ಅಡಿಗರ ಕವಿತೆಗಳೂ.. ಅದರಲ್ಲಿನ ಪ್ರತಿಗಾಮಿಯೂ..

ಕವನಗಳ ಮರು ಓದಿನ ಕಾಲ ಇದು.

ಗೋಪಾಲ ಕೃಷ್ಣ ಅಡಿಗರು ಒಂದು ತಲೆಮಾರನ್ನು ಪ್ರಭಾವಿಸಿದ ಕವಿ. ಸಾಹಿತ್ಯಕ್ಕೆ ಹೊಸ ಆಯಾಮ ಕೊಟ್ಟವರು. ಅವರ ಕವಿತೆಗಳ ಅಂತಃಸತ್ವ ಏನಿತ್ತು? ಹಿರಿಯರಾದ ಶ್ರೀಪಾದ ಹೆಗ್ಡೆ ಅವರು ಅಡಿಗರ ರಾಜಕೀಯ ಕವಿತೆಗಳಿಗೆ ಇಲ್ಲಿ ಮರು ಭೇಟಿ ನೀಡಿದ್ದಾರೆ.

ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ – avadhimag@gmail.com 

 

 

 

 

ಶ್ರೀಪಾದ ಹೆಗ್ಡೆ

 

 

 

 

 

ಅಡಿಗರ ನವ್ಯ ಕವಿತೆಗಳನ್ನು ಸ್ಥೂಲವಾಗಿ ಅಂತರ್ಮುಖಿ ಮತ್ತು ಬಹಿರ್ಮುಖಿ ಮಾದರಿಯ ಕವನಗಳೆಂದು ವಿಂಗಡಿಸಬಹುದು.

ಮೊದಲ ಮಾದರಿಯ ಕವನಗಳು ಬಿಗಿಯಾದ ಬಂಧದಿಂದ ಕೂಡಿದ್ದು ಸಂಕೀರ್ಣ ಪ್ರತಿಮವಿಧಾನದಿಂದ ಕೂಡಿದ ಕ್ಲಿಷ್ಟ ಕವಿತೆಗಳಾಗಿವೆ. ’ಭೂಮಿಗೀತ’ ಮತ್ತು ’ವರ್ಧಮಾನ’ ಸಂಕಲನಗಳಲ್ಲಿಯ ಹೆಚ್ಚಿನ ಕವನಗಳು ಈ ಮಾದರಿಗೆ ಸೇರಿದವು.

’ಭೂಮಿಗೀತ’, ’ಹದ್ದು’, ’ಪ್ರಾರ್ಥನೆ’, ’ಭೂತ’, ’ಕೂಪಮಂಡೂಕ’, ’ಶ್ರೀರಾಮನವಮಿಯ ದಿವಸ’, ’ಅಜ್ಜ ನೆಟ್ಟಾಲ’, ’ವರ್ಧಮಾನ’ ಈ ಮಾದರಿಯ ಪ್ರಮುಖವಾದ ಕವಿತೆಗಳು ಮತ್ತು ಇವು ಕನ್ನಡದ ನವ್ಯ ಕಾವ್ಯ ಪ್ರಕಾರದ ಶಿಖರ ಗೋಪುರಗಳಾಗಿವೆ.

ಈ ಎಲ್ಲ ಕವನಗಳು ೧೯೫೦ ಮತ್ತು ೧೯೬೦ರ ದಶಕದಲ್ಲಿ ರಚಿತವಾದವುಗಳು.

ಈ ಕವಿತೆಗಳನ್ನೊಳಗೊಂಡ ಸಂಕಲನಗಳಲ್ಲಿಯೂ ಬಹಿರ್ಮುಖಿ ಮಾದರಿಯ ರಾಜಕೀಯ ಕವನಗಳು ಕೆಲವು ಇವೆ, ಮುಖ್ಯವಾಗಿ ’ನೆಹರು ನಿವುತ್ತರಾಗುವದಿಲ್ಲ’, ’ಬರುತ್ತಾರೆ’, ’ಎಡ-ಬಲ’ ಕವಿತೆಗಳನ್ನ ಉದಹರಿಸಬಹುದು. ಆದರೆ ಈ ಕವಿತೆಗಳ ಬಂಧ ಮೊದಲ ಮಾದರಿಯ ಅಂತರ್ಮುಖಿ ಕವಿತೆಗಳಿಗೆ ಹೋಲಿಸಿದರೆ ಸರಳವಾಗಿದ್ದು ಪ್ರತಿಮಾ ವಿಧಾನ ಕಡಿಮೆಯಾಗಿ ನೇರ ನಿರೂಪಣೆಯತ್ತ ಇವು ಹೊರಳಿರುವದನ್ನು ಕಾಣುತ್ತೇವೆ ಮತ್ತು ಈ ಕವನಗಳ ಪ್ರಮುಖ ಲಕ್ಷಣ ತಿವಿವ ವ್ಯಂಗ್ಯ ಮತ್ತು ವಿಡಂಬನೆ.

ಅಡಿಗರ ಕಾವ್ಯದಲ್ಲಿ ನೇರ ನಿರೂಪಣೆಯ ರಾಜಕೀಯ ಕವಿತೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು ’ಮೂಲಕ ಮಹಾಶಯರು’ ಹಾಗು ನಂತರ ಬಂದ ಸಂಕಲನಗಳಲ್ಲಿ. ಈ ಕವಿತೆಗಳ ರಚನೆಯ ಕಾಲ ೧೯೭೫ ರ ನಂತರದ್ದು. ಅಂದರೆ ತುರ್ತುಪರಿಸ್ಥಿತಿ ಹೇರಿಕೆಯಾದಮೇಲೆ ಬರೆದವು. ಇವು ಅಡಿಗ ಮಾದರಿ ಎನ್ನಬಹುದಾದ ಪ್ರತಿಮಾವಿಧಾನವನ್ನು ಬಹುಮಟ್ಟಿಗೆ ತ್ಯಜಿಸಿ ನೇರ ನಿರೂಪಣೆಯ ಸರಳ ರಚನೆಗಳು.

ಆಶ್ಚರ್ಯವೆಂದರೆ ಅಡಿಗರ ಇನ್ನೊಂದು ವಿಶಿಷ್ಟತೆಯಾದ ವ್ಯಂಗ್ಯ ವಿಡಂಬನೆಗಳನ್ನೂ ಬಿಟ್ಟುಕೊಟ್ಟ ಕವನಗಳು ಈ ಮಾದರಿಯಲ್ಲಿ ಸಾಕಷ್ಟಿವೆ. ಅಂತಹವುಗಳಲ್ಲಿ ಒಂದು ‘ಸಾಮಾನ್ಯನಂತೆ ಈ ನಾನು’ ಕವಿತೆ. ಸಿಟ್ಟು, ಆಕ್ರೋಶವೇ ಈ ಕವಿತೆಯ ತುಂಬೆಲ್ಲ ಹರಡಿಕೊಂಡು ಅದೇ ಸ್ಥಾಯೀ ಭಾವವಾಗಿದೆ. ಅಡಿಗರ ಕಟುಕುವ ವ್ಯಂಗ್ಯವನ್ನು ಇದರಲ್ಲಿ ಕಾಣಲಾರೆವು.

’ತುರ್ತು ಪರಿಸ್ಥಿತಿ (Emargency) ಹೇರಿಕೆಯಿಂದಾಗಿ, ವ್ಯಕ್ತಿ ವೈಶಿಷ್ಠ್ಯವನ್ನು ಉಳಿಸಿ ಬೆಳಸಿಕೊಳ್ಳಲು ಬೇಕಾದ ಅಭಿವ್ಯಕ್ತಿ ಸ್ವಾತ್ರಂತ್ರ್ಯದ ಹರಣದ ವಿರುದ್ಧದ ನಿಲುವು ಈ ಕವಿತೆಯ ವಸ್ತುವೆಂದು ಇದು ರಚಿತವಾದ ಕಾಲದಲ್ಲಿ ಇದ್ದ ರಾಜಕೀಯ ವಾಸ್ತವತೆಯಿಂದ ಅರಿಯಬಹುದಾಗಿದೆಯೇ ಹೊರತು ನೇರ ಪುರಾವೆಗಳಿಲ್ಲ. ಬಹುಶಃ ತುರ್ತುಪರಿಸ್ಥಿತಿಯ ಆ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದ್ದ ಮಿತಿಯು ಇದಕ್ಕೆ ಕಾರಣವಾಗಿರಬಹುದು. ಅಡಿಗರ ಎಲ್ಲ ರಾಜಕೀಯ ಕವಿತೆಗಳಲ್ಲಿ ಕಾಣುವ ಹಾಗೆ ಇಲ್ಲಿಯೂ ವಿನಾಕಾರಣ ಸಮಾಜವಾದದ ವಿರುದ್ಧದ ಅವರ ಸಿಟ್ಟು ’ಸಮವಸ್ತ್ರ ಪ್ರವಾದಿ’ ಎನ್ನುವದರ ಮೂಲಕ ವ್ಯಕ್ತವಾಗಿದೆ.

ಮೇಲು ಕೀಳಿನ ಶ್ರೇಣಿಕ್ರತ ಸಮಾಜ, ಈ ಮೇಲು ಕೀಳಿನ ಮಧ್ಯೆ ಇರುವ ತುಂಬಲಾರದ ಕಂದಕ ತಮ್ಮ ಎದುರಿಗೆ ಬಾಯ್ದೆರೆದು ನಿಂತಿದ್ದರೂ ಅವುಗಳನ್ನು ಕಾಣಲಾರದೆ (ಅಥವಾ ನಿರ್ಲಕ್ಷಿಸಿಯೊ) ಎಲ್ಲರನ್ನೂ ಸಮವಸ್ತ್ರಧಾರಿಗಳನ್ನಾಗಿ ಮಾಡುವ ವ್ಯವಸ್ಥೆ ಬರುತ್ತಿದೆ ಎಂದು ತಮ್ಮ ಕವನಗಳಲ್ಲಿ ಇವರು ಬೊಬ್ಬೆ ಹಾಕುವದು ಸಮರ್ಥಿಸಿಕೊಳ್ಳಲಾಗದ ಅತಿ ಪ್ರತಿಗಾಮಿ ನಿಲುವಾಗಿದೆ.

ಅಡಿಗರ ರಾಜಕೀಯ ಕಾವ್ಯವನ್ನು ಅವರ ವಯ್ಯಕ್ತಿಕ ರಾಜಕೀಯ ನಿಲುವಿನಿಂದ ಬೇರೆಯಾಗಿ ನೋಡಲಾಗದು.

ಅವರಿಗೆ ಜೀವನದ ಮೌಲ್ಯಗಳು ಮತ್ತು ಅವರ ಸಾಹಿತ್ಯಕ ನಿಲುವುಗಳು ಬೇರೆ ಬೇರೆ ಆಗಿರಲಿಲ್ಲ. ಅವರು ಜನಸಂಘ/ ಬಿಜೆಪಿಯಿಂದ ಚುನಾವಣೆಗೆ ನಿಂತದ್ದು ಕೇವಲ ಒಂದು ಆಕಸ್ಮಿಕವಲ್ಲ. ಅವರಿಗೆ ಇಂದಿರಾ ಗಾಂಧಿಯ ಸರ್ವಾಧಿಕಾರದ ವಿರುದ್ಧ ಹಾಗೂ ನೆಹರು ಮನೆತನದ ವಂಶ ಪಾರಂಪರ್ಯ ಆಡಳಿತದ ವಿರುದ್ಧ ಹೋರಾಟಕ್ಕೆ ಒಂದು ವೇದಿಕೆ ಬೇಕಿತ್ತು

ಅವರು ಸಂಘ ಪರಿವಾರವನ್ನು ಸೇರಿಕೊಂಡದ್ದು ಒಂದು ಆಕಸ್ಮಿಕ ಅಥವಾ ಕಾಕತಳೀಯ (Coincidence) ಎಂದು ಕೆಲವು ವಲಯಗಳಲ್ಲಿ ಅವರನ್ನು ಸಮರ್ಥಿಲಾಗುತ್ತದೆ. ಅಲ್ಲದೆ ಆ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧ ಉಳಿದೆಲ್ಲ ರಾಜಕೀಯ ಶಕ್ತಿಗಳನ್ನು ಒಟ್ಟುಗೂಡಿಸುವ ಕಾರ್ಯವನ್ನು ಪ್ರಗತಿಪರರು ಒಂದು ಮಿಶನರಿ ಮಾದರಿಯಲ್ಲಿ ಮಾಡುತ್ತಿದುದರಿಂದ, ಕೆಲವು ಸಮಾಜವಾದಿ ಚಿಂತಕರು ಅಡಿಗರನ್ನು ಬೆಂಬಲಿಸಿದರು ಹಾಗೂ ಹಲವು ಪ್ರಗತಿಪರ ಚಿಂತಕರು ಮೃಧು ಧೋರಣೆ ತಳೆದರು. ಅಂದಂದಿನ ವ್ಯವಸ್ಥೆಯ ವಿರುದ್ಧ ಹೋರಾಡುವಾಗ ಉಳಿದ ಸಂಗತಿಗಳು ಗೌಣವಾಗುವದು ಸಾಮಾನ್ಯ. ಅಲ್ಲದೆ ಕಾಂಗ್ರೆಸ್ ವಿರುದ್ಧ ಹೋರಾಟದ ಆ ದಿನಗಳಲ್ಲಿ ಸಂಘ ಪರಿವಾರದವರನ್ನೂ ಜಯಪ್ರಕಾಶ ನಾರಾಯಣರು ತಮ್ಮ ನೇತೃತ್ವದ ಆಂದೋಲನದಲ್ಲಿ ಸೇರಿಸಿಕೊಂಡಿದ್ದರಿಂದ ಪ್ರಗತಿಪರರಿಗೆ ಅಂದು ಸಂಘ ಪರಿವಾರ ಅಸ್ಪೃಶ್ಯರಾಗಿ ಕಂಡಿರಲಿಲ್ಲ.

ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಯು.ಆರ್. ಅನಂತಮೂರ್ತಿಯಂಥ ಕಟ್ಟ ಸಮಾಜವಾದಿ ನಿಲುವಿನ ಸಾಹಿತಿಗಳೂ ಆರ್.ಎಸ್.ಎಸ್.ಕಾರ್ಯಕರ್ತರೊಡಗೂಡಿ ಕೆಲಸ ಮಾಡಿದ್ದರು.

ಅಡಿಗರು ಮೊದಲ ಸಲ ಚುನಾವಣೆಗೆ ಜನ ಸಂಘದಿಂದ (ಈಗಿನ ಬಿಜೆಪಿ ಪಕ್ಷದ ಅಂದಿನ ಹೆಸರು) ನಿಂತಾಗ ಲಂಕೇಶ್ ಸಹ ಅಡಿಗರ ಪರವಾಗಿ ಪ್ರಚಾರಕ್ಕೆ ಇಳಿದಿದ್ದರು. (ಆದರೆ ಎರಡನೆ ಸಲ ಅಡಿಗರು ಬಿಜೆಪಿಯಿಂದ ನಿಂತಾಗ ಲಂಕೇಶ್ ಅಡಿಗರನ್ನು ವಿರೋಧಿಸಿದ್ದರು, ಆಗ ಅವರು ಬಂಡಾಯ ಸಾಹಿತಿಗಳೊಡನಿದ್ದರು ) ಆದರೆ ಬಂಡಾಯ ಸಾಹಿತಿಗಳ ಗುಂಪು ಅಡಿಗರನ್ನು ತೀವ್ರವಾಗಿ ಟೀಕಿಸಿತು ಮಾತ್ರವಲ್ಲದೆ ಅಡಿಗರ ಸಾಹಿತ್ಯವನ್ನು ’ಜೀವ ವಿರೋಧಿ’ ಎಂದೂ ಅವರು ಕರೆದರು.

ಅಡಿಗರ ವಯ್ಯಕ್ತಿಕ ರಾಜಕೀಯ ನಿಲುವನ್ನು ಗಣನೆಗೆ ತೆಗೆದುಕೊಳ್ಳದೆಯೂ ಸಹ ಅವರ ರಾಜಕೀಯ ಕವನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅವರಿಗೆ ಸಂಘ ಪರಿವಾರದೊಂದಿಗೆ ತಾತ್ವಿಕವಾಗಿ ಕೆಲವು ಸಮಾನವಾದ ಅಂಶಗಳು ಅವರು ಚುನಾವಣೆಗೆ ನಿಲ್ಲುವದಕ್ಕೂ ಸಾಕಷ್ಟು ಮೊದಲಿನಿಂದಲೂ ಇತ್ತು ಎಂದೆನಿಸುತ್ತದೆ. ಬದಲಾದ ಕಾಲಘಟ್ಟದ ಈ ದಿನಗಳಲ್ಲಿ ಅಂದು ಗೌಣವಾದ ಅಂಶ ಈಗ ಮುನ್ನೆಲೆಗೆ ಬರಬೇಕಿದೆ ಮತ್ತು ಆ ಬೆಳಕಿನಲ್ಲಿ ಅಡಿಗರ ಕಾವ್ಯದ ಅದರಲ್ಲೂ ಅವರ ರಾಜಕೀಯ ಕಾವ್ಯದ ಮರು ಓದಿನ ಅವಶ್ಯಕತೆ ಇದೆ.

ಈ ಹಿನ್ನೆಲೆಯಿಂದ ನೋಡುವದಾದರೆ ಸಂಘ ಪರಿವಾರಕ್ಕೂ ಅಡಿಗರಿಗೂ ಕೆಲವು ಮುಖ್ಯ ವಿಷಯಗಳಲ್ಲಿ ಸಾಮ್ಯತೆಯನ್ನು ಕಾಣಬಹುದು. ಸಂಘ ಪರಿವಾರದ ಮುಖ್ಯ ಅಜೆಂಡಾದಲ್ಲಿ ಒಂದು ನೆಹರು ನಿರಾಕರಣೆ; ಅಂದರೆ ನೆಹರು ಪ್ರತಿಪಾದಿಸಿದ ಎಲ್ಲವನ್ನೂ: ಉದಾಹರಣೆಗೆ ಸಮಾಜವಾದ, ಸೆಕ್ಯುಲರಿಸಂ, ದೇಶದ ವೈವಿಧ್ಯೆತೆಯನ್ನು ಕಾಪಾಡುವದು, ಈ ಎಲ್ಲವನ್ನೂ ನಿರಾಕರಿಸುವದು ಮತ್ತು ಅದರ ಬದಲಿಗೆ ಬಂಡವಾಳಶಾಹಿ ವ್ಯವಸ್ಥೆ, ಹಿಂದು ರಾಷ್ಟ್ರ ಮತ್ತು ಏಕ ಸಂಸ್ಕೃತಿ ಪ್ರತಿಪಾದನೆ.

ಇದನ್ನು ಸಾಧಿಸಲು ಅವರು ಹಿಂದೆಯೂ ಬಳಸುತ್ತಿದ್ದ ಮತ್ತು ಈಗಲೂ ಬಳಸುತ್ತಿರುವ ಒಂದು ತಂತ್ರ ನೆಹರು ಬಗ್ಗೆ ಅಪಪ್ರಚಾರ ಮತ್ತು ಸುಳ್ಳು ಕತೆಗಳನ್ನು ಹರಡುವದು ಮತ್ತು ನೆಹರು ಚಾರಿತ್ರ್ಯ ವಧೆ. ಈ ಹಿನ್ನೆಲೆಯಲ್ಲಿ ಅಡಿಗರ “ನೆಹರು ನಿವೃತ್ತರಾಗುವದಿಲ್ಲ” ಕವನದ ವಿಚಾರಕ್ಕೆ ಬರೋಣ. ಇದರಲ್ಲಿ ನೆಹರು ವ್ಯಕ್ತಿತ್ವದ ಒಂದು ಅಂಶವಾದ ಕನಸುಗಾರಿಕೆಯನ್ನು ವಿಡಂಬಿಸಿ ಅದನ್ನೇ ನೆಹರು ಅವರ ಪೂರ್ಣ ವ್ಯಕ್ತಿತ್ವ ಎನ್ನುವಂತೆ ಬಿಂಬಿಸಲಾಗಿದೆ. ಇದು ನೆಹರು ಬಗ್ಗೆ ಅಪಪ್ರಚಾರ (misinformation campaign) ಮಾಡುವ ಸಂಘ ಪರಿವಾರದ ತಂತ್ರಕ್ಕೆ ತುಂಬ ಹತ್ತಿರವಾಗಿದೆ.

ಈ ಕವನದಲ್ಲಿ ನವ್ಯ ಕಾವ್ಯಕ್ಕೆ ಸಂಬಂಧ ಪಟ್ಟ ಪರಿಕರಗಳಾದ ಆಡುಮಾತಿನ ಭಾಷೆಯ ಬಳಕೆ, ವ್ಯಂಗ್ಯ, ವಿಡಂಬನೆಗಳನ್ನು ತುಂಬ ಪರಿಣಾಮಕಾರಿಯಾಗಿ ಬಳಸಲ್ಪಟ್ಟಿದ್ದರೂ ಕವನದ ಆಶಯ ಮಾತ್ರ ನೆಹರು ವ್ಯಕ್ತಿತ್ವದ ತೇಜೊವಧೆಯಾಗಿದೆ. ನೆಹರು ಅವರನ್ನು ಹಗುರವಾಗಿ ಗೇಲಿ ಮಾಡಿ ಅವರ ಮಹೋನ್ನತ ಕೊಡುಗೆಗಳನ್ನು ಅಲಕ್ಷಿಸುವದರ ಮೂಲಕ ಈ ಕಾರ್ಯವೆಸಗಲಾಗಿದೆ ಎಂದರೆ ತಪ್ಪಾಗಲಾರದು.

ಸಂಘ ಪರಿವಾರದವರು ಎಡಪಂಥೀಯ ವಿಚಾರ ಧಾರೆಗೆ ಕಡು ವಿರೋಧಿಗಳು. ಸಾಮಾಜಿಕವಾಗಿಯಾಗಲಿ, ಆರ್ಥಿಕವಾಗಿಯಾಗಲಿ ಸಮಾನತೆಯನ್ನು ವಿರೊಧಿಸುವವರು. ಅಡಿಗರು ಸಹ ತಮ್ಮ ಎಲ್ಲ ರಾಜಕೀಯ ಕವಿತೆಗಳಲ್ಲಿ ಎಡಪಂಥೀಯರನ್ನು ಕಟುವಾಗಿ ಟೀಕಿಸುತ್ತ ಅವರನ್ನು ’ಸಮವಸ್ತ್ರ ನಾಗರಿಕತೆಯ ಪ್ರತಿಪಾದಕರು” ಎಂದು ಲೇಬಲ್ ಮಾಡುತ್ತಲೇ ಬಂದಿದ್ದಾರೆ. ಇಬ್ಬರೂ (ಸಂಘ ಪರಿವಾರ ಮತ್ತು ಅಡಿಗ) ವಾಸ್ತವಿಕವಾಗಿ ತಮ್ಮ ಮುಂದಿರುವ ಸಾಮಾಜಿಕ ಅಸಮಾನತೆಯನ್ನು ಕುರುಡುಗಣ್ಣಿಂದ ಕಾಣುತ್ತಾರೆ.

ಇದು ಕೇವಲ ಕಾಕತಾಳೀಯವಲ್ಲ. ಸಾಮಾಜಿಕ ಅಸಮಾನತೆ ಬಗೆಗೆ, ಸಮಾಜಿಕ ನ್ಯಾಯದ ಪ್ರತಿಪಾದನೆಯ ಬಗೆಗೆ ಒಂದೂ ಕವಿತೆಯನ್ನು ಅಡಿಗರು ತಮ್ಮ ನವ್ಯ ಕಾವ್ಯದ ಸಂದರ್ಭದಲ್ಲಿ ಬರೆಯದಿರುವದು (ಅವರ ’ಪ್ರಗತಿಶೀಲ’ ಕಾಲದ ಹುರುಪಿನ ’ನಾವೆಲ್ಲರು ಒಂದೆ ಜಾತಿ’ ಕವನದ ಹೊರತಾಗಿ) ಪರೋಕ್ಷವಾಗಿ ಸಂಘ ಪರಿವಾರಕ್ಕೂ ಅಡಿಗರಿಗೂ ಇರುವ ಸಾಮ್ಯತೆಯನ್ನು ಪುಷ್ಟೀಕರಿಸುತ್ತದೆ.

ಇದಕ್ಕೆ ಉದಾಹರಣೆಯಾಗಿ ಅವರು ಬಂಡಾಯ ಸಾಹಿತ್ಯ ಚಳುವಳಿಗೆ ಉತ್ತರವಾಗಿ ಬರೆದಿದ್ದಾರೆನ್ನುವ “ಬಂಡಾಯ” ಎನ್ನುವ ಕವನವನ್ನೇ ನೋಡಬಹುದು. ಈ ಕವನದಲ್ಲಿ ಬಂಡಾಯದ ವ್ಯಾಖ್ಯಾನ ಕೇವಲ ವಯ್ಯಕ್ತಿಕ ನೆಲೆಯಲ್ಲಿ ಹುಟ್ಟಿ ವಯ್ಯಕ್ತಿಕ ನೆಲೆಯಲ್ಲೆಯೇ ಪರಿಹಾರ ಕಂಡುಕೊಳ್ಳುವಂತಹದ್ದು. ಆದರೆ ಬಂಡಾಯ ಚಳುವಳಿಯ ಮೂಲ ಪ್ರೇರಣೆ ಮತ್ತು ಆಶಯ ಇರುವದು ಸಾಮಾಜಿಕ ನ್ಯಾಯದಲ್ಲಿ ಮತ್ತು ಅದು ಸಾಮೂಹಿಕ ನೆಲೆಯಲ್ಲಿ ನಡೆದು ಫಲ ಕಾಣಬೇಕಾದದ್ದು.

ಆದರೆ ಅಡಿಗರ ಈ ಕವಿತೆ ಸಾಮಾಜಿಕ ನ್ಯಾಯದ ಆಶಯಕ್ಕೆ ಸ್ಪಂದಿಸುವದಿಲ್ಲ ಬದಲಾಗಿ ಕುರುಡಾಗಿದೆ. ಬಂಡಾಯವನ್ನು ವಯ್ಯಕ್ತಿಕ ನೆಲೆಗೆ ಸೀಮಿತಗೊಳಿಸುವ ಈ ಕವಿತೆ ಎಷ್ಟೇ ಆಕರ್ಷಕವಾಗಿದ್ದರೂ ದಿಕ್ಕು ತಪ್ಪಿಸುವ ಪ್ರಯತ್ನವೆನ್ನುವ ಸಂಶಯಕ್ಕೆಡೆಮಾಡಿಕೊಡುತ್ತದೆ. ಸಾಹಿತ್ಯ ಕೃತಿಯಲ್ಲಿ ಯಾವುದನ್ನು ಮಾತ್ರ ಹೇಳಬೇಕು ಎನ್ನುವದರ ಹಿಂದೆ ಒಂದು ರಾಜಕೀಯ ನಿಲುವಿರುತ್ತದೆ ಎನ್ನುವದನ್ನು ಪರಿಗಣಿಸಿದಾಗ ಇದು ಇನ್ನೂ ಸ್ಪಷ್ಟವಾಗುತ್ತದೆ.

ಇನ್ನು ಗತಕಾಲದ ಶ್ರೇಷ್ಠತೆಯ ಬಗೆಗೆ ಹಳಹಳಿಕೆ ಮತ್ತು ಅದನ್ನು ಮತ್ತೆ ಪಡೆಯಬೇಕೆಂಬ ಹಂಬಲ ಅಡಿಗರ ಕಾವ್ಯದಲ್ಲಿ ಆಗಾಗ ಮರುಕಳಿಸುತ್ತದೆ.(’ಭೂತ’, ’ಆಗಬೋಟಿ’, ’ಆನಂದತೀರ್ಥರಿಗೆ’, ’ಇಂದು ನಮ್ಮೀನಾಡು’ ಮುಂತಾದ ಮಹತ್ವದ ಕವನಗಳಲ್ಲಿ) ಯಾವ ಗತಕಾಲವನ್ನು ಇವರು ಮರಳಿ ಪಡೆಯಲು ಬಯುಸುತ್ತಾರೆ ಎನ್ನುವದು ಮುಂದೆ “ಮತ್ತೆ ಮೊಳಗಲಿ ಇಲ್ಲಿ ಪಾಂಚಜನ್ಯ” ಎನ್ನುವ ಸಂಘ ಪರಿವಾರದ ಮೆನಿಫೆಸ್ಟೊ‍ದಂತಿರುವ ಕವನ ಬರೆಯುವದರಲ್ಲಿ ಪೂರ್ತಿ ಬೆತ್ತಲಾಗಿ ವ್ಯಕ್ತವಾಗುತ್ತದೆ.

ಅಡಿಗರು ನೆನಪಿಸಿಕೊಳ್ಳುವ ಗತಕಾಲದ ಔನ್ಯತ್ಯವೆಲ್ಲವೂ ವೈದಿಕ ಸಂಸ್ಕೃತಿಯದ್ದೆ ಹೊರತು ದೇಶದಲ್ಲಿ ಅನಾದಿಕಾಲದಿಂದಲೂ ಬೆಳೆದುಬಂದ ಪರ್ಯಾಯ ಸಂಸ್ಕತಿಯದ್ದಲ್ಲ ಎನ್ನುವದು ಇಲ್ಲಿ ಮಹತ್ವದ್ದು. ಇದು ಸಂಘ ಪರಿವಾರದ ಏಕ ಸಂಸ್ಕ್ರತಿ ಪ್ರತಿಪಾದನೆಗೆ ಪೂರಕವಾದುದೇ ಆಗಿದೆ. ಇನ್ನು ಪರ್ಯಾಯ ಸಂಸ್ಕೃತಿಯ ಬಗೆಗೆ ಇವರ ಕಾವ್ಯದಲ್ಲಿ ಒಂದು ರೀತಿಯ ಅನಾದರವಿದೆ. ಇದಕ್ಕೆ ಉದಾಹರಣೆಯಾಗಿ ಅವರು ೧೯೫೩ರಲ್ಲಿ ಬರೆದ ’ಗೊಂದಲಪುರ’ ಕವಿತೆಯಲ್ಲಿ ಬರುವ ಕೆಲವು ಸಾಲುಗಳನ್ನು ನೋಡಬಹುದು.

ಮುಕ್ಕೋಟಿ ಸಾತ್ವಿಕ ದೇವತೆಗಳನ್ನು ಸುಮ್ಮನಾಗಿಸಿ ಅಂಧಕಾಸುರನೆಂಬ ತಾಮಸ ಪ್ರವೃತ್ತಿಯ ರಾಕ್ಷಸನೊಬ್ಬ ಮೆರೆಯುವ ಚಿತ್ರದಲ್ಲಿ ಆ ಅಂಧಕಾಸುರನಿಗೆ ಸಹವರ್ತಿಗಳಾಗಿ ’ಪಂಜುರ್ಲಿ’, ’ಹಾಯ್ಗೂಳಿ, ’ಬೊಬ್ಬರ್ಯ’ , ’ಜಟ್ಟಿಗ’ ಮೊದಲಾದ ಗ್ರಾಮ್ಯ ದೈವಗಳು ಕುಣಿಯುವ ಚಿತ್ರವನ್ನು ಅಡಿಗರು ಕಟ್ಟಿಕೊಡುತ್ತಾರೆ. ವೈದಿಕ ಸಂಸ್ಕೃತಿಯಲ್ಲಿ ಈ ತರಹದ ಗ್ರಾಮ್ಯ ದೈವಗಳ ಬಗೆಗೆ ಯಾವ ಆದರವೂ ಇಲ್ಲ ಬದಲಿಗೆ ಈ ಗ್ರಾಮ್ಯ ದೈವಗಳನ್ನು ಉಪಟಳಕಾರಿ ಎನ್ನುವದಾಗಿ ಮಾತ್ರ ಭಾವಿಸಲಾಗುತ್ತದೆ.

ಅಡಿಗರ ಕಾವ್ಯ ಸಂವೇದನೆಯ ಮೂಲ ವೈದಿಕ ನೆಲೆಯಿಂದ ಬಂದದ್ದು ಆದ್ದರಿಂದ ಒಬ್ಬ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಕವಿಗೆ ಇದು ಸಹಜ ಎನ್ನುವದಾದರೆ ಬೇಂದ್ರೆ ಸಹ ಬ್ರಾಹ್ಮಣರೇ ಆಗಿದ್ದರು ಆದರೆ ಅವರ ಅನೇಕ ಕವನಗಳ ದ್ರವ್ಯ ಜಾನಪದ ನೆಲೆಯಿಂದ ಮತ್ತು ಪರ್ಯಾಯ ಸಂಸ್ಕೃತಿಯ ಮೂಲದಿಂದ ಬಂದದ್ದು ಎನ್ನುವದನ್ನು ಮನಗಂಡಾಗ ಇದು ಕೇವಲ ಬ್ರಾಹ್ಮಣ ಕವಿಯ ಸಂವೇದನೆಯ ಸೀಮಿತತೆಯ ದೌರ್ಬಲ್ಯದ ಸಮಸ್ಯೆಯಲ್ಲ ಎನ್ನುವದು ಅರಿವಾಗುತ್ತದೆ ಮತ್ತು ಅಡಿಗರಲ್ಲಿ ಬಲ ಪಂಥೀಯ ಪ್ರತಿಗಾಮಿ ಮನೋಧರ್ಮದ ಬೀಜ ಮೊದಲಿಂದಲೂ ಅವಿತಿರುವದರ ಬಗೆಗೆ ಸಂಶಯ ಮೂಡುತ್ತದೆ.

ಅಡಿಗರದ್ದು “ಶೋಷಣೆ” ಅಂತ ಒಂದು ಕವನವಿದೆ. ಇದರಲ್ಲಿ ನಿಸರ್ಗದ ಪ್ರತಿಯೊಂದು ವ್ಯಾಪಾರದಲ್ಲಿ ಶೋಷಣೆಯನ್ನು ಕಾಣುತ್ತಾರೆ, ಗಿಡ ಮರವಾಗಿ ಬೆಳೆಯುವದರಲ್ಲಿ, ಕ್ರಿಮಿ ಕೀಟಗಳಿಂದ ಹಿಡಿದು ಪ್ರತಿಯೊಂದು ಪ್ರಾಣಿಗಳ ಬದುಕಿನ ಹಿಂಸೆಯಲ್ಲಿ (ಒಂದು ಪ್ರಾಣಿ ಇನ್ನೊಂದನ್ನು ತಿಂದು ಬದುಕುವದರಲ್ಲಿ) ನಂತರ ಸೂರ್ಯನ ಬಿಸಿಲಿನ ಕಾವಿನಲ್ಲಿಯೂ ಅಡಿಗರಿಗೆ ಶೋಷಣೆ ಕಾಣುತ್ತದೆ.

ಆದರೆ “ಶೋಷಕ ಬುದ್ಧಿ ಎಲ್ಲ ಕಡೆಗೂ, ಎಲ್ಲ ಕಾಲಕ್ಕು, ಅದಕ್ಕಾಗಿ/ ಬಂಡವಳಿಗರ ಹುಡುಕಿ ಹೋಗಬೇಕಾದ್ದಿಲ್ಲ” ಎನ್ನುವ ಮೂಲಕ ಬಂಡವಾಳಶಾಹಿಗಳು ಮಾಡುವ ಶೋಷಣೆಯನ್ನು ಸಮರ್ಥಿಸಲು ಅಡಿಗರು ಬಳಸುವದು ಪೂರ್ತಿಯಾದ ಪ್ರತಿಗಾಮಿ ನಿಲುವು ಎನ್ನದೆ ವಿಧಿ ಇಲ್ಲ. “ನೆಲ ಸಪಾಟಿಲ್ಲ” ಎನ್ನುವ ಇನ್ನೊಂದು ಕವನದಲ್ಲಿ ನದಿಯ ನೀರು, ಸಮುದ್ರದ ನೀರು, ಕೊಚ್ಚೆಗುಂಡಿಯಲ್ಲಿರುವ ನೀರು, ಸಕಲ ಕುಂಡೀ ತೀರ್ಥವೂ ಆವಿಯಾಗಿ ಮೇಲೆ ಆಕಾಶದಲ್ಲಿ ಸೇರಿದಾಗ ಮಾತ್ರ ಒಂದಾಗುತ್ತವೆ ಎಂದು ವಿವರಿಸುತ್ತ ಆದರೆ ಅದೇ ನೀರು ನೆಲದಲ್ಲಿ ಮಳೆಯಾಗಿ ಇಳಿದಾಗ ಅದು ಶೇಖರಗೊಂಡ ಬಗೆಯಲ್ಲಿ ಅವುಗಳ ಸ್ಥಾನ ಮಾನ ನಿರ್ಧಾರವಾಗುತ್ತದೆ ಎನ್ನುತ್ತಾರೆ. ’ ಜಾತಿ ಎಲ್ಲಿದೆ ಹೇಳಿ / ಈ ಮಣ್ಣಲ್ಲಿ ನೆಟ್ಟಾಗ ’ ಎನ್ನುವ ಸಾಲುಗಳಿಂದ ಕವಿತೆ ಮುಗಿಯುತ್ತದೆ.

ಇದು ನೇರವಾಗಿ ಸಮಾಜದಲ್ಲಿಯ ಜಾತಿ ವ್ಯವಸ್ಥೆಯನ್ನು ಸಮರ್ಥಿಸುತ್ತದೆ. ಇನ್ನು “ವರ್ಗ ರಹಿತ ಸಮಾಜ” ದಂತಹ ಕವಿತೆಗಳು ಎಡಪಂಥವನ್ನು, ಸಮಾಜವಾದವನ್ನು, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಗೇಲಿ ಮಡಲೆಂದೇ ಬರೆದ ಒಂದು ಕೆಟ್ಟ ಅಭಿರುಚಿಯ ಕವಿತೆ. “ವರ್ಗ ರಹಿತ ಸಮಾಜ” ಮತ್ತು “ಮತ್ತೆ ಮೊಳಗಲಿ ಇಲ್ಲಿ ಪಾಂಚಜನ್ಯ” ದಂತಹ ಕವಿತೆಗಳು ಅಡಿಗರಲ್ಲಿ ಈ ಮೊದಲೇ ಅಡಗಿದ್ದ ಬಲ ಪಂಥೀಯ ಪ್ರತಿಗಾಮಿ ಬೀಜ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆದದ್ದನು ನಿಚ್ಚಳವಾಗಿ ತೆರೆದಿಡುತ್ತದೆ.

ಬಂಡಾಯ ಸಾಹಿತಿಗಳು ಅಡಿಗರ ಕಾವ್ಯವನ್ನು ’ಜೀವ ವಿರೋಧಿ’ ಎಂದು ಕರೆದದ್ದಕ್ಕೆ ಸಾಕಷ್ಟು ಸಮರ್ಥನೆ ಇಂತಹ ಕವಿತೆಗಳಲ್ಲಿವೆ ಎನ್ನುವದು ವಾಸ್ತವ. ಹಾಗಾಗಿ ಇಂದಿರಾ ಸರ್ವಾಧಿಕಾರದ ಮತ್ತು ವಂಶ ಪಾರಂಪರ್ಯ ಆಡಳಿತದ ವಿರೋಧದ ನೆಲೆಯಲ್ಲಿ ಅಡಿಗರ ನಿಲುವನ್ನು ಸಮರ್ಥಿಸಿಕೊಳ್ಳುವದು ಅವರ ಪ್ರತಿಗಾಮಿ ನಿಲುವನ್ನು ಮರೆಮಾಚಿದಂತಾಗುತ್ತದೆ.

ಈ ಮೇಲಿನ ಆಕ್ಷೇಪಗಳ ಹೊರತಾಗಿಯೂ ಅಡಿಗರು ಇವನ್ನೆಲ್ಲ ಮೀರಿ ನಿಲ್ಲುವ ಕನ್ನಡದ ಅತ್ಯುತ್ತಮ ಕವನಗಳನ್ನು ಬರೆದಿದ್ದಾರೆ ಎನ್ನುವದೂ ಅಷ್ಟೆ ಸತ್ಯ. ನವೋದಯ ಕಾಲದ ಸತ್ವ ಮರೆಯಾಗಿ ಹುಸಿ ಭಾವನೆಗಳು ಮಾತ್ರ ವಿಜೃಂಭಿಸ ತೊಡಗಿ ಕಾವ್ಯ ಸೊರಗಿದಾಗ ತಮ್ಮ ನವ್ಯ ಮಾರ್ಗದ ಕಾವ್ಯ ಸ್ಪರ್ಶದ ಮೂಲಕ ಹೊಸ ಕಾಯಕಲ್ಪಕೊಟ್ಟು ಕನ್ನಡ ಕಾವ್ಯ ಮತ್ತೆ ಜೀವಂತವಾಗುವಂತೆ ಮಾಡಿದ ಮಾರ್ಗ ಪ್ರವರ್ತಕ ಕವಿ ಎನ್ನುವದನ್ನೂ ಮರೆಯಲಾಗದು. ನವ್ಯೋತ್ತರದ ಬದಲಾದ ಕಾವ್ಯದ ಆಶಯ ಮತ್ತು ಧೋರಣೆಯ ಈ ಕಾಲದಲ್ಲಿ ಸಹ ಕವಿತೆಯ ವಿನ್ಯಾಸ ಮತ್ತು ಭಾಷೆಯ ಬಳಕೆಯಲ್ಲಿ ಇಂದಿಗೂ ಅಡಿಗರು ಹಾಕಿಕೊಟ್ಟ ಮಾರ್ಗದಲ್ಲಿಯೇ ಕನ್ನಡ ಕಾವ್ಯದ ಪಯಣ ಸಾಗಿದೆ ಎನ್ನುವ ವಾಸ್ತವ ಅಡಿಗರ ಕೊಡುಗೆ ಕನ್ನಡ ಕಾವ್ಯಕ್ಕೆ ಎಷ್ಟು ಮಹತ್ತರವಾದುದು ಎನ್ನುವದನ್ನು ಸ್ಪಷ್ಟ ಪಡಿಸುತ್ತದೆ.

Leave a Reply