.  ನೋಡನೋಡುತ್ತಿದ್ದಂತೆ ಕೃಷ್ಣ, ತುಳಸಿ, ಲೀಲೆಯರು ಓಡಿ ಮತ್ತೆ ಅಜ್ಜೀಮನೆ , ನಮ್ಮನೆಗೆಲ್ಲ ಬರತೊಡಗಿದಾಗ ಗೊತ್ತಾಗಿದ್ದು ಅವರು ಸಾಧನಕೇರಿಯಲ್ಲಿದ್ದಾರೆಂದು. ಹೀಗೆ ನನ್ನ ಸಾಧನಕೇರಿಯ ನಂಟು , ಪ್ರತಿ ವಾರಾಂತ್ಯದ ಪಯಣ ಸುರುವಾಗಿದ್ದು.  ಆಕಾಶವಾಣಿ, ಜರ್ಮನ್ ಹಾಸ್ಪಿಟಲ್ ದಾಟಿ ಸಾಧನಕೇರಿಗೆ ನಡೆದುಕೊಂಡೇ ಹೋಗುತ್ತಿದ್ದೆವು ಎಷ್ಟೋ ಬಾರಿ.  ಸಾಧನಕೇರಿಯಂದರೆ ನಡುಮನೆ ಪಡಸಾಲೆಯಷ್ಟೇ ಹತ್ತಿರ ನನಗಾಗ.  ಓಡುತ್ತ ಹೋದರೆ ಆಯಿತು ಮಾವನ ಮನೆ !  ಬಸ್ಸೂ ಇತ್ತು. ಐದು ಹತ್ತು ಪೈಸೆಯ ಚಾರ್ಜು ನಮಗೆ ಅಷ್ಟೇ.

ಕೆರೆಯ ಅಂಚಿನ ಮೇಲೊಂದು ಪುಟ್ಟ ಶಾಲೆ. ಅದರ ಹಿಂದೆ ದೊಡ್ಡ ಕೆರೆ.  ಶಾಲೆಯ ಮುಂದೆ ಹುಲ್ಲಿನ ಹಾಸಿನ ದಿನ್ನೆ. ಹೊಂಗೆ ಮರಗಳು.  ಅದೇ ಬಸಸ್ಟ್ಯಾಂಡ. ಬಸ್ಸಿಗಾಗಿ ಕಾಯುತ್ತಾ ಹುಲ್ಲಿನಲ್ಲಿ ಉರುಳಾಡಿದ ಬಾಲ್ಯವನ್ನು ಅಲ್ಲೇ ಬಿಟ್ಟಂತಿದೆ.  ಕೃಷ್ಣ – ತುಳಸಿ, ನನ್ನ ಗೆಳತಿ  ಮಂಗಲಾ ಶಿರಾಲಿ ಎಲ್ಲ ಆ ಸಾಧನಕೇರಿಯ ಪ್ರಾಥಮಿಕ ಶಾಲೆಯಲ್ಲಿಯೇ ಓದಿದ್ದು. ಕೂತುಕೊಳ್ಳಲು  ಮಕ್ಕಳೇ ಮನೆಯಿಂದ ಗೋಣಿಚೀಲ ಒಯ್ಯಬೇಕು. ತಾವೇ ಕಸಗುಡಿಸಿ, ತಳಿಹೊಡೆದು ಓರಣಗೊಳಿಸುತ್ತಿದ್ದ ಕಾಲವದು.  ಮುಂದೆ ತುಳಸಿ ಪ್ರೆಸೆಂಟೇಷನ್ ಶಾಲೆಗೂ ಮಂಗಲಾ ಕರ್ನಾಟಕ ಹೈಸ್ಕೂಲಿಗೂ ಹೋಗತೊಡಗಿದ್ದು.  ನಾನು ಮತ್ತು ಮಂಗಲಾ ಕರ್ನಾಟಕ ಹೈಸ್ಕೂಲಿನಲ್ಲಿ ಜೊತೆಯಾದೆವು.

ಸಾಧನಕೇರಿ ಊರಿನ ಗದ್ದಲದ ಓಣಿಗಳಿಂದ ದೂರ ಹೊರವಲಯದಲ್ಲಿದ್ದು  ನಿತ್ಯ ಹರಿರ್ದ್ವರ್ಣದ ಕಾಡಿನಂತಿತ್ತು. ವಿಧ ವಿಧದ  ಗಿಡಗಂಟಿಗಳು, ಹಕ್ಕಿಪಿಕ್ಕಿಗಳು, ಹುಳಹುಪ್ಪಟೆಗಳು, ಬಣ್ಣ ಬಣ್ಣದ ಪಾತರಗಿತ್ತಿಗಳು, ಬೊರಂಗಿಗಳು, ಹಣ್ಣು ಹಂಪಲಗಳು ಯಾವುದು ಬಿಡಲಿ ಯಾವುದು ಹೇಳಲಿ ನನ್ನ ಜೀವದ ಕಥೆಯಾ ?  ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು  ಹಿಡಿದಿತ್ತ  ಮತ ಮತ ಬೆರಗಿಲೆ ಬಿಡತಿತ್ತ;” ಎನ್ನುವಂತೆ ಬೇಸಿಗೆಯಲ್ಲಿ ಸದಾಕಾಲ ತಂಗಾಳಿ ಚಾಮರ ಬೀಸುತ್ತಿರುವಂತೆ ಮೆಲ್ಲಗೇ ಸೂಸುತ್ತಿರುತ್ತಿತ್ತು. ಮತ್ತು ಮಳೆಗಾಲದಲ್ಲಿ ಮೋಡ – ಗುಡುಗು – ಮಿಂಚಿನ ಅರ್ಭಟ ಕೇಳವುದೇ ಬೇಡ.

ನನ್ನ ದೊಡ್ದ ಮಾಮ ಬಾಡಿಗೆಯಿದ್ದ ಕುಸನೂರರ ಮನೆ, ಅದರ ಎದುರು ಗುಜರಾತಿ ಕುಟುಂಬದ ನಿಲಿಮಾ ಅಕ್ಕ, ಹಿಂದಿನ ಬೇಲಿಯಲ್ಲಿ ನಿಂತು ಪಾರಕ್ಕನೊಡನೆ ಹರಟುತ್ತಿದ್ದ ಕುಮಟಾ ಅಜ್ಜಿಯ ಸೊಸೆ ಯೋಗಿತಾ, ನಾವೆಲ್ಲ ಅವಳ ಮಗುವನ್ನು ಆಡಿಸಲು ಹೋಗಿ ಅವರ ಮನೆಯಲ್ಲಿನ ದೊಡ್ಡ ತೂಗುಮಣೆಯಲ್ಲಿ ಕೂತು ಜೀಕುತ್ತಿದ್ದೆವು. ಒಂದುಕೋಣೆಯಲ್ಲಿ ಪಾಡ ಮಾವಿನಹಣ್ಣುಗಳನ್ನು ( ಹಣ್ಣಾಗಿಸಲು) ಅಡಿಗೆ ಹಾಕಿರುತ್ತಿದ್ದರು. ಹಣ್ಣ್ಣುಗಳನ್ನು ತಿಂದಿದ್ದಿದೆ. ಅಜ್ಜಿ ಯಾವತ್ತೂ ಗದರಿದ್ದಿಲ್ಲ.  ಅವರ ತೋಟದಲ್ಲಿ ಆಬೂಲಿ ಹೂಗಳೋ ಹೂಗಳು. ಕಿತ್ತು ಮಾಲೆಕಟ್ಟಿ ಮುಡಿದರೆ ನಾಕಾರು ದಿನ ಬಾಡುತ್ತಿದ್ದಿಲ್ಲ.  ಓಣಿಯ ಕೊನೆಗೆ ಎಲ್ಲಕ್ಕೂ ಮೇಲೆ ಮಂಗಲೆಯ ಮನೆ. ಮರ ಹತ್ತಿ ಗಿಡಮಂಗ್ಯಾನ ಆಟ ಆಡುತ್ತಿದ್ದುದು ತುಳಸಿ ಸಿಟ್ಟುಗೊಂಡು ಅಳುತ್ತ ಓಡುತ್ತಿದ್ದುದನ್ನು ನೆನೆದು , ಸೈಕಲ್ ಕಡ್ಡಿ ನಾರಾಯಣನನ್ನು ನೆನೆದು ನಡುರಾತ್ರಿ ನಾವಿಬ್ಬರೂ ನಗುತ್ತಿದ್ದೆವು.

ಮಂಗಲೆಯ ಅಪ್ಪಾಜಿ ನನ್ನ ಅಪ್ಪಾಜಿ ಗೆಳೆಯರು ಮತ್ತು ಎಲ್ಲಮ್ಮನ ಭಕ್ತರು. ಹೀಗಾಗಿ ನಮ್ಮ ಒಡನಾಟ  ಗೆಳೆತನಕ್ಕಿಂತ ತುಸು ಹೆಚ್ಚೇ ಇತ್ತು.  ಹೈಸ್ಕೂಲಿಗೆ ಬಂದಾಗ ಮಂಗಲೆಯ ಅಪ್ಪಾಜಿ ಸಾಧನಕೇರಿ ಮನೆ ಬಿಟ್ಟು ಧಾರವಾಡ ಕಲಾಭವನದ ಹತ್ತಿರ , ಡಿಸ್ಟ್ರಿಕ್ಟ ಜಡ್ಜ ಕೋರ್ಟ ಎದುರು ಸ್ವಂತ ಮನೆ ಕಟ್ಟಿಕೊಂಡು ಇಲ್ಲಿಗೆ ಬಂದಿದ್ದರು.  ಆಗಲೂ ನಾವು ಊಟದ ಬಿಡುವಿನಲ್ಲಿ ಹೋಗಿ ಉಂಡದ್ದಿದೆ. ಆಯಿಯ ಕೈಯಿನ ಬೆಂಡೆಕಾಯಿ ಸಾರು,  ಬಟಾಣಿಕಾಳಿನ  ಪಲ್ಯ , ಇಡ್ಲಿ ದೋಸೆ…ಬಾಯಲ್ಲಿ ನೀರೂರಿಸುತ್ತದೆ.  ಮನೆತುಂಬ ಮಕ್ಕಳಿದ್ದರೂ ’ಆಯಿ’ ಗೆ ನಾನು ಅಚ್ಚುಮೆಚ್ಚಿನವಳೇ ಆಗಿದ್ದೆ. ದುರ್ಗಮ್ಮಜ್ಜಿಗೆ ಶಂಕ್ರಣ್ಣನ ಮಗಳು ಅನ್ನೋ ಪ್ರೀತಿ ನನ್ನ ಮೇಲೆ. ನಾವೆಲ್ಲರೂ ಎಲ್ಲಮ್ಮನ ಗುಡ್ದಕ್ಕೆ ಹೋಗುತ್ತಿದ್ದ ನೆನಪೇ ಇನ್ನೊಂದು ಕಥೆಯಾಗುತ್ತದೆ.

ಸಾಧನಕೇರಿಯ ಅವರ ಮನೆಯಲ್ಲಿ  ದನ ಕರು, ಹಾಲು ಹೈನಿಗೆ ಯಾವ ಕೊರತೆಯೂ ಇದ್ದಿಲ್ಲ. ಮನೆಗೆ ಸಾಕಾಗಿ ಸುತ್ತಮುತ್ತಲಿನವರಿಗೆ ಹಾಲನ್ನು ಮಾರುತ್ತಿದ್ದರು.  ದಿನಾ ಬೇಂದ್ರೆ ಅವರ ಮನೆಗೆ ಆಕಳ ಹಾಲು ಕೊಡಲು ಹೋದಾಗ ಬೇಂದ್ರೆ ಅಜ್ಜ ಮಂಗಲಿಗೊಂದು ನ್ಯೂಟ್ರೀನ್ ಚಾಕಲೇಟ್ ಕೊಡುತ್ತಿದ್ದರಂತೆ. ಒಂದು ದಿನವೂ ತಪ್ಪುತ್ತಿರಲಿಲ್ಲ. ಶಂ.ಭಾ ಜೋಷಿಯವರ ಮನೆಯಲ್ಲಿ ಬಕುಲದ ಗಿಡವಿತ್ತಂತೆ.  ಬಕುಳದ ಹೂಗಳನ್ನು  ಆರಿಸಿಕೊಳ್ಳುತ್ತಿದ್ದುದನ್ನು,  ಬಕುಳದ ಹಣ್ಣನ್ನು ತಿಂದದ್ದನ್ನು ಮಂಗಲೆ ಆಪ್ಯಾಯವಾಗಿ  ನೆನೆಯುತ್ತಿದ್ದಳು.

ತಮ್ಮದೇ ಆದ ಗೂಡೊಂದನ್ನು ಕಟ್ಟಿಕೊಂಡು ಸ್ವತಂತ್ರವಾಗಿ ಬಾಳುವೆ ನಡೆಸುತ್ತಿದ್ದ ನಮ್ಮ ಪಾರಕ್ಕ ನಾನು ಹೋದಾಗಷ್ಟೇ ತೊಗರಿಬೇಳೆ ಹಾಕಿ ಸಾರು ಮಾಡುತ್ತಿದ್ದುದು, ಇದ್ದುದರಲ್ಲೇ ಕಮ್ಮನೆ ಅಡುಗೆ ಮಾಡುತ್ತಿದ್ದುದು ಆಮೇಲಾಮೇಲೆ ನನಗೆ ಅರಿವಾಗಿತ್ತು. ಸದಾ ಮಡಿಯಲ್ಲಿರುತ್ತಿದ್ದ ಕುಸನೂರ ಆಂಟಿ, ನಮ್ಮೊಂದಿಗೆ ಆಡುತ್ತಿದ್ದ , ತುಂಬಾ ಚೆಂದವಾಗಿ ಹಾಡುತ್ತಿದ್ದ ಅವರ ಮಕ್ಕಳು ಪಕ್ಕದ ಮನೆಯಲ್ಲಿದ್ದರೂ ನಮಗೆ ಹತ್ತಿರವೆನಿಸುತ್ತಲೇ ಇದ್ದಿಲ್ಲ.  ಸದಾಕಾಲ ಮಡಿ ಮಡಿಯೆನ್ನುವ ಅವರ ಮನೆಯೊಳಗೆ ಹೋಗುವುದಕ್ಕೂ ಹೆದರಿಕೆ,   “ಮಡಿ” ಎನ್ನುವ ಶಬ್ದ ಕೇಳಿದರೇ ಕಿರಿಕಿರಿಯಾಗುತ್ತಿತ್ತು. ಮಂಗಲಿಯ ಮನೆಯೇ ನನಗೆ ಬಹಳಷ್ಟು  ಪ್ರೀತಿಯನ್ನು , ಅಕ್ಕರೆಯನ್ನು ತುಂಬಿಕೊಡುವ ಮನೆಯಾಗಿತ್ತು….

ಸದಾ ಹಿಂದಿ ಹಾಡುಗಳನ್ನು ಗುಣುಗುಣಿಸುತ್ತ,  ನೆರಿಗೆಯನ್ನು ಎತ್ತಿ ಸಿಕ್ಕಿಸಿಕೊಂಡು ಖುಶಿಖುಶಿಯಾಗಿ ಓಡಾಡುತ್ತ ಕೆಲಸ ಮಾಡುತ್ತಿದ್ದ ಪಾರಕ್ಕನನ್ನು ಕಂಡರೆ ನನ್ನ ಮನೆ ಮಂದಿಗೆ ಅಷ್ಟಕ್ಕಷ್ಟೇ. ಆದರೂ ನನ್ನ ಅವ್ವ ಯಾವತ್ತೂ ಸಾಧನಕೇರಿಗೆ ಹೋಗುವುದನ್ನು ತಡೆಯುತ್ತಿದ್ದಿಲ್ಲ. ಮುಂದೆ ತುಳಸಿ, ಲೀಲೆಗೆ ಮತ್ತೊಬ್ಬಳು ತಂಗಿ, ತಮ್ಮನೂ ಹುಟ್ಟಿದರು ಸಾಧನಕೇರಿಯಲ್ಲಿ.  ಬಹುಶಃ ಅವರೆಲ್ಲರ ಬದುಕೂ ಅಷ್ಟೇ ನೆಮ್ಮದಿಯಿಂದ ಸಾಗುತ್ತಿರಬಹುದು. ಯಾಕಂದರೆ ಮತ್ತೆ ನಾನೆಂದೂ ಸಾಧನಕೇರಿಗೆ ಹೋಗಲಿಲ್ಲ. ಅವರೂ ಇತ್ತ ಬರಲಿಲ್ಲ. ರೆಕ್ಕೆ ಬಲಿತ ಹಕ್ಕಿಗಳೆಲ್ಲ ಪುರ್ರನೇ ಹಾರಿಹೋದವು.

ಪಾದಗಳನ್ನು ತೋಯಿಸಿ ಹೃದಯವನ್ನು ನೆನೆಸಿದವಳು ಶಾಲ್ಮಲಿಯಾದರೆ  ನುಣ್ಣನೆ ಎರಕ ಹೊಯ್ದ ಮುಂಜಾವಿನಲ್ಲಿ, ಬಾಗಿಲು ತೆರೆದು ಬೆಳಕು ಹರಿಯುವ ಹೊತ್ತಿನಲ್ಲಿ  ಬೊಗಸೆಯಲ್ಲಿ ಇನ್ನಿಲ್ಲದ ಅಕ್ಕರೆಯನ್ನಿಟ್ಟು ನನ್ನನು ಬೀಳ್ಕೊಡುತ್ತಿದ್ದುದು ನನ್ನ ಪ್ರೀತಿಯ ಸಾಧನಕೇರಿ.

ಮತ್ತೊಮ್ಮೆ ಧಾರವಾಡಕ್ಕೆ  ಹೋದರೆ ನಾನು ಮಂಗಲಿ ತಪ್ಪದೇ  ಸಾಧನಕೇರಿಗೆ ಹೋಗಲೇಬೇಕೆಂದು ತೀರ್ಮಾನಿಸಿದ್ದೇವೆ.  ಅಲ್ಲೀತನಕವೂ ಪಾತರ್ಗಿತ್ತಿ ಪಕ್ಕದಂಗ ಚಿಟಗುಡುವ ಮನಸ್ಸನ್ನು ಸಂತೈಸುತ್ತಿರಬೇಕು….

1 Response

  1. Ajit says:

    ಬರಹ ಎಷ್ಟೊಂದು ಆಪ್ತ ಮತ್ತು ಸುಂದರ.

Leave a Reply

%d bloggers like this: