fbpx

ಸಮಯವಲ್ಲದ ಸಮಯದಲ್ಲಿ ಅಸ್ತಂಗತವಾದ ರವಿ

 

 

 

 

 

ಹೇಮಾ ಸದಾನಂದ ಅಮೀನ್ 

 

 

 

 

 

ಕಲೆ, ಸಾಹಿತ್ಯವೆನ್ನುವುದು ಕೇವಲ ನಿರ್ದಿಷ್ಟ ವಲಯಕ್ಕೆ ಸೀಮಿತವಾಗಿರದೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆ ಎಂಬುದೊಂದು ಇದ್ದೇ ಇರುತ್ತದೆ. ಆ ಸೂಕ್ತ ಪ್ರತಿಭೆಯನ್ನು ಹೊರತರುವ ಜೊತೆಗೆ ಸರಿಯಾದ ಮಾರ್ಗದರ್ಶನ ನೀಡುವ ಹಿರಿಯ ಚಿಂತಕರಾದ ರವಿ ರಾ ಅಂಚನ್ ಅವರ ಅಕಾಲ ಮೃತ್ಯುವಿನಿಂದ ಮುಂಬಯಿ ಕನ್ನಡ ಸಾಹಿತ್ಯ ಲೋಕ ಸ್ತಬ್ದವಾಗಿದೆ.

ಇದು ಅವರ ಕೊನೆಯ ಶುಭ ಸಂದೇಶ.

ಪಾತರಗಿತ್ತಿ ಚಂದ

ಬಹುಭಾಷೆ ಅಂದ

ಬಹುಸಂಸ್ಕೃತಿ….

ಜೀವಾನಂದ….

ಸಾಹಿತ್ಯಲೋಕದಲ್ಲಿ ನನ್ನ ಗುರುವಾಗಿ ನನ್ನನ್ನು ಒಬ್ಬ ಬರಹಗಾರ್ತಿಯನ್ನಾಗಿ ಮಾಡಲು ಶ್ರಮಿಸಿದವರಲ್ಲಿ ರವಿ ಅಣ್ಣ ಪ್ರಮುಖರು. ಆರು ವರ್ಷದ ಮುಂಚೆ ತನ್ನ ಬಾಳ ಸಂಗಾತಿ ಶೈಲಜಾ ಆರ್ ಅಂಚನ್ ಅವರನ್ನು ಅಗಲಿದ ಬಳಿಕ ಬರಹವನ್ನು ಸಂಗಾತಿಯೆಂದು ಭಾವಿಸಿದರು.

ಅಕ್ಷರ ಮತ್ತು ಐಸಿರಿ ಹೆಸರಿಗೆ ತಕ್ಕಂತೆ ತಂದೆ-ತಾಯಿಯ ಸಂಸ್ಕಾರವನ್ನು ಪಡೆದು ಮಕ್ಕಳು ಇಂದು ಅವರಿಗಾದ ಆಘಾತಕ್ಕೆ ಪರಿಹಾರವಿಲ್ಲ. ನಿಜವೆಂದರೆ ರವಿಯಣ್ಣನ ನಿಧನ ನಂಬಲಾರದು. ಅವರು ನಮ್ಮ ಜೊತೆಯಲ್ಲೆ ಇದ್ದಾರೆ ಎಂದೆನಿಸುತ್ತದೆ. ಮಕ್ಕಳಿಗೆ ತಂದೆ ತಾಯಿ ನೆನಪುಗಳೆ ಬದುಕಿಗೆ ಆಧಾರವಾದರೆ ಅವರಿಂದ ಸ್ಫೂರ್ತಿ ಪಡೆದ ನಮಗೆಲ್ಲರಿಗೆ ಅವರಿಚ್ಛೆಯಂತೆ ಸಾಹಿತ್ಯ ಸೇವೆ ಮಾಡುತ್ತಿರುವುದೆ ಜೀವನದ ಉದ್ದೇಶವಾಗಬೇಕು.

ಕೆಲವು ತಿಂಗಳ ಮುಂಚೆ ಅಂಚನ್ ಅವರ ಜ್ಯೋತಿ ಬಾ, ಬೆಳಕು – ಬೆರಗು

ಲೋಕಾರ್ಪಣೆಯಾಗುವ ಸಮಯದಲ್ಲಿ ನಡೆದ ಒಂದು ಸಂದರ್ಶನ.

ಮಾನವ ಪಂಥದ ಚಿಂತಕ ರವಿ ರಾ ಅಂಚನ್ “ಇವರು ಮಾತ್ರವೇ ನಮ್ಮವರು ಇವರು ಪರಕೀಯರೆಂಬುವುದು ಕೀಳು ಜನರ ಲಕ್ಷಣ, ಎಲ್ಲರೂ ಒಂದೇ” ಎಂಬ ಉದಾತ್ತ ಮನೋಭಾವವನ್ನು ಹೊಂದಿದವರಿದ್ದರೆ ಈ ಜಗತ್ತೇ ಒಂದು ಸುಂದರವಾದ ಕುಟುಂಬವಂತೆ” ಎನ್ನುವುದು ಒಂದು ಸುಭಾಷಿತ. ಇದಕ್ಕೆ ಪೂರಕವಾಗಿ ಬಾಳಿ ಬದುಕುತ್ತಿರುವ ವ್ಯಕ್ತಿಗಳು ನಮ್ಮೊಡನಿದ್ದಾರೆ. ಅಂತಹ ಕೆಲವೇ ವ್ಯಕ್ತಿಗಳಲ್ಲಿ ಮುಂಬಯಿಯ ಹೆಸರಾಂತ ಸಾಹಿತಿ ರವಿ ರಾ ಅಂಚನ್ ಅವರೂ ಒಬ್ಬರು. ನೇರ ನಡೆ ನುಡಿಗೆ ಹೆಸರಾಗಿರುವಂತಹ ಅವರದ್ದು ಬಹುಮುಖ ಪ್ರತಿಭೆ.

ರವಿ ರಾ ಅಂಚನ್ ಅವರ ಜೀವನ ಪ್ರೀತಿಯನ್ನು ವರ್ಣಿಸುವುದು ಅಸದಳ. ನಿರ್ಮಮ, ನಿರೀಹ, ನಿರಾಳ ವ್ಯಕ್ತಿತ್ವ ಅವರದ್ದು. ಒಂದು ವಿಷಯವನ್ನು ಗ್ರಹಿಸುವಾಗ ಅವರ ತನ್ಮಯತೆ ವಿಸ್ಮಯತೆಯನ್ನು ಮೂಡಿಸುತ್ತದೆ. ಹಿರಿ-ಕಿರಿಯರೆಲ್ಲರಲ್ಲಿ ಸದ್ಭಾವನೆಯ ಬೆಹಸುಗೆಯನ್ನು ಬೆಸೆಯುತ್ತಾ ಬಂದಿರುವ ರವಿ ರಾ ಅಂಚನ್ ಒರ್ವ ಪ್ರಬುದ್ಧ ಸಂಘಟಿಕರಾಗಿ, ಜನಪರ ಚಿಂತನೆಯ ಪತ್ರಕರ್ತರಾಗಿ, ಯಕ್ಷಗಾನ, ನಾಟಕ ಚಲನಚಿತ್ರ ಕಲಾವಿದನಾಗಿ, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಸಜ್ಜನಶೀಲ ಲೇಖಕನಾಗಿ ಗುರುತಿಸಲ್ಪಟ್ಟವರು.

ರವಿ ರಾ ಅಂಚನ್ ಅವರು ಮುಂಬಯಿಯಲ್ಲಿಯೇ ಹುಟ್ಟಿ ಮುಂಬಯಿ ಮಹಾನಗರ ಪಾಲಿಕೆಯ ಶಾಲೆಯಲ್ಲಿ ಕಲಿತು, ಮುಂಬಯಿ ವಿಶ್ವವಿದ್ಯಾಲಯದಿಂದ ಬಿ.ಕಾಂ ಮತ್ತು ಎಂ.ಎ ಪದವಿ ಪಡೆದವರು. ರವಿ ರಾ ಅಂಚನ್ ಅವರು ಗೋರೆಗಾಂವ್ ಸರಸ್ವತಿ ರಾತ್ರಿ ಶಾಲೆಯಲ್ಲಿ ಶಿಕ್ಷಕರಾಗಿ, ಸುಪ್ರಸಿದ್ದ ಸಿದ್ದಾರ್ಥ ಕಾಲೇಜಿನಲ್ಲಿ ಕೆಲಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವರು. ಮುಂಬಯಿಯಲ್ಲಿ ರಿಲಯನ್ಸ್ ಇಂಡಿಯಾ ಕಂಪನಿಯಲ್ಲಿ ಉನ್ನತ ಸ್ಥಾನದಲ್ಲಿ ವೃತ್ತಿಯಲ್ಲಿದ್ದಾರೆ. ಬರವಣಿಗೆ ಅವರ ಪ್ರವೃತ್ತಿ. ಸೃಜನಶೀಲ ಹಾಗೂ ಸೃಜನೇತರ ಬರವಣಿಗೆಯಲ್ಲಿ ಅವರದು ಎತ್ತಿದ ಕೈ. ಅಷ್ಟೇ ಅಲ್ಲ ಅಂಚನ್ ಅವರು ಒಳ್ಳೆಯ ವಿಮರ್ಶಕರು ಹೌದು. ನಮ್ಮ ನಡುವಿ ವಿರಳ ಚಿಂತಕರಲ್ಲಿ ಅವರೂ ಒಬ್ಬರು. ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯದ ಕೈಂಕರ್ಯ ತನ್ನನ್ನು ತೊಡಗಿಸಿದ್ದಾರೆ.

ಇತ್ತೀಚೆಗೆ ಅವರನ್ನು ಭೇಟಿಯಾದಾಗ ಮಾತು ಮಾತಲ್ಲೇ ಅವರ ಐದು ಕೃತಿಗಳು ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ ಎಂದು ತಿಳಿಯಿತು. ಅವು ಇಂತಿದೆ.

ಪ್ರಜಾಪ್ರಭುತ್ವ: ಪೂಜೆಯೋ?- ಪ್ರಜ್ಞೆಯೋ?

ಬಹುರೂಪಿ ಭಾರತ,

ಮತಿಯಾ ಹುಚ್ಚು – ಕೊಲೆಯ ಕಿಚ್ಚು,

ವಿವೇಕದ ನುಡಿ – ಸಮತೆಯ ಮುಡಿ.

ಜ್ಯೋತಿಬಾ ಬೆಳಕು – ಬೆರಗು

ಇವೆಲ್ಲದರ ಪ್ರಕಾಶಕರು ಸ್ವರ ಹಾಗೂ ಸ್ವಪ್ನ ಪಬ್ಲಿಕೇಷನ್.

ಮುಂಬಯಿ ಕನ್ನಡಿಗರಾದ ರವಿ ರಾ ಅಂಚನ್ ಅವರ ಸಾಹಿತ್ಯ ಪ್ರೀತಿ, ಅಭಿಮಾನ ಪಡುವಂತಹದ್ದು. ಸಾಹಿತ್ಯ ಬಗೆಗಿನ ನನ್ನ ಕೆಲವು ಪ್ರಶ್ನೆಗಳು ಮೂಡಿದಾಗ ಅವರ ಉತ್ತರಗಳು ಈ ಕೆಳಗಿನಂತಿವೆ.

ಹೇಮಾ ಸದಾನಂದ ಅಮೀನ್  :- ನಿಮ್ಮ ಬಾಲ್ಯದ ಒಲವು – ನಿಲವುಗಳ ಬಗ್ಗೆ ತಿಳಿಸುವಿರಾ?

ರವಿ ರಾ ಅಂಚನ್ : ನಾನು ಬಹುಬಾಷಿಗರ, ಬಹುಧರ್ಮೀಯರ ವಸತಿ ಕ್ಷೇತ್ರವಾದ ಗೋರೆಗಾಂವ್ ಮಲಾಡಿನ ಸರಹದ್ದಿನಲ್ಲಿದ್ದ ಅಂದಿನ ನಿಸರ್ಗ ರಮಣೀಯ ಪರಿಸರದ ಇರಾಣಿ ಚಾಲ್ ದಲ್ಲಿ ಬಾಲ್ಯವನ್ನು ಕಳೆದೆ. ಬಾಲ್ಯದಲ್ಲಿ ಕ್ರಿಕೆಟ್, ವಾಲಿಬಾಲ್, ಯಕ್ಷಗಾನ, ಶನಿಗ್ರಂಥ ಪಾರಾಯಣ, ಬಾಷಣ ಇತ್ಯಾದಿಗಳಲ್ಲಿ ಅಭಿರುಚಿಯಿದ್ದರಿಂದ ಇದರಲ್ಲಿ ಆದಷ್ಟೂ ಸಾಧನೆ ಮಾಡಿದ್ದೇನೆ.

ಯಕ್ಷಗಾನ ನಾಟ್ಯಾಚಾರ್ಯ, ಕಂಬಳೆ ನಾರಾಯಣರಿಂದ ಗೆಜ್ಜೆ ಪಡೆದು ಯಕ್ಷಗಾನ ರಂಗಪ್ರವೇಶ ಮಾಡಿಕೊಂಡೆ ಕುರುಕ್ಷೇತ್ರದ ಬೀಷ್ಮ, ಬ್ರಹ್ಮ ಕಪಾಲದ ಈಶ್ವರ, ಅತಿಕಾಯ ಕಾಳಗದ ಅತಿಕಾಯ ಪಾತ್ರವಹಿಸುವುದೆಂದರೆ ಮೈಯಲ್ಲಿ ರೋಮಾಂಚನಗೊಳ್ಳುತಿತ್ತು. ಅಷ್ಟೇ ಅಲ್ಲ ಯೌವನಾವಸ್ಥೆಯಲ್ಲಿ ಜೆ.ಬಿ.ಪಾರ್ಸಿಕರ್ ಅಂಡ್ ಸನ್ಸ್ ಕಂಪನಿಯಲ್ಲಿ ನೌಕರಿ ಮಾಡಲಾರಂಬಿಸಿದೆ. ಅಲ್ಲಿ ನನಗೆ ಸುರೇಶ ಪ್ರಭು (ಪ್ರಸ್ತುತ ರೇಲ್ವೆ ಮಂತ್ರಿ) ಪರಿಚಯವಾಯಿತು. ಹಾಗೆ ಸಿನಿಮಾ ಹಾಗೂ ನಾಟಕಗಳನ್ನು ನೋಡುವ ಹವ್ಯಾಸ ಬೆಳೆಯಿತು.

ಹೇಮಾ : ಭಾಷಣದಲ್ಲಿ ಆಸಕ್ತಿ ಬಂದಿದ್ದು ಹೇಗೆ?

ಅಂಚನ್ : ನನ್ನ ತಂದೆ ಒಳ್ಳೆ ಭಾಷಣಕಾರರು. ನಾನೊಬ್ಬ ಒಳ್ಳೆಯ ಕೇಳುಗ. ಭಾಷಣದ ವೇಳೆ ವೇದಿಕೆ ಸಮಯ, ನಿಲ್ಲುವ ಭಂಗಿ, ವಿಷಯ ಪ್ರಜ್ಞೆಯ ಬಗ್ಗೆ ಗಂಭಿರವಾಗಿದ್ದು, ನಮ್ಮ ವಿಚಾರ ಶ್ರೋತೃರಿಗೆ ಮಂಡಿಸಬೇಕೆಂದು ಕಲಿತುಕೊಂಡೆ. ವಿದ್ವಾನ್ ರಾಮಚಂದ್ರ ಉಚ್ಚಿಲ, ಕೆ.ಎಸ್.ನಿಡಂಬೂರ್, ಎಸ್.ಎಸ್,.ವರ್ಡ್ಡಸೆ, ಎಚ್.ಕೆ.ಸುಂದರ ಇವರೆಲ್ಲರ ಪ್ರೇರಣೆ ನನ್ನಲ್ಲಿ ಒಂದು ವಿಷಯವನ್ನು ಮನನ ಮಾಡಿಕೊಂಡು ತನ್ಮಯತೆತಿಂದ ಗ್ರಹಿಸುವಂತೆ ಮಾಡುತಿತ್ತು.

ಹೇಮಾ : ನಿಮ್ಮ ಪ್ರಕಾರ ಒಟ್ಟು ಉತ್ತಮ ವಾಗ್ಮಿಯ ಲಕ್ಷಣಗಳು?

ಅಂಚನ್ :- ಉತ್ತಮ ವಾಗ್ಮಿ ಮೊದಲು ಉತ್ತಮ ಕೇಳುಗ ಆಗಬೇಕು. ಅವನಾಡುವ ಮಾತು ಶೋತೃಗಳ ಮನಸನ್ನು ಗೆಲ್ಲುವಂತಹ ಕುಶಲತೆಯಿರಬೇಕು. ಐತಿಹಾಸಿಕ ಅಥವಾ ಪೌರಾಣಿಕ ಮಾತನ್ನು ಹೇಳುವಾಗಲೂ ಸಮಕಾಲೀನ ಸಂಧರ್ಭದಲ್ಲಿ ಅದರ ತೌಲನೀಯತೆ ಮತ್ತು ಪ್ರಸ್ತುತತೆಯ ಬಗ್ಗೆ ವಿವೇಕದಿಂದ ಮಾತನಾಡಬೇಕು. ತಮ್ಮ ಮಾತಿನಲ್ಲಿ ನಿಖರತೆ ಮತ್ತು ತಾರ್ಕಿಯತೆಯನ್ನು ಕಾಪಿಟ್ಟುಕೊಂಡೆ ಮಾತನಾಡಬೇಕು. ಸಮಯದ ಪ್ರಜ್ಞೆ ಮತ್ತು ವಸ್ತು ಸ್ಥಿತಿಯ ಬಗ್ಗೆ ಗಮನವಿರಬೇಕು.

ಹೇಮಾ : ಬರವಣಿಗೆಯಲ್ಲಿ ನಿಮಗೆ ಆಸಕ್ತಿ ಮೂಡಿದ್ದು ಹೇಗೆ?

ಅಂಚನ್ :-ಭಾಷಣಗಾರನಾಗಿ ಬೆಳೆಯುತ್ತಿರುವಂತೆಯೇ ಸಂಘಟನೆಗಳಲ್ಲಿ ಆಸಕ್ತಿ ವಹಿಸಿದೆ. ಇವೆರಡರ ಜೊತೆಗೆ ಸಾಹಿತ್ಯದಲ್ಲಿ ನನಗೆ ಅಭಿರುಚಿ ಮೂಡಿತ್ತು. ಮೊದಲು ಕವನಗಳಲ್ಲಿ, ವೈಚಾರಿಕ ಲೇಖನಗಳಲ್ಲಿ ಇದೀಗ ವಿಮರ್ಶೆ ಲೇಖನಗಳನ್ನು ಹೆಚ್ಚು ಬರೆಯುತ್ತಿದ್ದೇನೆ. ವೈವಿಧ್ಯಮಯ ವಿಷಯದ ಬಗ್ಗೆ ನನಗೆ ಬರೆಯಲು ಇಷ್ಟ.

ಹೇಮಾ : ಸಮಾಜದ ಆಗು – ಹೋಗುಗಳಲ್ಲಿ ಬರಹದ ಪಾತ್ರವೇನು ?

ಅಂಚನ್ :- ಎಲ್ಲಾ ಅಭಿವ್ಯಕ್ತಿಯ ಮಾಧ್ಯಮದಲ್ಲಿ ಸಮಾಜದ ಆಗು-ಹೋಗುಗಳಲ್ಲಿ ತನ್ನದೇ ಆದ ಗುರುತನ್ನು ನೀಡುತ್ತದೆ. ಬರವಣಿಗೆ ಲೋಕವನ್ನು ತಿದ್ದುವ ಕೆಲಸವನ್ನುಂಟುಮಾಡುತ್ತದೆ. ಇನ್ನೊಂದು ಅರ್ಥದಲ್ಲಿ ಅದು ಯಥಾಸ್ಥಿತಿಯನ್ನು ಓಲೈಸುವಂತಹ ಕೆಲಸವನ್ನು ಸಹ ಮಾಡುತ್ತಿದೆ. ಮಗದೊಂದು ರೀತಿಯಲ್ಲಿ ಬರವಣಿಗೆ ಸತ್ಯದ ಶೋಧದ ತಾಕಲಾಟ. ಬಹುಶಃ ಇದನ್ನೆ ಇನ್ನೊಂದರ್ಥದಲ್ಲಿ ‘ಜೀವನ ಸಾಹಿತ್ಯ’ವೆನ್ನಬಹುದು.

ಹೇಮಾ : ಬರವಣಿಗೆಯನ್ನು ರೂಡಿಸಿಕೊಳ್ಳುವವರು ಯಾವ ಯಾವ ರೀತಿಯ ಜಾಗ್ರತೆಯನ್ನು ವಹಿಸಿಕೊಳ್ಳಬೇಕು ?

ಅಂಚನ್ : ಒಂದು ವಿಷಯದ ಬಗ್ಗೆ ಬರೆಯುವಾಗ ಶಿಷ್ಟ ಸಾಹಿತ್ಯ ಏನು ಹೇಳುವುದು? ಜನಪದ ಸಾಹಿತ್ಯ ಏನನ್ನುವುದು ಇವರಡರಲ್ಲಿರುವ ವ್ಯತ್ಯಾಸಗಳೇನು? ಯಾವುದರಲ್ಲಿ ಜನಸ್ಪಂದನ ಸಿಗುತ್ತದೆ. ಯಾವುದರಲ್ಲಿ ಅದರ ಪ್ರಮಾಣ ಕಡಿಮೆಯಾಗಿರುತ್ತದೆ. ಯಾವುದು ಭಕ್ತಿಯಿಂದ ಹುಟ್ಟಿದ್ದು, ಯಾವುದು ಪ್ರೇಮ-ಕಾಮದಿಂದ ಹುಟ್ಟಿದ ಸಾಹಿತ್ಯ, ಯಾವುದು ಲೋಕ-ಶಿಕ್ಷಣದ ದೃಷ್ಠಿಯಿಂದ ಹುಟ್ಟಿದ ಸಾಹಿತ್ಯ? ಇದನ್ನೆಲ್ಲಾ ಆಲೋಚನೆ ಮಾಡಬೇಕಾಗುತ್ತದೆ. ಸಮ-ಸಮಾಜದ ನಿರ್ಮಾಣದಲ್ಲಿ ಇಂತಹ ಸಾಹಿತ್ಯ ಹೆಚ್ಚು ಮಹತ್ವದಾಗುತ್ತದೆ.

ಹೇಮಾ :- ಸಾಹಿತಿಗಳು ಕೆಲವರು ಎಡಪಂಥೀಯರು, ಕೆಲವರು ಬಲಪಂಥೀಯರೆಂದಿರುತ್ತಾರೆ. ಇದರಲ್ಲಿ ನೀವು ಯಾವ ಪಂಥದವರು?

ಅಂಚನ್ :- ನಾನು ಎಡಪಂಥೀಯ ಮತ್ತು ಬಲಪಂಥೀಯವೆಂಬ ಬಿನ್ನತೆಯನ್ನೇ ಒಪ್ಪುವುದಿಲ್ಲ. ಇಲ್ಲಿ ಬಲಗೈ ಶ್ರೇಷ್ಠ, ಎಡಗೈ ಕನಿಷ್ಠವೆಂಬ ಸಿದ್ದಾಂತವೇ ಮೂಲತಃ ಮನುಷ್ಯ ವಿರೋಧಿ ಸಿದ್ದಾಂತ. ಆದ್ದರಿಂದ ನಾವು ಸವ್ಯಸಾಚಿಯಾಗಲು ಪ್ರಯತ್ನಪಡಬೇಕೆ ಹೊರತು ಈ ಭ್ರಮೆಗಳಲ್ಲಿ ನಮ್ಮ ಬರಹಗಳನ್ನು ಸಿಲುಕಿಸಿಕೊಳ್ಳದೆ ಮಾನವ ಪಂಥವನ್ನು ಬೆಳೆಸಿಕೊಳ್ಳಬೇಕೆಂಬುವುದೇ ನನ್ನ ಧೋರಣೆ.

ಹೇಮಾ :- ಮಹಿಳಾ ಬರಹ ಅಥವಾ ಸ್ತ್ರೀ ಸಂವೇದನಾ ಬರಹಗಳ ಬಗ್ಗೆ ನಿಮ್ಮ ಅನಿಸಿಕೆಗಳೇನು?

ಅಂಚನ್ :- ನಾನು ಲಿಂಗ-ಸಮಾನತೆಯನ್ನು ತೀವ್ರವಾಗಿ ಒಪ್ಪಿಕೊಂಡವನು. ಆದ್ದರಿಂದ ಿಲ್ಲಿ ಸ್ತ್ರೀಪರ – ಪುರುಷಪರ ಎಂಬ ಪ್ರಶ್ನೆ ಸಲ್ಲದು. ಅದಲ್ಲದೇ ಎಲ್ಲಿ ಸಮಾನತೆ ಇಲ್ಲವೋ ಅಲ್ಲಿ ಶೋಷಣೆ ಇರುತ್ತದೆ. ಎಲ್ಲಿ ಮಹಿಳೆಯರಿಗೆ ಸ್ವಾತಂತ್ರವಿಲ್ಲವೋ ಅಲ್ಲಿ ಪುರುಷರ ಅಭಿವ್ಯಕ್ತಿಗಳೆಲ್ಲವೂ ಹೆಚ್ಚಿನ ಪ್ರಮಾಣ ಶೋಷಣೆಗೆ ಮನೆಮಾಡಿಕೊಡುತ್ತದೆ. ಅದಕ್ಕೆ ಅಪವಾದವಾಗಿರಬಹುದು. ಆದರೆ ಸಮಾನತೆ ಎನ್ನುವರು ನಮ್ಮ ಮನೆಯ ಅಡುಗೆ ಕೋಣೆಯಿಂದಲೇ ಪ್ರಾರಂಭವಾಗಬೇಕು. ಅದು ಶಾಲೆ – ಕಾಲೇಜು, ವಿಶ್ವವಿದ್ಯಾಲಯಗಳನ್ನು ಆವರಿಸುತ್ತಾ ಇಡಿ ಸಮಾಜಮುಖಿಯಾಗಬೇಕು. ನನ್ನ ರೀತಿಯಲ್ಲಿ ಸಮಾಜಮುಖಿಯಾಗದಿರುವುದು ಅದು ಒಂದು ಲಿಂಗದವರು ಇನ್ನೊಂದು ಲಿಂಗದವರನ್ನು ಶೋಷಿಸುವಂತಹ ಕ್ರಿಯೆಯನ್ನು ನಿರಂತರವಾಗಿ ಮಾಡುವಂತಹ ಪರವಾನಿಗೆ ಅಷ್ಟೇ. ಈ ಪರವಾನಿಗೆ ದೈವದತ್ತವಾಗಿದೆ ಎಂಬುದೇ ಮನುಷ್ಯ ವಿರೋಧಿ ಸಿದ್ದಾಂತಗಳು.

ಹೇಮಾ :- ಒಂದು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಅವಶ್ಯಕವಿರುವ ಸಂಗತಿಗಳಾವುವು?

ಅಂಚನ್ :- ಶ್ರಮದ ಬಗ್ಗೆ ಶ್ರದ್ದೆವಿರಬೇಕು. ಬರವಣಿಗೆ ಶ್ರಮ ಸಿದ್ದಾಂತದ ಮೇಲೆ ನಿಲ್ಲಬೇಕು. ಶ್ರಮವನ್ನು ಯಾವತ್ತು ಬುದ್ದಿ ಅತಿಕ್ರಮಿಸಬಾರದು.

ಹೇಮಾ :- ನಿಮ್ಮ ನೆಚ್ಚಿನ ಸಾಹಿತಿ ಯಾರು ?

ಅಂಚನ್ :- ಮನುಜಪರ ಬರೆಯುವ ಲೇಖಕರನ್ನು ನಾನು ಇಷ್ಟಪಡುತ್ತೇನೆ. ಕುವೆಂಪು, ಶಿವರಾಮ ಕಾರಂತ, ದೇವನೂರು ಮಹಾದೇವಪ್ಪ, ಡಾ|| ಬರಗೂರು ರಾಮಚಂದ್ರಪ್ಪ, ಸಿದ್ದರಾಮಯ್ಯ, ವಿಶುಕುಮಾರ್, ವಡ್ಡರ್ಸೆ, ದಿನೇಶ್ ಅಮೀನ್ ಮಟ್ಟು, ಡಾ|| ಮಲ್ಲಿಕಾ ಘಂಟಿ, ಶಶಿಕಲಾ ವಸ್ತ್ರದಾ ಇನ್ನಿತರರು.

ಹೇಮಾ :- ಹೊರನಾಡು ಕನ್ನಡ ಬರಹಗಾರರಲ್ಲಿ ಮುಂಬಯಿ ಯುವ ಬರಹಗಾರರು ಹೆಚ್ಚಾಗಿ ಪ್ರಸಿದ್ದಿ ಪಡೆಯಲು ಕಾರಣವೇನು ?

ಅಂಚನ್ :- ಮುಂಬಯಿ ಕೆಲವು ಸಿದ್ದ – ಪ್ರಸಿದ್ದ ಸಾಹಿತಿಗಳು ಹೊರನಾಡಿನಲ್ಲೂ ಗುರುತಿಸಿದ ದಾಖಲೆಗಳಿವೆ. ಇಲ್ಲಿಯೂ ಬಹಳಷ್ಟು ಪ್ರಬುದ್ದ ಬರಹಗಾರರಿದ್ದಾರೆ. ಆದರೆ ಕಾರಣಾಂತರವಾಗಿ ಅವರು ತಮ್ಮ ಬರಹಗಳನ್ನು ಅರ್ಧದಲ್ಲಿಯೇ ನಿಲ್ಲಿಸಿ ಬಿಡುತ್ತಾರೆ ಅಥವಾ ನಿಲ್ಲಿಸಬೇಕಾಗುತ್ತದೆ. ನಮ್ಮಲ್ಲಿ ಪ್ರಸಿದ್ದಿ ಎಂಬುವುದು ಸಿದ್ದ ಮಾದರಿಗಳಾಗಿವೆ. ಮಾನವ ಪರ ಸಂಚಲನೆಗಳ ಇಷ್ಟರವರೆಗೆ ಹುಟ್ಟಿಲ್ಲ. ಯುವ ಬರಹಗಾರರಿಗೆ ಪ್ರೋತ್ಸಾಹದ ಕೆಲಸ ಇನ್ನು ಹೆಚ್ಚಾಗಿ ಆಗಬೇಕು. ಇಲ್ಲಿಯ ಲೇಖಕರ ಒಳ್ಳೆಯ ಕೃತಿಗಳನ್ನು ಅಧ್ಯಯನದ ದೃಷ್ಠಿಯಿಂದ ಕೈಗೆತ್ತಿಕೊಳ್ಳಬೇಕು. ವರ್ಗ – ಲಿಂಗ, ಜಾತಿಯ ತಾರತಮ್ಯ ಕೆಲಸ ಮಾಡಬಾರದು. ಇಲ್ಲಿಯ ಪರಿಸರದಲ್ಲಿಯೇ ಬರೆದ ಜಯಂತ ಕಾಯ್ಕಿಣಿ, ಯಶವಂತ ಚಿತ್ತಾಲ, ಡಾ|| ಸುನೀತಾ ಶೇಟ್ಟಿಯವರು ಪ್ರಚುರ ಪಡೆದಿದ್ದಾರೆ. ಈ ನಿಟ್ಟಿನಲ್ಲಿಯೇ ಪತ್ರಿಕೆಗಳು ಆದ್ಯ ಕೆಲಸ ಮಾಡುತ್ತದೆ. ಮುಖ್ಯವಾಗಿ ಕರ್ನಾಟಕದಲ್ಲಿ ಎಂದು ಹೇಳಲು ಅತೀ ಆನಂದವಾಗುತ್ತದೆ.

ಹೇಮಾ :- ನಾರಾಯಣ ಗುರುಗಳ ಬಗ್ಗೆ ನಿಮ್ಮ ನಿಲುವೇನು ?

ಅಂಚನ್ :- ಯಾವುದೇ ಒಂದು ಮಾತು, ಕಾಲ ಮತ್ತು ಸಂಧರ್ಭವನ್ನು ಹೊಂದಿಕೊಳ್ಳತ್ತದೆ ವಿನಹಃ  ಶಾಶ್ವತ ಎಂಬುದು ನಾನು ನಂಬುವುದಿಲ್ಲ. ನಾರಾಯಣ ಗುರು ಇದ್ದ ಸಂದರ್ಭದಲ್ಲಿ ಒಂದು ಮತ – ಧರ್ಮ ಇನ್ನೊಂದನ್ನು ದ್ವೇಷಿಸುವ ಕೆಲಸ ನಡೆಯುತಿತ್ತು. ಕೇರಳವೂ ಇದಕ್ಕೆ ಭಿನ್ನವಾಗಿರಲಿಲ್ಲ. ಅದಕ್ಕೆಂದೆ ಎಲ್ಲರಿಗೂ ಪ್ರವೇಶವಿರುವಂತಹ ಎಲ್ಲರಿಗೂ ದೇವಸ್ಥಾನ ಪ್ರತಿಷ್ಠಾಪನೆ ಯೋಗ್ಯತೆ ಇರುವಂತಹ ಶಿವಾಲಯವನ್ನು ಅವರು ಅರವಿಪುರದಲ್ಲಿ ಕಟ್ಟಿದರು. ಆದರೆ ಮತ್ತೊಂದು ದಿನ ಇದೇ ನಾರಾಯಣ ಗುರುಗಳು ಸಾಕಿನ್ನು ದೇವಾಲಯ ಎಂದು ಹೇಳಿದರು. ಈಗ ಕಾಲದ ಅವಶ್ಯಕತೆ ಕೈಗಾರಿಕೋದ್ಯಮ ಮತ್ತು ಶಾಲೆಗಳು, ಆಸ್ಪತ್ರೆಗಳೆಂದು ಜನರಿಗೆ ತಿಳಿಸಿದರು. ಆದ್ದರಿಂದ ಒಂದೇ ಜಾತಿ ಒಂದೇ ಮತ ಎಂಬುದನ್ನು ಅವರು ಪ್ರಯೋಗ ಶೀಲತೆಯಿಂದಲೇ ಬದಲಾಯಿಸಿದರು. ಅವರು ಮತ ಮತ್ತು ದೇವರ ಪ್ರತಿಮೆ ಎಂಬ ಮಾತನ್ನು ಮೀರಿ ಬೆಳೆದರು. ತನ್ನ ಜೀವನದ ಕೊನೆಯ ಘಳಿಗೆಯಲ್ಲಿ ಮನುಜ ಧರ್ಮ ಮುಖ್ಯ ಎಂದು ಸಾರಿದರು. ಧರ್ಮ ಯಾವುದಾದರೇನು? ಮನುಷ್ಯ ಒಳ್ಳೆಯವನಾದರೆ ಸಾಕು. ಶಿಷ್ಯನಾದ ಜನಪರ ಪತ್ರಕರ್ತ ಸಹೋದರ ಆಯಪ್ಪನ್ ಭೌದ್ಧಧರ್ಮ ಸೇರಿದಾಗಲೂ ಅವರು ಅದನ್ನು ವಿರೋದಿಸಲಿಲ್ಲ.

ಹೇಮಾ :- ಒಂದು ಒಳ್ಳೆಯ ಕೃತಿ ಸಮಾಜದ ಕೈಪಿಡಿ ಎನ್ನುತ್ತಾರೆ. ಈ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಅಂಚನ್ :- ಯಾವುದೇ ಒಂದು ಕೃತಿ ಅದು ಆ ಕಾಲದ ಸಂಸ್ಕೃತಿ, ಸಂಪ್ರದಾಯ ಚಿಂತನೆಯನ್ನು ವ್ಯಕ್ತಪಡಿಸುತ್ತದೆ. ಕೆಲವು ಸಲ ಒಬ್ಬ ವ್ಯಕ್ತಿ ಯಾರು ಎಲ್ಲಿಯವರು ಹೇಗೆ ಎಂಬ ಕುತೂಹಲಕ್ಕೆ ಈ ಪುಸ್ತಕಗಳು ಉಪಯೋಗವಾಗುತ್ತದೆ. ಹೊಸ ಬರಹಗಾರರಿಗೆ ಅದು ಪ್ರೇರಣೆಯಾಗುತ್ತದೆ. ಹೊಸ ವಿಷಯಗಳನ್ನು ತಿಳಿಯಲು ಹಾಗೂ ಕಾಲದ ಬದಲಾವಣೆಯ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಳ್ಳಲು  ಅನುಕೂಲವಾಗುತ್ತದೆ. ಕೆಲವು ಕೃತಿ ಮತ್ತು ಸಂದರ್ಭವನ್ನು ಮೀರಿ ಬೆಳೆಯುತ್ತದೆ. ಉದಾ: ರಾಮ ಮನೋಹರ ಲೋಹಿಯ.

ಹೇಮಾ :- ಮುಂಬಯಿ ಪರಿಸರದ ಯುವ – ಲೇಖಕರ ಬೆಳವಣಿಗೆಯ ಬಗ್ಗೆ ನಿಮ್ಮ ಅನಿಸಿಕೆಯೇನು?

ಅಂಚನ್ :- ಜಗತ್ತಿನ ನಿದ್ರೆ ಮಾಡದ ನಗರಗಳಲ್ಲಿ ಮುಂಬಯಿ ಒಂದು. ಇಲ್ಲಿ ಶ್ರೀಮಂತರ ಉಪ್ಪರಿಗೆ, ಬಡವರ ಗುಡಿಸಲು ಬದುಕಿನ ವೈವಿದ್ಯವನ್ನು ದರ್ಶಿಸುತ್ತದೆ. ಈ ಬಗ್ಗೆ ಸಾಹಿತಿಗಳಿಗೆ, ಕಲಾವಿದರಿಗೆ ಅನೇಕ ವಸ್ತುಗಳು, ಆಕಾರಗಳು ಇಲ್ಲಿ ಸಹಜವಾಗಿ ದೊರೆಯುತ್ತದೆ. ಅದನ್ನು ತಮ್ಮ ಕಥೆ, ಕವನ, ಲೇಖನ, ನಾಟಕಗಳಲ್ಲಿ ಸೆರೆಹಿಡಿದು ಹೊಸ ಸೃಜನಶೀಲ ವಿಧಾನಗಳಿಂದ ಲೋಕಾರ್ಪಣೆ ಮಾಡಿದರೆ ಅಲ್ಲಿ ಸಾಹಿತ್ಯದ ಅಧ್ಬುತ ಜಗತ್ತೇ ಸೃಷ್ಠಿಯಾಗಬಲ್ಲದು. ಹೊಸ ತಲೆಮಾರಿನ ಶ್ರೀನಿವಾಸ ಜೋಕಟ್ಟೆ, ಡಾ|| ಪೂರ್ಣಿಮಾ ಶೆಟ್ಟಿ, ಸೌಂದರ್ಯ, ಗೀತಾ, ಎಲ್.ಭಟ್, ಶಾರದಾ ಅಂಚನ್, ಜಯಲಕ್ಷ್ಮಿ ದೇವಾಡಿಗ, ಸಮಂಗಲ ಶೆಟ್ಟಿ, ಅನಿತಾ ತಾಕೊಡೆ, ಹೇಮಾ ಸದಾನಂದ ಅಮೀನ್ ಅನೇಕರಿದ್ದಾರೆ. ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಂತವರನ್ನು ನಾವು ಮನಪೂರ್ವಕವಾಗಿ ಅಭಿನಂದಿಸಬೇಕು. ಇದುವೇ ಸಕಾರಾತ್ಮಕ ದೃಷ್ಠಿ.

3 Responses

  1. Chandrashekhar says:

    ದೇವರು ಅವರ ಆತ್ಮಕ್ಕೆ ಸದ್ಗತಿ ಕೊಡಲಿ. ಉತ್ತಮ ಸಂದರ್ಶನ ಸೋದರಿ

  2. Sathish S Poojari says:

    Ravi Anchanravaru ,Taanu baredante badukuttiddaru. E Sandarshana Avara vyaktitwakke hidida kannadiyantide .

  3. SARITA.NK says:

    Agreed that’s very true..

Leave a Reply

%d bloggers like this: