ಹೀಗೆ ಖರ್ಚು ಮಾಡಿದ್ರೆ ಎಣ್ಣೆ ಬಾವಿ ಕೊರೀಬೇಕಾಗುತ್ತೆ..!!

”ಇಲ್ಲಿಯವರೆಗೆ ಬಂದ ನಂತರ  ಜಾಗೃತ ಸ್ಥಿತಿಯಲ್ಲಂತೂ ಖಂಡಿತ ಇರಿ”

”ಇಲ್ಲಿಯವರೆಗೆ ಬಂದ ನಂತರ ಭಯದ ನೆರಳಿನಲ್ಲಿ ಬದುಕುವುದೆಂದರೆ ಮೂರ್ಖತನವೇ ಸರಿ. ತೀರಾ ಪುಕ್ಕಲರಾಗಬೇಡಿ. ಆದರೆ ಜಾಗೃತ ಸ್ಥಿತಿಯಲ್ಲಂತೂ ಖಂಡಿತ ಇರಿ”, ಎಂದು ನಾನು ನನ್ನ ಕಿರಿಯ ಸಹೋದ್ಯೋಗಿಯೊಬ್ಬನಿಗೆ ಹೇಳುತ್ತಿದ್ದೆ.

ಮೊದಮೊದಲು ಅಂಗೋಲಾಕ್ಕೆ ಬರುವ ಬಗ್ಗೆ ಸಾಕಷ್ಟು ಉತ್ಸಾಹದಲ್ಲಿದ್ದ ಈತ ಕೊನೆಯ ಕ್ಷಣದಲ್ಲಿ ಹಿಂದೇಟು ಹಾಕಲು ಪ್ರಯತ್ನಿಸುತ್ತಿದ್ದ. ಹಾಗೆ ನೋಡಿದರೆ ಒಂದೆರಡು ವಾರಗಳ ಮಟ್ಟಿಗೆ ಅಂಗೋಲಾಕ್ಕೆ ಬರುತ್ತಿರುವ ಆತನಿಗಿಂತ ಇಲ್ಲೇ ನೆಲೆಯೂರಿದ್ದ ನನಗೆ ಹೆಚ್ಚಿನ ಆತಂಕವಿರಬೇಕಿತ್ತು. ಇನ್ನು ಸಾಮಾನ್ಯವಾಗಿ ಯಾರೂ ಹೋಗದ ದೇಶಕ್ಕೆ ನನ್ನನ್ನೇ ಏಕೆ ದೂಡುತ್ತಿದ್ದಾರೆ ಎಂಬ ಅಳುಕೂ ಕೂಡ ಅವರಲ್ಲಿತ್ತು. ಈ ನಿಟ್ಟಿನಲ್ಲಿ ಅಂಗೋಲಾದ ನೈಜ ಪರಿಸ್ಥಿತಿ ಹೇಗಿದೆ ಎಂಬುದನ್ನು ಮಾತುಮಾತಲ್ಲೇ ಕೇಳುತ್ತಾ ಉಪಾಯವಾಗಿ ನನ್ನ ಬಾಯಿಬಿಡಿಸುವ ಪ್ರಯತ್ನವನ್ನು ಮಾಡುತ್ತಿದ್ದ ಈ ಆಸಾಮಿ.

ನನ್ನ ಆ ಮಾತಿನಲ್ಲಿ ಸತ್ಯಾಂಶವಿತ್ತೇ ಹೊರತು ಉತ್ಪ್ರೇಕ್ಷೆಯಲ್ಲ. ಅಂಗೋಲಾಕ್ಕೆ ಬಂದಿಳಿದ ನಂತರದ ಕೆಲವೇ ದಿನಗಳಲ್ಲಿ ಸುರಕ್ಷತೆಯೆಂಬುದು ನಮ್ಮ ಪ್ರಮುಖ ಆದ್ಯತೆಯಾಗಿ ಬದಲಾಗಿತ್ತು. ವಸತಿ ಮತ್ತು ಕಾರ್ಯಾಲಯಗಳನ್ನು ಹೊಂದಿರುವ ನಮ್ಮ ಸುಂದರ ಆವರಣದ ಭದ್ರತೆಗಾಗಿ ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲವೂ ರೈಫಲ್ ಹಿಡಿದುಕೊಂಡಿದ್ದ ಭದ್ರತಾ ಸಿಬ್ಬಂದಿಯೊಬ್ಬನನ್ನು ನೇಮಿಸಲಾಗಿತ್ತು. ಇನ್ನು ಖಾಸಗಿ ಅಂಗರಕ್ಷಕರೇನೂ ಇರದಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ದಿನರಾತ್ರಿಗಳ ಬೇಧವಿಲ್ಲದೆ ಒಬ್ಬಂಟಿಯಾಗಿ ಎಲ್ಲೆಲ್ಲೋ ಹೋಗುವುದು ಅಪಾಯಕರವೆಂಬ ಸೂಚನೆಗಳನ್ನು ನಮಗೆ ಒದಗಿಸಲಾಗಿತ್ತು. ಕ್ರಮೇಣ ಇವೆಲ್ಲವೂ ಕೂಡ ನಮಗೆ ರೂಢಿಯಾಗಿಬಿಟ್ಟವೂ ಕೂಡ.

 

ಅಂಗೋಲಾದಲ್ಲಿ ತುರ್ತುಪರಿಸ್ಥಿತಿಯೇನೂ ಬಂದೊದಗಿರಲಿಲ್ಲ. ಅಂಗೋಲಾ ಬಹುಷಃ ಹಿಂದೆಂದಿಗಿಂತಲೂ ಶಾಂತವಾಗಿತ್ತು. ಆದರೆ ಈ ಸಲಹೆ-ಸೂಚನೆಗಳೆಲ್ಲಾ ನಮ್ಮಲ್ಲಿ ಇಂಥಾ ಭಾವನೆಯನ್ನು ಮೂಡಿಸಿದ್ದಂತೂ ಸತ್ಯ. ಅಂಗೋಲಾದ ಸ್ಥಳೀಯ ಅಧಿಕಾರಿಗಳು ನಮ್ಮನ್ನು ಇಲ್ಲಿಯ ಪರಿಸ್ಥಿತಿಗಳಿಗೆ ಸಜ್ಜುಗೊಳಿಸುತ್ತಿದ್ದರೇ ಹೊರತು ನಮ್ಮನ್ನು ಹೆದರಿಸಿ ಕೂಪಮಂಡೂಕಗಳಾಗಿಸುವ ಯಾವ ಇರಾದೆಯೂ ಅವರಲ್ಲಿರಲಿಲ್ಲ. ಹೀಗಾಗಿ ಇರುವ ಸಂಗತಿಯನ್ನು ಹಿಂಜರಿಕೆಯಿಲ್ಲದೆ ಹೇಳುವ ಅವರ ನಡೆಯು ಸರಿಯಾಗಿಯೇ ಇತ್ತು. ”ನೀವು ಈ ಹಿಂದೆ ಎಲ್ಲೆಲ್ಲಿ ಹೇಗೆಲ್ಲಾ ಇದ್ದಿರಿ ಎಂಬುದು ನನಗೆ ತಿಳಿದಿಲ್ಲ. ಆದರೆ ಆಫ್ರಿಕಾದ ಜಗತ್ತೇ ಭಿನ್ನ. ಇದು ಅಂಗೋಲಾದ ವಿಚಾರದಲ್ಲೂ ಸತ್ಯ. ಹಾಗೆಂದು ನೀವು ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆಯೇನೂ ಇಲ್ಲ. ನಿಮ್ಮ ಜಾಗ್ರತೆಯಲ್ಲಿ ನೀವಿರಬೇಕು ಅಷ್ಟೇ. ಮತ್ತೇನೇ ಆದರೂ ನಾವು ನಿಮ್ಮೊಂದಿಗಿದ್ದೇವೆ”, ಎಂದಿದ್ದ ಆತ. ನಮ್ಮ ಬಗೆಗಿದ್ದ ಅವರ ನಿಷ್ಕಲ್ಮಶ ಕಾಳಜಿಯನ್ನು ಕಂಡು ಅಚ್ಚರಿಗೊಂಡ ನಾನು ಅವರ ಕೈಕುಲುಕಿ ನನ್ನ ಧನ್ಯವಾದವನ್ನರ್ಪಿಸಿದ್ದೆ.

ಕ್ರಮೇಣ ಈ ಜಾಗೃತ ಸ್ಥಿತಿಯನ್ನು ಜೀವಂತವಾಗಿಟ್ಟುಕೊಂಡೇ ನಮ್ಮ ಜೀವನಶೈಲಿಗಳೂ ಕೂಡ ಕೊಂಚ ಬದಲಾಗುತ್ತಾ ಹೋದವು. ಉದಾಹರಣೆಗೆ ನಮ್ಮ ಮಜ್ದಾ ವಾಹನವನ್ನು ಮುಖ್ಯ ಮಾರುಕಟ್ಟೆಯ ಆವರಣದ ಹೊರಭಾಗದಲ್ಲಿ ನಿಲ್ಲಿಸಿ ವೀಜ್ ನ ಮಾರುಕಟ್ಟೆಗೆ ಹೋಗುತ್ತಿದ್ದ ನಾನು ನನ್ನ ಸ್ಮಾರ್ಟ್-ಫೋನ್ ಮತ್ತು ಪರ್ಸುಗಳನ್ನು ವಾಹನದಲ್ಲೇ ಇಟ್ಟು ಮಾರುಕಟ್ಟೆಯೊಳಕ್ಕೆ ಕಾಲಿಡುತ್ತಿದ್ದೆ. ಒಂದಿಷ್ಟು ತರಕಾರಿ ಮತ್ತು ಇತರೆ ವಸ್ತುಗಳನ್ನು ಖರೀದಿಸುವಷ್ಟು ನಗದು ಮಾತ್ರ ಆ ಕ್ಷಣದಲ್ಲಿ ನನ್ನ ಜೊತೆಯಲ್ಲಿರುತ್ತಿತ್ತು. ಹೀಗೆ ಜೇಬುಗಳ್ಳನೊಬ್ಬ ಬಳಿಬಂದು ನನ್ನ ಜೇಬಿಗೆ ಕತ್ತರಿ ಹಾಕಿದರೂ ನನ್ನ ಜೇಬಿನಲ್ಲಿದ್ದ ಜುಜುಬಿ ಕ್ವಾಂಝಾ (ಅಂಗೋಲಾದ ಕರೆನ್ಸಿ) ಗಳನ್ನು ಕಂಡು ನಂತರ ಮರುಗಿ, ಸ್ವತಃ ಮರಳಿ ಬಂದು ನನಗೆ ಹಿಂದಿರುಗಿಸುತ್ತಿದ್ದನೋ ಏನೋ!

ಅಂಗೋಲಾದ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲೂ ಎಲ್ಲಿಂದಲೋ ಏಕಾಏಕಿ ನುಗ್ಗಿಬಂದು, ಏನನ್ನೋ ಎಗರಿಸಿ, ನುಣುಚಿಕೊಂಡು ಮರೆಯಾಗುವ ಕೆಲ ಭೂಪರನ್ನು ನಾನು ಕಂಡಿದ್ದೇನೆ. ಲುವಾಂಡಾದಲ್ಲಿ ನಾನು ಕಂಡ ಘಟನೆಯೊಂದರಲ್ಲಂತೂ ಓಡುವ ಭರದಲ್ಲಿ ತರುಣನೊಬ್ಬ ಸ್ವಲ್ಪದರಲ್ಲೇ ವಾಹನವೊಂದರ ಚಕ್ರದಡಿ ಬಂದು ಬೀಳುವುದನ್ನು ತಪ್ಪಿಸಿಕೊಂಡಿದ್ದ. ಚಾಲಕನ ವೇಗದಲ್ಲಿ ಅಂದು ಒಂದು ಪ್ರತಿಶತದಷ್ಟು ಹೆಚ್ಚಿದ್ದರೂ ಅಂದು ಅವನ ಹೆಣ ಬೀಳುವುದು ಖಚಿತವಾಗಿತ್ತು. ಇನ್ನು ಕದ್ದು ಸಿಕ್ಕಿ ಹಾಕಿಕೊಂಡಿರುವವರನ್ನು ಸ್ಥಳೀಯರು ಚಚ್ಚುವ ಮತ್ತು ಅವಕಾಶ ಸಿಕ್ಕರೆ ಸಜೀವ ದಹನವನ್ನು ಮಾಡುವ ಬಗ್ಗೆ ತಿಳಿದಿದ್ದರೂ ಇಂಥಾ ದುಸ್ಸಾಹಸಗಳಿಗೆ ಕೈಹಾಕುವವರನ್ನು ಕಂಡರೆ ಒಮ್ಮೆ ದಿಗಿಲಾಗುವುದಂತೂ ಸತ್ಯ.

ಅಂಗೋಲಾದಲ್ಲೊಂದು ವಿಚಿತ್ರ ಆದರೆ ಕೊಂಚ ತಮಾಷೆಯ ಒಂದು ಯೋಚನಾಲಹರಿಯಿದೆ. ಇಲ್ಲಿ ಡೊಳ್ಳುಹೊಟ್ಟೆಯವರನ್ನು ಶ್ರೀಮಂತರು ಎಂದು ಭಾವಿಸಲಾಗುತ್ತದೆ. ಭಾರತದಲ್ಲಿ ಸಣಕಲನಾಗಿದ್ದ ನಾನು ಅಂಗೋಲಾಕ್ಕೆ ಬಂದು ಕೊಂಚ ದಪ್ಪಗಾಗಿದ್ದೆ. ಅಷ್ಟಕ್ಕೂ ಆಗಿದ್ದೇನೆಂದರೆ ನಮ್ಮ ಅಂಗೋಲನ್ ಅಡುಗೆಯಾಕೆ ಅಡುಗೆ ಎಣ್ಣೆಯನ್ನು ಸುರಿದು ಸುರಿದು ನನ್ನ ಕೊಲೆಸ್ಟೊರಾಲ್ ಮಟ್ಟವನ್ನು ಹೆಚ್ಚಿಸುವಲ್ಲಿ ತನ್ನ ನೇರ ಪಾತ್ರವನ್ನು ವಹಿಸಿದ್ದಳು. ”ನೀವು ಹೀಗೆ ನೀರಿನಂತೆ ಎಣ್ಣೆಯನ್ನು ಖರ್ಚು ಮಾಡುತ್ತಾ ಹೋದರೆ ನಾವಿಲ್ಲಿ ನಮ್ಮ ಕೆಲಸವನ್ನೆಲ್ಲಾ ಬದಿಗಿಟ್ಟು ಎಣ್ಣೆಯ ಬಾವಿ ಕೊರೆಯಬೇಕಾದೀತು”, ಎಂದು ನಾವು ನಗೆಯಾಡಿದ್ದೆವು. ಒಂದು ಲೀಟರ್ ಎಣ್ಣೆಯ ಬಾಟಲಿ ಐದೇ ಐದು ದಿನ ಬರುತ್ತಿದ್ದ ಒಗಟೂ ಕೂಡ ಅಂದು ನಮಗೆ ತೆರೆದುಕೊಂಡಿತ್ತು. ಇರಲಿ. ಒಟ್ಟಾರೆಯಾಗಿ ಈ ಅಡುಗೆಯ ಹೆಂಗಸು ನನ್ನನ್ನು ಏಕಾಏಕಿ ದಪ್ಪಗಾಗಿಸಿದ್ದಂತೂ ಹೌದು. ಮೇಲಾಗಿ ದೈಹಿಕ ಚಟುವಟಿಕೆಗಳೂ ಕೂಡ ಹಟಾತ್ತನೆ ಕಮ್ಮಿಯಾದ ಪರಿಣಾಮವಾಗಿ ನಾನು ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಅಡಿಕೆಮರದಂತೆ ಎತ್ತರಕ್ಕೆ ಬೆಳೆಯುವ ಬದಲು ಗುಂಡಗಾಗತೊಡಗಿದ್ದೆ. ಒಂದಿಷ್ಟು ಕೊಬ್ಬು ಹೊಟ್ಟೆಯ ಮೇಲೆ ಕುಳಿತು ನನ್ನನ್ನು ಕಿಚಾಯಿಸುತ್ತಿತ್ತು.

”ಏನು ದಪ್ಪಗಾಗುತ್ತಲೇ ಇದ್ದೀರಿ? ಕೈಯಲ್ಲಿ ಒಳ್ಳೇ ಕಾಸು ಹರಿದಾಡುತ್ತಿದೆ ಅಲ್ಲವೇ?”, ಎಂಬ ಪ್ರಶ್ನೆಯನ್ನು ಕ್ರಮೇಣ ಎಲ್ಲರಿಂದಲೂ ಕೇಳುವುದು ಸಾಮಾನ್ಯವಾಗಿ ಹೋಗಿತ್ತು. ”ನಿಮ್ಮೆಲ್ಲರ ದೃಷ್ಟಿಯಾದರೂ ಆಗಿ ಸ್ವಲ್ಪ ತೂಕ ಕಳೆದುಕೊಳ್ಳುವಂತಾಗಲಿ”, ಎಂದು ನಗುತ್ತಾ ಅನ್ನುತ್ತಿದ್ದ ನಾನು ಈ ತೂಕದ ಪಾಪವನ್ನು ಅಂಗೋಲಾದ ಜನಪ್ರಿಯ ಬಿಯರ್ ಆದ ‘ಕೂಕಾ’ದ ತಲೆಯ ಮೇಲೆ ಹಾಕಿದ್ದೆ. ”ಲೀಟರುಗಟ್ಟಲೆ ನಿಮ್ಮ ಕೂಕಾ ಕುಡಿದೇ ನಾನು ಹೀಗಾಗಿದ್ದು”, ಎಂಬ ಮಹಾಬುದ್ಧಿವಂತ ವಾದವು ಮಾತ್ರವೇ ಈ ಸ್ಥಳೀಯರ ಬಾಯಿಗಳನ್ನು ಮುಚ್ಚಿಸಲು ನನಗೆ ನೆರವಾಗುತ್ತಿದ್ದಿದ್ದು.

ವೀಜ್ ನಲ್ಲಿ ನನ್ನ ದಿನಗಳು ಹೀಗೆ ಸಾಗುತ್ತಿದ್ದರೆ ಬಹಳಷ್ಟು ಮಂದಿ ಸ್ಥಳೀಯರು ಮಾತುಮಾತಿಗೂ ಬಂದು ಹಣ ಕೇಳುವ, ಸಹಾಯ ಕೇಳುವ ವಿಚಿತ್ರ ಘಟನೆಗಳು ನಡೆಯುತ್ತಿದ್ದವು. ಇನ್ನು ಪದೇ ಪದೇ ಭೇಟಿಕೊಡುತ್ತಿದ್ದ ನಗರದ ಕೆಲ ಭಾಗಗಳಲ್ಲಿ, ಅದರಲ್ಲೂ ಮುಖ್ಯವಾಗಿ ಮಾರುಕಟ್ಟೆಯ ಮೂಲೆಯೊಂದರಲ್ಲಿ ನಡೆಯುತ್ತಿದ್ದ ಡಾಲರ್ ವಿನಿಮಯ ವಿಭಾಗದಲ್ಲಿ ಕೆಲವರು ನನ್ನ ಬಗ್ಗೆ ಕೇಳುತ್ತಿದ್ದರು ಎಂಬ ಮಾಹಿತಿಯನ್ನು ಅಲ್ಲಿಯ ನೌಕರನೊಬ್ಬ ನನ್ನ ದುಭಾಷಿಗೆ ಕೊಟ್ಟಿದ್ದ. ಬಹುತೇಕ ಎಲ್ಲರೊಂದಿಗೂ ಸಂಭಾಷಣೆಯಲ್ಲಿ ತೊಡಗುತ್ತಿದ್ದ ನನ್ನ ನಡೆಗಳು ಬಹುಷಃ ಕೆಲವರ ಗಮನವನ್ನು ಸೆಳೆದಿದ್ದವು. ನಂತರ ಈ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಾಗ ಕೆಲ ಧೂರ್ತರು ಬಹುತೇಕ ಎಲ್ಲಾ ವಿದೇಶೀಯರ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿರುತ್ತಾರೆ ಎಂದು ತಿಳಿದುಬಂದಿತು.

ಈ ಮಧ್ಯೆ ಇಬ್ಬರು ಆಗಂತುಕರು ಮುಂಜಾನೆ ಸುಮಾರು ಮೂರರ ಜಾವದಲ್ಲಿ ನಾವು ನೆಲೆಸಿರುವ ವಸತಿ ಸಂಕೀರ್ಣದೊಳಕ್ಕೆ ನುಗ್ಗಿ ಹಲವು ಲೀಟರ್ ಪೆಟ್ರೋಲ್ ಅನ್ನು ಕದ್ದೊಯ್ದಿದ್ದರು. ಭಾರದ ರೈಫಲ್ ಹಿಡಿದುಕೊಂಡಿದ್ದರೂ ಕುಂಭಕರ್ಣನಂತೆ ಮಲಗಿದ್ದ ಭದ್ರತಾ ಸಿಬ್ಬಂದಿಯ ಕರ್ತವ್ಯಲೋಪದಿಂದಾಗಿ ಅಂದು ಒಂದಿಬ್ಬರು ಕಳ್ಳರಿಗೆ ಒಳ್ಳೆಯ ಲಾಭವಾಗಿತ್ತು. ಮುಂದೆ ಇದರಿಂದಾಗಿ ಆ ಭದ್ರತಾ ಸಿಬ್ಬಂದಿಯ ಉದ್ಯೋಗವೂ ಕೈತಪ್ಪಿಹೋಯಿತು ಎಂಬುದು ಸತ್ಯ. ಹೀಗೆ ಬೆರಳೆಣಿಕೆಯ ವಿದೇಶೀಯರಿರುವ ವೀಜ್ ಮತ್ತು ಇತರ ಹಳ್ಳಿಗಳಲ್ಲಿ ಸ್ಥಳೀಯರಿಗಿಂತ ಒಂದಿಷ್ಟು ಪಟ್ಟು ಉತ್ತಮ ಜೀವನಮಟ್ಟವನ್ನು ಹೊಂದಿರುವ, (ಸ್ಥಳೀಯ ದೃಷ್ಟಿಕೋನದ ಪ್ರಕಾರ) ವಿಲಾಸಿ ಜೀವನವನ್ನು ಬಾಳುತ್ತಿರುವ ವಿದೇಶೀಯರ ಕಡೆಗೆ ಕೆಲವರ ಕಣ್ಣುಗಳು ಹೋಗುವುದು ಸಹಜವೇ. ಈ ಕಾರಣಗಳಿಂದಾಗಿ ನಮ್ಮ ಡಾಲರ್-ಕ್ವಾಂಝಾ ವಿನಿಮಯದ ವಹಿವಾಟುಗಳನ್ನು ಮುಂದೆ ಅಲ್ಲಿಂದ ಸ್ಥಳಾಂತರಿಸಿ ಕೊಂಚ ವಾಸಿ ಎನ್ನುವಂತಹ ಜಾಗಕ್ಕೆ ಬದಲಾಯಿಸಿಕೊಂಡಿದ್ದೆವು.

ಹಾಗೆಂದು ನಾವು ಕೋಟಿಗಟ್ಟಲೆ ವ್ಯಾಪಾರವನ್ನೇನೂ ಮಾಡುತ್ತಿರಲಿಲ್ಲ. ಐವತ್ತು, ಹೆಚ್ಚೆಂದರೆ ನೂರು ಡಾಲರ್ ಅನ್ನು ಬಿಟ್ಟು ಅದಕ್ಕಿಂತ ಹೆಚ್ಚು ನಗದನ್ನು ಸ್ಥಳೀಯ ಕರೆನ್ಸಿಯಾದ ಕ್ವಾಂಝಾಕ್ಕೆ ಬದಲಿಸಿಕೊಂಡವನೇ ನಾನಲ್ಲ. ಸಾಮಾನ್ಯವಾಗಿ ನೂರರಿಂದ ನೂರೈವತ್ತು ಡಾಲರುಗಳ ಮಿತಿಯಲ್ಲಿ ನನ್ನಿಡೀ ತಿಂಗಳ ಖರ್ಚು ಸರಿದೂಗುತ್ತಿತ್ತು. ಅದಕ್ಕೂ ಮೇಲಾಗಿ ಭಾರತದಿಂದ ನಾನು ಹಿಡಿದುಕೊಂಡು ಬಂದಿದ್ದೇ 1500 ಡಾಲರುಗಳ ಅಲ್ಪಮೊತ್ತ. ಆದರೆ ಇವೆಲ್ಲಾ ಹೊರಗಿನವರಿಗೆ ಗೊತ್ತಿರಬೇಕೆಂದಿಲ್ಲವಲ್ಲ? ”ಅಲ್ರೀ… ನನ್ನ ಐವತ್ತು ಡಾಲರ್ ಹಿಡಿದುಕೊಂಡು ಯಾವನಾದರೂ ಯಾವ ಅರಮನೆ ತಾನೇ ಕಟ್ಟಿಸಬಲ್ಲ?”, ಎಂದು ಒಬ್ಬರಲ್ಲಿ ನಾನು ಕೇಳಿದ್ದೆ. ”ಅರಮನೆ ಅಂತಲ್ಲ. ಆದರೆ ನಾಲ್ಕೈದು ದಿನ ಯಾವ ಚಿಂತೆಯೂ ಇಲ್ಲದೆ ಆತ ‘ಕೂಕ’ ಕುಡಿಯಬಹುದಲ್ವಾ? ಅದಕ್ಕೆ ಇನ್ನೊಂದಿಷ್ಟು ಹಣ ಸೇರಿಸಿ ತನ್ನ ಪ್ರೇಯಸಿಯ ಜೊತೆ ಪೋರ್ಚುಗಲ್ಲಿಗೋ, ಪ್ಯಾರಿಸ್ಸಿಗೋ ಹೋಗಬಹುದಲ್ವಾ?”, ಎಂಬ ಉತ್ತರವು ನನಗೆ ಬಂದಿತ್ತು. ಒಂದು ರೀತಿಯಲ್ಲಿ ಇದು ಸತ್ಯವೂ ಹೌದು. ”Quick Money”ಯ ಹಿಂದೆ ಹೋದವರಿಗೆ ಇಂಥದ್ದೇ ಉದ್ದೇಶಗಳೇನೂ ಇರುವುದಿಲ್ಲ. ಹಾಗೇನಾದರೂ ಇದ್ದರೂ ಅದು ಅಲ್ಲಿಗೇ ಮುಗಿಯುವ ಕಥೆಯೂ ಅಲ್ಲ. ಯಾರದ್ದೋ ತಲೆ ಒಡೆದು ಸಂಪಾದಿಸಿದ ಕಾಸಿಗೆ ಅಂಥಾ ಮೌಲ್ಯವೂ ಇರುವುದಿಲ್ಲ ನೋಡಿ. ಅದೇನಿದ್ದರೂ ಅಡ್ಡ ಖರ್ಚುಗಳಿಗೇ ಮೀಸಲು.

ಹಾಗೆಂದು ವಿದೇಶೀಯರಷ್ಟೇ ಅಪರಾಧಗಳಿಗೆ ಬಲಿಯಾಗುವವರಲ್ಲ. ಇತರರಿಗೆ ಹೋಲಿಸಿದರೆ ವಿದೇಶೀಯರು ಸುಲಭವಾಗಿ ಬಲಿಬೀಳುವ ಮಿಕಗಳಷ್ಟೇ. ಸ್ಥಳೀಯರೂ ಕೂಡ ಒಂದು ವಿಚಿತ್ರ ಭಯದಲ್ಲೇ ದಿನ ತಳ್ಳುತ್ತಿರುತ್ತಾರೆ. ಕೊಂಚ ಅಪಾಯಕಾರಿ ಎನ್ನಿಸಿದ ಜಾಗಗಳಿಗೆ ಕುಡುಕ ಮತ್ತು ಲಂಪಟರನ್ನು ಬಿಟ್ಟು ಸಾಮಾನ್ಯವಾಗಿ ಯಾರೂ ಕಾಲಿಡುವುದಿಲ್ಲ. ನನ್ನ ಏಷ್ಯನ್ ಕೇಶವನ್ನು ಮರೆಮಾಚಲು ಲೆಕ್ಕವಿಲ್ಲದಷ್ಟು ಬಾರಿ ನಾನು ಟೋಪಿಯನ್ನು ಧರಿಸಿ ಜನನಿಬಿಡ ಮಾರುಕಟ್ಟೆಗಳಲ್ಲಿ ಓಡಾಡಿದ ದೃಷ್ಟಾಂತಗಳೂ ಇವೆ. ಅದೂ ಕೂಡ ಹಾಡಹಗಲಿನಲ್ಲಿ! ಕೆಲ ಅಪಾಯಕಾರಿ ಸ್ಥಳಗಳಿಗೆ ಹೋಗಲೇಬೇಕಾಗಿ ಬಂದಾಗ ಎಲ್ಲರೊಳಗೊಂದಾಗಲು ಮಾಡಿದ್ದ ಕ್ಷೀಣಪ್ರಯತ್ನಗಳವು. ಅವರಿವರ್ಯಾಕೆ? ನನ್ನ ದುಭಾಷಿಯ ಗುಬ್ಬಿ ಗೂಡಿನಂಥಾ ಮನೆಯಲ್ಲೇ ಎರಡು ಬಾರಿ ಸುಲಿಗೆಯಾಗಿತ್ತು. ಒಮ್ಮೆ ಯಾರೋ ಬಂದು ಮನೆಯ ಹೊರಭಾಗದಲ್ಲಿರಿಸಿದ್ದ ಆತನ ಮೋಟಾರ್ ಬೈಕನ್ನು ಎತ್ತಿಕೊಂಡು ಹೋದರೆ ಮತ್ತೊಮ್ಮೆ ಇಬ್ಬರು ಬಂದೂಕುಧಾರಿಗಳು ಉಟ್ಟ ಬಟ್ಟೆಯನ್ನೂ ಬಿಡದೆ ಇದ್ದದ್ದೆಲ್ಲವನ್ನೂ ದೋಚಿಕೊಂಡು ಹೋಗಿದ್ದರು. ನಂತರ ನಮ್ಮ ಕೆಲ ಸಹೋದ್ಯೋಗಿಗಳು ಬಂದು ಆತನಿಗೆ ಹೊಸ ಬಟ್ಟೆಗಳನ್ನು ಖರೀದಿಸಿ ಕೊಡಬೇಕಾಗಿ ಬಂದಿತ್ತು.

ಹೀಗೆ ವೀಜ್, ಲುವಾಂಡಾಗಳನ್ನು ಸೇರಿದಂತೆ ಅಂಗೋಲಾದ ಬಹುತೇಕ ಸ್ಥಳಗಳಲ್ಲಿ ನಡೆಯುವ ಅಪರಾಧ ಪ್ರಕರಣಗಳ ಸಂಖ್ಯೆಯು ಕಮ್ಮಿಯೇನಿಲ್ಲ. ಇನ್ನು ಹಳ್ಳಿಗಳಲ್ಲಿ ನಡೆಯುವ ಹಲವಾರು ಪ್ರಕರಣಗಳು ಪೋಲೀಸ್ ಠಾಣೆಗಳನ್ನೂ ಕೂಡ ತಲುಪುವುದಿಲ್ಲ. ಏಕೆಂದರೆ ಅಪರಾಧ ನಿಯಂತ್ರಣಗಳ ವಿಚಾರದಲ್ಲಿ ಪೋಲೀಸರ ನಿಷ್ಕ್ರಿಯತೆ ಮತ್ತು ಲಂಚಕೋರತನಗಳು ಜನಸಾಮಾನ್ಯರನ್ನು ಕಂಗೆಡಿಸಿವೆ. ಈಗಾಗಲೇ ಸಾಕಷ್ಟು ನಷ್ಟ ಮಾಡಿಕೊಂಡಿರುವ ವ್ಯಕ್ತಿ ಮತ್ತೆ ಪೋಲೀಸರ ಕೈಗೆ ಸಿಕ್ಕಿ ದೋಚಲ್ಪಡುವ ಮೂರ್ಖತನಕ್ಕಿಳಿಯಲಾರ. ಹೀಗಾಗಿ ನಾನು ಪಡೆದುಕೊಂಡು ಬಂದಿದ್ದೇ ಇಷ್ಟು ಎಂದು ಆತ ತೆಪ್ಪಗಾಗಿಬಿಡುತ್ತಾನೆ.

ಅಷ್ಟರಮಟ್ಟಿಗೆ ಅಪರಾಧ ಲೋಕದಲ್ಲಿ ಹೊಸದಾಗಿ ಕಾಲಿಡುತ್ತಿರುವ ಅಂಗೋಲನ್ ಯುವಕನೊಬ್ಬನಿಗೆ ಇದರಿಂದಾಗಿ ಮತ್ತಷ್ಟು ಇಂಬು ಕೊಟ್ಟಂತಾಗಿರುತ್ತದೆ.ಅಂಗೋಲನ್ನರ ಸ್ನೇಹಪರತೆಯು ಯಾರನ್ನಾದರೂ ಕೂಡ ಆಕರ್ಷಿಸುವಂಥದ್ದು. ಆದರೆ ಹಾಗೆಂದು ಮೈಮರೆತುಬಿಟ್ಟಿರೋ ಹಳ್ಳಕ್ಕೆ ಬೀಳುವ ಸಾಧ್ಯತೆಗಳು ಹೆಚ್ಚು. ”ತೀರಾ ಪುಕ್ಕಲರಾಗಬೇಡಿ. ಆದರೆ ಜಾಗೃತ ಸ್ಥಿತಿಯಲ್ಲಂತೂ ಖಂಡಿತ ಇರಿ”, ಎಂಬುದೇ ಇಲ್ಲಿ ನೆಲೆಸಿರುವ ಬಹುತೇಕ ಎಲ್ಲರ ಬೀಜಮಂತ್ರ.

Author: Avadhi GK

Leave a Reply