ಜೀನ್ಸ್ ನಲ್ಲಿ ಹರಿದು ಬಂದ ಕಲಗಚ್ಚು ಪ್ರೀತಿ..

ಪ್ರಾಣಿಗಳನ್ನು ಪ್ರೀತಿಸುವ ಮಂತ್ರ ಹೇಳಿಕೊಟ್ಟಿದ್ದು ಅಪ್ಪ

ಮನೆಯಿಂದ ೨-೩ ಕಿ.ಮಿ ದೂರವಿದ್ದ ಶಾಲೆಗೆ ನಡೆದೇ ಹೋಗುತ್ತಿದ್ದಿದ್ದು ಆಗ. ದಾರಿ ತುಂಬೆಲ್ಲ‍ಾ ತಲೆಹರಟೆ ಮಾಡ್ತೀನಿ ಅಂತ ಅಕ್ಕ ಯಾವಾಗ್ಲೂ ಬಿಟ್ಟೇ ಹೋಗ್ತಿದ್ಲು! ಅಮ್ಮ ಸಂತೆಗೆ ಬಂದಾಗ ಮಾತ್ರ ಅವಳೊಟ್ಟಿಗೆ ಸಂತೆ ಸುತ್ತಿ, ಮಂಡಕ್ಕಿ ಖಾರ ತಿಂದು ಮನೆ ಕಡೆ ಸಾಗುತ್ತಿತ್ತು ಸವಾರಿ.. ಅವತ್ತೊಂದಿನ ಶಾಲೇಲಿ ರಾಷ್ಟ್ರಗೀತೆ ಮುಗಿಯೋಕು ಮುಂಚೆನೇ ಅಮ್ಮ ಬಂದಿದ್ ಕಾಣ್ತಿತ್ತು. ಇವತ್ತೆಂತ ವಿಶೇಷ ಅಂತ ಎಷ್ಟ್ ಯೋಚ್ನೆ ಮಾಡಿದ್ರೂ ಹೊಳಿತನೇ ಇರ್ಲಿಲ್ಲ. ಬ್ಯಾಗ್ ಎಲ್ಲ ತಗೊಂಡು ಅವ್ಳ ಹತ್ರ ಹೋಗೋ ಹೊತ್ತಿಗಂತೂ ಏನೋ ಸರಿ ಇಲ್ಲ ಅನ್ನೊ ಸೂಚನೆ ಸಿಕ್ಕಾಗಿತ್ತು. ‘ಏನಾಯ್ತೆ ಅಮ್ಮ?’ ಅಂದ್ರೆ ‘ಅಪ್ಪಂಗೆ ನಾಯಿ ಕಚ್ಚಿದೆ ಕಣೇ .. ಡಾಕ್ಟರ್ ಹತ್ರ ಹೋಗ್ಬೇಕು ಬಾ’ ಅಂತ ಕರ್ಕೊಂಡ್ ಹೋದ್ಲು..

ನಮ್ಮನೆ ನಾಯಿ ಪಿಂಕಿ ಮರಿ ಹಾಕಿತ್ತು ಆ ಹೊತ್ತಲ್ಲಿ. ನಾನು , ಅಕ್ಕ ಒಬ್ಬರ‍ಾದ ಮೇಲೆ ಒಬ್ಬರು ಪಿಂಕಿನ ಮಾತಾಡ್ಸ್ತಾ  ಇದ್ರೆ ಆ ಹೊತ್ತಲ್ಲಿ ಇನ್ನೊಬ್ಬರು ಮರಿ ಎಷ್ಟಿದೆ, ಎಷ್ಟು ಗಂಡು, ಎಷ್ಟು ಹೆಣ್ಣು , ಯಾವ ಬಣ್ಣ, ಯಾವ್ದಯಾವ್ದು ಕಣ್ ಬಿಟ್ಟಿದೆ ‍ಅಂತೆಲ್ಲ‍ಾ ಮಾಹಿತಿ ಕಲೆಹಾಕ್ತಿದ್ವಿ.. ನಾವಿಲ್ಲದ ಹೊತ್ತಲ್ಲಿ ಅಪ್ಪ ಏನಾದ್ರೂ ನಾಯಿ ಮರಿ ಮುಟ್ಟಕ್ ಹೋಗಿ ಪಿಂಕಿ ಕಚ್ಬಿಡ್ತ‍ಾ ಅಂತ ಯೋಚನೆ ಒಂದು ಕಡೆ ಆದ್ರೆ, ಬೇರೆ ಏನಾಗಿರಬಹುದು ಅನ್ನೊ ಕುತೂಹಲ ಇನ್ನೊಂದೆಡೆ .. ವಿಷಯ ಏನಾಗಿತ್ತಂದ್ರೆ, ಪಿಂಕಿ ಮರಿ ಕದಿಯಕ್ಕೆ ಯಾವ್ದೋ ಬೀದಿ ನಾಯಿ ಬಂದಿತ್ತಂತೆ. ಬೀದಿ ನಾಯಿಗೂ ನಮ್ಮನೆ ನಾಯಿಗೂ ನಡುವೆ ಗಲಾಟೆಯಾಗುವ ಶಬ್ದ ಕೇಳಿ ಅಪ್ಪ ಮನೆಯಿಂದ ಹೊರಬಂದಿದ್ದಾರೆ.

ಪಿಂಕಿಗೆ ನೋವಾಗತ್ತೆ ಅನ್ನೋ ಯೋಚನೆಲಿ ಜಗಳ ಬಿಡಿಸಿ, ಇನ್ನೊಂದು ನಾಯಿನ ಓಡಿಸೋಕೆ ಹೋದ ಅಪ್ಪನಿಗೆ ಬೀದಿ ನಾಯಿ ಕಚ್ಚಿಬಿಟ್ಟಿದೆ!  ಐದು ಇಂಜೆಕ್ಷನ್ ಸಹ ಇರದ ಕಾಲವದು.. ಹೊಕ್ಕಳ ಸುತ್ತ ಹದಿನಾಲ್ಕು ಇಂಜೆಕ್ಷನ್ ಕೊಡಿಸಿಕೊಂಡು ಪಿಂಕಿಯನ್ನು ಮತ್ತು ಅವಳ ಮರಿಗಳನ್ನು ರಕ್ಷಿಸುವಲ್ಲಿ ಅಪ್ಪ ಯಶಸ್ವಿಯಾಗಿದ್ದಲ್ಲದೆ ನನ್ನ ಕಣ್ಣಲ್ಲಿ ಹೀರೋ ಸಹ ಆಗಿಬಿಟ್ಟಿದ್ದರು.. ಪ್ರಾಣಿಗಳನ್ನು ಪ್ರೀತಿಸುವ ಮಂತ್ರ ಹೇಳಿಕೊಟ್ಟಿದ್ದು ಅಪ್ಪ..

ಇದೇ ಅಪ್ಪ ಮದುವೆಗೂ ಮುಂಚೆ ತೀರ್ಥಹಳ್ಳಿಯ ಮನೆಯಲ್ಲಿ ದನ-ಕರುಗಳ ಉಸ್ತುವಾರಿ ಹೊತ್ತವರು. ಅದೊಂದು ಎಮ್ಮೆಯಿತ್ತು ಊರಲ್ಲಿ ಆಗ! ಎಮ್ಮೆಯ ಕಿವಿ ಟಪ-ಟಪ ಅಂತ ಹೊಡೆದುಕೊಳ್ತಿದ್ರೆ ಅಪಶಕುನ ಅಂತ ಆ ಎಮ್ಮೆಯನ್ನ ಅಜ್ಜನಿಗೆ ಯಾರೋ ಕೊಟ್ಟುಬಿಟ್ಟಿದ್ದರು. ಅದರ ಎಡಕಿವಿಯ ಹಿಂಭಾಗದಲ್ಲಿ ಗಾಯವಾಗಿ ಹುಳವಾಗಿಬಿಟ್ಟಿತ್ತಂತೆ.. ಆ ಗಾಯಕ್ಕೆ ಔಷಧಿ ಮಾಡಿ ಎಮ್ಮೆಯನ್ನು ಮತ್ತೆ ಸರಿ ಮಾಡಿದ್ದು ಅಪ್ಪನ ಪ್ರಕಾರ ಅವರ ಜೀವನದ ಅತೀ ಖುಷಿಯ ವಿಷಯಗಳಲ್ಲೊಂದು. ತೀರ್ಥಹಳ್ಳಿ ಪ್ರದೇಶಕ್ಕೆಲ್ಲಾ ನಾಯಿ-ಬೆಕ್ಕನ್ನು ಆಸ್ಪತ್ರೆಗೆ ಮೊದಲು ಕರೆದೊಯ್ದ ಕೀರ್ತಿ ಅಪ್ಪನದ್ದು. ಜರ್ಮನ್ ಶೆಫರ್ಡ ಹೋಲುವ ನಾಯಿ ಹಾಗೂ ಪಟ್ಟೆ ಪಟ್ಟೆ ಬೆಕ್ಕೊಂದು ಒಟ್ಟಿಗೇ ಮಲಗಿರುವ ಫೋಟೋ ಇವತ್ತಿಗೂ ನಮ್ಮನೆಯ ಆಲ್ಬಮ್ ನಲ್ಲಿದೆ.

ಉಳಿದೆಲ್ಲಾ ಕಥೆಗಳೂ ಕೇಳಿ ತಿಳಿದದ್ದು.. ಅಪ್ಪ ಮತ್ತು ಪಿಂಕಿಯ ಜೋಡಿ ಮಾತ್ರ ಸ್ವಾನುಭವದ್ದು! ಅಪ್ಪ ಊಟ ಹಾಕಲಿಕ್ಕೆ ಹೋದರೆ , ಅವರು ‘ತಿನ್ನು’ ಎನ್ನುವವರೆಗೆ ತಟ್ಟೆಗೆ ಬಾಯಿ ಹಾಕದ ಶಿಸ್ತಿರುವ ಪಿಂಕಿಗೆ , ನಾವ್ಯಾರಾದರೂ ಊಟ ಹಾಕಲು ಹೋದಾಗ ಮಾತ್ರ ಎದೆಯೆತ್ತರಕ್ಕೆ ನಿಂತು ಪಾತ್ರೆಗೆ ಬಾಯಿ ಹಾಕುವ ಮೊಂಡುತನ ಮೂಡುತ್ತಿತ್ತು. ಮಾವ ಒಮ್ಮೆ ಅಪ್ಪನನ್ನು ಬೈಕ್ ನಲ್ಲಿ ಕೂರಿಸಿಕೊಂಡು ಅರ್ಧ ಫರ್ಲಾಂಗ್ ಹೋಗಿದ್ದಿಲ್ಲ, ಎಲ್ಲಿದ್ದಳೋ ಇವಳು! ಓಡಿಬಂದು ಗೇರ್ ಮೇಲಿಟ್ಟಿದ್ದ ಮಾವನ ಕಾಲಿಗೆ ಬಾಯಿ ಹಾಕಿ ಅಪ್ಪನನ್ನು ಬೈಕಿನಿಂದ ಕೆಳಗಿಳಿಯುವಂತೆ ಮಾಡಿದ್ದಳು. ಪಿಂಕಿ ತೀರಿಹೋದ ಮೇಲೆ ಮತ್ತೆ ನಾಯಿಯನ್ನು ಸಾಕುವ ಸಾಹಸಕ್ಕೆ ಅಪ್ಪ ಕೈ ಹಾಕಲಿಲ್ಲ.

ಈಗೆಲ್ಲಾ ಬೆಕ್ಕುಗಳದ್ದೇ ಸಾಮ್ರಾಜ್ಯ ಮನೆಯ ತುಂಬಾ.. ಪೇಟೆ ಮನೆಯಲ್ಲಿ ಅದೆಷ್ಟು ಬಾರಿ ಬೆಕ್ಕು ಮರಿ ಹಾಕಿದೆಯೋ ಲೆಕ್ಕವಿಲ್ಲ! ಪ್ರತಿ ಬಾರಿ ಮರಿ ಹಾಕಿದಾಗಲೂ ರಟ್ಟಿನ ಪೆಟ್ಟಿಗೆ, ಅದರೊಳಗೆ ಪೇಪರ್ , ಅದರ ಮೇಲೆ ಅಮ್ಮನ ಹಳೆಯ ಸೀರೆ ಎಲ್ಲವೂ ಸಿದ್ಧಗೊಳಿಸಿ ಅದರೊಟ್ಟಿಗೆ ಬಾಣಂತನಕ್ಕೆ ಅಪ್ಪನೂ ಸಿದ್ಧವಾಗುತ್ತಾರೆ. ಬೆಂಗಳೂರಿಗೆ ಬಂದಾಗಲೆಲ್ಲಾ ಮದ್ಯಾಹ್ನ ರೈಲಿಗೇ ಮರಳುವ ಹಿಂದಿನ ಏಕಮಾತ್ರ ಉದ್ದೇಶ ಬೆಕ್ಕಿಗೆ ರಾತ್ರಿ ಅನ್ನ ಹಾಕುವುದೇ ಆಗಿರುತ್ತದೆ. ಇಂತಿಪ್ಪ ಅಪ್ಪ ಈಗ ಫುಲ್ ಬಿಸಿ.. ಮನೆಯಲ್ಲಿ ಬೆಕ್ಕೊಂದು ಎರಡೆರಡು ಮರಿ ಹಾಕಿದೆ!

ಬರೀ ಅಪ್ಪನಿಗೆ ಮಾತ್ರ ಪ್ರ‍ಾಣಿ ಪ್ರೀತಿಯಿದ್ದಿದ್ದರೆ ವಂಶವಾಹಿಯಾಗಿ ಹರಿಯುತ್ತಿರಲಿಲ್ಲವೇನೋ.. ಅಮ್ಮನೂ ಇದರಲ್ಲಿ ಸಮಾನ ಪಾಲುದಾರಳು. ನೀಲಿ ಬಕೆಟ್ ಹಿಡಿದು ಮನೆಯ ಹೊರಗೆ ನಿಂತು ‘ಭಾಗೀರಥೀ.. ಬಾ ಬಾ’ ಅಂತೆರಡು ಸಲ ಅಮ್ಮ ಕರೆದರೆ ಕಿ.ಮೀ ದೂರದಿಂದ ಕೆಂಪು ಬಣ್ಣದ ಬಿಳೀ ದಾಸಿನ ಭಾಗೀರಥಿ ಕುಣಿಯುತ್ತಾ ಬರುತ್ತಿದ್ದಳು. ಆ ನೀಲಿ ಬಕೆಟ್ ಒಳಗಿನ ಕಲಗಚ್ಚಿಗೋ, ಅಮ್ಮನ ಪ್ರೀತಿಗೋ ಗೊತ್ತಿಲ್ಲ‍.. ಅವಳು ಹಾಗೆ ಬರುವ ಚಿತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ! ಭಾಗೀರಥಿಯ ಮಗಳಿಗೆ ಪುಟ್ಟಿ ಎಂದು ನಾಮಕರಣ ಮಾಡಿದ್ದೂ ಅಮ್ಮನೇ.. ಪ್ರತೀ ದೀಪಾವಳಿಯ ಗೋಪೂಜೆಗೆ ಇವರಿಬ್ಬರಲ್ಲಿ ಒಬ್ಬರು ಬರಲೇ ಬೇಕು ನಮ್ಮನೆಗೆ.. ಅಮ್ಮ ಹಾಗೂ ಭಾಗೀರಥಿಯ ಪ್ರೀತಿ ಸೋಜಿಗ ನಂಗೆ. ಅಮ್ಮನಿದ್ದ ಹೊತ್ತಲ್ಲಿ ಅಪ್ಪಿ ತಪ್ಪಿಯೂ ಪಿಂಕಿ ಮನೆಯೊಳಗೆ ಕಾಲಿಟ್ಟಿದ್ದಿಲ್ಲ. ಅಮ್ಮ ಯಾವತ್ತೂ ಪಿಂಕಿಯನ್ನು ಮುಟ್ಟಿ ಮುದ್ದಿಸಿದ್ದಿಲ್ಲ ಆದರೆ ಒಂದು ಹೊತ್ತಿಗೂ ಅದರ ಊಟದ ಸಮಯ ತಪ್ಪಿದ್ದಿಲ್ಲ! ಪಿಂಕಿ ಶಿಕಾರಿ ಮಾಡಿಕೊಂಡು ಬಂದಾಗಲೂ, ನಾವು ಹೊರಗೆ ಹಾಳುಮೂಳು ತಿಂದು ಬಂದಾಗಲೂ ಅಮ್ಮನಿಂದ ಬರುತ್ತಿದ್ದ ಬೈಗಳು ಒಂದೇ ರೂಪದಲ್ಲಿರುತ್ತಿದ್ದವು..

ಬೆಕ್ಕನ್ನು ಹಾಸಿಗೆಯ ಮೇಲೆಲ್ಲಾ ಯಾವತ್ತೂ ಬಿಡದ ಅಮ್ಮ, ಅವತ್ತೊಂದಿನ ಹಾಸಿಗೆಯ ಮೇಲೆಯೇ ಮರಿ ಹಾಕಿದಾಗ ಏನೂ ಮಾತಾಡದೇ ಎಲ್ಲಾ ಹೊದಿಕೆ, ಹಾಸುಗಳನ್ನೂ ಒಗೆದುಹಾಕಿದ್ದಳು. ಬಾಣಂತಿಯೆಂಬ ಒಂದೇ ಕಾರಣಕ್ಕೆ ಅಪ್ಪನ ರಟ್ಟಿನ ಪೆಟ್ಟಿಗೆ ರೆಡಿಯಾಗುವವರೆಗೆ ಹಾಸಿಗೆಯನ್ನು ಬಿಟ್ಟುಕೊಟ್ಟಿದ್ದಳು. ಫೋನಾಯಿಸಿದಾಗೆಲ್ಲಾ ಅಪ್ಪ ಬೆಕ್ಕಿಗೆ ಮಾಡುವ ಉಪಚಾರಗಳನ್ನು ವಿವರಿಸುವುದರಲ್ಲೇ ಅರ್ಧ ಮಾತುಕತೆ ಮುಗಿಸುವ ಅಮ್ಮ , ಬಾಣಂತನಕ್ಕಂತಲೇ ದಿನವೂ ಅರ್ಧ ಲೀಟರ್ ಹೆಚ್ಚು ಹಾಲನ್ನು ತರುವುದು ನಮಗ್ಯಾರಿಗೂ ತಿಳಿದೇ ಇಲ್ಲ ಎಂದುಕೊಂಡುಬಿಟ್ಟಿದ್ದಾಳೆ!

ಹೀಗೆ ಹರಿದು ಬಂದ ಜೀನ್ಸ್ ಅಕ್ಕನಲ್ಲಿ ಅತಿವೃಷ್ಟಿಯಾಗಿ ತುಂಬಿಕೊಂಡು ಭಾವನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ!   ಅಕ್ಕನ ಬೆಕ್ಕಿಗೀಗ ಭರ್ತಿ ಒಂದು ವರ್ಷ. ಅವಳ ವಾಲ್ ಪೇಪರ್, ಪ್ರೊಫೈಲ್ ಫೋಟೋ, ಸ್ಕ್ರೀನ್ ಸೇವರ್ ಎಲ್ಲವನ್ನೂ ಆವರಿಸಿಕೊಂಡಿರುವ ಬೆಕ್ಕು ಅವಳ ಬದುಕಿನ ಅವಿಭಾಜ್ಯ ಅಂಗ. ಬೆಕ್ಕಿಗಂತಲೇ ಆರು  ತಿಂಗಳು work from home ಮಾಡಿದ ಸಾಧನೆ ಅಕ್ಕನದ್ದು. ಮನೆಯವರ ಎಲ್ಲಾ ಹುಚ್ಚಾಟಗಳನ್ನೂ ಭಾವ ಸುಮ್ಮನೇ ಒಪ್ಪಿಕೊಂಡುಬಿಟ್ಟಿದ್ದಾರೆ!

ಮುಂಬಯಿನಿಂದ ಟೇಕಾಫ್ ಆಗಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗುವ ತನಕ ಪಕ್ಕದಲ್ಲಿದ್ದ ಪ್ರಾಣಿಪ್ರೇಮಿಗೆ ಇದೆಲ್ಲ‍ವನ್ನೂ ಹೇಳುವಾಗ ಅವರ ಮುಖದಲ್ಲಿ ಮೂಡಿದ ಹೊಳಪಿಗೆ ಸಾಕ್ಷಿ ನಾನು. ದನ-ಕರುಗಳನ್ನೂ ಮಕ್ಕಳಂತೆ ನೋಡಿಕೊಳ್ಳುವ ವಿಚಾರವೇ ತಿಳಿಯದ ಅವರ ಲೋಕಜ್ಞಾನವನ್ನು ಕಂಡು ಆಶ್ಚರ್ಯಗೊಳ್ಳುವ ಸರದಿ ನನ್ನದು. ಮೊನ್ನೆ ತಾನೇ ನಾಯಿ ಬಳಿ ಕಚ್ಚಿಸಿಕೊಂಡು ಐದನೇ ಇಂಜೆಕ್ಷನ್ ತೆಗೆದುಕೊಳ್ಳುವ ಹಂತದಲ್ಲಿರುವಾಗಲೂ ‘ ನಾಯಿದೇನೂ ತಪ್ಪಿಲ್ಲ.. ಅದು ಆಟಕ್ಕೆ ಅಂತನೇ ಬಂದಿದ್ದು. By miss ಆಗಿ ಕಚ್ಚಿಬಿಡ್ತು ‘ ಅಂತನ್ನೋ ನನ್ನ ಆಶ್ಚರ್ಯದಿಂದ ನೋಡಿದ ಗಂಡನಿಗೆ ನಮ್ಮನೆಯ ಜಾನುವಾರು ಪ್ರೀತಿಯ ಬಗ್ಗೆ ಮೂಡಿರುವುದು ತಾತ್ಸಾರವೋ, ಅಭಿಮಾನವೋ ತಿಳಿದುಕೊಳ್ಳಬೇಕಿದೆ ನಾನೀಗ!

 

Leave a Reply