fbpx

‘ಕಾವ್ಯ ಮನೆ’ಯ ಪೀನಟ್ ಮಸಾಲಾ

ಕಾವ್ಯ ಮನೆ ಪ್ರಕಾಶನ, ಕಲಬುರಗಿ – 2017
ಕಥೆಗಾರರಿಂದಲೇ ಕಥಾಸ್ಪರ್ಧೆ – 2017ರ ಫಲಿತಾಂಶ

ಕನ್ನಡದ ಕಥೆಗಾರರಾದ ಕೇಶವ ಮಳಗಿ, ಬಾಳಾಸಾಹೇಬ ಲೋಕಾಪುರ, ಚೀಮನಹಳ್ಳಿ ರಮೇಶಬಾಬು ಅವರು ಸೇರಿ ‘ಕಾವ್ಯ ಮನೆ’ ಮೂಲಕ ಮಾಡಿದ ಈ ವಿಭಿನ್ನ ಪ್ರಯತ್ನದ ಸ್ಪರ್ಧೆಗೆ 350ಕ್ಕಿಂತಲೂ ಹೆಚ್ಚು ಕಥೆಗಳು ಬಂದಿದ್ದವು,

ಅಂತಿಮವಾಗಿ ಬಾಳಾಸಾಹೇಬ ಲೋಕಾಪುರವರು ಆಯ್ಕೆ ಮಾಡಿ ಫಲಿತಾಂಶ ನೀಡಿದ್ದಾರೆ.

ಈ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಎಲ್ಲಾ ಕಥೆಗಳನ್ನೂ ಅವಧಿಯಲ್ಲಿ ಪ್ರಕಟಿಸಲಾಗುವುದು 

ಇಲ್ಲಿರುವುದು ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ 

ಹೇಮಲತಾ ಪಿ

ಪೀನಟ್ ಮಸಾಲಾ …ಪಬ್ ಅಂಡ್ ರೆಸ್ಟೋರೆಂಟ್
ನನಗೆ ಕುಡಿಯೋ ಅಭ್ಯಾಸ ಇರಲಿಲ್ಲ.ಅವನು ಬೀರ್ ಅಷ್ಟೆ ಹೀರುತ್ತಿದ್ದ,ಅದು ವಾರಾಂತ್ಯಗಳಲ್ಲಿ.ಆದರೆ ನಮಗೆ ಪರಸನಲ್ ಸ್ಪೇಸ್ ಬೇಕಿತ್ತು.

ಪಾರ್ಕ್  ಅಂತ ಬೆಳಕಲ್ಲಿ ಹೋಗಿ ಕೂರೋಕೆ ಆಗ್ತಿರಲಿಲ್ಲ. ಒಂಥರ ಚೀಪ್ ಅನಿಸೋ ಭಾವ .ಅವನೇ ಅಂದಿದ್ದು “ಪಬ್ ನಲ್ಲಿ ಕೂರೋಣ, ನಾ ಬೀರ್ ಹೊಡಿತೀನಿ ನೀನು ಏನಾದ್ರು ತಿನ್ನು.ಗೆಳೆಯರ ಜೊತೆ ವಾರಕ್ಕೊಂದು ಸಾರಿ  ಬೀರ್ ಏರಿಸಿಕೊಳ್ಳಲಿಲ್ಲ  ಅಂದ್ರೆ ಪೂರ್ತಿ ವಾರದ ಕೆಲಸದ ಒತ್ತಡ ರಿಲ್ಯಾಕ್ಸ್ ಆಗಲ್ಲ.ನಿನಗೆ ಅಭ್ಯಂತರವಿಲ್ಲ ತಾನೆ?”
“not at all….
ಹೇ ನಾನು try ಮಾಡಲ?”
“ಮಾಡು..”
“ಬೀರ್ ಬಹಳ  ಸಪ್ಪೆ..ತುಂಬಾ ಕುಡಿಬೇಕು..ಸಾದ್ಯ ಆಗಲ್ವೋ ನಂಗೆ..”
“ಹಾಗಿದ್ರೆ ವೋಡ್ಕ try ಮಾಡು,ಹುಡುಗಿಯರು ಇದನ್ನೆ ತಗೋಳೋದು”
ಹೀಗೆ ಶುರುವಾಗಿದ್ದು..

ಪ್ರೇಮ ಅನ್ನೋದೆ ಅಮಲು. ಆ ಅಮಲಿನ ಜೊತೆಗೆ  ಕುಡಿತದ ಅಮಲೂ ಸೇರಿಕೊಂಡರೆ ?
ತಲೆ ಸಣ್ಣಗೆ ಜುಮ್ ಅನ್ನೋದು, ನಿದಿರೆಯ ಮಂಪರು…ವಾಸನೆ ಓಕೆ ಆದರೆ ರುಚಿ ಹಿಡಿಸುತ್ತಿರಲಿಲ್ಲ . ಕಹಿ,ಒಗರು.. ಬೇಗ ಮುಗಿದೋಗಲಿ ಅಂತ ಒಂದೆರಡೆ ಗುಕ್ಕಿಗೆ ಮುಗಿಸಿಬಿಡುತ್ತಿದ್ದೆ .

“ಲೇ ಹಾಗಲ್ವೆ ಕುಡಿಯೋದು, ನಿಧಾನವಾಗಿ ಸಿಪ್ ಬೈ ಸಿಪ್ ತಗೋಬೇಕು..ನಿಧಾನವಾಗಿ ನಶೆ ಏರಬೇಕು..ಆಗ ಜಾಸ್ತಿ ಹೊತ್ತು ಉಳಿಯುತ್ತೆ… ಬೀರ್ ಮುಗಿಸೋಕೆ ನನಗೆ ಬಹಳ ಸಮಯ ಹಿಡಿಯುತ್ತೆ..ನೀನು ಹೀಗೆ  ಒಂದೇ ಗುಕ್ಕಿಗೆ ಮುಗಿಸಿದರೆ ಆಮೇಲೆ ಏನ್ಮಾಡ್ತಿಯ..?”
“ಸರಿ ಇನ್ನೊಂದು ಹೇಳು..”
“ಬೇಡ ಕಣೇ, ವಾಂತಿ ಆಗುತ್ತೆ”
“ಇಲ್ವೋ ನಾನು strong..ಇವತ್ ನನ್ನ ಲಿಮಿಟ್ ಎಷ್ಟು ಚೆಕ್ ಮಾಡ್ತಿನಿ..experiment ಗೆ ಒಡ್ಡಿಕೊಳ್ಳಬೇಕೋ ನಮ್ಮನ್ನ ನಾವು, ಮಿತಿಗಳ ಮೀರುತ್ತ. ದಾಟುತ್ತಾ…”

ಬದುಕಲ್ಲಿ ಆಗಿಂದಾಗೆ  ಸ್ಥಿಮಿತ ತಪ್ಪಬೇಕು.ಒಂದೇ ವೇಗದಲ್ಲಿ, ಒಂದೇ ದಾಟಿಯಲ್ಲಿ ಅದಾಗಲೇ ನಿಷ್ಕರ್ಷವಾದ ದಾರೀಲಿ ನಡೆಯೋದು ಬಹಳ ಬೋರು. ಬಿಸಿ ಏರಬೇಕು,ಉಕ್ಕಬೇಕು, ಚೆಲ್ಲಿ ಮಿಕ್ಕಬೇಕು ,ಇನ್ನೊಮ್ಮೆ ಅಭಾವದಲ್ಲಿ ನರಳಿ, ಕುದ್ದು,ಉಳಿಯಬೇಕು;ಸವಾಲುಗಳು ಇದ್ದರೇನೇ ಬದುಕು ಸೊಗಸು . ನಾನು ಹುಟ್ಟುಹೋರಾಟಗಾರ್ತಿ.

ಎಲ್ಲರೊಳಗೊಂದಾಗಿ ಎಲ್ಲರಂತೆ ಬದುಕಿ ಮುಗಿಸಲ್ಲ ! ನನ್ನೊಳಗಿನ ದನಿಗಳು ಸ್ಪಷ್ಟ ಮತ್ತು ವಿಭಿನ್ನ. ಹಾಗೆ ನೋಡಿದರೆ  ಕುಡಿದ ಮೇಲೆ ಮಾತಲ್ಲಿ ಇಬ್ಬರು ಸಭ್ಯರೆ .ಫಿಲಂನಲ್ಲಿ ತೋರಿಸಿದ ಹಾಗೆ ತೂರಾಡುತ್ತ ,ತೊದಲುತ್ತಾ  ಏನೇನೋ ಮಾತಾಡುತ್ತಿರಲಿಲ್ಲ .ತುಂಬಾ  ಕಡಿಮೆ ಮಾತಾಡುವ ಅವನು ಮತ್ತಿನಲ್ಲಾದರೂ  ಮನಸು ಬಿಚ್ಚುತ್ತಾನ ಅನ್ನೋ ಆಸೆ.
ಕಣ್ಣುಗಳು ಮದಿರೆಯ ಹನಿಯೊಂದನ್ನ ತಾನೆ ಹೀರಿದಂತೆ ತುಂಬಿ ನೀರಾಡುತ್ತಿದ್ದವು ..ಎವೆ ಇಕ್ಕದೆ ಅವನನ್ನೆ ನೋಡುತ್ತಿದ್ದೆ..ಕಣ್ಣಲ್ಲಾದರೂ  ಗುಟ್ಟು ಬಿಟ್ಟು ಕೊಡುತ್ತಾನಾ ಅಂತ..ಊಹುಂ.. ನೋಡುತ್ತಾ  ನೋಡುತ್ತಾ ಮುದ್ದಿಸಬೇಕು ಅನ್ನೋ ಅಕ್ಕರೆ ಉಕ್ಕುತ್ತಿತ್ತು..

ಅವನಿಗೆ ಸಂದೇಶ ತಲುಪಿರುತ್ತಿತ್ತು,ಏನೊಂದು ಹೇಳದೆ,ಏನೊಂದು ಕೇಳದೆ ಆ ಕಡೆ ಈ ಕಡೆ ನೋಡಿ ಯಾರು ಇಲ್ಲದ್ದು ಖಾತ್ರಿ ಪಡಿಸಿಕೊಂಡು ಜಗ್ಗಿ,ಒರಟೊರಟಾಗಿ ತಬ್ಬಿ ತುಟಿಗೆ ತುಟಿ ಸೇರಿಸಿಬಿಡುತ್ತಿದ್ದ.ಇನ್ನೂ ಬಾಯಲ್ಲಿ ಉಳಿದಿರುತ್ತಿದ್ದ ವೋಡ್ಕಾದ ಹನಿಗಳನ್ನ ಹೀರಿ ಕಣ್ಣು ಮಿಟುಕಿಸಿ ಎಲ್ಲದ್ದಕ್ಕಿಂತ ಈ cocktail ರುಚಿ ಇದೆ ಕಣೇ  ಅನ್ನುತ್ತಿದ್ದ..ನಾ ನಾಚುತ್ತಿದ್ದೆ.

ಇನ್ನಷ್ಟು ನೀರಾಗಿ ಹರಿದು ನಗುತ್ತಿದ್ದೆ.ಮತ್ತವನು ಮತ್ತಷ್ಟಕ್ಕೆ ಚಾಚುತ್ತಿದ್ದ…ಅಪ್ಪ ಕುಡಿದು ಬಂದಾಗ ವಾಸನೆ ಅಂತ ಮೂಗು ಮುರಿತಿದ್ಲು ಅಮ್ಮ..ಬಹುಶ ಎಲ್ಲಾ ಸಂಸಾರಸ್ಥ ಹೆಣ್ಣುಗಳು ಹಾಗೆ ಮೂಗು ಮುರಿದಿರಬೇಕು .

ಸಂಪ್ರದಾಯದ ನಿಯಮ ಎಂಬಂತೆ. ನಾ ಮಾತ್ರ ಆಸ್ವಾದಿಸುತ್ತಿದ್ದೆ..ಅವನ ಉಸಿರು ಅದರಲ್ಲಿ ಬೆರೆತಿರುತ್ತಿತ್ತು ಅನ್ನೋ ಕಾರಣಕ್ಕೆ.ಅವನ ಭಾವ ತೀವ್ರವಾಗುತ್ತಿತ್ತು ಅನ್ನೋ ಉನ್ಮಾದಕ್ಕೆ . ಅವನ ಬೆರಳುಗಳಲ್ಲಿ ಚಡಪಡಿಕೆ .ಇಂಚಿಂಚೆ ಸರಿದಾಡುತ್ತಿದ್ದರೆ  ಮೈಯಲ್ಲಿ ರಂಗೋಲಿ ಬಿಡಿಸುತ್ತಿರುವ ರೋಮಾಂಚನ..ತಿರುವು,ಆಳ,ಕಂದರಗಳಲ್ಲಿ  ತೀಕ್ಷ್ಣವಾಗುತ್ತ ಹಾತೊರೆಯುತ್ತಿದ್ದರೆ  ಬೇರೆಬೇರೆ ಬಣ್ಣಗಳಲ್ಲಿ ಅದ್ದಿ ಎಳೆದ ಉದ್ದ,ದಪ್ಪ,ಸಣ್ಣ ಗೆರೆಗಳ ಚಿತ್ತಾರ.ಕಲಾವಿದ ಕುಂಚದಲ್ಲಿ ಹೂವು ಬಿಡಿಸುತ್ತಿದ್ದರೆ, ಜೀವ ಪಡದುಕೊಂಡ ಮೊಗ್ಗು ಅವನನ್ನೆ ಸೂರ್ಯ ಅಂತಂದುಕೊಂಡು ನಿಸರ್ಗದತ್ತವಾಗಿ ಅರಳುತ್ತಿದ್ದವು.

ಕೆಲವೊಮ್ಮೆ ಇದ್ದಕ್ಕಿದ್ದ ಹಾಗೆ ಯಾರೋ ಬಂದು ಬಿಡುತ್ತಿದ್ದರು .ಮತ್ತೇನಾದ್ರು ಬೇಕಾ ಕೇಳೋದಕ್ಕೆ  ಬೇರರ್ ಬರುತ್ತಿದ್ದ  .. ಮುಜುಗರವಾಗುತ್ತಿತ್ತು .ನಿರ್ಲಕ್ಷಿಸುತ್ತಿದ್ವಿ,ಯಾರು ಮಾಡದೆ ಇರೋದಾ?200-300ರೂ ಬೆಲೆಯುಳ್ಳದ್ದಕ್ಕೆ ಸಾವಿರ ಎರಡು ಸಾವಿರ ತೆತ್ತು ಬರುತ್ತೀವಲ್ಲ , ಅಷ್ಟಕ್ಕಾದರು ಅವರು ಅನುವು ಮಾಡಿಕೊಡಬೇಕು.ಪಬ್ಬಿನ ಜನ ಸಭ್ಯ.  ಎಲ್ಲರೂ  ಖದೀಮರೆ ಆದಾಗ ಕಳ್ಳತನಕ್ಕೆ ಅನುವು .ನೋಡಿದ್ದು ನೋಡದ ಹಾಗೆ ಹೋಗಿಬಿಡುತ್ತಿದ್ದರು , ಡಿಸ್ಟರ್ಬ್ ಮಾಡಬಾರದು ಅನ್ನೋ ಕಾಳಜಿ ಇರುತ್ತಿತ್ತು ..
ನಶೆ ಇಳಿದ ಮೇಲೆ ಇಬ್ಬರು ಗಾಬರಿಯಾದ್ದದ್ದಿದೆ cctv ಕ್ಯಾಮಾರದಲ್ಲಿ  ಸೆರೆ ಆಗಿದ್ದರೆ?
“ಮಬ್ಬಿರುತ್ತೆ ಬಿಡೆ, ಏನು ತೋರಲ್ಲ..” ಸಮಾಧಾನಿಸುತ್ತಿದ್ದ..
ಇವೆಲ್ಲ ಇರುಸುಮುರುಸು ಅನಿಸಿದಾಗ “ವೆಕೇಷನ್ ಗೆ ಹೋಗಿಬಿಡೋಣ ಕಣೇ ಎಲ್ಲಾದರೂ ದೂರ” ಅನ್ನುತ್ತಿದ್ದ …….

ಅವಳು ನಿರಾಕರಿಸಬಹುದಿತ್ತು, ನಾನು ಅಪರಾಧ ಮಾಡುತ್ತಿದ್ದೇನೆ ಅನಿಸಿದ್ದಿದ್ದರೆ .ಪ್ರೀತಿ ಪ್ರೇಮ ಏನೇನೋ ವಿಷಯಗಳನ್ನು ತಲೆತುಂಬಾ ,ಎದೆತುಂಬಾ ತುಂಬಿಕೊಂಡಿರುತ್ತಿದ್ದಳು. ಹೆಚ್ಚೆಚ್ಚು ಕಥೆ ಕಾದಂಬರಿಗಳನ್ನ ಓದಿಕೊಂಡಿದ್ದರಿಂದಲೋ ಏನೋ ಸನ್ನಿವೇಶವನ್ನ ಸದಾ ರೊಮ್ಯಾಂಟಿಸೈಜ್ ಮಾಡುತ್ತಿದ್ದಳು. ನಾನು ತುಂಬಾ ಪ್ರಾಕ್ಟಿಕಲ್ ಹಾಗೂ ಗಂಡಸು .ಕೆಲವೊಮ್ಮೆ ಅಸ್ವಾಭಾವಿಕ  ಆನಿಸಿದರೂ ಒಂತರ ಮಜ ಬರುತ್ತಿತ್ತು . ಭಾನುವಾರದ ಬ್ಯಾಚುಲರ್ ತೊಳಲಾಟಗಳಿಗೆ ಯಾವುದಾದರೂ ಮತ್ತೇರಿಸುವ ಫೋಟೋ ಸಾಕು ಅಂತ ನನ್ನ ಪಾಡಿಗೆ ನಾನಿದ್ದೆ. ಕಲ್ಪನೆ ಮತ್ತು  ಚಿತ್ರಗಳಿಗೆ ಅವಳಿಂದ ಅನಾಯಾಸ ಜೀವ ಬಂದಿತ್ತು .ಭಾವನೆಗಳು ಮತ್ತು ಬದುಕು ಬೇರೆಬೇರೆಯಾಗಿಯೇ ನನಗೆ ಕಂಡಿವೆ . ಬೆಳಕಿನದೇ ಒಂದು ಪ್ರಪಂಚ ,ಕತ್ತಲೆಯದೇ ಇನ್ನೊಂದು ಪ್ರಪಂಚ.ರಾತ್ರಿ ಮುಗಿದು ಬೆಳಕಾದಾಗ ಬಹಳಷ್ಟು ಬಾರಿ ನಮ್ಮ ಮುಖ ನಮಗೆ ಅಪರಿಚಿತ ಅನಿಸಿಬಿಡುತ್ತದೆ . ಆದರೆ ಅವೆಲ್ಲ ಪ್ರಕೃತಿ ಸಹಜ ಅನ್ನೋ ಸಮಾಧಾನ ಅಷ್ಟೇ. ಅದನ್ನ ಅವಳೂ ಬಹಳ ಸರತಿ  ಹೇಳುತ್ತಿದ್ದಳು.ಆದರೆ  ನನ್ನ ಪಾಲಿಗೆ ಅವಳೂ ಒಂದು ಹೆಣ್ಣು ಅಷ್ಟೇ .

ನಮ್ಮಿಬ್ಬರ ಮನೆಗಳ ಮಧ್ಯೆ ಇರುವ  ಪೀನಟ್ ಮಸಾಲಾ ಪಬ್ ನೋಡಿದಾಗಲೆಲ್ಲ ಹಳೆಯದೆಲ್ಲ ನೆನಪಾಗುತ್ತದೆ .
ಪೀನಟ್ ಮಸಾಲಾ ಅಂದರೆ ಫೇಮಸ್ ಅಲ್ಲಿ . ನಾವಿಬ್ಬರು ತಪ್ಪದೆ ಅದನ್ನೇ ಆರ್ಡರ್ ಮಾಡುತ್ತಿದ್ದೆವು .ಕಳೆದು ಹೋದ ಸುಖಗಳಿಗೆ ಸೂತಕವಾಗಿ ಕಾಡುವ ಜಾಯಮಾನವಿರುತ್ತದೆಯಂತೆ!

ಇಂದೇಕೋ ಹೊಟ್ಟೆ ತಳಮಳಿಸುತ್ತಿದೆ.ಏನೋ ಒಂತರ ಸಂಕಟ, ಸಂಧಿಗ್ನ!ಅವನು ಭೇಟಿಗೆ ಕರೆದಿರುವುದಾದರೂ ಏತಕ್ಕೆ ?
ಗಾಬರಿಗೆ ಮತ್ತೆ ಮತ್ತೆ ರೆಸ್ಟ್ರೂಮ್ ಗೆ ಹೋಗಿ ಬಂದು ಸಾಕಾಯ್ತು.ಇಶ್ಶಿ! ಹುಡುಗಿಯರು ಕಂಪ್ಯೂಟರ್ ಕಲಿತರು,ಕಾರ್ ಕಲಿತರು,ವಿಡಿಯೋ ನೋಡಿ ದಪ್ಪ ಆಗೋದು ಸಣ್ಣ ಆಗೋದು, ಅಡಿಗೆ ಮಾಡೋದು ಎಲ್ಲಾ ಕಲಿತರು, ಆದರೆ  ಟಾಯ್ಲೆಟ್ ನ ಹೇಗೆ ಉಪಯೋಗಿಸಬೇಕು ಅನ್ನೋದನ್ನೇ ಇನ್ನು  ಕಲಿತಿಲ್ಲ. ಮೇಕ್ಅಪ್ ಗೆ ಗಂಟೆಗಟ್ಟಲೆ ಕನ್ನಡಿ ಎದುರು ನಿಂತು, ಸಣ್ಣ ಗೆರೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸರಿಪಡಿಸಿಕೊಳ್ಳೋ  ಹುಡುಗಿಯರಿಗೆ  ಟಾಯ್ಲೆಟ್ ನಲ್ಲಿ ಏನು ಮಾಡಿದ್ವಿ ಅನ್ನೋ ಪರಿಜ್ಞಾನನೂ ಇರೋದಿಲ್ಲ ಅನಿಸುತ್ತೆ .ಬ್ಲಡಿ ಬಿಚಸ್!ಸ್ಯಾಂಪಲ್ ಗೆ ಕಲೆಕ್ಟ್ ಮಾಡ್ತಿದ್ದೀವಾ  ಇಲ್ಲಿ? ಹನಿ ಹನಿನ ಟಾಯ್ಲೆಟ್ ಸೀಟಿಮೇಲೆ ಉಳಿಸಿ ಹೋಗ್ತಾರೆ ಫ್ಲಶ್ಹು ಸರಿಯಾಗಿ ಮಾಡದೇ .!

ಸಿಟ್ಟು ಸಿರ್ರಂತ ನೆತ್ತಿಗೇರಿತು. ನನ್ನ ಕೋಪ,ತಳಮಳಕ್ಕೆ  ನಿಜವಾದ ಕಾರಣ ಇದಲ್ಲಾ ಗೊತ್ತಿದೆ. ಬಹುಷ್ಯ ಅರ್ಧಭರ್ದ ಆದ ಮತ್ತದೇ ಕನಸಿನದು. ನನ್ನದು ಅವನದೂ  ಬ್ರೇಕ್ಅಪ್ ಆದಾಗಿನಿಂದ  ಪಿಶಾಚಿ ತರಹ ಈ ರಗಳೆ ಅಂಟಿಕೊಂಡಿದೆ. ಬರುತ್ತಾನೆ  ಅವನು ಕನಸಿನಲ್ಲಿ . ಬಹಳಷ್ಟು ಸರ್ತಿ ಅದೇ ಪೀನಟ್ ಮಸಾಲಾದಲ್ಲಿ  .ಸುತ್ತಾಡುತ್ತೀವಿ ,ಅಲೆದಾಡ್ತಿವಿ ,ಮಾತಾಡ್ತಿವಿ ,ರೋಮ್ಯಾನ್ಸ್ ಆಗುತ್ತೆ,ಇನ್ನೇನು ನಾನು ಅವನು ಒಂದಾದ್ವಿ ಎಚ್ಚರ ಆಗಿಬಿಡುತ್ತೆ.  ಹಿಂಸೆ  ಶುರುವಾಗುತ್ತೆ  ,ಯಾಕೆ ಅಂತ ಗೊತ್ತಿಲ್ಲ ,ಏನು ಅಂತ ಅರ್ಥವಾಗಲ್ಲ, ಬೇಕಿತ್ತು ನನಗೆ ಅವನು ,ಇನ್ನೂ ಬೇಕಿತ್ತು, ಪ್ರಶ್ನೆಗಳಿಗೆ ಉತ್ತರ ಬೇಕಿತ್ತು,ನಮ್ಮ ಕಥೆಗೆ ಸರಿಯಾದ ಅಂತ್ಯ ಬೇಕಿತ್ತು ,ಮುಗಿಯಬಾರದಿತ್ತು ಹಾಗೆಲ್ಲ ನೂರೆಂಟು ಬೇಕುಗಳು .ಇಂದು ಕೂಡ ಕನಸಿನ ಮಧ್ಯೆನೇ ಎಚ್ಚರ ಆಗೋಯ್ತು .ನಂಗೊತ್ತು  ಇನ್ನು ಇಡೀ ದಿನ ಹಿಂಸೆ,ಮೂಡ್ ಆಫ್,ಜಿಗುಪ್ಸೆ. ಸಾಧ್ಯ ಆದ್ರೆ  ಯಾರಾದ್ರೂ ಸೈಕಿಯಾಟ್ರಿಸ್ಟ್ ನ ಭೇಟಿ ಆಗಿ ಕೋನ್ಸಿಲಿಂಗ್ ತಗೋಬೇಕು ,ಎರಡು ವರ್ಷಗಳು ಆದ್ರೂ ಅವನ ಭೂತ ಬಿಡುತ್ತಿಲ್ಲ ಅಂದ್ರೆ. ಅವನನ್ನಾ ನಾನು ಇನ್ನೂ ಬಯಸುತ್ತಿದ್ದೇನಾ ?ಇಷ್ಟು ತೀವ್ರವಾಗಿ ಪ್ರೀತಿಸುತ್ತಿದ್ದೇನಾ ಇನ್ನೂ ?

“ಸಂಸಾರ ಅನ್ನೋದು ರಗಳೆ “-ಅಮ್ಮ ಬಹಳಷ್ಟು ಸರತಿ ಹೇಳಿದ್ದಾಳೆ ಹಾಗೆ .ಈಗೀಗ ನನಗು ಅನುಭವಕ್ಕೆ ಬಂದಿದೆ . ವಯಸ್ಸು ಮದುವೆಗೆ ಬಂದು ಕೂತಾಗ ಮದುವೆ ಅಂತ ಒಂದು ಆಗಲೇ ಬೇಕಿತ್ತಲ್ಲ . ಎಷ್ಟು ದಿನಗಳನ್ನ ಪಬ್ಬಿನ ದೂಳಲ್ಲೇ ಪರಕೀಯ ಹೆಣ್ಣಿನೊಂದಿಗೆ ಕಳೆಯುವುದು . ಒಪ್ಪಿತ ಅನಿಸುವ ಚೌಕಟ್ಟು ಇದ್ದರೆ ಸಂಕಷ್ಟಗಳು ಕಡಿಮೆ . ಅಮ್ಮನಿಗೆ ಅಪ್ಪನಿಂದ ಸಾಕಷ್ಟು ನೋವುಗಳು ಅದಾಗಲೇ ಲಭಿಸಿದ್ದವು.ನನ್ನಿಂದಲೂ ನೋವಾಗಬಾರದಲ್ಲ.  ಒಂದು  ವೇಳೆ ನನ್ನ ಮದುವೆ ನನ್ನ ಖಾಸಗಿ ವಿಷಯ ಅಂತಂದು ಸ್ನೇಹಳನ್ನ ಮನೆಗೆ ಕರೆತಂದಿದ್ದರೆ ಏನಾಗುತ್ತಿತ್ತು .

ಪ್ರಳಯವೇನು ಆಗುತ್ತಿರಲಿಲ್ಲ . ಅಮ್ಮ ಒಪ್ಪಿದರು ಒಪ್ಪುತ್ತಿದ್ದಳೇ .ಅವಳ ಸಾಂಸಾರಿಕ ಜೀವನ ನರಕವಾಗಿತ್ತಲ್ಲ ನನ್ನದಾದರೂ ಸುಖವಾಗಿರಲಿ ಅಂತಂದುಕೊಂಡು! . ಆದರೆ ಸ್ನೇಹಾಳ ಬಗ್ಗೆ ಮದುವೆ  ಅಂತೆಲ್ಲ ಸೀರಿಯಸ್ ಆಗಬೇಕು ಅಂತ ಅನಿಸಲೇ ಇಲ್ಲ. ಪ್ರತಿಷ್ಠೆಯ ಕಾರಣವೂ ಇತ್ತಲ್ಲ . ಮನೆಯಲ್ಲಿ ತೋರಿಸಿದವಳು ಚೆನ್ನಾಗಿಯೇ ಕಂಡಳು . ಒಪ್ಪಿಗೆಯಾದಳು .
ಗಂಡಸಿಗೆ ಏನು ಬೇಕು ಅಂತ ಸ್ಪಷ್ಟವಾಗಿ ಅವನಿಗೆ ಅರ್ಥ ಆಗುವುದಿಲ್ಲವೇನೋ . ಕೆಲವೂಮ್ಮೆ ಎಲ್ಲವನ್ನೂ ಹೊಂದಬೇಕು ಅನಿಸುತ್ತೆ.

ಮತ್ತೆ ಕೆಲವೂಮ್ಮೆ ಯಾವುದೇ ಆದರು ಸರಿ,ಅಡ್ಡಿ ಇಲ್ಲ ಅನಿಸಿಬಿಡುತ್ತೆ…ಇದೇ ಬೇಕು ಅಂತ ಪಟ್ಟು ಹಿಡಿಯಬೇಕು  ಅನಿಸುವುದೇ ಇಲ್ಲ …ಎರಡು ಮಕ್ಕಳಾದ ಮೇಲೆ ಕೆಲಸ ಬಿಡುತ್ತೇನೆ ಅನ್ನೋ ತರಹ  ಹೆಂಗಸರು ಯೋಚಿಸಬಹುದು.ಆದರೆ ರಿಟೈರ್ಮೆಂಟ್ ವರೆಗೂ ಕೆಲಸ ಅಂತ ಮೆದುಳಿಗೆ ತುಂಬಿಕೊಂಡು ಮರ್ಯಾದೆಗೆ ಅಂಜೋದು ನಾವು ಗಂಡಸರು.ನಾವು ಅಲ್ಲಿ ಇಲ್ಲಿ ಉಂಡೆದ್ದರೂ  ತಪ್ಪಲ್ಲ, ದಾರಿ ಮೀರಿ ಹಾರಿ ಬಂದರೂ ಅಪರಾಧವಲ್ಲ . ಮನೆ ಹೆಂಗಸರು, ಹೆಣ್ಣುಮಕ್ಕಳು ಮರ್ಯಾದೆಯಿಂದ ಇರಬೇಕು, ಪ್ರತಿಷ್ಟೆಗೆ ಹೆದರೋದು ನಾವು.ಈಚೆ ಕುಡಿದು, ಕಳೆದು,ಸೋತು ಬಂದರೂ  ಬೇಜಾರಾಗಲ್ಲ, ಹೆಂಡತಿಗೆ ಖರ್ಚಿಗೆ ಅಂತ ಕೊಡಬೇಕಾದಾಗ ಎಂಥದ್ದೋ ಅತೃಪ್ತಿ, ಸಂಕಟ.

ಮದುವೆ ಆಯಿತು ಅನ್ನೋ ಕ್ಷುಲ್ಲಕ ಮಾತ್ರಕ್ಕೆ  ಪ್ರೀತಿ ಹುಟ್ಟಿಬಿಡುತ್ತ? ಅದು ಮೋಹ!. ಹಸಿವಲ್ಲಿ ದೇಹಗಳು ವಿಲವಿಲ ಒದ್ದಾಡುತ್ತಾ  ಇದ್ದರೆ ತಣಿಸಿಕೊಳ್ಳೋ ಕ್ರಿಯೆಗೆ ಸಿಕ್ಕ  ಸ್ವಾತಂತ್ರ್ಯ ಮದುವೆ .. ಕ್ರಿಯೆ ಕೊಟ್ಟ ವೈಭೋಗದ ಮೇಲೆ ವ್ಯಾಮೋಹ. ಅದು ನೆರವೇರಿತು ಅನ್ನೋ ಕಾರಣಕ್ಕೆ ಅವನಿಗೆ ಅವಳ ಮೇಲೆ ಒಂದು ಸಣ್ಣ ಅಕ್ಕರೆ.
ದುಡಿದು ತಂದುಹಾಕುತ್ತಾನೆ ,ಸುಖವಾಗಿ ಸಾಕುತ್ತಾನೆ ,ಹುಟ್ಟೋ ಮಕ್ಕಳನ್ನ ಬೆಳೆಸುತ್ತಾನೆ ,ಮನೆ ಕಟ್ಟಿಕೊಡುತ್ತಾನೆ ,ಬಟ್ಟೆ ಕೊಡಿಸುತ್ತಾನೆ ,ಒಡವೆ ತೊಡಿಸುತ್ತಾನೆ ಅದಕ್ಕೆ ಅವನ ಮೇಲೆ ಅವಳಿಗೆ ಅವಲಂಬನೆ. ಎಲ್ಲಾ  ಸರಿ ಇದ್ದರೆ  ನೆಮ್ಮದಿ,ಸುಖದ ಅಂಚಲ್ಲಿ ಸಂತೃಪ್ತಿ.

ಮದುವೆ,ಶಾಸ್ತ್ರ,ಸಂಬಂಧ ಅಂತ ಸಮಾಜ ಗೆರೆ ಎಳೆದಿದೆ ಸಮಾಜದೊಂದಿಗೆ ಒಡಂಬಡಿಕೆ ಮಾಡಿಕೊಂಡು ಬದುಕಿದರೆ ಮಾನ.,ಮರ್ಯಾದೆ .
ಅದೇ ಅವನು ಕಿತ್ತುಕೊಂಡು ಹೋಗಲಿ,ಕುಡಿದು ಬಂದು ಬಡಿಯಲಿ ,ಏನು ಉಳಿಸದೆ ತಿಂದು ತೇಗಲಿ, ಸಮಾಜಕ್ಕೆ ಹೆದರಿ ಆತುಕೊಂಡು ಬಾಳಿದರೂ  ಒಳಗೆ ಕುದಿ.ಸಾಯಲಿ ಅತ್ಲಾಗಿ ಮುಂಡೇಮಗ ,ಪಿಜಿ ಅಡಿಗೆಯ ಲಕ್ಷ್ಮಿ ಗಂಡನಿಗೆ ನಟಿಗೆ ಮುರಿದು ಶಾಪ ಹಾಕಲ್ವ!
ಪಡಕೊಂಡು ಬಂದಿದ್ಲು ಅವ್ಳು,ಅವನಂತ  ಗಂಡ ಸಿಗೋದಕ್ಕೆ . ಇಂಜಿನಿಯರ್ ಓದಿಕೊಂಡ ಹುಡುಗರು  ಕೇಳಿದರೆ  ಅಂತ ಆಟಾಡ್ಕೊಂಡು ಮಾಡಿಕೊಂಡ ಒಂದು ಇಂಜಿನಿಯರಿಂಗ್ ಡಿಗ್ರಿ ಇತ್ತು,ಕೆಲಸಕ್ಕೆ ಹೋಗಲ್ಲ ಅಂದಳಂತೆ . ಇವನಿಗೂ ಅದು ಸಾಕಾಯಿತು .
ತನ್ನ ಪ್ರೀತಿಸೋಕೆ ಅಂತಹ ಯಾವ ವಿಶೇಷ ಕಾರಣಗಳು ಇಲ್ಲ ಅನಿಸಿದವ ಎಲ್ಲದಕ್ಕೂ ಅವಲಂಬಿತಳಾಗುವವಳನ್ನು ಕಟ್ಟಿಕೊಳ್ಳುತ್ತಾನೆ.

ಬಿಡುವುದಕ್ಕೆ ಆಗದ  ಅವಳ ಅಸಹಾಯಕತೆಯನ್ನ  ಪ್ರೀತಿ ಅಂತ ನಂಬಿಸಿಕೊಂಡು ಖುಷಿ  ಪಡುತ್ತಾನೆ  .ದೈನ್ಯವನ್ನ ಭಕ್ತಿ ಅಂತಂದುಕೊಂಡು ಹೆಮ್ಮಪಡುತ್ತಾನೆ .
ಕುಡಿದರೆ ,ಅಲೆದರೆ, ಬೇಜವಾಬ್ದಾರಿಯಲ್ಲಿ ಹೊರಳಾಡಿದರೆ ಬಿಟ್ಟು ಹೋಗುತ್ತಾಳೆ  ಅನ್ನೋ ಭಯಕ್ಕೆ ಸರಿಯಾಗಿ ನಡೆದುಕೊಳ್ಳುತ್ತಾನೆ . ಇವನು ಅಷ್ಟೇ !  ಆಷಾಡಭೂತಿಗಳು! ಹಿಪೋಕ್ರಯ್ಟ್ಸ್ !

ಆದರೆ ನಾನು ?ಅವನಿಂದ ಏನು ಬಯಸದೆ ಅವನನ್ನು ಇಷ್ಟಪಟ್ಟೆ  .ಹೆಗಲಿಗೆ ಹೆಗಲು ತಗುಲಾಕಿಕೊಂಡು ಅಲೆದಾಡಿದೆ.ಒಟ್ಟಿಗೆ  ಕೂತು ಕುಡಿದೆ ,ಒಂದು ಸರ್ತಿ ಅವನು ಬಿಲ್ ಪಾವತಿಸಿದರೆ ಮುಂದಿನ ಸಾರಿ ನಾನು ಕಟ್ಟುತ್ತಿದೆ ,ಸ್ವಾಭಿಮಾನದಲ್ಲಿ ಗೌರವವಿತ್ತು ;ನನ್ನ ಮಾತು ಅವನಿಗೆ ಹಿಡಿಸುತ್ತಿತ್ತು ,ಅವನದು ನನಗೆ,ಪರದೆಗಳಿರಲಿಲ್ಲ. ಅನಿಸಿದ್ದನ್ನು ಅಂದುಬಿಡುವ ಸಲಿಗೆ ಇತ್ತು. ಯೋಚಿಸಬೇಕು,ನೋಯದಂತೆ ನಡೆದುಕೊಳ್ಳಬೇಕು ತ್ರಾಸವಿರಲಿಲ್ಲ. ಮುಖ್ಯವಾಗಿ ಸಖ್ಯದಲ್ಲಿ ಸುಖವಿತ್ತು ಮುಖವಾಡಗಳಿರಲಿಲ್ಲ .ಸಹಜ ಸುಂದರ ಮತ್ತು  ತೀವ್ರ .ಅದಲ್ವಾ ಪ್ರೀತಿ ಆಗೋದು.ಆದರೆ ಅವನಿಗೆ ನಾನು ಸಾಕು ಅನಿಸಲಿಲ್ಲ ,ಅಸಲಿಗೆ ಬೇಕು ಅನಿಸಲಿಲ್ಲ .

ಯಾಕೆ ರಿಸ್ಕ್ ಅಂತ ಮೊದಲೇ ಹೇಳಿದ್ದೆ.
“ಸಂಬಂಧ ,ಕಮಿಟ್ಮೆಂಟ್ ನನ್ನಿಂದಾಗೋಲ್ಲ ಸ್ನೇಹ .ಇದರ ಮೇಲೆ ನಿನ್ನಿಷ್ಟ.”
ಲೆಕ್ಕಿಸದೆ ಅವಳಾಗೇ ಮುಂಬೊರಿದು ಬಂದಳು  . ಬಿಟ್ಟರೆ ಗಂಡಸಲ್ಲ ನಾನು.ರುಚಿ ಇತ್ತು ಉಂಡೆ ,ಕಾಲಿಗೆ ಮುಳ್ಳಾಗೋಲ್ಲ ಅನ್ನೋ ನಂಬಿಕೆ ಇತ್ತು ಕೈ ತೊಳೆದುಕೊಂಡೆ. ಎದ್ದೆ .ಮಚುರ್ಡ್ ವಿಮೆನ್ .  ರಂಪಾಟ ಮಾಡಲಿಲ್ಲ,ಜಗ್ಗಾಡಲಿಲ್ಲ,ಸರಿದು ಮೂಲೆಗೆ ನಿಂತಳು.ಒಂದಕ್ಕೆ ತೃಪ್ತಿ ಪಟ್ಟರೆ ಗಂಡಸು ಹೇಗಾಗುತ್ತೆ .ಬರಿ ಮನೆ ಊಟ ಮಾಡುತ್ತಿದ್ದರೆ  ಹೋಟೆಲು ಬೇಕೆನಿಸುತ್ತೆ ,ನಿತ್ಯ ಹೋಟೆಲಲ್ಲೇ ತಿನ್ನಬೇಕು ಅಂತಾದರೆ  ಮನೆ ಊಟನೇ ಸರಿ ಅನಿಸಿಬಿಡುತ್ತೆ  .ಬದಲಾವಣೆ ಬೇಕು ,ಸಾಧ್ಯವಾದಷ್ಟು ಆಯ್ಕೆಗಳು ಬೇಕು,ಎಲ್ಲದರ ಅನುಭವಾನೂ ಆಗಬೇಕು . ಬದುಕು ಆಗ ರುಚಿಕಟ್ಟು .
ಬೇಕೆನಿಸಿದ್ದನ್ನು  ಶ್ರದ್ದೆಯಿಟ್ಟು  ಓದಿದೆ, ಒಳ್ಳೆ ಕೆಲಸ ಸಂಪಾದಿಸಿಕೊಂಡು ಸೈ ಎನಿಸಿಕೊಂಡೆ . ಎಂಜಿನಿಯರ್ ಅನ್ನೋದೇ ಸಾಕಿತ್ತು. ಸಾಲದಕ್ಕೆ ಸ್ಪುರದ್ರೂಪ .ಸಮಸ್ಯೆ ಅಂತ ಏನೂ ಇರಲಿಲ್ಲ .

ಹೆಣ್ಣು ಕೊಡೋಕೆ ನಾ ಮುಂದು ತಾ ಮುಂದು ಅಂತ ಜನ ಇದ್ದರು .ಮದುವೆಯ ನಂತರ ನಡೆಯೋದು ಖಾಸಗಿ ವಿಷಯವಾದರೂ ಮದುವೆ ಅನ್ನೋದು ಸಾಮಾಜಿಕ ವಿಷಯ . ನಮ್ಮಿಬ್ಬರದ್ದು ಬೇರೆ ಬೇರೆ ಜಾತಿ , ಬೇರೆ ಬೇರೆ ಬೇರು .ಅಂತರಪ್ಪಾ ಸಮಾನರಲ್ಲದ್ದರ ಸಹವಾಸ ಸಾಮಾಜಿಕ ಮರ್ಯಾದೆಗೆ  ಭಂಗ ಅಂತ .  ಸಭ್ಯತೆಯಲ್ಲೇ ಬದುಕಿದ್ದೀನಿ ,ಮುಂದಕ್ಕೂ ಮರ್ಯಾದೆ ಉಳಿಸಿಕೊಳ್ಳಬೇಕು ಅನಿಸಿತು.
ಮಕ್ಕಳು ತಮ್ಮ ಪಾಡಿಗೆ ತಾವೇ ಓದಿ ,ತಮ್ಮದು ಅಂತ ಉನ್ನತ ಹುದ್ದೆ ಸಂಪಾದಿಸಬೇಕು ಎಲ್ಲಾ ಅಪ್ಪ ಅಮ್ಮನ ಕನಸು . ಆದರೆ ಅವರ ಬದುಕಿನ ಆಯ್ಕೆಗಳು ನಮ್ಮದಾಗಿರಬೇಕು.

ಭಾರತೀಯ ಅಪ್ಪ ಅಮ್ಮನ ಪ್ರತಿಷ್ಠೆ .
ಸಮಾಜವನ್ನ, ಮನೆಯನ್ನ ದಾಟಬೇಕು ಅನಿಸಲಿಲ್ಲ !ಬೇಕೇ ಬೇಕು ಅಂತಲು  ಅನಿಸಲಿಲ್ಲ.ಒಂದು ಸರ್ತಿ ಸಿಕ್ಕರೂ ಅಷ್ಟೇ ಪದೇ ಪದೇ ಸಿಕ್ಕರೂ ಅಷ್ಟೇ.. ಪ್ರೀತಿ ಪ್ರೇಮ ಪುಸ್ತಕದಲ್ಲಿ ಬರೆದಷ್ಟು , ಸಿನಿಮಾದಲ್ಲಿ ತೋರಿಸಿದಷ್ಟು ಸ್ವಚ್ಛ ಭಾವ ಏನಲ್ಲ . ಎಲ್ಲದರ ಹಿಂದೆ ಕೆಲಸ ಮಾಡೋದು ಅಗತ್ಯಗಳು. ಸೈನ್ಸ್ ಓದಿಕೊಂಡಿದ್ದೀನಿ , ವಯಸ್ಸಿಗೆ ಬಂದಾಗ ಹಾರ್ಮೋನ್ಸ್ ನಲ್ಲಿ ಅಲ್ಲೋಲ್ಲ ಕಲ್ಲೋಲ್ಲ . ಬಾಲ್ಯದ ವಯಸ್ಸಲ್ಲಿ  ಪ್ರೀತಿ ಪ್ರೇಮವೆಲ್ಲ ಯಾಕಾಗಲ್ಲ ? ಕತ್ತಲಲ್ಲಿ ಮದ ಉಕ್ಕಿದಾಗ ಜಗತ್ತಿನ ತುಂಬಾ ಸುಂದರಿಯರೇ . ಸುಸ್ತಾದ  ಮೇಲೆ  ನನ್ನ ನಿದ್ದೆ ನನ್ನದು.

ಹೆಣ್ಣು ಗಂಡುಗಳ ನಡುವೆ ಉಂಟಾಗೋ ಕೆಮಿಸ್ಟ್ರಿಯ ಬಗ್ಗೆ ನನಗೆ ನನ್ನದೇ ಅಂದಾಜಿದೆ . ಆದರೆ ಅದೆಲ್ಲ ತಲೆಕೆಳಗು ಮಾಡಿ ದಿಕ್ಕು ತೋಚದಂತೆ ಮಾಡಿದ್ದು ಸಂತೋಷನ ಸಹವಾಸ .ಸಮಾಜಕ್ಕೆ ಹೆದರುತ್ತಾನೆ ಗೊತ್ತಿತ್ತು.ಬೆಳಕಿಗೆ ಹೆದರಿ ಕತ್ತಲೆಗೆ ಹವಣಿಸುವಾಗ ಸಂಕೋಚ ಅಂತಂದುಕೊಂಡೆ .ಕಮಿಟ್ಮೆಂಟ್ ನನ್ನಿಂದ ಆಗಲ್ಲ ಅಂತೆಲ್ಲ ಹೇಳುವಾಗ ಎಲ್ಲ ಹುಡುಗರಂತೆ ಜವಾಬ್ದಾರಿಗೆ, ರಿಸ್ಕಿ ಗೆ ಬೆನ್ನು ತಿರುಗಿಸುತ್ತಿದ್ದಾನೆ ,ಸುಲಭದ ಬದುಕಿಗೆ ಒಗ್ಗಿಕೊಂಡ ಹುಡುಗ ಅನ್ನೋ ಕನಿಕರ . ನನ್ನ ಒಪ್ಪಿಕೊಂಡು ಅಪ್ಪಿಕೊಂಡಾಗ ಒಂದು ಆಸೆ ,ಭಾವನೆಗಳೇ ಇಲ್ಲದೆ ಮನುಷ್ಯ ಹೇಗೆ  ಯಾರನ್ನಾದರೂ ತೆಕ್ಕೆಗೆ ಸೆಳೆದುಕೊಂಡು ಇಷ್ಟೊಂದು ಮುದ್ದಿಸುತ್ತಾನೆ . ಅರಿವಾಗುತ್ತದೆ ಒಂದಲ್ಲ ಒಂದು ದಿನ ,ನನ್ನ ಉತ್ಕೃಷ್ಟ ಪ್ರೀತಿ .ದಿವ್ಯಾನುಭವಕ್ಕೆ ಸಿಗಬೇಕು ಅವನಿಗೆ .  ಏಂತದ್ದೋ  ಒತ್ತಾಸೆ .

ಪ್ರಪಂಚದ ಬೇರೆ ಬೇರೆ ಮೂಲೆಗಳಲ್ಲಿ ಮದುವೆ ಮತ್ತು ಪ್ರೇಮದ ವಿಶ್ಲೇಷಣೆ  ವಿಭಿನ್ನ . ಹೆದರುತ್ತಾರೆ ಅಲ್ಲಿ , ಪಶ್ಚಿಮದಲ್ಲಿ . ಮದುವೆ ಅಂತ ಆಗಿ ನಂತರದಲ್ಲಿ ಸರಿಹೋಗಲಿಲ್ಲ ಅಂದರೆ?  ರಿಸ್ಕು . .ಡೇಟಿಂಗ್ , ಸಂಭೋಗ ನಡೆದು ಹೋಗುತ್ತೆ , ವಿಚ್ಛೇದನ ಮರು ಮದುವೆಯೂ ಅಲ್ಲೆಲ್ಲಾ ತೀರಾ ಕಾಮನ್ . ಇಬ್ಬರ ಮದ್ಯದ ಸಂಗಾತ ಮುಖ್ಯ.  . ಕೆಮಿಸ್ಟ್ರಿ ವರ್ಕ್ ಆಗಲಿಲ್ಲ ಅಂದರೆ ಏನಿದ್ದರೂ ಪ್ರಯೋಜನವಿಲ್ಲ .
ಇಲ್ಲಿ ನಮ್ಮಲ್ಲಿ ಹೆದರುತ್ತಾರೆ ಜನ ಸಮಾಜ ಮರ್ಯಾದೆಗೆ  ! ಕಟ್ಟಿಕೊಂಡ ಮೇಲೆ ಮಕ್ಕಳು ಮರಿ ತಮ್ಮಪಾಡಿಗೆ ತಾವು ಆಗೋಗಿ ಸಂಸಾರ ಹೇಗೋ ನಡೆದು ಹೋಗುತ್ತೆ  . ಸಂಗಾತ ಅನ್ನೋದೇ ಸುಳ್ಳು ! ಅಥವಾ ಬೇಕಿಲ್ಲ ಇಲ್ಲಿ  .
ಗೊಂದಲದಲ್ಲಿದ್ದಾನೆ .

ಪ್ರಪಂಚಕ್ಕೆ ತೆರೆದುಕೊಳ್ಳುತ್ತಿದ್ದಾನೆ. ಅರ್ಥ ಮಾಡಿಕೊಳ್ಳುತ್ತಾನೆ ಯಾವುದು ಮುಖ್ಯ ಯಾವುದು ಅಮುಖ್ಯ . ಅಂದಾಜಿಸಿದೆ . ಇಂದು ಮೊಳೆತು , ನಾಳೆ ಬಿರಿಯಬಹುದು ಪ್ರೇಮವೆಂಬ ಪಾರಿಜಾತದ ಕೌಸ್ತುಭ . ಸಮಯಕೊಟ್ಟೆ .

ತಪ್ಪು ನನ್ನದೇ. ಕಾಡಿಸಬೇಕಂತೆ ಹೆಣ್ಣು.ಸಿಗುವಂತೆ ಮಾಡಿ,ಸಿಗಬಾರದಂತೆ. ಕಾವೇರಿಸಿ ಬಿಸಿಯಾಗಿಸಿ ತಪತಪ ಬೇಯುತ್ತಿರುವಾಗ ಆರಿಸಬಿಡಬೇಕಂತೆ.  ಕೊಡದೇನೆ ಉಳಿಸಿಕೊಳ್ಳಬೇಕಂತೆ . ಅಲೆಸಿ ಹಣ್ಣಾಗಿಸಿ ಬೇಕೇ ಬೇಕು ಅನಿಸೋ ಹಾಗೆ ಮಾಡಿ ಹಿಡಿದ್ದಿಟ್ಟುಕೊಳ್ಳಬೇಕಂತೆ.ಕೊಟ್ಟು ಬಿಟ್ಟೆ ಸುಲಭವಾಗಿ. ಬೆಲೆ ಗೊತ್ತಾಗಲಿಲ್ಲ ಅವನಿಗೆ .

ಏನಕ್ಕೆ ಮರುಳಾದೆ ನಾನು?ಅವನು ಓದಿಕೊಂಡಷ್ಟೇ ನಾನು ಓದಿದ್ದೆ .ಕೆಲಸದಲ್ಲಿ  ಅವನು ಚೂರು ಜಾಣ ಇದ್ದಿರಬಹುದು  .ಹಾಡು ಹವ್ಯಾಸ ಓದು ಕುಣಿತದಲ್ಲಿ ನಾನು ಸದಾ ಮುಂದೆ . ಇಬ್ಬರಿಗೂ ಒಂದೇ ಕೆಲಸ,ಒಂದೇ ಸಂಬಳ ವ್ಯತ್ಯಾಸವಿರಲಿಲ್ಲ. ಅವನ  ಆಸ್ತಿಪಾಸ್ತಿ ವಿವರ ಗೊತ್ತಿರಲಿಲ್ಲ, ಗೊತ್ತಾಗ ಬೇಕಾಗು ಇರಲಿಲ್ಲ,ನಾ ಎಂದಿಗೂ ಕೇಳಲೂ ಹೋಗಲಿಲ್ಲ  .
ಹಾಲು ಬಿಳುಪು, ನನ್ನದೇ ಬಣ್ಣ .  ಹುಡುಗಿಯರಿಗೆ  ವಿನ್ಯಾಸ ಒಂದು ಅಗತ್ಯ,ಹುಡುಗರಿಗೆ ಅದು ಹೆಚ್ಚುವರಿ. ಜೊಂಪೆ ಜೊಂಪೆ ಕಪ್ಪು ಕೂದಲು,ಒತ್ತೊತ್ತಾದ ಹುಬ್ಬು,ಮೂಗು ಚೂಪು ,ಹಲ್ಲು ಅಷ್ಟಪಷ್ಟ ಆದರೂ ನಗು ಒಂಥರಾ ಸೊಗಸು. ಮನ್ಮಥ. ಜೊತೆಗೆ ಟೆಕ್ಕಿಗೆ  ಇರಬೇಕಾದ ಗಾಂಭೀರ್ಯವಿತ್ತು .

ಇಷ್ಟ ಆಗುತ್ತಿದ್ದ,ಅವನಿಗೂ ಇಷ್ಟ ಆಗಿರಬಹುದು ಅಂದುಕೊಂಡೆ.  ಒಂದೇ ಕಡೆ ಕೆಲಸ ಮಾಡುತ್ತಿದ್ವಿ ಸಲಿಗೆ ಇತ್ತು,ಅಥವಾ ನಾನೇ ಹೆಚ್ಚುವರಿ ಕೊಟ್ಟಿದ್ದೆ!. ಎಲ್ಲರೊಂದಿಗೆ ಮಾತಿಲ್ಲ,ನನ್ನ ಮಾತ್ರ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದ. ಮಧ್ಯೆ ಮಧ್ಯೆ ಪೋಲಿ ಮಾತುಗಳು..ಮನಸು ಸೂರೆಯಾಯಿತು.  ಬೇಕೇಬೇಕು ಅನಿಸಿದ ಹಿಂದುಮುಂದು ನೋಡದೆ ಸೋತೆ. ನಡೆಯ ಬೇಕಾದ್ದು ಹೀಗೆ ತಾನೇ? . ಬದುಕಲ್ಲಿ ನನ್ನ ಆಯ್ಕೆಗಳ ಸ್ವಾತಂತ್ರ್ಯವನ್ನ ನಾ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ  . ಸ್ವಾತಂತ್ರ್ಯಹೊರೆಸುವ ಜವಾಬ್ದಾರಿಯನ್ನ  ನಾ ಎಂದಿಗೂ  ಹೊರಲು ಸಿದ್ಧವಿದ್ದೇ  . ಆದ್ದರಿಂದ ನಿರ್ಧಾರ ಮಾಡಿದೆ.

ಪ್ರಕೃತಿಯಲ್ಲಿ ಯಾವ ನಾಯಿ ,ಬೆಕ್ಕು ,ಕೊಕ್ಕರೆ ಕೋಳಿ ಜಾತಿ ಕೇಳುತ್ತೆ  ? ಜಾತಕ ನೋಡಿ ಪ್ರೀತಿ ಮಾಡುತ್ತೆ  ?  ಎಷ್ಟು ದೊಡ್ಡ ಮನೆ ಇದೆ,ಅಪ್ಪ ಅಮ್ಮ ಏನು ಕೆಲಸದಲ್ಲಿದ್ರು ತಿಳಿದುಕೊಡು ಮುಂದುವರಿಯುತ್ತೆ ? ಆಕರ್ಷಕವಾಗಿ ಕಂಡಿದ್ದರ  ಹಿಂದಿಂದೆ ಹೋಗುತ್ತೆ, ಹಿಡಿಯಬೇಕು ಅನಿಸಿದರೆ  ಮೆಚ್ಚಿಸುತ್ತೆ ,ಸುಖಿಸಬೇಕು ಅಂದ್ರೆ ಸುಖಿಸುತ್ತೆ ,ಜೊತೆ ಬಾಳಬಹುದು ಅನಿಸಿದರೆ  ಬಾಳುತ್ತದೆ .

ಅವನ ಶಕ್ತಿ ಸ್ವರೂಪದ ಮೇಲೆ ಜೊತೆಗಾರಿಕೆಯ ನಿರ್ಧಾರ . ನಾವು ಮನುಷ್ಯರು ಮದುವೆಯನ್ನ ಜಗ ಮೆಚ್ಚಿಸೋದಕ್ಕೆ  ಮಾಡಿಕೊಳ್ಳುತ್ತೀವಿ ,ನೂರಾರು ಜನ, ನೂರಾರು ಕರಾರನ್ನ ಒಪ್ಪಿಗೆ ಕೇಳುತ್ತೀವಿ.

ಪ್ರಾಣಿ ಪಕ್ಷಿಗಳಿಗಿಂತ ಬುದ್ಧಿವಂತನಾದ  ,ಶಕ್ತಿವಂತನಾದ ಮನುಷ್ಯನಿಗೆ  ತನ್ನ ಆಯ್ಕೆ ಮೇಲೆ ತನ್ನ ನಂಬಿಕೆಯೇ  ಕಡಿಮೆ  !ಅಥವಾ ಹಾಗಂತ ಸಬೂಬು ಕೊಡುತ್ತಾನೆ.
ಓದು-ವಿದ್ಯೆ ಪ್ರಕೃತಿ ಸಹಜವಾದದ್ದನ್ನ ಅರ್ಥ ಮಾಡಿಸಬೇಕು,ಜ್ಞಾನ-ತಿಳುವಳಿಕೆ ಜಾತಿ ಜನಿವಾರಗಳ ತೊಲಗಿಸಬೇಕು.

ಹುದ್ದೆ ಸ್ವತಂತ್ರ್ಯವಾಗಿ ಯೋಚಿಸಲು ಪ್ರೇರೇಪಿಸಬೇಕು . ದುಡ್ಡು ಆಯ್ಕೆ ಬಗ್ಗೆ  ವಿಶ್ವಾಸ ಕೊಡಬೇಕು .,ಆದರೆ ಹಾಗಾಗಲ್ಲ .ನೋಡುತ್ತೇನಲ್ಲ  ದಿನಬೆಳಗಾದರೆ.
ಮನೆ ಕಾರು ಬೈಕು ವಿದೇಶ ಪ್ರವಾಸ ಎಲ್ಲಾ ಗಳಿಸುವಷ್ಟು  ಬುದ್ದಿವಂತರಿರುತ್ತಾರೆ  ,ಸಮರ್ಥರಿರುತ್ತಾರೆ. ನಮ್ಮ ಅಪ್ಪಂದಿರ ತರಹ   ರಿಟೈರ್ಮೆಂಟ್  ಟೈಮ್  ವರೆವಿಗೂ ಕಾಯಬೇಕಿಲ್ಲ  ಮನೆ  ಮಾಡಿಕೊಳ್ಳೋದಕ್ಕೆ  ,ವರ್ಷಗಟ್ಟಲೆ  ಪ್ಲಾನ್  ಮಾಡಬೇಕಿಲ್ಲ ಕಾರು  ತೆಗೆದುಕೊಳ್ಳೋದಕ್ಕೆ   ….ಕೆಲಸಕ್ಕೆ  ಸೇರುತ್ತಿದ್ದ  ಒಂದೆರಡು  ವರ್ಷಕ್ಕೆ   ಲೋನ್  ಮೇಲೆ ಮನೆ ಕಾರು ಎಲ್ಲಾ  ಆಗೋಗುತ್ತೆ  ; ಮಕ್ಕಳನ್ನ  ಓದಿಸೋಕೆ   ಹೆಂಗಪ್ಪಾ  ಅನ್ನಬೇಕಿಲ್ಲ , ತಿಂಗಳು ತಿಂಗಳು ಆಗಿ ಮಿಗುವಷ್ಟು ದುಡೀತಾರೆ ,ಲಕ್ಷ  ಗಟ್ಟಲೆ  ಫೀಸ್  ಕಟ್ಟೋಕೆ  ತುದಿಗಾಲಲ್ಲಿ  ಕ್ಯೂ  ನಿಂತು  ತಯಾರು  ಇರುತ್ತಾರೆ   ,  ಆದರೆ  ತಮಗೆ  ಏನು  ಬೇಕು , ಯಾವುದು  ಶ್ರೇಷ್ಠ ಅಂತ  ತಿಳಿದುಕೊಳ್ಳೋಕೆ   ಮನೆ  ಮಂದಿನೆಲ್ಲ  ಕೇಳುತ್ತಾರೆ , ಜ್ಯೋತಿಷಿ   ಗುರುಗಳ  ಹಿಂದೆ ಓಡುತ್ತಾರೆ .. ಭಯ  .. ಬದುಕು  ಸ್ಥಿರವಾಗಿರಬೇಕು ,  ನಿರಂತರವಾಗಿ ಹದವಾಗಿರಬೇಕು  ಸಮಯವಿಲ್ಲ  ಹೋರಾಡೋಕೆ !

ಬರಬರುತ್ತ ಅವನು  ಸಿಗುವುದು  ವಿರಳವಾಯಿತು.  ಬಲವಂತ ಮಾಡಿದಾಗ ಮಾತ್ರ ಬರುತ್ತಿದ್ದ .ಬಂದಮೇಲೆ ನಡೆಯಬೇಕಾದ್ದು ಸರಾಗವಾಗೇ ನಡೆಯುತ್ತಿತ್ತು .ಆದರೆ  ಮತ್ತೆ ಸಿಗೋದಿಲ್ಲ ಈತ ಅನಿಸೋಕೆ ಶುರುವಾಗುತ್ತಿತ್ತು  .ಅಷ್ಟರಲ್ಲಾಗಲೇ  ಎಲ್ಲಾ ನಿಶ್ಚಯಿಸಿಕೊಂಡಿದ್ದ ಅನಿಸುತ್ತೆ .ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.ಅದೊಂದು ದಿನ ಬಂದವನೇ ಕಡೆಯದೆಂಬಂತೆ ಬಾಚಿ ಹಣೆಯ ಮೇಲೆ ದೀರ್ಘವಾದ ಮುತ್ತನಿಟ್ಟ. ಹಣೆಗೆ ಮುತ್ತಿಡುವುದು ಶುದ್ಧ ಪ್ರೀತಿಯ ಸಂಕೇತ ಅಂತ ನನ್ನ ಹಾಗೆ ಅವನು ಎಲ್ಲೋ  ಓದಿಕೊಂಡಿರುತ್ತಾನೆ . ಪ್ರೀತಿಯನ್ನೇ ಮಾಡಿದ್ದೆ ,ಪಾಪವನಲ್ಲ ಅಂತ ನಂಬಿಸಿಕೊಂಡು ಮಾಡಿದನ್ನ ತೊಳೆದುಕೊಂಡು ಹೊಸ ಸಂಸಾರ ಹೂಡೋಕೆ ಹೊರಟಿದ್ದ ಅನಿಸುತ್ತೆ . ಗುಮಾನಿ ಬಂತಾದರೂ ಆ ಕ್ಷಣ  ಕಣ್ಣುಮುಚ್ಚಿ ಸುಳ್ಳನ್ನೇ ಬೊಗಸೆಯಲ್ಲಿ ತುಂಬಿಕೊಂಡು ಪ್ರೀತಿಯನ್ನ ಹಿಡಿದಿಟ್ಟುಕೊಳ್ಳೋಕೆ ನೋಡಿದೆ. ಆದರೆ ಅದಾಗಲೇ ಸಮಯ ಸೋರಿ ಹೋಗಿತ್ತು.

ಕಡೆಯದಾಗಿ ಇರೋಬರೋ ಅಕ್ಕರೆಯನ್ನೆಲ್ಲ ತುಂಬಿಕೊಂಡು ಕಣ್ಣಿಟ್ಟು ಅಂದ
“ಬೇಬಿ , ಐ ಮೇ ನಾಟ್ ಬಿ ದೇರ್ ಫಾರ್ ಯು ಆಲ್ವೇಸ್ ,ಲರ್ನ್ ಟು ಟೇಕ್ ಕೇರ್ ಆ ಯುವರ್ ಸೆಲ್ಫ್ ” ಅಲ್ಲಿಗೆ ಅರ್ಥವಾಯಿತು.

ಕೈಗೆ ಕಣ್ಣಿಗೆ ಅಲ್ಲಿಂದಾಚೆಗೆ ಸಿಗದವನ ಕಡೆಯಿಂದ ಒಂದಷ್ಟು ದಿನ ಬಿಟ್ಟು ಕರೆ ಬಂತು .
“ಮದುವೆ ಇಂತಿಂತ ದಿನ ಇದೆ, ಬರಲೇ ಬೇಕು ನೀನು.” ಈ ಕ್ಷಣ ಭೂಮಿ ಬಿರಿದರೆ ಚೆಂದ ಅನ್ನಿಸಿತು. ಕಡೆಗೂ ಏನೊಂದು ಅದ್ಭುತ ಸಂಭವಿಸಲೇ ಇಲ್ಲ. ಅವನ ಬಗ್ಗೆ ಕರಗಿ ನೀರಾಗಿ ಹರಿದವಳು ಕುದ್ದು ಆವಿಯಾಗಿ ಅತಂತ್ರವಾದೆ.ಎದೆಗೆ ಈಟಿ ಚುಚ್ಚಿದಂತ  ನೋವು. ನಿನಗೆ ಒಂದು ದಿನಕ್ಕೂನು  ನೆನಪಾಗಲಿಲ್ವ ,ನಾ ಬೇಕು ಅನ್ನಿಸಲಿಲ್ವ ,ನನಗಿಂತ ಶ್ರೇಷ್ಠ ಯಾವುದನ್ನು ಅವಳಲ್ಲಿ ಕಂಡೆ ,ನನ್ನಲ್ಲಿ ಏನೂ ಕೊರತೆ  ಇತ್ತು ?ಕೇಳದಿದ್ದ ಪ್ರಶ್ನೆಗಳನ್ನೆಲ್ಲ ಕೇಳಿಬಿಡಬೇಕು ಅನ್ನೋ ಒತ್ತಡ . ನನ್ನ ಹೊಯ್ದಾಟಗಳು ಅರ್ಥವಾಗಲಿಲ್ಲ ಅವನಿಗೆ . ನನ್ನ ಪ್ರಶ್ನೆಗಳಿಂದ  ಚೂರು ಕಸಿವಿಸಿಯಾದಂತೆ ಕಾಣಲಿಲ್ಲ. ಸಂಭ್ರಮದಲ್ಲಿ ಹಾರಿಕೆಯ ಉತ್ತರ ಕೊಟ್ಟು ,ಮದುವೆಗೆ ಮಾತ್ರ ನೀ ಬರಲೇಬೇಕು ನನ್ನ ಸುಖ ಸಂತೋಷ ಪ್ರಾಮಾಣಿಕವಾಗಿ ಹಾರೈಸುವವಳು ನೀನು ,ಬಂದು ಹೋಗು ಅಂದ.ದುಃಖ ನೂರು ಪಟ್ಟಾಯಿತು .

ನಾ ಹೋಗಲಿಲ್ಲ ಅಂದರೂ  ಮದುವೆ ತನ್ನ ಪಾಡಿಗೆ ತಾನು ನೆರವೇರಿತು .ಅದಾದನಂತರ ಅವನನ್ನು ಮಾತನಾಡಿಸಬೇಕು ಅನಿಸಲಿಲ್ಲ, ದ್ವೇಷದಂತ, ಅವಮಾನದಂತ ಸೇಡಿನ ಭಾವ. ಎಂತ  ನಿರ್ಭಾವುಕ ಅನ್ನೋ ಕೋಪ .  ಮರೆಯಲು ಪ್ರಯತ್ನಿಸಿದೆ.ಮರೆತಷ್ಟು ಜ್ಞಾಪಕವಾಗತೊಡಗಿದ. ವಾಟ್ಸಾಪ್ ಡಿಪಿ ಯಲ್ಲಿ  ಅವಳೊಂದಿಗೆ ತಬ್ಬಿ ನಿಂತ ಫೋಟೋ .ತನ್ನದು ಅನ್ನೋ ಹೆಮ್ಮೆಯಲ್ಲಿ ಬಾಚಿ ಹಿಡಿದಿದ್ದಾನೆ ಗಟ್ಟಿಯಾಗಿ. ನಶೆಯಲ್ಲಿ ಅವಳ ಕಣ್ಣುಗಳು ಇನ್ನೂ ತೇಲುತ್ತಲೇ ಇವೆ . ಅರಿಸಿಣ ಮೈನಲ್ಲಿ ಇಬ್ಬರು ಬೆಣ್ಣೆ  ಮುದ್ದು .ನನ್ನ ಭಾಗ್ಯ ಕಣ್ಣೆದುರೆ ಇನ್ಯಾರದ್ದೋ ಪಾಲು.ಕತ್ತಿ ಆಡಿಸಿದ ಅನುಭವ.

ನೋಡುವ ಪ್ರತಿ ಸಿನಿಮಾ, ಭೇಟಿ ನೀಡಿದ ಪ್ರತಿ ಜಾಗ ಕೂಡ ಜೊತೆಯಲ್ಲಿ  ತೆಗೆದುಕೊಂಡ  ಸೆಲ್ಫಿಯೊಂದಿಗೆ ಫೇಸ್ ಬುಕ್ ನಲ್ಲಿ ಅಪ್ಡೇಟ್ ಆಗುತ್ತಿದೆ . . ಫೇಸ್ ಬುಕ್ ನಲ್ಲಿ ಇಷ್ಟೊಂದು ಆಕ್ಟೀವ್ ಯಾವಾಗಿದ್ದ ?.ಅವಳ ಫೇಸ್ಬುಕ್ ಪ್ರೊಫೈಲ್ ನೋಡಿದೆ . ಒಂದಷ್ಟು ಹಿಂದಿನ ಪೋಸ್ಟ್ ಗಳನ್ನ ತಡಕಿದರೆ ಪ್ರೀತಿಯ ಬಗ್ಗೆ, ತನ್ನ ಪ್ರೀತಿಯನ್ನ ಅರಿಯದೆ ಯಾರೋ ಎದ್ದು ಒದ್ದು ಹೋದ ನೋವಿನ ಬಗ್ಗೆ ಪುಂಖಾನುಪುಂಖಾ ಕೋಟ್ಸ್ ಗಳನ್ನು ಹಾಕಿದ್ದಳು .ಈಗದೆಲ್ಲ ಮರೆತ ಹೊಸ ಪ್ರಪಂಚದ ಖುಷಿಯಲ್ಲಿದ್ದಳು .

ಅವಳ ಎಲ್ಲಾ ಅಸ್ತಿತ್ವ ಇವನೊಂದಿಗೆ ತಳುಕು. ಸರ್ ನೇಮ್ ಬದಲಾಗಿದೆ, ಡಿಪಿ ,ಸ್ಟೇಟಸ್ ಎಲ್ಲಾ ಜೊತೆಜೊತೆಗೆ ನವೀಕರಿಸಲಾಗಿದೆ . ಹ್ಯಾಪಿ ಮ್ಯಾರೀಡ್ ಲೈಫ್ ಅಂತ ಬಿದ್ದ ಕಾಮೆಂಟಿಗೆ  ಇಬ್ಬಿಬ್ಬರು ಲೈಕ್ ಒತ್ತಿ ಥ್ಯಾಂಕ್ಸ್ ಹೇಳುವುದು,ಬೆಸ್ಟ್ ಕಪಲ್ ಕ್ಯೂಟ್ ಪೇರ್ ಗಳಿಗೆ ಒಟ್ಟಾಗೇ  ಸಂಭ್ರಮಿಸುವುದು , ಬೆಸ್ಟ್ ವೈಫ್ ಬೆಸ್ಟ್ ಹಸ್ಬೆಂಡ್ ಅಂತ ತಮ್ಮನ್ನು ತಾವೇ ಘೋಷಿಸಿಕೊಂಡು ಸಡಗರಿಸುವುದು,ಎದುರಲ್ಲೇ ಇರ್ತಾಳೆ ಆದರೂ  ಅವಳ ಫೋಟೋಗೆ ಸೂಪರ್ ಆಸಾಂ ಅಂತ ಲವ್ ಸಿಂಬಲ್ ಹಾಕಿ ಇವನು ಬರೆಯೋದು ನೋಡುತ್ತಿದ್ದರೆ ನಮ್ಮ ನಡುವೆ ನಡೆದಿದ್ದೆಲ್ಲ ಸುಳ್ಳೂ ಅನಿಸಿ ತಲೆ ಗಿರಗಿರ  .

ಒಂದೇ ಒಂದು ದಿನ ಬೆಳಕಲ್ಲಿ ನನ್ನ ಒಪ್ಪಿಕೊಂಡಿದ್ದನ ಹೀಗೆ?ಪ್ರತಿ ಬಾರಿಯೂ ಕದ್ದ ನಾಯಿಯ ಆತಂಕ .ಕತ್ತಲೊಳಗೆ ಮುಗಿಸಿಬಿಡುವ ಧಾವಂತ . ಈ ನೋವೆಲ್ಲ ಸಾಕು .ತ್ರಿಶಂಕು ಕಂದರದಲ್ಲಿ ಆಳಕ್ಕಿಳಿದು ಉಸಿರುಗಟ್ಟಿದ್ದು ಸಾಕು,ಅವನಿಗಿಲ್ಲದ ನೋವು ನನಗೆ ಮಾತ್ರ ಯಾಕೆ  ಅನಿಸಿ ಅವನ ಎಲ್ಲಾ ಕುರುಹುಗಳನ್ನು ಅಳಿಸಿ ಹಾಕಿದೆ .ಅವನಾಗಲಿ ಅವನ ಸುದ್ದಿಯಾಗಲೇ ಕಣ್ಣಿಗೆ ಬೀಳದಂತೆ ….

ಹತ್ತಿರ ಸುಳಿದರೂ ನಾಚುತ್ತದ್ದಳು ಹೊಸ ಹೆಂಡತಿ. ಲಜ್ಜಾ ಗೌರಿ. ಪೂರ್ತಾ ಪೂರ್ತಿ ಸಿಕ್ಕಿದ್ದಳು. ಎಲ್ಲಾ ಮನ್ನಣೆ ಜನರ ಅನುಮತಿಯೊಂದಿಗೆ .ಹೆಣ್ಣಿಗೆ ಲಜ್ಜೆಯೇ ಭೂಷಣ .ನೋಡೋದಕ್ಕೆ ಅವಳು ಚಂದ ಇದ್ದಳು .ಇವಳು ಅಂದವಿದ್ದಳು ,ಯಾರೂ ಹೆಚ್ಚಲ್ಲ ಯಾರೂ ಕಡಿಮೆಯಲ್ಲ .
ನೆನಪಾಗಲಿಲ್ಲ ಅಂತಲ್ಲ ಅವಾಗವಾಗ ನೆನಪಾಗುತ್ತಿದಳು .

ಎಷ್ಟೇ ಆದರೂ ಅವಳು ಮೊದಲ ಸ್ಪರ್ಶ ಮೊದಲ ಸ್ಖಲನ . ಅಲ್ಲಿ ಕಣ್ಣಲ್ಲಿ ಜಗಿದು ಉಣ್ಣುವಷ್ಟು ಮೃಗದ ಆತುರತೆ . ಇಲ್ಲಿ ಕಣ್ಣು ತಾಗಿಸಿದರೂ ನೆಲಕ್ಕೆ ಹುದುಗುವ  ಮೌನ ಗೌರಿ. ಒಂದು ಸೂರ್ಯೋದಯ ಮತ್ತೊಂದು ಸೂರ್ಯಾಸ್ತ . ಎರಡರ ಬಣ್ಣವೂ ಒಂದೇ , ಸೌಂದರ್ಯವೂ ಒಂದೇ   .. ಕಂಪೇರ್ ಮಾಡಬೇಕಿರಲಿಲ್ಲ .ಅಲ್ಲೂ ಸುಖವಿತ್ತು ಇಲ್ಲೂ ಸುಖವಿತ್ತೂ. ಅಂದುಕೊಂಡ ನೆಮ್ಮದಿಯ ಬಾಳು.

ಕಾದಿರುತ್ತಿದ್ದಳು ಬರುವಿಕೆಗೆ ಚಂದ್ರಿಕೆ  .ಸಂಭ್ರಮ ಸಡಗರ.ಬೇಕು ಎಂದಾಗಲೆಲ್ಲ ಕೈಗೆ ಸಿಕ್ಕಿದಳು .ಸಾಕೆನಿಸುವಷ್ಟು ಸಹಕರಿಸಿದಳು. ಜೀವ ಅಂದಳು ದೇವರು ಅಂದಳು .ಇದು ಬೇಕು ಅಂದಳು .ಅದು ಬೇಕು ಅಂದಳು. ನನ್ನನ್ನು ಬಿಟ್ಟು ಅಸ್ತಿತ್ವವೇ ಇಲ್ಲ ಅಂದಳು . ಅಹಂ ಭರಪೂರ ತೃಪ್ತಿಯಾಯಿತು.

ಒಂದುವೇಳೆ ಸ್ನೇಹ ಆಗಿದ್ದಿದ್ದರೆ ಹೀಗೆ ಇರುತ್ತಿತ್ತಾ ಆಗಾಗ ಕೇಳಿಕೊಳ್ಳುತ್ತಿದ್ದೆ  . ಸ್ವಾವಲಂಬನೆಗೂ ಅಹಂ ತೃಪ್ತಿಗೂ ಚೂರು ದೂರಾದೂರಾ . ಸ್ವಾತಂತ್ರ್ಯದ ಗಟ್ಟಿ ಹೆಣ್ಣು ಸಂಸಾರಕ್ಕೆ ಆಗಿಬರೋದು ಕಷ್ಟ . ಅತ್ತೆ ಸೊಸೆ ಹೊಂದಾಣಿಕೆ ಕೂಡ ಸುಲಭವಲ್ಲ . ನಾ ತೆಗೆದುಕೊಂಡ ಆಯ್ಕೆ ಸರಿ ಎನಿಸಿ  ನೆಮ್ಮದಿ .

ಅವನ ವಿಷಯ ಅದೆಷ್ಟು ದೂರವಿಟ್ಟರೂ ಇಬ್ಬರಿಗೂ ಪರಿಚಯದವರಿಂದ ಹಾಗೊಂದು ಹೀಗೊಂದು ಮಾತಿನ ಮಧ್ಯೆ ಬೇಡವೆಂದರೂ ಬಂದು ತಲುಪುತ್ತಿತ್ತು .ಸಂಭ್ರಮದಲ್ಲಿದ್ದನವ.ಅಪ್ಪನಾಗುವ ಸಂಭ್ರಮ.

ಮಲಗಿದ್ದ ಮಡಿಲಲ್ಲಿ ಹಿಂದೊಮ್ಮೆ ,ಅವನೇ ಒಂದು ಮಗುವಾಗಿ . ರೆಸಾರ್ಟ್ನಲ್ಲಿದ್ದೆವು.ಮೊದಲ ಬಾರಿಗೆ ಎಷ್ಟೋ ಹೊತ್ತು ಏನೇನೋ ಮಾತನಾಡಿದ .ಅವನ ಭಯ ಅಸಹಾಯಕತೆ ತಲ್ಲಣ ತೊಂದರೆ ತಾಪತ್ರಯ ಎಲ್ಲವನ್ನೂ ಹೇಳಿಕೊಂಡು ಹೋದ .ಅದ್ಯಾವುದೂ ಸಮಸ್ಯೆಯೇ ಅಲ್ಲ ನೀನು ಪರಿಪೂರ್ಣ ಅನ್ನೋ ಭಾವದಲ್ಲಿ ತಲೆ ನೇವರಿಸುತ್ತಾ ಕುಳಿತ್ತಿದ್ದೆ ನಾನು .ಅವನ ಮುಖದಲ್ಲೊಂದು ಸಮಾಧಾನ ತೆಳುವಾಗಿ ಹರಡಿತು.

ಹಾಗೇ ನಿದ್ದೆ ಹೋದ.ಮುಖದಲ್ಲಿ ಹಾಗೆ ಮುಗುಳುನಗೆ ಹರಡಿತ್ತು .  ನನ್ನದು ಮತ್ತು ಅವನದು ಅಂತ  ಒಂದು ಜೀವ ಮೊಳಕೆ ಒಡೆದರೆ ಎಷ್ಟು ಮದ್ದಾಗಿರಬಹುದು ಅನ್ನಿಸಿತ್ತು. ಹಂಚಿಕೊಳ್ಳಬೇಕು ಇವನೊಂದಿಗೆ ದೇಹ ರಕ್ತ ಮಾಂಸ .ಆಸೆಯಾಯಿತು . ಕುರುಹಾಗಿ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿಳಿದಿದ್ದರು.

ಮೊದಮೊದಲು ತಂದು ಹಾಕುವುದು ತೃಪ್ತಿಪಡಿಸುವುದು ಖುಷಿಯ ವಿಷಯವಾಗಿತ್ತು .ನನಗಾಗಿ ಜೀವವೊಂದು ಕಾದಿದೆ ಅನ್ನೋದೇ ಹೆಮ್ಮೆ. ಬರಬರುತ್ತಾ ಚೂರು ಚೂರೇ ಆಯಾಸ. ಪೆದ್ದಿಯಂತೆ ಎಲ್ಲದಕ್ಕೂ ನನ್ನನ್ನೇ ಕಾಯುವಾಗ ಇದಕ್ಕೂ ನಾನೇ ಬರಬೇಕಾ ಅನ್ನೋ ಸಣ್ಣ ಸಿಡುಕು. ನೀನೇ ಜೀವ ನೀನೇ ದೈವ ಅನ್ನೋ ಮಾತೆಲ್ಲ ಹಳತಾಯಿತು. ಹಸಿ ಅರಿಶಿನದ ಆರ್ದತೆ ಉಳಿಯಲಿಲ್ಲ .ಹುಡುಗಿ ಬಲಿಯುತ್ತಿದ್ದಳು.

ಅವರಿವರು ತಲೆ ತುಂಬಿಸಿದ್ದನ್ನು ಕಲಿಯುತ್ತಿದ್ದಳು.ಅಚ್ಚುಕಟ್ಟಾಗಿ ಪ್ರಯೋಗಿಸುತ್ತಿದ್ದಳು.ಯಥಾಪ್ರಕಾರ ಅಮ್ಮನಿಗೂ ಇವಳಿಗೂ ಏನು ವೈಮನಸ್ಸು .ಬೇರೆ ಮನೆ, ಸಪರೇಟ್ ಆಸ್ತಿ ಅಂತೆಲ್ಲ ರಗಳೆ ತೆಗೆದಳು .ರೇಗಿದರೆ ಅಳು .ನಿರ್ಲಕ್ಷಿಸಿದರೆ ಮುಷ್ಕರ .ಅವಲಂಬನೆ ಅಂತ ತೋರಿಸಿಕೊಂಡಿದ್ದು ಬರಬರುತ್ತಾ ಹಕ್ಕಾಗಿ ಚುಕ್ಕಾಣಿ ಹಿಡಿಯತೊಡಗಿತ್ತು . ಅಸಹಾಯಕತೆ ಹೋಗಿ ಅಧಿಕಾರ ಸ್ಥಾಪನೆಯಾಯಿತು.ಉಪವಾಸ ಕೆಡವಿ ತಿವಿದು ತಿದ್ದಿ  ಬೇಕಾದ ಹಾಗೆ ತೀಡಿಕೊಳ್ಳುವ ಚಾತುರ್ಯ ಮೂಡಿ ಹೆಣ್ಣು ಹೆಂಡತಿಯಾಗುವುದ  ಕಲಿತಳು . ಲಜ್ಜೆ ಗಿಜ್ಜೆ ಎಲ್ಲಾ ಊರಾಚೆ .ನಿನ್ನ ಹಸಿವು ನೀಗಿಸುವ ಅನ್ನ ನಾನು ಅನ್ನೋ ಗರ್ವ. ಮದುವೆಯ ಅಡಿಯಲ್ಲಿ ಯಾರು ಯಾರನ್ನ ಪಡೆಯುತ್ತಾರೆ , ಯಾರು ಯಾರನ್ನ ಬಳಸಿಕೊಳ್ಳುತ್ತಾರೆ ಅನ್ನೋ ಹೊಸ ಜಿಜ್ಞಾಸೆ ಶುರು .ಹೊಸತೆಲ್ಲ ಹಳತಾಗಲೇ ಬೇಕು.ಹಳತಾದಷ್ಟು ಹೊಸದಕ್ಕೆ ಮಿಡಿಯುತ್ತದೆ  ಮನಸ್ಸು  . ತನ್ನದೆಲ್ಲವನ್ನೂ ತಾನೇ ನಿಭಾಯಿಸಿಕೊಳ್ಳುತ್ತಿದ್ದ ಅವಳು ಹೆಚ್ಚು ಹೆಚ್ಚು ನೆನಪಾದಳು .ಸುಲಭದ ನಿರ್ವಹಣೆ ಅಪ್ಯಾಯಮಾನ ಅನಿಸಿತು .ಬೇರೆ ಅಪೇಕ್ಷೆ ಇರದೆ ಜೊತೆಗಿದ್ದವಳು ಸುಖವೆನಿಸ ತೊಡಗಿದಳು .ಅಂಥದ್ದೇನೂ ಸಮಸ್ಯೆ ಇಲ್ಲಿರಲಿಲ್ಲ.ಆದರೆ ಕೊರತೆ ಅನಿಸಿತು.ಅಷ್ಟರಲ್ಲಿ ಜೀವವೊಂದು ಅವಳಲ್ಲಿ ಟಿಸಿಲೊಡೆದಿತ್ತು .

ನಾನು ತೀವ್ರವಿರಬಹುದು ಆದರೆ ಚಂಚಲವಲ್ಲ. ಅಸ್ಥಿರತೆ ಇದ್ದಿಲ್ಲ .ಸ್ವಚ್ಛವಾಗಿ ಪ್ರೀತಿಸಿದ್ದೆ  ಜಗತ್ತಿನ ಉದಾತ್ತ ಪ್ರೇಮ ಕಥೆಗಳಲ್ಲಿದ್ದಂತೆ. ನನ್ನ ಸುತ್ತಲಿನ ಲೋಕವೆಲ್ಲ ಪ್ರೇಮಮಯ.ಸ್ಕೂಲು ಕಾಲೇಜು ಕಚೇರಿ ನೆರೆಹೊರೆ ಊರು ಕೇರಿ ತುಂಬೆಲ್ಲ ನವಿರಾದ ನೂರು ಪ್ರೇಮ ಕಥೆಗಳು. ಕಥೆ ಕಾವ್ಯ ಕಾದಂಬರಿ ಸಿನಿಮಾ ಹಾಡು ಎಲ್ಲದರಲ್ಲೂ ಆದರ್ಶ ಪ್ರೇಮ.ಪ್ರೇಮಿಯೊಬ್ಬ  ಏನೆಲ್ಲಾ ಮಾಡಿಯಾದರೂ ಪ್ರೇಯಸಿಯನ್ನು ಪಡೆಯಲು ಯತ್ನಿಸುತ್ತಾನೆ..ಹುಚ್ಚನಾಗುತ್ತಾನೆ ತ್ಯಾಗಿ ಆಗುತ್ತಾನೆ ಸಂತನಾಗುತ್ತಾನೆ

ಜೀವಬಿಡುತ್ತಾನೆ.ಪ್ರೇಮವನ್ನ ಅಮರವಾಗಿಸುತ್ತಾನೆ .ನನ್ನ ಕಥೆ ಮಾತ್ರ ವಿಚಿತ್ರವಾದದ್ದು. ಯಾವ ಅಂದಾಜಿಗೂ ನಿಲುಕದ್ದು . ಕಾಮ ಮಾತ್ರ ಸತ್ಯ ಪ್ರೇಮ ಸುಳ್ಳು ಎಂದಂತಿತ್ತು ಅವನು .ನನ್ನ  ನತಾದೃಷ್ಟ ನನ್ನ ಪ್ರೀತಿ ತುಳಿದ ಹಾದಿ ದುರಂತ .ಸಿಗದ್ದಕ್ಕೆ ನರಳಾಟ ಮರೆಯೋದಕ್ಕೆ ಪರಿಪಾಟಲು .ಪ್ರೇಮವೆಂಬುದೆ ಹೃದಯ ವಿದ್ರಾವಕ ಹಸಿ ಹಸಿ ಸುಳ್ಳು ಅನಿಸೋ ನಿರ್ಭವುಕತೆ ಆದರೆ ಅದಿಲ್ಲದ ಬಾಳು ನಿರುಪಯುಕ್ತ. ಸುಲಭವಲ್ಲ ಪ್ರೀತಿ ಮಾಡುವುದು .ಏನಾದರೂ ಅವನದೇ ಚಡಪಡಿಕೆ .

ಇಷ್ಟರಲ್ಲಾಗಲೇ  ಮಗು  ಆಗಿರಬಹುದೇ,ಊಹೆ. ನನಗ್ಯಾಕೆ ಮತ್ತೆ ಮತ್ತೆ ಅವನದೇ ಚಿಂತೆ .ಬಾಹ್ಯದಲ್ಲಿ ಹತ್ತಿಕ್ಕಿದಷ್ಟು ಅವನ ನೆನಪು ಕನಸಾಗಿ ಸುಪ್ತ ಮನಸ್ಸಿಗೆ ದಾಳಿ ಇಡುತ್ತಿತ್ತು  .ಚಿತ್ರ ವಿಚಿತ್ರ ಕನಸುಗಳು . ನನಸಾಗದೆ ಮುಗಿದಿದ್ದು ಕನಸಾಗಿ ಮುಂದುವರೆದು  ಕಂಗೆಡಿಸುತ್ತಿತ್ತು .  ಅಲ್ಲಿ ನೆಮ್ಮದಿಯಿಂದಿದ್ದಾರೆ ಅವರಿಬ್ಬರೂ . ನಾನಿಲ್ಲಿ ಪ್ರತಿ ಕನಸಿಗೂ ಛಿದ್ರವಾಗುತ್ತೇನೆ.ಹಗಲಲ್ಲಿ ಬೇಯುತ್ತೇನೆ. ಉರಿ ಹೊಟ್ಟೆ ಉರಿ ಅಸೂಯೆ .

ನಾನು ಸ್ವಾರ್ಥಿ ಇರಬಹುದು ನಿಜ ಆದರೆ ಅಪ್ರಾಮಾಣಿಕನಲ್ಲ ನಂಬಿಸಿ ವಂಚಿಸಿಲ್ಲ .ಸಾಂದರ್ಭಿಕವಾಗಿ ಅನ್ನಿಸಿದ್ದನ್ನು ಮುಚ್ಚುಮರೆ ಇರದೆ ಬದುಕಿದ್ದೇನೆ .ಆದರೆ ಅದು ಅನ್ಯಾಯ ಆಗಿರಬಹುದೇ  ?ಅವಳನ್ನು ನೋಯಿಸಿದ  ಶಾಪ ತಟ್ಟುತ್ತದೆಯೇ ? .ನೋ ಹಾಗೆಲ್ಲಾ ಆಗೋಲ್ಲ .ಅವಳೆಂದೂ ನನ್ನ ಕೆಡಕು ಬಯಸಿಲ್ಲ .ಮಗುವನ್ನು ಭೂಮಿಗೆ ತರುವಾಗ ಹೆರಿಗೆಯಲ್ಲಿ complications ಆಯಿತು .

ನನ್ನ ಯಾವ ಹಣ ಆಸ್ತಿ ಮುಂದುವರೆದ ಮೆಡಿಕಲ್ ಸೈನ್ಸ್ ಕೂಡ ಪ್ರಯೋಜನಕ್ಕೆ ಬರಲಿಲ್ಲ .ಯಾವ ಚಿಕಿತ್ಸೆಗೂ ದಕ್ಕದೇ ಹೆಂಡತಿ ತೀರಿ ಹೋದಳು.  ಕೈಯಲ್ಲಿ ಪುಟ್ಟ ಮಗು. ನನ್ನದೇ ನಿರಂತರತೆ .ಸಾವು ಎಂಥವರನ್ನು ಕಂಗಾಲಾಗಿಸುತ್ತದೆ ಅದರಲ್ಲೂ ಹೆಂಡತಿಯದ್ದು  .ಕಳಕೊಂಡ ನೋವು ವ್ಯಕ್ತಿಗೆ ಸಂಭಂದಿಸಿದ್ದೋ  ,ಹೆಂಡತಿಯ ಸ್ಥಾನಕ್ಕೂ ಗೊತ್ತಿಲ್ಲ .ಬದುಕು ತಟಸ್ಥ.  ಭವಿಷ್ಯ ಪ್ರಶ್ನಾರ್ಥಕ  .ಮಗುವಿಗೊಂದು ತಾಯಿ ಬೇಕು ಕಣೋ ಬುದ್ಧಿ ಬಲಿಯುವಷ್ಟರಲ್ಲಿ ಸಿಕ್ಕರೆ ಮಗು  ಹೊಂದಿಕೊಳ್ಳುತ್ತದೆ, ಅಮ್ಮ ಪದೇ ಪದೇ ಅನ್ನತೊಡಗಿದಳು .ನೋವು ತಿಳಿಯಾದಂತೆ ದೇಹದ ಅಗತ್ಯಗಳು ದನಿ ಎತ್ತ ತೊಡಗಿದವು .ಮಗುವಿಗಷ್ಟೇ ಅಲ್ಲ ನನಗೂ ಬೇಕು ಹೆಣ್ಣು ,ಆದರೆ ಸಿಗುತ್ತಾಳಾ ಸಿಕ್ಕರೂ ಸಹೃದಯಿ ಆಗಿರುತ್ತಾಳ? ನನ್ನದೆಲ್ಲವನ್ನೂ ತನ್ನದು ಅಂತ ಒಪ್ಪುತ್ತಾಳ?ಮಗುವಿನ ಬಗ್ಗೆ ಆತಂಕ .ನೆನಪಾದಳು ಮತ್ತೆ ಅವಳು . ಮೊದಲ ಆದ್ಯತೆಯಾಗಿ. ಗೊತ್ತಿದ್ದವರನ್ನು ವಿಚಾರಿಸಿದೆ.

ಅವಳಿಗಿನ್ನೂ ಮದುವೆ ಇಲ್ಲ. ಕೇಳಿ ಬಿಡಲೆ? ತಪ್ಪಾಯಿತು ಅಂತ ಹೇಳಿದರೆ ಒಪ್ಪುತ್ತಾಳೆ ಬಹುಶ್ಯ. ಅವಳ ಬಿರುಸಿನ ಬಗ್ಗೆ ಭಯವಿತ್ತು .ಶಕ್ತಿಯ ಬಗ್ಗೆ ಭಯವಿತ್ತು ಅವಳೆದುರು ನಾನೇನು ಆಗದೆ ಸೋತರೆ ಎನ್ನುವ ಭಯ .  ಆದರೆ ಅಪನಂಬಿಕೆಗಳಿರಲಿಲ್ಲ ..ಕಲ್ಮಶವಿರಲಿಲ್ಲ.ಅವಳಷ್ಟು ನಿಸ್ವಾರ್ಥಿಯಾಗಿ ಯಾರು ನನ್ನ ಜೊತೆಗಿರಲು ಸಾಧ್ಯವಿಲ್ಲ.
ಹೆಣ್ಣು ಒಡೆದಷ್ಟು ಗಟ್ಟಿ ಆಗುತ್ತಾಳೆ , ಮೂಲ ಸ್ವರೂಪಕ್ಕಿಂತ ಹೆಚ್ಚು ಆವೃತಿ ಪಡೆದುಕೊಳ್ಳುತ್ತಾಳೆ  ಮರಳಿನ ತರಹ.ಕಲ್ಲಾಗಿದ್ದಾಗ ಕಲ್ಲಷ್ಟೇ.ಪುಡಿಯಾಗಿ ಹರಳಾದಮೇಲೆ ಮರಳು..ಕಾಯಿಸಿದರೆ ಬಿಸಿಯನ್ನು ಕಾದಿರಿಸಿಕೊಳ್ಳುತ್ತಾಳೆ ,  ಆರಿಸಿದರೆ ತಂಪನ್ನ ಹಿಡಿದಿಟ್ಟುಕೊಳ್ಳುತ್ತಾಳೆ…ನೀರಿಗೂ ಸೇರುತ್ತಾಳೆ ,ಗಾರೆಗೂ ಸೇರುತ್ತಾಳೆ,.ದಡದ ಮರಳಾಗಿ ದಂಡೆನೂ ಆಗಿ ಗಟ್ಟಿನೇ ನಿಲ್ಲುತ್ತಾಳೆ , ಕರಗಲ್ಲ.,ಪುಡಿಯಾದರೂ ಅಶಕ್ತಳಾಗಲ್ಲ.
ಭೇಟಿಯಾಗುತ್ತೇನೆ ಒಮ್ಮೆ .ಎಲ್ಲಿ ಅದೇ ನಮ್ಮ ಪೀನಟ್ ಮಸಾಲಾದಲ್ಲಿ ಎಷ್ಟು ದಿನಗಳಾಗಿವೆ ಉನ್ಮತ್ತನಾಗಿ .ಎಂತೆಂಥ ಸುಖಗಳಿಂದ ವಂಚಿತ.   ಭೇಟಿ ಆಗೋಣ ಅಂತ ಬುಲಾವು ಕಳಿಸಿದ್ದೇನೆ .

ನಾ ಹೋದಾಗ ಅವನಾಗಲೇ ಅಲ್ಲಿದ್ದ. ಟೇಬಲ್ ಬಳಿ  ಹೋಗಿ ಕೂತೆ. ಹೇಗೆ ಶುರು ಮಾಡಬೇಕು ಏನು ಶುರು ಮಾಡಬೇಕು ಗೊತ್ತಿಲ್ಲ .ಕರೆದಿರುವುದು ಅವನಲ್ಲವ ಅವನೇ ಮಾತನಾಡುತ್ತಾನೆ ಬಿಡು .ಮನಸ್ಸುಗಟ್ಟಿ ಮಾಡಿಕೊಂಡೆ . .ನಮ್ಮಿಬ್ಬರನ್ನು ಮತ್ತೆ ಒಟ್ಟಿಗೇ ನೋಡಿದ ಇನ್ನಿಲ್ಲದ ಖುಷಿಯಲ್ಲಿ ಬೇರರ್ ಪರಿಚಯದ ನಗೆ ನಕ್ಕ.ಆದರೆ ಸಂತೋಷನ  ಮುಖ ಪೆಚ್ಚಾಗಿತ್ತು .ತಡೆಯಲಾರದೆ ನಾನೇ ಕೇಳಿದೆ “ಹೇಗಿದ್ದೀಯೋ?ಸಾರಿ ಹೀಗೆಲ್ಲ ಆಗಬಾರದಿತ್ತು” .ಸಹಜವಾಗಿ ನಾ ಮಾತನಾಡಿದ್ದು ಅವನಿಗೆ ಧೈರ್ಯ ತುಂಬಿರಬೇಕು .ಗೆಲುವಾದ. ಅದು ಇದು ಮಾತಾಯಿತು .

“ಪೀನಟ್ ಮಸಾಲಾ ಜತೆ ವೋಡ್ಕಾ ಮತ್ತು ಬೀರ್ ತರಲಾ?”ಅತೀ ಉತ್ಸಾಹದಲ್ಲಿ ಬೇರರ್ ಕೇಳಿದ .ಕುಡಿಯುವ ಮನಸ್ಸಿರಲಿಲ್ಲ ಸುಮ್ಮನೆ ಅವನ ಕಡೆ ನೋಡಿದೆ.ಪೀನಟ್ ಮಸಾಲಾ ಸಾಕು ಅಂದ .
ಬೇರರ್ ನಗುತ್ತಾ ಹೋದ .
ಒಬ್ಬರ ಮನಸ್ಸಿನೊಳಗೆ ನಡೆಯುವುದನ್ನು ಇನ್ನೊಬ್ಬರು ಅಳೆಯುತ್ತಿದ್ದೆವು.
ಪೀನಟ್ ಮಸಾಲಾ ಮೊದಲಿನಂತಿರಲಿಲ್ಲ ಖಾರ ಕಡಿಮೆ ಇತ್ತು .ಮಸಾಲೆ ಕಡಿಮೆ ಇತ್ತು. ಪೀನಟ್ ಗರಿಗರಿಯಾಗಿರಲಿಲ್ಲ .ಅದು ಮುಖ್ಯವೂ ಆಗಿರಲಿಲ್ಲ
“ಯಾಕೆ ಇನ್ನೂ ಮದುವೆ ಆಗಿಲ್ಲ?” ಕೇಳಿದ.
ಏನಂತ ಹೇಳೋದು ಆಗಬೇಕು ಅಂತಾ ಅನಿಸಿಲ್ಲ ಅಂತಾನೂ ನಿನ್ನಷ್ಟು ಸೊಗಸು ಯಾರೂ ಸಿಗಲಿಲ್ಲ ಅಂತಾನೋ.ಎರಡರಲ್ಲೂ ಸತ್ಯವಿತ್ತು .

“ಹೇಗಿದ್ದಾನೆ ಮಗ?” ಕೇಳಿದೆ
“ನನ್ನ ತರಹ ಇದ್ದಾನೆ ಅಂತಾರೆ ಎಲ್ಲರೂ ” ಅವನ ಕಣ್ಣುಗಳು ಹೊಳೆದವು .
ಫೋಟೋ ತೋರಿಸಿದ.ನಿಜ ಇವನದೇ ಪಡಿಯಚ್ಚು ಮುತ್ತಿಡಬೇಕು ಅನಿಸಿಬಿಡ್ತು
“ಮುಂದೆ..ಮಗುವಿನ ಬಗ್ಗೆ ?” ಕೇಳಿದೆ .
“ಅದೇ ಯೋಚನೆ ಮಾಡ್ತಿದ್ದೀನಿ ಮಗುವಿಗೆ ಅಮ್ಮ ಬೇಕು ಮನೆಗೊಂದು ಹೆಣ್ಣು ಬೇಕು ಮನೇಲಿ ಬಲವಂತ ಮಾಡುತ್ತಿದ್ದಾರೆ .ನೆಂಟರಲ್ಲೇ ಇದ್ದಾರೆ ಹುಡುಗಿಯರು  .ಆದರೆ ನಾನೇ ಬೇಡ ಅಂತ”
” ಯಾಕೆ?” .
“ನನಗೋಸ್ಕರ ನನ್ನ  ಆಸ್ತಿಗೋಸ್ಕರ ಒಪ್ಪಬಹುದು ಆದರೆ ಮಗು! ಅಕ್ಸೆಪ್ಟ್ ಮಾಡ್ತಾರಾ !ನಂಗೇನು ಡೌಟು”
ಏನೇ ಪರಿಸ್ಥಿತಿ ಬಂದರೂ ಡಿಮ್ಯಾಂಡ್ ಕಮ್ಮಿ ಆಗಿದೆ ಅಂತ ಗಂಡಸು ಒಪ್ಪೋದೆ ಇಲ್ಲ .
“ಎಲ್ಲವನ್ನೂ ಕಲ್ಪಿಸಿಕೊಂಡೇ ಯಾಕೆ ನರಳುತ್ತೀಯ. ಒಳ್ಳೆಯದು ಆದರೂ ಆಗಬಹುದು

ಹೋಪ್ಸ್ ಇಟ್ಟುಕೋ”
ನನಗೆ ತಿಳಿಯದೆ ಸಮಾಧಾನಿಸ ತೊಡಗಿದ್ದೆ .
“ಇಲ್ಲಾ ಸ್ನೇಹ..” ಅಂದವನು ಏನೋ ಹೇಳಲು ಹೋಗಿ ತಡೆದು, ಮಾತು ತಿರುಗಿಸಿದ. ಸುಮಾರು ಹೊತ್ತು ಅದು ಇದು ಮಾತು ಗಿರಕಿ ಹೊಡೆಯಿತು .ಎಲ್ಲ ಸುತ್ತಿ ಒಂದು ಸಾಮಿಪ್ಯ ನಿಗದಿ ಆಯ್ತು ಅನಿಸಿದ ಮೇಲೆ ಚೂರು ಓಪನಪ್ ಆದ .ಬೇರರ್ ನನ್ನು ಕರೆದು ಒಂದು ಬೀರ್ ಹೇಳಿದ.
“ನಿನಗೆ ವೋಡ್ಕಾ ?”
“ಇಲ್ಲ ಬೇಡ ರೂಢಿ ತಪ್ಪಿದೆ” ಅಂತಂದು  ಸುಮ್ಮನಾದೆ .

ಒಂದರ ನಂತರ ಮತ್ತೊಂದು ಬೀರ್ ಹೋದ ಮೇಲೆ ಕೇಳಿಯೇ ಬಿಟ್ಟ
“ಮದುವೆ ಆಗ್ತೀನಿ ಅಂದ್ರೆ ಒಪ್ಪಿಕೊಳ್ಳುತ್ತೀಯ ಈಗ ?ಈಗಲೇ ಹೇಳಬೇಕು ಅಂತ ಏನಿಲ್ಲ . ಟೈಮ್ ತಗೋ ಯೋಚನೆ ಮಾಡು .ಆಗ ಹೇಳುತ್ತಿದ್ದೆಯಲ್ಲ ನಿನಗೋಸ್ಕರ ಎಂಥ ತ್ಯಾಗ ಬೇಕಾದ್ರೂ ಮಾಡ್ತೀನಿ ಅಂತ, ಹಾಗಂತ ಈಗೇನು ನೀ ತ್ಯಾಗ ಮಾಡಬೇಕಿಲ್ಲ ಚೆನ್ನಾಗಿಯೇ ನೋಡಿಕೊಳ್ಳುತ್ತೇನೆ  . ಬಲವಂತ ಏನಿಲ್ಲಾ  .ಒಂದು ಮಾತು ಕೇಳೋಣ ಅನ್ನಿಸಿತು .ನನ್ನ ಸ್ಥಿತಿ ನಿನಗೆ ಅರ್ಥ ಆಗುತ್ತದೆ ಅಂದುಕೊಂಡಿದ್ದೇನೆ “
“ನೀನು ನನ್ನ ಇಷ್ಟ ಪಟ್ಟಿದ್ದೆಯಾ  ?”

“ನಂಗೆ ನೀ ಯಾವತ್ತಿಗೂ ಇಷ್ಟಾನೆ ಕಣೇ .ಅದಕ್ಕೆ ಅಲ್ವಾ ಅಷ್ಟು ಜೊತೆ ತಿರುಗಿದ್ದು ,ಸಮಯ ಕೊಟ್ಟಿದ್ದು ,ಖರ್ಚು ಮಾಡಿದ್ದು. ಎಷ್ಟು ರಿಸರ್ವ್ಡ್ ನಾನು ನಿನಗೆ ಗೊತ್ತಿತ್ತು  .”
“ಮತ್ತೆ  ಯಾಕೆ ಬೇರೆಯವರನ್ನು ಮದುವೆ ಆದೆ?”
“ಸ್ನೇಹ ಬಿಡು ಹಳೆಯದನ್ನೆಲ್ಲ .ಮೋಸ್ಟ್ ಲಿ ನನ್ನ ಹಣೆಬರಹದಲ್ಲಿ ಹೆಂಡತಿ ಸಾಯಬೇಕು ಅಂತ ಬರೆದಿರಬೇಕು .ನಿನ್ನ ಮುಂಚೆನೇ ಮದುವೆ  ಆಗಿದಿದ್ರೆ ನೀನೇ ಸಾಯುತ್ತಿದ್ದೆಯೋ ಏನೋ”
.ತಡೆಯೋಕೆ ಆಗದಷ್ಟು ನಗು ಬಂತು.ಇನ್ನಷ್ಟು  ಕಾಡಿಸಬೇಕು ಅನಿಸಿತು ,
“ಯಾವತ್ತಾದ್ರೂ ನನ್ನ ಮಿಸ್ ಮಾಡಿಕೊಂಡೆ ಅನಿಸಿತಾ ?” .
“ಆಫ್ ಕೋರ್ಸ್ ಸ್ನೇಹ ತುಂಬಾ ಸರ್ತಿ ನೆನೆಸಿಕೊಂಡೆ.”

” ಮತ್ತೆ ಮೀಟ್ ಮಾಡಲೇ ಇಲ್ಲ ಕ್ಯಾಶುವಲ್ ಆಗಿ ಆದ್ರೂ ಒಮ್ಮೆ ಭೇಟಿ ಆಗಬಹುದಿತ್ತು “
“ಈಗ ಬಂದಿದ್ದೀನಲ್ಲ ಹೇಳು .”
“ನಿನ್ನ ಹೆಂಡ್ತಿ ಇದ್ದಿದ್ದರೆ  ಬಂದಿರುತ್ತಿದ್ದ? ನಾನೇ ಕರೆದಿದ್ದರು ?”
ಮಾತಿಲ್ಲ ಗಾಢ ಮೌನ .ಮತ್ತೆ ನಗು ಬಂತು.
” ನೀನೂ?ನನ್ನ ಮಿಸ್ ಮಾಡಿಕೊಂಡೆಯ?” ಈ ಬಾರಿ ಕೊಂಚ ಭಾವುಕತೆ ನಟಿಸುತ್ತಾ ಅವನು ಕೇಳುತ್ತಿದ್ದ .

ಅಲ್ಲಿನವರೆಗೂ ತಡೆ ಹಿಡಿದಿದ್ದೆಲ್ಲವೂ ದುಃಖ ಅವಮಾನ ಆವೇಶ ಉದ್ವೇಗವಾಗಿ ಒತ್ತರಿಸಿಕೊಂಡು ಒಮ್ಮೆಗೆ ನುಗ್ಗಿತ್ತು .ಕುಡಿಯದೆ ಗಂಟಲು ಶ್ವಾಸ ಹೊಟ್ಟೆ ಎಲ್ಲಾವೂ ಬಿಸಿ ಬಿಸಿ .ಕಣ್ಣಾಲಿಗಳು ಕೋಡಿ ಬಿದ್ದವು .ಪದಗಳಲ್ಲಿ ಉತ್ತರ ಇರಲಿಲ್ಲ.
ಮೆದುವಾಗಿ ಅಂಗೈ ಅಮುಕಿ ಹಿಡಿದ.
” ನಿನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ ಸ್ನೇಹ .ಐಯಾಮ್ ಸಾರಿ .”  ತಲೆ ಕೆಳಗಾಕಿ.
ಎಲ್ಲ ತೀರ್ಮಾನವಾಯಿತು ಅನ್ನೋ ಭರವಸೆಯಲ್ಲಿ “ಬಿಡು ಇನ್ಮೇಲೆ ಇಬ್ಬರು ಚೆನ್ನಾಗಿರೋಣ, ಹಳೆಯದನ್ನೆಲ್ಲ ಮರೆತು” ಅಂದ .

ಪ್ರಶ್ನಾರ್ಥಕವಾಗಿ ತಲೆ ಎತ್ತಿ ಅವನನ್ನೇ ನೋಡಿದೆ ಅಭಿಮಾನ ಭಂಗವಾಗದಂತೆ ಸಾವರಿಸಿಕೊಂಡು
“ನಿನಗೂ ಒಪ್ಪಿಗೆ ಇದ್ದರೆ ಮಾತ್ರ …” ಸೇರಿಸಿದ .
“ಈಗ ನಿನ್ನ ಜಾತಿ ಜಾತಕ ಎಲ್ಲಾ ಅಡ್ಡ ಬರಲ್ವಾ ಮನೆಯಲ್ಲಿ ಒಪ್ಪುತ್ತಾರಾ ?”ಕೇಳಿದೆ
“ಅದನ್ನೆಲ್ಲಾ ನಂಬಿ ಆಗಿದ್ದು ಉಳಿಯಲಿಲ್ಲ ಅಲ್ವ.ಈಗ ಯಾರೂ ಕೇಳಲ್ಲ .ಅಕ್ಸೆಪ್ಟ್ ಮಾಡ್ಕೋತಾರೆ “ಅಂದ
ಮುಗುಳುನಗೆ ನಕ್ಕೆ.
“ಸಂತೋಷ್ ನನಗೆ ನನ್ನನ್ನ ಪ್ರೀತಿಸೋರು ಬೇಕು ಕಣೋ , ನಾನು ನಾನಾಗಿರೋ ಕಾರಣಕ್ಕೆ

ತಿರಸ್ಕರಿಸಿ ಬಿಸಾಕಿದ್ದೀಯಾ ನನ್ನ ನೇರಾನೇರ ಆಗ.
ಎಷ್ಟು ಅಂಗಾಲಾಚಿದೆ .ಒಂದೇ ಒಂದು ಬಾರಿ ಕೂಡ ತಿರುಗಿಯೂ ನೋಡದೆ ಎದ್ದು  ಹೋದೆ!
ಈಗಲೂ ನಿನಗೆ ನಾನು ಬೇಡ . ನಿನ್ನ ಮಗುವಿಗೆ ಒಂದು ಸುರಕ್ಷೆ ಬೇಕು ಅಷ್ಟೇ . ಪಕ್ಕ  ಅವಕಾಶವಾದಿ ತರಹ ಕಾಣುತ್ತಿದ್ದೀಯ ಕಣೋ .
ಸ್ವಾರ್ಥಿ ಅನಿಸುತ್ತೀಯ. ಒಂದು ವೇಳೆ ಎಲ್ಲ ಮರೆತು ಒಪ್ಪಿಕೊಂಡೆ ಅಂತಲೇ ಇಟ್ಕೋ , ನೀನು ಎದುರಿಗೆ ಬಂದಾಗೆಲ್ಲ ನನ್ನ ಅಸ್ತಿತ್ವವನ್ನ  ಕೆಣಕಿದಂತೆ ಅಪಮಾನ ಆಗುತ್ತೆ .
ಐ  ಆಮ್ ಸಾರೀ”
ಎಂದವಳೇ ಅಲ್ಲಿ ಕೂರಲಾರದೆ ಎದ್ದು ಕೌಂಟರ್ ಬಳಿ ಹೋಗಿ ಬಿಲ್ ಕೊಡಲು ಹೇಳಿದೆ . ನನ್ನರಿವಿಗೆ ಬಾರದೆ ಕಣ್ಣುಗಳು ತುಂಬಿದವು . .

ಅವನೆಡೆಗೆ ನೋಡಿದೆ . ಶಾಕ್ ಆದವನಂತೆ ಕೂತ್ತಿದ್ದ  .
ತಡೆಯಲಾರದೆ  ಮತ್ತೆ ಹೋಗಿ ಕೂತು ಹೇಳಿದೆ ,
“ಸಂತೋಷ್ ಪ್ಲೀಸ್ ನಿನ್ನ ಮಗುವನ್ನ ನನಗೆ ದತ್ತು ಕೊಟ್ಟುಬಿಡೋ . ಬಂಗಾರದ ಹಂಗೆ ನೋಡಿಕೊಳ್ಳುತ್ತೀನಿ . ನಿನ್ನದೇ ಭಾಗ , ನಿನ್ನದೇ ಅಚ್ಚು . ನೀನೆ ಇದ್ದ ಹಾಗೆ ಅನಿಸುತ್ತೆ . ಆದರೆ ಕಲ್ಮಶವಿಲ್ಲ ನೋಡು . ನಾ ಬಯಸಿದ ನಿನ್ನ ಆವೃತ್ತಿ . ಹೀ  ವಿಲ್ ಬಿ ಸೇಫ್ . ನೀನು ನಿರಾತಂಕವಾಗಿ ನಿನ್ನದೇ ಜಾತಿಯಲ್ಲಿ ಮತ್ತೆ ಮದುವೆ ಆಗಬಹುದು.

ಅದು ವರ್ಜಿನ್ ಹುಡುಗಿಯನ್ನೇ . ಯೋಚನೆ ಮಾಡು , ಮಾಡಿ ತಿಳಿಸು . “
ತಿರುಗಿ ನೋಡದೆ ಹೊರಟೆ. ಹಿಂದಿರುಗಿದರೆ ಅತ್ತು ಬಿಡಬಹದು ಅನ್ನೋ ಭಯ . ನಾ ಯಾವತ್ತೂ ಅವನಿಗೆ ಹೀಗೆಲ್ಲಾ ಹರ್ಟ್ ಮಾಡಿಲ್ಲ .ಬರುವಾಗ ಇಂತ ಪ್ರಶ್ನೆ ಎದುರಾದರೆ ಹೇಗೆ ಪ್ರತಿಕ್ರಿಯೆಸಬೇಕು ಎಂದು ಯೋಚಿಸಿರಲಿಲ್ಲ .

ಮನಸು ಹೊಯ್ದಾಡಿದೆಡೆಗೆ ವಾಲಬೇಕು ಅಂತಿದ್ದೆ . ಈಗ ದುಃಖ್ಖ ಆಗುತ್ತಿದೆ ಅಂದರೆ  ನನಗೆ ನಾನೇ ಸತ್ಯವಾಗಿ ನಡೆದುಕೊಳ್ಳಲಿಲ್ಲವಾ… ಕೇಳಿಕೊಂಡೆ. ಇನ್ನು ಇಡೀ ರಾತ್ರಿ ನಿದ್ದೆ ಹತ್ತೋದಿಲ್ಲ ,ಹಿಂಸೆ ಇದು ಮುಕ್ತಿಯಿರದ ಹಿಂಸೆ ,ತಲೆ ಚಿಟ್ ಅಂತೂ . ಮನೆಗೆ ಬಂದು ಮನಸಾರೆ ಅತ್ತುಬಿಟ್ಟೆ . ಭೋರ್ಗರಿದು , ಈ ತರಹ ಅಳುವ ಹುಡುಗಿಯಲ್ಲ ನಾನು. ಮನಸು ತಹಬಂದಿಗೆ ಬಂದಾಗ ಯೋಚಿಸುವಷ್ಟು ತಿಳಿಯಾಯಿತು .
ಅವನು ಬೇಕು ಬೇಕು ಅಂತ ಸಾವಿರ ಬಾರಿ ಅನಿಸಿದ್ದಿದೆ .

ಬೇಕಿದ್ದು ಸಿಗುವಾಗ ಮುಟ್ಟಲಾರದ ಸ್ಥಿತಿ .
ಬರಿ ಮೆಚ್ಚಿದರೆ ಸಾಲಲ್ಲ ನಮ್ಮ ಬಗ್ಗೆ ತಲೆಕೆಡಿಸಿಕೊಂಡು ಹುಚ್ಚರಾಗ್ಬೇಕು.ಆಗ ಅಹಂಗೆ ಸಂತೃಪ್ತಿ. ಪ್ರೀತಿ ಹಾಗಲ್ಲ, ದೈನ್ಯತೆಯನ್ನ  ಸದಾ ಜೊತೆಗೆ ಇಟ್ಕೊಂಡಿರುತ್ತೆ, ಕಾಲು ಹಿಡಿದಾದರೂ ಸರಿ ಉಳಿಸಿಕೊಳ್ಳುವ  ಪ್ರಯತ್ನ ಪಡುತ್ತೆ. ಅಂದು ನಾ ದೈನ್ಯತೆಯಲ್ಲಿ ಬೇಡಿಕೊಂಡೆ,ಎಷ್ಟು ಕುಗ್ಗೋಕು ತಯಾರಿದ್ದೆ, ಜಾಡಿಸಿ ಒದ್ದವನು ಅವನೇ ಅಲ್ವಾ? ಇನ್ನೆಂದು ಜೋಡಿಸದ ಹಾಗೆ ಅಹಂಗೆ ಪೆಟ್ಟುಬಿತ್ತು.ಆತ್ಮ ಗೌರವವಿಲ್ಲದ ಮನುಷ್ಯ ಹೇಗೆ ತಾನೇ ಉಳಿಯಬಲ್ಲ.ಆದರೆ ಉಳಿದುಕೊಂಡೆ.ಪ್ರೀತಿ ಸಹಿಸಿಕೊಳ್ಳುತ್ತದೆ ತೆ.ಬದುಕಿಸಿಕೊಳ್ಳುತ್ತದೆ.

ವ್ಯಕ್ತಿ ಮೇಲೆ ಮಾತ್ರ ಪ್ರೀತಿ ಆಗುತ್ತೆ ಅಂತ  ಅಲ್ಲಾ, ಬದುಕಿನ ಮೇಲು ಆಗುತ್ತೆ,ಆಗದ್ದನ್ನ ಜೀವನ ಪ್ರೀತಿ ಅಂತಾರೆ.I  have always romantisized life.
ಈಗ ಅಹಂ ಅಡ್ಡ ಬರ್ತಿದೆ, ಕಡೆಗೆ ಗೆದ್ದಿದ್ದು ಅಹಂ ಅಂತ ಅಲ್ಲ . ನಾ ಕಡೆಗೆ ಉಳಿಸಿ ಗೆಲ್ಲಿಸಿದ್ದು ಪ್ರೀತಿಯನ್ನೇ  . ಪ್ರೀತಿಗೆ ಪ್ರಾಮಾಣಿಕವಾಗಿ ನಡೆದುಕೊಳ್ತಿದೀನಿ.ಅವನನ್ನ  ತುಣುಕು ತುಣುಕಲ್ಲಿ ಕ್ಷಮಿಸಬಲ್ಲೆ, ಬೇಕಾದ ಹಾಗೆ ಮತ್ತೆ ಊಹಿಸುತ್ತಾ, ಕಲ್ಪಿಸುತ್ತಾ ಪ್ರೀತಿಸಬಲ್ಲೆ. ನಿಚ್ಚಳವಾಗಿ ಎದುರಲ್ಲಿ ಯಾವಾಗ ನಿಲ್ಲುತ್ತಾನೋ  ವಿಕಾರವಾಗಿ ಕಾಣಿಸಿಬಿಡುತ್ತಾನೆ ,ನನಗೆ ಅಭಿಮಾನಭಂಗ ಆದರೂ  ಚಿಂತೆ ಇಲ್ಲ, ಪ್ರೀತಿಗೆ ಅನರ್ಹ ಅನಿಸಬಾರದಲ್ಲ . ಸಹಿಸಿಕೊಳ್ಳೋದಕ್ಕೆ  ಆಗೋದಿಲ್ಲ  , ಪ್ರೀತಿಸೋಕು ಆಗೋದಿಲ್ಲ . Infact ಪ್ರೀತಿ ಉಳಿಯಲ್ಲ.

ಸುಸ್ತಾಗಿ ಯಾವಾಗ ನಿದ್ದೆ ಹತ್ತಿತೋ . ಕಣ್ಣು ತೆರೆದಾಗ ಹಗುರಾದ ಸ್ಥಿತಿ . ಆ ಕನಸು ಬಿದ್ದಿರಲಿಲ್ಲ . ಇಷ್ಟು ನೆಮ್ಮದಿಯಾಗಿ ಮಲಗಿ ಯಾವ ಕಾಲವಾಗಿತ್ತೋ . ಅದಾದ ನಂತರ ಇನ್ನೆಂದು ಆ ಕಾಡುವ ಕನಸುಗಳು ಬೀಳಲಿಲ್ಲ. ಬದುಕು ನಾವಂದುಕೊಂಡದ್ದಕ್ಕಿಂತ ಭಿನ್ನ.ಮತ್ತೂ ಎಂದಿಗೂ ಊಹಾತೀತ .

 

14 Responses

 1. Vidya Rao says:

  ಸಂಬಂಧಗಳ ಸಂಕೀರ್ಣತೆ ಮತ್ತು ವಾಸ್ತವವನ್ನು ಇಷ್ಟು ಚೆನ್ನಾಗಿ ಯಾರೂ ಪರಿಚಯಿಸಿಲ್ಲವೇನೋ ಇದುವರೆಗೂ. ಕೆಲವೇ ವರ್ಷಗಳು ಮಿಂಚಿ ಮಾಯವಾಗುವ ಬದುಕಿನೊಳಗೆ ಅಷ್ಟೇ ಅಶಾಶ್ವತ ಸಂಬಂಧಗಳು ಮತ್ತು ಅದರ ಆಯಾಮಗಳು. ಬಹುಬಾರಿ ದೂರುವುದೂ ಅರ್ಥಹೀನವೆನಿಸಿ ಗಂಟಲು ಬಿಗಿಯುವಂತಹ ಸನ್ನಿವೇಶಗಳು ಒಳಗನ್ನು ಮರಗಟ್ಟಿಸಿಬಿಡುತ್ತವೆ. ಆದರೆ ಕಥಾನಾಯಕಿಯ ಹೃದಯದ ಆರ್ದ್ರತೆ ಇನ್ನೂ ಉಳಿದಿದ್ದಷ್ಟೇ ಎಲ್ಲೋ ತಂಪೆರೆಯಿತು. ಮನ ಕಲಕಿತು ಕಥೆ. ಅಭಿನಂದನೆಗಳು ಹೇಮಲತಾ.

 2. Krauncha says:

  ಎಲ್ಲೋ ಒಂದು ಕಡೆ ಕಥಾನಾಯಕಿ ತ್ಯಾಗಮಯಿ ಆಗಿಬಿಡುತ್ತಾಳೇನೋ ಎಂಬ ಸಂದೇಹ. ಪ್ರೀತಿ ಎನ್ನೋದು ದೌರ್ಬಲ್ಯವೂ ಹೌದು ಅನ್ನಿಸುತ್ತೆ. ಕಡೆಗೂ ಆಕೆ ಪ್ರೀತಿಯನ್ನೇ ಗೆಲ್ಲಿಸಿದಳು ಅನ್ನೋದು ಯಾಕೋ ಕಾಡುತ್ತಿದೆ. ಆತ ಬೇರೆಯವಳನ್ನ ಮದುವೆಯಾಗೋದು ಅದಕ್ಕೆ ನೂರೆಂಟು ಬಣ್ಣಗಳನ್ನ ಸಮರ್ಥಿಸೋದಕ್ಕೆ ಬಳಿಯೋದು. ಪ್ರೀತಿಯ ಸಾಧ್ಯತೆ ಹೇಗೆ ಎಲ್ಲವನ್ನ ಧಿಕ್ಕರಿಸಿಯೂ ಸಂಬಂಧಗಳ ನಂಬಿಕೆಗಳ ಕ್ಲಿಷ್ಟತೆಯಲ್ಲಿ ಎಲ್ಲದರ ಒಳಗಾಗಿಬಿಡುತ್ತದೆ.

  I loved it.

  • hema says:

   dhanyavadagalu 🙂 bere aaykegalu illadaga gracefully thyaga madodu, madiyoo athmabhimana ulisikollodu janathana ansutte. enanthiri 🙂

 3. Suma says:

  Wonderful story…..I don’t think anything/ any person should be worth more than yourself….why do we girls place so much importance on a man? before relationship, after relationship?

  It made sense to depend on a man in the earlier days when we never had opportunities to make our own living..it was kind of need to survive…but not now….

 4. Yashoda says:

  Super story,…….congrats Hemalatha

 5. Pavana Bhoomi says:

  ಆಹಾ ಇಂತಹ ಅಂದರೆ ಅವಳನ್ನು ಅವಳನ್ನಾಗಿಸಿಯೇ ಉಳಿಸಿದಂತಹ ಕಥೆಗೆ ಥ್ಯಾಂಕ್ಯು ಮೇಡಂ. ತುಂಬಾ ಹಿಡಿಸಿತು

 6. Wang says:

  Chennagide. I was almost guessing that there will be typical thugs…. But the story ended on a graceful note. Isn’t life like that? Or shouldnt life BE like that – always end g on a graceful note…..

 7. Kalakesh G says:

  kavyadantha kate tumba hidisitu medum

Leave a Reply

%d bloggers like this: