fbpx

ತೇಜಸ್ವಿ ಥರ ನಾನೂ ಟವರ್ ಹತ್ತಿದೆ..

 

 

 

 

ಮಂಜುನಾಥ್ ಕಾಮತ್

 

 

 

ತೇಜಸ್ವಿಯವರು ಟೆಲಿಫೋನ್ ಟವರ್ ಹತ್ತಿದ್ದ ಕತೆ ಓದಿದ್ದೆ. ಫೋಟೋ ಕೂಡಾ ನೋಡಿದ್ದೆ. ಅಂದಿನಿಂದ ನನಗೂ ಟವರ್ ಹತ್ತಬೇಕೆಂಬ ಆಸೆ. ಆಗುಂಬೆ ತುದಿಯ ಟವರು ನನ್ನ ಕನಸಾಗಿತ್ತು. ಯಾರ ಬಳಿಯೂ ಹೇಳದೆ ಅದರ ಬುಡಕ್ಕೊಮ್ಮೆ ಹೋಗಿದ್ದೆ. ‘ಅಪಾಯ’ ಅನ್ನೋ ಬೋರ್ಡು ನೋಡಿ, ಭಯಗೊಂಡು ಮರಳಿದ್ದೆ. ಆದರೆ ಕನಸು ಮರೆತಿರಲಿಲ್ಲ. ನನಸಾಗಿದ್ದು ಇತ್ತೀಚೆಗೆ. ಅದೂ ನನ್ನ ಮನೆಯ ಸಮೀಪವೇ ಹೊಸತಾಗಿ ಆದ ಜಿಯೋ ನೆಟ್ವರ್ಕ್ ಟವರ್ರು. ಬಾಲ್ಯದಿಂದಲೂ ನೆಲದಿಂದ ಕಂಡ ಹುಟ್ಟೂರನ್ನು140 ಅಡಿ ಎತ್ತರದಿಂದ ಕಣ್ತುಂಬಿಸಿಕೊಂಡೆ.

ಬಹುದಿನಗಳ ಆಸೆ ನೆರವೇರಲು ಕಾರಣವಾಗಿದ್ದು ನೆರೆಮನೆಯ ಶೆಟ್ರು. ಕಾಲೇಜಿಂದ ಮನೆಗೆ ಬಂದವನು ಸಂಜೆ ಮತ್ತೆ ಉಡುಪಿಗೆ ಹೊರಟಿದ್ದೆ. ಆ ರಾತ್ರಿ ನೀಲಾವರದ ಮಾರಿಯಂತೆ. ಕೋರಿ ರೊಟ್ಟಿ ಊಟಕ್ಕೆ ಅವಿನಾಶ್ ಆಹ್ವಾನಿಸಿದ್ದ. ಬಟ್ಟೆ ಬದಲಾಯಿಸಿ ಬಂದು ಮತ್ತೆ ಬುಲೆಟ್ಟನ್ನು ಏರುತ್ತಿದ್ದಾಗ ಶೆಟ್ರು ಅವರ ಮನೆಯ ಅಂಗಳದಿಂದ “ಯೋಗೀಶಾ…..” ಎಂದು ಜೋರಾಗಿ ಕರೆದರು. “ಓ….” ಅನ್ನುವ ಪ್ರತಿಕ್ರಿಯೆ ಬಾನಮೇಲಿಂದ ಬರುತ್ತಿತ್ತು. ಧ್ವನಿಯತ್ತ ಮುಖ ಎತ್ತಿದೆ. ಯೋಗೀಶಣ್ಣ ಟವರಿನ ತುದಿಯಲ್ಲಿ ನಿಂತಿದ್ದಾರೆ. ನನಗೂ ಆಸೆಯಾಯ್ತು.

 

ನಾನೂ ಅಲ್ಲಿ ಹೋಗ್ತೇನೆ‌, ಹತ್ತುತ್ತೇನೆ‌ ಅಂದಾಗ ಅಪ್ಪ ಬೈದು ಬಿಟ್ರು. ” ನೇರವಾಗಿ ಉಡುಪಿಗೆ ಹೋಗು. ಅಂತದ್ದೆಲ್ಲ ಮಾಡೋಕೆ ಹೋಗ್ಬೇಡ. ಅದು ಸಂಪೂರ್ಣವಾಗಿಲ್ಲ ಬೇರೆ. ಬಿದ್ರೆ ಕೇಳೋದಕ್ಕಿಲ್ಲ ಮತ್ತೆ” ಎಂದು ಹೆದರಿಸಿದರು. ಸರಿ ಎಂದೆ. ಕಾಳಿಂಗನ ಜೊತೆ ಮುನ್ನಡೆದೆ. ಆದರೆ ಟವರ್ ಹತ್ತದೆ ಹೋಗೋಕೆ ಮನಸಾಗಲಿಲ್ಲ. ನೆಟ್ವರ್ಕ್ ಬೂಸ್ಟರ್ ಕನೆಕ್ಟ್ ಮಾಡಿದ ಮೇಲೆ ಮತ್ತೆಂದೂ ಹತ್ತೋಕೆ ಬಿಡೋದಿಲ್ಲ. ಅವಕಾಶ ಕಳೆದುಕೊಳ್ಳೋಕೆ ಮನಸಾಗದೆ ಟವರ್ ಕಡೆ ನಡೆದೆ. ಮನೆಯವರಿಗೆ ಗೊತ್ತಾಗದಂತೆ ಹತ್ತಲು ನಿರ್ಧರಿಸಿದೆ.

ಟವರಿನ ತುದಿಯಲ್ಲಿ ಸುರೇಶಣ್ಣ, ಯೋಗೀಶಣ್ಣ ಮತ್ತೆ ಇಬ್ಬರು ಇದ್ದರು. ಮಾತು ಕೇಳುತ್ತಿತ್ತೇ ಹೊರತು ತುದಿ ಕಾಣುತ್ತಿರಲಿಲ್ಲ. ಸೂರಗಯಾಸ್ತ ಮುಗಿದ ಕತ್ತಲು. ಆಗ ನನ್ನ ಧೈರ್ಯಕ್ಕೆ ಪ್ರಾಥಮಿಕ ಶಾಲೆಯಿಂದಲೇ ಪರಿಚಯದವರಾದ ಹರಿಪ್ರಸಾದ್ ಶೆಟ್ರು ಜೊತೆಗೆ ಹತ್ತಲು ಒಪ್ಪಿದರು. ಮೊದಲು ನಾನು, ಹಿಂದೆ ಅವರು ಹತ್ತಲು ಶುರು.

ಟವರಿನ ಏಣಿಯಲ್ಲಿ ಏರುವಿಕೆಯ ಆರಂಭ ಸುಲಭವಾಗಿತ್ತು. ಆದರೆ ನಡು ತಲುಪಿದ್ದೇ ಎದೆಯಲ್ಲಿ ನಡುಕ. ಕಿರಿದಾಗುತ್ತಿದ್ದ ಮರಗಳು ಮತ್ತಷ್ಟು ಹೆದರಿಸಿದವು. ಮೇಲೆ ಕತ್ತೆತ್ತಿದರೆ ಏಣಿ ಮತ್ತಷ್ಟು ಬೆಳೆಯುತ್ತಿದೆ. ನನಗೆ ಆಗಲ್ಲ. ಕೆಳಗಿಳಿಯೋಣವೆಂದುಕೊಂಡೆ. ಬೇರೆ ನೆಪಗಳೂ ಸೇರಿಕೊಂಡು ಮೇಲಿದ್ದ ಯೋಗೀಶಣ್ಣನನ್ನು ಕರೆದು ಇನ್ನೆಷ್ಟಿದೆ? ಎಂದು ಕೇಳಿದೆ. ನಾನು ಇಳೀತೇನೆ. ಉಡುಪಿಗೆ ಹೋಗೋಕಿದೆ. ಲೇಟಾಗುತ್ತೆ ಅಂತ ರಾಗವೆಳೆದಾಗ ಅವರು ” ಏಳು ಬೆಟ್ಟ ಹತ್ತಿ ಬಂದಿದ್ದೀಯ. ಇದಕ್ಯಾಕೆ ಹೆದರ್ತೀಯ. ಸ್ವಲ್ಪವಷ್ಟೇ ಇರೋದು. ಬಂದು ಬಿಡು” ಎಂದರು.

ಯೋಗೀಶಣ್ಣ ಏಳು ಬೆಟ್ಟಗಳನ್ನು ನೆನಪಿಸಿದಾಗ ಮರಳುತ್ತೇನೆ ಅಂದ ನನ್ನ ಮಾತಿಗೆ ನಾಚಿಕೆಯಾಯ್ತು. ನನಗೆ ನಾನೆ ಸ್ಪೂರ್ತಿ ತಗೊಂಡು ಹತ್ತಿದೆ. ಬಿದ್ರೆ ಬೀಳೋದೇ. ಬದುಕಿ ಇದ್ದಾಗ ಭಯವನ್ನು ಗೆಲ್ಲಲೇಬೇಕೆಂದು ಹತ್ತಿದೆ. ತುದಿ ತಲುಪಿದೆ. ಸೂರ್ಯಾಸ್ತದ ನಂತರದ ಕೆಂಪು ಸೊಗಸಾಗಿತ್ತು. ನಮ್ಮೂರು, ಊರ ತೋಟ, ಮೈಲಾಜೆ ಫ್ಯಾಕ್ಟರಿ, ಸಂತೋಷ್ ಇಂಡಸ್ಟ್ರಿ, ಪರ್ಪಲೆಗುಡ್ಡೆ, ನಕರೆಕಲ್ಲು, ಬೆಳ್ಮಣ್ ವರೆಗಿನ ಬಾನು ಬಹಳ ಚೆಲುವಾಗಿತ್ತು. ಗಾಳಿಯ ಬೀಸು ಅತಿಯಾಗಿತ್ತು.

ಟವರಿನ ತುದಿಯಲ್ಲಿ ತೇಜಸ್ವಿ ನೆನಪಾದರು. ಕತ್ತಲೆಯಲ್ಲೂ ಸುತ್ತಲಿನ ಫೋಟೋ ತೆಗೆದೆ. ಸೆಲ್ಫಿಯೂ ಆಯ್ತು.ಈಗ ದಿಲ್ ಫುಲ್ ಖುಷ್. ಸಂತೋಷದಿಂದೊಮ್ಮೆ ಕಿರುಚಬೇಕೆಂದುಕೊಂಡೆ. ಆದರೆ ಕಿರುಚಲಿಲ್ಲ. ಅಪ್ಪ ಅಮ್ಮನಿಗೆ ಹೇಳದೆ ಬಂದಿದ್ದೆ. ಈಗ ಗೊತ್ತಾದರೆ ಬೈಗುಳದ ಸುರಿಮಳೆ. ಅದಕ್ಕಾಗಿ ಮೌನದಲ್ಲಿದ್ದೆ. ಆದರೆ ಆ ಮೌನವನ್ನು ಮುರಿದಿದ್ದೊಂದು ಮಗು. ಪಕ್ಕದ ಮನೆಯ ವಸಂತಿ ಅಕ್ಕನ ಪುಟಾಣಿ ಮೊಮ್ಮಗಳು. ಜೋರಾಗಿ, ಪ್ರೀತಿಯಿಂದ “ಮಾ…..ಮ” ಎಂದು ಬಲು ಸೊಗಸಾಗಿ ಕರೆದಳು. ಆಕೆ ಯಾರನ್ನು ಕರೆದಿದ್ದೋ? ನನ್ನ ಹೃದಯ ಆ ಮಾತಿಗೆ ಕರಗಿ ಇಡೀ ಊರಿಗೆ ಕೇಳಿಸುವಂತೆ ” ಓ….” ಎಂದೆ. ಧ್ವನಿಯ ಗುರುತು ಸಿಕ್ಕಿತು. ಅಪ್ಪ ಅಮ್ಮನಿಗೆ ಗೊತ್ತಾಗಿಯೇ ಬಿಟ್ಟಿತು.

ಕಳ್ಳಬೆಕ್ಕಿನಂತೆಯೇ ಇಳಿದೆ. ಮತ್ತೊಮ್ಮೆ ಮನೆಯೊಳಗೆ ನುಗ್ಗಿ ಸಿಟ್ಟುಗೊಂಡ ಅಪ್ಪ ಅಮ್ಮನಿಗೆ ಮಸ್ಕಹೊಡೆದು ಉಡುಪಿ ಕಡೆಗೆ ಹೊರಟೆ. ಅವರ ನಗು ಮುಖ ನೋಡದಿದ್ದರೆ ನೀಲಾವರದ ಮಾರಿಯ ಕೋಳಿರೊಟ್ಟಿಯ ಊಟ ಹೊಟ್ಟೆಗೆ ಇಳಿಯುತ್ತಿರಲಿಲ್ಲ.

 

Leave a Reply