ಎಂಥ ಕನ್ನಡವನ್ನು ಉಳಿಸಬೇಕು?

 

 

 

 

 

 

ಗಿರಿಜಾ ಶಾಸ್ತ್ರಿ

 

ನಾವುಗಳು ಕನ್ನಡ ಎಂ.ಎ. ಓದುತ್ತಿದ್ದ ಕಾಲದಲ್ಲಿ (೧೯೭೯-೮೧) ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ನಾಲ್ಕು ಐದು ತರಗತಿಗಳು ನಡೆಯುತ್ತಿದ್ದವು. ಹೀಗಿದ್ದರೂ ಎರಡು ವರುಷದ ಕೊನೆಗೆ ನಮಗೆ ದಕ್ಕಿದ ಕನ್ನಡ ಸಾಹಿತ್ಯ ಎಷ್ಟು ? ಇದರ ಬಗ್ಗೆ ನಮಗೆ ಹೇಳಿಕೊಳ್ಳಲು ಸಂಕೋಚವಾಗುತ್ತಿತ್ತು. ಸಾಹಿತ್ಯದ ಸಾಗರವನ್ನು ಮೊಗೆಯಲು ನಮ್ಮ ಬಳಿಯಿರುವ ಪಾತ್ರವೇ ಚಿಕ್ಕದೆನಿಸುತ್ತಿತ್ತು. ಹಾಗೆ ಭಾವಿಸಲು ನಮ್ಮ ಅಧ್ಯಾಪಕರುಗಳೇ ಕಾರಣ.

ನಮಗೆ ಇದ್ದ ಅಧ್ಯಾಪಕರುಗಳಂತೂ ನಮಗೆ ಸ್ವಂತ ಆಲೋಚನೆ ಮಾಡುವ ಶಕ್ತಿ ಯನ್ನು ಬೆಳೆಸಿದವರು. ಕಾಪಿ ಹೊಡೆಯಲು ಸಾಧ್ಯವಿಲ್ಲದ ಪ್ರಶ್ನೆಗಳು ನಮ್ಮ ಪರೀಕ್ಷಾ ಪತ್ರಿಕೆಗಳಲ್ಲಿರುತ್ತಿದ್ದವು. ಪ್ರಬಂಧಗಳ ಅಸೈನ್ಮೆಂಟ್ ಗಳಲ್ಲಿ ಏನಾದರೂ ಕಾಪಿ ಹೊಡೆದರಂತೂ ಅವರಿಗೆ ಗೊತ್ತಾಗಿಬಿಡುತ್ತಿತ್ತು. ಯಾಕೆಂದರೆ ಅವರಿಗೆ ಎಲ್ಲವೂ ಕರತಲಾಮಲಕವಾಗಿದ್ದವು.

ನಮಗೆಲ್ಲರಿಗೂ ಸ್ವಂತವಾಗಿ ಏನಾದರೂ ಬರೆದು ಮೇಷ್ಟ್ರುಗಳ ಶಹಬ್ಬಾಸ್ ಗಿರಿಯನ್ನು ಪಪಡೆದುಕೊಳ್ಳಬೇಕೆಂಬ ಮಹದಾಸೆ ಇರುತ್ತಿತ್ತೇ ವಿನಃ ಯಾರಿಗೂ ಕಾಪಿ ಹೊಡೆದು ಹೇಗೋ get on ಆಗಬೇಕೆಂದು ಎನಿಸುತ್ತಿರಲಿಲ್ಲ. ಆಗ ನಮ್ಮ ಬ್ಯಾಚ್ನಲ್ಲಿ ಯಾರಿಗೂ ಫಸ್ಟ್ ಕ್ಲಾಸ್ ದೊರೆಯಲಿಲ್ಲ. ಅವರಲ್ಲಿ ಕೆಲವರು ಇಂದು ಗಂಭೀರ ಬರವಣಿಗೆಯಲ್ಲಿ ತೊಡಗಿಕೊಂಡು ಹೆಸರು ಗಳಿಸಿದ್ದಾರೆ.

ಪಾಠಗಳ ಜೊತೆಗೆ ಅಧ್ಯಾಪಕರು ಬದುಕಿನ ಮೌಲ್ಯಗಳನ್ನೂ ಕಲಿಸಿದರು. “ನೀವು ಇಲ್ಲಿಂದ ಹೊರ ಹೋಗುವಾಗ ದೊಡ್ಡ ಸಾಹಿತಿಗಳೇನಾಗಬೇಕಿಲ್ಲ ಕೇವಲ ಮನುಷ್ಯರಾದರೆ ಸಾಕು’ ಇದು ಅಂದಿನ ಅಧ್ಯಕ್ಷರಾಗಿದ್ದ ಜಿ.ಎಸ್ ಎಸ್ ಅವರು ನಮ್ಮ ಬೀಳ್ಕೊಡುಗೆ ಸಮಯದಲ್ಲಿ ಹೇಳಿದ ಮಾತು.

ಈಗ ಹೆಚ್ಚಿನ ಎಂ.ಎ ತರಗತಿಗಳಲ್ಲಿ ಪಾಠವೇ ನಡೆಯುವುದಿಲ್ಲವಂತೆ. (ಇದಕ್ಕೆ ಅಪವಾದಗಳಿರಬಹುದು) ವಿದ್ಯಾರ್ಥಿಗಳ ಅಭಿವೃದ್ಧಿಯ ಬಗ್ಗೆ ಅಧ್ಯಾಪಕರುಗಳಿಗೂ ಇರುವ ಆಸ್ಥೆ ಅಷ್ಟಕ್ಕಷ್ಟೇ. ವಿದ್ಯಾರ್ಥಿಗಳು ಕಾಪಿ ಹೊಡೆದರೂ ಆ ಅಧ್ಯಾಪಕರುಗಳಿಗೆ ತಿಳಿಯುವುದೇ ಇಲ್ಲ. ಏಕೆಂದರೆ ಮೊದಲು ಅವರು ಓದಿದ್ದರೆ ತಾನೇ? ಆದರೂ ಈ ಎಲ್ಲಾ ವಿದ್ಯಾರ್ಥಿಗಳಿಗೆ ಇಂದು ಶೇಕಡಾ ೭೦ಕ್ಕಿಂತ ಕಡಿಮೆ ಅಂಕಗಳು ಬರುವುದಿಲ್ಲ.

ಮೇಲಿನ ಈ ಸ್ಥಿತಿ ಗೆ ಪಿಎಚ್.ಡಿ ಪಡೆದವರೂ ಹೊರತಲ್ಲ. ಕತೆ, ಕಾದಂಬರಿ, ಕವಿತೆ ನಾಟಕಗಳಲ್ಲಿ ಸಂಶೋಧನೆ ಮಾಡಿದ ಅವರಿಗೆ ಆಯಾ ಪ್ರಕಾರದಲ್ಲಿನ ಪ್ರಸ್ತುತ ಸಾಹಿತ್ಯ ಕೃತಿಗಳು ಏನು ಹೇಳುತ್ತವೆ ಎಂದು ಸ್ವತಂತ್ರವಾಗಿ ನಾಲ್ಕು ಸಾಲು ಹೇಳಲು ಬರುವುದಿಲ್ಲ. ಅಣಬೆಗಳಂತೆ ಹುಟ್ಟಿಕೊಳ್ಳುತ್ತಿರುವ ಇಂತಹ ” ಪಿ.ಎಚ್.ಡಿ” ಗಳು, ಒಂದು ಸರಳ ಕವಿತೆಯನ್ನೂ ಅರ್ಥೈಸಲಾರದ ‘ಪ್ರಭೃತಿಗಳು’

ಇನ್ನು ತಮ್ಮ ವಿದ್ಯಾರ್ಥಿಗಳಿಗೆ ಯಾವ ಮೌಲ್ಯವನ್ನು ಕಲಿಸಿಯಾರು?

ಆದರೆ ಈಗ ಗಲ್ಲಿಗಲ್ಲಿಗಳಲ್ಲಿ ಪ್ರಶಸ್ತಿಗಳು, ಬಿರುದು ಬಾವಲಿಗಳು ಹೇರಳವಾಗಿ ದೊರೆಯುತ್ತಿವೆ. ಸದಾ ಪತ್ರಿಕೆಗಳಲ್ಲಿ ರಾರಾಜಿಸುವ ಹೆಸರುಗಳು!

ಕನ್ನಡ ಉಳಿಸೋಣ ಎಂದು ಎಲ್ಲಾ ಕಡೆ ಬೊಬ್ಬೆ!!!!

ಹೊರನಾಡ ಕನ್ನಡಿಗರಿಗಂತೂ ಕನ್ನಡ ಕಲಿಯುವವರಿಗೆ ಕರ್ನಾಟಕ ಸರ್ಕಾರದಿಂದ ಅನೇಕ ಅನುದಾನಗಳಿವೆ.
ಅನುದಾನಕ್ಕಾಗಿ ಕನ್ನಡವೇ, ಇಲ್ಲ ಕನ್ನಡಕ್ಕಾಗಿ ಅನುದಾನವೇ?
ಕನ್ನಡಾಂಬೆ ನೀನೇ ಕಾಪಾಡಬೇಕು.

Author: avadhi

Leave a Reply