ಜಗವೆಲ್ಲವೂ ನಾಗಮಂಡಲ

 

 

 

 

 

 

 

 

ವಿದ್ಯಾ ಕುಂದರಗಿ

ಹಾಲ್ಗಲ್ಲದ ಎಳೆ ಹಸುಳೆ
ತನ್ನ ತಾ ಅರಿಯದ
ಮೂರು ತಿಂಗಳ ಮಾಂಸದ ಮುದ್ದೆ
ಮಿಡಿ ಹಾಕಿರಲಿಲ್ಲ, ಚೂಡಿಹಾಕಿರಲಿಲ್ಲವಲ್ಲ?

ಕಗ್ಗು ಬೀರಿಯದ ಮೊಗ್ಗು
ಹಾಲುಹಲ್ಲಿನ ಎಸಳು
ಮೂರು ವರ್ಷದ ಕೂಸು
ಎಲ್ಲಿತ್ತೋ
ತೊನೆಯುವ ತೊಡೆ,
ತುಳುಕುವ ತುಂಬೆದೆ?

ಮೈನೆರೆದರೂ
ಇನ್ನೂ ದಳ ಬಿಗುಪಿನ ಕದಿರು
ಮೈಹಿಗ್ಗದ, ಮನ ಮಾಗದ ಒನಪು
ತೆನೆ ಕಾಳ್ಹಿಡಿಯದ ಮುರುಟು
ಎಲ್ಲಿ ಕಂಡಿತೋ
ಕಾಮ ಕೆರಳಿಸುವ ನೋಟ?

ಹದಿನಾರರ ಹರೆಯ, ಪ್ರಕೃತಿ
ಹೊದ್ದುಕೊಂಡು ಹೊರಟವಳು
ನಿಮ್ಮ ಕಣ್ಸೆಳೆಯುವಂತೆ
ಮಾಡಿದ್ದಾದರೂ ಏನು?
ಅವಳು ದಾರಿಗೆ ಬರುವುದೇ
ಅಪವಾದವೆ?

ಮೈದೊಗಲು ಜೋತು,
ಕಣ್ಣು ಗವಿಯಂತಾಗಿ
ಎಪ್ಪತ್ತು ಕಂಡವಳು ಮುಪ್ಪಾಗಿಲ್ಲವೆ?
ಅವಳಲ್ಲೇನೀತ್ತು ಪ್ರಚೋದಿಸುವ ಮಾಯೆ?

 

ಹಸು ಕಂದಮ್ಮಗಳೂ
ನಿಮಗೆ ಸಾಲವೂ ಎಂದಾಗ
ಅದು ನಿಮ್ಮ ಚೋದ್ಯ, ಕಾಮತಿಟೆ;
ಮುಪ್ಪುಮುದುಕಿಯರೂ ಸಾಲರು ಎಂದರೆ
ಅದು ನಿಮ್ಮೊಳಗಿನ ಬಸಿದ ಮಾನವಿಯತೆ;
ಹದಿಹರೆಯವನ್ನು ಆರೋಪಿಸುವ
ನೀವು ಭೂಮಿಗೆ ಬಿದ್ದದ್ದೆಲ್ಲಿಂದ, ಹೇಗೆ?

ಮೊಲೆ, ತೊಡೆ, ನಿತಂಬ ಇರದೆ
ಅದು ಹೆಣ್ಣಾಗದು,
ಅದನ್ನೆಷ್ಟು ಮುಚ್ಚಿಟ್ಟರೂ ಅದು ಮರೆಯಾಗದು;
ಮುಚ್ಚಿಡುವುದೆಲ್ಲಿ? ಏನನ್ನು?
ಏನು ಮಾಡಿದರೂ
ಯಾವ್ಯಾವುದು ಎಲ್ಲೇಲ್ಲಿ ಇರಬೇಕೋ
ಅಲ್ಲಲ್ಲೇ ಇದ್ದೇ ಇದೆ, ಇರತ್ತೆ.

ಇವ್ಯಾವೂ ಇರದ ಹಸೂಗೂಸು,
ಬಲಹಿಂಗಿದ ಮುಪ್ಪಿನೊಡಲಲ್ಲಿ
ಮುಚ್ಚಿಡುವುದೇನು?ಎಲ್ಲಿ?

ವಿಕೃತ ತಿಟೆ ತೀರಿದ ಮೇಲೂ
ಸಲಾಕೆ ಹಾಕಿ ಅಡುವ ಮಹಾರಂಧ್ರವಲ್ಲವೇ
ನಿಮ್ಮ ರಾಕ್ಷಸಿತನಕ್ಕೆ ಏರವಾದುದು?
ಇದಲ್ಲವೆ ಉತ್ತರ !!!!!!!!!!

ಹೆಣ್ನೆಂಬ ಆಕಾರ ಕಂಡಿದ್ದೆ ತಡ
ಹೆಡೆ ಎತ್ತಿ ಭುಸುಗುಟ್ಟವ
ನಿಮಗೆ ಬೇಕಾಗಿದ್ದೇನು?
ಘರ್ಷನೆಗೊಂದು ನಾಗಮಂಡಲ!

ಹೆಣ್ಣು ಕುಲವನ್ನೇ ಬಸಿದು,
ಅವಳ ಮೊಲೆ, ನಿತಂಬ,
ತೊಡೆಗಳ ಎರಕಹೊಯ್ದು,
ಭಾವ,ಬದುಕುಗಳ ಸುಟ್ಟು,
ಕರಕಲ್ಲಿರೂಪಿಸಿದ್ದಾರಂತೆ
ರಬ್ಬರ ನಾಗಮಂಡಲ!

ಭುಸುಗುಡುವ ಹೆಡೆಗಳಿನ್ನು
ಕೇಕೇ ಹಾಕಬಹುದು
ಅಲ್ಲಿ ರಕ್ತವಿಲ್ಲ, ನೋವಿಲ್ಲ,
ಸಂಭ್ರಮದ ವಿಷಯವೆಂದರೆ
ಅಲ್ಲಿ ವಿರೋಧವಿಲ್ಲ, ಹೊತ್ತುಗೊತ್ತಿಲ್ಲ,
ಆದಿ ಅಂತ್ಯವಿಲ್ಲ,
ಗತಿ, ಮಿತಿಯಂತೂ ಮೊದಲೇ ಇಲ್ಲ
ಜೊತೆಗೆ ಮತಿಯೂ ಇಲ್ಲ!

ಆ ಎರಡೇ ನಿಮಿಷದಲ್ಲಿ
ಜಗತ್ತೇ ಜಯಿಸಿದೆ ಎಂಬ ಬಯಕೆಗೆ
ನಿತ್ಯವಿಜಯೋತ್ಸವ…….
ಅಲ್ಲಲ್ಲ! ಅನುಕ್ಷಣವೂ ವಿಜಯೋತ್ಸವ!

ಜಗವೆಲ್ಲವೂ ನಾಗರಂದ್ರ
ಕಾದು ನೋಡಬೇಕು
ಇನ್ನಾದರೂ
ಹೆಣ್ಣಾದ ಹಮ್ಮಿಗೆ,
ಸ್ರವಿಸಿದ ದೇಹಕ್ಕೆ ಮುಕ್ತಿ ಸಿಕ್ಕೀತೆ?
ದಕ್ಕುವುದೆ ಭಾವಸ್ಪಂದನ

Leave a Reply