ನೆತ್ತರ ನೆಕ್ಕಿ ನೆಲ ಸಾರಿಸಿದ ನಾಯಿಗಳು..

 

 

 

ಹೇಮಂತ್ ಲಿಂಗಪ್ಪ

 

 

 

 

” ಕಡಲ ತಡಿಯ ತಲ್ಲಣ”

ತಲೆಗೊಂದು ತಲೆಯಂತೆ
ಕಡಿಯುವ ತಲವಾರುಗಳು,
ಒಂದು ಮತದವರಾಗಿದ್ದಕ್ಕೆ
ಹೆಣಗಳಾಗುವ ಜೀವಗಳು..

ಸತ್ತ ದಿನ ಡೊಳ್ಳು, ನಗಾರಿ, ಭರಪೂರ ಯಾತ್ರೆ..
ಆವೇಶ, ಆಕ್ರೋಶ, ಉದ್ಘೋಷ..
ರಸ್ತೆಯ ಪಕ್ಕದಂಗಡಿಗಳಿಗೆ ಕಲ್ಲು,
ಟೈರುಗಳಿಗೆ ಬೆಂಕಿ..
ಗಗನವೇರುವ ಉರಿ-ಜ್ವಾಲೆ..
ಚಿತೆಯಲ್ಲಿ- ನೆಚ್ಚಿದ್ದವರ ಒಡಲಲ್ಲಿ…

ಪ್ರವಾಹದೋಪಾದಿಯಲ್ಲಿ ಸಾಲೋ ಸಾಲು,
ಕಂಡವರು- ಕಾಣದವರು,
ಕಂಡೂ ಕಾಣದವರಂತಿದ್ದವರು..,
ಕ್ಯಾಮೆರಾ-ಮೈಕು ಹಿಡಿದವರು,
ಹೇಳಿದ್ದನ್ನೇ ಹೇಳುವವರು,
ಕೇಳಿದ್ದನ್ನೇ ಕೇಳುವವರರು…

ಅಂದೇ ಶುರು ಎಣಿಕೆಯ ಕಾರ್ಯ,
ಏರುತ್ತಲೇ ಇದೆ
ಲಕ್ಷ ಲಕ್ಷಗಳ ಲೆಕ್ಕದಲ್ಲಿ ಹಣ,
ಟಿ.ಆರ್.ಪಿ., ಲೈಕು ಕಾಮೆಂಟುಗಳ ತೋರಣ,
ವಾದ- ಪ್ರತಿವಾದ-ಟೀಕಾಪ್ರಹಾರಗಳ  ಭಾಷಣ

ಕೆಲ ದಿನಗಳ ನಂತರ…

ಇತ್ತ…,

ಮತ್ತದೇ ಮೂರು ಮತ್ತೊಂದು ಜನ
ಎಳೆಯಲೇ ಬೇಕಾದ ಸಂಸಾರದ ನೊಗ
ಹಳೆಯ ಯಜಮಾನನ ಬಳಿ ಕೂಲಿ,
ಮಾಸಿದ ಬಣ್ಣದ ಗೋಡೆ,
ಬಾಡೇ ಇರುವ ಮೊಗ
ನೀರು ಹಿಂಗಿದ ಕಂಗಳು
ಆಯಾಸದ ನಿಟ್ಟುಸಿರು
ಅವರಿಗವರಷ್ಟೇ ನೆಂಟರು

ಅತ್ತ….,

ಮತ್ತೊಂದು ಬೆಳಗು
ಹೊಸ ವಿವಾದದ ಚರ್ಚೆ
ಶಾಂತಿ – ಅಭಿವೃದ್ಧಿಯ ಮಂತ್ರ…

ಮಾಂಸದ ಚೂರು ಹೊತ್ತೊಯ್ದ ಇರುವೆ,
ನೆತ್ತರ ನೆಕ್ಕಿ ನೆಲ ಸಾರಿಸಿದ ನಾಯಿ,
ದಿಗಂತದಿ ಮರೆಯಾಗುವ ಸೂರ್ಯ,
ಸದಾ ದಡಕ್ಕಪ್ಪಳಿಸುವ ಸಾಗರದಲೆಗಳು..