fbpx

ವಾನಳ್ಳಿಯವರೇ ಉತ್ತರಿಸಬೇಕು..

ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ ನಿರಂಜನ ವಾನಳ್ಳಿ ಅವರ ಮಾತು ಇಲ್ಲಿದೆ.

ಮೂಡಬಿದ್ರಿಯಲ್ಲಿ ಜರುಗಿದ ನುಡಿಸಿರಿಯಲ್ಲಿ ಮಾತನಾಡಿದ ಅವರು ಪತ್ರಕರ್ತನ ವಿಶ್ವಾಸಾರ್ಹತೆಯನ್ನು ಕನ್ಯತ್ವಕ್ಕೆ ಹೋಲಿಸಿದ್ದಾರೆ.

ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಸಾಕಷ್ಟು ಕಾಲ ಪತ್ರಿಕೋದ್ಯಮದ ಉಪನ್ಯಾಸಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರುವ ವಾನಳ್ಳಿ ಅವರ ಸಂವೇದನಾರಹಿತ ಮನಸ್ಸಿನ ಬಗ್ಗೆ ಚರ್ಚೆ ಶುರುವಾಗಿದೆ

ಅವಧಿಯ ಜುಗಾರಿ ಕ್ರಾಸ್ ಇರುವುದೇ ಇಂತಹ ಚರ್ಚೆ/ ಸಂವಾದಕ್ಕೆ ವೇದಿಕೆ ಒದಗಿಸಲು

ಬನ್ನಿ, ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ

ನೇರ ಇಲ್ಲಿಯೇ ಕಾಮೆಂಟ್ ಮಾಡಿ. ಇಲ್ಲವೇ avadhimag@gmail.com ಇಲ್ಲಿಗೆ ಇ ಮೇಲ್ ಮಾಡಿ

ವಿಶ್ವಾಸಾರ್ಹತೆ- ಕನ್ಯತ್ವ ಮತ್ತು ಪುರುಷ ಸಂಹಿತೆಗಳು
ನಾ ದಿವಾಕರ

“ ಆಹಾ ಎಷ್ಟು ಸುಂದರವಾಗಿದೆ ಈ ಭವ್ಯ ಸ್ಮಾರಕ ಶಿಲಾಬಾಲಿಕೆಯಂತೆ ಕಂಗೊಳಿಸುತ್ತಿದೆ ”

“ ಎಂತಹ ನಯವಾದ ಅನುಭವ ಹಾಲುಗೆನ್ನೆಯ ಚೆಲುವೆಯಂತೆ ನವಿರಾಗಿದೆ ”

“ ಹೇಗೆ ನಳನಳಿಸುತ್ತಿದೆ ಈ ಮೂರ್ತಿ ಸಿಂಗರಿಸಿದ ವಧುವಿನಂತೆ ”

-ಇಂತಹ ರೂಪಕಗಳು, ಪ್ರತಿಮೆಗಳು ಸಾಹಿತ್ಯಲೋಕದಲ್ಲಿ ನುಸುಳಿರುವಂತೆಯೇ ಸಾರ್ವಜನಿಕ ಚರ್ಚೆಗಳಲ್ಲೂ ಸಾಕಷ್ಟು ಕಂಡುಬರುತ್ತವೆ. ಇಲ್ಲಿ ಮಹಿಳೆಯ ಸೌಂದರ್ಯ ಮತ್ತು ಪುರುಷ ಸಮಾಜದ ಸೌಂದರ್ಯೋಪಾಸನೆಯ ಪ್ರವೃತ್ತಿಯ ನಡುವಿನ ಸೂಕ್ಷ್ಮ ಕೊಂಡಿಗಳನ್ನು ಗಮನಿಸಬಹುದು.

ಈ ಸೂಕ್ಷ್ಮ ಕೊಂಡಿಗಳು ಭಾವುಕತೆಯ ನೆಲೆಯಲ್ಲಿ ಅಥವಾ ಕಾವ್ಯಾತ್ಮಕ ನೆಲೆಯಲ್ಲಿ ವ್ಯಕ್ತವಾದಾಗ ಅಪ್ಯಾಯಮಾನವೆನಿಸಬಹುದು. ಆದರೆ ಎಲ್ಲೋ ಒಂದುಕಡೆ ಇಂತಹ ಉಪಮೆಗಳು ಮಹಿಳೆಯನ್ನು ಪ್ರತ್ಯೇಕಿಸಿ ನೋಡುವ ಪುರುಷ ಸಂಹಿತೆಯ ಭಾಗವಾಗಿಯೂ ಕಾಣುತ್ತವೆ.

ಮೂಡಬಿದ್ರಿಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯ ಸಂದರ್ಭದಲ್ಲಿ ಡಾ ನಿರಂಜನ್ ವಾನಳ್ಳಿ ಈ ಸಂಹಿತೆಯ ಮತ್ತೊಂದು ವಿಕೃತ ಪರಂಪರೆಯನ್ನು ಪ್ರದರ್ಶಿಸಿ ಪತ್ರಕರ್ತರ ವಿಶ್ವಾಸಾರ್ಹತೆಯನ್ನು ಕನ್ಯತ್ವಕ್ಕೆ ಹೋಲಿಸಿದ್ದಾರೆ.

ಪತ್ರಕರ್ತರು ಒಮ್ಮೆ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡರೆ ಒಮ್ಮೆ ಕಳೆದುಕೊಂಡ ಕನ್ಯತ್ವವನ್ನು ಮರಳಿ ಪಡೆಯುವಷ್ಟೇ ಕಷ್ಟವಾಗುತ್ತದೆ ಎಂದು ಹೇಳುವ ಮೂಲಕ ಮಹಿಳೆಯ ಮೂಲ ಅಸ್ಮಿತೆಯನ್ನೇ ಪ್ರಶ್ನಾರ್ಹವಾಗಿಸಿದ್ದಾರೆ.

ಕನ್ಯತ್ವ ಎಂದರೇನು? ಕನ್ಯತ್ವವನ್ನು ಕಳೆದುಕೊಳ್ಳುವುದು ಎಂದರೇನು? ಮರಳಿ ಪಡೆಯುವುದು ಎಂದರೇನು? ಈ ಮೂರೂ ಪ್ರಶ್ನೆಗಳು ಇಲ್ಲಿ ಪ್ರಸ್ತುತ ಎನಿಸುತ್ತದೆ. ಕನ್ಯತ್ವ ಎನ್ನುವುದು ಜೈವಿಕ ವಿದ್ಯಮಾನವೇ? ಅಥವಾ ಭಾವನಾತ್ಮಕ ಸಂಬಂಧಗಳಲ್ಲಿ ವ್ಯಕ್ತವಾಗುವ ದೈಹಿಕ ವಾಂಛೆಗಳ ಸಂಕೇತವೋ? ಮನುಜ ಸಂಬಂಧಗಳ ಮುಂದುವರಿಕೆಯಲ್ಲಿ ಪುರುಷ ತನ್ನ ಪುರುಷತ್ವ ಕಳೆದುಕೊಳ್ಳುವುದಿಲ್ಲವಾದರೆ ಮಹಿಳೆ ಹೇಗೆ ಕನ್ಯತ್ವ ಕಳೆದುಕೊಳ್ಳುತ್ತಾಳೆ?

ಮಾನವನ ದೇಹದಲ್ಲಿ ಸಂಭವಿಸುವ ಜೈವಿಕ ಪ್ರಕ್ರಿಯೆಗಳಿಗೂ ಕಳೆದುಕೊಳ್ಳುವ ಮತ್ತು ಪುನಃ ಪಡೆದುಕೊಳ್ಳುವ ಅಸ್ಮಿತೆ ಇರುವುದು ಸಾಧ್ಯವೇ? ಹಾಗಿದ್ದರೆ ಮಹಿಳೆಯೇ ಏಕೆ ಕಳೆದುಕೊಂಡು ಪುನಃ ಪಡೆಯುತ್ತಾಳೆ? ಪುರುಷನ ಜೈವಿಕ ಪ್ರಕ್ರಿಯೆಗಳು ಚಿರಸ್ಥಾಯಿ ಎನ್ನಬಹುದೇ? ಶ್ರೀಯುತ ವಾನಳ್ಳಿಯವರು ಇಷ್ಟೊಂದು ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ.

ವಾನಳ್ಳಿಯವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡುತ್ತಲೇ ಅವರ ಅಭಿಪ್ರಾಯದ ಸುತ್ತ ವ್ಯಾಖ್ಯಾನ ಮಾಡಬೇಕಾಗುತ್ತದೆ. ಪದಗಳ ಬಳಕೆಯಲ್ಲುಂಟಾದ ವ್ಯತ್ಯಯಗಳೆಂದು ಈ ಮಾತನ್ನು ನಿರ್ಲಕ್ಷಿಸಲಾಗುವುದಿಲ್ಲ. ಏಕೆಂದರೆ ಇದು ಮೂಲ ಅಸ್ಮಿತೆ ಮತ್ತು ಘನತೆಯ ಪ್ರಶ್ನೆ. ಮೇಲಾಗಿ “ ಕಳೆದುಕೊಳ್ಳುವ ಕನ್ಯತ್ವ ಮತ್ತು ಮರಳಿ ಪಡೆಯಲಾಗದ ಕನ್ಯತ್ವ ” ಈ ಅಭಿಪ್ರಾಯ ವ್ಯಕ್ತಿಗತವಾದದ್ದಲ್ಲ. ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಶತಮಾನಗಳಿಂದ ಬೆಳೆದುಬಂದಿರುವ ಒಂದು ಪ್ರವೃತ್ತಿ.

ಮಹಿಳೆಯನ್ನು ಅಪಮಾನಗೊಳಿಸುವ ಮೂಲಕವೇ ಪುರುಷ ಸಮಾಜದ ಅಹಮಿಕೆಗೆ ಪೆಟ್ಟು ನೀಡುವ ವಿಕೃತ ಪ್ರವೃತ್ತಿಯನ್ನು ರಾಮಾಯಣ, ಮಹಾಭಾರತದಂತಹ ಮಹಾ ಕಾವ್ಯಗಳಲ್ಲೂ ಕಾಣಬಹುದು. ಮರ್ಯಾದಾ ಪುರುಷೋತ್ತಮ ರಾಮನ ದೃಷ್ಟಿಯಲ್ಲಿ ಸೀತೆ ಕುಲಟೆಯಾಗಿ ಕಾಣುತ್ತಾಳೆ, ಕೇವಲ ಲಕ್ಷ್ಮಣನನ್ನು ಮೋಹಿಸಿದ ಕಾರಣಕ್ಕೆ ಶೂರ್ಪನಖಿ ವಿಕಾರ ಸ್ವರೂಪಿಯಾಗುತ್ತಾಳೆ, ಪಾಂಡವ ಕೌರವರ ಪ್ರತಿಷ್ಠೆಯ ಕಣದಲ್ಲಿ ಪಾಂಚಾಲಿ ಪಗಡೆಯ ದಾಳವಾಗುತ್ತಾಳೆ. ಈ ಎಲ್ಲ ಪ್ರಸಂಗಗಳಲ್ಲಿ ಪುರುಷ ಸಮಾಜ ತನ್ನ ಸಾಂಸ್ಕøತಿಕ ಅಧಿಪತ್ಯ ಸಾಧಿಸಲು ಮಹಿಳೆಯನ್ನು ಪ್ರತ್ಯೇಕಿಸಿ ಉಪಮೆಯಂತೆ ಬಳಸುವುದನ್ನು ಕಾಣಬಹುದು. ಇದು ಇತಿಹಾಸ ಅಲ್ಲದಿದ್ದರೂ ವಾಸ್ತವ ಪ್ರಪಂಚ ಸತ್ಯವನ್ನು ಬಿಂಬಿಸುವ ಕವಿಸೃಷ್ಟಿ ಎನ್ನಬಹುದು.

ಆಧುನಿಕ ಸಮಾಜವೂ ಈ ವಿಕೃತ ಭಾವನೆಗಳಿಂದ ಹೊರತಾಗಿಲ್ಲ. ಭಾರತದ ಯಾವುದೇ ಭಾಷೆಯ ಚಲನಚಿತ್ರಗಳನ್ನು ವೀಕ್ಷಿಸಿದಾಗ ಒಂದು ವಿದ್ಯಮಾನ ಸಮಾನ ಎಳೆ ಹೊಂದಿರುವುದನ್ನು ಕಾಣಬಹುದು. ಚಿತ್ರದ ನಾಯಕನಿಗೆ ಪಾಠ ಕಲಿಸಲು ವಿಲನ್ ಆದವನು ಕೈಗೊಳ್ಳುವ ಮೊದಲ ಹೆಜ್ಜೆ ನಾಯಕನ ಮನೆಯ ಮಹಿಳೆಯ ಮೇಲೆ ಅತ್ಯಾಚಾರ ಎಸಗುವುದು.

ಇದು ಕಮರ್ಷಿಯಲ್ ಚಿತ್ರದ ಸೂತ್ರ ಎನ್ನಬಹುದಾದರೂ, ಮಹಿಳೆಯ ಘನತೆ ಮತ್ತು ಅಸ್ತಿತ್ವವನ್ನು ನಾಶಪಡಿಸುವ ಮೂಲಕ ಪುರುಷ ಸಮಾಜದ ಅಹಮಿಕೆಗೆ ಧಕ್ಕೆ ಉಂಟುಮಾಡುವ ಮನೋಭಾವವೇ ಅನಾಗರಿಕ ಎನಿಸುವುದಲ್ಲವೇ ? ಸಿನಿಮಾ ಪರದೆಯ ಮೇಲೆ ಮಹಿಳೆಯ ಮೊಣಕಾಲು ಕಂಡು ತನ್ನ ಚಾಂಚಲ್ಯವನ್ನು ಕಳೆದುಕೊಂಡು ಹಪಹಪಿಸುವ ಪುರುಷನಿಗೆ ಮಹಿಳೆಯೇ ಚಂಚಲ ಚಿತ್ತಳಾಗಿ ಕಾಣುವುದೂ ಈ ಅನಾಗರಿಕ ಸಂಸ್ಕೃತಿಯ ಒಂದು ಸ್ವರೂಪ ಅಲ್ಲವೇ? ಪರದೆಯ ಮೇಲೆ ಅತ್ಯಾಚಾರಕ್ಕೊಳಗಾಗುವ ಮಹಿಳೆ ಸಿನಿಮಾ ವೀಕ್ಷಿಸುವ ಪುರುಷರಿಗೆ ಮನರಂಜನೆಯ ವಸ್ತುವಾಗುತ್ತಾಳೆಯೇ ಹೊರತು ಅನುಕಂಪಕ್ಕೆ ಅರ್ಹವಾದ ಜೀವ ಎನಿಸುವುದಿಲ್ಲ, ಏಕೆ ಹೀಗೆ ?

ವಾನಳ್ಳಿಯವರು ಹೇಳಿದಂತೆ ಮಹಿಳೆ ತನ್ನ ಕನ್ಯತ್ವವನ್ನು ಯಾವ ಸಂದರ್ಭದಲ್ಲಿ ಕಳೆದುಕೊಳ್ಳಲು ಸಾಧ್ಯ? ಒಂಟಿ ಮಹಿಳೆಯನ್ನು ಕಂಡ ಕೂಡಲೇ ಕನ್ಯತ್ವದ ಬಗ್ಗೆ ಹುಸಿ ಕನಸುಗಳನ್ನು ಕಾಣಲಾರಂಭಿಸುವ ಪುರುಷ ಸಮಾಜಕ್ಕೆ ಕನ್ಯತ್ವ ಎನ್ನುವುದು ಮಾನವ ಸಹಜ ಜೈವಿಕ ಪ್ರಕ್ರಿಯೆಗಳಲ್ಲಿ ಅಡಗಿದೆಯೋ ಅಥವಾ ಮಹಿಳೆಯ ಅಸ್ಮಿತೆಯಲ್ಲಿ ಅಡಗಿದೆಯೋ ವಾನಳ್ಳಿಯವರೇ ಉತ್ತರಿಸಬೇಕು.

ಮದುವೆಯಾದ ಮೊದಲ ರಾತ್ರಿಯೇ ಮಹಿಳೆ ತನ್ನ ಕನ್ಯತ್ವ ಕಳೆದುಕೊಳ್ಳುತ್ತಾಳೆಯೇ ಅಥವಾ ತನ್ನ ಪತಿಯೊಡನೆ ಧರ್ಮಪತ್ನಿಯಂತೆ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ಬಾಳುವ ಗರತಿ ತನ್ನ ಕನ್ಯತ್ವವನ್ನು ಉಳಿಸಿಕೊಳ್ಳಲು ಸಾಧ್ಯವೇ? ಈ ನೆಲೆಯಲ್ಲಿ ನೋಡುವಾಗ ಕನ್ಯತ್ವ ಎಂಬ ಪದವೇ ಪ್ರಶ್ನಾರ್ಹವಾಗುತ್ತದೆ. ವೈವಾಹಿಕ ಸಂಬಂಧದಲ್ಲಿ ಮಹಿಳೆ ಕಳೆದುಕೊಳ್ಳುವುದನ್ನು ಪುರುಷ ಏಕೆ ಕಳೆದುಕೊಳ್ಳುವುದಿಲ್ಲ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ ಅಲ್ಲವೇ ?

ಪುರುಷತ್ವ ಎಂಬ ಪದವನ್ನು ಪೌರುಷದ ನೆಲೆಯಲ್ಲಿ ಅಥವಾ ಅಧಿಪತ್ಯದ ನೆಲೆಯಲ್ಲಿ ವ್ಯಾಖ್ಯಾನಿಸುವ ಪುರುಷ ಸಮಾಜ ಕನ್ಯತ್ವ ಎಂಬ ಪದವನ್ನು ದೈಹಿಕ ರಚನೆ ಮತ್ತು ಜೈವಿಕ ಪ್ರಕ್ರಿಯೆಗಳ ನೆಲೆಯಲ್ಲಿ ಪರಿಭಾವಿಸುವುದು ದುರಂತ ಅಲ್ಲವೇ?

ವಾನಳ್ಳಿಯವರು ಹೇಳುವಂತೆ ಪತ್ರಕರ್ತರು ಸಾರ್ವಜನಿಕರ ವಿಶ್ವಾಸಾರ್ಹತೆ ಕಳೆದುಕೊಳ್ಳುವುದು ಎಂದರೆ ತಮ್ಮ ವೃತ್ತಿಪರತೆಯನ್ನು ಕಳೆದುಕೊಳ್ಳುವುದು ಎಂದರ್ಥ ಅಥವಾ ತಮ್ಮ ನೈತಿಕ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸದೆ ಇರುವುದು ಎಂದರ್ಥ. ಈ ಕಳೆದುಕೊಳ್ಳುವ ಪ್ರಕ್ರಿಯೆಯನ್ನು ಕಳೆದುಕೊಳ್ಳುವ ಕನ್ಯತ್ವಕ್ಕೆ ಹೋಲಿಸುವುದು ಎಂದರೆ ಏನರ್ಥ ?

ನಿಸರ್ಗ ಸೃಷ್ಟಿಯ ಸಹಜ ಪ್ರಕ್ರಿಯೆಯನ್ನು ಇಡೀ ವ್ಯಕ್ತಿತ್ವಕ್ಕೆ ಆರೋಪಿಸಿ ಒಂದು ಜೀವದ ದೈಹಿಕ ಅಸ್ಮಿತೆಯನ್ನು ವೈಭವೀಕರಿಸುವುದೇ? ಸೃಷ್ಟಿ ಲಯದ ಪ್ರಕ್ರಿಯೆಯಲ್ಲಿ ಎಲ್ಲ ನೋವು ಸಂಕಷ್ಟಗಳನ್ನೂ ತನ್ನ ಒಡಲೊಳಗೇ ಹುದುಗಿಸಿಕೊಂಡು ಜೀವಪರತೆಯನ್ನು ಕಾಪಾಡಿಕೊಂಡು ಬರುವ ಮಹಿಳೆ ಪುರುಷ ಸಮಾಜದ ದೃಷ್ಟಿಯಲ್ಲಿ ಏಕೆ ಹುಡುಕಾಟದಲ್ಲಿ ತೊಡಗಿರುವವರಂತೆ ಕಾಣುತ್ತಾರೆ ? ಮಹಿಳೆ ಏನನ್ನೂ ಕಳೆದುಕೊಳ್ಳುವುದಿಲ್ಲ. ಆದರೆ ಪುರುಷ ಸಮಾಜದ ಅಧಿಪತ್ಯದಲ್ಲಿ ಏನನ್ನೋ ಕಳೆದುಕೊಂಡಂತೆ ಕಾಣುತ್ತಾಳೆ. ಇದರಲ್ಲಿ ಕನ್ಯತ್ವವೂ ಒಂದು.

ಪುರುಷತ್ವ ಚಿರಂತನ ಕನ್ಯತ್ವ ತಾತ್ಕಾಲಿಕ ಎನ್ನುವ ವಿಕೃತ ಮನೋಭಾವ 21ನೆಯ ಶತಮಾನದಲ್ಲೂ ಕಂಡುಬರುವುದು ದುರಂತವೇ ಸರಿ.

3 Responses

 1. Sumangala says:

  ” ಮಾನವನ ದೇಹದಲ್ಲಿ ಸಂಭವಿಸುವ ಜೈವಿಕ ಪ್ರಕ್ರಿಯೆಗಳಿಗೂ ಕಳೆದುಕೊಳ್ಳುವ ಮತ್ತು ಪುನಃ ಪಡೆದುಕೊಳ್ಳುವ ಅಸ್ಮಿತೆ ಇರುವುದು ಸಾಧ್ಯವೇ? ಹಾಗಿದ್ದರೆ ಮಹಿಳೆಯೇ ಏಕೆ ಕಳೆದುಕೊಂಡು ಪುನಃ ಪಡೆಯುತ್ತಾಳೆ? ಪುರುಷನ ಜೈವಿಕ ಪ್ರಕ್ರಿಯೆಗಳು ಚಿರಸ್ಥಾಯಿ ಎನ್ನಬಹುದೇ?” – ತುಂಬ ಮೂಲಭೂತವಾದ ಪ್ರಶ್ನೆಗಳನ್ನು ಎತ್ತಿದ್ದೀರಿ… ಥ್ಯಾಂಕ್ಸ್!

 2. Sarojini Padasalgi says:

  ಕಳೆದು ಕೊಳ್ಳುವ ಪ್ರಕ್ರಿಯೆ ಬರೀ ಹೆಣ್ಣಿಗೆ ಮಾತ್ರ ಸೀಮೀತವೇ? ಈ ಪ್ರಶ್ನೆಗೆ ವಾನಳ್ಳಿ ಯವರೇ ಉತ್ತರಿಸಬೇಕು.ಏನು ಹೇಳ್ತಿದೀರಿ ಮೇಷ್ಟ್ರೇ, ಕನ್ಯತ್ವಕ್ಕೂ ಪತ್ರಕರ್ತನ ವಿಶ್ವಾಸಾರ್ಹತೆಗೂ ಎಲ್ಲಿಂದೆಲ್ಲಿಯ ಸಂಬಂಧ?ಆ ಶೀಲ, ಮರ್ಯಾದೆ ಸಚ್ಚಾರಿತ್ರ್ಯ ಬರೀ ಹೆಣ್ಣಿಗೇನಾ? ಕನ್ಯತ್ವದ ರಕ್ಷಣೆಯೇ ವಿಶ್ವಾಸದ ನಂಬಿಕೆಯ ಅಳತೆಗೋಲಾ? ಹಾಗಾದರೆ ಗಂಡಿಗೇಕೆ ಈ ಅಳತೆಗೋಲಿಲ್ಲ?? ಅದು ಬರೀ ಹೆಣ್ಣಿಗೆ ಹಾಕಿದ ದಿಗ್ಬಂಧನವೆ?ನಿಜ, ಸೃಷ್ಟಿ ಅದರ ಗುರುತನ್ನು ಹೆಣ್ಣಿನ ಬಳಿ ಬಿಡ್ತದೆ.ಗಂಡಿನ ಬಳಿ ಆ ಸಾಕ್ಷಿ ಪುರಾವೆ ಇಲ್ಲ ಅಂತ ಈ ಥರದ ಅಲ್ಲ ಸಲ್ಲದ ಮಾತೇ?? ಸ್ತ್ರೀ ಸ್ವಾತಂತ್ರ್ಯ ಸಮಾನತೆ ಅಂತ ಹೋರಾಡುವ ಪ್ರಜ್ಞಾವಂತ ಸಮಾಜವೇ ಬೈಗುಳ, ಮೂದಲಿಕೆ, ಅಸಭ್ಯ,ಅಸಹ್ಯ ಮಾತುಗಳಿಗೆ ಹೆಣ್ಣನ್ನೇ ಗುರಿ ಮಾಡುವುದು ಯಾಕೆ?? ನಿಮ್ಮ ಹುಟ್ಟು ಆ ಹೆಣ್ಣಿನ ಮಡಿಲಲ್ಲೇ ಎಂಬ ಸತ್ಯದ ಅರಿವು ಆಗುವುದು ಯಾವಾಗ? ಜೈವಿಕ ಬದಲಾವಣೆ ಇಬ್ಬರಲ್ಲೂ ಎಂದು ತಿಳಿಯುವುದು ಯಾವಾಗ?ಗಂಡಿನ ಪ್ರತಿ ತಪ್ಪಿಗೆ ಹೆಣ್ಣನ್ನೇ ಹೊಣೆ ಮಾಡುವ ಪ್ರವೃತ್ತಿ ನಿಲ್ಲುವುದು ಎಂದು??
  ಪ್ರತಿಷ್ಠಿತ ವೇದಿಕೆಯಿಂದ ಮಾತನಾಡುವಾಗ ಪ್ರಾಧ್ಯಾಪಕ ಬೋಧಕರಂಥ ಕಣ್ತೆರಿಸುವ ವೃತ್ತಿಯ ಲ್ಲಿರುವವರೇ ಹೀಗೆ ಬೇಜವಾಬ್ದಾರಿ ಹೇಳಿಕೆ, ಮಾತು ಆಡಿದರೆ ಏನು ಹೇಳಬೇಕು ಅರಿಯದು.ಶಿಕ್ಷಿತರು, ವಿಚಾರವಂತರು ಎನಿಸಿಕೊಂಡವರು ಸ್ವಲ್ಪ ವಿವೇಚನೆಯಿಂದ,ಸಾರಾಸಾರ ವಿಚಾರ ವಂತಿಕೆ ಉಳಿಸಿಕೊಂಡು, ಎಲ್ಲಾ ನಿಂದನೆ ಗೂ ಹೆಣ್ಣನ್ನೇ ಗುರಿ ಮಾಡುವ ಪ್ರವೃತ್ತಿ ಯನ್ನು ಬದಲಾಯಿಸಿ ಕೊಂಡರೆ ಒಳಿತು.ಸ್ತ್ರೀಪರ ಹೋರಾಟಕ್ಕೆ ಒಂದು ಅರ್ಥ ಸಿಕ್ಕೀತು ಆಗ.
  ಸರೋಜಿನಿ ಪಡಸಲಗಿ

 3. Vijayaraghavan Ramakumar says:

  ಏನಾಗಿದೆ ಅಂದರೆ ನಮ್ನ upbringing ನಲ್ಲಿ ಇರುವ ದೋಷಗಳು ವ್ಯಕ್ತಿಯ ಎಲ್ಲಾ ಚಹರೆಗಳ ಸ್ವರೂಪವನ್ನು ರೂಪಿಸುತ್ತವೆ. ಹಾಗಾಗಿ ಮಾತು ಅದೇ ಮಾದರಿಯಲ್ಲಿ ಮನಸ್ಸಿನಲ್ಲಿ ಮೂಡಿ ಬರುತ್ತದೆ. ಎಚ್ಚರ ತಪ್ಪಿದ ಮಾತಲ್ಲ. ರೂಪುಗೊಂಡ ಮನಸ್ಸಿನ ಅಭಿವ್ಯಕ್ತಿ.

Leave a Reply

%d bloggers like this: