ಅಲ್ಲಿ ನನಗೆ ಅಚ್ಚರಿ ಅನ್ನಿಸಿದ್ದು..

ಶಿವಾನಂದ ತಗಡೂರು

ಬಿಜಾಪುರದಲ್ಲಿ ನಡೆದ ರಾಷ್ಟ್ರೀಯ ಜಲ ಸಮಾವೇಶಕ್ಕೆ ದೇಶದ ಉದ್ದಗಲಕ್ಕೂ ಪ್ರತಿನಿಧಿಗಳು ಅಲ್ಲಿ ಜಮಾಯಿಸಿದ್ದರು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಆತಿಥ್ಯ. ಎಲ್ಲವೂ ಅಚ್ಚುಕಟ್ಟಾಗಿತ್ತು.

ರಾಜೇಂದ್ರಸಿಂಗ್, ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಅತಿಥಿ ಗಣ್ಯರು ಮಾತನಾಡಿದ ಮೇಲೆ ಸುದ್ದಿ ಕಳುಹಿಸಲು ಮೀಡಿಯಾ ಸೆಂಟರ್ ಗೆ ಹೋದಾಗ ಅಲ್ಲಿ ನಮ್ಮ ಡಾ. ಓಂಕಾರ ಕಾಕಡೆ ಸಿಕ್ಕರು.

ಪ್ರಜಾವಾಣಿ ಪತ್ರಿಕೆಯಲ್ಲಿ ಸದಾ ಕ್ರಿಯಾಶೀಲವಾಗಿ ವರದಿ ಮಾಡುವ ಮೂಲಕ ಗಮನ ಸೆಳೆದ ಪತ್ರಕರ್ತ. ಯಾಕೊ ಏನೋ ವೃತ್ತಿಗೆ ಗುಡ್ ಬೈ ಹೇಳಿ, ಬಿಜಾಪುರ ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಲ್ಲಿ ಎದುರು ಸಿಕ್ಕ ಡಾ. ಕಾಕಡೆ ಅವರೊಂದಿಗೆ ಉಭಯ ಕುಶಲೋಪರಿ ಮಾತು… ಹಳೆಯ ನೆನಪು ಮೆಲುಕು ಹಾಕಿದೆವು.

ಸುದ್ದಿಯನ್ನು ಕಳುಹಿಸಿ ರಾತ್ರಿ ರೂಂಗೆ ಹೊರಡುವಾಗ ನಾಳೆ ಬೆಳಗ್ಗೆ ನಿಮ್ಮೊಂದಿಗೆ ನಮ್ಮ ವಿದ್ಯಾರ್ಥಿಗಳ ಸಂವಾದ ಎಂದರು. ಅಯ್ಯೋ ಬೇಡ ಸಾರ್ ಅಂದರೂ ಕಾಕಡೆ ಬಿಡಲಿಲ್ಲ. ಸುಮ್ಮನೆ ಬನ್ನಿ ಅಂದು ಬಿಟ್ಟರು.

ಮಾರನೆ ದಿನ ಬೆಳಗ್ಗೆ ಬಿಎಲ್ಡಿ ಕ್ಯಾಂಪಸ್ ನಲ್ಲಿ ಒಟ್ಟಿಗೆ ಟಿಫಿನ್ ಮಾಡಿ, ಕಾಫಿ ಕುಡಿದು ಕಾಕಡೆ ಅವರ ಜೊತೆಗೆ ಮೀಡಿಯಾ ಸೆಂಟರ್ ಗೆ ಬಂದಾಗ ಅಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಒಂದೆಡೆ ಸೇರಿದ್ದರು.

ಏನು ಮಾತನಾಡಲಿ ಅನ್ನೋ ಗಲಿಬಿಲಿ ಶುರುವಾಯಿತು. ಅಷ್ಟೊತ್ತಿಗೆ ಕಾಕಡೆ ಅವರೇ ನನ್ನ ಪರಿಚಯಿಸಿದರು.

ನೋಡಿ ನಮ್ಮ ಶಿವಾನಂದ ತಗಡೂರು ಓದಿದ್ದು ಆಟೋಮೊಬೈಲ್ ಇಂಜಿನಿಯರಿಂಗ್. ಆದರೆ ಮಾಡುತ್ತಿರುವ ವೃತ್ತಿ ಪತ್ರಿಕೋದ್ಯಮ ಎಂದು ಹೇಳಿ ಅವರಿಗೆಲ್ಲ ಕುತೂಹಲ ಕೆರಳಿಸಿ, ಇನ್ನುಳಿದ ಸಂಗತಿಗಳನ್ನು ಅವರಿಂದಲೇ ಕೇಳೋಣ ಎಂದು ಕೂತುಬಿಟ್ಟರು.

ಬಾಗೂರು-ನವಿಲೆ ಸುರಂಗ ಸಂತ್ರಸ್ತರ ಚಳವಳಿ ಜೊತೆಗೆ ಪತ್ರಿಕೋದ್ಯಮ ಪ್ರವೇಶಿಸಿದ ಸಂಗತಿಯಿಂದ ಹಿಡಿದು, ಇಲ್ಲಿಯ ತನಕ ವೃತ್ತಿಯಲ್ಲಿ ನಡೆದ ಘಟನಾವಳಿಗಳ ಪ್ರಮುಖ ಅಂಶಗಳನ್ನು ಪ್ರಸ್ತಾಪ ಮಾಡಿ ಮಾತನಾಡಿದೆ. ಇದೆಲ್ಲವೂ ಅವರಿಗೆ ಕುತೂಹಲಕರವಾಗಿತ್ತು.

ಭಾಷಣ ಮುಗಿದ ಕೂಡಲೆ ಸಂವಾದಕ್ಕೆ ಶುರುವಿಟ್ಟುಕೊಂಡರು. ವೃತ್ತಿ ಬಗ್ಗೆ ಚರ್ಚೆ ನಡೆಯಿತು. ವೃತ್ತಿ ಬದ್ದತೆ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡಿ, ಮತ್ತೊಮ್ಮೆ ಕಾಫಿ ಕುಡಿದು ಹೊರಟೆ.

ಅಲ್ಲಿ ನನಗೆ ಅಚ್ಚರಿ ಅನ್ನಿಸಿದ್ದು, ಪತ್ರಿಕೋದ್ಯಮದ ಬಗ್ಗೆ ಆ ಹೆಣ್ಮಕ್ಕಳಲ್ಲಿದ್ದ ಉತ್ಸಾಹ, ತನ್ಮಯತೆ.
ಜಲ ಸಮಾವೇಶ ಬಗ್ಗೆ ಆ ಹೆಣ್ಮಕ್ಕಳ ತಂಡ ಮೂರು ದಿನ ಸಂಜೆ ಪತ್ರಿಕೆ ರೂಪಿಸಿ ಹೊರ ತಂದಿತ್ತು. ಅದು ಮಾಹಿತಿ ಪೂರ್ಣವಾಗಿ, ಅಚ್ಚುಕಟ್ಟಾಗಿತ್ತು. ಅದಕ್ಕಾಗಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದನ್ನು ನಾ ಮರೆಯಲಿಲ್ಲ.

ಡಾ.ಕಾಕಡೆ ಆಸಕ್ತಿ ಕಾರಣದಿಂದಾಗಿ ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಅಂದರೆ, ಅದು ನಿಜಕ್ಕೂ ಅಭಿಮಾನದ ಸಂಗತಿ.

ಅಲ್ಲಿ ಅವರೊಟ್ಟಿಗೆ ಕಳೆದ ಅಮೂಲ್ಯ ಸಮಯ ಮತ್ತೆ ನೆನಪಾಗುತ್ತಲೇ ಇದೆ.

Leave a Reply