fbpx

ಗಿರಿಜಾ ಈ ಕವಿತೆಗಳು ನಿಮ್ಮನ್ನು ಯೋಚನೆಗೆ ದೂಡದಿದ್ದರೆ ಕೇಳಿ..  

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಈಗ ಪ್ರಕಟವಾಗಿರುವ ಗಿರಿಜಾ ಶಾಸ್ತ್ರಿ ಅವರ ಕವಿತೆಗಳ ಬಗ್ಗೆ

ಟಿಪ್ಪಣಿ ಬರೆಯಲಿರುವವರು ‘ಜೋಗಿ’. ಕಾದು ಓದಿ

ಅವಧಿಯ ಓದುಗರಿಗೆ ತೀರಾ ಪರಿಚಿತರಾದ ಡಾ ಗಿರಿಜಾ ಶಾಸ್ತ್ರಿ ಮುಂಬೈವಾಸಿಯೇ ಆಗಿ ಹೋಗಿದ್ದಾರೆ. ಅಕ್ಕನ ಅಂತರ್ಧ್ವನಿಯನ್ನು ಇವರು ಹಿಡಿದ ಬಗೆ ಅನುಗಾಲ ಮನದಲ್ಲಿ ಉಳಿಯುವಂತಿದೆ.

ಆಧುನಿಕ ಮಹಿಳಾ ಸಂವೇದನೆಯನ್ನು ಅವರು ಕಟ್ಟಿ ಕೊಡುವ ಪರಿ ಅನನ್ಯವಾದದ್ದು. ಹೆಣ್ಣೊಬ್ಬಳ ದನಿ, ನವಿಲುಗರಿ ಪ್ರಕಟಿತ ಕವಿತೆಗಳ ಸಂಕಲನ. ಮಹಿಳಾ ಕಥಾ ಸಾಹಿತ್ಯವನ್ನು ಅವಲೋಕಿಸುವ “ಕಥಾ ಮಾನಸಿ” ಸಂಶೋಧನಾ ಪ್ರಬಂಧ. ತಾಯ ಮುಖ ಕಾಣದಲ್ಲಾ, ಸೆರಗ ಬಿಡೋ ಮರುಳೇ- ವಿಮರ್ಶಾ ಸಂಕಲನಗಳು.

ಅವರ ಕವಿತೆಗಳನ್ನು ಓದಿ. ಈ ಕವಿತೆಗಳು ನಿಮ್ಮನ್ನು ಯೋಚನೆಗೆ ದೂಡದಿದ್ದರೆ ಕೇಳಿ

ವಾಯುಸ್ತುತಿ

ಆಲಯ ಬಿದ್ದರೆ ಬಯಲು
ಬಯಲು ಎದ್ದರೆ ಆಲಯ
ಎರಡರೊಳಗೂ ನಿಸೂರ ಚಲಿಸುವೆ
ಆಗಮನ ನಿರ್ಗಮನಗಳೆರಡೂ ಒಂದೇ ಬಾಗಿಲೊಳಗೆ

ಹಸುರೇ ಹಸಿರಾಗಿ ಬೀಸುವೆ ಹೊರಗೆ
ಅನಾಮಧೇಯ
ರಕ್ತಮಾಂಸ ಕೊಬ್ಬಿಸುವೆ ಒಳಗೆ
ಲಾಂಚನಗಳೇ ಎಲ್ಲ ಕಡೆಗೆ
ಹೆಸರಿನ ಮೆರವಣಿಗೆ

ನಾಮ ಹಿಡಿಯುತ್ತದೆ ಖಡ್ಗ
ಜಪಿಸುತ್ತಾ ಝಳಪಿಸುತ್ತಾ
ಸೀಳುವುದೊಂದೇ ಗುರಿ
ಅಖಂಡ ಖಂಡ ತುಂಡ

ಕೆಂಡ ಬೂದಿಯಾಗದಂತೆ
ಸದಾ ತಿದಿಯನೊತ್ತುವೆ ಒಳಗೆ
ನಿನ್ನ ಧಾರಣೆಗೆ ಸಾಕ್ಷಿಯಾಗುವೆ ನೀನೇ.

ಒಮ್ಮೆ ಒದ್ದು ನನ್ನ
ಹೊರ ಹಾರಿದಾಕ್ಷಣ ನೀ
ಬಯಲಾಗುವೆ ನಾ

ಆಲಯದ ರುಚಿ ಹತ್ತದಿರಲಿ
ಖಂಡ ಖಡ್ಗದ ಮೊನೆಯಲ್ಲಿ
ಬಯಲ ಹಂಬಲ ಆರದಿರಲಿ
ಪ್ರೀತಿ ಬೀಜದ ಬೆಳಕಿನಲ್ಲಿ

ಯಾರಿವನು

ಕನಸಿನಲಿ ಕಂಡನು
ಹುಡುಕಿ ಹೊರಟೆನು ಕಣ್ಣೆದುರು
ಚಹರೆ ನೆನಪಿಲ್ಲ
ದನಿಯ ಗುರುತಿಲ್ಲ
ಉಡುಗೆ ತೊಡುಗೆ
ಖಬರು ಮೊದಲೇ ಇಲ್ಲ.
ಕನಸಿನೊಳಗೆ ಕತ್ತಲೆಯೇ ಎಲ್ಲ
ಕಣ್ಣು ಬಿಟ್ಟರೆ ಕುಕ್ಕುವ ಬೆಳಕು
ಬೆಳಕಲ್ಲಿ ಬೆಳಕನ್ನು ಹೇಗೆ ಹುಡುಕಬೇಕು

ದೂರ ದಾರಿಯ ಸಂದಿನಲಿ ಸರಿದುಹೋದವನು
ಗುಂಪಿನಲಿ ಕಂಡು ಕಳೆದು ಹೋದವನು
ಮುಸ್ಸಂಜೆಯ ಮಬ್ಬಿನಲಿ ಕರಗಿ ಹೋದವನು
ಅವನೇ ಇರಬಹುದೇನು
ಹಿಡಿಯುವಷ್ಟರಲ್ಲೇ
ನುಣುಚಿಕೊಂಡ ನಿರ್ಮೋಹಿ
ತೋಳ ಜಾಲ ಬೀಸಿದ ಸಮ್ಮೋಹಿ

ಆಸೆಬುರಕನೇನು
ಹೆಣ್ಣು ಬಾಕನೋ
ಇಲ್ಲ, ಬೂದಿ ಬಡುಕನಿರಬೇಕು
ಯಾರಲ್ಲಿ ಕೇಳಬೇಕು
ಯಾರನ್ನು ಹುಡುಕಿ ಕೊಡೀ ಎಂದು

ಮಬ್ಬು ಸುರಿವ ಮಾಗಿಯ ದಾರಿ
ಮುಂದೆ ಸಾಗುವುದೋ
ಮಧ್ಯಯೇ ಬಾಯ್ಬಿಡುವುದೋ
ಇಲ್ಲ, ಈಗಿಂದೀಗ ಮುಗಿದೇ ಹೋಗುವುದೋ

ಕತ್ತಲೆಗೆ ಕಣ್ಣಿದ್ದರೆ ಹೇಳೀತು
ಬೆಳಕಿನ ಬೀಜ ಮೊಳೆದೀತು.

ಬಯಲಾಗದ ಬಣ್ಣ

ಸಂಸಾರದ ಅಂಡು
ತಿಕ್ಕೀ ತೊಳೆದು
ಬಳೆಗಳೇಕೆ
ಮೈಕೈಗಳೇ ಸೀಳುಬಿಟ್ಟಿವೆ
ಸಿಬಿರೆದ್ದಿವೆ.

ಶಬ್ದಗಳ ರಿಂಗಣಗುಣಿತ
ಅರ್ಥಾಭಾಸ ಅನ್ವಯಾರ್ಥಗಳಲ್ಲಿ
ನಾ.. ನೀ..ನೀ..ನಾ..
ತಕಜಣು…. ಧಿಮಿಕಿಟ..ತಾ
ಗೆಜ್ಜೆಗಳು ಜಜ್ಜಿಹೋಗಿ
ಮಾಸಿ ಮಸಿಗೂಡಿ
‘ನಡೆದದ್ದೆ ಸುಗ್ಗಿಯ ಕುಣಿತ’
ಬಿದ್ದ ಪರದೆಯ ಹಿಂದೆ

ಬರುವಿರಾ..
ಯಾರಾದರೂ
ನನ್ನ ಜೊತೆಗೆ
ವಾನಪ್ರಸ್ಥಕ್ಕೆ..

‘ವನ’ ಹೊರಗಿಲ್ಲ ಎನ್ನುತ್ತಾನೆ.

‘ವನವನವೆಲ್ಲ ನೀವೇ’
ಆರು ದಶಕ ಜಾಲಾಡಿ ಒಳಗೆ
ಕಂಡದ್ದು ಮಾತ್ರ
ಗುಳಮ್ಮನೆ ನುಂಗಿದ ಕದಳಿ
ಒಳಗೆ ಹೋದದ್ದು
ಸರಾಗವಾಗಿ ಹೊರಬರಲು
ಗೊತ್ತಿದೆ ಅದಕೆ
ಗಾಳಿಯ ಹಾಗೆ

ನಾನೂ ಧುಮುಕಿದ್ದೇನೆ ಒಳಗೆ
ಈಜು ಬರದೆ
ಹಾರಿದ್ದೇನೆ ನೀರಿಂದ ನೀರಿಗೆ
ಗಿರಕಿ ಹೊಡೆದು
ಹೊಸ ಕಟ್ಟೆಯನ್ನಷ್ಟೇ ಕಟ್ಟಿ
ನೀರೇ ಆಗಿದ್ದೇನೆ
ಸುತ್ತಲೂ ಕಟಕಟೆ
ಒಳಗೆ ಗೂಢ ಜಲಾಶಯ
ಆಕಾಶದ ಬಣ್ಣಗಳು ಬದಲಾಗುತ್ತವೆ
ನನ್ನೊಳಗೆ
ತೇಲುವ ಮೋಡಗಳು

ಕಟ್ಟೆ ಒಡೆಯುವುದಿಲ್ಲ
ನನ್ನ ಬಣ್ಣ ಬಯಲಾಗುವುದಿಲ್ಲ.

ಸಂಗಾತಿಗೆ….

ಹೊರಳಾಡುತ್ತಿರುವೆಯಲ್ಲೇ ಹೀಗೆ
ಬರಲಿಲ್ಲವೇನೇ ನಿದ್ದೆ ಇನ್ನೂ ನಿನಗೆ
ಬಾ ಸೊಗಸಾದ ಕಥೆ ಹೇಳುತ್ತೇನೆ
ಇಲ್ಲ, ಚಂದದ ಕವಿತೆ ಓದುತ್ತೇನೆ
ನಿಧಾನ ಜಾರುವೆಯಂತೆ ಕನಸಿಗೆ…

ನನ್ನ ನಿಡುಗಾಲದ ಸಂಗಾತಿಯೇ
ನಾವು ಹಂಚಿಕೊಂಡಿದ್ದೇನು ಕಮ್ಮಿಯೇ
ನೋವು ನಲಿವು ನಂಬಿಕೆ
ಹಾಸು ಹೊದಿಕೆ
ಮೈಮರೆವು ಮೈಥುನ
ಪ್ರೀತಿ ಕುಂಟು ನೆವನ
ತೆಕ್ಕೆ ಬಿದ್ದುಹೊರಳಾಡಿಲ್ಲವೇನೇ..
ಕೊಂಕು ಕೆರೆತ ಭತ್ರ್ಸನೆ
ಬೈಗುಳ ಉಗುಳು ಜಗಳ
ಬಿಳಿ ಕರಿಮಾಡಿ
ಕರಿ ಬಿಳಿಮಾಡಿ
ಹೋರಾಡಿಲ್ಲವೇನೇ..

ಮಕ್ಕಳು ಹುಟ್ಟಿದ್ದು ಬೆಳೆದದ್ದು
ಸಂಕಲ್ಪ ಬಲ ಜಾಗರಣೆ ಮಾಡಿದ್ದು
ರೆಕ್ಕೆ ಪುಕ್ಕ ಬಲಿತು ಅವು ಹಾರಿ ಹೋಗುವಾಗ ಹೊರಗೆ
ಕಿಟಕಿ ಸರಳುಗಳ ಹಿಂದೆ ನಿಂತು ಬರಿದೇ ಆಗಸ ನೋಡಿದ್ದು
ನಿನಗಾದರೋ ಸೆರಗಿತ್ತು ಮರೆವಿಗೆ
ಕತ್ತಲ ಗೂಡೊಳಗೆ
ಹೆಗಲ ಮೇಲೆ ಶಲ್ಯವಿದ್ದರೂ
ಹಗುರಾಗುವ ಯೋಗವಿಲ್ಲ ನನಗೆ

ನಾನು ನೆಟ್ಟ ಗಂಡು ಗರ್ವದ ಬೀಜ
ನಿನ್ನೊಳಗೆ ನೋವಾಗಿ ಮೊಳಕೆಯೊಡೆದಿತ್ತು
ಅದೇ ನನ್ನ ಧಮನಿಗಳಲ್ಲೂ ಹರಿದಿತ್ತು

ನಿನ್ನ ಕೈ ಸುಕ್ಕುಗಳು
ಮುಖದ ಗೆರೆಗಳು
ಈಗ ಪುರಾಣ ಶ್ರವಣ ಮಾಡುತ್ತಿವೆ
ಅಂಗಾಂಗಗಳು
ಪದ ಹೇಳಲಾರಂಭಿಸಿವೆ

ಹೊದಿಕೆ ಎರಡಾಗಿದೆ ಈಗ
ಹಾಸಿಗೆಯೂ ತಗ್ಗು ಬಿದ್ದಿದೆ ಇಬ್ಬದಿಗೆ
ಬದುಕಿದ್ದೇವೆ ಇಲ್ಲಿಯವರೆಗೆ ಹೀಗೆ
ಸಾಯುವುದು ಸಾಧ್ಯವೇನೇ ಒಟ್ಟಿಗೆ

ಎಂದಾದರೊಂದು ದಿನ
ಇಬ್ಬರಲ್ಲೊಬ್ಬರು
ಮರಳಬೇಕಲ್ಲವೇನೇ
ಒಂಟಿ
ಮನೆಗೆ
ಖಾಲಿ ಖೋಲಿಗೆ
ಸ್ಮಶಾನದಲ್ಲಿ ಸುಡು ಚಿತೆಗೆ
ವಿದಾಯ ಹೇಳಿ ಕಡೆಗೆ……..
(ಪ್ರೇರಣೆ : ಗುಲ್ಜಾರ್ ಹಿಂದಿ ಕವಿತೆ “ಬುಡಿಯಾ ರೇ”)

ಸೇಫ್ಟಿ ಪಿನ್

ಅರವತ್ತು ಸಮೀಪಿಸುತ್ತಿರುವ ಅಕ್ಕ
ಈಗ ಥೇಟ್ ಅಮ್ಮನಂತೆಯೇ ಆಗಿಬಿಟ್ಟಿದ್ದಾಳೆ
ಮೊಗೆ ಮೊಗೆದು ನೀಡುವಾಗಲಂತೂ
ಅವಳದೇ ಛಾಪು ಬಡಿಸಲು ಬಗ್ಗುವಾಗೆಲ್ಲಾ
ಅವಳ ತಾಳಿ ಸರ ತೂಗಾಡುತ್ತದೆ
ಜೊತೆಗೆ ಐದಾರು ಸೇಫ್ಟಿ ಪಿನ್ನುಗಳೂ

ಜಮದಗ್ನಿಯ ಕೈ ಹಿಡಿದವಳು
ಕಲ್ಲಾಗಿ ಎಲ್ಲಮ್ಮನಾಗಲಿಲ್ಲ ಬೆತ್ತಲೆ ಸೇವೆ ಬೇಡಲಿಲ್ಲ
ಭಕ್ತರು ಭಂಡಾರ ಹಚ್ಚಿ ಹುಟಗಿ ಉಟ್ಟು ಸಾಲು ನಿಲ್ಲಲಿಲ್ಲ
ರೋಷಾವೇಷದ ಅಗ್ನಿಯೊಳಗೆ
ಸುಟ್ಟು ಕರಕಾಗಿ
ಹರಿದ ನೀರಿನೊಳಗೆ ಹರಿದು ಹೋಗಲೂ ಇಲ್ಲ.
ನಿಂತೇ ನಿಂತಳು ಹುಲ್ಲಾಗಿ ಬಿಟ್ಟದಡಿ
ಕಾಲನ ಆವೇಶಕ್ಕೆ ಸಾಕ್ಷಿಯಾಗಿ

ಪಕ್ಕೆಗೆ ರೆಕ್ಕೆ ಕಟ್ಟಿಕೊಂಡು ಅಕ್ಕ
ಹೇಗೆ ಹಾರುತ್ತಿದ್ದಳು ಕಾಲೇಜು ಕಾರಿಡಾರುಗಳಲ್ಲಿ
ವಾರದ ಕೊನೆಯೆಂದರೆ ಏನೋ ಲಗುಬಗೆ
ದಿನವಿಡೀ ಗರಿಗರಿ ಗಂಜಿ ಇಸ್ತ್ರಿ ಮಾಡಿ ಸೀರೆಗೆ
ಹೀಲ್ಡು ಚಪ್ಪಲಿ ಹಾಕಿಯೇ ಅದನ್ನುಟ್ಟು
ಕಣ್ಣಿಗೆ ಬೇರೆ ದೊಡ್ಡ ತಂಪು ಕನ್ನಡಕ ತೊಟ್ಟು
ಗರಿಗೆದರಿ ಹಾರಿದಳೆಂದರೆ ಬೀದಿಗೆ
ಪಡ್ಡೆಹುಡುಗರ ಪಡೆಯೇ ಹಿಂದುಮುಂದೆ
ಧಿಗ್ಗಡ ದಿಮ್ಮಿಯೆಂದು
ಎಲ್ಲ ಬೈದದ್ದು ಎಷ್ಟು ಸಲ

ಎರೆದುಕೊಂಡ ತಲೆಗೂದಲ ರಾಶಿ
ಬೆನ್ನಮೇಲೆ ಹರಿಯಬಿಟ್ಟು
ನೀಳ ಬೆರಳುಗಳನ್ನು ಮೃದುವಾಗಿ
ಮೇಜಿನ ಮೇಲಿಟ್ಟು
ತುಸುವೇ ಬಗ್ಗಿ
ಹಗೂರ ಉಗುರ ಸಮ ಕತ್ತರಿಸಿ
ನಯವಾಗಿ ಬಣ್ಣ ಬಳಿದು
‘ಉಫ್’ ಊದುತ್ತಾ ಅದನ್ನೇ ನೋಡುತ್ತಾ ಪ್ರೀತಿಯಿಂದ
ಕೂರುವುದೆಂದರೆ ಅವಳಿಗೆ ಎಷ್ಟು ಇಷ್ಟ.

ಮನೆಗೆ ಟೂಥ್ ಬ್ರಷ್ ಬಂದದ್ದೇ ಅವಳಿಂದಾಗಿ
ಎರೆಡೆರೆಡು ಸಲ ಕಾಲ್ಗೇಟ್ ಉಜ್ಜಿ
ಕನ್ನಡಿಯಲ್ಲಿ ಹಲ್ಲು ಫಳ ಫಳಿಸಿ ನಿಲ್ಲುವಾಗ
ಧಿಮಾಕಿನವಳೆಂದು ಅಮ್ಮ ಬೈದದ್ದು
ಎಂದೂ ಕಿವಿಗೆ ಹಾಕಿಕೊಂಡವಳೇ ಅಲ್ಲ.

ಈಗ ಅರವತ್ತು ಸಮೀಪಿಸುತ್ತಿರುವ ಅಕ್ಕ
ಅಮ್ಮನಂತೇ ಆಗಿಬಿಟ್ಟಿದ್ದಾಳೆ
ಮೂವತ್ತೈದು ಶಿಶಿರ ಕಂಡ ದಾಂಪತ್ಯ
ಈಗಲೂ ತೂಗುತ್ತಿದೆ ಅವಳ ತಾಳಿಸರದಲ್ಲಿ
ಐದೋ ಆರೋ ಸೇಫ್ಟೀ ಪಿನ್ನುಗಳು
ಎಲ್ಲ ಜಂಗು ಹಿಡಿದವುಗಳು

 

 

4 Responses

 1. ಹೇಮಾ says:

  ತುಂಬಾ ಚೆನ್ನಾಗಿದೆ.

 2. ಹರೀಶ್ ಪೆರ್ಲ says:

  ಗಿರಿಜಾ ಶಾಸ್ತ್ರಿಕವನ ಚೆನ್ನಾಗಿ
  ಬಂದ ಸಂಪೂರ್ಣ ಹೊಸದಾದ
  ಸಾಲಿನ ಚಿತ್ರ,!

 3. Girija Shastry says:

  Thanks Harish n Hema

 4. nutana doshetty says:

  Girija Mam, Eshtu Olleya Kavitegalu..

  Samsarada Andu toledu…. Ennuva salu seledubittitu..

  Safety Pin… Houdalla ellara maneyalloo Intha Akka iddale.. Neevu avalannu torisiddeeri..

  Nutana Doshetty

Leave a Reply

%d bloggers like this: