ನೀ ಹೋದ ಮರುದಿನ..

 

 

 

ಚೆನ್ನಣ್ಣ ವಾಲಿಕಾರ

 

 

 

 

 

ನೀ ಹೋದ ಮರುದಿನ ಮೊದಲಂಗೆ ನಮ ಬದುಕು
ಆಗ್ಯಾದೋ ಬಾಬಾ ಸಾಹೇಬ
ನಿನ್ನಂಗ ದುಡಿದವರು ಕಳಕಳಿಯ ಪಡುವವರು
ಇನ್ನುತನ ಬರಲಿಲ್ಲ ಒಬ್ಬ

ಪ್ರತಿನಿತ್ಯ ಎದ್ದಾಗ ನಮಸುದ್ದಿ ಸಂಭ್ರಮವು
ದೇಕುವುದು ತಪ್ಪಿಲ್ಲ ನಮಗ
ಹೋದ ಹೋದಲ್ಲೆಲ್ಲ ಮೇಲವರ ಆಟಗಳು
ಉರಿಹಚ್ಚಿ ಬಿಡುತಾರ ಒಳಗ

ಎಲ್ಲಿ ಕೇಳಿದರಲ್ಲಿ ಬೂಟುಗಾಲಿನ ಸದ್ದು
ತರತರದ ನೋವುಗಳು ನಮಗ
ತಮ್ಮಂಗ ಇರದಿದ್ರೆ ತಲೆ ಕಡಿದು ಹಾಕುವರು
ಹೆಸರೀಗೆ ಸ್ವಾತಂತ್ರ್ಯ ನಮಗ

 

ಕೈ ಕಾಲು ಕಿವಿ ಮೂಗು ಮೈ ಮನಸು ತಲೆ ಕಣ್ಣು
ಕಳಕೊಂಡ ಬರಡು ಗಿಡ ನಾವು
ಮೈ ತುಂಬ ಮನತುಂಬ ಸಿಕ್ಕವರ ಮುಖಮುದ್ರೆ
ಚೀರಾಟ ಹಾರಟ ಸಾವೋ

ಹೋಗ್ಬಾರೋ ದಾರಿಯಲಿ ಅಡುಗಲ್ಲುಗಳು ಸೇರಿ
ಮುಳಕಲ್ಲು ಹಾಸ್ಯಾವೊ ಪೂರ
ಹೆಚ್ಚಿಗೆ ಬೆಳೆದವರ ಉಳಿದವರ ಜೀವಗಳ
ಹಗಲಾಗ ಹೊಡೆದಾರ ಟಾರಾ

ಎಷ್ಟಂತ ಉರಿತಾರ ಎಷ್ಟಂತ ಹರಿತಾರ
ತಾಳದಕ್ಕೂ ಮಿತಿಯುಂಟು ಇಲ್ಲಿ
ತಾಳಿ ತಾಳಿಯೂ ಒಮ್ಮೆ ಚೇಳಾಗಿ ಕುಟುಕುವನು
ಸಾಮಾನ್ಯನಲ್ಲೋ ಬಡಜೀವಿ

ದುಡಿದುಡಿದು ಹುಟ್ಟಿರಲು ಕತ್ತಲಿರುವಾ ತನಕ
ಕೊತ್ತಿಗಳು ಹೊತ್ಯಾವ ಜೋರಾ
ರೋಡಿಗಿದ್ದವರೆಲ್ಲಾ ಗ್ವಾಡ್ಯಾಗ ಕುಂತಾರ
ಇನ್ನಿಲ್ಲ ನಮ ದಾರಿ ದೂರ

ಬಾಬಾ ಸಾಹೇಬರೇನು ಹುಚ್ಚರಲ್ಲವೇ ಅಲ್ಲ
ಗಾಂಧಿಜೊತೆ ಇರಲಿಲ್ಲ ಸುಮ್ಮ
ಅಷ್ಟು ಒದ್ದಾಡಿದಕೆ ಇಂಗೈತೆ ನಮ್ ಬದುಕು
ತಿಳಿಯೀತೆ ಈಗ್ಲಾದ್ರೂ ತಮ್ಮ

1 comment

  1. Reality of today’s world, oppressed is being used for more oppression. Yet, the oppressed now realises that there is a chance for him to make his life better. Awareness may lead them to light later, if not sooner.

Leave a Reply