”ಅಂಗೋಲಾವೆಂಬ ಬೂದಿ ಮುಚ್ಚಿದ ಕೆಂಡ”

ಅಂಗೋಲಾಕ್ಕೆ ಆಗಮಿಸುವ ಮುನ್ನ ಕೇವಲ ಓದಿಯಷ್ಟೇ ಒಂದಿಷ್ಟು ತಿಳಿದಿದ್ದ ಮುಂಜಾಗರೂಕತಾ ಕ್ರಮಗಳನ್ನು ನಾನೀಗ ಚಾಚೂತಪ್ಪದೆ ಪಾಲಿಸುತ್ತಿದ್ದೆ.

ಏಕೆಂದರೆ ಪರಿಸ್ಥಿತಿಗಳು ಬದಲಾಗಿದ್ದವು. ನನ್ನ ಮಟ್ಟಿಗೆ ಅಂಗೋಲಾ ಎನ್ನುವುದೊಂದು ಪ್ರವಾಸ ತಾಣವಾಗಿರದೆ ಕರ್ಮಭೂಮಿಯಾಗಿತ್ತು. ಒಂದು ಕಾಲದಲ್ಲಿ ಉತ್ಪ್ರೇಕ್ಷಿತ ಅನ್ನಿಸುವಂತಿದ್ದ ಸುರಕ್ಷಾ ಸಂಬಂಧಿ ಮಾಹಿತಿಗಳು, ಸಲಹೆ-ಸೂಚನೆಗಳು ಈಗ ನಿತ್ಯದ ದಿನಚರಿಯೆಂಬಂತೆ ಬದಲಾಗಿತ್ತು. ಎಲ್ಲದಕ್ಕಿಂತಲೂ ಮೇಲಾಗಿ ನಾನು ಇವುಗಳೆಲ್ಲವನ್ನೂ ಬಲು ಉತ್ಸಾಹದಿಂದಲೇ ಅಪ್ಪಿಕೊಂಡಿದ್ದೆ. ಅಂತೂ ‘ಆಜ್ ಕುಛ್ ತೂಫಾನಿ ಕರ್ತೇ ಹೇಂ’ ಅನ್ನೋ ಮಾದರಿಯಲ್ಲಿ ನನ್ನ ವೀಜ್ ದಿನಗಳು ಕಳೆದುಹೋಗುತ್ತಿದ್ದವು ಎಂಬುದಂತೂ ಸತ್ಯ.

ಅಂಗೋಲಾದಲ್ಲಿ ದಿನಕಳೆದಂತೆ ಹೆಚ್ಚಾಗುತ್ತಿರುವ ಅಪರಾಧಗಳಿಗೂ ಕೂಡ ಅದರದ್ದೇ ಆದ ಹಿನ್ನೆಲೆಯಿದೆ. ಆದರೆ ಇವುಗಳು ಈಗ ಹಿನ್ನೆಲೆಗಷ್ಟೇ ಸೀಮಿತವಾಗಿರದೆ ತನ್ನ ಕಬಂಧಬಾಹುಗಳನ್ನು ಮೆಲ್ಲಗೆ ದೇಶದಾದ್ಯಂತ ವಿಸ್ತರಿಸಿ ಅಭಿವೃದ್ಧಿಯ ಪಥದಿಂದ ಮತ್ತಷ್ಟು ದೂರ ಕೊಂಡೊಯ್ಯುವಷ್ಟು ಭಯಾನಕವಾಗಿ ಕಾಣುತ್ತಿವೆ. 1975 ರಲ್ಲಿ ಅಂಗೋಲಾ ಪೋರ್ಚುಗೀಸರ ಹಿಡಿತದಿಂದ ಮುಕ್ತವಾಗಿ ಸ್ವತಂತ್ರ ಗಣರಾಜ್ಯವಾದಾಗ ಅಂಗೋಲಾದ ಪ್ರಥಮ ರಾಷ್ಟ್ರಪತಿಯಾಗಿ ದೇಶವನ್ನು ಮುನ್ನಡೆಸಿದವರು ದಿವಂಗತ ಆಗಸ್ಟಿನೋ ನೇಟೋ. ಮುಂದೆ 1979 ರಲ್ಲಿ ನೇಟೋರ ನಿಧನದ ನಂತರ ದೇಶದ ಪ್ರಥಮ ಪ್ರಜೆಯಾಗಿ ಜೋಸ್ ಈಕ್ವರ್ಡೋಸ್ ದುಸ್ ಸಾಂತುಸ್ ಉತ್ತರಾಧಿಕಾರಿಯಾಗುತ್ತಾರೆ. ಹೀಗೆ 1979 ರಲ್ಲಿ ನೇಟೋರ ಉತ್ತರಾಧಿಕಾರಿಯಾಗಿ ಬಂದ ಜೋಸ್ ಸಾಂತುಸ್ ತಮ್ಮ ಸಿಂಹಾಸನದಿಂದ ಕೆಳಗಿಳಿದಿದ್ದು 2017 ರಲ್ಲೇ. ಅಂದರೆ ಜೋಸ್ ಸಾಂತುಸ್ ಬರೋಬ್ಬರಿ ಮೂವತ್ತೆಂಟು ವರ್ಷಗಳ ಕಾಲ ಅಂಗೋಲಾದ ರಾಷ್ಟ್ರಪತಿಯಾಗಿ ಅಧಿಕಾರದ ಗದ್ದುಗೆಯಲ್ಲಿ ಭದ್ರವಾಗಿ ಕುಳಿತಿದ್ದರು.

ಈ ನಡುವೆ ಅಂಗೋಲಾದ ನೆಲದಲ್ಲಿ ಬಹಳಷ್ಟು ಬೆಳವಣಿಗೆಗಳೂ ಕೂಡ ಆದವು ಅನ್ನಿ. 1975 ರಿಂದ 2002 ರ ನಡುವೆ ನಡೆದ ಆಂತರಿಕ ಯುದ್ಧದಲ್ಲಿ ಇಡೀ ದೇಶವೇ ನಲುಗಿಹೋಯಿತು. ದೇಶದಾದ್ಯಂತ ನಡೆದ ಭೀಕರ ಹಿಂಸಾಚಾರ, ಗಲಭೆಗಳಲ್ಲಿ ಲಕ್ಷಗಟ್ಟಲೆ ಜನರು ದಾರುಣವಾಗಿ ಸತ್ತರೆ ಅದೆಷ್ಟೋ ಜನ ತಮ್ಮ ಪ್ರೀತಿಪಾತ್ರರನ್ನು ಯುದ್ಧ, ಹಸಿವು, ಖಾಯಿಲೆ ಇತ್ಯಾದಿ ಕಾರಣಗಳಿಂದಾಗಿ ಕಳೆದುಕೊಂಡರು.

ಲೆಕ್ಕವಿಲ್ಲದಷ್ಟು ನೆಲಬಾಂಬುಗಳು ಅದೆಷ್ಟೋ ಜನರನ್ನು ಶಾಶ್ವತ ಅಂಗವಿಕಲರನ್ನಾಗಿಸಿದವು (ದಕ್ಷಿಣ ಅಂಗೋಲಾದ ಹಲವು ಪ್ರದೇಶಗಳಲ್ಲಿ ಇಂದಿಗೂ ಜೀವಂತ ನೆಲಬಾಂಬುಗಳಿವೆ. ಅವುಗಳನ್ನು ನಿಷ್ಕ್ರಿಯಗೊಳಿಸುವ ಕೆಲಸಗಳು ಇಂದಿಗೂ ನಡೆಯುತ್ತಿವೆ). ಆಂತರಿಕ ಯುದ್ಧದ ಸಮಯದಲ್ಲಿ ಅಂಗೋಲಾದ ವಾರ್ಷಿಕ ಆಯವ್ಯಯದ ಬಹಳಷ್ಟು ಪಾಲು ಸೋರಿಹೋಗಿದ್ದು ಶಸ್ತ್ರಾಸ್ತ್ರಗಳ ಖರೀದಿಯಲ್ಲಿ. ಹೀಗೆ ಆಂತರಿಕ ಯುದ್ಧವು ಒಂದು ರೀತಿಯಲ್ಲಿ ಇಡೀ ದೇಶವನ್ನೇ ಬರೋಬ್ಬರಿ ನೂರು ವರ್ಷಗಳ ಕಾಲ ಹಿಂದಕ್ಕೆ ತಳ್ಳಿಬಿಟ್ಟಿತು.

ಪೋರ್ಚುಗೀಸರ ಕಾಲದಲ್ಲಿದ್ದ ಹಲವು ಸರಕಾರಿ ಕಟ್ಟಡಗಳು ನೆಲಸಮವಾದವು. ಶಾಲೆಗಳು, ಆಸ್ಪತ್ರೆಗಳನ್ನೂ ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಪೋಷಿಸುತ್ತಿದ್ದ ಅದೆಷ್ಟೋ ಮೂಲಸೌಕರ್ಯಗಳು ಅಕ್ಷರಶಃ ನಾಶವಾದವು. ಒಂದು ಕಾಲದಲ್ಲಿ ಕಾಫಿಯನ್ನು ರಫ್ತು ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದ ಅಂಗೋಲಾ ಕ್ರಮೇಣ ತೆರೆಮರೆಗೆ ಸರಿದುಹೋಯಿತು.

ಒಟ್ಟಾರೆಯಾಗಿ ದೇಶದ ಆರ್ಥಿಕತೆಯು ಹಳ್ಳಹಿಡಿದುಹೋಯಿತು. ಆಂತರಿಕ ಯುದ್ಧದ ನಂತರವೂ ಕೂಡ ಅಂಗೋಲಾ ಹೇಳಿಕೊಳ್ಳುವಂತಹ ಅಭಿವೃದ್ಧಿಯನ್ನೇನೂ ಸಾಧಿಸಲಿಲ್ಲ. ದೇಶದ ಸಂಪತ್ತಿನ ಪ್ರಮುಖ ಮೂಲಗಳಾದ ತೈಲ, ವಜ್ರ ಇತ್ಯಾದಿಗಳ ಮೇಲೆಯೇ ಆರ್ಥಿಕತೆಯು ಅವಲಂಬಿತವಾಗಿತ್ತು. ರಾಜಧಾನಿಯಾದ ಲುವಾಂಡಾ ಸೇರಿದಂತೆ ನಾಲ್ಕೈದು ಶಹರಗಳನ್ನು ಬಿಟ್ಟರೆ ಬೇರ್ಯಾವ ಪ್ರದೇಶಗಳಿಗೂ ಕೂಡ ಅಭಿವೃದ್ಧಿಯು ನಸೀಬಾಗಲಿಲ್ಲ.

ತಮ್ಮ ಮೂವತ್ತೆಂಟು ವರ್ಷಗಳ ಅಧಿಕಾರಾವಧಿಯಲ್ಲಿ ಜೋಸ್ ಸಾಂತುಸ್ ತಮ್ಮ ಓರಗೆಯವರನ್ನೆಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಕೂರಿಸಿಬಿಟ್ಟಿದ್ದರು. ಬ್ಯಾಂಕಿಂಗ್, ತೈಲೋದ್ಯಮ, ಮಾಧ್ಯಮ, ಟೆಲಿಕಾಂ, ಸೂಪರ್ ಮಾರ್ಕೆಟ್ ಇತ್ಯಾದಿಗಳೆಲ್ಲವೂ ರಾಷ್ಟ್ರಾಧ್ಯಕ್ಷರ ಕುಟುಂಬದ ಬಿಗಿಹಿಡಿತಕ್ಕೊಳಪಟ್ಟು ಹೊರಗಿನ ಎಲ್ಲಾ ವ್ಯಾಪಾರಿ ಶಕ್ತಿಗಳ ಪ್ರವೇಶಕ್ಕೆ ದ್ವಾರಗಳು ಶಾಶ್ವತವಾಗಿ ಮುಚ್ಚಿಹೋದವು. ದೇಶದ ಬೃಹತ್ ಉದ್ಯಮಗಳ ಸಿಂಹಪಾಲು ಶೇರುಗಳು ಸಾಂತುಸ್ ರ ಕುಟುಂಬದ ಸದಸ್ಯರ ಕೈಗಳಲ್ಲೇ ಉಳಿದುಬಿಟ್ಟವು. ದುರಾಡಳಿತ, ಮಿತಿಮೀರಿದ ಭ್ರಷ್ಟಾಚಾರವನ್ನೂ ಸೇರಿದಂತೆ ಹಲವು ವಿಷಯಗಳಲ್ಲಿ ಅಂಗೋಲಾಗೆ ಜಾಗತಿಕ ಮಟ್ಟದಲ್ಲಾದ ಮುಜುಗರಗಳು ಅಷ್ಟಿಷ್ಟಲ್ಲ. 2015 ರ ಡಿಸೆಂಬರ್ ನಲ್ಲಿ ಜೋಸ್ ಸಾಂತುಸ್ ರ ಕುಟುಂಬದ ಅಧೀನದಲ್ಲಿರುವ ಯೂನಿಟೆಲ್ ಸಂಸ್ಥೆಯು ಆಯೋಜಿಸಿದ್ದ ಕ್ರಿಸ್ಮಸ್ ಹಬ್ಬದ ಪ್ರಯುಕ್ತದ ಸಂಗೀತ ಸಂಜೆಯೊಂದರಲ್ಲಿ ಖ್ಯಾತ ರ್ಯಾಪ್ ಗಾಯಕಿ ನಿಕ್ಕಿ ಮಿನಾಝ್ ರನ್ನು ಆಹ್ವಾನಿಸಲಾಗಿತ್ತು.

ಈ ಸಂಗೀತ ಸಂಜೆಗಾಗಿ ನಿಕ್ಕಿಯವರಿಗೆ ಬರೋಬ್ಬರಿ 2 ಮಿಲಿಯನ್ ಡಾಲರ್ ಗಳ ಬೃಹತ್ ಮೊತ್ತವನ್ನು ಸಂಭಾವನೆಯಾಗಿ ಜೋಸ್ ಸಾಂತುಸ್ ನೀಡಿದ ಬಗ್ಗೆ ಜಗತ್ತಿನಾದ್ಯಂತ ಟೀಕೆಗಳು ವ್ಯಕ್ತವಾದವು. ಅಂದಹಾಗೆ ಜೋಸ್ ಸಾಂತುಸ್ ರ ಪುತ್ರಿಯಾದ ಇಸಾಬೆಲ್ ಸಾಂತುಸ್ ಆಫ್ರಿಕಾದ ಅತ್ಯಂತ ಶ್ರೀಮಂತ ಮಹಿಳೆಯೂ ಹೌದು. ಸಂಪತ್ತಿನ ಹಂಚಿಕೆಯೆಂಬುದು ಅಂಗೋಲಾದಲ್ಲಿ ಅದೆಷ್ಟು ಅಸಮವಾಗಿದೆಯೆಂದರೆ ಅಂಗೋಲಾದಲ್ಲಿ ಇಂದಿಗೂ ಮಧ್ಯಮವರ್ಗವನ್ನು ಕಾಣುವುದು ಕಷ್ಟ. ಇಲ್ಲಿರುವುದು ಒಂದೋ ವಿಲಾಸಿ ಜೀವನವನ್ನು ನಡೆಸುತ್ತಿರುವ, ಲುವಾಂಡಾದಂತಹ ನಗರಗಳಲ್ಲಿ ಬೀಡುಬಿಟ್ಟಿರುವ ಕೋಟ್ಯಾಧಿಪತಿಗಳು. ಇಲ್ಲವೇ ಬಡತನದಲ್ಲೇ ಹೇಗೋ ದಿನತಳ್ಳುತ್ತಿರುವವರು.

ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಷೇತ್ರಗಳಲ್ಲಿ ಅಂಗೋಲಾದ ಆಮೆಗತಿಯ ಅಭಿವೃದ್ಧಿಯು ಒಟ್ಟಾರೆಯಾಗಿ ದೇಶದ ಯುವಜನತೆಯ ಭವಿಷ್ಯದೊಂದಿಗೆ ಭಯಾನಕ ಆಟವನ್ನು ಆಡುತ್ತಿದೆ. ವೀಜ್ ಹಳ್ಳಿಯೊಂದನ್ನೇ ಗಮನಿಸಿದರೂ ಬಹಳಷ್ಟು ಮಂದಿ ನನ್ನ ಬಳಿ ಬಂದು ಏನಾದರೂ ಉದ್ಯೋಗಾವಕಾಶಗಳಿದ್ದರೆ ಹೇಳಿ ಎಂದು ಗೋಗರೆಯುತ್ತಿದ್ದ ದೃಷ್ಟಾಂತಗಳು ಸಾಕಷ್ಟಿವೆ. ಆರ್ಥಿಕ ಸಂಕಷ್ಟದಲ್ಲಿರುವ ಅಂಗೋಲಾದ ಬಹುಪಾಲು ಯುವಜನತೆಯು ಒಂದು ಕಡೆ ಉತ್ತಮ ಶಿಕ್ಷಣವನ್ನು ಪಡೆಯಲು ಇತರ ದೇಶಗಳತ್ತ ಹೋಗಲೂ ಆಗದೆ, ಇತ್ತ ಇಲ್ಲೂ ಉದ್ಧಾರವಾಗದೆ ತ್ರಿಶಂಕುಸ್ಥಿತಿಯಲ್ಲಿ ಒದ್ದಾಡುತ್ತಿದೆ.

ಈ ನೆಲವನ್ನು ಬಿಟ್ಟರೇನೇ ನನಗೊಂದು ಉತ್ತಮ ಭವಿಷ್ಯ ಸಿಗಬಹುದು ಎಂಬ ನಿರೀಕ್ಷೆ ಅವರದ್ದು. ದೇಶದ ಭವಿಷ್ಯವಾಗಬೇಕಾದ ಪೀಳಿಗೆಯೊಂದು ‘ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಂಡು ಹೋದರೆ ಸಾಕು’ ಎಂಬ ಭಾವನೆಗಳೊಂದಿಗೆ ಬದುಕುತ್ತಿದ್ದರೆ ವ್ಯವಸ್ಥೆಯು ಚಲಾಯಿಸುತ್ತಿರುವುದು ದೇಶವನ್ನಲ್ಲ, ಒಂದು ತೆರೆದ ಕಾರಾಗೃಹವನ್ನಷ್ಟೇ ಎಂದು ವಿಷಾದದಿಂದ ಹೇಳಲೇಬೇಕಾಗುತ್ತದೆ. ಬಹುಷಃ ಇದಕ್ಕಿಂತ ದುರಾದೃಷ್ಟಕರ ಸ್ಥಿತಿಯು ದೇಶವೊಂದಕ್ಕೆ ಇನ್ನೇನೂ ಇರಲಿಕ್ಕಿಲ್ಲ.

ಹೀಗೆ ಕುಸಿದ ಉದ್ಯೋವಕಾಶಗಳೊಂದಿಗೆ ಅಪರಾಧಗಳ ಪ್ರಮಾಣವೂ ಕೂಡ ಅಂಗೋಲಾದಲ್ಲಿ ಬೆಳೆಯುತ್ತಾ ಹೋಗಿದೆ. ಸ್ಥಳೀಯರು, ವಿದೇಶೀಯರೆಂಬ ಬೇಧವಿಲ್ಲದೆ ಎಲ್ಲರೂ ಕೂಡ ಸದಾ ಕಾಲ ಜಾಗೃತ ಸ್ಥಿತಿಯಲ್ಲೇ ಬದುಕಬೇಕಾದ ಪರಿಸ್ಥಿತಿಯು ಕಳೆದೊಂದು ದಶಕಗಳಿಂದ ಹೆಚ್ಚಾಗಿಬಿಟ್ಟಿದೆ. ಲುವಾಂಡಾದಂತಹ ಜನನಿಬಿಡ ಮಹಾನಗರಿಯೂ ಕೂಡ ಸೂರ್ಯಾಸ್ತದ ನಂತರ ಅಪಾಯಕಾರಿ ಜಾಗವಾಗಿ ಬದಲಾಗುತ್ತದೆ. ನನ್ನಂತಹ ವಿದೇಶೀಯರು ಹಾಡಹಗಲಿನಲ್ಲೂ ಮೈಯೆಲ್ಲಾ ಕಣ್ಣಾಗಿ ತಮ್ಮ ಚಿಕ್ಕಪುಟ್ಟ ವರ್ತನೆಗಳನ್ನೂ, ನಡೆಗಳನ್ನೂ ಲೆಕ್ಕಾಚಾರದ ಸಮೇತ ಇಡುತ್ತಾರೆ.

ಇನ್ನು ವಿದೇಶೀಯರು, ಶ್ರೀಮಂತರು, ರಾಜಕೀಯ ಧುರೀಣರು, ರಾಜತಾಂತ್ರಿಕರು… ಹೀಗೆ ಮೇಲ್ವರ್ಗದ ಜನರನ್ನೇ ಹೊಂದಿರುವ ರಾಜಧಾನಿಯಾದ ಲುವಾಂಡಾದಲ್ಲಿ ಬಿಡುಗಡೆಯ ಭಾರೀ ಮೊತ್ತಕ್ಕಾಗಿ ನಡೆಸಲಾಗುತ್ತಿರುವ ಅಪಹರಣ ಪ್ರಕರಣಗಳು ಹೆಚ್ಚಿವೆ ಎಂದು ದಾಖಲೆಗಳು ಹೇಳುತ್ತಿವೆ.

ಇತರ ದೇಶಗಳಲ್ಲಿರುವ ವಿದೇಶಾಂಗ ಮಂತ್ರಾಲಯಕ್ಕೆ ಸರಿಸಮನಾಗಿರುವ ಅಮೇರಿಕಾದ Department of States ನ ಅಧೀನದಲ್ಲಿರುವ OSAC (Overseas Security Advisory Council / OSAC) ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ಅಮೆರಿಕನ್ ನಾಗರಿಕರ ಭದ್ರತೆಗಾಗಿ ಮತ್ತು ತತ್ಸಂಬಂಧಿ ಸಂವಹನಕ್ಕಾಗಿ ಸ್ಥಾಪಿಸಲ್ಪಟ್ಟ ಮಂಡಳಿ. 2017 ರಲ್ಲಿ ‘ಅಂಗೋಲಾದ ಅಪರಾಧ ಮತ್ತು ಸುರಕ್ಷತೆಯ ವರದಿ’ಯನ್ನು ಬಿಡುಗಡೆಗೊಳಿಸಿರುವ OSAC ತನ್ನ ವರದಿಯಲ್ಲಿ ಹೀಗೆಂದು ಸ್ಪಷ್ಟವಾಗಿ ದಾಖಲಿಸಿದೆ:

”ಅಂಗೋಲಾ ಪೋಲೀಸ್ ಇಲಾಖೆಯ ಅಧಿಕೃತ ದಾಖಲೆಗಳ ಪ್ರಕಾರ ಅಪರಾಧ ಪ್ರಕರಣಗಳು 2016 ರಲ್ಲಿ ಏರಿಕೆಯಾಗಿದೆ. (ಅಮೆರಿಕನ್) ರಾಯಭಾರಿ ಕಛೇರಿಯು ಅಂಗೋಲಾದಲ್ಲಿ, ಅದರಲ್ಲೂ ರಾಜಧಾನಿಯಾದ ಲುವಾಂಡಾದಲ್ಲಿ ಬಿಡುಗಡೆಯ ಮೊತ್ತಕ್ಕಾಗಿ ಮಾಡಲಾಗುವ ಅಪಹರಣ ಪ್ರಕರಣಗಳಲ್ಲಿ ಗಣನೀಯವಾದ ಏರಿಕೆಯನ್ನು ಗಮನಿಸಿದೆ. ಲುವಾಂಡಾದಲ್ಲಿ ನೆಲೆಸಿರುವ ವಿದೇಶೀಯರ ಪ್ರಮುಖ ಸಮಸ್ಯೆಯು ಇಂದಿಗೂ ಸುಲಿಗೆಯೇ ಆಗಿದೆ.

ದಾಳಿ, ಕಾರು ಕಳವು ಇತ್ಯಾದಿಗಳಿಂದ ಶುರುವಾಗಿ ಕೊಲೆಯಂತಹ ಅಪರಾಧಗಳಲ್ಲಿ ಕೊನೆಯಾದ ಸಾಕಷ್ಟು ಪ್ರಕರಣಗಳು ಲುವಾಂಡಾದಲ್ಲಿ ದಾಖಲಾಗಿವೆ. ಕತ್ತಲಾದ ನಂತರ ಹಿಂಸೆಯ ಪ್ರಕರಣಗಳು ಹೆಚ್ಚು ಸಾಮಾನ್ಯವಾಗಿದ್ದರೂ, ದುಷ್ಕೃತ್ಯಗಳಿಗೆ ಬಲಿಯಾಗದಂತೆ ಹಗಲಿನ ಸಮಯದಲ್ಲೂ ಜಾಗೃತರಾಗಿರುವ ಅವಶ್ಯಕತೆ ಎಲ್ಲರಿಗೂ ಇದೆ. ಯಾವಾಗಲೂ ಗುಂಪುಗಳಲ್ಲೇ ಓಡಾಡಿರಿ ಮತ್ತು ತಮ್ಮ ಗುಂಪಿನಲ್ಲಿ ಒಬ್ಬರಾದರೂ ಪೋರ್ಚುಗೀಸ್ ಭಾಷೆಯನ್ನು ಮಾತನಾಡುವವರು ಇರುವಂತೆ ಖಂಡಿತ ನೋಡಿಕೊಳ್ಳಿ.

ನೀವು ನಿಮ್ಮ ನಿವಾಸಲ್ಲಿ ತಂಗಿದ್ದರೆ ಭದ್ರತಾ ಸಂಬಂಧಿ ಉಪಕರಣಗಳು ಮತ್ತು ವ್ಯವಸ್ಥಿತ ಬೀಗಗಳನ್ನು (ಸಾಧ್ಯವಾದರೆ ಡಬಲ್ ಲಾಕ್ ಬೀಗಗಳು) ನಿಮ್ಮ ಬಾಗಿಲುಗಳಿಗೆ ಮರೆಯದೆ ಅಳವಡಿಸಿಕೊಳ್ಳಿ. ನೀವು ತಂಗಿರುವ ಪ್ರದೇಶವು ಸುರಕ್ಷಿತವಾಗಿದ್ದರೆ ಮಲಗುವ ಮುನ್ನ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಳ್ಳಿ. ಸಂಶಯಾಸ್ಪದ ಸದ್ದುಗಳೇನಾದರೂ ಕೇಳಿಬಂದಲ್ಲಿ ಪರೀಕ್ಷಿಸಲು ಸ್ವತಃ ಹೋಗದೆ ನಿಮ್ಮ ಭದ್ರತಾ ಸಿಬ್ಬಂದಿ ಅಥವಾ ಇತರರ ಸಹಾಯವನ್ನು ಕೇಳಿ ಪಡೆದುಕೊಳ್ಳಿ.

ಸಾಮಾನ್ಯವಾಗಿ ದಾಳಿಯನ್ನು ನಡೆಸುವ ಮುನ್ನ ಅಪರಾಧಿಗಳು ನಿಮ್ಮ ಬಗೆಗಿನ ಮಾಹಿತಿಗಳನ್ನು ಮತ್ತು ನಿಮ್ಮನ್ನು ಮುಂಚಿತವಾಗಿಯೇ ಸೂಕ್ಷ್ಮವಾಗಿ ಗಮನಿಸಿರುವ ಸಾಧ್ಯತೆಗಳಿರುವುದರಿಂದ ಮನೆಯಿಂದ ನಿರ್ಗಮಿಸುವ ಅಥವಾ ಆಗಮನದ ಸಮಯದಲ್ಲಿ ಸದಾ ಜಾಗೃತರಾಗಿರಿ. ಬಾಗಿಲನ್ನು ತೆರೆಯುವ ಮುನ್ನ peep hole (ಬಂದವರ್ಯಾರೆಂದು ನೋಡಲು ಬಾಗಿಲಿಗೆ ಅಳವಡಿಸಲಾಗುವ ಚಿಕ್ಕ ರಂಧ್ರ) ನಿಂದ ಪರೀಕ್ಷಿಸಿಯೇ ಬಾಗಿಲು ತೆರೆಯಿರಿ.

ಮನೆಯ ಕೀಲಿಕೈಗಳು ಸುರಕ್ಷಿತ ಜಾಗದಲ್ಲಿರಲಿ. ದುಬಾರಿ ವಸ್ತುಗಳು ಅತ್ತಿತ್ತ ಬಿದ್ದುಕೊಂಡಿರದಂತೆ ನೋಡಿಕೊಳ್ಳಿ. ನೀವು ಮನೆಬಿಟ್ಟು ಎಲ್ಲಿಗಾದರೂ ತೆರಳುವುದಾದರೆ ನಿಮ್ಮ ಅಮೂಲ್ಯ ವಸ್ತುಗಳನ್ನು ಮೊದಲೇ ಸುರಕ್ಷಿತ ಜಾಗದಲ್ಲಿರಿಸಿ ಹೊರಡಿ. ಪ್ರವೇಶ ನಿರ್ಬಂಧದ ಕೋಣೆಗಳೇನಾದರೂ ಇದ್ದರೆ ಅವುಗಳಿಗೆ ಬೀಗ ಜಡಿದು ಕೀಲಿಗಳನ್ನು ಸುರಕ್ಷಿತ ಜಾಗದಲ್ಲಿಟ್ಟುಬಿಡಿ. ಚಾಲಕರು, ಭದ್ರತಾ ಸಿಬ್ಬಂದಿಗಳು, ಮನೆಕೆಲಸಗಳ ಸಿಬ್ಬಂದಿಗಳನ್ನು ನೇಮಿಸುವಾಗ ಅವರ ಪೂರ್ವಾಪರಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳಿ. ಆಗಂತುಕರಿಂದ ಚಿಕ್ಕಪುಟ್ಟ ಸಹಾಯಗಳನ್ನು ಪಡೆಯುವ ಅಭ್ಯಾಸದಿಂದ ಆದಷ್ಟು ದೂರವಿರಿ. ಸಿಬ್ಬಂದಿಗಳ ಆಗಮನದ ಮುನ್ನ ನಿಮಗೆ ಸೂಚನೆಗಳು ತಪ್ಪದೇ ಸಿಗಬೇಕು ಎಂಬುದು ನೆನಪಿರಲಿ.

ಅವರ ಚಟುವಟಿಕೆಗಳು ನಿಮ್ಮ ಅವಗಾಹನೆಯಲ್ಲಿರಲಿ. ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ಅಮೂಲ್ಯ ವಸ್ತುಗಳು ಅವರ ಕಣ್ಣಿಗೆ ಬೀಳದಂತೆ ಗಮನಹರಿಸಿ. ನೀವು ಯಾರೊಂದಿಗೆ ಯಾವ ವಿಷಯಗಳನ್ನು ಚರ್ಚಿಸುತ್ತಿದ್ದೀರಿ ಎಂಬ ಬಗ್ಗೆ ನಿಮಗೆ ಗಮನವಿರಲಿ”.
ಇಷ್ಟಕ್ಕೇ ನಿಲ್ಲದ ಈ ವರದಿಯು ಅಂಗೋಲನ್ ಪೋಲೀಸ್ ಇಲಾಖೆಯು ‘ಸೀಮಿತ’ ತರಬೇತಿ ಮತ್ತು ಸಂಪನ್ಮೂಲಗಳನ್ನು ಹೊಂದಿರುವುದರ ಬಗ್ಗೆ ಉಲ್ಲೇಖಿಸುವುದಲ್ಲದೆ ಇಲಾಖೆಯಲ್ಲಿರುವ ವ್ಯಾಪಕ ಭ್ರಷ್ಟಾಚಾರವನ್ನೂ ಕೂಡ ಹೆಚ್ಚುತ್ತಿರುವ ಅಪರಾಧಗಳಿಗೆ ಹೊಣೆಯಾಗಿಸಿದೆ.

”ಅಪರಾಧಗಳ ಬಗೆಗಿನ ಸೂಚನೆಗಳಿಗೆ, ದೂರುಗಳಿಗೆ, ಸಹಾಯದ ವಿನಂತಿಗಳಿಗೆ ಇಲಾಖೆಯು ಪರಿಣಾಮಕಾರಿಯಾಗಿ ಸ್ಪಂದಿಸುತ್ತಿಲ್ಲ. ಇಂಗ್ಲಿಷ್ ಭಾಷೆಯ ಬಳಕೆಯು ಬಹಳ ಕಮ್ಮಿಯಿದೆ. ಪೋಲೀಸರೊಂದಿಗೆ ವಾದವಿವಾದಗಳಾಗದಂತೆ, ಜಗಳಗಳಾಗದಂತೆ ಸಾಧ್ಯವಾದಷ್ಟು ನೋಡಿಕೊಳ್ಳಿ”, ಎಂದು ಈ ವರದಿಯು ಅಂಗೋಲಾದಲ್ಲಿ ನೆಲೆಸಿರುವ ಅಮೆರಿಕನ್ನರನ್ನು ಎಚ್ಚರಿಸಿದೆ.

ಈ ವರದಿಯನ್ನು ಓದುತ್ತಿದ್ದಾಗ ಒಮ್ಮೆ ನನ್ನೊಂದಿಗೆ ನಡೆದಿದ್ದ ಘಟನೆಯೊಂದು ಥಟ್ಟನೆ ನೆನಪಾಯಿತು. ತನ್ನ ಪಾಡಿಗೆ ತಾನು ಸಾಗುತ್ತಿದ್ದ ನಮ್ಮ ವಾಹನವನ್ನು ಪೋಲೀಸರ ವಾಹನವೊಂದು ಮಾರ್ಗಮಧ್ಯದಲ್ಲಿ ಏಕಾಏಕಿ ತಡೆದು ನಿಲ್ಲಿಸಿತ್ತು. ಕಡುನೀಲಿ ಸಮವಸ್ತ್ರ ಧರಿಸಿದ್ದ, ಶಸ್ತ್ರಧಾರಿಗಳಾಗಿದ್ದ ಲಗುಬಗೆಯಿಂದ ಇಳಿದ ಆರೇಳು ಪೋಲೀಸರು ನನ್ನ ಕಾರುಚಾಲಕನೊಂದಿಗೆ ಪೋರ್ಚುಗೀಸ್ ಭಾಷೆಯಲ್ಲಿ ಅದೇನೋ ಮಾತನಾಡಿ ಮತ್ತೆ ಬಂದ ವೇಗದಲ್ಲೇ ಮರೆಯಾಗಿದ್ದರು. ಆ ದಿನ ದುಭಾಷಿಯು ನನ್ನೊಂದಿಗಿರದಿದ್ದ ಪರಿಣಾಮವಾಗಿ ಅಂದು ಏನಾಯಿತೆಂದು ನನಗೆ ಮರುದಿನವೇ ತಿಳಿದುಕೊಳ್ಳಬೇಕಾಯಿತು.

ಅಷ್ಟಕ್ಕೂ ಆಗಿದ್ದೇನೆಂದರೆ ಯಾವನೋ ಅಪರಾಧಿಯೊಬ್ಬನನ್ನು ಬೆನ್ನಟ್ಟಿದ್ದ ಪೋಲೀಸರಿಗೆ ಈಗ ಅಚಾನಕ್ಕಾಗಿ ಹೊಸ ವಾಹನವೊಂದು ಬೇಕಿತ್ತು. ಅವರಿದ್ದ ವಾಹನದಲ್ಲಿ ಅದೇನೋ ಸಮಸ್ಯೆಯಂತೆ. ಹೀಗಾಗಿ ನಮ್ಮ ಮಜ್ದಾ ಕಾರನ್ನು ಮಾರ್ಗಮಧ್ಯದಲ್ಲೇ ತಡೆದು ನಿಮ್ಮ ವಾಹನವನ್ನು ಅರ್ಧದಿನದ ಮಟ್ಟಿಗೆ ಕೊಡಲಾಗುವುದೇ ಎಂದು ವಿಚಾರಿಸಿದ್ದಾರೆ. ಈಗ ಕಾರಿನಿಂದಿಳಿದರೆ ರಸ್ತೆಯಲ್ಲೇ ಉಳಿದುಹೋಗುತ್ತೇವೆ ಎಂಬ ಆತಂಕದಿಂದ ನನ್ನ ಕಾರು ಚಾಲಕ ಪೋಲೀಸರ ವಿನಂತಿಯನ್ನು ಸೌಜನ್ಯದಿಂದಲೇ ತಿರಸ್ಕರಿಸಿದ್ದಾನೆ.

(ದುಭಾಷಿಯ ಅನುಪಸ್ಥಿತಿಯಿಂದಾಗಿ ನನ್ನೊಂದಿಗೆ ನಿರ್ಜನ ಬೀದಿಗಿಳಿಯುವ ಧೈರ್ಯವನ್ನು ನನ್ನ ಕಾರುಚಾಲಕ ಮಾಡಿರಲಿಲ್ಲ). ನಮ್ಮ ಪುಣ್ಯವೋ ಎಂಬಂತೆ ಪೋಲೀಸರು ಯಾವ ಒತ್ತಡವನ್ನೂ ನಮ್ಮ ಮೇಲೆ ಹೇರದೆ ಸುಮ್ಮನೆ ಮುನ್ನಡೆದಿದ್ದಾರೆ. ಬದುಕಿದೆಯಾ ಬಡಜೀವವೇ ಎಂಬ ನಿರಾಳತೆಯೊಂದಿಗೆ ನನ್ನ ಕಾರುಚಾಲಕ ಆದಷ್ಟು ಬೇಗ ಕಾರನ್ನು ಚಲಾಯಿಸಿ ನನ್ನನ್ನು ಮನೆ ತಲುಪಿಸಿದ್ದಾನೆ. ಇತ್ತ ನಾನು ಏನೊಂದೂ ತಿಳಿಯದೆ ಈ ಎಲ್ಲಾ ಬೆಳವಣಿಗೆಗಳನ್ನೂ ಸುಮ್ಮನೆ ಪಿಳಿಪಿಳಿ ಕಣ್ಣುಬಿಡುತ್ತಾ ನೋಡಿದ್ದೇನೆ.

ಎಲ್ಲಾ ವಿದೇಶ ಪ್ರಯಾಣಗಳೂ ಕೂಡ ಅಂದುಕೊಂಡಷ್ಟು ಸುಗಮವಾಗಿರುವುದಿಲ್ಲ. ಅದರಲ್ಲೂ ಆಫ್ರಿಕಾದಲ್ಲಾಗುವ ಅನುಭವಗಳೇ ವಿಚಿತ್ರವಾಗಿರುತ್ತವೆ. ಅಂಗೋಲಾದ ಜೀವನವನ್ನು ನಾನು ‘Routine Adventure’ (ಪ್ರತಿನಿತ್ಯದ ಸಾಹಸ) ಎಂದು ಕರೆಯುವುದು ಈ ಕಾರಣಕ್ಕಾಗಿಯೇ!

Author: Avadhi GK

Leave a Reply