fbpx

ದೃಢತೆಯ ಆಶಯವಿದೆಯಲ್ಲ ಅದೇ ಸುಧಾ ಕವಿತೆಯ ಶಕ್ತಿ

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ.

ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ

ಆ ಕವಿ ‘ಪೊಯೆಟ್ ಆ ದಿ ವೀಕ್’ ಕೂಡಾ

ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ ಹೋಗಿದ್ದೇವೆ.

ಅವರು ಕವಿತೆಯನ್ನು ಓದಿ ಅದರ ಸ್ಪರ್ಶಕ್ಕೆ ಮನಸೋತ ಬಗೆಯನ್ನು ಬಿಚ್ಚಿಡುತ್ತಾರೆ.

ಕಳೆದ ವಾರ ಹಾಗೆ  ‘ಪೊಯೆಟ್ ಆ ದಿ ವೀಕ್’ ಆದವರು ಸುಧಾ ಶರ್ಮ ಚವತ್ತಿ

ಅವರ ಕವಿತೆಗಳು ಇಲ್ಲಿವೆ.

ಈಗ ಅದಕ್ಕೆ ಗಿರಿಧರ ಕಾರ್ಕಳ ಅವರು ಪ್ರತಿಕ್ರಿಯಿಸಿದ ರೀತಿಯನ್ನು ನೋಡಿ


ಪಾದರಸದ ಚಟುವಟಿಕೆಗೆ ಮತ್ತೊಂದು ಹೆಸರು ಗಿರಿಧರ ಕಾರ್ಕಳ. ಕಾರ್ಕಳ ಹುಟ್ಟೂರಾದರೂ ಕೆಲಸವೆಂಬ ಚಕ್ರ ಕಾಲಿಗೆ ಕಟ್ಟಿಕೊಂಡ ಕಾರಣಕ್ಕೆ ಸುತ್ತಿದ್ದು ಹಲವಾರು ಊರು. ಅದು ಮೈಸೂರಿರಲಿ, ಬೆಂಗಳೂರಿರಲಿ, ಮುಂಬೈ ಇರಲಿ ಅಲ್ಲೊಂದು ತಮ್ಮದೇ ಸಾಂಸ್ಕೃತಿಕ ಹೆಜ್ಜೆ ಗುರುತು ಮೂಡಿಸದೆ ಅವರು ಬಂದಿಲ್ಲ.

ಗಿರಿಧರ ಕಾರ್ಕಳ ಎಂದರೆ ಸಾಹಿತ್ಯ, ರಂಗಭೂಮಿ, ಕಲೆ, ಬ್ಯಾಂಕಿಂಗ್ ಎಲ್ಲವೂ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಹಿರಿಯ ಅಧಿಕಾರಿಯಾಗಿದ್ದ ಗಿರಿಧರ್ ಅವರ ಆಸಕ್ತಿಯ ಕ್ಷೇತ್ರಗಳು ಅಪಾರ. ಇವರ ಗೆಳೆಯರ ಬಳಗವೂ ದೊಡ್ಡದು. ಹಾಗಾಗಿಯೇ ಇವರು ಇದ್ದ ಬ್ಯಾಂಕ್ ಶಾಖೆಗಳೆಲ್ಲವೂ ತಾವು ಭಿನ್ನ ಎನ್ನುವುದನ್ನು ಸಾಬೀತು ಪಡಿಸಿದೆ.

ಅವಧಿಯ ಮುಖಪುಟದಲ್ಲಿರುವ ಟ್ಯಾಗ್ ಲೈನ್ ನ ಸುಂದರ ಅಕ್ಷರಗಳನ್ನು ಕೊಟ್ಟವರು ಗಿರಿಧರ್. ಇವರ ಮಾತು ಮೆಲುವಾದರೂ ನೋಟ ಖಡಕ್.

—————————————————————————————————————————————————————-

ಹೆಣ್ಣಿನ ಭಾವ ಜಗತ್ತನ್ನು ಕಾವ್ಯಾನುಭವಕ್ಕೆ ಒಗ್ಗಿಸುವ ಸುಧಾ ಚವತ್ತಿ

ಹೆಣ್ಣಿನ ಭಾವ ಜಗತ್ತನ್ನೇ ಕಾವ್ಯಾನುಭವಕ್ಕೆ ಒಗ್ಗಿಸುವ ಸುಧಾ ಚವತ್ತಿಯವರ  ಕವಿತೆಗಳ ಹೆಣಿಗೆ ಅದರ ತಾಜಾತನದಿಂದಾಗಿ ಖುಷಿಕೊಡುತ್ತದೆ.

ವ್ಯಥೆ, ಸಿಟ್ಟು ಗೋಳಿನ ಹಳಹಳಿಕೆಯ ರೊಚ್ಚು ಆವೇಶದ ಲವಲೇಶವನ್ನೂ ತೋರ್ಪಡಿಸಿಕೊಳ್ಳದೇ ತಣ್ಣಗೆ ಸಿಡಿಯುವ ಸುಧಾ ಕವಿತೆಗಳು ನೋವಿನ ಕಥೆಗಳನ್ನು ಆರ್ಧ್ರವಾಗಿ ತೆರೆದಿಡುತ್ತಲೇ ಹೆಣ್ಣಿನೊಳಗೊಂದು ಗಟ್ಟಿತನದ ಭಾವ ಮೂಡಿಸುವ ಹೊಸ ಆಲೋಚನಾ ವಿಧಾನದೊಂದಿಗೂ ಮುಖಾಮುಖಿಯಾಗುತ್ತವೆ. ‘ಕಳಲೆ ಕೊಳಲು’ ಇದಕ್ಕೊಂದು ಸುಂದರ ಪುರಾವೆ.

ಇನ್ನೊಬ್ಬರ ಸುಖಕ್ಕಾಗೇ ತೇದುಕೊಳ್ಳುತ್ತಿರುವ ಹೆಣ್ಣಿನ ಸಬಲತೆಯನ್ನು ಧ್ವನಿಸುವ ಕಳಲೆ ಕೊಳಲು ಕವನದ “ನಾನಾಗುವೆ ನೂರಾರು ಹೊನ್ನ ರಾಗ” ಎಂಬ ದೃಢತೆಯ ಆಶಯವಿದೆಯಲ್ಲ ಅದೇ ಈ  ಕವಿತೆಯ ಶಕ್ತಿ. “ಸೀರೆ” ಕವನ  ಹೆಣ್ಣಿನ ಯಥಾಸ್ಥಿತಿಯ ಬದುಕು, ಪಾರಂಪರಿಕ ಮೌಲ್ಯಗಳ ಸುತ್ತವೇ ಗಿರಕಿಹೊಡೆಯಬೇಕಾದ ಸ್ಥಿತಿ ಜೀವಂತವಾಗಿರುವುದನ್ನು ‘ಅವಳು ಹಾಡುತ್ತಾಳೆ ಅಮ್ಮ ಕಲಿಸಿದ ಅದೇ ಹಾಡನ್ನು ‘ಎನ್ನುತ್ತ ನಯವಾಗಿ ಕಣ್ಮುಂದೆ ನಿಲ್ಲಿಸುತ್ತದೆ.

‘ಉಂಗ್ರ ಕೊಡೆ ‘ ಕವಿತೆ  ದುಷ್ಯಂತ ಶಕುಂತಳೆಯರ ಕಥೆಯನ್ನು ಮತ್ತೆ ನೆನಪಿಸುತ್ತ  ಬದಲಾಗದ ಹೆಣ್ಣಿನ  ಬದುಕನ್ನೇ ಮತ್ತೆ ಇಲ್ಲಿ ಅನಾಮತ್ತಾಗಿ ಹಿಡಿದಿಡುತ್ತಾರೆ.

“ಹುಡುಗನ ನಗೆ ಒತ್ತೊತ್ತಿ ಬರುತ್ತಿದೆ, ಈಗ ಮರೆತು ಹೋಗಿದೆ”  ಅನ್ನುವ  ಮೊನಚು ವ್ಯಂಗ್ಯವೇ ಈ ಕವನದ ಅಂತಃಸ್ಸತ್ವ.
“ದ್ರೌಪದಿಗೆ ನೀರಾಯಿತು”ಕಾಲಚಕ್ರದ ಹರಿವಿನಲ್ಲಿ ಹುಟ್ಟು ಸಾವಿನ ನಿರಂತರತೆಯ ಪರಿಕ್ರಮಣವನ್ನು ಹೇಳುವ  ಕವಿತೆ  ವಸ್ ಪುಷ್ಪವತಿಯಾಗುವ ದ್ರೌಪದಿ ಇಲ್ಲಿ ಹೊಸ ಅರಳುವಿಕೆಗೆ ಪ್ರತಿಮೆಯಾಗುತ್ತದೆ.

ಹೊಸ ನಿರೀಕ್ಷೆಗಳನ್ನು  ಒಡಲಲ್ಲಿಟ್ಟ “ಕಾಯುವ ಕವಿತೆಗಳಲ್ಲಿ” ಮೋಡಕರಗಿಸಿ ಕಾಮನಬಿಲ್ಲು ಕಾಣುವ ಎರಡು ಮನಸ್ಸು ,ದೇಹಗಳ ಕನಸು, ಭಗವಂತನನ್ನೇ ಒರೆಗಲ್ಲಿಗೆ ತೀಡುವ ತೀಕ್ಷ್ಣತೆಯೊಳಗೆ ಅಧ್ಯಾತ್ಮದನುಭೂತಿಯಿದೆ.

– ಗಿರಿಧರ ಕಾರ್ಕಳ

Leave a Reply