ಮತ್ತೆ ಮತ್ತೆ ತೇಜಸ್ವಿ..

 

 

 

 

 

 

 

 

 

 

ಸಚಿನ್ ತೀರ್ಥಹಳ್ಳಿ

ಮೊನ್ನೆ ಸಮ್ಮೇಳನದ ನೆಪದಲ್ಲಿ ಮೈಸೂರಿಗೆ ಹೋಗಿ ಹಸಿರಲ್ಲೇ ತುಂಬಿಹೋಗಿದ್ದ ಮಹಾರಾಜ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಸುಮ್ಮನೆ ಅಡ್ಡಾಡುವಾಗ ತೇಜಸ್ವಿ ತುಂಬಾ ನೆನಪಾಗುತ್ತಿದ್ದರು.

ಸಮ್ಮೇಳನಗಳ ಅಧ್ಯಕ್ಷರಾಗದೇ ಕನ್ನಡಿಗರ ಜನಮಾನಸದಲ್ಲಿ ಸದಾ ನೆಲೆನಿಂತಿರುವ ಬರಹಗಾರ ಬಹುಶಃ ಅವರೊಬ್ಬರೇ ಇರಬೇಕು. ಆ ನೆನಪಲ್ಲೆ ಅವರ ಬಗ್ಗೆ ಇತ್ತೀಚೆಗೆ ಬರೆದ ಒಂದು ಬರಹ ಹಂಚಿಕೊಳ್ಳುತ್ತಿದ್ದೇನೆ..

ಹತ್ತನೆ ತರಗತಿ ಪಬ್ಲಿಕ್ ಪರೀಕ್ಷೆ ಮುಗಿಸಿ ಮೂರು ವರ್ಷ ಓದಿದ ಹೈಸ್ಕೂಲಿನಿಂದ ಏನಾದರೂ ನೆನಪಿಗೆ ತರಬೇಕೆಂದುಕೊಂಡು ಶಾಲೆಯ ಲೈಬ್ರರಿಗೆ ನುಗ್ಗಿ ಕೈಗೆ ಸಿಕ್ಕಿದ ಎರಡು ಪುಸ್ತಕಗಳನ್ನ ಅವುಗಳ ಹೆಸರು ಗೋತ್ರಗಳನ್ನೆಲ್ಲಾ ನೋಡದೆ ಕದ್ದುಕೊಂಡು ಬಂದಿದ್ದೆ.

ಹಾಗೇ ಕದ್ದು ತಂದ ಪುಸ್ತಕ ಒಂದನ್ನ ಬೇಸಿಗೆಯ ಒಂದು ಮಧ್ಯಾಹ್ನ ಕೂತು ಓದುತ್ತಾ ಓದುತ್ತಾ ನನ್ನಲ್ಲಾದ ರೋಮಾಂಚನ ನನಗಿನ್ನೂ ನೆನಪಿದೆ.

ನಾನು ಬೆಳಿಗ್ಗೆ ಎದ್ದರೆ ನೋಡುವ ಜಗತ್ತು , ಒಡನಾಡುವ ಜನ , ಓಡಾಡುವ ದಾರಿ , ಮಾತನಾಡುವ ಭಾಷೆ ಎಲ್ಲವೂ ಆ ಪುಸ್ತಕದೊಳಗಿತ್ತು. ನನ್ನ ಜಗತ್ತು ನಾನಂದಕೊಂಡಷ್ಟು ಕೆಟ್ಟದಾಗೇನೂ ಇಲ್ಲ ಅದರೊಳಗೂ ನೂರೆಂಟು ನಾನು ಕೇಳದ ಕತೆಗಳಿವೆ ಅಂತ ನನ್ನ ಕಣ್ತೆರೆಸಿದ ಆ ಪುಸ್ತಕದ ಹೆಸರು ‘ಕರ್ವಾಲೋ’.

ಕನ್ನಡ ನಾಡು ಕಂಡ ಪ್ರತಿಭಾನ್ವಿತ ಲೇಖಕ ಪೂರ್ಣಚಂದ್ರ ತೇಜಸ್ವಿ ಮೂಡಿಗೆರೆಯ ಯಾವುದೋ ಮೂಲೆಯಲ್ಲಿ ಚಿಮಣಿ ಗುಡ್ಡೆಯ ದೀಪದ ಬೆಳಕಿನಲ್ಲಿ ಬರೆದ ಆ ಪುಸ್ತಕವನ್ನ ಅದೆಷ್ಟೇ ಬಾರಿ ಓದಿದರೂ ಮತ್ತದೇ ಬೇಸಿಗೆಗೆ ಮರಳುತ್ತೇನೆ. ನಾನೂ ಏನೋ ಮಹತ್ತಾದುದನ್ನು ಓದಿದ್ದೇನೆ, ನನಗೇನೋ ಗೊತ್ತಿದೆ ಅಂತ ಇಡೀ ಬೇಸಿಗೆಯಲ್ಲಿ ಆಡುವಾಗ, ಈಜುವಾಗ, ದನ ಮೇಯಿಸುವಾಗಲೆಲ್ಲ ಯಾರಿಗೆ ಹೇಗೆ ಹೇಳುವುದು ಅಂತ ಗೊತ್ತಾಗದೆ ಒಬ್ಬೊಬ್ಬನೇ ಆ ರೋಮಂಚನವನ್ನ ಅನುಭವಿಸುತ್ತಿದ್ದೆ.

ಆಮೇಲೆ ಕಾಲೇಜಿಗೆ ಸೇರಿದ ಮೇಲೇ ನಾನೊಬ್ಬನೇ ಅಲ್ಲ ನನ್ನಂತ ಅನೇಕ ತರುಣರು ತೇಜಸ್ವಿ ಅನ್ನೋ ಗಾರುಡಿಗನಿಗೆ ಮರುಳಾಗಿದ್ದರೆ ಅಂತ ಗೊತ್ತಾಗಿದ್ದು. ಕನ್ನಡದ ಯಾವ ಲೇಖಕರಿಗೂ ಇಲ್ಲದಷ್ಟು ಯುವಜನರ ಓದುಗ ಸಮೂಹ ತೇಜಸ್ವಿಗೆ. ಭೌತಿಕವಾಗಿ ಅವರಿಲ್ಲದ ಈ ಸಮಯದಲ್ಲಿ ಅವರ ಹೆಸರಿನಲ್ಲಿರುವ ಫೇಸ್ಬುಕ್ ಪೇಜ್ ಒಂದಕ್ಕೆ ಐವತ್ತು ಸಾವಿರಕ್ಕೂ ಹೆಚ್ಚಿನ ಫಾಲೋವರ್ ಗಳಿದ್ದಾರೆಂದರೆ ನೀವು ನಂಬಲೇಬೇಕು.

ತೇಜಸ್ವಿಯವರ ಬದುಕು ಮತ್ತು ಬರಹ ಎರಡನ್ನೂ ಬೇರೆ ಬೇರೆ ಇಟ್ಟು ನೋಡಲು ಸಾಧ್ಯವೇ ಇಲ್ಲ ಅನ್ನುವಷ್ಟು ಅವೆರೆಡು ಒಂದರೊಳಗೊಂದು ಬೆರೆತುಕೊಂಡಿವೆ. ಕುವೆಂಪುರ ಕಾನೂರು ಹೆಗ್ಗಡತಿಯಲ್ಲಿ ಅಥವಾ ಮಲೆಗಳಲ್ಲಿ ಮದುಮಗಳಲ್ಲಿ ಹೊರಜಗತ್ತಿಗೆ ಮುಖಾಮುಖಿಯಾಗದ ತನ್ನೊಳಗಿನ ಘರ್ಷಣೆಯಲ್ಲೆ ಮುಳುಗಿರುವ ಮಲೆನಾಡಿನ ಚಿತ್ರಣ ಸಿಕ್ಕಿದರೆ ತೇಜಸ್ವಿ ಕತೆಗಳಲ್ಲಿ ಹೊರಗಿನ ಪ್ರಪಂಚವನ್ನ ಮಾಡಿನ ಮರೆಯಲ್ಲಿ ನಿಂತು ನೋಡುವ, ಅದರಿಂದ ಜರ್ಝರಿತಗೊಳ್ಳುತ್ತಿರುವ ಮಲೆನಾಡಿನ ಚಿತ್ರಗಳು ಸಿಗುತ್ತವೆ.

ಮಲೆನಾಡೆಂದರೆ ಬರೀ ಕಾಡು‌,‌ಮಳೆ‌, ನಿರ್ಜನ ಮಣ್ಣಿನ ರಸ್ತೆಗಳು ಅಂದುಕೊಂಡಿದ್ದವರಿಗೆ ಅದರ ಅಂತರಾಳದಲ್ಲಿ ಹುದುಗಿಕೊಂಡಿದ್ದ ಕತೆಗಳನ್ನ ಒಂದರ ಮೇಲೊಂದರಂತೆ ಹೊರತೆಗೆದು ಆ ಸಂಸ್ಕೃತಿಯನ್ನ, ಭಾಷೆಯನ್ನ, ಆ ಜನರ ತವಕ ತಲ್ಲಣಗಳನ್ನ ಪರಿಚಯಿಸಿದ ಕೀರ್ತಿ ಕುವೆಂಪುಗೆ ಬಿಟ್ಟರೆ ತೇಜಸ್ವಿಗೇ ಸಲ್ಲಬೇಕು.

ಮೂಡಿಗೆರೆಯ ಜೇನು ಸೊಸೈಟಿಯಿಂದ ಶುರುವಾಗುವ ಕರ್ವಾಲೋ ಕಾದಂಬರಿಯ ಕತೆ ಹಾರುವ ಓತಿಯೊಂದು ಜೀವ ವಿಕಾಸದ ಹೊಳಹುಗಳನ್ನ ಕೈಗೆ ಸವರಿ ಪಶ್ಚಿಮ ಘಟ್ಟದ ಹಸಿರು ಸೆರಗುಗಳಲ್ಲಿ ಮರೆಯಾಗುವಲ್ಲಿ ಬಂದು ನಿಲ್ಲುತ್ತದೆ. ಏಲಕ್ಕಿ ಮಾರಿ ಊರಿಗೆ ವಾಪಾಸು ಬರುವವರ ಹತ್ತಿರ ಥ್ರಿಲ್ಲರ್ ಹಳಗನ್ನಡ ಓದಿಸಿ ಅವರನ್ನ ರೈಲಿನಿಂದ ಹಾರಿಸುವುದರಿಂದ ಶುರುವಾಗುವ ಜುಗಾರಿ ಕ್ರಾಸ್ ಕಾಡುಗಳ್ಳರ ಅಟ್ಟಹಾಸದ ಕತೆಯಾಗುತ್ತದೆ. ಮೊಂಡಾದ ಕೊಡಲಿಯನ್ನು ಹುಡುಕಿಕೊಂಡು ಹೋಗುವವರಿಗೆ ಕೃಷ್ಣೇಗೌಡರ ಆನೆ ಸಿಗುತ್ತದೆ.

ಮೂರು ಹಗಲು, ಮೂರು ರಾತ್ರಿ ಸುರಿದ ಮಳೆಗೆ ಉರುಳಿದ ಮರದ ತುಂಡೊಂದು ಕಿರಗೂರಿನ ಹೆಣ್ಮಕ್ಕಳ ಗಯ್ಯಾಳಿತನವನ್ನ ಬಡಿದೆಬ್ಬಿಸುತ್ತದೆ. ಅವರ ಎಲ್ಲಾ ಕತೆಗಳನ್ನ ಓದಿದ ಮೇಲೆ ಮಾರ, ಪ್ಯಾರ, ತಬರ, ಮರಸರ, ಕುಳುಪ, ಮಂದಣ್ಣ, ಎಂಗ್ಟ, ದಾನಮ್ಮ ನಮ್ಮೂರಲ್ಲಿ ನಮಗೆ ಕಾಣಿಸುವುದಕ್ಕೆ ಶುರುವಾಗುತ್ತಾರೆ.

ತನ್ನ ಓದುಗನ ಅರಿವನ್ನ ವಿಸ್ತರಿಸುತ್ತಾ, ಅವನ ಪ್ರಪಂಚದ ಶ್ರೀಮಂತಿಕೆಯನ್ನ ಅವನಿಗೇ ಪರಿಚಯಿಸುತ್ತಾ ಹೋದದ್ದೆ ತೇಜಸ್ವಿ ಬರವಣಿಗೆಯ ಹೆಗ್ಗಳಿಕೆ. ಅವರ ಬರವಣಿಗೆಯ ಒಳನೋಟ ಅವರ ಕತೆಯೊಂದರಲ್ಲೆ ಬರುವ ರಂಜೆ ಹೂವಿನ ಮಾಲೆ ಕಟ್ಟಿಕೊಂಡು ಮರಗಳಿಂದಲೇ ಮುಚ್ಚಿಹೋದ ನಿರ್ಜನ ರಸ್ತೆಯೊಂದರ ತಿರುವಲ್ಲಿ ನಿಂತು‌‌ ಮಾರುವ ಮೂಕ ಹುಡುಗಿಯೊಬ್ಬಳ ಮೌನದ ಹಾಗೆ‌, ಸುಮ್ಮನೆ ಅದರ ಎದುರಲ್ಲಿ ಅರೆಕ್ಷಣ ನಿಂತರೆ ಅದು ನಮ್ಮನ್ನು ಹೂನಗುವೊಂದನ್ನ ಸೂಸಿ ತಬ್ಬಿಕೊಳ್ಳುತ್ತದೆ.‌

ನಾವು ಗಮನಿಸದ ಸಣ್ಣ ಸಣ್ಣ ಸಂಗತಿಗಳಿಗೇ ತಮ್ಮ ವಕ್ರ ವಿನೋದದ ಸ್ವರ್ಶವಿತ್ತು, ಬಯ್ಗುಳಗಳ ಕಚಗುಳಿ ಕೊಟ್ಟು, ಕತೆ ಹೇಳುವವನ್ನು ಹೊರಗಿಟ್ಟು ಕತೆಯನ್ನೆ ಮಧ್ಯೆ ಇಟ್ಟು, ಅದು ಸ್ಫುರಿಸುವ ವಿನೋದ, ವಿಷಾದ, ಆಶ್ಚರ್ಯ, ಪ್ರಶ್ನಾರ್ಥಗಳನ್ನೆಲ್ಲಾ ಓದುವವರಿಗೇ ಗೊತ್ತಾಗದಂತೆ ಅವರೊಳಗೆ ನೆಡುವ ಅವರ ಕತೆಗಳಿಗೆ ಡಿಸೆಂಬರ್ ಚಳಿಗೆ ಅಡಿಕೆ ಒಲೆಯ‌ ಮುಂದೆ ಉರಿಯುವ ನೇರಲೆ ಕುಂಟೆಗೆ ಮೈತಾಗಿಸಿ ಕೂತು ಪ್ರತಿ ಬೆಳಗನ್ನೂ ಕಳೆಯುವಾಗ ಆಗುವ ರೋಮಾಂಚನವನ್ನ ನೀಡುವ ಮಾಂತ್ರಿಕ ಶಕ್ತಿಯಿದೆ.

ನಮ್ಮಿಷ್ಟದ ಲೇಖಕ ನಮ್ಮನ್ನು ಇನ್ನಿಲ್ಲದಂತೆ ಕಾಡುವಾಗ ಅವನ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕು ಅನ್ನುವ ಚಾಳಿ ಆಗಷ್ಟೆ ಓದಲು ಶುರುಮಾಡಿದ ಎಲ್ಲರಿಗೂ ಇರುತ್ತದೆ. ಹಾಗೇ ಹುಡುಕಾಡುತ್ತ ಇದ್ದಾಗ ನನಗೆ ಸಿಕ್ಕಿದ್ದು ತೇಜಸ್ವಿಯವರ ಪತ್ನಿ ಶ್ರೀಮತಿ ರಾಜೇಶ್ವರಿಯವರು ಬರೆದ  ಪುಸ್ತಕ.

ತೇಜಸ್ವಿ ಅಭಿಮಾನಿಗಳಿಗೇ ಅಂತಲೇ ಇರುವ ಈ ಪುಸ್ತಕದಲ್ಲಿ ನಮಗೆ ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಸಿಗದ ಬೇರೊಂದು ಮುಖ ಕಾಣಿಸುತ್ತದೆ. ವಯಸ್ಸು ಇಪ್ಪತ್ತಾರಾದರೂ ತಾನೇನೂ ಮಹತ್ತಾದ ಕೆಲಸವನ್ನ ಮಾಡಿಲ್ಲ ಅಂತ ಕೊರಗುವ ಯುವಕ , ‘if love is so complex, ಲವ್ ಮನೆ ಹಾಳಾಯ್ತು..’ ಅಂತ ಸಿಟ್ಟಿಗೇಳುವ ವಿಕ್ಷಿಪ್ತ ಪ್ರೇಮಿ, ಜನರ ಸಂತೆಯಲ್ಲಿ ನಿಂತು ನಿಷ್ಠುರವಾಗಿ ಎಲ್ಲವನ್ನೂ ನಿರಾಕರಿಸೋ ಸಂತ, ನನಗೆ ಬೇಕಾದ ಹಾಗೇ ಬದುಕುತ್ತೀನಿ ಯಾರ ಸಹವಾಸವೂ ಬೇಡ ಅಂತ ಧ್ಯಾನಿಯಂತೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಪವರ್ ಟಿಲ್ಲರ್ ಹಿಡಿದು ಗದ್ದೆಯಲ್ಲಿ ಉಳುಮೆ ಮಾಡುವ ರೈತ , ಕೋವಿ ಹಿಡಿದು ಸುಮ್ಮನೆ ಕಾಡಲೆಯುವ ಅಲೆಮಾರಿ… ಬದುಕನ್ನ ಹೀಗೆ ಎಷ್ಟು ಸಾಧ್ಯವೋ ಅಷ್ಟು ಪ್ರಯೋಗಕ್ಕೆ ಒಡ್ಡಿ ಬರದೇ ಬದುಕುತೀನಿ ಅಂತ ಹಠತೊಟ್ಟು ಸಾಧಿಸಿದ ಅವರ ನೂರಾರು ಮುಖಗಳ ಪರಿಚಯ ಆ ಪುಸ್ತಕದಲ್ಲಿ ಸಿಗುತ್ತದೆ.

ಮಲೆನಾಡಿನ ಕಗ್ಗಾಡಿನಿಂದ ಹೊರಟು ವಿಶ್ವಮಾನವ ಸಂದೇಶ ಸಾರುವ ಯುಗದ ಕವಿಯಾಗಿ ಬೆಳೆದ ಕುವೆಂಪು ತಮ್ಮ ಜೀವನದ ತೊಂಬತ್ತು ಭಾಗ ನಗರದಲ್ಲೆ ಕಳೆದರೂ ಕೊನೆಯವರೆಗೂ ಅವರ ಮನಸ್ಸು ಮಾತ್ರ ಮಲೆನಾಡಿನ ಮೊದಲ ಮಳೆಗೆ ನೆನೆಯಲೋ, ಕವಿಶೈಲದ ಕಲ್ಲುಗಳ ಮೇಲೆ ಕೂತು ಆಕಾಶದಲ್ಲಿ ದೇವರು ರುಜು ಮಾಡುವುದನ್ನು ಕಾಣಲು ಸದಾ ತುಡಿಯುತ್ತಿತ್ತು ಅಂತ ಅವರ ಕಾದಂಬರಿಗಳನ್ನ ಪದ್ಯಗಳನ್ನ ಓದಿದರೆ ಅರಿವಾಗುತ್ತದೆ.

ಹೋಗುವೆನಾ ನಾ! ಹೋಗುವೆನು ನಾ! ಮಲೆಯ ನಾಡಿಗೆ, ಮಳೆಯ ಬೀಡಿಗೆ ಅಂತ ಬರೆದು ಹಗುರಾದ ಕುವೆಂಪು ಒಂದರ್ಥದಲ್ಲಿ ಅನಿವಾರ್ಯತೆಗೋ , ಕೆಲಸಕ್ಕೋ, ಊರು ಬಿಟ್ಟು ನಗರಕ್ಕೆ ಬಂದು ಮತ್ತೆ ಊರಿನ ಕಾಡಿನ ಕಾಲು ದಾರಿಗಳನ್ನ ಕನವರಿಸುತ್ತಾ ಬದುಕುವ ನಮ್ಮಲ್ಲೆರನ್ನ ಪ್ರತಿನಿಧಿಸುತ್ತಾರೆ. ಆದರೆ ಅವರ ಮಗನಾಗಿ ಹುಟ್ಟಿದ ತೇಜಸ್ವಿ ಅವರ ನೆರಳಿನಿಂದ, ಪ್ರಭಾವದಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ಹೆಣಗಾಡಿ, ಯಾರ ಮುಲಾಜಿಗೂ ಸಿಕ್ಕದೆ ತಂದೆ ಬಿಟ್ಟು ಬಂದ ಮಲೆನಾಡಿಗೆ ವಾಪಾಸು ಬಂದು ಅವರು ಕನವರಿಸುತ್ತಿದ್ದ ಕಾಲುದಾರಿಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನ ಮೂಡಿಸಿ, ಬೆನ್ನಟ್ಟಿದರೆ ಯಾವ ಕನಸೂ ಮಾಯಾಜಿಂಕೆಯಲ್ಲ ಅಂತ‌ ನಮ್ಮೆಲ್ಲರಿಗೂ ತೋರಿಸಿದ್ದೆ ಅವರ ವ್ಯಕ್ತಿತ್ವದ ಸ್ಫಟಿಕತೆಗೆ ಹಿಡಿದ ಕೈಗನ್ನಡಿ.

ಬದುಕಿನ ಕಠೋರತೆಗೆ ಮುಖಾಮುಖಿಯಾಗಿ ನಿಲ್ಲುವ ತಾಕತ್ತು, ಕನಸುಗಳನ್ನ ಬೆನ್ನಟ್ಟುವ ಗಟ್ ಫೀಲಿಂಗ್, ಬೇಕಾದುದನ್ನ ಪಡದೇ ತೀರುವ ಛಲ, ಕುಲುಮೆಯಲ್ಲಿ ಕಬ್ಬಿಣವನ್ನ ಕಾಯಿಸಿ ಬಡಿಯುವ ಹಾಗೆ ಬದುಕನ್ನ ಕಾಯಿಸಿ ಬಡಿಯುವ ನಿಷ್ಠುರತೆ, ಬದುಕಲ್ಲಿ ತಾನೇನೂ ಮಾಡಬೇಕು ಅನ್ನುವ ನಿಖರತೆ ಮತ್ತು ಖಚಿತತೆ‌,‌ ಎದುರಾಗೋ ವಿಸ್ಮಯಗಳಿಗೆಲ್ಲಾ ಬದುಕನ್ನ ಅಡವಿಡುವ ಪ್ರಯೋಗಶೀಲತೆಯೇ ಅವರ ಬದುಕಿನ ಬರಹದ ಬಂಡವಾಳ.

ಅನ್ನ ತಿನ್ನುವ ನರ‌ಮನುಷ್ಯ ಹೇಗೆ ಬದುಕಬೇಕು ಅಂತ ಬರೆದು ಹಾಗೇ ಬದುಕಿ ತೋರಿಸಿದ ತೇಜಸ್ವಿಗೇ ಕಾರಂತರಂತ ಕಾರಂತರೇ ‘You are a better writer than I am ‘ ಅಂತ ಹೇಳಿದ್ದರಂತೆ. ಹೋಲಿಕೆಗಳಿಗೆ ನಿಲುಕದ,‌ ನಮ್ಮ‌ಸುತ್ತಮುತ್ತಲೆಲ್ಲೂ ಹೋಲಿಕೆಗಳೇ ಇಲ್ಲದಂತ ಘನ ಬದುಕೊಂದನ್ನ ಬದುಕಿದ ತೇಜಸ್ವಿಗೆ ಅವರು‌ ಸಾಹಿತ್ಯದಿಂದಷ್ಟೆ ಅಲ್ಲದೆ ಅವರ ಬದುಕಿನಿಂದಲೂ ಪ್ರಭಾವಕ್ಕೊಳಗಾದ ಸಾವಿರಾರು ಅಭಿಮಾನಿಗಳಿರುವುದು ಆಶ್ಚರ್ಯವೇನಲ್ಲ.

ಒಬ್ಬ ಸೃಜನಶೀಲ ವ್ಯಕ್ತಿ ತನ್ನ ಆಯಸ್ಸಿನ ಅವಧಿಯಲ್ಲಿ ಅಬ್ಬಬ್ಬಾ ಅಂದರೆ ಎರಡು ಮೂರು ಕೆಲಸ ಮಾಡಬಹುದು. ಆದರೆ ತೇಜಸ್ವಿಯವರನ್ನ ಯಾವ ಮಾಧ್ಯಮದ ಮೂಲಕ ಗುರುತಿಸಬೇಕು ಅಂತಲೇ ಕೆಲವೊಮ್ಮೆ ಗೊಂದಲವಾಗುತ್ತದೆ. ಅವರೊಬ್ಬ ಚಿತ್ರಕಲೆಗಾರ, ಸಿತಾರ್ ವಾದಕ, ಜನ ಮೆಚ್ಚಿದ ಲೇಖಕ‌,‌ ವೈಲ್ಡ್ ಲೈಫ್ ಫೋಟೋಗ್ರಾಫರ್, ಕೃಷಿಕ‌,‌ ಪರಿಸರವಾದಿ, ಕೊನೆಯಲ್ಲಿ ಕನ್ನಡ ತಂತ್ರಾಂಶಕ್ಕಾಗಿ ಒಂದಿಷ್ಟು ಸಾಫ್ಟ್‌ವೇರ್ ಇಂಜಿನಿಯರ್ ಗಳನ್ನ ಗುಡ್ಡೆ ಹಾಕಿಕೊಂಡು ಆ ಕೆಲಸವನ್ನು ಮಾಡಿದ್ದಾರೆ, ಅದು ಹತ್ತು ಹದಿನೈದು ವರುಷಗಳ ಹಿಂದೆ !!.

ಮನುಷ್ಯ ಜನ್ಮಕ್ಕಿರುವ ಅನಂತ ಸಾಧ್ಯತೆಗಳನ್ನ ನಮ್ಮಂದೆ ವಿಸ್ತಾರವಾಗಿ ಹರಡಿ ಹೋಗಿರುವ ತೇಜಸ್ವಿ‌ , ಕಲಿಯುವ ಆಸಕ್ತಿ‌,‌ಏಕಾಗ್ರತೆ ಇದ್ದರೆ ಮನುಷ್ಯನಿಗೆ ಯಾವುದೂ ಅಸಾಧ್ಯವಲ್ಲ ಅನ್ನುವುದಕ್ಕೆ‌ ಸಾರ್ವಕಾಲಿಕ ನಿದರ್ಶನ.

ತೇಜಸ್ವಿ ಅವರ ಮನಸನ್ನ ಶಾಶ್ವತವಾಗಿ ಬಚ್ಚಿಟ್ಟುಕೊಂಡಿರುವ ಅವರ ಕೃತಿಗಳನ್ನ ನಮ್ಮ‌ಮುಂದಿನ ತಲೆಮಾರಿಗೂ ದಾಟಿಸಿದರೆ ತೇಜಸ್ವಿ ಇನ್ನೂ ನೂರಾರು ಕಾಲ ನಮ್ಮೋಂದಿಗೇ ಇರುತ್ತಾರೆ. ಚಾರ್ಮಾಡಿ ಘಾಟಿಯ ತಿರುವುಗಳನ್ನ ಬಳಸುವಾಗ, ಕೊಟ್ಟಿಗೆಹಾರದಲ್ಲಿ ದೋಸೆ ತಿನ್ನಲು‌‌ ನಿಂತಿರುವಾಗ, ಮೂಡಿಗೆರೆಯ ಪೇಟೆಯನ್ನ ಸುಮ್ಮನೆ ಮೇಲಿಂದ ಕೆಳಗೆ ಸುತ್ತುವಾಗ, ಅಲ್ಲಿಯ ಹ್ಯಾಂಡ್ ಪೋಸ್ಟ್ ಹತ್ತಿರ ಒಂದೆರೆಡು ನಿಮಿಷ ಸುಮ್ಮನೆ ಏನನ್ನೂ ಯೋಚಿಸದೆ ನಿಂತುಕೊಂಡಿರುವಾಗ ಯಾರಾದರೂ ನೀಲಿ ಬಣ್ಣದ ಜೀನ್ಸ್ ತೊಟ್ಟು, ಬಿಳಿಯಾದ ಕುರುಚಲು ಗಡ್ಡದೊಂದಿಗೆ ಕಾಣಿಸಿಕೊಂಡರೆ ತೇಜಸ್ವಿಯೇ ಇರಬಹುದಾ ಅಂತ ಆಸೆ ಕಂಗಳು ಹುಡುಕಾಡುತ್ತವೆ.

ಜೀವನವನ್ನ ಸುಖಾಸುಮ್ಮನೆ ವಿನಾಕಾರಣ ಪ್ರಾಮಾಣಿಕವಾಗಿ ಪ್ರೀತಿಸಿದ ಜೀವಿಸಿದ ತೇಜಸ್ವಿ ಈ ನಾಡಿನ ಜನಮಾನಸದಲ್ಲಿ ಮೈಲುಗಟ್ಟಲೆ ಹೆಜ್ಜೆ ಗುರುತುಗಳನ್ನ ಬಿಟ್ಟುಹೋಗಿದ್ದಾರೆ. ಆ ಹೆಜ್ಜೆ ಗುರುತುಗಳಲ್ಲಿ ಒಂದೆರೆಡರ ಮೇಲಾದರೂ ನಾವು ಅಂಬೆಗಾಲಿಡುತ್ತ ಮಗ್ಗಲು ಮಗುಚೋಕೆ ಪ್ರಯತ್ನಿಸಿದರೆ ‘ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಒಂದು ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ದಕ್ಕುವಂತಹದಲ್ಲ..’ ಅಂತ ಬರೆದು ಹಾಗೆ ಬದುಕಿ ಹೋದ ಆ ಮಹಾನ್ ದಾರ್ಶನಿಕನಿಗೆ ನಾವು ನೀವು ಸಲ್ಲಿಸುವ ನಿಜವಾದ ಅಭಿಮಾನ ಮತ್ತು ಗೌರವ.

Author: avadhi

2 thoughts on “ಮತ್ತೆ ಮತ್ತೆ ತೇಜಸ್ವಿ..

  1. ಮನಸ್ಸನ್ನ ಹಿಡಿದಿಡುವಂಥ ಲೇಖನ… ಸಚಿನ್ ಅವರ ಬೇರೆ ಬರಹಗಳು ಉಂಟೋ?
    ಚಂದ್ರ ಐತಾಳ, ಲಾಸ್ ಎಂಜಲ್ಸ್

  2. ಸರಳ,ಸಹಜ,ಸುಂದರತೆಯ ಜೊತೆಜೊತೆಗೆ ವಿಶೇಷ,ವಿಭಿನ್ನ,ವಿಶಿಷ್ಟತೆಯ ಪ್ರತಿಮೆ ತೇಜಸ್ವಿಯವರು .ಅಲ್ಲದೇ ನಿಮ್ಮ ಬರಹವೂ ಕೂಡ

Leave a Reply