fbpx

ಎಷ್ಟೆಂದು ಬಿಚ್ಚಿಡಲಿ ನನ್ನೊಳಗನ್ನು?

 

 

 

ಕಾದಿದ್ದೇನೆ

——————————–

ಶ್ರೀದೇವಿ ಕೆರೆಮನೆ

 

 

 

ಎಷ್ಟೆಂದು ಬಿಚ್ಚಿಡಲಿ ನನ್ನೊಳಗನ್ನು?
ಹೇಗೆ ನಿರೂಪಿಸಲಿ ನನ್ನ ನಂಬಿಕೆಯನ್ನು
ಒಂದೊಂದೇ ವಸ್ತ್ರ ಕಳಚಿ ಬೆತ್ತಲಾಗಿಸಿ
ದೇಹದ ಇಂಚಿಂಚನ್ನೂ ಭೂತಗನ್ನಡಿಯಲ್ಲಿ
ಉಗುರು, ಹಲ್ಲಿನ ಗುರುತಿಗಾಗಿ ತಡಕಾಡುವಾಗ
ನಾನು ಹೆಣ್ಣಾದ ನೋವು ಎದೆಯ ಗೀರನ್ನು ಆಳವಾಗಿಸಿದೆ

ಹೆಣ್ಣೆಂಬ ಆಕಾರವೇ ಜೊಲ್ಲು ಸುರಿಸುವಂತಿರುವಾಗ
ಮಧ್ಯರಾತ್ರಿಯ ಉಬ್ಬುತಗ್ಗುಗಳ ಕನವರಿಕೆಯಲ್ಲಿ
ಧಕ್ಕಿಸಿಕೊಂಡ ಸುಖ, ಸುಖವೆನಿಸದೇ
ಮರ್ಮಾಂಗಕ್ಕೆ ಸಲಾಕೆ ನುಗ್ಗಿಸಿ ಪಡುವ
ತೃಪ್ತಿಯ ಅಟ್ಟಹಾಸದ ಕೆಕೆ ಯಲ್ಲಿ
ಹೆಣ್ಣೆಂಬ ಶಬ್ಧ ನನ್ನ ಮೈಗೂ ಅಂಟಿ ತಲ್ಲಣಿಸುವಂತೆ ಮಾಡಿದೆ

ಹೊರ ಪ್ರಪಂಚದ ಮಾತು ಬೇಡ
ಮನೆಯೊಳಗಣ ಜಗತ್ತೂ ಕ್ರೌರ್‍ಯದ ಉತ್ತುಂಗದಲ್ಲಿ
ವಿಜೃಂಭಿಸಿ ಭೀಷಣವಾಗಿ ನಗುತ್ತ
ದಿನ ತುಂಬದೆ ಹುಟ್ಟಿದ ಹಸುಳೆಯ ಬಾಯೊಳಗೆ
ಅಳ್ಳೆಯ ತುಂಬ ಕಳ್ಳಿಯ ಹಾಲೆರೆದು ನೀಲಿಗಟ್ಟಿದಾಗ
ಅಯ್ಯೋ ನಾನು ಹುಟ್ಟಿದ್ದೂ ಹೆಣ್ಣಾಗಿಯೇ….

 

ಬಸಿರು ಸಂಕಟದ ಯಮಯಾತನೆಯ ಮಾತು ಬಿಡಿ
ಸೋರುವ ರಕ್ತವ ಕಾಣದಂತೆ ಪ್ಯಾಡ್‌ಗಳಲ್ಲೇ ಇಂಗಿಸಿ
ಮುಟ್ಟಿನ  ಬೆನ್ನು, ಹೊಟ್ಟೆಯ ನೋವಲ್ಲೂ ಬಗ್ಗಿ
ಮುಟ್ಟಿದರೂ ನೋಯುವ ತುಂಬಿದ ಮೊಲೆಗಳ ಬಾಯಿಗಿಟ್ಟು
ಚಪ್ಪರಿಸುವ ಪರಿ ನೋಡಲಾಗದಿದ್ದರೂ
ಹಸ್ತ, ಬಾಯಿ, ಮುಖ ಮೈಥುನಕ್ಕೆ ಸಿದ್ಧಳಾಗುವವವಳ ಕಂಡಾಗ
ಎದೆ ಝಲ್ಲೆಂದು ಬೆದರುತ್ತದೆ ನಾನು ಹೆಣ್ಣಾದ ಸಂಕಟಕ್ಕೆ

ಅಲ್ಲೆಲ್ಲೋ ಹಿಂಬಾಲಿಸಿದವನಿಗೆ ಚಪ್ಪಲಿಯೇಟು ನೀಡಿದ
ಮೈ ಮುಟ್ಟಿದಾತನಿಗೆ ಮರಣಮೃದಂಗವಾಡಿಸಿದ
ದುರಾಚಾರಕ್ಕೆರಗಿದವನ ಶಿಶ್ನ ಕತ್ತರಿಸಿದ
ಮನೆಯ ನಾಲ್ಕು ಗೋಡೆಯ ಒಳಗೂ
ಬಲವಂತವ ಧಿಕ್ಕರಿಸಿ ಕೋರ್ಟಿನ ಕಟಕಟೆ ಹತ್ತಿದ
ಸುದ್ದಿ ಗಾಳಿಯೊಂದಿಗೆ ಅಲೆಅಲೆಯಾಗಿ ತೇಲಿ ಬಂದಿದೆ
ನನ್ನೊಳಗಲ್ಲೂ ಹೆಣ್ಣೆಂಬ ಅಹಂ ನಿಧಾನವಾಗಿ
ತಲೆ ಎತ್ತುವಂತೆ ಮಾಡುವ ಗಳಿಗೆಗಾಗಿ ಕಾದಿದ್ದೇನೆ

8 Responses

 1. Sathya munnudi says:

  Katu vasthavada kanavarike kannadiyondige nammanu nave prashnege ola padisuva mukthavada savalu idannu odi artha madikondu sahajavada parivarthane adare aduve sarthakathe madivanthike bisakuva hedegarike janisali alochane achareyali sagali.

 2. Surabhilatha says:

  ಕಟು ಸತ್ಯ ಕರಾಳ ದಿನಗಳ ಪರಿಚಯ

 3. ಸೋಮು ಕುದರಿಹಾಳ says:

  ಕಾಲ ಬದಲಾದರೂ ಕಣ್ಣು ಬದಲಾಗಲಿಲ್ಲ
  ಕಳ್ಳಿ ಹಾಲನ್ನು ಕಾಮುಕನ ಕಣ್ಣಿಗೆ ಸುರಿಯಬೇಕು
  ಕಾಯಬೇಡಿ ತಡ ಮಾಡಬೇಡಿ
  ಇದಕೆ ನೀವು ಹೆಣ್ಣಾಗಿ ಉಳಿಯಬೇಕಿಲ್ಲ
  ತಲ್ಲಣಿಸದರಿ, ಸಂಕಟ ಸಾಕು ಮಾಡಿ

  ಎದೆಯೆಂದರೆ ಮೆದುವೆನ್ನುವ ಬಾಯ್ ಚಪಲಿಗನಿಗೆ
  ಹಾಲಾಹಲವ ಹಿಂಡಿ ಗಂಟಲ ಹಸಿರಾಗಿಸಿ ಉಸಿರುಗಟ್ಟಿಸಿ
  ಕಾಮನರದ ಹುರಿಗೆ ಉರಿ ಬೀಳಲಿ
  ಮೈಥುನವಿಲ್ಲದೇ ವಿಲವಿಲ ಒದ್ದಾಡಲಿ

  ಕಟಕಟೆಯಲ್ಲಿ ಕಟೆಯುತ್ತಾ ಕೂರುವ ಕಾನೂನನ್ನು ಕೈಗೆ ತೆಗೆದುಕೊಂಡರೂ ಆದೀತು
  ಅಹಂ ಗೆ ಅವಸರವಿರಲಿ
  ಕಾಯುವುದನ್ನು ದೌರ್ಬಲ್ಯ ಅಂದುಕೊಳ್ಳುವ ಗಂಡಸರೂ ಇದ್ದಾರೆ
  ಕಾಯಬೇಡಿ..

 4. ಅಕ್ಕಿಮಂಗಲ ಮಂಜುನಾಥ says:

  ಪದ್ಯ ಚೆನ್ನಾಗಿದೆ.

 5. jyoti says:

  ನಮಸ್ಕಾರ ನಿಜಕ್ಕೂ ಅರ್ಥ ವತ್ತಾಗಿದೆ ಧನ್ಯವಾದ

 6. ರಘುನಾಥ says:

  ಚಂದದ ಕವನ

 7. Vijaykumar Kalyan says:

  ಕಟ್ಟು ಸತ್ಯ ಸೂರ್ಯಾಸ್ತದ ನಂತರ ತಿಳಿಯುತ್ತದೆ

 8. ಈ ತರ ಇರಬೇಕು ಮನಸನ್ನು ಬಡಿದೆಬ್ಬಿಸೋ ಹಾಗೆ

Leave a Reply

%d bloggers like this: