fbpx

‘ಸತಿ’ ಹೋಗುವ ನೋವೂ ಬನ್ಸಾಲಿಗೆ ಅರ್ಥ ಆಗಲ್ವಾ..?

ಹರೀಶ್ ಶೆಟ್ಟಿ ಬಂಡ್ಸಾಲೆ

ಸಿನಿಮಾದ ‌ಆರಂಭದಲ್ಲಿ ಈ‌ ಸಿನಿಮಾ ‌ಯಾವ ಉದ್ದೇಶಕ್ಕೂ ಸತಿ‌ ಅಥವಾ ಜೋಹರ್ ಪದ್ದತಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳುತ್ತದೆ.

ಆದರೆ ಸಿನಿಮಾದ ಪ್ರತಿ ಘಟ್ಟದಲ್ಲೂ ಸತಿ ಪದ್ದತಿಯನ್ನು ವೈಭವಿಕರಿಸುತ್ತ ಹೋಗುತ್ತದೆ.

ಸಿನಿಮಾದ‌‌ ಕೊನೆಯಲ್ಲಿ ಸತಿ ಪದ್ದತಿಯನ್ನು ತೋರಿಸುವಾಗ ಪಾತ್ರಗಳ ಮುಖಾಂತರ ಆಡಿಸಿದ ಸಂಭಾಷಣೆಗಳು, ಬರುವ ಹಿನ್ನಲೆ ಸಂಗೀತ, ಪಾತ್ರಗಳ ಮುಖಭಾವ, ಪದ್ದತಿಗಳ ಪಾಲನೆ ಎಲ್ಲವು ಸತಿಯನ್ನು ವೈಭವೀಕರಿಸುತ್ತದೆ, ಗೌರವಯುತವಾದ ಶ್ರೇಷ್ಟ ಪವಿತ್ರ ಕ್ರಿಯೆ ಎಂಬಂತೆ ಬಿಂಬಿತವಾಗಿಸುತ್ತದೆ.

ಪದ್ಮಾವತಿ ಮತ್ತು ಅವಳೊಂದಿಗೆ ಇತರ ರಾಣಿಯರು, ದಾಸಿಯರು, ಗರ್ಭಿಣಿ ಹೆಂಗಸರು, ಹೆಣ್ಣು ಮಕ್ಳಳು ಬೆಂಕಿಗೆ ತಮ್ಮನ್ನು ತಾವು ಆಹುತಿ ಮಾಡಿಕೊಂಡ ನಂತರ, “ಈ ಕ್ರಿಯೆಯಿಂದ ರಾಣಿ ಪದ್ಮಾವತಿಯೂ ಖಿಲ್ಜಿಯ ಸೋಲಿಗೂ, ಚಿತ್ತೋರಿನ ಗೆಲುವಿಗೂ ಕಾರಣಳಾಗಿ ಇತಿಹಾಸದಲ್ಲಿ ಅಜರಾಮರಳಾಗುತ್ತಾಳೆ. ಇಂದಿಗೂ ಅವಳನ್ನು ದೇವತೆಯ ಸ್ವರೂಪದಲ್ಲಿ ನೋಡುತ್ತಾರೆ”. ಎಂಬ ಸಂದೇಶ ಬರುತ್ತದೆ.

ಆದರೆ ಎಲ್ಲಿಯೂ ಮಡಿದ ಅಷ್ಟು‌ ಮಹಿಳೆಯರಿಗಾಗಿ ವಿಷಾದ ಇಲ್ಲ.‌ ಸಿನಿಮಾದ ಕೊನೆಗೆ ಅನ್ನಿಸುವುದು, ಅಂದು ಮಾನವೇ ಹೆಣ್ಣಿನ ಜೀವನದ ಉತ್ಕೃಷ್ಟ ಮೌಲ್ಯ ಎಂದು ಬಗೆದು ಮಾಡಿಕೊಂಡ  ಗುಂಪು ಆತ್ಮಹತ್ಯೆಯನ್ನು‌ ಇಂದು ವರ್ಣರಂಜಿತ ಸೆಟ್ನಲ್ಲಿ, ಅದ್ಬುತ ಕ್ಲಾರಿಟಿಯ ಕ್ಯಾಮರಾದಲ್ಲಿ, ರೋಮಾಂಚನ‌ ಗೊಳಿಸುವ ಹಿನ್ನೆಲೆ ಸಂಗೀತದೊಂದಿಗೆ ಮತ್ತೆ ಪ್ರತಿಷ್ಟಾಪನೆ ಮಾಡಿದ ಪ್ರಯತ್ನ ಎಂದಷ್ಟೇ. ‌

ಹಾಗಾದರೆ ನಾವಿಲ್ಲಿ ಪ್ರತಿಪಾದಿಸುತ್ತಿರುವುದು ಯಾವುದನ್ನು ? ಬದುಕೆಂಬ ಸತ್ಯದ ಎದುರು ಮಾನವೆಂಬ ಮಿಥ್ಯ ಸಾಧಿಸಿದ ಮೇಲುಗೈಯನ್ನೆ?

ನೀವು ಕೇಳಬಹುದು “ಇದು ನೆಡೆದ ಸತ್ಯ ಘಟನೆಯಲ್ಲವೇ? ಆ ಕಾಲ ಹಾಗೂ ಪರಿಸ್ಥಿತಿಯ ಒತ್ತಡ ಸೃಷ್ಟಿಸಿದ ಅನಿವಾರ್ಯತೆಯಲ್ಲವೆ? ಅದನ್ನು ಇಂದಿನ ಕಾಲಮಾನದಲ್ಲಿ ಹೇಗೆ ತೂಗುವಿರಿ ಎಂದು ?

ಹೌದು, ಆ ಸಮಯದಲ್ಲಿ ಅದು‌ ಅನಿವಾರ್ಯವಾಗಿದ್ದಿರಬಹುದು,ಅಂದಿನ‌ ನೀತಿ, ಮೌಲ್ಯಗಳಿಗೆ ತಕ್ಕುದಾದದ್ದು ಎನ್ನಿಸಲು ಬಹುದು.  ಆದರೆ ಇಲ್ಲಿ ಪ್ರಶ್ನೆ ಇರುವುದು ಅದು ಅನಿವಾರ್ಯ ವಾಗಿತ್ತೋ ಇಲ್ಲವೋ ಅನ್ನುವುದರ ಕುರಿತು ಅಲ್ಲ.‌ ಆದರೆ ಅದಕ್ಕಿಂತ ಮುಖ್ಯವಾಗಿ ನಮಗೆ ಕಾಡುವುದು ಇದರ ಹಿಂದಿರುವ ಹೆಣ್ಣಿನ ಮಾನದ‌ ಕುರಿತಾದ ದೃಷಿಕೋ‌ನ.

ನೆಡದ ಘಟನೆ ಸತ್ಯವಾಗಿದ್ದರೂ, ಅಂದಿನ ಘಟನೆ ಅಂದಿನಂತೆ ಅದನ್ನು ತೋರಿಸಬೇಕೆಂದಿದ್ದರೂ ಆಯಾ ಕಾಲದ ಮೌಲ್ಯಗಳಿಗೆ ಕಲೆ ಸ್ಪಂದಿಸಬೇಕು ಎಂಬ ಸತ್ಯವನ್ನು   ಉಪೇಕ್ಷಿಸಿ ಮಾನವನ್ನೆ ಉನ್ನತ ಮೌಲ್ಯವಾಗಿ  ಈಗ ಬಿಂಬಿಸುವುದು ಎಷ್ಟು ಸರಿ ಎಂದು. ಹಾಗಾದರೆ ಈ ಮೂಲಕ‌ ನೋಡುಗರಲ್ಲಿ ಮೂಡುವ ಪ್ರಶ್ನೆಗಳಿಗೆ ಸಿನಿಮಾ ತಂಡ ಉತ್ತರದಾಯಿಗಳಲ್ಲವೇ ?

ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣಿಗೆ ಬದುಕುವ ಹಕ್ಕಿಲ್ಲವೇ?  ಮಾನ ಕಳೆದುಕೊಂಡರೆ ಜೀವನದ ಇತರ ಆಯಾಮಗಳ ಸಾಧನೆ ಉಪೇಕ್ಷಿತವೇ ? ಬದುಕಿಸುವ ಉಸಿರಿಗಿಂತ ಕಟ್ಟಿಕೊಂಡಿರುವ ಮಾನವೆಂಬ ಪರಿಕಲ್ಪನೆಯೇ ಮುಖ್ಯವೇ? ಪತ್ನಿ ಸತ್ತರೆ ಪತಿ ಸಹಗಮನ ಮಾಡುವನೇ? ಹೆಣ್ಣಿನ  ಇಡೀ ಜೀವನ ಕೇವಲ ತನ್ನ ಮಾನ ಕಾಪಾಡಿಕೊಳ್ಳಲು ಅಷ್ಟೇಯೇ?

ಈ ಸಿನಿಮಾ‌ ನೋಡಿದ ನಂತರ ನಾಳೆ ಯಾವುದೋ ಅನಿವಾರ್ಯತೆಗೆ ಸಿಕ್ಕಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣನ್ನು ಅವಳ ಗಂಡ, ಅಪ್ಪ‌, ಅಣ್ಣ ತಮ್ಮಂದಿರು ಹೇಗೆ ನೋಡಬೇಕು? ‌ಮಾನ ಕಳೆದುಕೊಳ್ಳುವುದುಕ್ಕಿಂತ ಅವಳು ಸತ್ತು  ಆದರ್ಶಳಾಗಬೇಕೆಂದೊ ಅಥವಾ ಅವಳಿಗೂ ಇತರರಂತೆ ಬದುಕುವ ಅವಕಾಶ ಇದೆ ಎಂದೋ ?

ಇದು ಪದ್ಮಾವತ್ ಸಿನಿಮಾದ ಕಲಾತ್ಮಕತೆಯ ಕುರಿತಾದ  ವಿಮರ್ಶೆ ಅಲ್ಲ. ಸಿನಿಪ್ರಿಯರಿಗೆ ಈ‌ ಸಿನಿಮಾ ಅದ್ಬುತ ಸೆಟ್, ವೇಷ ಭೂಷಣ ಮತ್ತು ಅಭಿನಯದಿಂದ‌ ಮನೋರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ.‌ ಆದರೆ ಸಿನಿಮಾ ಅಷ್ಟಕ್ಕೆ ಸೀಮಿತ ಅಲ್ಲ. ಸಿನಿಮಾವೊಂದಕ್ಕೆ ಬದುಕನ್ನು ನೋಡುವ ದೃಷ್ಟಿಕೋನವನ್ನು  ಬದಲಾಯಿಸುವ, ಹೊಸ ದೃಷ್ಟಿಕೋನವನ್ನು ಸೃಷ್ಟಿಸುವ, ಇದ್ದದನ್ನು ಗಟ್ಟಿಗೊಳಿಸುವ ಶಕ್ತಿ ಇದೆ.ಡೇಟನ್ ವಿಶ್ವವಿದ್ಯಾನಿಲಯದ  ಮಿಶೆಲ್ ಪಿ ಪೌಟ್ಸ್ ಎನ್ನುವವರ‌ ಅಧ್ಯಯನ ಹೇಳುವಂತೆ ಒಂದು ವಿಷಯದ ಕುರಿತಾದ ಅಭಿಪ್ರಾಯವನ್ನು ಸಿನಿಮಾವು ಯಶಸ್ವಿಯಾಗಿ ‌ಬದಲಿಸಬಹುದು, ಅದರಲ್ಲೂ ಯುವಕ‌ ಯುವತಿರಲ್ಲಿ ಈ‌ ಪ್ರಮಾಣ ಹೆಚ್ಚು.

ಈ ಅಧ್ಯಯನದಲ್ಲಿ ಸರಕಾರದ ಕುರಿತಾದ ಮೂರು ಸಿನಿಮಾ ನೋಡಿದ‌‌ ಆಧಾರದ ಮೇಲೆ ಅದರ ಪರಿಣಾಮದ‌ ಕುರಿತು ಸಂಶೋಧಿಸಿದಾಗ 25 ಶೇಖಡದಷ್ಟು ಜನರು ಸರಕಾರದ ಕುರಿತು ತಮ್ಮ ಅಭಿಪ್ರಾಯವನ್ನು‌ ಸಿನಿಮಾದ ಆಧಾರದ ಮೇಲೆ ರೂಪಿಸಿಕೊಂಡಿದ್ದರು.

 

ಸಾಮಾನ್ಯ ಜನರಿಗೆ ಓದು ಅಥವಾ ಭಾಷಣಕ್ಕಿಂತ ದೃಷ್ಯ ರೂಪದಲ್ಲಿ ಕಟ್ಟಿ ಕೊಡುವ ಸಿನಿಮಾ‌ ಹೆಚ್ಚು ಪರಿಣಾಮಕಾರಿಯಾಗಬಲ್ಲದು.‌ ಸಿನಿಮಾದ‌ ಪಾತ್ರಗಳಿಂದ‌‌ ಸ್ಪೂರ್ತಿ ಪಡೆದವರು, ಸಿನಿಮಾ ಸಂದೇಶಗಳನ್ನು ಆದರ್ಶವಾಗಿಟ್ಟುಕೊಳ್ಳುವವರು ಸಾಮಾನ್ಯವಾಗಿ ‌ಸಿಗುತ್ತಾರೆ.  ಹಾಗಾಗಿ ಸಿನಿಮಾವನ್ನು ‌ಕೇವಲ ಮನೋರಂಜನಾ ಮಾಧ್ಯಮವಾಗಿ ಅಷ್ಟೇ ಪರಿಗಣಿಸಲು ಸಾಧ್ಯವಿಲ್ಲ.‌ ಅದಕ್ಕೊಂದು ಸಾಮಾಜಿಕ‌ ಬದ್ದತೆ ಇರಬೇಕಾಗುತ್ತದೆ.‌ ಯಾವ ಭಾವನೆ, ಆದರ್ಶ, ನೀತಿಯನ್ನು ವೈಭವಿಕರಿಸುತ್ತೇವೆ, ಅದರ‌ ಸಾಮಾಜಿಕ‌ ಮತ್ತು ರಾಜಕೀಯ ಪರಿಣಾಮ‌ ಏನು‌ ಎನ್ನುವುದರ ಸ್ಪಷ್ಟತೆ ಇರಬೇಕಾಗುತ್ತದೆ.

ಇನ್ನೂ ನಮ್ಮಲ್ಲಿ ಉಳಿಯುವ ಪ್ರಶ್ನೆ,  ಖಿಲ್ಜಿಯನ್ನು ಪ್ರೇಮಿಸುವ ಗುಲಾಮನ ಪಾತ್ರ ಮತ್ತು ಅವನ  ಭಾವನೆಗಳ ಸೂಕ್ಷ್ಮವನ್ನು ಗುರುತಿಸಿ‌ ತೋರಿಸಲು ಸ್ವಾತಂತ್ರ್ಯ ಹೊಂದಿರುವ ನಿರ್ದೇಶಕರಿಗೆ ಸತಿ ಪದ್ದತಿಯಿಂದಾಗುವ ವೇದನೆಯನ್ನು , ಸತಿ ಪದ್ದತಿಯನ್ನು ವಿರೋಧಿಸುವ,  ಅದರ ಹಿಂದಿನ‌ ಮಾನಸಿಕತೆಯನ್ನು ತೋರಿಸುವ ಪಾತ್ರವನ್ನು ‌ಹೆಣೆಯುವ ಸ್ವಾತಂತ್ರ್ಯ ಯಾಕೆ‌ ಇರಿಸಿಕೊಂಡಿಲ್ಲ?

Leave a Reply